Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 45

ಯೋಸೇಫನು ತಾನು ಯಾರೆಂದು ಹೇಳುವನು

45 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಿಕೊಳ್ಳಲಾರದೆ, “ಇಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸಿರಿ” ಎಂದು ಅಪ್ಪಣೆಕೊಟ್ಟನು. ಅಲ್ಲಿದ್ದವರು ಹೊರಗೆ ಹೋದರು; ಸಹೋದರರು ಮಾತ್ರ ಯೋಸೇಫನೊಡನೆ ಇದ್ದರು. ಆಮೇಲೆ ಯೋಸೇಫನು ಗಟ್ಟಿಯಾಗಿ ಅತ್ತನು. ಫರೋಹನ ಮನೆಯಲ್ಲಿದ್ದ ಈಜಿಪ್ಟಿನವರೆಲ್ಲ ಅದನ್ನು ಕೇಳಿಸಿಕೊಂಡರು. ಯೋಸೇಫನು ತನ್ನ ಸಹೋದರರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನನ್ನ ತಂದೆ ಚೆನ್ನಾಗಿದ್ದಾನೆಯೇ?” ಎಂದು ಕೇಳಿದನು. ಆದರೆ ಸಹೋದರರು ಅವನಿಗೆ ಉತ್ತರಿಸಲಿಲ್ಲ. ಅವರಿಗೆ ಭಯವಾಗಿತ್ತು ಮತ್ತು ಗಲಿಬಿಲಿಗೊಂಡಿದ್ದರು.

ಯೋಸೇಫನು ಮತ್ತೆ ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿ. ನನ್ನ ಹತ್ತಿರ ಬನ್ನಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಆದ್ದರಿಂದ ಸಹೋದರರು ಯೋಸೇಫನ ಹತ್ತಿರ ಹೋದರು. ಯೋಸೇಫನು ಅವರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನೀವು ಈಜಿಪ್ಟಿನವರಿಗೆ ಯಾವನನ್ನು ಗುಲಾಮನನ್ನಾಗಿ ಮಾರಿದಿರೋ ಅವನೇ ನಾನು. ಈಗ ಚಿಂತಿಸಬೇಡಿ, ನೀವು ಮಾಡಿದ್ದಕ್ಕೆ ದುಃಖವನ್ನೂ ಪಡಬೇಡಿ. ನಾನು ಇಲ್ಲಿಗೆ ಬರಬೇಕೆಂಬುದು ದೇವರ ಯೋಜನೆಯಾಗಿತ್ತು. ನಾನು ನಿಮ್ಮನ್ನು ರಕ್ಷಿಸಲು ಇಲ್ಲಿಗೆ ಬಂದಿದ್ದೇನೆ. ಈ ಭೀಕರವಾದ ಬರಗಾಲವು ಆರಂಭವಾಗಿ ಈಗಾಗಲೇ ಎರಡು ವರ್ಷಗಳಾಯಿತು. ಇನ್ನೂ ಐದು ವರ್ಷಗಳವರೆಗೆ ಬಿತ್ತನೆ ಇರುವುದಿಲ್ಲ; ಸುಗ್ಗಿಯೂ ಇರುವುದಿಲ್ಲ. ಆದ್ದರಿಂದ ಈ ದೇಶದಲ್ಲಿ ತನ್ನ ಜನರನ್ನು ಕಾಪಾಡಲು ದೇವರು ನನ್ನನ್ನು ನಿಮಗಿಂತ ಮೊದಲೇ ಇಲ್ಲಿಗೆ ಕಳುಹಿಸಿದ್ದಾನೆ. ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮ್ಮ ತಪ್ಪಲ್ಲ. ಅದು ದೇವರ ಯೋಜನೆ. ದೇವರು ನನ್ನನ್ನು ಫರೋಹನ ಅತ್ಯುನ್ನತವಾದ ಅಧಿಕಾರಿಯನ್ನಾಗಿ ಮಾಡಿದ್ದಾನೆ. ನಾನು ಅವನ ಮನೆಗೆಲ್ಲಾ ಮತ್ತು ಈಜಿಪ್ಟಿಗೆಲ್ಲಾ ರಾಜ್ಯಪಾಲನಾಗಿದ್ದೇನೆ” ಎಂದು ಹೇಳಿದನು.

ಇಸ್ರೇಲರನ್ನು ಈಜಿಪ್ಟಿಗೆ ಆಮಂತ್ರಿಸಿದ್ದು

ಬಳಿಕ ಯೋಸೇಫನು, “ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವನಿಗೆ, ನಿನ್ನ ಮಗನಾದ ಯೋಸೇಫನು ಈ ಸಂದೇಶವನ್ನು ಕಳುಹಿಸಿದ್ದಾನೆ: ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನನ್ನಾಗಿ ಮಾಡಿದ್ದಾನೆ. ತಡಮಾಡದೆ ನನ್ನ ಬಳಿಗೆ ಬಾ. 10 ನೀನು ಗೋಷೆನ್ ಪ್ರಾಂತ್ಯದಲ್ಲಿ ನನ್ನೊಂದಿಗೆ ವಾಸಿಸುವೆ. ನೀನೂ ನಿನ್ನ ಮಕ್ಕಳೂ ನಿನ್ನ ಮೊಮ್ಮಕ್ಕಳೂ ನಿಮ್ಮ ಎಲ್ಲಾ ಪಶುಗಳೊಡನೆ ಇಲ್ಲಿ ನೆಲೆಸಬಹುದು. 11 ಮುಂದಿನ ಐದು ವರ್ಷಗಳ ಬರಗಾಲದಲ್ಲಿ ನಾನು ನಿಮ್ಮನ್ನು ಪೋಷಿಸುವೆನು. ಆಗ ನಿನಗಾಗಲಿ ನಿನ್ನ ಕುಟುಂಬದವರಿಗಾಗಲಿ ಬಡತನವಿರುವುದಿಲ್ಲ’ ಎಂಬುದಾಗಿ ತಿಳಿಸಿರಿ” ಎಂದು ಹೇಳಿದನು.

12 ಯೋಸೇಫನು ತನ್ನ ಸಹೋದರರೊಂದಿಗೆ ಮಾತನ್ನು ಮುಂದುವರಿಸಿ, “ನಾನೇ ಯೋಸೇಫನೆಂದು ನಿಮಗೆ ಈಗ ಗೊತ್ತಾಗಿದೆ; ನಿಮ್ಮ ತಮ್ಮನಾದ ಬೆನ್ಯಾಮೀನನಿಗೂ ಗೊತ್ತಾಗಿದೆ. 13 ಆದ್ದರಿಂದ ಈಜಿಪ್ಟಿನಲ್ಲಿರುವ ಮಹಾ ಐಶ್ವರ್ಯವನ್ನೂ ನೀವು ಇಲ್ಲಿ ನೋಡಿರುವ ಪ್ರತಿಯೊಂದನ್ನೂ ನನ್ನ ತಂದೆಗೆ ತಿಳಿಸಿ ಬೇಗನೆ ಅವನನ್ನು ಕರೆದುಕೊಂಡು ಬನ್ನಿ” ಎಂದು ಹೇಳಿದನು. 14 ಆಮೇಲೆ ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನು ಸಹ ಅತ್ತನು. 15 ಆಮೇಲೆ ಯೋಸೇಫನು ತನ್ನ ಎಲ್ಲಾ ಸಹೋದರರಿಗೂ ಮುದ್ದಿಟ್ಟು ಅತ್ತನು. ಇದಾದ ಮೇಲೆ ಆ ಸಹೋದರರು ಅವನೊಂದಿಗೆ ಮಾತಾಡತೊಡಗಿದರು.

16 ಯೋಸೇಫನ ಸಹೋದರರು ಅವನ ಬಳಿಗೆ ಬಂದಿರುವುದು ತಿಳಿದಾಗ ಫರೋಹನಿಗೂ ಅವನ ಮನೆಯವರಿಗೂ ತುಂಬ ಸಂತೋಷವಾಯಿತು. 17 ಆದ್ದರಿಂದ ಫರೋಹನು ಯೋಸೇಫನಿಗೆ, “ತಮಗೆ ಬೇಕಾದ ಎಲ್ಲಾ ಆಹಾರವನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹಿಂತಿರುಗಿ ಹೋಗಿ 18 ನಿನ್ನ ತಂದೆಯನ್ನೂ ತಮ್ಮ ಕುಟುಂಬಗಳನ್ನೂ ನನ್ನ ಬಳಿಗೆ ಕರೆದುಕೊಂಡು ಬರಲಿ. ಅವರು ಈಜಿಪ್ಟಿನ ಒಳ್ಳೆಯ ಪ್ರದೇಶದಲ್ಲಿ ವಾಸಿಸಲಿ. ಇಲ್ಲಿರುವ ಉತ್ತಮವಾದ ಆಹಾರವನ್ನು ಅವರು ಊಟಮಾಡಲಿ, 19 ಅವರು ನಮ್ಮ ಶ್ರೇಷ್ಠವಾದ ರಥಗಳನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹೋಗಿ ನಿನ್ನ ತಂದೆಯನ್ನೂ ಎಲ್ಲಾ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಬರಲಿ. 20 ಅವರ ಸ್ವತ್ತುಗಳ ಬಗ್ಗೆ ಚಿಂತಿಸುವುದು ಬೇಡ; ಈಜಿಪ್ಟಿನಲ್ಲಿ ನಮಗಿರುವ ಉತ್ತಮವಾದವುಗಳನ್ನು ಅವರಿಗೆ ಕೊಡೋಣ” ಎಂದು ಹೇಳಿದನು.

21 ಅಂತೆಯೇ ಇಸ್ರೇಲನ ಮಕ್ಕಳು ಮಾಡಿದರು. ಫರೋಹನು ಹೇಳಿದಂತೆಯೇ ಯೋಸೇಫನು ತನ್ನ ಸಹೋದರರಿಗೆ ಒಳ್ಳೆಯ ರಥಗಳನ್ನೂ ಪ್ರಯಾಣಕ್ಕೆ ಬೇಕಾಗುವಷ್ಟು ಆಹಾರವನ್ನೂ ಕೊಟ್ಟನು. 22 ಯೋಸೇಫನು ಪ್ರತಿಯೊಬ್ಬ ಸಹೋದರನಿಗೂ ಒಂದೊಂದು ಜೊತೆ ಸುಂದರವಾದ ಉಡುಪುಗಳನ್ನು ಕೊಟ್ಟನು. ಆದರೆ ಬೆನ್ಯಾಮೀನನಿಗೆ ಮಾತ್ರ ಐದು ಜೊತೆ ಸುಂದರವಾದ ಉಡುಪುಗಳನ್ನೂ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಕೊಟ್ಟನು. 23 ಯೋಸೇಫನು ತನ್ನ ತಂದೆಗೂ ಉಡುಗೊರೆಗಳನ್ನು ಕಳುಹಿಸಿದನು. ಅವನು ಈಜಿಪ್ಟಿನ ಶ್ರೇಷ್ಠವಾದ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಕಳುಹಿಸಿದನು. ತನ್ನ ತಂದೆಯ ಮರುಪ್ರಯಾಣಕ್ಕೆ ಬೇಕಾದ ಕಾಳು, ರೊಟ್ಟಿ ಮತ್ತು ಇತರ ಆಹಾರಪದಾರ್ಥಗಳನ್ನೂ ಹತ್ತು ಹೆಣ್ಣುಕತ್ತೆಗಳ ಮೇಲೆ ಹೊರಿಸಿ ಕಳುಹಿಸಿದನು. 24 ಅವರು ಹೊರಡುವಾಗ ಯೋಸೇಫನು, “ನೇರವಾಗಿ ಮನೆಗೆ ಹೋಗಿ. ದಾರಿಯಲ್ಲಿ ಜಗಳ ಮಾಡಬೇಡಿ” ಎಂದು ಹೇಳಿದನು.

25 ಆದ್ದರಿಂದ ಸಹೋದರರು ಈಜಿಪ್ಟನ್ನು ಬಿಟ್ಟು, ತಮ್ಮ ತಂದೆಯಿರುವ ಕಾನಾನ್ ದೇಶಕ್ಕೆ ಹೋದರು. 26 ಸಹೋದರರು ತಮ್ಮ ತಂದೆಗೆ, “ಅಪ್ಪಾ, ಯೋಸೇಫನು ಇನ್ನೂ ಬದುಕಿದ್ದಾನೆ; ಅವನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾಗಿದ್ದಾನೆ” ಎಂದು ಹೇಳಿದರು.

ಅವರ ತಂದೆಗೆ ಆಶ್ಚರ್ಯವಾಯಿತು. ಆತನು ಅವರನ್ನು ನಂಬಲಿಲ್ಲ. 27 ಆದರೆ ಯೋಸೇಫನು ತಮಗೆ ಹೇಳಿದ್ದೆಲ್ಲವನ್ನು ಸಹೋದರರು ತಮ್ಮ ತಂದೆಗೆ ಹೇಳಿದರು. ಆಮೇಲೆ ತನ್ನನ್ನು ಈಜಿಪ್ಟಿಗೆ ಕರೆದುಕೊಂಡು ಬರಲು ಯೋಸೇಫನು ಕಳುಹಿಸಿದ್ದ ರಥಗಳನ್ನು ಯಾಕೋಬನು ನೋಡಿ ಉಲ್ಲಾಸಪಟ್ಟನು. 28 ಇಸ್ರೇಲನು, “ಈಗ ನಾನು ನಿಮ್ಮನ್ನು ನಂಬುತ್ತೇನೆ. ನನ್ನ ಮಗನಾದ ಯೋಸೇಫನು ಇನ್ನೂ ಬದುಕಿದ್ದಾನೆ. ನಾನು ಸಾಯುವ ಮೊದಲು ಅವನನ್ನು ನೋಡುತ್ತೇನೆ” ಎಂದು ಹೇಳಿದನು.

ಮಾರ್ಕ 15

ಪಿಲಾತನಿಂದ ಯೇಸುವಿನ ವಿಚಾರಣೆ

(ಮತ್ತಾಯ 27:1-2,11-14; ಲೂಕ 23:1-5; ಯೋಹಾನ 18:28-38)

15 ಮುಂಜಾನೆ ನಸುಕಿನಲ್ಲೇ, ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಧರ್ಮೋಪದೇಶಕರು ಮತ್ತು ಯೆಹೂದ್ಯ ಸಮಿತಿಯವರು ಸಭೆಸೇರಿ ಯೇಸುವಿಗೆ ಮಾಡಬೇಕಾದದ್ದನ್ನು ನಿರ್ಧರಿಸಿದರು. ಅವರು ಯೇಸುವನ್ನು ಬಂಧಿಸಿ, ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸಿದರು.

ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.

ಯೇಸು, “ಹೌದು, ನೀನು ಹೇಳಿದ್ದು ಸರಿ” ಎಂದು ಉತ್ತರಿಸಿದನು.

ಮಹಾಯಾಜಕರು ಯೇಸುವಿನ ಮೇಲೆ ಅನೇಕ ತಪ್ಪುಗಳನ್ನು ಹೊರಿಸಿದರು. ಆದ್ದರಿಂದ ಪಿಲಾತನು ಯೇಸುವಿಗೆ ಮತ್ತೊಮ್ಮೆ, “ಈ ಜನರು ನಿನ್ನ ಮೇಲೆ ಅನೇಕ ಅಪರಾಧಗಳನ್ನು ಹೊರಿಸುತ್ತಿದ್ದರೂ ನೀನು ಏಕೆ ಉತ್ತರಿಸುವುದಿಲ್ಲ?” ಎಂದು ಕೇಳಿದನು.

ಆದರೆ ಯೇಸು ಮೌನವಾಗಿದ್ದನು. ಪಿಲಾತನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು.

ಯೇಸುವನ್ನು ಬಿಡಿಸಲು ಪಿಲಾತನು ಮಾಡಿದ ವಿಫಲ ಪ್ರಯತ್ನ

(ಮತ್ತಾಯ 27:15-31; ಲೂಕ 23:13-25; ಯೋಹಾನ 18:39–19:16)

ಪ್ರತಿ ವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸಿದ ಕೈದಿಯನ್ನು ರಾಜ್ಯಪಾಲನು ಸೆರೆಮನೆಯಿಂದ ಬಿಡುಗಡೆ ಮಾಡುತ್ತಿದ್ದನು. ಆ ಸಮಯದಲ್ಲಿ ಬರಬ್ಬ ಎಂಬವನು ದಂಗೆಕೋರರೊಂದಿಗೆ ಸೆರೆಮನೆಯಲ್ಲಿದ್ದನು. ಈ ದಂಗೆಕೋರರು ಒಂದು ಗಲಭೆಯ ಸಮಯದಲ್ಲಿ ಕೊಲೆ ಮಾಡಿದ ಆಪಾದನೆಗೆ ಗುರಿಯಾಗಿದ್ದರು.

ಜನರು ಪಿಲಾತನ ಬಳಿಗೆ, ಎಂದಿನಂತೆ ತಮಗಾಗಿ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕೆಂದು ಕೇಳಿದರು. ಪಿಲಾತನು ಜನರಿಗೆ, “ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತೀರಾ?” ಎಂದು ಕೇಳಿದನು. 10 ಮಹಾಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಬಂಧಿಸಿ ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ತಿಳಿದಿತ್ತು. 11 ಆದರೆ ಯೇಸುವನ್ನು ಬಿಡುಗಡೆ ಮಾಡದೆ ಬರಬ್ಬನನ್ನು ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮಹಾಯಾಜಕರು ಜನರನ್ನು ಪ್ರೇರೇಪಿಸಿದರು.

12 ಪಿಲಾತನು ಜನರಿಗೆ ಮತ್ತೆ “ಯೆಹೂದ್ಯರ ರಾಜನೆಂದು ನೀವು ಕರೆಯುವ ಈ ಮನುಷ್ಯನನ್ನು ನಾನೇನು ಮಾಡಲಿ?” ಎಂದು ಕೇಳಿದನು.

13 ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಆರ್ಭಟಿಸಿದರು.

14 ಪಿಲಾತನು, “ಏಕೆ? ಅವನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಿದನು.

ಅದಕ್ಕೆ ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಆರ್ಭಟಿಸಿದರು.

15 ಪಿಲಾತನು ಜನರನ್ನು ಸಂತೋಷಪಡಿಸಲು ಬಯಸಿ ಅವರಿಗಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು ಮತ್ತು ಕೊರಡೆಗಳಿಂದ ಹೊಡೆದು ಶಿಲುಬೆಗೇರಿಸುವುದಕ್ಕಾಗಿ ಯೇಸುವನ್ನು ಸೈನಿಕರಿಗೆ ಒಪ್ಪಿಸಿದನು.

16 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ಕೊಂಡೊಯ್ದು ಇತರ ಸೈನಿಕರನ್ನೆಲ್ಲಾ ಒಟ್ಟಿಗೆ ಕರೆದರು. 17 ಸೈನಿಕರು ಯೇಸುವಿನ ಮೇಲೆ ಕಡುಕೆಂಪಾದ ನಿಲುವಂಗಿಯನ್ನು ಹಾಕಿ ಮುಳ್ಳಿನ ಬಳ್ಳಿಗಳಿಂದ ಒಂದು ಕಿರೀಟ ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. 18 ನಂತರ ಅವರು ಯೇಸುವಿಗೆ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದರು. 19 ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು. 20 ಆ ಬಳಿಕ ಸೈನಿಕರು ಕಡುಕೆಂಪಾದ ನಿಲುವಂಗಿಯನ್ನು ತೆಗೆದುಬಿಟ್ಟು, ಆತನ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಲು ಕರೆದುಕೊಂಡು ಹೋದರು.

ಶಿಲುಬೆಗೇರಿಸಲ್ಪಟ್ಟ ಯೇಸು

(ಮತ್ತಾಯ 27:32-44; ಲೂಕ 23:26-43; ಯೋಹಾನ 19:17-27)

21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು. 22 ಅವರು ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. (ಗೊಲ್ಗೊಥ ಎಂದರೆ “ಕಪಾಲ ಸ್ಥಳ.”) 23 ಗೊಲ್ಗೊಥದಲ್ಲಿ ಸೈನಿಕರು ಯೇಸುವಿಗೆ ರಕ್ತಬೋಳ ಮಿಶ್ರಿತವಾದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ಕುಡಿಯಲಿಲ್ಲ. 24 ಸೈನಿಕರು ಯೇಸುವನ್ನು ಶಿಲುಬೆಗೆ ನೇತುಹಾಕಿ, ಮೊಳೆಗಳನ್ನು ಜಡಿದರು. ನಂತರ ಸೈನಿಕರು ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು.

25 ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು. 26 ಯೇಸುವಿನ ವಿರುದ್ಧ ಮಾಡಲಾದ ಆಪಾದನೆಯನ್ನು ಅಂದರೆ “ಯೆಹೂದ್ಯರ ರಾಜ” ಎಂದು ಶಿಲುಬೆಯ ಮೇಲೆ ಬರೆಯಲಾಗಿತ್ತು. 27 ಅಲ್ಲದೆ ಅವರು ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದರು. ಅವರು ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. 28 [a]

29 ಅಲ್ಲಿ ನಡೆದುಹೋಗುತ್ತಿದ್ದವರು ತಮ್ಮ ತಲೆಯಾಡಿಸುತ್ತಾ, “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ಕಟ್ಟುತ್ತೇನೆಂದು ಹೇಳಿದೆ. 30 ಈಗ ಶಿಲುಬೆಯಿಂದ ಕೆಳಗಿಳಿದು ಬಂದು ನಿನ್ನನ್ನು ರಕ್ಷಿಸಿಕೊ!” ಎಂದು ಅಪಹಾಸ್ಯ ಮಾಡಿದರು.

31 ಅಲ್ಲಿದ್ದ ಮಹಾಯಾಜಕರು ಹಾಗೂ ಧರ್ಮೋಪದೇಶಕರು ಸಹ, “ಅವನು ಇತರ ಜನರನ್ನು ರಕ್ಷಿಸಿದನು. ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 32 ಅವನು ನಿಜವಾಗಲೂ ಇಸ್ರೇಲರ ರಾಜನಾದ ಕ್ರಿಸ್ತನಾಗಿದ್ದರೆ, ಈಗ ಶಿಲುಬೆಯಿಂದ ಕೆಳಗಿಳಿದು ಬಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ. ಆಗ ನಾವು ಅವನನ್ನು ನಂಬುತ್ತೇವೆ” ಎಂದು ಅಪಹಾಸ್ಯ ಮಾಡಿದರು. ಯೇಸುವಿನ ಪಕ್ಕದ ಶಿಲುಬೆಗಳಿಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ಗೇಲಿಮಾಡಿದರು.

ಯೇಸುವಿನ ಮರಣ

(ಮತ್ತಾಯ 27:45-56; ಲೂಕ 23:44-49; ಯೋಹಾನ 19:28-30)

33 ಮಧ್ಯಾಹ್ನವಾದಾಗ, ಇಡೀ ದೇಶವೇ ಕತ್ತಲಾಯಿತು. ಈ ಕತ್ತಲೆಯು ಸಾಯಂಕಾಲ ಮೂರು ಗಂಟೆಯವರೆಗೆ ಇತ್ತು. 34 ಮೂರು ಗಂಟೆಗೆ, ಯೇಸು ದೊಡ್ಡ ಧ್ವನಿಯಿಂದ, “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದು ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟೆ?”(A) ಎಂಬುದೇ ಇದರರ್ಥ.

35 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ನೋಡಿ! ಆತನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದರು.

36 ಅಲ್ಲಿದ್ದ ಒಬ್ಬನು ಓಡಿಹೋಗಿ, ಸ್ಪಂಜನ್ನು ತೆಗೆದುಕೊಂಡು ಅದನ್ನು ಹುಳಿರಸದಿಂದ ತುಂಬಿಸಿ, ಒಂದು ಕೋಲಿಗೆ ಕಟ್ಟಿ ಯೇಸುವಿಗೆ ಕುಡಿಯಲು ಕೊಡುತ್ತಾ, “ಎಲೀಯನು ಇವನನ್ನು ಶಿಲುಬೆಯಿಂದ ಕೆಳಗಿಳಿಸಲು ಬರಬಹುದೇನೋ ನಾವು ಕಾಯ್ದು ನೋಡಬೇಕು” ಎಂದನು.

37 ನಂತರ ಯೇಸು ಮಹಾಧ್ವನಿಯಿಂದ ಕೂಗಿ, ಪ್ರಾಣಬಿಟ್ಟನು.

38 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗಗಳಾಗಿ ಹರಿದುಹೋಯಿತು. 39 ಶಿಲುಬೆಯ ಮುಂದೆ ನಿಂತಿದ್ದ ಸೈನ್ಯದ ಅಧಿಕಾರಿಯು ಯೇಸು ಪ್ರಾಣಬಿಟ್ಟಾಗ ನಡೆದದ್ದನ್ನು ನೋಡಿ, “ಈ ಮನುಷ್ಯನು ನಿಜವಾಗಿಯೂ ದೇವರ ಮಗನು” ಎಂದನು.

40 ಕೆಲವು ಸ್ತ್ರೀಯರು ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ನೋಡುತ್ತಾ ಇದ್ದರು. ಈ ಸ್ತ್ರೀಯರಲ್ಲಿ ಕೆಲವರೆಂದರೆ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬ ಯೋಸೆಯರ ತಾಯಿಯಾದ ಮರಿಯಳು (ಯಾಕೋಬನು ಅವಳ ಕಿರಿಯ ಮಗ.) 41 ಈ ಸ್ತ್ರೀಯರು ಗಲಿಲಾಯದಲ್ಲಿ ಯೇಸುವನ್ನು ಹಿಂಬಾಲಿಸಿ ಆತನ ಸೇವೆ ಮಾಡಿದವರು. ಯೇಸುವಿನೊಡನೆ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಅಲ್ಲಿದ್ದರು.

ಯೇಸುವಿನ ಸಮಾಧಿ

(ಮತ್ತಾಯ 27:57-61; ಲೂಕ 23:50-56; ಯೋಹಾನ 19:38-42)

42 ಆಗ ಕತ್ತಲಾಗತೊಡಗಿತ್ತು. ಅಂದು ಸಿದ್ಧತೆಯ ದಿನವಾಗಿದ್ದರಿಂದ (ಅಂದರೆ ಸಬ್ಬತ್ತಿನ ಹಿಂದಿನ ದಿನ), 43 ಅರಿಮಥಾಯ ಊರಿನ ಯೋಸೇಫ ಎಂಬವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಧೈರ್ಯದಿಂದ ಕೇಳಿದನು. ಯೋಸೇಫನು ಯೆಹೂದ್ಯರ ಸಮಿತಿಯಲ್ಲಿ ಒಬ್ಬ ಮುಖ್ಯ ಸದಸ್ಯನಾಗಿದ್ದನು. ದೇವರರಾಜ್ಯ ಬರಲೆಂದು ಬಯಸಿದ ಜನರಲ್ಲಿ ಇವನೂ ಒಬ್ಬನಾಗಿದ್ದನು.

44 ಯೇಸು ಇಷ್ಟು ಬೇಗನೆ ಸತ್ತದ್ದನ್ನು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಯೇಸುವನ್ನು ಕಾವಲು ಕಾಯುತ್ತಿದ್ದ ಸೈನ್ಯಾಧಿಕಾರಿಯನ್ನು ಪಿಲಾತನು ಕರೆದು, “ಯೇಸು ಸತ್ತುಹೋದನೇ?” ಎಂದು ಕೇಳಿದನು. 45 ಆ ಅಧಿಕಾರಿಯು, “ಹೌದು” ಎಂದು ಹೇಳಿದ್ದರಿಂದ ಆತನ ದೇಹವನ್ನು ತೆಗೆದುಕೊಳ್ಳಲು ಪಿಲಾತನು ಯೋಸೇಫನಿಗೆ ಅಪ್ಪಣೆಕೊಟ್ಟನು.

46 ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು. 47 ಮಗ್ದಲದ ಮರಿಯಳು ಹಾಗೂ ಯೋಸೆಯನ ತಾಯಿಯಾದ ಮರಿಯಳು ಸಮಾಧಿ ಮಾಡಿದ ಸ್ಥಳವನ್ನು ಗುರುತಿಸಿಕೊಂಡರು.

ಯೋಬನು 11

ಚೋಫರನ ವಾದ

11 ಆಗ ನಾಮಾಥ ದೇಶದ ಚೋಫರನು ಯೋಬನಿಗೆ ಉತ್ತರಿಸಿದನು:

“ಮಾತುಗಳ ಈ ಪ್ರವಾಹಕ್ಕೆ ಯಾರಾದರೊಬ್ಬರು ಉತ್ತರ ಕೊಡಬೇಕು!
    ಇಷ್ಟೆಲ್ಲಾ ಮಾತುಗಳು ಯೋಬನನ್ನು ನೀತಿವಂತನನ್ನಾಗಿ ಮಾಡುತ್ತವೆಯೋ? ಇಲ್ಲ!
ಯೋಬನೇ, ಅರ್ಥರಹಿತವಾದ ನಿನ್ನ ಮಾತುಗಳಿಗೆ
    ನಮ್ಮಲ್ಲಿ ಉತ್ತರವೇ ಇಲ್ಲವೆಂದು ಆಲೋಚಿಸಿಕೊಂಡಿರುವೆಯಾ?
ನೀನು ದೇವರನ್ನು ಅಪಹಾಸ್ಯ ಮಾಡುವಾಗ
    ಯಾರೂ ನಿನ್ನನ್ನು ಎಚ್ಚರಿಸುವುದಿಲ್ಲ ಎಂದುಕೊಂಡಿರುವಿಯಾ?
ಯೋಬನೇ, ನೀನು ದೇವರಿಗೆ,
    ‘ನನ್ನ ವಾದಗಳು ಸರಿಯಾಗಿವೆ,
    ನಿನ್ನ ದೃಷ್ಟಿಯಲ್ಲಿ ನಾನು ಶುದ್ಧನಾಗಿರುವೆ’ ಎಂದು ಹೇಳಿದೆಯಲ್ಲವೇ?
ದೇವರು ನಿನಗೆ ಉತ್ತರ ನೀಡಿ ನಿನ್ನನ್ನು ತಪ್ಪಿತಸ್ಥನೆಂದು ಹೇಳಿದರೆ
    ಎಷ್ಟೋ ಒಳ್ಳೆಯದು.
ಆತನು ನಿನಗೆ ಜ್ಞಾನದ ರಹಸ್ಯಗಳನ್ನು ತಿಳಿಸಿ
    ಜ್ಞಾನಕ್ಕೆ ಎರಡು ಮುಖಗಳಿವೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು.
ದೇವರು ನಿನಗೆ ತಕ್ಕ ದಂಡನೆಯನ್ನು ವಿಧಿಸಿಲ್ಲವೆಂಬುದು
    ನಿನಗೆ ತಿಳಿದಿರಲಿ.

“ನೀನು ದೇವರ ರಹಸ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲೆಯಾ?
    ಸರ್ವಶಕ್ತನಾದ ದೇವರ ಜ್ಞಾನದ ಮೇರೆಗಳನ್ನು ತಿಳಿದುಕೊಳ್ಳಬಲ್ಲೆಯಾ?
ಆತನ ಜ್ಞಾನವು ಆಕಾಶಕ್ಕಿಂತಲೂ ಉನ್ನತವಾಗಿದೆ; ಅದನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವೇ ಇಲ್ಲ.
    ಅದು ಮೃತ್ಯುಲೋಕಕ್ಕಿಂತಲೂ ಆಳವಾಗಿದೆ. ನೀನು ಅದನ್ನು ಗ್ರಹಿಸಿಕೊಳ್ಳಲಾರೆ.
ದೇವರ ಜ್ಞಾನವು ಭೂಮಿಗಿಂತಲೂ ಉದ್ದವಾಗಿದೆ;
    ಸಮುದ್ರಕ್ಕಿಂತಲೂ ಅಗಲವಾಗಿದೆ.

10 “ದೇವರು ನಿನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಎಳೆದುಕೊಂಡು ಬರುವುದಾದರೆ
    ಆತನನ್ನು ತಡೆಯಬಲ್ಲವರು ಯಾರು?
11 ಅಯೋಗ್ಯರು ಯಾರೆಂಬುದು ದೇವರಿಗೆ ಚೆನ್ನಾಗಿ ಗೊತ್ತಿದೆ.
    ಆತನು ಕೆಟ್ಟದ್ದನ್ನು ಕಂಡಾಗ ಗಮನಿಸುವನು.
12 ಕಾಡುಕತ್ತೆಯು ಮನುಷ್ಯನನ್ನು ಹೇಗೆ ಹೆರಲಾರದೋ
    ಅದೇ ರೀತಿಯಲ್ಲಿ ದಡ್ಡನು ಎಂದಿಗೂ ಜ್ಞಾನಿಯಾಗಲಾರನು.
13 ಯೋಬನೇ, ನಿನ್ನ ಕೈಗಳನ್ನು ಮೇಲೆತ್ತಿ ದೇವರೊಬ್ಬನನ್ನೇ ಆರಾಧಿಸುವುದಕ್ಕಾಗಿ
    ನಿನ್ನ ಹೃದಯವನ್ನು ಸಿದ್ಧಪಡಿಸಿಕೊ.
14 ನೀನು ಪಾಪವನ್ನು ಹಿಡಿದುಕೊಂಡಿದ್ದರೆ ಅದನ್ನು ನಿನ್ನಿಂದ ದೂರಮಾಡು.
    ದುಷ್ಟತನವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
15 ಆಗ ನೀನು ಖಂಡಿತವಾಗಿ ನಾಚಿಕೆಯಿಲ್ಲದೆ ತಲೆಯೆತ್ತುವೆ;
    ಸ್ಥಿರವಾಗಿ ನಿಂತುಕೊಂಡು ನಿರ್ಭಯದಿಂದಿರುವೆ.
16 ಯೋಬನೇ, ಆಗ ನೀನು ನಿನ್ನ ಕಷ್ಟವನ್ನು ಮರೆತುಬಿಡುವೆ;
    ಹರಿದುಹೋದ ನೀರನ್ನೋ ಎಂಬಂತೆ ನಿನ್ನ ಕಷ್ಟಗಳನ್ನು ಜ್ಞಾಪಿಸಿಕೊಳ್ಳುವೆ.
17 ನಿನ್ನ ಜೀವಿತವು ಮಧ್ಯಾಹ್ನದ ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿರುವುದು.
    ನಿನ್ನ ಜೀವಿತದ ಕಾರ್ಗತ್ತಲೆಯ ತಾಸುಗಳು ಮುಂಜಾನೆಯ ಸೂರ್ಯನಂತೆ ಹೊಳೆಯುತ್ತವೆ.
18 ಯೋಬನೇ, ನಿನಗೆ ನಿರೀಕ್ಷೆಯಿರುವುದರಿಂದ ಸುರಕ್ಷಿತನಾಗಿರುವೆ.
    ಆತನು ನಿನ್ನನ್ನು ಪರಿಪಾಲಿಸುತ್ತಾ ನಿನಗೆ ವಿಶ್ರಾಂತಿಯನ್ನು ದಯಪಾಲಿಸುವನು.
19 ಆಗ ನೀನು ಮಲಗಿ ವಿಶ್ರಮಿಸಿಕೊಳ್ಳುವೆ; ಯಾರೂ ನಿನಗೆ ಭಯ ಹುಟ್ಟಿಸುವುದಿಲ್ಲ.
    ಅನೇಕರು ನಿನ್ನ ಸಹಾಯಕ್ಕಾಗಿಯೇ ಕೇಳಿಕೊಳ್ಳುವರು.
20 ಆದರೆ ದುಷ್ಟರು ಸಹಾಯಕ್ಕಾಗಿ ಎದುರುನೋಡಿದರೂ
    ತಮ್ಮ ಆಪತ್ತುಗಳಿಂದ ಪಾರಾಗಲು ಅವರಿಗೆ ಸಾಧ್ಯವಿಲ್ಲ.
    ಅವರ ನಿರೀಕ್ಷೆಯೇ ಅವರನ್ನು ಮರಣಕ್ಕೆ ನಡೆಸುತ್ತದೆ.”

ರೋಮ್ನಗರದವರಿಗೆ 15

15 ಆದ್ದರಿಂದ ನಂಬಿಕೆಯಲ್ಲಿ ಬಲಹೀನವಾಗಿರುವವರ ಬಲಹೀನತೆಗಳನ್ನು ನಾವು ಸಹಿಸಿಕೊಳ್ಳಬೇಕು. ನಾವು ಕೇವಲ ನಮ್ಮ ಹಿತವನ್ನು ಮಾತ್ರ ನೋಡಿಕೊಳ್ಳಬಾರದು. ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಹಿತವನ್ನು ನೋಡಿಕೊಳ್ಳಬೇಕು. ನಂಬಿಕೆಯಲ್ಲಿ ಬಲಹೀನರಾಗಿರುವವರನ್ನು ಬಲಗೊಳಿಸಲು ನೆರವಾಗಿರಬೇಕು. ಕ್ರಿಸ್ತನು ಸಹ ತನ್ನ ಜೀವಮಾನದಲ್ಲಿ ತನ್ನ ಹಿತಕ್ಕಾಗಿ ಪ್ರಯತ್ನಿಸಲಿಲ್ಲ. “ನಿನಗೆ ಅವಮಾನ ಮಾಡಿದ ಜನರು ನನಗೂ ಅವಮಾನ ಮಾಡಿದರು”(A) ಎಂಬುದಾಗಿ ಆತನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಹಿಂದಿನ ಕಾಲದಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದೂ ನಮ್ಮ ಉಪದೇಶಕ್ಕಾಗಿಯೇ ಬರೆಯಲ್ಪಟ್ಟಿದೆ. ನಾವು ನಿರೀಕ್ಷೆ ಉಳ್ಳವರಾಗಿರಬೇಕೆಂದು ಆ ಸಂಗತಿಗಳು ಬರೆಯಲ್ಪಟ್ಟಿವೆ. ಪವಿತ್ರ ಗ್ರಂಥವು ನಮಗೆ ಕೊಡುವ ತಾಳ್ಮೆಯಿಂದಲೂ ಶಕ್ತಿಯಿಂದಲೂ ಈ ನಿರೀಕ್ಷೆ ಬರುತ್ತದೆ. ತಾಳ್ಮೆ ಮತ್ತು ಶಕ್ತಿ ದೇವರಿಂದ ಬರುತ್ತವೆ. ಕ್ರಿಸ್ತ ಯೇಸು ಬಯಸುವ ಮಾರ್ಗವನ್ನು ನೀವೆಲ್ಲರೂ ಒಟ್ಟಾಗಿ ಒಪ್ಪಿಕೊಳ್ಳಲು ದೇವರು ನಿಮಗೆ ಸಹಾಯ ಮಾಡಲೆಂದು ನಾನು ಪ್ರಾರ್ಥಿಸುತ್ತೇನೆ. ಹೀಗೆ ನೀವೆಲ್ಲರೂ ಒಂದೇ ಹೃದಯದಿಂದಲೂ ಒಂದೇ ಮನಸ್ಸಿನಿಂದಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಮಹಿಮೆಪಡಿಸುವಿರಿ. ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿಕೊಂಡನು. ಆದ್ದರಿಂದ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು. ಇದು ದೇವರಿಗೆ ಮಹಿಮೆಯನ್ನು ಉಂಟು ಮಾಡುತ್ತದೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳು ಸತ್ಯವಾದುವುಗಳೆಂದು ತೋರಿಸುವುದಕ್ಕಾಗಿಯೂ ದೇವರು ಆ ವಾಗ್ದಾನಗಳನ್ನು ನೆರವೇರಿಸುತ್ತಾನೆ ಎಂಬುದನ್ನು ನಿರೂಪಿಸುವುದಕ್ಕಾಗಿಯೂ ದೇವರು ತಮಗೆ ತೋರುವ ಕರುಣೆಗಾಗಿ ಯೆಹೂದ್ಯರಲ್ಲದವರು ಆತನನ್ನು ಮಹಿಮೆಪಡಿಸಲೆಂದು ಕ್ರಿಸ್ತನು ಯೆಹೂದ್ಯರ ಸೇವಕನಾದನು. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ಆದ್ದರಿಂದ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ನಾನು ನಿನ್ನನ್ನು ಸ್ತುತಿಸುವೆನು:
    ನಾನು ನಿನ್ನ ಹೆಸರನ್ನು ಸಂಕೀರ್ತಿಸುವೆನು.”(B)

10 ಇದಲ್ಲದೆ ಪವಿತ್ರ ಗ್ರಂಥವು ಹೀಗೆನ್ನುತ್ತದೆ:

“ಯೆಹೂದ್ಯರಲ್ಲದ ನೀವು ದೇವರ ಸ್ವಂತ ಜನರೊಂದಿಗೆ ಸೇರಿ ಸಂತೋಷದಿಂದಿರಬೇಕು.”(C)

11 ಮತ್ತೊಂದು ಕಡೆ ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:

“ಯೆಹೂದ್ಯರಲ್ಲದ ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ.
    ಎಲ್ಲಾ ಜನರು ಪ್ರಭುವಿಗೆ ಸ್ತೋತ್ರ ಮಾಡಲಿ.”(D)

12 ಯೆಶಾಯನು ಹೀಗೆ ಹೇಳಿದ್ದಾನೆ:

“ಇಷಯನ ಕುಟುಂಬದಿಂದ ಒಬ್ಬ ವ್ಯಕ್ತಿಯು ಬರುವನು.
    ಆತನು ಯೆಹೂದ್ಯರಲ್ಲದವರನ್ನು ಆಳುವುದಕ್ಕಾಗಿ ಬರುವನು.
    ಯೆಹೂದ್ಯರಲ್ಲದ ಜನರು ಆತನಲ್ಲಿ ನಿರೀಕ್ಷೆಯನ್ನು ಹೊಂದಿಕೊಳ್ಳುವರು.”(E)

13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.

ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ

14 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಳ್ಳೆಯತನವು ತುಂಬಿದೆಯೆಂದು ನನಗೆ ನಿಶ್ಚಯವಾಗಿ ಗೊತ್ತಿದೆ. ಅಗತ್ಯವಾದ ಸಕಲ ಜ್ಞಾನವು ನಿಮಗಿದೆಯೆಂದು ಮತ್ತು ಒಬ್ಬರಿಗೊಬ್ಬರು ಸಲಹೆ ನೀಡಬಲ್ಲಿರೆಂದು ನನಗೆ ಗೊತ್ತಿದೆ. 15 ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕೆಂದು ನಾನು ಅಪೇಕ್ಷಿಸಿದ ಕೆಲವು ಸಂಗತಿಗಳನ್ನು ನಾನು ನಿಮಗೆ ಧೈರ್ಯವಾಗಿ ಬರೆದಿರುವೆ. ಕ್ರಿಸ್ತ ಯೇಸುವಿನ ಸೇವಕ ಎಂಬ ವಿಶೇಷವಾದ ವರವನ್ನು ದೇವರು ನನಗೆ ಕೊಟ್ಟಿರುವುದರಿಂದ ನಾನು ಹೀಗೆ ಬರೆದಿದ್ದೇನೆ. 16 ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡುವುದಕ್ಕಾಗಿ ದೇವರು ನನ್ನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡನು. ದೇವರ ಸುವಾರ್ತೆಯನ್ನು ಉಪದೇಶಿಸುವುದರ ಮೂಲಕ ನಾನು ಆತನ ಸೇವೆ ಮಾಡುವವನಾಗಿದ್ದೇನೆ. ಯೆಹೂದ್ಯರಲ್ಲದ ಜನರು ಸಹ ದೇವರು ಸ್ವೀಕರಿಸಿಕೊಳ್ಳುವ ಕಾಣಿಕೆಯಂತಾಗಬೇಕೆಂದು ನಾನು ಈ ಸೇವೆ ಮಾಡುವವನಾಗಿದ್ದೇನೆ. ಆ ಜನರು ದೇವರಿಗೋಸ್ಕರವಾಗಿ ಪವಿತ್ರಾತ್ಮನ ಮೂಲಕ ಪವಿತ್ರರಾಗಿದ್ದಾರೆ.

17 ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ನಾನು ದೇವರಿಗೋಸ್ಕರ ಮಾಡುವ ಕಾರ್ಯಗಳ ಬಗ್ಗೆ ಹೆಮ್ಮೆಪಡುತ್ತೇನೆ. 18 ನಾನು ನನ್ನ ಸ್ವಕಾರ್ಯಗಳ ಬಗ್ಗೆಯೂ ಮಾತಾಡುವುದಿಲ್ಲ. ಯೆಹೂದ್ಯರಲ್ಲದ ಜನರನ್ನು ತನಗೆ ವಿಧೇಯರನ್ನಾಗಿ ಮಾಡಿಕೊಳ್ಳಲು ಕ್ರಿಸ್ತನು ನನ್ನ ಮೂಲಕ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಮಾಡಿದ ಕಾರ್ಯಗಳನ್ನು ಹೇಳಿಕೊಳ್ಳುತ್ತೇನೆ. 19 ಅದ್ಭುತಕಾರ್ಯಗಳ ಶಕ್ತಿಯನ್ನು ಮತ್ತು ಮಹಾಕಾರ್ಯಗಳನ್ನು ನೋಡಿದ್ದರಿಂದಲೂ ಪವಿತ್ರಾತ್ಮನ ಶಕ್ತಿಯ ನಿಮಿತ್ತದಿಂದಲೂ ಅವರು ದೇವರಿಗೆ ವಿಧೇಯರಾದರು. ನಾನು ಜೆರುಸಲೇಮಿನಿಂದ ಇಲ್ಲುರಿಕ ಪ್ರಾಂತ್ಯದವರೆಗೂ ಸುವಾರ್ತೆಯನ್ನು ಬೋಧಿಸಿ, ನನ್ನ ಆ ಕರ್ತವ್ಯವನ್ನು ಪೂರೈಸಿದ್ದೇನೆ. 20 ಕ್ರಿಸ್ತನ ಬಗ್ಗೆ ಜನರು ಎಂದೂ ಕೇಳಿಲ್ಲದ ಸ್ಥಳಗಳಲ್ಲಿ ಸುವಾರ್ತೆಯನ್ನು ಬೋಧಿಸಲು ನಾನು ಯಾವಾಗಲೂ ಅಪೇಕ್ಷಿಸುತ್ತೇನೆ; ಏಕೆಂದರೆ ಮತ್ತೊಬ್ಬನು ಆಗಲೇ ಆರಂಭಿಸಿರುವ ಕೆಲಸದ ಮೇಲೆ ಕಟ್ಟಲು ನನಗೆ ಇಷ್ಟವಿಲ್ಲ. 21 ಆದರೆ ಇದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ:

“ಆತನ ಬಗ್ಗೆ ತಿಳಿಯದ ಜನರು ಆತನನ್ನು (ಕ್ರಿಸ್ತನನ್ನು) ನೋಡುವರು.
    ಆತನ ಬಗ್ಗೆ ಕೇಳಿಲ್ಲದ ಜನರು ಆತನನ್ನು ಅರ್ಥಮಾಡಿಕೊಳ್ಳುವರು.”(F)

ರೋಮಿಗೆ ಹೋಗಲು ಪೌಲನ ಯೋಜನೆ

22 ಈ ಕಾರಣದಿಂದಲೇ, ನಿಮ್ಮ ಬಳಿಗೆ ಬಾರದಂತೆ ನನಗೆ ಅನೇಕ ಸಲ ಅಡಚಣೆ ಆಯಿತು.

23 ಆದರೆ ಈಗ ಈ ಪ್ರಾಂತ್ಯಗಳಲ್ಲಿ ನಾನು ಮಾಡಬೇಕಾಗಿದ್ದ ಸೇವೆಯನ್ನು ಮಾಡಿ ಮುಗಿಸಿದ್ದೇನೆ. ಅನೇಕ ವರ್ಷಗಳಿಂದ ನಾನು ನಿಮ್ಮ ಬಳಿಗೆ ಬರಬೇಕೆಂದಿದ್ದೆ. 24 ಆದ್ದರಿಂದ ನಾನು ಸ್ಪೇನಿಗೆ ಹೋಗುವಾಗ ನಿಮ್ಮನ್ನು ಸಂದರ್ಶಿಸುತ್ತೇನೆ. ಹೌದು, ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ ನಿಮ್ಮನ್ನು ಸಂದರ್ಶಿಸಿ, ಸ್ವಲ್ಪಕಾಲ ನಿಮ್ಮೊಂದಿಗೆ ಸಂತೋಷವಾಗಿ ತಂಗಿರುತ್ತೇನೆಂಬ ನಿರೀಕ್ಷೆ ನನಗಿದೆ. ಬಳಿಕ ನೀವು ನನ್ನ ಪ್ರಯಾಣಕ್ಕೆ ಸಹಾಯ ಮಾಡಬಹದು.

25 ಈಗ ನಾನು ದೇವಜನರಿಗೆ ಸಹಾಯ ಮಾಡುವುಕ್ಕಾಗಿ ಜೆರುಸಲೇಮಿಗೆ ಹೋಗುತ್ತಿದ್ದೇನೆ. 26 ಅಲ್ಲಿನ ದೇವಜನರಲ್ಲಿ ಕೆಲವರು ಬಡವರಾಗಿದ್ದಾರೆ. ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಅಲ್ಲಿನ ಬಡಜನರಿಗಾಗಿ ಸಂತೋಷದಿಂದ ಧನಸಹಾಯ ಮಾಡಿದ್ದಾರೆ. 27 ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಸ್ವಂತ ಇಷ್ಟದಿಂದಲೇ ಈ ಕಾರ್ಯವನ್ನು ಮಾಡಿದ್ದಾರೆ. ಅದು ಅವರ ಕರ್ತವ್ಯವೂ ಹೌದು. ಯೆಹೂದ್ಯರಲ್ಲದ ಅವರು ಯೆಹೂದ್ಯರ ಆತ್ಮಿಕ ಅಶೀರ್ವಾದಗಳಲ್ಲಿ ಪಾಲು ಹೊಂದಿರುವುದರಿಂದ ಅವರು ತಮ್ಮಲ್ಲಿರುವಂಥವುಗಳ ಮೂಲಕ ಅವರಿಗೆ ನೆರವು ನೀಡುವುದು ಅವರ ಹೊಣೆಯಾಗಿದೆ. 28 ಜೆರುಸಲೇಮಿನ ಬಡಜನರಿಗೋಸ್ಕರ ಕೊಟ್ಟಿರುವ ಈ ಹಣವನ್ನೆಲ್ಲಾ ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನಾನು ಸ್ಪೇನಿಗೆ ಹೊರಡುವೆನು.

ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ (ರೋಮಿನಲ್ಲಿ) ಇಳಿದು ನಿಮ್ಮನ್ನು ಸಂದರ್ಶಿಸುವೆನು. 29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂದು ಬಲ್ಲೆನು.

30 ಸಹೋದರ ಸಹೋದರಿಯರೇ, ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸುವುದರ ಮೂಲಕ ನನ್ನ ಸೇವೆಗೆ ಸಹಾಯ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಮ್ಮ ಪ್ರಭುವಾದ ಯೇಸುವಿನ ನಿಮಿತ್ತವಾಗಿಯೂ ಪವಿತ್ರಾತ್ಮನು ನಮಗೆ ಕೊಡುವ ಪ್ರೀತಿಯ ನಿಮಿತ್ತವಾಗಿಯೂ ನೀವು ಪ್ರಾರ್ಥಿಸಿರಿ. 31 ಜುದೇಯದಲ್ಲಿರುವ ಅವಿಶ್ವಾಸಿಗಳ ಕೈಯಿಂದ ನಾನು ಪಾರಾಗುವಂತೆ ಪ್ರಾರ್ಥಿಸಿರಿ. ನಾನು ಜೆರುಸಲೇಮಿಗೆ ತೆಗೆದುಕೊಂಡು ಹೋಗುತ್ತಿರುವ ಈ ಸಹಾಯಧನವು ಅಲ್ಲಿರುವ ದೇವಮಕ್ಕಳಿಗೆ ಮೆಚ್ಚಿಕೆಯಾಗುವಂತೆ ಪ್ರಾರ್ಥಿಸಿರಿ. 32 ಅನಂತರ, ದೇವರು ಬಯಸುವುದಾದರೆ ನಾನು ನಿಮ್ಮ ಬಳಿಗೆ ಬರುತ್ತೇನೆ. ನಾನು ಸಂತೋಷದಿಂದ ಬಂದು ನಿಮ್ಮ ಸಂಗಡವಿದ್ದು ವಿಶ್ರಾಂತಿಯನ್ನು ಪಡೆಯುತ್ತೇನೆ. 33 ಶಾಂತಿಯನ್ನು ಕೊಡುವ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International