Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 22

ಅಬ್ರಹಾಮನೇ, ನಿನ್ನ ಮಗನನ್ನು ಯಜ್ಞವಾಗಿ ಅರ್ಪಿಸು

22 ಇವುಗಳಾದ ಮೇಲೆ, ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಲು ನಿರ್ಧರಿಸಿ, “ಅಬ್ರಹಾಮನೇ!” ಎಂದು ಕರೆದನು.

ಅಬ್ರಹಾಮನು, “ಇಗೋ ಇದ್ದೇನೆ” ಅಂದನು.

ಆಗ ದೇವರು ಅವನಿಗೆ, “ನಿನಗೆ ಪ್ರಿಯನಾಗಿರುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಮೊರೀಯ ದೇಶಕ್ಕೆ ಕರೆದುಕೊಂಡು ಹೋಗು. ನಾನು ನಿನಗೆ ತಿಳಿಸುವ ಬೆಟ್ಟದ ಮೇಲೆ ಅವನನ್ನು ಯಜ್ಞವನ್ನಾಗಿ ಅರ್ಪಿಸು” ಎಂದು ಹೇಳಿದನು.

ಮುಂಜಾನೆ ಅಬ್ರಹಾಮನು ಎದ್ದು ಕತ್ತೆಗೆ ತಡಿ ಹಾಕಿಸಿದನು; ಇಸಾಕನನ್ನೂ ಅವನೊಂದಿಗೆ ಇಬ್ಬರು ಸೇವಕರನ್ನೂ ಕರೆದುಕೊಂಡನು; ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದುಕೊಂಡನು. ಬಳಿಕ ದೇವರು ಹೇಳಿದ್ದ ಸ್ಥಳಕ್ಕೆ ಅವರು ಹೊರಟರು. ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಅಬ್ರಹಾಮನು ದೃಷ್ಟಿಸಿ ನೋಡಿದಾಗ ತಾವು ಹೋಗಲಿದ್ದ ಸ್ಥಳವು ದೂರದಲ್ಲಿ ಅವನಿಗೆ ಕಾಣಿಸಿತು. ಆಮೇಲೆ ಅಬ್ರಹಾಮನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯೊಂದಿಗಿರಿ; ನಾನೂ ನನ್ನ ಮಗನೂ ಆ ಸ್ಥಳಕ್ಕೆ ಹೋಗಿ ಆರಾಧಿಸುತ್ತೇವೆ. ಬಳಿಕ ನಾವು ಹಿಂತಿರುಗಿ ನಿಮ್ಮ ಬಳಿಗೆ ಬರುತ್ತೇವೆ” ಎಂದು ಹೇಳಿದನು.

ಅಬ್ರಹಾಮನು ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದು ತನ್ನ ಮಗನ ಭುಜದ ಮೇಲೆ ಹೊರಿಸಿದನು. ಅಬ್ರಹಾಮನು ವಿಶೇಷವಾದ ಕತ್ತಿಯನ್ನು ಮತ್ತು ಬೆಂಕಿಯನ್ನು ತೆಗೆದುಕೊಂಡನು. ಅವರಿಬ್ಬರೂ ಆರಾಧಿಸುವುದಕ್ಕಾಗಿ ಆ ಸ್ಥಳಕ್ಕೆ ಹೊರಟರು.

ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆದನು.

ಅಬ್ರಹಾಮನು, “ಏನು ಮಗನೇ?” ಎಂದು ಉತ್ತರಿಸಿದನು.

ಇಸಾಕನು, “ಕಟ್ಟಿಗೆ ಮತ್ತು ಬೆಂಕಿ ನನಗೆ ಕಾಣಿಸುತ್ತಿವೆ. ಆದರೆ ಯಜ್ಞಕ್ಕೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದನು.

ಅಬ್ರಹಾಮನು, “ಮಗನೇ, ಯಜ್ಞಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದು ಹೇಳಿದನು.

ಹೀಗೆ ಅಬ್ರಹಾಮನು ಮತ್ತು ಅವನ ಮಗನು ಆ ಸ್ಥಳಕ್ಕೆ ಹೊರಟು ದೇವರು ತಿಳಿಸಿದ್ದ ಸ್ಥಳಕ್ಕೆ ಬಂದರು. ಅಲ್ಲಿ ಅಬ್ರಹಾಮನು ಒಂದು ಯಜ್ಞವೇದಿಕೆಯನ್ನು ಕಟ್ಟಿ ಅದರ ಮೇಲೆ ಕಟ್ಟಿಗೆಯನ್ನು ಜೋಡಿಸಿದನು; ಆಮೇಲೆ ಅವನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಕೆಯ ಮೇಲಿದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. 10 ಬಳಿಕ ಅವನು ತನ್ನ ಮಗನನ್ನು ವಧಿಸಲು ಕತ್ತಿಯನ್ನು ಮೇಲೆತ್ತಲು.

11 ಯೆಹೋವನ ದೂತನು ಪರಲೋಕದಿಂದ, “ಅಬ್ರಹಾಮನೇ, ಅಬ್ರಹಾಮನೇ!” ಎಂದು ಕರೆದನು.

ಅಬ್ರಹಾಮನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.

12 ಯೆಹೋವನ ದೂತನು, “ನಿನ್ನ ಮಗನನ್ನು ವಧಿಸಬೇಡ. ಅವನಿಗೆ ನೋವು ಮಾಡಬೇಡ. ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೂ ಹಿಂಜರಿಯಲಿಲ್ಲ; ಆದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ತೋರಿಬಂದಿದೆ” ಎಂದು ಹೇಳಿದನು.

13 ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ಒಂದು ಟಗರನ್ನು ಕಂಡನು. ಆ ಟಗರಿನ ಕೊಂಬುಗಳು ಒಂದು ಪೊದೆಗೆ ಸಿಕ್ಕಿಕೊಂಡಿದ್ದವು. ಕೂಡಲೇ ಅವನು ಹೋಗಿ, ಆ ಟಗರನ್ನು ಎಳೆದುಕೊಂಡು ಬಂದು ದೇವರಿಗೆ ತನ್ನ ಮಗನ ಬದಲಾಗಿ ಯಜ್ಞವಾಗಿ ಅರ್ಪಿಸಿದನು. 14 ಅಲ್ಲದೆ ಆ ಸ್ಥಳಕ್ಕೆ “ಯೆಹೋವ ಯೀರೆ” ಎಂದು ಹೆಸರಿಟ್ಟನು. ಇಂದಿಗೂ ಜನರು, “ಯೆಹೋವನ ಬೆಟ್ಟದಲ್ಲಿ ಒದಗಿಸಲ್ಪಡುವುದು” ಎಂದು ಹೇಳುತ್ತಾರೆ.

15 ಯೆಹೋವನ ದೂತನು ಆಕಾಶದಿಂದ ಅಬ್ರಹಾಮನನ್ನು ಎರಡನೆ ಸಲ ಕರೆದು ಅವನಿಗೆ, 16 “ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ವಧಿಸಲು ಸಿದ್ಧನಾಗಿದ್ದೆ. ಆದ್ದರಿಂದ ನಾನು ನಿನಗೆ ಈ ವಾಗ್ದಾನವನ್ನು ಮಾಡುತ್ತೇನೆ: 17 ನಾನು ನಿನ್ನನ್ನು ಖಂಡಿತವಾಗಿಯೂ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಖಂಡಿತವಾಗಿಯೂ ಹೆಚ್ಚಿಸುವೆನು; ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಮರಳಿನಂತೆಯೂ ಅಸಂಖ್ಯಾತರನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. 18 ನೀನು ನನಗೆ ವಿಧೇಯನಾದದ್ದರಿಂದ ನಿನ್ನ ಸಂತತಿಗಳವರ ಮೂಲಕವಾಗಿ ಭೂಮಿಯ ಮೇಲಿರುವ ಪ್ರತಿಯೊಂದು ಜನಾಂಗವೂ ಆಶೀರ್ವಾದ ಹೊಂದುವುದು” ಎಂದು ಹೇಳಿದನು.

19 ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂತಿರುಗಿ ಹೋದನು. ಅವರೆಲ್ಲರೂ ಬೇರ್ಷೆಬಕ್ಕೆ ಮರಳಿ ಪ್ರಯಾಣ ಮಾಡಿದರು. ಬಳಿಕ ಅಬ್ರಹಾಮನು ಅಲ್ಲೇ ವಾಸಿಸಿದನು.

20 ಈ ಸಂಗತಿಗಳೆಲ್ಲ ನಡೆದ ಮೇಲೆ ಅಬ್ರಹಾಮನಿಗೆ ಒಂದು ಸಂದೇಶ ಬಂದಿತು. ಆ ಸಂದೇಶವು ಹೀಗಿತ್ತು: “ನಿನ್ನ ತಮ್ಮನಾದ ನಾಹೋರ ಮತ್ತು ಅವನ ಹೆಂಡತಿಯಾದ ಮಿಲ್ಕ ಈಗ ಮಕ್ಕಳನ್ನು ಹೊಂದಿದ್ದಾರೆ. 21 ಮೊದಲನೆ ಮಗನ ಹೆಸರು ಊಚ್; ಎರಡನೆ ಮಗನ ಹೆಸರು ಬೂಚ್; ಮೂರನೆ ಮಗನ ಹೆಸರು ಕೆಮೂವೇಲ್. ಇವನು ಅರಾಮನ ತಂದೆ. 22 ಇವರಲ್ಲದೆ ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂವೇಲ್ ಎಂಬವರು ಸಹ ಇದ್ದಾರೆ.” 23 ಬೆತೂವೇಲನು ರೆಬೆಕ್ಕಳ ತಂದೆ. ಮಿಲ್ಕಳು ಈ ಎಂಟು ಮಕ್ಕಳ ತಾಯಿ; ನಾಹೋರನು ಅವರ ತಂದೆ. ನಾಹೋರನು ಅಬ್ರಹಾಮನ ಸಹೋದರ. 24 ಇವರಲ್ಲದೆ, ನಾಹೋರನಿಗೆ ಅವನ ಉಪಪತ್ನಿಯಾದ ರೂಮಳಲ್ಲಿ ನಾಲ್ಕು ಮಂದಿ ಗಂಡುಮಕ್ಕಳಿದ್ದರು. ಆ ಗಂಡುಮಕ್ಕಳು ಯಾರಾರೆಂದರೆ: ಟೆಬಹ, ಗಹಮ್, ತಹಷ್ ಮತ್ತು ಮಾಕಾ.

ಮತ್ತಾಯ 21

ಅರಸನಂತೆ ಯೇಸುವಿನ ಪ್ರವೇಶ

(ಮಾರ್ಕ 11:1-11; ಲೂಕ 19:28-38; ಯೋಹಾನ 12:12-19)

21 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಾ ಆಲಿವ್ ಗುಡ್ಡದ ಸಮೀಪದಲ್ಲಿದ್ದ ಬೆತ್ಛಗೆಯನ್ನು ಸಮೀಸಿದರು. ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮ ಎದುರಿನಲ್ಲಿ ಇರುವ ಪಟ್ಟಣದೊಳಕ್ಕೆ ಹೋಗಿ. ನೀವು ಅದನ್ನು ಪ್ರವೇಶಿಸಿದಾಗ, ಅಲ್ಲೇ ಕಟ್ಟಿರುವ ಒಂದು ಕತ್ತೆಯನ್ನು ಕಾಣುತ್ತೀರಿ. ಆ ಕತ್ತೆಯ ಜೊತೆಯಲ್ಲಿ ಒಂದು ಕತ್ತೆಮರಿಯನ್ನು ಸಹ ನೀವು ಕಾಣುವಿರಿ. ಆ ಎರಡು ಕತ್ತೆಗಳನ್ನು ಬಿಚ್ಚಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು.

ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ:

“ಸೀಯೋನ್ ನಗರಿಗೆ ಹೇಳಿರಿ,
    ‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ.
ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ.
    ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’”(A)

ಆ ಶಿಷ್ಯರು ಹೋಗಿ, ಯೇಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನೂ ಮತ್ತು ಅದರ ಮರಿಯನ್ನೂ ಯೇಸುವಿನ ಬಳಿಗೆ ತಂದರು. ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು. ಆಗ ಯೇಸು ಕುಳಿತುಕೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೇಸುವಿಗಾಗಿ ದಾರಿಯ ಮೇಲೆ ಹಾಸಿದರು. ಕೆಲವರು ಮರಗಳಿಂದ ಚಿಗುರುಗಳನ್ನು ಕತ್ತರಿಸಿಕೊಂಡು ಬಂದು ದಾರಿಯ ಮೇಲೆ ಹರಡಿದರು. ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು:

“ದಾವೀದನ ಕುಮಾರನನ್ನು ಕೊಂಡಾಡಿರಿ![a]
    ‘ಪ್ರಭುವಿನ ಹೆಸರಿನಲ್ಲಿ ಬರುವವನನ್ನು ದೇವರು ಆಶೀರ್ವದಿಸಲಿ!’(B)

ಪರಲೋಕದ ದೇವರನ್ನು ಕೊಂಡಾಡಿರಿ!”

10 ಬಳಿಕ ಯೇಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನು ಯಾರು?” ಎಂದು ಕೇಳಿದರು.

11 ಯೇಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೇಸು. ಈತನು ಗಲಿಲಾಯ ಪ್ರಾಂತ್ಯದಲ್ಲಿರುವ ನಜರೇತ್ ಎಂಬ ಊರಿನ ಪ್ರವಾದಿ” ಎಂದು ಉತ್ತರಕೊಟ್ಟರು.

ದೇವಾಲಯವು ಪ್ರಾರ್ಥನಾಲಯ

(ಮಾರ್ಕ 11:15-19; ಲೂಕ 19:45-48; ಯೋಹಾನ 2:13-22)

12 ಯೇಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಕೊಂಡುಕೊಳ್ಳುತ್ತಿದ್ದ ಜನರನ್ನೆಲ್ಲಾ ಆತನು ಹೊರಗೆ ಓಡಿಸಿಬಿಟ್ಟನು; ನಾಣ್ಯ ವಿನಿಮಯ ಮಾಡುತ್ತಿದ್ದವರ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 13 ಯೇಸು ಅಲ್ಲಿದ್ದ ಜನರಿಗೆಲ್ಲ, “‘ನನ್ನ ಆಲಯವು ಪ್ರಾರ್ಥನಾಲಯ ಎನಿಸಿಕೊಳ್ಳುವುದು’(C) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರ ಗವಿ’ಯನ್ನಾಗಿ ಮಾಡುತ್ತಿದ್ದೀರಿ”(D) ಎಂದು ಹೇಳಿದನು.

14 ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನು ಗುಣಪಡಿಸಿದನು. 15 ಮಹಾಯಾಜಕರು ಮತ್ತು ಧರ್ಮೋಪದೇಶಕರು ಇದನ್ನು ನೋಡಿದರು. ಯೇಸು ಮಹತ್ಕಾರ್ಯಗಳನ್ನು ಮಾಡುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಚಿಕ್ಕಮಕ್ಕಳು ಯೇಸುವನ್ನು ಕೊಂಡಾಡುತ್ತಿರುವುದನ್ನು ಅವರು ಗಮನಿಸಿದರು. ಚಿಕ್ಕ ಮಕ್ಕಳು, “ದಾವೀದನ ಕುಮಾರನಿಗೆ ಸ್ತೋತ್ರವಾಗಲಿ” ಎಂದು ಕೂಗುತ್ತಿದ್ದರು. ಇವುಗಳಿಂದಾಗಿ ಯಾಜಕರು ಮತ್ತು ಧರ್ಮೋಪದೇಶಕರು ಕೋಪಗೊಂಡರು.

16 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು.

ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’(E) ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು.

17 ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಥಾನಿ ಪಟ್ಟಣಕ್ಕೆ ಹೊರಟುಹೋದನು. ಯೇಸು ಆ ರಾತ್ರಿ ಅಲ್ಲಿಯೇ ತಂಗಿದನು.

ನಂಬಿಕೆಗಿರುವ ಶಕ್ತಿ

(ಮಾರ್ಕ 11:12-14,20-24)

18 ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19 ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು.

20 ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು.

21 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. 22 ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು.

ಯೇಸುವಿನ ಅಧಿಕಾರದ ಬಗ್ಗೆ ಯೆಹೂದ್ಯನಾಯಕರ ಸಂದೇಹ

(ಮಾರ್ಕ 11:27-33; ಲೂಕ 20:1-8)

23 ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು.

24 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. 25 ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು.

ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು. 26 ‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು.

27 ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು.

ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ

28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.

29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.

30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.

31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”

ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.

ದೇವರ ಸ್ವಂತ ಮಗನ ಆಗಮನ

(ಮಾರ್ಕ 12:1-12; ಲೂಕ 20:9-19)

33 “ಈ ಸಾಮ್ಯವನ್ನು ಕೇಳಿರಿ: ಒಬ್ಬ ಮನುಷ್ಯನಿಗೆ ಒಂದು ಸ್ವಂತ ತೋಟವಿತ್ತು. ಅವನು ತೋಟದಲ್ಲಿ ದ್ರಾಕ್ಷಿಯನ್ನು ಬೆಳೆಸಿದನು; ತೋಟದ ಸುತ್ತಲೂ ಗೋಡೆ ಕಟ್ಟಿ ದ್ರಾಕ್ಷಾರಸ ತಯಾರಿಸಲು ಆಲೆಯನ್ನು ಹೂಡಿಸಿದನು. ಕಾವಲಿಗಾಗಿ ಅಟ್ಟಣೆಯನ್ನೂ ಕಟ್ಟಿಸಿದನು. ಅವನು ಆ ತೋಟವನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೊರಟುಹೋದನು. 34 ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂದಾಗ ತನ್ನ ಪಾಲನ್ನು ತೆಗೆದುಕೊಂಡು ಬರಲು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು.

35 “ಆದರೆ ರೈತರು ಆ ಸೇವಕರನ್ನು ಹಿಡಿದುಕೊಂಡು ಒಬ್ಬನನ್ನು ಹೊಡೆದರು; ಬೇರೊಬ್ಬನನ್ನು ಕತ್ತರಿಸಿಹಾಕಿದರು; ಮೂರನೇ ಸೇವಕನನ್ನು ಕಲ್ಲೆಸೆದು ಕೊಂದರು. 36 ಆದ್ದರಿಂದ ಅವನು ಮೊದಲನೆ ಸಲ ಕಳುಹಿಸಿದ ಸೇವಕರಿಗಿಂತಲೂ ಹೆಚ್ಚು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ಆದರೆ ರೈತರು ಮೊದಲನೆ ಸಲ ಮಾಡಿದಂತೆಯೇ ಈ ಸೇವಕರಿಗೂ ಮಾಡಿದರು. 37 ಆಗ ಅವನು, ‘ರೈತರು ನನ್ನ ಮಗನನ್ನು ಗೌರವಿಸುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದನು.

38 “ಆದರೆ ರೈತರು ಮಗನನ್ನು ನೋಡಿದಾಗ, ‘ಇವನು ತೋಟದ ಒಡೆಯನ ಮಗನು. ಈ ತೋಟ ಇವನದಾಗುವುದು. ನಾವು ಇವನನ್ನು ಕೊಂದರೆ, ಈ ತೋಟ ನಮ್ಮದಾಗುವುದು’ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 39 ಆದ್ದರಿಂದ ರೈತರು ಮಗನನ್ನು ಹಿಡಿದು ತೋಟದಿಂದ ಹೊರಕ್ಕೆಸೆದು ಅವನನ್ನು ಕೊಂದುಹಾಕಿದರು.

40 “ಹೀಗಿರಲು ತೋಟದ ಯಜಮಾನನು ತಾನೇ ಬಂದಾಗ ಈ ರೈತರಿಗೆ ಏನು ಮಾಡುತ್ತಾನೆ?”

41 ಯೆಹೂದ್ಯ ಯಾಜಕರು ಮತ್ತು ನಾಯಕರು, “ಅವನು ಖಂಡಿತವಾಗಿ ಆ ದುಷ್ಟಜನರನ್ನು ಕೊಂದು ಸುಗ್ಗಿಕಾಲದಲ್ಲಿ ತನ್ನ ಪಾಲನ್ನು ತನಗೆ ಕೊಡುವ ರೈತರಿಗೆ ಅದನ್ನು ಗುತ್ತಿಗೆಗೆ ಕೊಡುತ್ತಾನೆ” ಎಂದು ಹೇಳಿದರು.

42 ಯೇಸು ಅವರಿಗೆ, “ಖಂಡಿತವಾಗಿಯೂ ನೀವು ಇದನ್ನು ಪವಿತ್ರ ಗ್ರಂಥದಲ್ಲಿ ಓದಿದ್ದೀರಿ:

‘ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
ಪ್ರಭುವು ಇದನ್ನು ಮಾಡಿದನು. ಇದು ನಮಗೆ ಆಶ್ಚರ್ಯಕರವಾಗಿದೆ.’(F)

43 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ದೇವರ ರಾಜ್ಯವು ನಿಮ್ಮಿಂದ ತೆಗೆದುಹಾಕಲ್ಪಟ್ಟು ಆ ರಾಜ್ಯದಲ್ಲಿ ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಮಾಡುವವರಿಗೆ ಕೊಡಲ್ಪಡುವುದು. 44 ಈ ಕಲ್ಲಿನ ಮೇಲೆ ಬೀಳುವ ಮನುಷ್ಯನು ತುಂಡುತುಂಡಾಗುತ್ತಾನೆ. ಈ ಕಲ್ಲು ಮನುಷ್ಯನ ಮೇಲೆ ಬಿದ್ದರೆ, ಅವನು ಜಜ್ಜಿಹೋಗುವನು.”

45 ಮಹಾಯಾಜಕರು ಮತ್ತು ಫರಿಸಾಯರು ಯೇಸು ಹೇಳಿದ ಈ ಸಾಮ್ಯಗಳನ್ನು ಕೇಳಿ, ತಮ್ಮನ್ನೇ ಕುರಿತು ಇವುಗಳನ್ನು ಹೇಳಿದನೆಂದು ತಿಳಿದುಕೊಂಡರು. 46 ಅವರು ಯೇಸುವನ್ನು ಬಂಧಿಸಲು ಉಪಾಯ ಹುಡುಕಿದರೂ ಜನರಿಗೆ ಭಯಪಟ್ಟು ಬಂಧಿಸಲಿಲ್ಲ. ಏಕೆಂದರೆ ಯೇಸು ಒಬ್ಬ ಪ್ರವಾದಿ ಎಂದು ಜನರು ನಂಬಿದ್ದರು.

ನೆಹೆಮೀಯ 11

ಜೆರುಸಲೇಮಿನಲ್ಲಿ ವಾಸಿಸಲು ಹೊಸದಾಗಿ ಬಂದವರು

11 ಇಸ್ರೇಲರ ನಾಯಕರುಗಳು ಜೆರುಸಲೇಮ್ ನಗರದೊಳಗೆ ಬಂದು ನೆಲೆಸಿದ್ದರು. ಬೇರೆ ಯಾರು ಪಟ್ಟಣದೊಳಗೆ ನೆಲೆಸಬಹುದೆಂಬುದನ್ನು ಉಳಿದ ಇಸ್ರೇಲರು ತೀರ್ಮಾನ ಮಾಡಬೇಕಿತ್ತು. ಆದ್ದರಿಂದ ಚೀಟು ಹಾಕಿದರು. ಹತ್ತು ಮಂದಿಯಲ್ಲಿ ಒಬ್ಬನು ಪರಿಶುದ್ಧ ನಗರವಾದ ಜೆರುಸಲೇಮಿನಲ್ಲಿ ವಾಸಿಸಬೇಕೆಂದೂ ಉಳಿದ ಒಂಭತ್ತು ಮಂದಿ ತಮ್ಮ ಸ್ವಂತ ಊರುಗಳಲ್ಲಿ ವಾಸಿಸಬಹುದೆಂದೂ ಇದರಿಂದ ತಿಳಿದುಬಂತು. ಕೆಲವರು ಜೆರುಸಲೇಮಿನಲ್ಲಿ ವಾಸಿಸುವುದಕ್ಕೆ ತಾವೇ ಮುಂದೆ ಬಂದರು. ಉಳಿದವರು ತಾವಾಗಿಯೇ ಮುಂದೆ ಬಂದವರನ್ನು ವಂದಿಸಿ ಆಶೀರ್ವದಿಸಿದರು.

ಜೆರುಸಲೇಮಿನಲ್ಲಿ ವಾಸಿಸಿದ ಪ್ರಾಂತ್ಯಾಧಿಕಾರಿಗಳ ಪಟ್ಟಿ, (ಕೆಲವು ಇಸ್ರೇಲ್ ಜನರು, ಯಾಜಕರು, ಲೇವಿಯರು, ಆಲಯದ ಸೇವಕರು ಮತ್ತು ಸೊಲೊಮೋನನ ಸೇವಕರ ಸಂತಾನದವರು ಯೆಹೂದ ಪ್ರಾಂತ್ಯದ ಊರುಗಳಲ್ಲಿ ವಾಸಿಸಿದರು. ಇವರೆಲ್ಲರು ತಮ್ಮ ಊರುಗಳಲ್ಲಿದ್ದ ತಮ್ಮ ಸ್ವಂತ ಸ್ಥಳಗಳಲ್ಲಿ ಜೀವಿಸಿದರು. ಯೆಹೂದ ಮತ್ತು ಬೆನ್ಯಾಮೀನನ ಕುಟುಂಬಗಳ ಇತರರು ಜೆರುಸಲೇಮ್ ನಗರದಲ್ಲಿ ವಾಸಿಸಿದರು.)

ಜೆರುಸಲೇಮಿಗೆ ಬಂದ ಯೆಹೂದನ ಸಂತಾನದವರು ಯಾರೆಂದರೆ:

ಉಜ್ಜೀಯನ ಮಗನಾದ ಅತಾಯ. (ಉಜ್ಜೀಯನು ಜೆಕರ್ಯನ ಮಗ; ಜೆಕರ್ಯನು ಅಮರ್ಯನ ಮಗ; ಅಮರ್ಯನು ಶೆಫಟ್ಯನ ಮಗ; ಶೆಫಟ್ಯನು ಮಹಲಲೇಲನ ಮಗ; ಮಹಲಲೇಲ ಪೆರೆಚನ ಸಂತಾನದವನು.) ಇನ್ನೊಬ್ಬನು ಬಾರೂಕನ ಮಗನಾದ ಮಾಸೇಯ. (ಬಾರೂಕನು ಕೊಲ್ಹೋಜೆಯ ಮಗನು; ಕೊಲ್ಹೋಜೆಯು ಹಜಾಯನ ಮಗ; ಹಜಾಯನು ಅದಾಯನ ಮಗ; ಅದಾಯನು ಯೋಯಾರೀಬನ ಮಗ; ಯೋಯಾರೀಬನು ಜೆಕರ್ಯನ ಮಗ; ಜೆಕರ್ಯ ಶೇಲಹನ ಸಂತಾನದವನು). ಪೆರೆಚನ ಸಂತಾನಕ್ಕೆ ಒಟ್ಟು ನಾನೂರ ಅರವತ್ತೆಂಟು ಮಂದಿ ಜೆರುಸಲೇಮ್ ನಗರದಲ್ಲಿ ವಾಸಿಸಿದರು. ಇವರೆಲ್ಲಾ ಧೈರ್ಯಶಾಲಿಗಳಾದ ವೀರರು.

ಜೆರುಸಲೇಮಿಗೆ ವಾಸಿಸಲು ಬಂದ ಬೆನ್ಯಾಮೀನನ ಸಂತಾನದವರು ಯಾರೆಂದರೆ:

ಮೆಷುಲ್ಲಾಮನ ಮಗನಾದ ಸಲ್ಲು, (ಮೆಷುಲ್ಲಾಮನು ಯೋವೇದನ ಮಗ; ಯೋವೇದನು ಪೆದಾಯನ ಮಗ; ಪೆದಾಯನು ಕೋಲಾಯನ ಮಗ; ಕೋಲಾಯನು ಮಾಸೇಯ ಮಗ; ಮಾಸೇಯು ಈತಿಯೇಲನ ಮಗ; ಈತಿಯೇಲನು ಯೆಶಾಯನ ಮಗ). ಗಬ್ಬೈ ಮತ್ತು ಸಲ್ಲು ಎಂಬುವರು ಯೆಶಾಯನನ್ನು ಹಿಂಬಾಲಿಸಿದರು. ಹೀಗೆ ಒಟ್ಟು ಒಂಭೈನೂರ ಇಪ್ಪತ್ತೆಂಟು ಮಂದಿ. ಜಿಕ್ರಿಯ ಮಗನಾದ ಯೋವೇಲನು ಅವರಿಗೆ ಮುಖ್ಯಸ್ತನಾಗಿದ್ದನು. ಹಸ್ಸೆನೂವನ ಮಗನಾದ ಯೆಹೂದನು ಜೆರುಸಲೇಮಿನ ಎರಡನೆ ಜಿಲ್ಲೆಗೆ ಮುಖ್ಯಸ್ತನಾಗಿದ್ದನು.

10 ಜೆರುಸಲೇಮಿನೊಳಗೆ ವಾಸಿಸಲು ಬಂದ ಯಾಜಕರು ಯಾರೆಂದರೆ:

ಯೋಯಾರೀಬನ ಮಗನಾದ ಯೆದಾಯ, ಯಾಕೀನ್, 11 ಮತ್ತು ಹಿಲ್ಕೀಯನ ಮಗನಾದ ಸೆರಾಯ. (ಹಿಲ್ಕೀಯನು ಮೆಷುಲ್ಲಾಮನ ಮಗನು; ಮೆಷುಲ್ಲಾಮನು ಚಾದೋಕನ ಮಗನು; ಚಾದೋಕನು ಮೆರಾಯೋತನ ಮಗನು; ಮೆರಾಯೋತನು ದೇವಾಲಯದ ಮೇಲ್ವಿಚಾರಕನಾಗಿದ್ದ ಅಹೀಟೂಬನ ಸಂತಾನಕ್ಕೆ ಸೇರಿದವನು.) 12 ದೇವಾಲಯದೊಳಗೆ ಸೇವೆಮಾಡುವ ಎಂಟುನೂರ ಇಪ್ಪತ್ತೆರಡು ಮಂದಿ ಮತ್ತು ಯೆರೋಹಾಮನ ಮಗನಾದ ಅದಾಯ. ಯೆರೋಹಾಮನು ಪೆಲಲ್ಯನ ಮಗ; ಪೆಲಲ್ಯನು ಅಮ್ಚೀಯ ಮಗ; ಅಮ್ಚೀಯು ಜೆಕರ್ಯನ ಮಗ; ಜೆಕರ್ಯನು ಪಷ್ಹೂರನ ಮಗ; ಪಷ್ಹೂರನು ಮಲ್ಕೀಯನ ಮಗ. 13 ಮಲ್ಕೀಯನ ವಂಶದ ಒಟ್ಟು ಜನರು ಇನ್ನೂರ ನಲವತ್ತೆರಡು ಮಂದಿ. ಇವರೆಲ್ಲಾ ಕುಟುಂಬಗಳ ನಾಯಕರಾಗಿದ್ದರು. ಅಜರೇಲನ ಮಗನು ಅಮಷ್ಪೈ; (ಅಜರೇಲನು ಅಹಜೈಯ ಮಗ; ಅಹಜೈಯು ಮೆಪಿಲ್ಲೇಮೋತನ ಮಗ; ಮೆಪಿಲ್ಲೇಮೋತನು ಇಮ್ಮೇರನ ಮಗ.) 14 ಈ ವಂಶದವರ ಒಟ್ಟು ಸಂಖ್ಯೆ ನೂರ ಇಪ್ಪತ್ತೆಂಟು ಮಂದಿ. (ಇವರೆಲ್ಲಾ ಧೈರ್ಯಶಾಲಿಗಳಾದ ಯುದ್ಧ ಯೋಧರು. ಇವರ ಮುಖ್ಯಸ್ಥನು ಹಗ್ಗೆದೋಲೀಮನ ಮಗನಾದ ಜಬ್ದೀಯೇಲ.)

15 ಜೆರುಸಲೇಮಿಗೆ ವಾಸಿಸಲು ಬಂದ ಲೇವಿಯರು

ಹಷ್ಷೂಬನ ಮಗನಾದ ಶೆಮಾಯ; (ಹಷ್ಷೂಬನು ಅಜ್ರೀಕಾಮನ ಮಗ; ಅಜ್ರೀಕಾಮನು ಹಷಬ್ಯನ ಮಗ; ಹಷಬ್ಯನು ಬುನ್ನೀಯ ಮಗ.) 16 ಶಬ್ಬೆತೈ ಮತ್ತು ಯೋಜಾಬಾದ್. (ಇವರಿಬ್ಬರೂ ಲೇವಿಯರ ನಾಯಕರು. ಇವರು ದೇವಾಲಯದ ಹೊರಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು.) 17 ಮತ್ತನ್ಯ, (ಮತ್ತನ್ಯನು ಮೀಕನ ಮಗ; ಮೀಕನು ಜಬ್ದೀಯ ಮಗ; ಜಬ್ದೀಯು ಆಸಾಫನ ಮಗ. ಆಸಾಫನು ಗಾಯಕರ ನಾಯಕನಾಗಿದ್ದು ಪ್ರಾರ್ಥನೆ ಮತ್ತು ಸ್ತುತಿಗೀತೆಗಳಲ್ಲಿ ಜನರನ್ನು ನಡೆಸುತ್ತಿದ್ದನು.) ಬಕ್ಬುಕ್ಯ (ಇವನು ತನ್ನ ಸಹೋದರರಲ್ಲಿ ಎರಡನೆ ಸ್ಥಾನ ಪಡೆದಿದ್ದನು), ಮತ್ತು ಶಮ್ಮೂವನ ಮಗನಾದ ಅಬ್ದ, (ಶಮ್ಮೂವನು ಗಾಲಾಲನ ಮಗ; ಗಾಲಾಲನು ಯೆದೂತೂನನ ಮಗ). 18 ಹೀಗೆ ಒಟ್ಟು ಇನ್ನೂರ ಎಂಭತ್ತ ನಾಲ್ಕು ಮಂದಿ ಲೇವಿಯರು ಪರಿಶುದ್ಧ ನಗರದಲ್ಲಿ ವಾಸಿಸಲು ಬಂದರು.

19 ದ್ವಾರಪಾಲಕರಲ್ಲಿ:

ಅಕ್ಕೂಬ್, ಟಲ್ಮೋನ್ ಮತ್ತು ಅವರ ನೂರ ಎಪ್ಪತ್ತೆರಡು ಮಂದಿ ಸಹೋದರರು. ಅವರು ನಗರದ ಬಾಗಿಲುಗಳನ್ನು ಕಾವಲು ಕಾಯುವವರಾಗಿದ್ದರು.

20 ಉಳಿದ ಜನರೂ ಯಾಜಕರೂ ಮತ್ತು ಲೇವಿಯರೂ ಯೆಹೂದದ ಬೇರೆಬೇರೆ ಊರು ಪಟ್ಟಣಗಳಲ್ಲಿ ವಾಸಿಸಿದರು. ತಮ್ಮತಮ್ಮ ಪೂರ್ವಿಕರು ನೆಲೆಸಿದ ಸ್ಥಳಗಳಲ್ಲಿಯೇ ನೆಲೆಸಿದರು. 21 ಓಪೇಲ್ ಬೆಟ್ಟದಲ್ಲಿ ದೇವಾಲಯದ ಸೇವಕರು ವಾಸಿಸಿದರು. ಚೀಹ ಮತ್ತು ಗಿಷ್ಪ ಅವರ ಮುಖ್ಯಸ್ತರು.

22 ಮೀಕ ವಂಶಕ್ಕೆ ಸೇರಿದ ಉಜ್ಜೀಯು ಜೆರುಸಲೇಮಿನಲ್ಲಿ ಲೇವಿಯರಿಗೆಲ್ಲಾ ಮುಖ್ಯಸ್ಥನಾಗಿದ್ದನು. ಉಜ್ಜೀಯು ಬಾನೀಯ ಮಗ. (ಬಾನೀಯು ಹಷಬ್ಯನ ಮಗ; ಹಷಬ್ಯನು ಮತ್ತನ್ಯನ ಮಗ; ಮತ್ತನ್ಯನು ಮೀಕನ ಮಗ.) ಉಜ್ಜೀಯು ಆಸಾಫನ ಸಂತಾನಕ್ಕೆ ಸೇರಿದವನಾಗಿದ್ದನು. 23 ಗಾಯಕರಾಗಿದ್ದ ಇವರು ದೇವಾಲಯದ ಸೇವಾಕಾರ್ಯಗಳಲ್ಲಿ ಹಾಡುತ್ತಿದ್ದರು. ಇವರ ಅನುದಿನದ ಕರ್ತವ್ಯವನ್ನು ರಾಜನೇ ತಿಳಿಸುತ್ತಿದ್ದನು. ಇವರು ಅದಕ್ಕೆ ವಿಧೇಯರಾಗುತ್ತಿದ್ದರು. 24 ಪೆತಹ್ಯನು ಪ್ರಜೆಗಳ ವಿಷಯದಲ್ಲಿ ರಾಜನ ಪ್ರತಿನಿಧಿಯಾಗಿದ್ದನು. (ಪೆತಹ್ಯನು ಮೆಷೇಜಬೇಲನ ಮಗ; ಮೆಷೇಜಬೇಲನು ಜೆರಹನ ಮಗ; ಜೆರಹನು ಯೆಹೂದನ ಮಗ.)

25 ಯೆಹೂದ ಸಂಸ್ಥಾನದ ಜನರು ಈ ಪಟ್ಟಣಗಳಲ್ಲಿ ವಾಸಿಸಿದರು. ಕಿರ್ಯತರ್ಬ ಮತ್ತು ಸುತ್ತಮುತ್ತಲಿರುವ ಚಿಕ್ಕ ಪಟ್ಟಣಗಳಲ್ಲಿ, ದೀಬೋನ್ ಮತ್ತು ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳಲ್ಲಿ, ಯಕಬ್ಜೆಯೇಲ್ ಮತ್ತು ಅದರ ಸುತ್ತಲಿದ್ದ ಚಿಕ್ಕ ಪಟ್ಟಣಗಳಲ್ಲಿ ವಾಸಿಸಿದರು. 26 ಅನಂತರ ಯೇಷೂವ, ಮೋಲಾದ, ಬೇತ್ಪಲೆಟ್, 27 ಹಚರ್ಷೂವಲ್, ಬೇರ್ಷೆಬ, ಅದರ ಸುತ್ತಲೂ ಇದ್ದ ಚಿಕ್ಕ ಪಟ್ಟಣಗಳಲ್ಲಿ, 28 ಚಿಕ್ಲಗ್, ಮೆಕೋನ ಮತ್ತು ಸುತ್ತಲಿದ್ದ ಚಿಕ್ಕ ಪಟ್ಟಣಗಳು, 29 ಏನ್ರಿಮ್ಮೋನ್, ಚೊರ್ರ, ಯರ್ಮೂತ್, 30 ಜನೋಹ, ಅದುಲ್ಲಾಮ್, ಅದರ ಸುತ್ತಲಿದ್ದ ಚಿಕ್ಕ ನಗರಗಳು, ಲಾಕೀಷ್ ಅದರ ಸುತ್ತಲಿದ್ದ ಹೊಲಗಳು, ಅಜೇಕ, ಅದರ ಸುತ್ತಲಿದ್ದ ಚಿಕ್ಕ ಪಟ್ಟಣಗಳು. ಹೀಗೆ ಯೆಹೂದ ಪ್ರಾಂತ್ಯದ ಜನರು ಬೇರ್ಷೆಬದಿಂದ ಹಿಡಿದು ಹಿನ್ನೋಮ್ ಕಣಿವೆಯ ತನಕ ಬೇರೆಬೇರೆ ಪಟ್ಟಣಗಳಲ್ಲಿ ವಾಸಿಸಿದರು.

31 ಗೆಬದ ಬೆನ್ಯಾಮೀನ್ ಕುಲದ ಜನರು ಮಿಕ್ಮಾಷಿನಲ್ಲಿಯೂ, ಅಯ್ಯಾ, ಬೇತೇಲ್ ಮತ್ತು ಸುತ್ತಲಿದ್ದ ಸಣ್ಣ ಪಟ್ಟಣಗಳಲ್ಲಿಯೂ ನೆಲೆಸಿದರು. 32 ಅನಾತೋತ್, ನೋಬ್ ಮತ್ತು ಅನನ್ಯ, 33 ಹಾಚೋರ್, ರಾಮಾ, ಗಿತ್ತಯಿಮ್, 34 ಹಾದೀದ್, ಚೆಬೋಮಿಮ್ ಮತ್ತು ನೆಬಲ್ಲಾಟ್, 35 ಲೋದ್, ಓನೋ ಮತ್ತು ಗೇಹರಾಷೀಮ್ ಶಿಲ್ಪಿಯವರ ಕಣಿವೆ ಇವುಗಳಲ್ಲಿ ನೆಲೆಸಿದರು. 36 ಲೇವಿಕುಲದವರಲ್ಲಿ ಕೆಲವು ವರ್ಗಗಳವರು ಬೆನ್ಯಾಮೀನರ ಪ್ರದೇಶಕ್ಕೆ ಹೋದರು.

ಅಪೊಸ್ತಲರ ಕಾರ್ಯಗಳು 21

ಪೌಲನು ಜೆರುಸಲೇಮಿಗೆ ಹೋಗುವನು

21 ನಾವೆಲ್ಲರೂ ಹಿರಿಯರನ್ನು ಬೀಳ್ಕೊಟ್ಟ ಬಳಿಕ ನೌಕಾಯಾನ ಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ದ್ವೀಪಕ್ಕೆ ಹೋದೆವು ಮತ್ತು ಅಲ್ಲಿಂದ ಪತಾರಕ್ಕೆ ಹೋದೆವು. ಫೆನಿಷ್ಯಕ್ಕೆ ಹೋಗುವ ಹಡಗನ್ನು ನಾವು ಅಲ್ಲಿ ಕಂಡೆವು. ನಾವು ಆ ಹಡಗನ್ನೇರಿ ಪ್ರಯಾಣ ಮಾಡಿದೆವು.

ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಅದು ನಮ್ಮ ಉತ್ತರದಿಕ್ಕಿನಲ್ಲಿ ಕಾಣುತ್ತಿತ್ತು. ಆದರೆ ನಾವು ಹಡಗನ್ನು ಅಲ್ಲಿ ನಿಲ್ಲಿಸದೆ ಸಿರಿಯ ದೇಶಕ್ಕೆ ಪ್ರಯಾಣ ಮಾಡಿ ಟೈರ್ ಪಟ್ಟಣದಲ್ಲಿ ಹಡಗನ್ನು ನಿಲ್ಲಿಸಿದೆವು. ಯಾಕೆಂದರೆ ಹಡಗಿನಿಂದ ಸರಕನ್ನು ಇಳಿಸಬೇಕಾಗಿತ್ತು. ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು. ಆದರೆ ನಮ್ಮ ಸಂದರ್ಶನವು ಮುಗಿದ ಮೇಲೆ ನಾವು ಅಲ್ಲಿಂದ ಹೊರಟು ಪ್ರಯಾಣವನ್ನು ಮುಂದುವರಿಸಿದೆವು. ಯೇಸುವಿನ ಎಲ್ಲಾ ಶಿಷ್ಯರು, ಸ್ತ್ರೀಯರು ಮತ್ತು ಮಕ್ಕಳು ಸಹ ನಮ್ಮನ್ನು ಬೀಳ್ಕೊಡುವುದಕ್ಕಾಗಿ ನಮ್ಮೊಂದಿಗೆ ಪಟ್ಟಣದಿಂದ ಹೊರಗೆ ಬಂದರು. ನಾವೆಲ್ಲರೂ ಸಮುದ್ರ ತೀರದಲ್ಲಿ ಮೊಣಕಾಲೂರಿ ಪ್ರಾರ್ಥಿಸಿದೆವು. ಬಳಿಕ ನಾವು ಒಬ್ಬರಿಗೊಬ್ಬರು ಅಂತಿಮ ವಂದನೆಗಳನ್ನು ಸಲ್ಲಿಸಿ ಹಡಗನ್ನು ಹತ್ತಿದೆವು. ಶಿಷ್ಯರು ತಮ್ಮ ಮನೆಗಳಿಗೆ ಹಿಂತಿರುಗಿದರು.

ನಾವು ಟೈರ್ ನಿಂದ ನಮ್ಮ ಪ್ರಯಾಣವನ್ನು ಮುಂದುವರೆಸಿ ಪ್ಟೊಲೊಮಾಯ ಎಂಬಲ್ಲಿಗೆ ಹೋದೆವು. ಅಲ್ಲಿಯ ಸಹೋದರರನ್ನು (ವಿಶ್ವಾಸಿಗಳು) ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು. ಮರುದಿನ ನಾವು ಪ್ಟೊಲೊಮಾಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಹೋದೆವು. ಅಲ್ಲಿ ನಾವು ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ತಂಗಿದೆವು. ಸುವಾರ್ತೆಯನ್ನು ತಿಳಿಸುವುದೇ ಫಿಲಿಪ್ಪನ ಕೆಲಸವಾಗಿತ್ತು. ಏಳುಮಂದಿ ಸಹಾಯಕರುಗಳಲ್ಲಿ[a] ಅವನೂ ಒಬ್ಬನಾಗಿದ್ದನು. ಮದುವೆಯಾಗಿಲ್ಲದ ನಾಲ್ಕುಮಂದಿ ಹೆಣ್ಣುಮಕ್ಕಳು ಅವನಿಗಿದ್ದರು. ಅವರೆಲ್ಲರಿಗೂ ಪ್ರವಾದಿಸುವ ವರವಿತ್ತು.

10 ನಾವು ಅಲ್ಲಿಗೆ ಹೋಗಿ ಅನೇಕ ದಿನಗಳಾದ ಮೇಲೆ, ಅಗಬ ಎಂಬ ಪ್ರವಾದಿಯು ಜುದೇಯದಿಂದ ಬಂದನು. 11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ಅದರಿಂದ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು, “ಪವಿತ್ರಾತ್ಮನು ನನಗೆ ಹೇಳುವುದೇನೆಂದರೆ, ‘ಈ ನಡುಪಟ್ಟಿಯನ್ನು ಕಟ್ಟಿಕೊಳ್ಳುವ ವ್ಯಕ್ತಿಯನ್ನು ಜೆರುಸಲೇಮಿನ ಯೆಹೂದ್ಯರು ಇದೇ ರೀತಿ ಕಟ್ಟಿಹಾಕುವರು. ಬಳಿಕ ಅವರು ಅವನನ್ನು ಯೆಹೂದ್ಯರಲ್ಲದ ಜನರಿಗೆ ಒಪ್ಪಿಸಿಕೊಡುವರು’” ಎಂದು ಹೇಳಿದನು.

12 ನಾವೆಲ್ಲರೂ ಈ ಮಾತುಗಳನ್ನು ಕೇಳಿದೆವು. ಆದ್ದರಿಂದ ನಾವು ಮತ್ತು ಯೇಸುವಿನ ಇತರ ಶಿಷ್ಯರು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಬೇಡಿಕೊಂಡೆವು. 13 ಆದರೆ ಪೌಲನು, “ನೀವು ಯಾಕೆ ಅಳುತ್ತಿರುವಿರಿ? ನೀವು ನನಗೆ ಬಹು ದುಃಖವನ್ನು ಯಾಕೆ ಉಂಟು ಮಾಡುತ್ತಿದ್ದೀರಿ? ನಾನು ಜೆರುಸಲೇಮಿನಲ್ಲಿ ಬಂಧಿಸಲ್ಪಡುವುದಕ್ಕಲ್ಲದೆ ಪ್ರಭು ಯೇಸುವಿನ ಹೆಸರಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ!” ಎಂದು ಹೇಳಿದನು.

14 ಜೆರುಸಲೇಮಿಗೆ ಹೋಗದಂತೆ ನಾವು ಅವನನ್ನು ಒಪ್ಪಿಸಲಾಗಲಿಲ್ಲ. ಆದ್ದರಿಂದ ಬೇಡಿಕೊಳ್ಳುವುದನ್ನು ನಿಲ್ಲಿಸಿ, “ಪ್ರಭುವಿನ ಚಿತ್ತವು ನೆರವೇರಲೆಂದು ಪ್ರಾರ್ಥಿಸುತ್ತೇವೆ” ಎಂದೆವು.

15 ಬಳಿಕ ನಾವು ಸಿದ್ಧರಾಗಿ ಜೆರುಸಲೇಮಿಗೆ ಹೊರಟೆವು. 16 ಸೆಜರೇಯ ಪಟ್ಟಣದಿಂದ ಯೇಸುವಿನ ಶಿಷ್ಯರಲ್ಲಿ ಕೆಲವರು ನಮ್ಮೊಂದಿಗೆ ಬಂದರು. ಈ ಶಿಷ್ಯರು ನಾವು ಇಳಿದುಕೊಳ್ಳಬೇಕಾಗಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ನಮ್ಮನ್ನು ಕರೆದೊಯ್ದರು. ಯೇಸುವಿನ ಆದಿ ಶಿಷ್ಯರಲ್ಲಿ ಮ್ನಾಸೋನನು ಒಬ್ಬನಾಗಿದ್ದನು.

ಪೌಲನು ಯಾಕೋಬನನ್ನು ಸಂದರ್ಶಿಸುವನು

17 ನಾವು ಜೆರುಸಲೇಮನ್ನು ತಲುಪಿದಾಗ ನಮ್ಮನ್ನು ಕಂಡು ವಿಶ್ವಾಸಿಗಳಿಗೆ ಸಂತೋಷವಾಯಿತು. 18 ಮರುದಿನ ಯಾಕೋಬನನ್ನು ಸಂದರ್ಶಿಸಲು ಪೌಲನು ನಮ್ಮನ್ನು ಕರೆದುಕೊಂಡು ಹೋದನು. ಹಿರಿಯರೆಲ್ಲರು ಅಲ್ಲಿದ್ದರು. 19 ಪೌಲನು ಅವರೆಲ್ಲರನ್ನು ವಂದಿಸಿದನು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ಅನೇಕ ಕಾರ್ಯಗಳನ್ನು ಮಾಡುವುದಕ್ಕಾಗಿ ದೇವರು ತನ್ನನ್ನು ಉಪಯೋಗಿಸಿಕೊಂಡ ಬಗೆಯನ್ನೂ ತನ್ನ ಮೂಲಕವಾಗಿ ದೇವರು ಮಾಡಿದ ಎಲ್ಲಾ ಕಾರ್ಯಗಳ ಕುರಿತಾಗಿಯೂ ಅವನು ಅವರಿಗೆ ತಿಳಿಸಿದನು.

20 ಈ ಸಂಗತಿಗಳನ್ನು ಕೇಳಿದ ಹಿರಿಯರು ದೇವರನ್ನು ಕೊಂಡಾಡಿದರು. ಬಳಿಕ ಅವರು ಪೌಲನಿಗೆ, “ಸಹೋದರನೇ, ವಿಶ್ವಾಸಿಗಳಿಗಾಗಿ ಪರಿವರ್ತನೆಗೊಂಡಿರುವ ಸಾವಿರಾರು ಮಂದಿ ಯೆಹೂದ್ಯರನ್ನು ನೀನು ಇಲ್ಲಿ ಕಾಣಬಹುದು. ಆದರೆ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದು ಬಹಳ ಮುಖ್ಯವೆಂಬುದು ಇವರ ಆಲೋಚನೆ. 21 ಈ ಯೆಹೂದ್ಯರು ನಿನ್ನ ಉಪದೇಶದ ಬಗ್ಗೆ ಕೇಳಿದ್ದಾರೆ. ಬೇರೆ ದೇಶಗಳಲ್ಲಿ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರಿಗೆ, “ನೀವು ಮೋಶೆಯ ಧರ್ಮಶಾಸ್ತ್ರವನ್ನು ತ್ಯಜಿಸಿರಿ; ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಬೇಡಿರಿ ಯೆಹೂದ್ಯರ ಸಂಪ್ರದಾಯಗಳಿಗೆ ವಿಧೇಯರಾಗಬೇಡಿರಿ ಎಂಬುದಾಗಿ ಹೇಳುತ್ತಿರುವಿಯೆಂದು ಅವರು ಕೇಳಿದ್ದಾರೆ.

22 “ಈಗ ನಾವು ಏನು ಮಾಡೋಣ? ನೀನು ಬಂದಿರುವ ವಿಷಯವು ಇಲ್ಲಿರುವ ಯೆಹೂದ್ಯ ವಿಶ್ವಾಸಿಗಳಿಗೆ ತಿಳಿಯುವುದು. 23 ಆದರೆ ಈಗ ನೀನು ಏನು ಮಾಡಬೇಕೆಂಬುದನ್ನು ನಾವು ನಿನಗೆ ತಿಳಿಸುತ್ತೇವೆ: ನಮ್ಮ ಜನರಲ್ಲಿ ನಾಲ್ಕುಮಂದಿ ದೇವರಿಗೆ ಹರಕೆ ಮಾಡಿಕೊಂಡಿದ್ದಾರೆ. 24 ನೀನು ಅವರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಅವರ ಶುದ್ಧಾಚಾರದ ಸಂಪ್ರದಾಯದಲ್ಲಿ ಭಾಗವಹಿಸು. ಅವರ ಖರ್ಚುವೆಚ್ಚನ್ನೆಲ್ಲ ಕೊಡು. ಬಳಿಕ ಅವರು ತಮ್ಮ ತಲೆಬೋಳಿಸಿಕೊಳ್ಳಲಿ. ನೀನು ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿದ ಸಂಗತಿಗಳು ಸತ್ಯವಲ್ಲವೆಂದು ಅವರೆಲ್ಲರಿಗೂ ಮನದಟ್ಟಾಗುವುದು. ಸ್ವತಃ ನೀನೇ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗುತ್ತಿರುವುದನ್ನು ಅವರೆಲ್ಲರೂ ಕಣ್ಣಾರೆ ಕಾಣುವರು.

25 “ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ನಾವು ಒಂದು ಪತ್ರವನ್ನು ಈಗಾಗಲೇ ಕಳುಹಿಸಿದ್ದೇವೆ.

ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನಬೇಡಿ.

ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

ಯಾವ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ’

ಎಂದು ಆ ಪತ್ರದಲ್ಲಿ ಬರೆಯಲಾಗಿದೆ” ಎಂದರು.

ಪೌಲನ ಬಂಧನ

26 ಆಗ ಪೌಲನು ಆ ನಾಲ್ಕುಮಂದಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಮರುದಿನ ಪೌಲನು, ಶುದ್ಧಾಚಾರದ ವ್ರತದಲ್ಲಿ ಭಾಗವಹಿಸಿದನು. ಬಳಿಕ ಅವನು ದೇವಾಲಯಕ್ಕೆ ಹೋಗಿ ಶುದ್ಧಾಚಾರದ ಸಂಪ್ರದಾಯ ಮುಗಿಯುವ ದಿನವನ್ನು ಪ್ರಕಟಿಸಿದನು. ಕೊನೆಯ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗಾಗಿಯೂ ಯಜ್ಞವನ್ನರ್ಪಿಸಬೇಕಾಗಿತ್ತು.

27 ಆ ಏಳು ದಿನಗಳ ಅವಧಿ ಮುಗಿಯುವುದರಲ್ಲಿತ್ತು. ಆದರೆ ಏಷ್ಯಾದಿಂದ ಬಂದಿದ್ದ ಕೆಲವು ಯೆಹೂದ್ಯರು ಪೌಲನನ್ನು ಕಂಡು ಜನಸಮೂಹವನ್ನು ಉದ್ದೇಶಿಸಿ, 28 “ಯೆಹೂದ್ಯ ಜನರೇ, ನಮಗೆ ಸಹಾಯಮಾಡಿ! ಮೋಶೆಯ ಧರ್ಮಶಾಸ್ತ್ರಕ್ಕೂ ನಮ್ಮ ಜನರಿಗೂ ಮತ್ತು ಈ ಸ್ಥಳಕ್ಕೂ (ದೇವಾಲಯ) ವಿರೋಧವಾಗಿ ಎಲ್ಲಾ ಕಡೆಗಳಲ್ಲಿ ಜನರಿಗೆ ಉಪದೇಶಿಸುತ್ತಿದ್ದವನು ಇವನೇ. ಈಗ ಇವನು ಕೆಲವು ಗ್ರೀಕರನ್ನು ದೇವಾಲಯದೊಳಕ್ಕೆ ಕರೆದುಕೊಂಡು ಬಂದಿದ್ದಾನೆ! ಈ ಪವಿತ್ರ ಸ್ಥಳವನ್ನು ಇವನು ಅಶುದ್ಧಗೊಳಿಸಿದ್ದಾನೆ!” ಎಂದು ಕೂಗಿಹೇಳಿ ಗಲಿಬಿಲಿ ಮಾಡಿದರು. 29 (ಜೆರುಸಲೇಮಿನಲ್ಲಿ ಪೌಲನೊಂದಿಗಿದ್ದ ತ್ರೊಫಿಮ ಎಂಬವನನ್ನು ಆ ಯೆಹೂದ್ಯರು ನೋಡಿದ್ದರು. ಎಫೆಸದ ತ್ರೊಫಿಮನು ಗ್ರೀಕನಾಗಿದ್ದನು. ಪೌಲನು ಇವನನ್ನು ಪವಿತ್ರ ಸ್ಥಳದೊಳಗೆ ಕರೆದುಕೊಂಡು ಹೋಗಿದ್ದಾನೆಂದು ಅವರು ಭಾವಿಸಿಕೊಂಡರು.)

30 ಜೆರುಸಲೇಮಿನ ಜನರೆಲ್ಲರು ಬಹು ಕೋಪಗೊಂಡರು. ಅವರೆಲ್ಲರು ಓಡಿಹೋಗಿ ಪೌಲನನ್ನು ಹಿಡಿದು ದೇವಾಲಯದೊಳಗಿಂದ ಎಳೆದುಕೊಂಡು ಬಂದರು. ಆ ಕೂಡಲೇ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. 31 ಅವರು ಪೌಲನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಇಡೀ ಪಟ್ಟಣದಲ್ಲೇ ಗಲಭೆಯುಂಟಾಗಿದೆ ಎಂಬ ಸುದ್ದಿಯು ಜೆರುಸಲೇಮಿನಲ್ಲಿದ್ದ ರೋಮ್ ಸೇನಾಧಿಪತಿಗೆ ತಿಳಿಯಿತು. 32 ತಕ್ಷಣವೇ ಅವನು ಕೆಲವು ಸೇನಾಧಿಕಾರಿಗಳನ್ನು ಮತ್ತು ಸೈನಿಕರನ್ನು ತನ್ನೊಂದಿಗೆ ಕರೆದುಕೊಂಡು ಜನಸಮೂಹದ ಕಡೆಗೆ ಹೋದನು. ಸೇನಾಧಿಪತಿಯನ್ನು ಮತ್ತು ಅವನ ಸೈನಿಕರನ್ನು ಕಂಡ ಜನರು ಪೌಲನಿಗೆ ಹೊಡೆಯುವುದನ್ನು ನಿಲ್ಲಿಸಿದರು.

33 ಸೇನಾಧಿಪತಿಯು ಹೋಗಿ ಪೌಲನನ್ನು ಬಂಧಿಸಿ ಎರಡು ಸರಪಣಿಗಳಿಂದ ಅವನನ್ನು ಕಟ್ಟಲು ಸೈನಿಕರಿಗೆ ಹೇಳಿದನು. ಬಳಿಕ ಸೇನಾಧಿಪತಿಯು, “ಈ ಮನುಷ್ಯನು ಯಾರು? ಇವನು ಏನು ತಪ್ಪು ಮಾಡಿದನು?” ಎಂದು ವಿಚಾರಿಸಿದನು. 34 ಅಲ್ಲಿದ್ದ ಜನರಲ್ಲಿ ಕೆಲವರು ಒಂದು ವಿಷಯದ ಬಗ್ಗೆ ಬೊಬ್ಬೆಹಾಕುತ್ತಿದ್ದರೆ, ಉಳಿದವರು ಇತರ ವಿಷಯಗಳ ಬಗ್ಗೆ ಬೊಬ್ಬೆಹಾಕುತ್ತಿದ್ದರು. ಈ ಗಲಿಬಿಲಿಯಿಂದಾಗಿಯೂ ಕೂಗಾಟದಿಂದಾಗಿಯೂ ಏನು ನಡೆಯಿತೆಂಬುದರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲಾಗಲಿಲ್ಲ. ಆದ್ದರಿಂದ ಸೇನಾಧಿಪತಿಯು ಪೌಲನನ್ನು ಸೈನ್ಯದ ಕೋಟೆಯೊಳಕ್ಕೆ ತೆಗೆದುಕೊಂಡು ಹೋಗಲು ಸೈನಿಕರಿಗೆ ತಿಳಿಸಿದನು. 35-36 ಎಲ್ಲಾ ಜನರು ಅವರನ್ನು ಹಿಂಬಾಲಿಸಿದರು. ಸೈನಿಕರು ಮೆಟ್ಟಿಲುಗಳ ಬಳಿಗೆ ಬಂದಾಗ ಪೌಲನನ್ನು ರಕ್ಷಿಸಲು ಹೊತ್ತುಕೊಂಡು ಹೋದರು. ಯಾಕೆಂದರೆ ಅವನಿಗೆ ಕೇಡುಮಾಡಲು ಸಿದ್ಧರಾಗಿದ್ದ ಜನರು, “ಅವನನ್ನು ಕೊಲ್ಲಿರಿ!” ಎಂದು ಕೂಗುತ್ತಿದ್ದರು.

37 ಸೈನಿಕರು ಪೌಲನನ್ನು ಸೈನ್ಯದ ಕೋಟೆಯೊಳಗೆ ಕೊಂಡೊಯ್ಯುತ್ತಿದ್ದಾಗ, ಪೌಲನು ಸೇನಾಧಿಪತಿಗೆ, “ನಾನು ನಿನ್ನೊಂದಿಗೆ ಸ್ವಲ್ಪ ಮಾತಾಡಬಹುದೇ?” ಎಂದು ಕೇಳಿದನು.

ಸೇನಾಧಿಪತಿಯು, “ಓಹೋ, ನಿನಗೆ ಗ್ರೀಕ್ ಭಾಷೆ ಗೊತ್ತಿದೆಯಾ? 38 ಹಾಗಾದರೆ, ನಾನು ಯೋಚಿಸಿದ ವ್ಯಕ್ತಿ ನೀನಲ್ಲ. ಸ್ವಲ್ಪಕಾಲದ ಹಿಂದೆ ಗಲಭೆ ಆರಂಭಿಸಿದ ಈಜಿಪ್ಟಿನವನೇ ನೀನೆಂದು ನಾನು ಭಾವಿಸಿದ್ದೆ. ಆ ಈಜಿಪ್ಟಿನವನು ನಾಲ್ಕುಸಾವಿರ ಮಂದಿ ಕೊಲೆಗಾರರನ್ನು ಮರಳುಗಾಡಿಗೆ ಕರೆದುಕೊಂಡು ಹೋದನು” ಎಂದು ಹೇಳಿದನು.

39 ಪೌಲನು, “ಇಲ್ಲ, ನಾನು ತಾರ್ಸದ ಯೆಹೂದ್ಯನು. ತಾರ್ಸವು ಸಿಲಿಸಿಯ ದೇಶದಲ್ಲಿದೆ. ನಾನು ಆ ಪ್ರಮುಖ ನಗರದ ಪ್ರಜೆ. ದಯವಿಟ್ಟು ಜನರೊಂದಿಗೆ ಮಾತಾಡಲು ನನಗೆ ಅಪ್ಪಣೆಯಾಗಲಿ” ಎಂದು ಹೇಳಿದನು.

40 ಜನರೊಂದಿಗೆ ಮಾತಾಡಲು ಸೇನಾಧಿಪತಿ ಪೌಲನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಪೌಲನು ಮೆಟ್ಟಿಲುಗಳ ಮೇಲೆ ನಿಂತುಕೊಂಡನು. ಬಳಿಕ, ಮೌನವಾಗಿರುವಂತೆ ಜನರಿಗೆ ಕೈಸನ್ನೆ ಮಾಡಿದನು. ಜನರು ಮೌನವಾದರು. ಆಗ ಪೌಲನು ಅವರೊಂದಿಗೆ ಯೆಹೂದ್ಯರ ಭಾಷೆಯಲ್ಲಿ ಮಾತಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International