M’Cheyne Bible Reading Plan
ಇಸಾಕನು ಅಬೀಮೆಲೆಕನಿಗೆ ಸುಳ್ಳು ಹೇಳಿದ್ದು
26 ಅಬ್ರಹಾಮನ ಕಾಲದಲ್ಲಿ ಬಂದಿದ್ದ ಕ್ಷಾಮದಂತೆ ಮತ್ತೊಂದು ಕ್ಷಾಮವು ಕಾನಾನ್ ದೇಶಕ್ಕೆ ಬಂದಿತು. ಆದ್ದರಿಂದ ಇಸಾಕನು ಫಿಲಿಷ್ಟಿಯರ ರಾಜನಾದ ಅಬೀಮೆಲೆಕನ ಬಳಿಗೆ ಹೋದನು. ಅಬೀಮೆಲೆಕನು ಗೆರಾರ್ ನಗರದಲ್ಲಿದ್ದನು. 2 ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನೀನು ಈಜಿಪ್ಟಿಗೆ ಹೋಗಬೇಡ. ನೀನು ಯಾವ ಪ್ರದೇಶದಲ್ಲಿರಬೇಕೆಂದು ನಾನು ಆಜ್ಞಾಪಿಸಿದೆನೋ ಆ ಪ್ರದೇಶದಲ್ಲಿ ವಾಸಿಸು. 3 ನಾನು ನಿನ್ನ ಸಂಗಡವಿದ್ದು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಕುಟುಂಬಕ್ಕೂ ಈ ಪ್ರದೇಶಗಳನ್ನೆಲ್ಲ ಕೊಡುವೆನು. ನಾನು ನಿನ್ನ ತಂದೆಯಾದ ಅಬ್ರಹಾಮನಿಗೆ ಪ್ರಮಾಣ ಮಾಡಿದ್ದನ್ನು ನೆರವೇರಿಸುವೆನು. 4 ನಾನು ನಿನ್ನ ಸಂತಾನವನ್ನು ಆಕಾಶದಲ್ಲಿನ ನಕ್ಷತ್ರಗಳಷ್ಟು ಹೆಚ್ಚಿಸಿ ಅವರಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳವರು ನಿನ್ನ ಸಂತತಿಯಿಂದ ಆಶೀರ್ವಾದ ಹೊಂದುವರು. 5 ನಾನೇ ಇದನ್ನು ನೆರವೇರಿಸುವೆನು; ಯಾಕೆಂದರೆ ನಿನ್ನ ತಂದೆಯಾದ ಅಬ್ರಹಾಮನು ನನ್ನ ಮಾತುಗಳಿಗೆ ವಿಧೇಯನಾಗಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞೆಗಳನ್ನು, ಕಟ್ಟಳೆಗಳನ್ನು, ನಿಯಮಗಳನ್ನು ಕೈಕೊಂಡು ನಡೆದನು” ಎಂದು ಹೇಳಿದನು.
6 ಆದ್ದರಿಂದ ಇಸಾಕನು ಗೆರಾರಿನಲ್ಲಿ ಇಳಿದುಕೊಂಡು ವಾಸಿಸಿದನು. 7 ಇಸಾಕನ ಹೆಂಡತಿಯಾದ ರೆಬೆಕ್ಕಳು ತುಂಬ ಸೌಂದರ್ಯವತಿಯಾಗಿದ್ದಳು. ಆ ಸ್ಥಳದ ಗಂಡಸರು ರೆಬೆಕ್ಕಳ ಬಗ್ಗೆ ಇಸಾಕನನ್ನು ಕೇಳಿದರು. ಇಸಾಕನು ಅವರಿಗೆ, “ಆಕೆ ನನ್ನ ತಂಗಿ” ಎಂದು ಹೇಳಿದನು. ರೆಬೆಕ್ಕಳು ತನಗೆ ಹೆಂಡತಿಯಾಗಬೇಕೆಂದು ಅವರಿಗೆ ತಿಳಿದರೆ ಆಕೆಯನ್ನು ತೆಗೆದುಕೊಳ್ಳಲು ಅವರು ತನ್ನನ್ನು ಕೊಲ್ಲಬಹುದೆಂಬ ಹೆದರಿಕೆಯಿಂದ ಇಸಾಕನು ಹಾಗೆ ಹೇಳಿದನು.
8 ಅಲ್ಲಿ ಇಸಾಕನು ಇದ್ದು ಬಹುಕಾಲವಾಗಿತ್ತು. ಒಮ್ಮೆ ಫಿಲಿಷ್ಟಿಯರ ರಾಜನಾದ ಅಬೀಮೆಲೆಕನು ತನ್ನ ಕಿಟಕಿಯಿಂದ ನೋಡಿದಾಗ, ಇಸಾಕನು ಮತ್ತು ಅವನ ಹೆಂಡತಿ ಸರಸವಾಡುತ್ತಿರುವುದನ್ನು ಕಂಡನು. 9 ಅಬೀಮೆಲೆಕನು ಇಸಾಕನನ್ನು ಕರೆದು, “ಈ ಸ್ತ್ರೀಯು ನಿನ್ನ ಹೆಂಡತಿ. ಅವಳು ನಿನ್ನ ತಂಗಿಯೆಂದು ಯಾಕೆ ನಮಗೆ ಹೇಳಿದೆ?” ಎಂದು ಕೇಳಿದನು.
ಇಸಾಕನು ಅವನಿಗೆ, “ನೀನು ಆಕೆಯನ್ನು ತೆಗೆದುಕೊಳ್ಳಲು ನನ್ನನ್ನು ಕೊಲ್ಲಬಹುದೆಂಬ ಭಯದಿಂದ ಹಾಗೆ ಹೇಳಿದೆ” ಅಂದನು.
10 ಅಬೀಮೆಲೆಕನು ಅವನಿಗೆ, “ನೀನು ನಮಗೆ ಕೆಟ್ಟದ್ದನ್ನು ಮಾಡಿದೆ. ನಮ್ಮಲ್ಲಿರುವ ಯಾವ ಗಂಡಸಾದರೂ ನಿನ್ನ ಹೆಂಡತಿಯೊಡನೆ ಮಲಗಿಕೊಳ್ಳಲು ನೀನೇ ಆಸ್ಪದ ಮಾಡಿಕೊಟ್ಟಿದ್ದೆ. ಅಂಥದ್ದೇನಾದರೂ ನಡೆದಿದ್ದರೆ ಮಹಾ ಅಪರಾಧವಾಗುತ್ತಿತ್ತು” ಎಂದು ಹೇಳಿದನು.
11 ಬಳಿಕ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಯಾರೂ ಕೇಡುಮಾಡಕೂಡದು. ಇವರಿಗೆ ಕೇಡುಮಾಡುವವನನ್ನು ಕೊಲ್ಲಲಾಗುವುದು” ಎಂದು ಆಜ್ಞಾಪಿಸಿದನು.
ಇಸಾಕನು ಐಶ್ವರ್ಯವಂತನಾದದ್ದು
12 ಇಸಾಕನು ಆ ಪ್ರದೇಶದಲ್ಲಿ ಬೀಜ ಬಿತ್ತಿದನು; ಅವನಿಗೆ ಅದೇ ವರ್ಷದಲ್ಲಿ ಮಹಾ ಸುಗ್ಗಿಯಾಯಿತು. ಯೆಹೋವನು ಅವನನ್ನು ಹೆಚ್ಚಾಗಿ ಆಶೀರ್ವದಿಸಿದನು. 13 ಅವನ ಐಶ್ವರ್ಯವು ಹೆಚ್ಚುತ್ತಾ ಬಂದದ್ದರಿಂದ ಅವನು ಬಹು ಐಶ್ವರ್ಯವಂತನಾದನು. 14 ಅವನಿಗೆ ಅನೇಕ ದನಕುರಿಗಳ ಮಂದೆಗಳೂ ಪ್ರಾಣಿಗಳ ಹಿಂಡೂಗಳೂ ಇದ್ದವು. ಇದಲ್ಲದೆ ಅವನಿಗೆ ಅನೇಕ ಸೇವಕರು ಇದ್ದರು. ಇದನ್ನು ಕಂಡು ಫಿಲಿಷ್ಟಿಯರು ಅವನ ಬಗ್ಗೆ ಅಸೂಯೆಪಡುತ್ತಿದ್ದರು. 15 ಆದ್ದರಿಂದ ಅನೇಕ ವರ್ಷಗಳ ಹಿಂದೆ ಅಬ್ರಹಾಮ ಮತ್ತು ಅವನ ಸೇವಕರು ತೋಡಿದ್ದ ಬಾವಿಗಳಿಗೆ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು. 16 ಅಬೀಮೆಲೆಕನು ಇಸಾಕನಿಗೆ, “ನಮ್ಮ ದೇಶವನ್ನು ಬಿಟ್ಟುಹೋಗು. ನೀನು ನಮಗಿಂತಲೂ ತುಂಬ ಬಲಿಷ್ಠನಾದೆ” ಎಂದು ಹೇಳಿದನು.
17 ಆದ್ದರಿಂದ ಇಸಾಕನು ಆ ಸ್ಥಳದಿಂದ ಹೊರಟು ಗೆರಾರಿನ ಚಿಕ್ಕಹೊಳೆಯ ಸಮೀಪದಲ್ಲಿ ಪಾಳೆಯ ಮಾಡಿಕೊಂಡನು. ಇಸಾಕನು ಅಲ್ಲಿ ಇಳಿದುಕೊಂಡು ವಾಸಿಸಿದನು. 18 ಇದಕ್ಕೂ ಬಹುಕಾಲದ ಹಿಂದೆ, ಅಬ್ರಹಾಮನು ಅನೇಕ ಬಾವಿಗಳನ್ನು ತೋಡಿಸಿದ್ದನು. ಅಬ್ರಹಾಮನು ಸತ್ತುಹೋದ ಮೇಲೆ, ಫಿಲಿಷ್ಟಿಯರು ಆ ಬಾವಿಗಳಿಗೆ ಮಣ್ಣುಹಾಕಿ ಮುಚ್ಚಿದ್ದರು. ಇಸಾಕನು ಆ ಬಾವಿಗಳನ್ನು ಮತ್ತೆ ತೋಡಿಸಿ, ತನ್ನ ತಂದೆ ಕೊಟ್ಟಿದ್ದ ಹೆಸರುಗಳನ್ನೇ ಅವುಗಳಿಗೆ ಕೊಟ್ಟನು. 19 ಇಸಾಕನ ಸೇವಕರು ಚಿಕ್ಕ ಹೊಳೆಯ ಸಮೀಪದಲ್ಲಿ ಒಂದು ಬಾವಿಯನ್ನು ತೋಡಿದರು. ಆ ಬಾವಿಯಲ್ಲಿ ನೀರಿನ ಸೆಲೆ ಸಿಕ್ಕಿತು. 20 ಆದರೆ ಗೆರಾರಿನ ಕಣಿವೆಯಲ್ಲಿ ಕುರಿಕಾಯುತ್ತಿದ್ದ ಜನರು ಇಸಾಕನ ಸೇವಕರೊಡನೆ ವಾದಮಾಡಿ, “ಈ ನೀರು ನಮ್ಮದು” ಎಂದು ಹೇಳಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಏಸೆಕ್” ಎಂದು ಹೆಸರಿಟ್ಟನು.
21 ಆಮೇಲೆ ಇಸಾಕನ ಸೇವಕರು ಮತ್ತೊಂದು ಬಾವಿಯನ್ನು ತೋಡಿದರು. ಅಲ್ಲಿಯ ಜನರೂ ಆ ಬಾವಿಗಾಗಿ ವಾದಮಾಡಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಸಿಟ್ನಾ” ಎಂದು ಹೆಸರಿಟ್ಟನು.
22 ಇಸಾಕನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ತೋಡಿಸಿದನು. ಆ ಬಾವಿಯ ಕುರಿತು ವಾದಮಾಡಲು ಯಾರೂ ಬರಲಿಲ್ಲ. ಆದ್ದರಿಂದ ಇಸಾಕನು, “ಈಗ ಯೆಹೋವನು ನಮಗೋಸ್ಕರ ಒಂದು ಸ್ಥಳವನ್ನು ತೋರಿಸಿದ್ದಾನೆ. ನಾವು ಈ ಸ್ಥಳದಲ್ಲಿ ಅಭಿವೃದ್ಧಿಯಾಗೋಣ” ಎಂದು ಹೇಳಿ ಆ ಬಾವಿಗೆ “ರೆಹೋಬೋತ್” ಎಂದು ಹೆಸರಿಟ್ಟನು.
23 ಇಸಾಕನು ಆ ಸ್ಥಳದಿಂದ ಬೇರ್ಷೆಬಕ್ಕೆ ಹೋದನು. 24 ಆ ರಾತ್ರಿ ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು. ಭಯಪಡಬೇಡ, ನಾನು ನಿನ್ನ ಸಂಗಡವಿದ್ದೇನೆ. ನಾನು ನಿನ್ನನ್ನು ಆಶೀರ್ವದಿಸುವೆನು. ನಾನು ನಿನ್ನ ಕುಟುಂಬವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಸೇವಕನಾದ ಅಬ್ರಹಾಮನಿಗಾಗಿಯೇ ಇದನ್ನು ಮಾಡುತ್ತೇನೆ” ಎಂದು ಹೇಳಿದನು. 25 ಆದ್ದರಿಂದ ಆ ಸ್ಥಳದಲ್ಲಿ ಇಸಾಕನು ಯಜ್ಞವೇದಿಕೆಯನ್ನು ಕಟ್ಟಿ ಯೆಹೋವನನ್ನು ಆರಾಧಿಸಿದನು. ಇಸಾಕನು ಆ ಸ್ಥಳದಲ್ಲಿ ಪಾಳೆಯಮಾಡಿಕೊಂಡನು; ಅವನ ಸೇವಕರು ಅಲ್ಲಿ ಒಂದು ಬಾವಿಯನ್ನು ತೋಡಿದರು.
26 ಅಬೀಮೆಲೆಕನು ಇಸಾಕನನ್ನು ಕಾಣಲು ಗೆರಾರಿನಿಂದ ಬಂದನು. ಅಬೀಮೆಲೆಕನು ತನ್ನ ಸಲಹೆಗಾರನಾದ ಅಹುಜ್ಜತನನ್ನು ಮತ್ತು ಸೇನಾಪತಿಯಾದ ಫೀಕೋಲನನ್ನು ತನ್ನೊಡನೆ ಕರೆದುಕೊಂಡು ಬಂದಿದ್ದನು.
27 ಇಸಾಕನು, “ನೀನು ನನ್ನನ್ನು ನೋಡಲು ಬಂದದ್ದೇಕೆ? ಮೊದಲು, ನೀನು ನನ್ನೊಡನೆ ಸ್ನೇಹದಿಂದ ಇರಲಿಲ್ಲ. ಅಲ್ಲದೆ ನಿನ್ನ ದೇಶವನ್ನು ಬಿಟ್ಟುಹೋಗುವಂತೆ ನೀನು ನನ್ನನ್ನು ಬಲವಂತ ಮಾಡಿದೆ” ಎಂದು ಹೇಳಿದನು.
28 ಅವರು ಅವನಿಗೆ, “ನಿನ್ನ ಜೊತೆಯಲ್ಲಿ ಯೆಹೋವನು ಇದ್ದಾನೆಂಬುದು ಈಗ ನಮಗೆ ತಿಳಿಯಿತು. ನಾವು ಒಂದು ಒಪ್ಪಂದ ಮಾಡಿಕೊಳ್ಳಬೇಕೆಂಬುದು ನಮ್ಮ ಆಲೋಚನೆ. ನೀನು ನಮಗೆ ಒಂದು ಪ್ರಮಾಣ ಮಾಡಬೇಕಾಗಿದೆ. 29 ನಾವು ನಿನಗೆ ಕೇಡುಮಾಡಲಿಲ್ಲ. ಅದೇ ರೀತಿಯಲ್ಲಿ ಈಗ ನೀನೂ ನಮಗೆ ಕೇಡುಮಾಡುವುದಿಲ್ಲವೆಂದು ಪ್ರಮಾಣಮಾಡಬೇಕು. ನಾವು ನಿನ್ನನ್ನು ದೂರ ಕಳುಹಿಸಿದರೂ ಸಮಾಧಾನದಿಂದ ಕಳುಹಿಸಿಕೊಟ್ಟೆವು. ಯೆಹೋವನು ನಿನ್ನನ್ನು ಆಶೀರ್ವದಿಸಿದ್ದಾನೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಹೇಳಿದರು.
30 ಆದ್ದರಿಂದ ಇಸಾಕನು ಅವರಿಗಾಗಿ ಒಂದು ಔತಣವನ್ನು ಮಾಡಿಸಿದನು. ಅವರೆಲ್ಲರೂ ಸಮೃದ್ಧಿಯಾಗಿ ಊಟಮಾಡಿದರು. 31 ಮರುದಿನ ಮುಂಜಾನೆ, ಅವರು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡು, ಸಮಾಧಾನದಿಂದ ಹೊರಟುಹೋದರು.
32 ಆ ದಿನ, ಇಸಾಕನ ಸೇವಕರು ಬಂದು, ತಾವು ತೋಡಿದ್ದ ಬಾವಿಯ ಬಗ್ಗೆ ಹೇಳುತ್ತಾ, “ಬಾವಿಯಲ್ಲಿ ನಮಗೆ ನೀರಿನ ಸೆಲೆ ಸಿಕ್ಕಿತು” ಎಂದು ಹೇಳಿದರು. 33 ಆದ್ದರಿಂದ ಇಸಾಕನು ಆ ಬಾವಿಗೆ ಷಿಬಾ ಎಂದು ಹೆಸರಿಟ್ಟನು. ಇಂದಿಗೂ ಆ ನಗರಕ್ಕೆ ಬೇರ್ಷೆಬ ಎಂದು ಕರೆಯುತ್ತಾರೆ.
ಏಸಾವನ ಹೆಂಡತಿಯರು
34 ಏಸಾವನಿಗೆ ನಲವತ್ತು ವರ್ಷಗಳಾಗಿದ್ದಾಗ ಅವನು ಹಿತ್ತಿಯರ ಇಬ್ಬರು ಸ್ತ್ರೀಯರನ್ನು ಮದುವೆ ಮಾಡಿಕೊಂಡನು. ಒಬ್ಬಳು ಬೇರಿಯನ ಮಗಳಾದ ಯೆಹೂದೀತಳು, ಮತ್ತೊಬ್ಬಳು ಏಲೋನನ ಮಗಳಾದ ಬಾಸೆಮತಳು. 35 ಈ ಮದುವೆಗಳಿಂದ ಇಸಾಕ ಮತ್ತು ರೆಬೆಕ್ಕಳಿಗೆ ತುಂಬ ದುಃಖವಾಯಿತು.
ಹತ್ತು ಮಂದಿ ಕನ್ನಿಕೆಯರನ್ನು ಕುರಿತ ಸಾಮ್ಯ
25 “ಆ ದಿನಗಳಲ್ಲಿ ಪರಲೋಕರಾಜ್ಯವು ಹೇಗಿರುತ್ತದೆ ಎನ್ನುವುದಕ್ಕೆ ಈ ಸಾಮ್ಯವು ಉದಾಹರಣೆಯಾಗಿದೆ. ಹತ್ತು ಮಂದಿ ಕನ್ನಿಕೆಯರು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳಲು ಹೊರಟರು. 2 ಅವರಲ್ಲಿ ಐದು ಮಂದಿ ಬುದ್ಧಿಹೀನರಾಗಿದ್ದರು. ಇನ್ನುಳಿದ ಐದು ಮಂದಿ ಬುದ್ಧಿವಂತೆಯರಾಗಿದ್ದರು. 3 ಬುದ್ಧಿಹೀನ ಕನ್ನಿಕೆಯರು ತಮ್ಮ ದೀಪಾರತಿಗಳನ್ನು ತಂದರೇ ಹೊರತು ಬೇಕಾಗುವಷ್ಟು ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. 4 ಬುದ್ಧಿವಂತೆಯರು ತಮ್ಮ ದೀಪಗಳೊಂದಿಗೆ ಬೇಕಾದಷ್ಟು ಎಣ್ಣೆಯನ್ನೂ ತೆಗೆದುಕೊಂಡರು. 5 ಮದುಮಗನ ಆಗಮನ ತಡವಾಯಿತು. ಅವರೆಲ್ಲರೂ ಆಯಾಸದಿಂದ ತೂಕಡಿಸುತ್ತಾ ನಿದ್ರೆಹೋದರು.
6 “ಮಧ್ಯರಾತ್ರಿಯಲ್ಲಿ, ‘ಮದುಮಗನು ಬರುತ್ತಿದ್ದಾನೆ! ಬನ್ನಿರಿ, ಆತನನ್ನು ಸಂಧಿಸಿರಿ!’ ಎಂದು ಯಾರೋ ಒಬ್ಬನು ಪ್ರಕಟಿಸಿದನು.
7 “ಆಗ ಕನ್ನಿಕೆಯರೆಲ್ಲ ಎಚ್ಚರಗೊಂಡು ತಮ್ಮ ದೀಪಾರತಿಗಳನ್ನು ಸಿದ್ಧಮಾಡಿಕೊಂಡರು. 8 ಬುದ್ಧಿಹೀನ ಕನ್ನಿಕೆಯರು ಬುದ್ಧಿವಂತ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿ. ನಮ್ಮ ದೀಪಾರತಿಗಳಲ್ಲಿದ್ದ ಎಣ್ಣೆಯೆಲ್ಲಾ ಮುಗಿಯಿತು’ ಎಂದರು.
9 “ಬುದ್ಧಿವಂತೆಯರು, ‘ಇಲ್ಲ! ನಮ್ಮಲ್ಲಿರುವ ಎಣ್ಣೆ ನಮಗೇ ಸಾಕಾಗದಿರಬಹುದು. ಅಂಗಡಿಗೆ ಹೋಗಿ ಕೊಂಡುಕೊಳ್ಳಿರಿ’ ಎಂದು ಉತ್ತರಕೊಟ್ಟರು.
10 “ಆದ್ದರಿಂದ ಐದು ಮಂದಿ ಬುದ್ಧಿಹೀನ ಕನ್ನಿಕೆಯರು ಎಣ್ಣೆ ಕೊಂಡುಕೊಳ್ಳುವುದಕ್ಕೆ ಹೋದರು. ಅವರು ಹೋಗುತ್ತಿರುವಾಗ, ಮದುಮಗನು ಬಂದನು. ಸಿದ್ಧವಾಗಿದ್ದ ಕನ್ನಿಕೆಯರು ಮದುಮಗನ ಜೊತೆಯಲ್ಲಿ ಔತಣಕ್ಕೆ ಹೋದರು. ನಂತರ ಬಾಗಿಲು ಮುಚ್ಚಲಾಯಿತು.
11 “ತರುವಾಯ ಬುದ್ಧಿಹೀನ ಕನ್ನಿಕೆಯರು ಬಂದು, ‘ಸ್ವಾಮೀ, ಸ್ವಾಮೀ, ಒಳಗೆ ಬರಲು ನಮಗೆ ಬಾಗಿಲು ತೆರೆ’ ಅಂದರು.
12 “ಆದರೆ ಮದುಮಗನು, ‘ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನೀವು ಯಾರೋ ನನಗೆ ಗೊತ್ತಿಲ್ಲ’ ಎಂದು ಉತ್ತರಕೊಟ್ಟನು.
13 “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ಮನುಷ್ಯಕುಮಾರನು ಬರುವ ದಿನವಾಗಲಿ ಸಮಯವಾಗಲಿ ನಿಮಗೆ ಗೊತ್ತಿಲ್ಲ.
ಮೂವರು ಸೇವಕರನ್ನು ಕುರಿತ ಸಾಮ್ಯ
(ಲೂಕ 19:11-27)
14 “ಪರಲೋಕರಾಜ್ಯವು, ತನ್ನ ಮನೆಯನ್ನು ಬಿಟ್ಟು ಬೇರೆ ಸ್ಥಳವನ್ನು ಸಂದರ್ಶಿಸುವುದಕ್ಕೆ ಪ್ರಯಾಣ ಮಾಡಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆ ಮನುಷ್ಯನು ತಾನು ಹೊರಡುವುದಕ್ಕೆ ಮುಂಚೆ ತನ್ನ ಸೇವಕರೊಂದಿಗೆ ಮಾತನಾಡಿ, ತನ್ನ ಆಸ್ತಿಯನ್ನು ನೋಡಿಕೊಳ್ಳಲು ಅವರಿಗೆ ಹೇಳಿದನು. 15 ಅವನು ಆ ಸೇವಕರ ಸಾಮರ್ಥ್ಯಕ್ಕನುಸಾರವಾಗಿ ಎಷ್ಟೆಷ್ಟು ಜವಾಬ್ದಾರಿಕೆಯನ್ನು ಕೊಡಬೇಕೆಂಬುದನ್ನು ನಿರ್ಧರಿಸಿದನು. ಅವನು ಒಬ್ಬ ಸೇವಕನಿಗೆ ಐದು ತಲಾಂತು[a] ಮತ್ತೊಬ್ಬನಿಗೆ ಎರಡು ತಲಾಂತು ಕೊಟ್ಟನು. ಮೂರನೇ ಸೇವಕನಿಗೆ ಒಂದು ತಲಾಂತು ಕೊಟ್ಟನು. ಬಳಿಕ ಅವನು ಬೇರೆ ಸ್ಥಳಕ್ಕೆ ಹೊರಟುಹೋದನು. 16 ಐದು ತಲಾಂತು ತೆಗೆದುಕೊಂಡ ಸೇವಕನು ತಕ್ಷಣವೇ ಹೋಗಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಸಂಪಾದಿಸಿದನು. 17 ಎರಡು ತಲಾಂತು ಹೊಂದಿದ ಸೇವಕನೂ ಅದೇ ರೀತಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಎರಡು ತಲಾಂತು ಸಂಪಾದಿಸಿದನು. 18 ಆದರೆ ಒಂದು ತಲಾಂತು ಹೊಂದಿದವನು ಹೊರಟುಹೋಗಿ ನೆಲದಲ್ಲಿ ಒಂದು ಗುಂಡಿ ತೋಡಿ ಆ ಹಣವನ್ನು ಅಡಗಿಸಿಟ್ಟನು.
19 “ಬಹುಕಾಲದ ನಂತರ ಯಜಮಾನನು ಮನೆಗೆ ಬಂದನು. ತಾನು ಕೊಟ್ಟಿದ್ದ ಹಣದ ಕುರಿತಾಗಿ ಅವನು ಸೇವಕರನ್ನು ವಿಚಾರಿಸಿ ಲೆಕ್ಕ ಕೇಳಿದನು. 20 ಐದು ತಲಾಂತು ಪಡೆದ ಸೇವಕನು ಇನ್ನೂ ಐದು ತಲಾಂತನ್ನು ತನ್ನ ಯಜಮಾನನ ಬಳಿಗೆ ತಂದು, ‘ಧಣಿಯೇ, ನೀನು ನನ್ನಲ್ಲಿ ಭರವಸೆಯಿಟ್ಟು ಐದು ತಲಾಂತನ್ನು ಕೊಟ್ಟೆ. ನಾನು ಅದನ್ನು ವಿನಿಯೋಗಿಸಿ ಇನ್ನೂ ಐದು ತಲಾಂತು ಸಂಪಾದಿಸಿದ್ದೇನೆ’ ಎಂದನು.
21 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.
22 “ಆಮೇಲೆ ಎರಡು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ನನಗೆ ಎರಡು ತಲಾಂತು ಕೊಟ್ಟೆ. ನಾನು ಆ ಹಣವನ್ನು ಉಪಯೋಗಿಸಿ ಇನ್ನೂ ಎರಡು ತಲಾಂತು ಸಂಪಾದಿಸಿರುವೆ’ ಅಂದನು.
23 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ನೀನು ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು, ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.
24 “ಬಳಿಕ ಒಂದು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ಬಹಳ ಕಠಿಣ ಮನುಷ್ಯನು ಎಂದು ನಾನು ಬಲ್ಲೆ. ನೀನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನು. 25 ಆದ್ದರಿಂದ ನಾನು ಹೆದರಿಕೊಂಡು ನಿನ್ನ ಹಣವನ್ನು ಭೂಮಿಯಲ್ಲಿ ಅಡಗಿಸಿಟ್ಟೆನು. ನೀನು ನನಗೆ ಕೊಟ್ಟ ಹಣ ಇಲ್ಲಿದೆ, ತೆಗೆದುಕೊ’ ಅಂದನು.
26 “ಅದಕ್ಕೆ ಯಜಮಾನನು, ‘ನೀನು ಸೋಮಾರಿಯಾದ ಕೆಟ್ಟ ಸೇವಕ! ನಾನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನೆಂದು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನೆಂದು ನಿನಗೆ ಗೊತ್ತಿತ್ತೇ? 27 ಹಾಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ಆಗ ನಾನು ಅಸಲಿನೊಡನೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದೆನು’ ಎಂದು ಉತ್ತರಕೊಟ್ಟನು.
28 “ಬಳಿಕ ಯಜಮಾನನು ತನ್ನ ಬೇರೆ ಸೇವಕರಿಗೆ, ‘ಅವನ ಒಂದು ತಲಾಂತನ್ನು ತೆಗೆದುಕೊಂಡು ಐದು ತಲಾಂತು ಹೊಂದಿರುವ ಸೇವಕನಿಗೆ ಕೊಡಿರಿ. 29 ತನ್ನಲ್ಲಿರುವುದನ್ನು ವಿನಿಯೋಗಿಸುವ ಪ್ರತಿಯೊಬ್ಬನಿಗೂ ಹೆಚ್ಚಾಗಿ ಕೊಡಲ್ಪಡುವುದು, ಆದರೆ ತನ್ನಲ್ಲಿರುವುದನ್ನು ವಿನಿಯೋಗಿಸದಿರುವ ವ್ಯಕ್ತಿಯಿಂದ ಇದ್ದದ್ದನ್ನೂ ಕಸಿದುಕೊಳ್ಳಲಾಗುವುದು’ ಎಂದು ಹೇಳಿದನು. 30 ಬಳಿಕ ಆ ಯಜಮಾನನು, ‘ಕೆಲಸಕ್ಕೆ ಬಾರದ ಆ ಸೇವಕನನ್ನು, ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವ ಕಗ್ಗತ್ತಲೆಯ ಸ್ಥಳಕ್ಕೆ ದಬ್ಬಿರಿ’ ಎಂದು ಆಜ್ಞಾಪಿಸಿದನು.
ಸರ್ವರಿಗೂ ಮನುಷ್ಯಕುಮಾರನು ನೀಡುವ ತೀರ್ಪು
31 “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಮತ್ತೆ ಬರುವಾಗ ರಾಜನಾಗಿ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ. 32 ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು; 33 ಮನುಷ್ಯಕುಮಾರನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
34 “ಆಗ ರಾಜನು ತನ್ನ ಬಲಗಡೆಯಲ್ಲಿರುವ ಜನರಿಗೆ, ‘ಬನ್ನಿರಿ, ನನ್ನ ತಂದೆ ನಿಮಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬನ್ನಿರಿ, ದೇವರು ನಿಮಗೆ ವಾಗ್ದಾನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿರಿ. ಆ ರಾಜ್ಯವು ಲೋಕ ಉಂಟಾದಂದಿನಿಂದ ನಿಮಗಾಗಿ ಸಿದ್ಧಮಾಡಲ್ಪಟ್ಟಿದೆ. 35 ನೀವು ಈ ರಾಜ್ಯವನ್ನು ಪಡೆದುಕೊಳ್ಳಿರಿ. ಏಕೆಂದರೆ ನಾನು ಹಸಿದಿದ್ದೆನು. ನೀವು ನನಗೆ ಊಟ ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಒಬ್ಬಂಟಿಗನಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಂಡಿರಿ. 36 ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು, ನೀವು ನನಗೆ ಆರೈಕೆ ಮಾಡಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುತ್ತಾನೆ.
37 “ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು? 38 ನೀನು ಒಬ್ಬಂಟಿಗನಾಗಿ ಮನೆಯಿಂದ ದೂರವಾಗಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳೊಳಗೆ ಸೇರಿಸಿಕೊಂಡೆವು? ನಿನಗೆ ಬಟ್ಟೆಯಿಲ್ಲದಿರುವುದನ್ನು ನೋಡಿ ಯಾವಾಗ ಉಡುವುದಕ್ಕೆ ಕೊಟ್ಟೆವು? 39 ನೀನು ಕಾಯಿಲೆ ಬಿದ್ದಿದ್ದನ್ನು ಅಥವಾ ಸೆರೆಯಲ್ಲಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ಆರೈಕೆ ಮಾಡಿದೆವು?’ ಎಂದು ಹೇಳುವರು.
40 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಏನೇನು ಮಾಡುತ್ತೀರೋ ಅದೆಲ್ಲವನ್ನು ನನಗೂ ಮಾಡಿದಂತಾಯಿತು’ ಎಂದು ಉತ್ತರಕೊಡುವನು.
41 “ಆಮೇಲೆ ರಾಜನು ತನ್ನ ಎಡಗಡೆಯಿದ್ದ ಜನರಿಗೆ, ‘ನನ್ನಿಂದ ತೊಲಗಿಹೋಗಿರಿ, ನಿಮಗೆ ಶಿಕ್ಷೆಯಾಗಬೇಕೆಂದು ದೇವರು ತೀರ್ಮಾನಿಸಿದ್ದಾನೆ. ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. 42 ಏಕೆಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ. 43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.
44 “ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.
45 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡದಂತಾಯಿತು’ ಎಂದು ಉತ್ತರಕೊಡುವನು.
46 “ಆಗ ಕೆಟ್ಟಜನರು ಅಲ್ಲಿಂದ ಹೊರಟುಹೋಗುವರು. ಅವರಿಗೆ ನಿತ್ಯದಂಡನೆಯಾಗುವುದು. ಒಳ್ಳೆಯ ಜನರಾದರೋ ನಿತ್ಯಜೀವವನ್ನು ಹೊಂದುವರು.”
ಎಸ್ತೇರಳನ್ನು ರಾಣಿಯಾಗಿ ಮಾಡಿದ್ದು
2 ಸ್ವಲ್ಪಕಾಲವಾದನಂತರ ಅರಸನ ಕೋಪವು ಇಳಿಯಿತು. ಆಗ ವಷ್ಟಿಯನ್ನೂ ಆಕೆ ಮಾಡಿದ್ದನ್ನೂ ಅವಳಿಂದಾಗಿ ತಾನು ಹೊರಡಿಸಿದ ರಾಜಾಜ್ಞೆಯನ್ನೂ ನೆನಪಿಗೆ ತಂದುಕೊಂಡನು. 2 ಆಗ ರಾಜನ ಸನ್ನಿಧಿಸೇವಕರು ಈ ಸಲಹೆಕೊಟ್ಟರು: “ರಾಜನಿಗೋಸ್ಕರ ರೂಪವತಿಯರಾದ ಕನ್ಯೆಯರನ್ನು ಹುಡುಕಿರಿ. 3 ರಾಜನು ತನ್ನ ಸಾಮ್ರಾಜ್ಯದ ಪ್ರತಿಯೊಂದು ಪ್ರಾಂತ್ಯದಲ್ಲೂ ನಾಯಕರುಗಳನ್ನು ಆರಿಸಲಿ. ಆ ನಾಯಕರು ಅತ್ಯಂತ ರೂಪವತಿಯರಾದ ಕನ್ನಿಕೆಯರನ್ನು ಶೂಷನ್ ರಾಜಧಾನಿಗೆ ಕರೆದುಕೊಂಡು ಬಂದು ಅವರನ್ನು ರಾಜನ ಸ್ತ್ರೀಯರೊಡನೆ ಇರಿಸಲಿ. ಆ ಸ್ತ್ರೀಯರು ಮೇಲ್ವಿಚಾರಕನಾದ ರಾಜನ ಕಂಚುಕಿ ಹೇಗೈಯ ಪರಿಪಾಲನೆಯಲ್ಲಿರಲಿ. ಬಳಿಕ ಅವರಿಗೆ ಸೌಂದರ್ಯವರ್ಧಕ ಚಿಕಿತ್ಸೆ ಕೊಡಲಿ. 4 ಅನಂತರ ರಾಜನಿಗೆ ಇಷ್ಟವಾದ ಕನ್ನಿಕೆಯನ್ನು ವಷ್ಟಿಯ ಬದಲಾಗಿ ರಾಣಿಯನ್ನಾಗಿ ಮಾಡಲಿ” ಎಂದು ಹೇಳಿದರು. ಅವರ ಸಲಹೆ ರಾಜನಿಗೆ ಸರಿಯೆನಿಸಿದ್ದರಿಂದ ಅವನು ಅದಕ್ಕೆ ಒಪ್ಪಿಕೊಂಡನು.
5 ಆ ಸಮಯದಲ್ಲಿ ಬೆನ್ಯಾಮೀನ್ ಕುಲಕ್ಕೆ ಸೇರಿದ ಮೊರ್ದೆಕೈ ಎಂಬ ಹೆಸರಿನ ಒಬ್ಬ ಯೊಹೂದ್ಯನಿದ್ದನು. ಇವನು ಯಾಯೀರನ ಮಗನೂ ಕೀಷನ ಮೊಮ್ಮಗನೂ ಆಗಿದ್ದು ರಾಜಧಾನಿಯಾದ ಶೂಷನ್‌ನಲ್ಲಿಯೇ ವಾಸಮಾಡುತ್ತಿದ್ದನು. 6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಮೊರ್ದೆಕೈಯನ್ನು ಸೆರೆಹಿಡಿದು ತಂದಿದ್ದನು. ಯೆಹೂದದ ಅರಸನಾದ ಯೆಹೋಯಾಕೀನನೊಂದಿಗೆ ಸೆರೆಒಯ್ಯಲ್ಪಟ್ಟ ಗುಂಪಿನೊಂದಿಗೆ ಇವನೂ ಇದ್ದನು. 7 ಇವನ ಬಳಿಯಲ್ಲಿ ಇವನ ಚಿಕ್ಕಪ್ಪನ ಮಗಳಾದ ಹದೆಸ್ಸಾ ಎಂಬ ಕನ್ನಿಕೆ ಇದ್ದಳು. ಈಕೆ ತಂದೆಯೂ ತಾಯಿಯೂ ಇಲ್ಲದ ತಬ್ಬಲಿಯಾಗಿದ್ದಳು. ಈಕೆಯ ತಂದೆತಾಯಿಗಳು ಸತ್ತಂದಿನಿಂದ ಈಕೆಯನ್ನು ಮೊರ್ದೆಕೈಯು ತನ್ನ ಮಗಳನ್ನಾಗಿ ಸ್ವೀಕರಿಸಿ ಸಾಕುತ್ತಿದ್ದನು. ಹದೆಸ್ಸಾಳನ್ನು ಎಸ್ತೇರ್ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ತುಂಬಾ ಸೌಂದರ್ಯವತಿಯಾಗಿದ್ದ ಈಕೆ ಆಕರ್ಷಕಳಾಗಿದ್ದಳು.
8 ರಾಜಾಜ್ಞೆಯು ರಾಜ್ಯದ ಎಲ್ಲಾ ಭಾಗಗಳಲ್ಲಿ ಪ್ರಕಟಿಸಲ್ಪಟ್ಟಾಗ ಅನೇಕ ಕನ್ಯೆಯರನ್ನು ರಾಜಧಾನಿಯಾದ ಶೂಷನ್‌ಗೆ ಕರೆದುಕೊಂಡು ಬಂದರು. ಇವರನ್ನೆಲ್ಲಾ ಹೇಗೈಯ ವಶಕ್ಕೆಕೊಟ್ಟರು. ಆ ಕನ್ಯೆಯರಲ್ಲಿ ಎಸ್ತೇರಳು ಸಹ ಒಬ್ಬಳಾಗಿದ್ದಳು. ಎಸ್ತೇರಳನ್ನೂ ಅರಮನೆಗೆ ಕರೆದುಕೊಂಡು ಹೋಗಿ ಹೇಗೈಯ ವಶಕ್ಕೆ ಕೊಟ್ಟರು. 9 ಹೇಗೈ ಎಸ್ತೇರಳನ್ನು ಇಷ್ಟಪಟ್ಟನು. ಆಕೆ ಅವನ ಮೆಚ್ಚಿಗೆಗೆ ಪಾತ್ರಳಾದಳು. ಆಕೆಗೆ ಅರಮನೆಯಿಂದ ಏಳು ಮಂದಿ ಸೇವಕಿಯರನ್ನು ಕೊಟ್ಟು ಆಕೆಯ ಊಟೋಪಚಾರಗಳಲ್ಲಿ ಅಥವಾ ಸೌಂದರ್ಯ ಅಭಿವೃದ್ಧಿಗಾಗಿ ಲೇಪನ ವಸ್ತುಗಳ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದನು. ಇದಾದ ಬಳಿಕ ಎಸ್ತೇರ್ ಮತ್ತು ಆಕೆಯ ಸೇವಕಿಯರನ್ನು ಅಂತಃಪುರದ ಉತ್ತಮ ಭಾಗದಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದನು. 10 ತಾನು ಯೆಹೂದ್ಯಳು ಎಂದು ಎಸ್ತೇರಳು ಯಾರಿಗೂ ಹೇಳಲಿಲ್ಲ. ತನ್ನ ವಂಶ, ಮನೆತನದ ವಿಚಾರವಾಗಿಯೂ ಯಾರಿಗೂ ತಿಳಿಸಲಿಲ್ಲ. ಯಾಕೆಂದರೆ ಮೊರ್ದೆಕೈ ಆಕೆಗೆ ತನ್ನ ವಿಷಯವಾಗಿ ಯಾರಿಗೂ ಹೇಳಬಾರದೆಂದೂ ಕಟ್ಟಪ್ಪಣೆ ಮಾಡಿದ್ದನು. 11 ಪ್ರತಿದಿನ ಮೊರ್ದೆಕೈ ಅಂತಃಪುರದ ಎದುರಿನಿಂದ ಹೋಗುತ್ತಾ ಬರುತ್ತಾ ಎಸ್ತೇರಳು ಹೇಗಿದ್ದಾಳೆಂದೂ ಅವಳಿಗೆ ಮುಂದೆ ಸಂಭವಿಸುವುದನ್ನೂ ವಿಚಾರಿಸುತ್ತಿದ್ದನು.
12 ಸರದಿಯ ಪ್ರಕಾರ ಒಬ್ಬ ಕನ್ಯೆಯನ್ನು ಅರಸನ ಬಳಿಗೆ ಕರೆದೊಯ್ಯುವ ಮೊದಲು ಆಕೆಯು ಹನ್ನೆರಡು ತಿಂಗಳು ಕಾಲ ಸೌಂದರ್ಯೋಪಾಸನದ ವಿಧಿಕ್ರಮಗಳನ್ನೆಲ್ಲಾ ನೆರವೇರಿಸಿರಬೇಕು. ಆರುತಿಂಗಳ ಕಾಲ ರಕ್ತಬೋಳದ ಎಣ್ಣೆಯ ಅಭ್ಯಂಜನದಿಂದಲೂ ನಂತರದ ಆರುತಿಂಗಳು ಕಾಂತಿವರ್ಧಕ ಲೇಪನ, ಸುಗಂಧವಸ್ತುಗಳಿಂದ ಆಕೆಯು ಸೌಂದರ್ಯದ ಆರೈಕೆ ಮಾಡಿಸಿಕೊಳ್ಳಬೇಕಾಗಿತ್ತು. 13 ರಾಜನ ಬಳಿಗೆ ಹೋಗುವಾಗ ಆಕೆಗೆ ಏನುಬೇಕೋ ಅದನ್ನು ಅಂತಃಪುರದಿಂದ ಕೊಡಲ್ಪಡುತ್ತಿತ್ತು. 14 ಮುಸ್ಸಂಜೆಯ ಸಮಯದಲ್ಲಿ ಕನ್ಯೆಯು ರಾಜನಿವಾಸವನ್ನು ಪ್ರವೇಶಿಸುವಳು. ಮರುದಿವಸ ಮುಂಜಾನೆ ಆಕೆಯು ಅಲ್ಲಿಂದ ಹಿಂತಿರುಗಿ ರಾಜನ ಉಪಪತ್ನಿಯರು ಉಳಿದುಕೊಳ್ಳುವ ಅಂತಃಪುರದ ಇನ್ನೊಂದು ಭಾಗದಲ್ಲಿ ನೆಲೆಸುವಳು. ಅಲ್ಲಿ ಆಕೆ ರಾಜನ ಕಂಚುಕಿ ಶವಷ್ಗಜನ ಮೇಲ್ವಿಚಾರಣೆಯಲ್ಲಿರುವಳು. ಶವಷ್ಗಜನು ರಾಜನ ಉಪಪತ್ನಿಗಳ ಮೇಲ್ವಿಚಾರಕನಾಗಿದ್ದನು. ರಾಜನು ಆಕೆಯ ಹೆಸರೆತ್ತಿ ಕರೆದಾಗ ಮಾತ್ರವೇ ಆಕೆಯು ತಿರುಗಿ ರಾಜನ ಬಳಿಗೆ ಹೋಗುವಳು. ಕರೆಯದಿದ್ದಲ್ಲಿ ಆಕೆಯು ಅಲ್ಲಿಯೇ ಇರುವಳು.
15 ರಾಜನ ಬಳಿಗೆ ಹೋಗಲು ಎಸ್ತೇರಳ ಸರದಿ ಬಂದಾಗ ಆಕೆ ಏನನ್ನೂ ಕೇಳಿಕೊಳ್ಳಲಿಲ್ಲ. ತಾನು ಏನನ್ನು ತೆಗೆದುಕೊಂಡು ಹೋಗಬೇಕೆಂದು ರಾಜನ ಸ್ತ್ರೀಯರ ಮೇಲ್ವಿಚಾರಕನಾಗಿದ್ದ ರಾಜಕಂಚುಕಿ ಹೇಗೈನನ್ನು ಮಾತ್ರ ಕೇಳಿದಳು. (ಎಸ್ತೇರಳು ಮೊರ್ದೆಕೈಯ ಚಿಕ್ಕಪ್ಪ ಅಭೀಹೈಲನ ಮಗಳೂ ತನ್ನ ಸಾಕು ಮಗಳೂ ಆಗಿದ್ದಳು.) ಎಸ್ತೇರಳನ್ನು ನೋಡಿದವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು. 16 ಹೀಗೆ ಹತ್ತನೇ ತಿಂಗಳಾದ ಟೆಬೇತ್ ಮಾಸದಲ್ಲಿ ರಾಜನ ಏಳನೇ ವರ್ಷದಲ್ಲಿ ಎಸ್ತೇರಳು ಅಹಷ್ವೇರೋಷನ ರಾಜನಿವಾಸಕ್ಕೆ ಕರೆದೊಯ್ಯಲ್ಪಟ್ಟಳು.
17 ಎಲ್ಲಾ ಕನ್ಯೆಯರಿಗಿಂತ ರಾಜನು ಎಸ್ತೇರಳನ್ನು ಬಹಳವಾಗಿ ಪ್ರೀತಿಸಿದನು. ಆಕೆ ಅವನ ಮೆಚ್ಚಿಕೆಗೆ ಪಾತ್ರಳಾದಳು. ಎಲ್ಲಾ ಕನ್ಯೆಯರಲ್ಲಿ ಅವಳನ್ನು ಮಾತ್ರ ರಾಜನು ಹೆಚ್ಚಾಗಿ ಇಷ್ಟಪಟ್ಟನು. ಅರಸನಾದ ಅಹಷ್ವೇರೋಷನು ರಾಜ ಕಿರೀಟವನ್ನು ಆಕೆಯ ತಲೆಯ ಮೇಲಿರಿಸಿ ವಷ್ಟಿಯ ಬದಲಾಗಿ ಎಸ್ತೇರಳನ್ನು ತನ್ನ ರಾಣಿಯನ್ನಾಗಿ ಮಾಡಿದನು. 18 ಎಸ್ತೇರಳಿಗೆ ರಾಜನು ಒಂದು ದೊಡ್ಡ ಔತಣವನ್ನೇರ್ಪಡಿಸಿ ಅದಕ್ಕೆ ರಾಜ್ಯದ ಮುಖ್ಯ ಅಧಿಕಾರಿಗಳನ್ನೂ ನಾಯಕರನ್ನೂ ಆಮಂತ್ರಿಸಿ, ರಾಜ್ಯದಲ್ಲೆಲ್ಲಾ ಒಂದು ದಿವಸದ ರಜೆಯನ್ನು ಘೋಷಿಸಿದನು; ಮತ್ತು ಜನರಿಗೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.
ರಾಜಹತ್ಯೆಯ ಒಳಸಂಚನ್ನು ಮೊರ್ದೆಕೈ ಬಯಲುಪಡಿಸಿದ್ದು
19 ಕನ್ಯೆಯರು ಎರಡನೆ ಸಲ ಸಭೆ ಸೇರಿದ್ದಾಗ ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು. 20 ಮೊರ್ದೆಕೈ ಎಸ್ತೇರಳಿಗೆ ಹೇಳಿದ ಮೇರೆಗೆ ಆಕೆ ತನ್ನ ಪೂರ್ವಿಕರ ದೇಶದ ಬಗ್ಗೆಯಾಗಲಿ ತನ್ನ ಕುಟುಂಬದ ಹಿನ್ನಲೆಯ ಬಗ್ಗೆಯಾಗಲಿ ಯಾರಿಗೂ ಹೇಳಲಿಲ್ಲ. ಹಿಂದೆ ಆಕೆ ಹೇಗೆ ಮೊರ್ದೆಕೈ ಹೇಳಿದ ಪ್ರಕಾರ ನಡೆದುಕೊಳ್ಳುತ್ತಿದ್ದಳೋ ಹಾಗೆಯೇ ಈಗಲೂ ನಡೆದುಕೊಳ್ಳುತ್ತಿದ್ದಳು.
21 ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿ ಕುಳಿತುಕೊಂಡಿದ್ದ ಸಮಯದಲ್ಲಿ ಒಂದು ವಿಷಯ ನಡೆಯಿತು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ಅರಸನ ಮೇಲೆ ಕೋಪಗೊಂಡು ಅವನನ್ನು ಕೊಲ್ಲಲು ಒಳಸಂಚು ಮಾಡುತ್ತಿದ್ದರು. 22 ಮೊರ್ದೆಕೈಗೆ ಈ ವಿಷಯ ಗೊತ್ತಾದಾಗ ಅವನು ಅದನ್ನು ಎಸ್ತೇರಳಿಗೆ ತಿಳಿಸಿದನು. ಎಸ್ತೇರ್ ರಾಣಿಯು ಇದನ್ನು ಕೊಡಲೇ ಅರಸನಿಗೆ ತಿಳಿಸಿದಳು. ಅಷ್ಟೇ ಅಲ್ಲ, ಮೊರ್ದೆಕೈ ಎಂಬವನು ಈ ಒಳಸಂಚನ್ನು ಕಂಡುಹಿಡಿದು ತನಗೆ ತಿಳಿಸಿದನು ಎಂಬದಾಗಿಯೂ ಅರಸನಿಗೆ ವರದಿ ಮಾಡಿದಳು. 23 ಕೂಡಲೇ ವಿಚಾರಣೆ ನಡೆಸಿದಾಗ ಮೊರ್ದೆಕೈಯು ಹೇಳಿದ ವಿಷಯವು ಸತ್ಯ ಎಂದು ಗೊತ್ತಾಯಿತು. ಆ ಎರಡು ದ್ವಾರಪಾಲಕರನ್ನು ಹಿಡಿದು ಗಲ್ಲಿಗೇರಿಸಿದರು. ಈ ಎಲ್ಲಾ ಸಮಾಚಾರವನ್ನು ರಾಜನ ಬಳಿಯಲ್ಲಿರುವ ರಾಜಕಾಲ ವೃತ್ತಾಂತ ಪುಸ್ತಕದಲ್ಲಿ ಬರೆಯಲ್ಪಟ್ಟವು.
ಸೀಸರನನ್ನು ಕಾಣಲು ಪೌಲನು ಮಾಡಿದ ಮನವಿ
25 ಫೆಸ್ತನು ರಾಜ್ಯಪಾಲನಾಗಿ ಮೂರು ದಿನಗಳಾದ ಮೇಲೆ ಸೆಜರೇಯದಿಂದ ಜೆರುಸಲೇಮಿಗೆ ಹೋದನು. 2 ಮಹಾಯಾಜಕರು ಮತ್ತು ಪ್ರಮುಖ ಯೆಹೂದ್ಯ ನಾಯಕರು ಫೆಸ್ತನ ಎದುರಿನಲ್ಲಿ ಪೌಲನಿಗೆ ವಿರೋಧವಾಗಿ ದೋಷಾರೋಪಣೆಗಳನ್ನು ಹೇಳಿದರು. 3 ಅಲ್ಲದೆ ಪೌಲನನ್ನು ಜೆರುಸಲೇಮಿಗೆ ಮರಳಿ ಕಳುಹಿಸಿಕೊಡಬೇಕೆಂದು ಅವರು ಫೆಸ್ತನನ್ನು ಕೇಳಿಕೊಂಡರು. ಅವರು ಪೌಲನನ್ನು ಮಾರ್ಗದಲ್ಲೇ ಕೊಲ್ಲಬೇಕೆಂಬ ಯೋಜನೆ ಮಾಡಿಕೊಂಡಿದ್ದರು. 4 ಆದರೆ ಫೆಸ್ತನು, “ಇಲ್ಲ! ಪೌಲನನ್ನು ಸೆಜರೇಯದಲ್ಲೇ ಇರಿಸಲಾಗುವುದು. ನಾನೇ ಅಲ್ಲಿಗೆ ಬೇಗ ಹೋಗಲಿದ್ದೇನೆ. 5 ನಿಮ್ಮ ನಾಯಕರಲ್ಲಿ ಕೆಲವರು ನನ್ನೊಂದಿಗೆ ಬರಲಿ. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ ಅವನ ಮೇಲೆ ಸೆಜರೇಯದಲ್ಲೇ ಅವರು ದೋಷಾರೋಪಣೆ ಮಾಡಲಿ” ಎಂದು ಉತ್ತರಕೊಟ್ಟನು.
6 ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು. 7 ಪೌಲನು ನ್ಯಾಯಾಲಯದೊಳಗೆ ಬಂದನು. ಜೆರುಸಲೇಮಿನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತುಕೊಂಡು ಅವನ ಮೇಲೆ ಅನೇಕ ದೋಷಾರೋಪಗಳನ್ನು ಮಾಡಿದರು. ಆದರೆ ಅವುಗಳಲ್ಲಿ ಯಾವುದಕ್ಕೂ ಆಧಾರವಿರಲಿಲ್ಲ. 8 ಪೌಲನು ಪ್ರತಿವಾದ ಮಾಡುತ್ತಾ, “ನಾನು ಯೆಹೂದ್ಯರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಲಿ ದೇವಾಲಯಕ್ಕೆ ವಿರುದ್ಧವಾಗಲಿ ಸೀಸರನಿಗೆ ವಿರುದ್ಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ” ಎಂದು ಹೇಳಿದನು.
9 ಆದರೆ ಫೆಸ್ತನು ಯೆಹೂದ್ಯರ ಮೆಚ್ಚಿಕೆ ಗಳಿಸಿಕೊಳ್ಳಬೇಕೆಂದಿದ್ದನು. ಆದ್ದರಿಂದ ಅವನು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಯಸುವೆಯಾ? ಈ ದೋಷಾರೋಪಣೆಗಳ ಕುರಿತು ನಾನು ಅಲ್ಲಿಯೇ ನಿನಗೆ ತೀರ್ಪು ಮಾಡಬೇಕೆಂದು ಅಪೇಕ್ಷಿಸುವಿಯಾ?” ಎಂದು ಕೇಳಿದನು.
10-11 ಪೌಲನು, “ಈಗ ನಾನು ಸೀಸರನ ನ್ಯಾಯಾಸ್ಥಾನದ ಮುಂದೆ ನಿಂತಿದ್ದೇನೆ. ನನಗೆ ತೀರ್ಪಾಗಬೇಕಾದದ್ದು ಇಲ್ಲಿಯೇ! ನಾನು ಯೆಹೂದ್ಯರಿಗೆ ಯಾವ ಅಪರಾಧವನ್ನೂ ಮಾಡಿಲ್ಲ. ಇದು ಸತ್ಯವೆಂದು ನಿನಗೆ ಗೊತ್ತಿದೆ. ನಾನು ಅಪರಾಧಿಯಾಗಿದ್ದು ಧರ್ಮಶಾಸ್ತ್ರವು ನನಗೆ ಮರಣದಂಡನೆ ವಿಧಿಸಿದರೆ, ನಾನು ಆ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇವರ ದೋಷಾರೋಪಣೆಗಳು ಸತ್ಯವಾಗಿಲ್ಲದಿದ್ದರೆ, ನನ್ನನ್ನು ಇವರ ಕೈಗೆ ಒಪ್ಪಿಸಲು ಯಾರಿಗೂ ಸಾಧ್ಯವಿಲ್ಲ! ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ!” ಎಂದನು.
12 ಫೆಸ್ತನು ತನ್ನ ಸಲಹೆಗಾರರೊಂದಿಗೆ ಇದರ ಬಗ್ಗೆ ಮಾತಾಡಿದನು. ಬಳಿಕ ಅವನು, “ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ ಎಂದು ನೀನು ಕೇಳಿಕೊಂಡದ್ದರಿಂದ ನಿನ್ನನ್ನು ಸೀಸರನ ಬಳಿಗೇ ಕಳುಹಿಸಿಕೊಡುತ್ತೇನೆ” ಎಂದನು.
ಹೆರೋದ ಅಗ್ರಿಪ್ಪನ ಮುಂದೆ ಪೌಲನು
13 ಕೆಲವು ದಿನಗಳಾದ ಮೇಲೆ ರಾಜ ಅಗ್ರಿಪ್ಪನು ಮತ್ತು ಬೆರ್ನಿಕೆ ರಾಣಿ ಫೆಸ್ತನನ್ನು ವಂದಿಸಲು ಸೆಜರೇಯಕ್ಕೆ ಬಂದರು. 14 ಅವರು ಅಲ್ಲಿ ಅನೇಕ ದಿನಗಳವರೆಗೆ ಇದ್ದರು. ಫೆಸ್ತನು ಪೌಲನ ವ್ಯಾಜ್ಯದ ಬಗ್ಗೆ ರಾಜನಿಗೆ ಈ ರೀತಿ ತಿಳಿಸಿದನು: “ಫೇಲಿಕ್ಸನು ಸೆರೆಮನೆಯಲ್ಲೇ ಬಿಟ್ಟುಹೋದ ಒಬ್ಬ ವ್ಯಕ್ತಿ ಇದ್ದಾನೆ. 15 ನಾನು ಜೆರುಸಲೇಮಿಗೆ ಹೋಗಿದ್ದಾಗ ಮಹಾಯಾಜಕರು ಮತ್ತು ಯೆಹೂದ್ಯ ಹಿರಿಯ ನಾಯಕರು ಅವನಿಗೆ ವಿರೋಧವಾಗಿ ದೋಷಾರೋಪಣೆ ಮಾಡಿದರು. ನಾನು ಅವನಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಯೆಹೂದ್ಯರ ಅಪೇಕ್ಷೆಯಾಗಿತ್ತು. 16 ಆದರೆ ನಾನು, ‘ದೋಷಾರೋಪಣೆ ಹೊರಿಸಲ್ಪಟ್ಟಿರುವ ವ್ಯಕ್ತಿಯನ್ನು ತೀರ್ಪಿಗಾಗಿ ಬೇರೆಯವರಿಗೆ ಒಪ್ಪಿಸುವುದು ರೋಮ್‌ನವರ ಪದ್ಧತಿಯಲ್ಲ. ಮೊದಲನೆಯದಾಗಿ, ಅವನು ತನ್ನ ಮೇಲೆ ದೋಷಾರೋಪಣೆ ಮಾಡುತ್ತಿರವವರನ್ನು ಮುಖಾಮುಖಿಯಾಗಿ ಸಂಧಿಸಿ ಅವರ ದೋಷಾರೋಪಣೆಗಳಿಗೆ ವಿರೋಧವಾಗಿ ತನ್ನನ್ನು ಪ್ರತಿಪಾದಿಸಿಕೊಳ್ಳಲು ಅವಕಾಶ ಕೊಡಲೇಬೇಕು’ ಎಂದು ಹೇಳಿದೆನು.
17 “ಆದ್ದರಿಂದ ಅವರು ಇಲ್ಲಿಗೆ ಬಂದಾಗ, ನಾನು ತಡಮಾಡದೆ ಮರುದಿನವೇ ನ್ಯಾಯಾಸ್ಥಾನದಲ್ಲಿ ಕುಳಿತು ಆ ಮನುಷ್ಯನನ್ನು (ಪೌಲನನ್ನು) ಒಳಗೆ ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದೆನು. 18 ಯೆಹೂದ್ಯರು ನಿಂತುಕೊಂಡು ಅವನ ಮೇಲೆ ದೋಷಾರೋಪಣೆಗಳನ್ನು ಹೊರಿಸಿದರು. ಆದರೆ ನಾನು ಯೋಚಿಸಿದ ಪ್ರಕಾರ ಯೆಹೂದ್ಯರು ಅವನ ಮೇಲೆ ಯಾವ ಕೆಟ್ಟ ಅಪರಾಧವನ್ನಾಗಲಿ ಹೊರಿಸಲಿಲ್ಲ. 19 ಅವರು ಹೇಳಿದ ಸಂಗತಿಗಳು ಅವರ ಸ್ವಂತ ಧರ್ಮಕ್ಕೆ ಸಂಬಂಧಪಟ್ಟಿದ್ದವು ಮತ್ತು ಯೇಸು ಎಂಬ ವ್ಯಕ್ತಿಯನ್ನು ಕುರಿತದ್ದಾಗಿದ್ದವು. ಸತ್ತುಹೋದ ಯೇಸು ಈಗ ಜೀವಂತವಾಗಿದ್ದಾನೆಂದು ಪೌಲನು ಹೇಳಿದನು. 20 ಈ ಸಂಗತಿಗಳ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ಪ್ರಶ್ನೆಗಳನ್ನು ಕೇಳಲಿಲ್ಲ. ಆದರೆ ನಾನು ಪೌಲನಿಗೆ, ‘ನೀನು ಜೆರುಸಲೇಮಿಗೆ ಹೋಗಿ ಅಲ್ಲೇ ನ್ಯಾಯತೀರ್ಪು ಹೊಂದಲು ಬಯಸುವೆಯಾ?’ ಎಂದು ಕೇಳಿದೆನು. 21 ಅದಕ್ಕೆ ಅವನು, ‘ಚಕ್ರವರ್ತಿಯೇ (ಸೀಸರನೇ) ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನ್ನನ್ನು ಸಂರಕ್ಷಿಸಬೇಕು’ ಎಂದು ಕೇಳಿಕೊಂಡನು. ಆದ್ದರಿಂದ ರೋಮಿನಲ್ಲಿರುವ ಚಕ್ರವರ್ತಿಯ ಬಳಿಗೆ ಕಳುಹಿಸುವ ತನಕ ಅವನನ್ನು ಕಾವಲಿನಲ್ಲಿರಿಸಬೇಕೆಂದು ಆಜ್ಞಾಪಿಸಿದೆನು.”
22 ಅಗ್ರಿಪ್ಪನು ಫೆಸ್ತನಿಗೆ, “ಈ ಮನುಷ್ಯನು ಹೇಳುವುದನ್ನು ಕೇಳುವುದಕ್ಕೆ ನನಗೂ ಇಷ್ಟವಿದೆ” ಎಂದು ಹೇಳಿದನು.
ಫೆಸ್ತನು, “ಅವನು ಹೇಳುವುದನ್ನು ನೀನು ನಾಳೆ ಕೇಳಬಹುದು!” ಎಂದು ಹೇಳಿದನು.
23 ಮರುದಿನ ಅಗ್ರಿಪ್ಪ ರಾಜ ಮತ್ತು ಬೆರ್ನಿಕೆ ರಾಣಿ ವೈಭವದ ಬಟ್ಟೆಗಳನ್ನು ಧರಿಸಿಕೊಂಡು ಸೇನಾಧಿಕಾರಿಗಳೊಡನೆ ಹಾಗೂ ಸೆಜರೇಯದ ಪ್ರಮುಖರೊಡನೆ ನ್ಯಾಯಾಲಯದೊಳಗೆ ಬಂದರು. ಪೌಲನನ್ನು ಒಳಗೆ ಕರೆದುಕೊಂಡು ಬರಬೇಕೆಂದು ಫೆಸ್ತನು ಸೈನಿಕರಿಗೆ ಆಜ್ಞಾಪಿಸಿದನು.
24 ಫೆಸ್ತನು ಹೀಗೆಂದನು: “ರಾಜ ಅಗ್ರಿಪ್ಪನೇ, ನಮ್ಮೊಂದಿಗೆ ಇಲ್ಲಿ ನೆರೆದಿರುವ ಎಲ್ಲಾ ಜನರೇ, ನೀವು ನೋಡುತ್ತಿರುವ ಈ ಮನುಷ್ಯನ (ಪೌಲನ) ಮೇಲೆ ಇಲ್ಲಿರುವ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರು ನನಗೆ ದೂರುಗಳನ್ನು ಹೇಳಿ, ಇವನಿಗೆ ಮರಣದಂಡನೆ ಆಗಬೇಕೆಂದು ಆರ್ಭಟಿಸಿದರು. 25 ನಾನು ಇವನನ್ನು ವಿಚಾರಣೆ ಮಾಡಿದಾಗ ಇವನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಸೀಸರನಿಂದಲೇ ತನಗೆ ನ್ಯಾಯತೀರ್ಪಾಗಬೇಕೆಂದು ಇವನು ಕೇಳಿಕೊಂಡಿದ್ದಾನೆ. ಆದ್ದರಿಂದ ಇವನನ್ನು ರೋಮಿಗೆ ಕಳುಹಿಸಲು ನಾನು ತೀರ್ಮಾನಿಸಿದೆ. 26 ಆದರೆ ಇವನ ವಿಷಯದಲ್ಲಿ ಸೀಸರನಿಗೆ ಬರೆಯಲು ನಿರ್ದಿಷ್ಟವಾದ ಅಪರಾಧವೇನೂ ನನಗೆ ತೋರುತ್ತಿಲ್ಲ. ಆದ್ದರಿಂದ ನಾನು ಇವನನ್ನು ನಿಮ್ಮೆಲ್ಲರ ಮುಂದೆಯೂ ವಿಶೇಷವಾಗಿ ರಾಜನಾದ ಅಗ್ರಿಪ್ಪನ ಮುಂದೆಯೂ ತಂದಿದ್ದೇನೆ. ಆದ್ದರಿಂದ ನೀವು ಇವನನ್ನು ಪ್ರಶ್ನಿಸಿ ಇವನ ಬಗ್ಗೆ ಸೀಸರನಿಗೆ ಬರೆಯಲು ಏನಾದರೂ ವಿಷಯವುನ್ನು ಕೊಡಬಲ್ಲಿರೆಂದು ನಿರೀಕ್ಷಿಸುತ್ತೇನೆ. 27 ನಾನು ಯೋಚಿಸುವಂತೆ, ಒಬ್ಬ ಕೈದಿಯ ವಿರುದ್ಧವಿರುವ ದೋಷಾರೋಪಣೆಗಳನ್ನು ಸ್ಪಷ್ಟಪಡಿಸದೆ ಅವನನ್ನು ಸೀಸರನ ಬಳಿಗೆ ಕಳುಹಿಸುವುದು ಮೂರ್ಖತನವಾಗಿದೆ.”
Kannada Holy Bible: Easy-to-Read Version. All rights reserved. © 1997 Bible League International