Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 16

ಸೇವಕಿಯಾಗಿದ್ದ ಹಾಗರಳು

16 ಸಾರಯಳು ಅಬ್ರಾಮನ ಹೆಂಡತಿ. ಆಕೆಗೆ ಮಕ್ಕಳಿರಲಿಲ್ಲ. ಸಾರಯಳಿಗೆ ಈಜಿಪ್ಟಿನ ಒಬ್ಬ ಸೇವಕಿಯಿದ್ದಳು. ಅವಳ ಹೆಸರು ಹಾಗರಳು. ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಪಡೆಯುವ ಅವಕಾಶವನ್ನು ಕೊಡಲಿಲ್ಲ. ಆದ್ದರಿಂದ ನನ್ನ ಸೇವಕಿಯಾದ ಹಾಗರಳ ಬಳಿಗೆ ಹೋಗು. ಆಕೆಯಲ್ಲಿ ಹುಟ್ಟುವ ಮಗುವನ್ನು ನನ್ನ ಮಗುವಂತೆ ಸ್ವೀಕರಿಸಿಕೊಳ್ಳುವೆನು” ಎಂದು ಹೇಳಿದಳು. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳಿಗೆ ವಿಧೇಯನಾದನು.

ಅಬ್ರಾಮನು ಕಾನಾನಿಗೆ ಬಂದು ಹತ್ತು ವರ್ಷಗಳಾದ ಮೇಲೆ ಇದು ನಡೆಯಿತು. ಹೀಗೆ ಸಾರಯಳು ತನ್ನ ಗಂಡನಾದ ಅಬ್ರಾಮನಿಗೆ ಹಾಗರಳನ್ನು ಕೊಟ್ಟಳು. ಹಾಗರಳು ಆಕೆಯ ಈಜಿಪ್ಟಿನ ಸೇವಕಿಯಾಗಿದ್ದಳು. ಹಾಗರಳು ಅಬ್ರಾಮನಿಂದ ಗರ್ಭಿಣಿಯಾದಾಗ ತನ್ನ ಯಜಮಾನಿಯಾದ ಸಾರಯಳನ್ನೇ ಕಡೆಗಣಿಸತೊಡಗಿದಳು. ಆಗ ಸಾರಯಳು ಅಬ್ರಾಮನಿಗೆ, “ನನ್ನ ಸಂಕಟಕ್ಕೆ ನೀನೇ ಕಾರಣ. ನಾನು ಅವಳನ್ನು ನಿನಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾಗಿದ್ದಾಳೆ ಮತ್ತು ನನ್ನನ್ನೇ ಕಡೆಗಣಿಸುತ್ತಿದ್ದಾಳೆ. ಯೆಹೋವನೇ ನನಗೂ ನಿನಗೂ ನ್ಯಾಯ ತೀರಿಸಲಿ” ಎಂದು ಹೇಳಿದಳು.

ಅದಕ್ಕೆ ಅಬ್ರಾಮನು ಸಾರಯಳಿಗೆ, “ನೀನು ಹಾಗರಳ ಯಜಮಾನಿ. ನೀನು ಅವಳಿಗೆ ಏನುಬೇಕಾದರೂ ಮಾಡಬಹುದು” ಎಂದು ಹೇಳಿದನು. ಆದ್ದರಿಂದ ಸಾರಯಳು ಹಾಗರಳನ್ನು ಶಿಕ್ಷಿಸಿದಳು. ಆಗ ಹಾಗರಳು ಓಡಿಹೋದಳು.

ಹಾಗರಳ ಮಗನಾದ ಇಷ್ಮಾಯೇಲ

ಯೆಹೋವನ ದೂತನು ಹಾಗರಳನ್ನು ಮರುಳುಗಾಡಿನ ಒರತೆಯೊಂದರ ಬಳಿಯಲ್ಲಿ ಕಂಡನು. ಆ ಒರತೆಯು ಶೂರಿಗೆ ಹೋಗುವ ದಾರಿಯ ಬಳಿಯಲ್ಲಿತ್ತು. ದೇವದೂತನು ಅವಳಿಗೆ, “ಹಾಗರಳೇ, ನೀನು ಸಾರಯಳ ಸೇವಕಿಯಾಗಿದ್ದರೂ ಯಾಕೆ ಇಲ್ಲಿರುವೆ? ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.

ಹಾಗರಳು, “ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಿರುವೆ” ಎಂದು ಹೇಳಿದಳು.

ಯೆಹೋವನ ದೂತನು ಹಾಗರಳಿಗೆ, “ಸಾರಯಳು ನಿನ್ನ ಯಜಮಾನಿ. ನೀನು ಆಕೆಯ ಬಳಿಗೆ ಹಿಂತಿರುಗಿ ಹೋಗಿ ಆಕೆಗೆ ವಿಧೇಯಳಾಗಿರು” ಎಂದು ಹೇಳಿದನು. 10 ಇದಲ್ಲದೆ ಯೆಹೋವನ ದೂತನು ಹಾಗರಳಿಗೆ, “ನಾನು ನಿನ್ನ ಸಂತತಿಯವರನ್ನು ಅಸಂಖ್ಯಾತರನ್ನಾಗಿ ಮಾಡುವೆನು” ಅಂದನು.

11 ಇದಲ್ಲದೆ ದೇವದೂತನು ಆಕೆಗೆ,

“ಹಾಗರಳೇ, ಈಗ ನೀನು ಗರ್ಭಿಣಿಯಾಗಿರುವೆ;
    ನಿನಗೆ ಒಬ್ಬ ಮಗನು ಹುಟ್ಟುವನು.
ನೀನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಡಬೇಕು;
    ಯಾಕೆಂದರೆ ಯೆಹೋವನು ನಿನ್ನ ಕಷ್ಟಗಳನ್ನು ಕೇಳಿದ್ದಾನೆ; ಆತನು ನಿನಗೆ ಸಹಾಯ ಮಾಡುವನು.
12 ಇಷ್ಮಾಯೇಲನು ಕಾಡುಕತ್ತೆಯಂತೆ
    ಗಡುಸಾಗಿದ್ದು ಸ್ವತಂತ್ರವಾಗಿರುವನು.
ಅವನು ಪ್ರತಿಯೊಬ್ಬರಿಗೂ ವಿರೋಧವಾಗಿರುವನು;
    ಪ್ರತಿಯೊಬ್ಬರೂ ಅವನಿಗೆ ವಿರೋಧವಾಗಿರುವರು.
ಅವನು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಾ
    ತನ್ನ ಸಹೋದರರ ಸಮೀಪದಲ್ಲಿ ವಾಸಿಸಿದರೂ ಅವರಿಗೆ ವಿರೋಧವಾಗಿರುವನು.”

ಎಂದು ಹೇಳಿ ಹೊರಟುಹೋದನು.

13 ಯೆಹೋವನು ತನ್ನೊಡನೆ ಮಾತಾಡಿದ್ದರಿಂದ ಹಾಗರಳು, “ಈ ಸ್ಥಳದಲ್ಲಿಯೂ ದೇವರು ನನ್ನನ್ನು ನೋಡಿ ನನಗಾಗಿ ಚಿಂತಿಸುತ್ತಾನೆ ಎಂದುಕೊಂಡು ಆತನಿಗೆ ‘ನನ್ನನ್ನು ನೋಡುವ ದೇವರು’” ಎಂದು ಹೆಸರಿಟ್ಟಳು. 14 ಆದ್ದರಿಂದ ಆ ಬಾವಿಗೆ ಬೀರ್‌ಲಹೈರೋಯಿ (ಬೀರ್‌ಲಹೈರೋಯಿ. ಇದರರ್ಥ: “ನನ್ನನ್ನು ನೋಡುವ ಜೀವಸ್ವರೂಪನ ಬಾವಿ.”) ಎಂದು ಹೆಸರಾಯಿತು. ಈ ಬಾವಿಯು ಕಾದೇಶಿಗೂ ಬೆರೆದಿಗೂ ನಡುವೆ ಇದೆ.

15 ಹಾಗರಳು ಅಬ್ರಾಮನ ಮಗನಿಗೆ ಜನ್ಮಕೊಟ್ಟಳು. ಅಬ್ರಾಮನು ಆ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. 16 ಅಬ್ರಾಮನಿಗೆ ಎಂಭತ್ತಾರು ವರ್ಷವಾಗಿದ್ದಾಗ ಹಾಗರಳಲ್ಲಿ ಇಷ್ಮಾಯೇಲನು ಜನಿಸಿದನು.

ಮತ್ತಾಯ 15

ದೇವರ ಆಜ್ಞೆ ಮತ್ತು ಮನುಷ್ಯರ ನಿಯಮ

(ಮಾರ್ಕ 7:1-23)

15 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಯೇಸುವಿನ ಬಳಿಗೆ ಬಂದು, “ನಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯಗಳಿಗೆ ನಿನ್ನ ಶಿಷ್ಯರು ಏಕೆ ವಿಧೇಯರಾಗಿರುವುದಿಲ್ಲ? ನಿನ್ನ ಶಿಷ್ಯರು ಊಟ ಮಾಡುವುದಕ್ಕೆ ಮುಂಚೆ ಕೈ ತೊಳೆಯುವುದಿಲ್ಲವೇಕೆ?” ಎಂದು ಕೇಳಿದರು.

ಯೇಸು, “ನಿಮ್ಮ ಸಂಪ್ರದಾಯಗಳನ್ನು ಅನುಸರಿಸಲು ದೇವರ ಆಜ್ಞೆಗೆ ಅವಿಧೇಯರಾಗುವುದೇಕೆ? ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’(A) ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’(B) ಎಂಬುದೂ ದೇವರ ಆಜ್ಞೆ. ಆದರೆ ಒಬ್ಬ ವ್ಯಕ್ತಿಯು ತನ್ನ ತಂದೆಗಾಗಲಿ ತಾಯಿಗಾಗಲಿ ‘ನಿಮಗೆ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ, ಏಕೆಂದರೆ ನನ್ನಲ್ಲಿರುವ ಪ್ರತಿಯೊಂದು ದೇವರಿಗೆ ಪ್ರತಿಷ್ಠಿತವಾಗಿದೆ’ ಎಂದು ಹೇಳಿದರೆ, ಅವನು ತನ್ನ ತಂದೆಯನ್ನು ಗೌರವಿಸಬೇಕಿಲ್ಲ ಎಂದು ನೀವು ಬೋಧಿಸುತ್ತೀರಿ. ಹೀಗಿರಲು ನಿಮ್ಮ ಸಂಪ್ರದಾಯವೇ ದೇವರ ಆಜ್ಞೆಯನ್ನು ತಳ್ಳಿಹಾಕಿದೆ. ನೀವು ಕಪಟಿಗಳು. ಯೆಶಾಯನು ನಿಮ್ಮನ್ನು ಕುರಿತು ಸರಿಯಾಗಿ ಹೇಳಿದ್ದಾನೆ. ಅದೇನೆಂದರೆ:

‘ಇವರು ನನ್ನನ್ನು ಮಾತಿನಿಂದ ಗೌರವಿಸುತ್ತಾರೆ.
    ಇವರ ಮನಸ್ಸಾದರೋ ನನಗೆ ದೂರವಾಗಿದೆ.
ಇವರು ನನ್ನನ್ನು ಆರಾಧಿಸುವುದೂ ನಿರರ್ಥಕ.
    ಇವರು ಮನುಷ್ಯರ ಕಟ್ಟಳೆಗಳನ್ನೇ ಉಪದೇಶಿಸುತ್ತಾರೆ.’(C)

10 ಯೇಸು ಜನರನ್ನು ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಆಲಿಸಿರಿ ಮತ್ತು ಅರ್ಥಮಾಡಿಕೊಳ್ಳಿರಿ. 11 ಒಬ್ಬನು ಕಲುಷಿತನಾಗುವುದು ತನ್ನ ಬಾಯಿಂದ ತಿನ್ನುವ ಪದಾರ್ಥಗಳಿಂದಲ್ಲ. ಅವನ ಬಾಯಿಂದ ಬರುವ ಕೆಟ್ಟಮಾತುಗಳೇ ಅವನನ್ನು ಕಲುಷಿತಗೊಳಿಸುತ್ತವೆ” ಎಂದು ಹೇಳಿದನು.

12 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಹೇಳಿದ್ದನ್ನು ಕೇಳಿ ಫರಿಸಾಯರು ಬೇಸರಗೊಂಡದ್ದು ನಿನಗೆ ತಿಳಿಯಿತೋ?” ಎಂದು ಕೇಳಿದರು.

13 ಯೇಸು, “ಪರಲೋಕದಲ್ಲಿರುವ ನನ್ನ ತಂದೆ ನೆಡದಿರುವ ಪ್ರತಿಯೊಂದು ಗಿಡವನ್ನು ಬೇರಿನೊಂದಿಗೆ ಕಿತ್ತುಹಾಕಲಾಗುವುದು. 14 ಫರಿಸಾಯರಿಂದ ದೂರವಾಗಿರಿ. ಅವರೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಹಳ್ಳದಲ್ಲಿ ಬೀಳುವರು” ಎಂದು ಉತ್ತರಕೊಟ್ಟನು.

15 ಆಗ ಪೇತ್ರನು, “ನೀನು ಜನರಿಗೆ ಮೊದಲು ಹೇಳಿದ್ದನ್ನು ನಮಗೆ ವಿವರಿಸು” ಎಂದನು.

16 ಯೇಸು, “ನಿಮಗೆ ಇನ್ನೂ ಅರ್ಥವಾಗುವುದಿಲ್ಲವೇ? 17 ಒಬ್ಬ ಮನುಷ್ಯನ ಬಾಯಿಂದ ಆಹಾರ ಹೊಟ್ಟೆಯೊಳಕ್ಕೆ ಹೋಗುತ್ತದೆ. ನಂತರ ಅದು ದೇಹದಿಂದ ಹೊರಗೆ ಹೋಗಿಬಿಡುತ್ತದೆ. ಇದು ನಿಮಗೆ ತಿಳಿದೇ ಇದೆ. 18 ಆದರೆ ಒಬ್ಬ ಮನುಷ್ಯನ ಬಾಯಿಂದ ಹೊರಡುವ ಕೆಟ್ಟಮಾತುಗಳು ಅವನ ಆಲೋಚನೆಯಿಂದ ಉದ್ಭವಿಸಿ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 19 ಮನುಷ್ಯನ ಮನಸ್ಸಿನಲ್ಲಿ ದುರಾಲೋಚನೆ, ಕೊಲೆ, ವ್ಯಭಿಚಾರ, ಸೂಳೆಗಾರಿಕೆ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ಬೈಗಳು ಹೊರಟುಬರುತ್ತವೆ. 20 ಇವು ಮನುಷ್ಯನನ್ನು ಅಶುದ್ಧನನ್ನಾಗಿ ಮಾಡುತ್ತವೆ. ಆದರೆ ಊಟಕ್ಕೆ ಮೊದಲು ಕೈತೊಳೆಯದ ಮಾತ್ರಕ್ಕೆ ಮನುಷ್ಯನೇನೂ ಅಶುದ್ಧನಾಗುವುದಿಲ್ಲ” ಎಂದು ಹೇಳಿದನು.

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸು ಮಾಡಿದ ಸಹಾಯ

(ಮಾರ್ಕ 7:24-30)

21 ಯೇಸು ಆ ಸ್ಥಳವನ್ನು ಬಿಟ್ಟು, ಟೈರ್ ಮತ್ತು ಸೀದೋನ್‌ಗಳ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. 22 ಆ ಸ್ಥಳದಿಂದ ಕಾನಾನ್ಯಳಾದ ಒಬ್ಬ ಸ್ತ್ರೀ ಯೇಸುವಿನ ಬಳಿಗೆ ಬಂದು, “ಪ್ರಭುವೇ, ದಾವೀದನ ಮಗನೇ, ದಯವಿಟ್ಟು ನನಗೆ ಕರುಣೆ ತೋರು! ನನ್ನ ಮಗಳಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಆಕೆ ಬಹಳ ಸಂಕಟಪಡುತ್ತಿದ್ದಾಳೆ” ಎಂದು ಗಟ್ಟಿಯಾಗಿ ಕೂಗಿಕೊಂಡಳು.

23 ಆದರೆ ಯೇಸು ಆ ಸ್ತ್ರೀಗೆ ಉತ್ತರ ಕೊಡಲಿಲ್ಲ. ಆದ್ದರಿಂದ ಶಿಷ್ಯರು ಯೇಸುವಿನ ಬಳಿಗೆ ಬಂದು, “ಆ ಸ್ತ್ರೀಗೆ ಹೊರಟುಹೋಗುವುದಕ್ಕೆ ಹೇಳು. ಆಕೆಯು ಕೂಗಿಕೊಂಡು ನಮ್ಮ ಹಿಂದೆಯೇ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು.

24 ಯೇಸು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಮಾತ್ರ ದೇವರು ನನ್ನನ್ನು ಕಳುಹಿಸಿದನು” ಎಂದನು.

25 ಆಗ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನನಗೆ ಸಹಾಯ ಮಾಡು” ಎಂದು ಕೇಳಿದಳು.

26 ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.

27 ಆ ಸ್ತ್ರೀಯು, “ಹೌದು ಪ್ರಭುವೇ, ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ಆಹಾರದ ತುಂಡುಗಳನ್ನು ತಿನ್ನುತ್ತವೆಯಲ್ಲಾ” ಎಂದಳು.

28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.

ಯೇಸುವಿನಿಂದ ಅನೇಕರಿಗೆ ಸ್ವಸ್ಥತೆ

29 ಆಗ ಯೇಸು ಆ ಸ್ಥಳವನ್ನು ಬಿಟ್ಟು ಗಲಿಲಾಯ ಸರೋವರದ ದಡಕ್ಕೆ ಹೋಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡನು.

30 ಜನರು ಗುಂಪುಗುಂಪಾಗಿ ಯೇಸುವಿನ ಬಳಿಗೆ ಬಂದರು. ಅವರು ಅನೇಕ ಬಗೆಯ ಕಾಯಿಲೆಯವರನ್ನು ಕರೆದುತಂದು, ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಅಲ್ಲಿ ಅಂಗವಿಕಲರು, ಕುರುಡರು, ಕುಂಟರು, ಕಿವುಡರು ಮತ್ತು ಇತರ ಅನೇಕ ಜನರಿದ್ದರು. ಆತನು ಇವರನ್ನೆಲ್ಲರನ್ನು ಗುಣಪಡಿಸಿದನು. 31 ಮೂಕರು ಮತ್ತೆ ಮಾತಾಡುವುದನ್ನೂ ಕುಂಟರು ನಡೆದಾಡುವುದನ್ನೂ ಅಂಗವಿಕಲರು ಸ್ವಸ್ಥರಾದದ್ದನ್ನೂ ಕುರುಡರಿಗೆ ಮತ್ತೆ ದೃಷ್ಟಿ ಬಂದದ್ದನ್ನೂ ಕಂಡು ಜನರೆಲ್ಲರೂ ಅತ್ಶಾಶ್ಚರ್ಯಪಟ್ಟು ಇಸ್ರೇಲರ ದೇವರನ್ನು ಕೊಂಡಾಡಿದರು.

ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮಾರ್ಕ 8:1-10)

32 ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ದುಃಖಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಈಗ ಇವರಿಗೆ ಊಟಕ್ಕೆ ಏನೂ ಇಲ್ಲ. ಇವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಮನಸ್ಸಿಲ್ಲ. ಇವರು ಮನೆಗೆ ಹೋಗುತ್ತಿರುವಾಗ ಬಳಲಿಹೋಗಬಹುದು” ಎಂದು ಹೇಳಿದನು.

33 ಶಿಷ್ಯರು ಯೇಸುವಿಗೆ, “ಈ ಜನರೆಲ್ಲರಿಗೂ ಊಟಕ್ಕೆ ಬೇಕಾಗುವಷ್ಟು ರೊಟ್ಟಿ ನಮಗೆ ಎಲ್ಲಿ ಸಿಕ್ಕುತ್ತದೆ? ಇಲ್ಲಿಗೆ ಯಾವ ಊರೂ ಸಮೀಪವಾಗಿಲ್ಲ” ಎಂದು ಹೇಳಿದರು.

34 ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು.

ಶಿಷ್ಯರು, “ನಮ್ಮಲ್ಲಿ ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳಿವೆ” ಎಂದರು.

35 ಆಗ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೆ ಆತನು ಆಜ್ಞಾಪಿಸಿ, 36 ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅವುಗಳನ್ನು ಜನರಿಗೆ ಹಂಚಿದರು. 37 ಜನರೆಲ್ಲರೂ ತಿಂದು ತೃಪ್ತರಾದರು. ಬಳಿಕ ತಿನ್ನಲಾರದೆ ಉಳಿದುಹೋದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 38 ಅಂದು ಊಟ ಮಾಡಿದ್ದವರಲ್ಲಿ ಗಂಡಸರೇ ಸುಮಾರು ನಾಲ್ಕುಸಾವಿರ ಮಂದಿಯಿದ್ದರು. ಇವರಲ್ಲದೆ ಹೆಂಗಸರು ಮತ್ತು ಮಕ್ಕಳು ಸಹ ಊಟಮಾಡಿದರು. 39 ಬಳಿಕ ಯೇಸು ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಅವರಿಗೆ ಹೇಳಿ ಕಳುಹಿಸಿದನು. ಅನಂತರ ದೋಣಿಯನ್ನು ಹತ್ತಿ ಮಗದಾನ್ ಎಂಬ ಪ್ರಾಂತ್ಯಕ್ಕೆ ಹೋದನು.

ನೆಹೆಮೀಯ 5

ಬಡಜನರಿಗೆ ನೆಹೆಮೀಯನ ಸಹಾಯ

ಯೆಹೂದ್ಯರಲ್ಲಿ ಎಷ್ಟೋ ಬಡಜನರು ತಮ್ಮ ಬಂಧುಗಳ ವಿಷಯದಲ್ಲಿ ದೂರು ಹೇಳಲಾರಂಭಿಸಿದರು. ಕೆಲವರು ಹೀಗಂದರು: “ನಮ್ಮ ಮನೆಯಲ್ಲಿ ಬಹಳ ಮಕ್ಕಳಿದ್ದಾರೆ. ನಮಗೆ ಊಟಮಾಡಲು ಸಾಕಷ್ಟು ದವಸಧಾನ್ಯವಿಲ್ಲ; ಹೀಗಿರಲು ನಾವು ಜೀವಂತವಾಗಿ ಉಳಿಯುವ ಸಾಧ್ಯತೆಯಿಲ್ಲ.”

ಇನ್ನು ಕೆಲವರು, “ನಮಗೀಗ ಬರಗಾಲ ಪ್ರಾಪ್ತಿಯಾಗಿದೆ. ನಮಗೆ ದವಸಧಾನ್ಯ ಕೊಂಡುಕೊಳ್ಳಲು ನಮ್ಮ ಹೊಲಗದ್ದೆಗಳನ್ನು ಮಾರಬೇಕಾಗುತ್ತದೆ” ಅಂದರು.

ಇನ್ನೂ ಕೆಲವರು, “ನಮ್ಮ ಹೊಲಗದ್ದೆಗಳ ಮೇಲೆ ಅರಸನಿಗೆ ತೆರಿಗೆ ಕೊಡಬೇಕಾಗಿದೆ. ಆದರೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ಬೇರೆಯವರಿಂದ ಎರವಲು ಪಡೆದುಕೊಂಡು ಕೊಡಬೇಕಾಗಿದೆ” ಅಂದರು. “ಆ ಧನಿಕರನ್ನು ನೋಡಿರಿ. ನಾವೂ ಅವರಂತೆಯೇ ಇದ್ದೇವೆ. ನಮ್ಮ ಮಕ್ಕಳು ಅವರ ಮಕ್ಕಳಂತೆಯೇ ಇದ್ದಾರೆ. ಆದರೆ ನಾವು ಮಾತ್ರ ನಮ್ಮ ಗಂಡುಹೆಣ್ಣು ಮಕ್ಕಳನ್ನು ಗುಲಾಮರಾಗಿ ಮಾರುವ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ ಕೆಲವರು ಆಗಲೇ ತಮ್ಮ ಹೆಣ್ಣುಮಕ್ಕಳನ್ನು ಗುಲಾಮರನ್ನಾಗಿ ಮಾರಿದ್ದಾರೆ. ನಮಗೆ ಬೇರೆ ಮಾರ್ಗವೇ ಇಲ್ಲ. ನಮ್ಮ ಹೊಲಗದ್ದೆಗಳನ್ನು ಯಾವಾಗಲೋ ಕಳೆದುಕೊಂಡಿದ್ದೇವೆ.”

ನಾನು ಅವರ ದೂರುಗಳನ್ನು ಕೇಳಿಸಿಕೊಂಡಾಗ ಬಹಳವಾಗಿ ಸಿಟ್ಟುಗೊಂಡೆನು. ನನ್ನ ಕೋಪವು ಶಾಂತವಾದ ಬಳಿಕ ಧನಿಕರ ಮತ್ತು ಅಧಿಕಾರಿಗಳ ಬಳಿಗೆ ಹೋಗಿ, “ನೀವು ನಿಮ್ಮ ಸ್ವಂತ ಜನರಿಗೆ ಕೊಟ್ಟಿರುವ ಸಾಲಕ್ಕೆ ಬಡ್ಡಿಯನ್ನು ಕೊಡಲು ಬಲವಂತ ಮಾಡುತ್ತಿದ್ದೀರಿ. ನೀವು ಕೂಡಲೇ ಅದನ್ನು ನಿಲ್ಲಿಸಬೇಕು” ಎಂದೆನು. ಅನಂತರ ನಾನು ಎಲ್ಲಾ ಜನರನ್ನು ಒಟ್ಟುಗೂಡಿಸಿ, “ನಮ್ಮ ಯೆಹೂದಿ ಜನರನ್ನು ಪರದೇಶಗಳಲ್ಲಿ ಗುಲಾಮರನ್ನಾಗಿ ಮಾರಿದ್ದರು. ಅಂಥವರನ್ನು ನಾವು ಕ್ರಯಕೊಟ್ಟು ಕೊಂಡುಕೊಂಡು ಅವರನ್ನು ಗುಲಾಮತನದಿಂದ ಬಿಡುಗಡೆ ಮಾಡಿಸಿದೆವು. ಆದರೆ ನೀವು ಈಗ ಮತ್ತೆ ಗುಲಾಮರನ್ನಾಗಿ ಮಾಡುತ್ತಿದ್ದೀರಿ” ಎಂದೆನು.

ಸೇರಿಬಂದಿದ್ದ ಶ್ರೀಮಂತರೂ ಅಧಿಕಾರಿಗಳೂ ಸುಮ್ಮನೆ ಬಾಯಿ ಮುಚ್ಚಿಕೊಂಡರು. ಅವರಿಗೆ ಏನೂ ಹೇಳಲಿಕ್ಕೂ ಆಗಲಿಲ್ಲ. ನಾನು ಹೇಳುವುದನ್ನು ಮುಂದುವರಿಸುತ್ತಾ, “ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ದೇವರಿಗೆ ಭಯಪಟ್ಟು ಆತನನ್ನು ಗೌರವಿಸಬೇಕೆಂದು ನಿಮಗೆ ಗೊತ್ತಿದೆ. ಇತರ ಜನರು ಮಾಡುವ ನಾಚಿಕೆಕರವಾದ ಕೆಲಸವನ್ನು ನೀವು ಮಾಡಬಾರದು. 10 ನನ್ನ ಜನರು, ನನ್ನ ಬಂಧುಗಳು ಮತ್ತು ನಾನು ಹಣವನ್ನು ದವಸಧಾನ್ಯಗಳನ್ನು ಎರವಲಾಗಿ ಕೊಡುತ್ತೇವೆ. ಆದರೆ ಅವರಿಂದ ಬಡ್ಡಿಯನ್ನು ವಸೂಲು ಮಾಡುವುದಿಲ್ಲ. ಸಾಲ ಪಡೆದುಕೊಂಡವರಿಂದ ಬಡ್ಡಿಯನ್ನು ಬಲವಂತದಿಂದ ವಸೂಲು ಮಾಡುವುದನ್ನು ನಾವು ನಿಲ್ಲಿಸಬೇಕು. 11 ಅವರಿಂದ ಕಿತ್ತುಕೊಂಡ ಹೊಲಗದ್ದೆಗಳನ್ನು, ದ್ರಾಕ್ಷಾತೋಟ, ಎಣ್ಣೆಮರಗಳ ತೋಟ ಮತ್ತು ಅವರ ಮನೆಗಳನ್ನು ಅವರಿಗೆ ಈಗಲೇ ಹಿಂದಕ್ಕೆ ಕೊಡಿರಿ. ಅವರಿಂದ ವಸೂಲಿ ಮಾಡಿದ ಬಡ್ಡಿಯನ್ನು ಹಿಂದಕ್ಕೆ ಕೊಡಿರಿ. ನೀವು ಯಾವ ಯಾವದಕ್ಕೆ ಬಡ್ಡಿ ವಸೂಲಿ ಮಾಡಿರುವಿರೋ ಎಲ್ಲವನ್ನು ಹಿಂದಕ್ಕೆ ಕೊಡಿರಿ” ಎಂದು ಹೇಳಿದೆನು.

12 ಆಗ ಶ್ರೀಮಂತರೂ ಅಧಿಕಾರಿಗಳೂ, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ನಾವು ಹೆಚ್ಚೇನೂ ಕೇಳುವುದಿಲ್ಲ. ನೆಹೆಮೀಯನೇ, ನೀನು ಹೇಳಿದಂತೆಯೇ ನಾವು ಮಾಡುತ್ತೇವೆ” ಎಂದರು.

ಆಗ ನಾನು ದೇವರ ಮುಂದೆ ಅವರಿಂದ ಪ್ರತಿಜ್ಞೆ ಮಾಡಿಸಲು ಯಾಜಕರನ್ನು ಕರೆದೆನು. 13 ನಂತರ ನಾನು ನನ್ನ ಉಡುಪಿನ ನೆರಿಗೆಯನ್ನು ಝಾಡಿಸಿ, “ತಾನು ಮಾಡಿದ ಪ್ರತಿಜ್ಞೆಯಂತೆ ನಡೆಯದವನನ್ನು ದೇವರು ಅವನ ಮನೆಯಿಂದ ಝಾಡಿಸಿಬಿಡಲಿ; ಅವನು ತಾನು ಗಳಿಸಿದ್ದೆಲ್ಲವನ್ನು ಕಳೆದುಕೊಳ್ಳಲಿ” ಎಂದು ಹೇಳಿದಾಗ ಜನರೆಲ್ಲರೂ “ಆಮೆನ್” ಅಂದರು; ಯೆಹೋವನನ್ನು ಸ್ತುತಿಸಿದರು. ತಾವು ಮಾಡಿದ ಪ್ರತಿಜ್ಞೆಯಂತೆ ನಡೆದುಕೊಂಡರು.

14 ಯೆಹೂದ ಪ್ರಾಂತ್ಯಕ್ಕೆ ನನ್ನನ್ನು ರಾಜ್ಯಪಾಲನಾಗಿ ನೇಮಿಸಿದಂದಿನಿಂದ, ನಾನಾಗಲಿ ನನ್ನ ಸಹೋದರರಾಗಲಿ ರಾಜ್ಯಪಾಲರಿಗಾಗಿ ಪ್ರತ್ಯೇಕಿಸಿದ ಆಹಾರವನ್ನು ತಿನ್ನಲಿಲ್ಲ; ನನಗಾಗಿ ಆಹಾರವನ್ನು ಕೊಂಡುಕೊಳ್ಳಲು ಜನರಿಂದ ತೆರಿಗೆ ವಸೂಲಿಮಾಡಲಿಲ್ಲ. ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆ ವರ್ಷದ ತನಕ ನಾನು ರಾಜ್ಯಪಾಲನಾಗಿದ್ದೆನು. ಹೀಗೆ ಹನ್ನೆರಡು ವರ್ಷ ಯೆಹೂದದ ರಾಜ್ಯಪಾಲನಾಗಿದ್ದೆನು. 15 ನನಗಿಂತ ಮೊದಲು ರಾಜ್ಯಪಾಲರಾಗಿದ್ದವರು ಜನರನ್ನು ತುಂಬಾ ಕಷ್ಟಕ್ಕೆ ಒಳಪಡಿಸಿದ್ದರು. ಪ್ರತಿಯೊಬ್ಬರು ಒಂದು ಪೌಂಡ್ ಬೆಳ್ಳಿಯನ್ನೂ ಆಹಾರವನ್ನೂ ದ್ರಾಕ್ಷಾರಸವನ್ನೂ ಕೊಡಬೇಕಿತ್ತು. ಆ ರಾಜ್ಯಪಾಲರ ಅಧಿಕಾರಿಗಳು ಸಹ ಜನರ ಮೇಲೆ ದೊರೆತನ ನಡೆಸಿ ಅವರ ಜೀವನವನ್ನು ಮತ್ತಷ್ಟು ಕಠಿಣಗೊಳಿಸಿದರು. ಆದರೆ ದೇವರಲ್ಲಿ ಭಯಭಕ್ತಿ ಇದ್ದುದರಿಂದ ನಾನು ಆ ರೀತಿ ಮಾಡಲಿಲ್ಲ. 16 ಜೆರುಸಲೇಮಿನ ಗೋಡೆ ಕಟ್ಟುವ ಕೆಲಸದಲ್ಲಿ ನಾನು ತುಂಬಾ ಪ್ರಯಾಸಪಟ್ಟೆನು. ಗೋಡೆಯ ನಿರ್ಮಾಣ ಕೆಲಸಕ್ಕಾಗಿ ನನ್ನ ಜನರೆಲ್ಲರೂ ಒಟ್ಟಾಗಿ ಸೇರಿದರು. ನಾವು ಯಾರಿಂದಲೂ ಭೂಮಿಯನ್ನು ಕಿತ್ತುಕೊಳ್ಳಲಿಲ್ಲ.

17 ಇಷ್ಟೇ ಅಲ್ಲದೆ ಯಾವಾಗಲೂ ನೂರೈವತ್ತು ಮಂದಿ ಯೆಹೂದ್ಯರಿಗೆ ನನ್ನ ಮೇಜಿನ ಮೇಲೆ ಊಟಕ್ಕೆ ಬಡಿಸುತ್ತಿದ್ದೆನು. ನಮ್ಮ ಸುತ್ತಲಿನ ಪ್ರಾಂತ್ಯಗಳಿಂದ ಬಂದ ಜನರೂ ನಮ್ಮೊಂದಿಗೆ ಊಟಮಾಡುತ್ತಿದ್ದರು. 18 ಪ್ರತಿದಿನ ನಮ್ಮ ಊಟಕ್ಕಾಗಿ ಒಂದು ಹೋರಿಯನ್ನು, ಆರು ಕೊಬ್ಬಿದ ಕುರಿಗಳನ್ನು ಮತ್ತು ಅನೇಕ ಕೋಳಿಗಳನ್ನು ಕೊಯ್ಯಲಾಗುತ್ತಿತ್ತು; ಹತ್ತುದಿನಕ್ಕೊಮ್ಮೆ ವಿವಿಧ ರೀತಿಯ ದ್ರಾಕ್ಷಾರಸವನ್ನು ಒದಗಿಸಿಕೊಡುತ್ತಿದ್ದೆನು. ಆದರೂ ರಾಜ್ಯಪಾಲನಿಗೆ ಸಲ್ಲಬೇಕಾಗಿದ್ದ ಆಹಾರಪದಾರ್ಥಗಳನ್ನು ನಾನೆಂದೂ ಕೇಳಲಿಲ್ಲ; ಅದಕ್ಕಾಗಿ ಜನರಿಂದ ತೆರಿಗೆ ತೆಗೆದುಕೊಳ್ಳಲಿಲ್ಲ. ಯಾಕೆಂದರೆ ನನ್ನ ಜನರು ಮಾಡುವ ಕೆಲಸವು ತುಂಬಾ ಪ್ರಯಾಸಕರವಾದದ್ದೆಂದು ನನಗೆ ಗೊತ್ತಿತ್ತು. 19 ದೇವರೇ, ನಾನು ಈ ಜನರಿಗಾಗಿ ಮಾಡಿರುವ ಒಳ್ಳೆಯದನ್ನೆಲ್ಲಾ ಜ್ಞಾಪಿಸಿಕೊ.

ಅಪೊಸ್ತಲರ ಕಾರ್ಯಗಳು 15

ಜೆರುಸಲೇಮಿನಲ್ಲಿ ಸಮ್ಮೇಳನ

15 ಬಳಿಕ ಕೆಲವು ಜನರು ಜುದೇಯದಿಂದ ಅಂತಿಯೋಕ್ಯಕ್ಕೆ ಬಂದರು. “ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳಬೇಕೆಂದು ಮೋಶೆಯೇ ಹೇಳಿದ್ದಾನೆ” ಎಂದು ಅವರು ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಉಪದೇಶಿಸತೊಡಗಿದರು. ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು.

ಅಂತೆಯೇ ಸಭೆಯು ಇವರನ್ನು ಕಳುಹಿಸಿತು. ಇವರು ಫೆನಿಷ್ಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣಮಾಡಿದರು. ಯೆಹೂದ್ಯರಲ್ಲದ ಜನರು ನಿಜದೇವರ ಕಡೆಗೆ ತಿರುಗಿಕೊಂಡಿದ್ದರ ಬಗ್ಗೆ ಈ ನಾಡುಗಳಲ್ಲಿ ವಿವರಿಸಿದರು. ಇದನ್ನು ಕೇಳಿ ಸಹೋದರರಿಗೂ ಬಹಳ ಸಂತೋಷವಾಯಿತು. ಪೌಲ ಬಾರ್ನಬರು ಮತ್ತು ಇತರರು ಜೆರುಸಲೇಮನ್ನು ತಲುಪಿದರು. ಅಪೊಸ್ತಲರು, ಹಿರಿಯರು ಮತ್ತು ಸಭೆಯವರು ಇವರನ್ನು ಸ್ವಾಗತಿಸಿದರು. ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಮತ್ತು ಇತರರು ವಿವರಿಸಿದರು. ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳಲ್ಲಿ ಕೆಲವರು ಫರಿಸಾಯರ ಗುಂಪಿಗೆ ಸೇರಿದವರಾಗಿದ್ದರು. ಅವರು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕು. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ನಾವು ಅವರಿಗೆ ಹೇಳಬೇಕು!” ಎಂದರು.

ಬಳಿಕ, ಅಪೊಸ್ತಲರು ಮತ್ತು ಹಿರಿಯರು ಈ ಸಮಸ್ಯೆಯನ್ನು ಪರಿಶೀಲಿಸಲು ಸೇರಿಬಂದರು. ದೀರ್ಘಚರ್ಚೆಯಾಯಿತು. ಬಳಿಕ ಪೇತ್ರ ಎದ್ದುನಿಂತು ಅವರಿಗೆ, “ನನ್ನ ಸಹೋದರರೇ, ನಿಮಗೇ ತಿಳಿದಿರುವಂತೆ, ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಬೋಧಿಸುವುದಕ್ಕಾಗಿ ನಿಮ್ಮ ಮಧ್ಯದೊಳಗಿಂದ ದೇವರು ನನ್ನನ್ನು ಬಹುದಿನಗಳ ಹಿಂದೆ ಆರಿಸಿಕೊಂಡನು. ಅವರು ನನ್ನಿಂದ ಸುವಾರ್ತೆಯನ್ನು ಕೇಳಿ ನಂಬಿಕೊಂಡರು. ಎಲ್ಲಾ ಜನರ ಆಲೋಚನೆಗಳನ್ನು ಬಲ್ಲ ದೇವರು ಯೆಹೂದ್ಯರಲ್ಲದ ಜನರನ್ನೂ ಸ್ವೀಕರಿಸಿಕೊಂಡನು. ದೇವರು ನಮಗೆ ಪವಿತ್ರಾತ್ಮನನ್ನು ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮನನ್ನು ಕೊಟ್ಟು ಇದನ್ನು ರುಜುವಾತುಪಡಿಸಿದ್ದಾನೆ. ದೇವರ ದೃಷ್ಟಿಯಲ್ಲಿ ಅವರಿಗೂ ನಮಗೂ ಯಾವ ವ್ಯತ್ಯಾಸವಿಲ್ಲ. ಅವರು ನಂಬಿಕೊಂಡಾಗ, ದೇವರು ಅವರ ಹೃದಯಗಳನ್ನು ಶುದ್ಧೀಕರಿಸಿದನು. 10 ಹೀಗಿರಲಾಗಿ, ಯೆಹೂದ್ಯರಲ್ಲದ ಸಹೋದರರ ಹೆಗಲ ಮೇಲೆ ಭಾರವಾದ ಹೊರೆಯನ್ನು[a] ಯಾಕೆ ಹೊರಿಸುತ್ತೀರಿ? ನೀವು ದೇವರನ್ನು ಸಿಟ್ಟಿಗೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ? ನಮಗಾಗಲಿ ನಮ್ಮ ಪಿತೃಗಳಿಗಾಗಲಿ ಈ ಹೊರೆಯನ್ನು ಹೊರವಷ್ಟು ಶಕ್ತಿ ಇರಲಿಲ್ಲ! 11 ಆದ್ದರಿಂದ ನಾವಾಗಲಿ ಇವರಾಗಲಿ ರಕ್ಷಣೆ ಹೊಂದುವುದು ಪ್ರಭುವಾದ ಯೇಸುವಿನ ಕೃಪೆಯಿಂದಲೇ ಎಂದು ನಾವು ನಂಬುತ್ತೇವೆ!” ಎಂದನು.

12 ಆಗ ಇಡೀ ಸಭೆಯು ಮೌನವಾಯಿತು. ಅವರು ಪೌಲ ಬಾರ್ನಬರಿಗೆ ಕಿವಿಗೊಟ್ಟರು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ದೇವರು ತಮ್ಮ ಮೂಲಕವಾಗಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳ ಮತ್ತು ಸೂಚಕಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಹೇಳಿದರು. 13 ಬಳಿಕ ಯಾಕೋಬನು, “ನನ್ನ ಸಹೋದರರೇ, ನನಗೆ ಕಿವಿಗೊಡಿರಿ. 14 ಯೆಹೂದ್ಯರಲ್ಲದ ಜನರಿಗೆ ದೇವರು ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆಂದು ಸೀಮೋನನು ನಮಗೆ ತಿಳಿಸಿದ್ದಾನೆ. ಮೊಟ್ಟಮೊದಲ ಬಾರಿಗೆ, ದೇವರು ಯೆಹೂದ್ಯರಲ್ಲದ ಜನರನ್ನು ಸ್ವೀಕರಿಸಿಕೊಂಡನು. ಅವರನ್ನು ತನ್ನ ಜನರನ್ನಾಗಿ ಮಾಡಿಕೊಂಡನು. 15 ಪ್ರವಾದಿಗಳ ಮಾತುಗಳು ಸಹ ಇದಕ್ಕೆ ಸಾಮರಸ್ಯವಾಗಿವೆ:

16 ‘ಇದಾದನಂತರ ನಾನು ಹಿಂತಿರುಗುವೆನು.
    ನಾನು ದಾವೀದನ ಮನೆಯನ್ನು ಮತ್ತೆ ಕಟ್ಟುವೆನು.
    ಅದು ಬಿದ್ದುಹೋಗಿದೆ.
ಆದರೆ ಕೆಡವಲ್ಪಟ್ಟ ಅವನ ಮನೆಯ ಚೂರುಗಳನ್ನು ನಾನು ಮತ್ತೆ ಒಂದುಗೂಡಿಸುವೆನು.
    ನಾನು ಅವನ ಮನೆಯನ್ನು ಹೊಸದು ಮಾಡುವೆನು.
17 ಬಳಿಕ ಇತರ ಜನರೆಲ್ಲರೂ ಪ್ರಭುವಿಗಾಗಿ ಹುಡುಕುವರು.
    ಯೆಹೂದ್ಯರಲ್ಲದ ಜನರೆಲ್ಲರೂ ಸಹ ನನ್ನ ಜನರೇ ಆಗಿದ್ದಾರೆ.
ಪ್ರಭುವೇ ಇದನ್ನು ಹೇಳಿದ್ದಾನೆ.
    ಈ ಕಾರ್ಯಗಳನ್ನೆಲ್ಲ ಮಾಡುವವನು ಆತನೇ.’(A)

18 ‘ಆದಿಯಿಂದಲೂ ಈ ಕಾರ್ಯಗಳನ್ನು ತಿಳಿಯಪಡಿಸಲಾಗಿದೆ.’[b]

19 “ಆದ್ದರಿಂದ, ದೇವರ ಕಡೆಗೆ ತಿರುಗಿಕೊಂಡ ಯೆಹೂದ್ಯರಲ್ಲದ ಸಹೋದರರಿಗೆ ನಾವು ತೊಂದರೆ ಕೊಡಬಾರದು. 20 ಅದಕ್ಕೆ ಬದಲಾಗಿ ನಾವು ಅವರಿಗೆ ಒಂದು ಪತ್ರವನ್ನು ಬರೆದು ಈ ವಿಷಯಗಳನ್ನು ತಿಳಿಸೋಣ:

ವಿಗ್ರಹಗಳಿಗೆ ಅರ್ಪಿಸಿದ ಆಹಾರವನ್ನು ತಿನ್ನಬೇಡಿರಿ. (ಈ ಆಹಾರ ಅಶುದ್ಧವಾದದ್ದು.)

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ. ರಕ್ತವನ್ನು ತಿನ್ನಬೇಡಿ.

ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

21 ಅವರು ಇವುಗಳನ್ನು ಮಾಡಕೂಡದು. ಏಕೆಂದರೆ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವಂಥ ಜನರು ಪ್ರತಿಯೊಂದು ಪಟ್ಟಣದಲ್ಲಿ ಇನ್ನೂ ಇದ್ದಾರೆ. ಅನೇಕ ವರ್ಷಗಳಿಂದ ಪ್ರತಿ ಸಬ್ಬತ್ ದಿನದಲ್ಲಿ ಮೋಶೆಯ ಮಾತುಗಳನ್ನು ಓದಲಾಗುತ್ತಿದೆ” ಎಂದು ಹೇಳಿದನು.

ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಪತ್ರ

22 ಅಪೊಸ್ತಲರು, ಹಿರಿಯರು ಮತ್ತು ಇಡೀ ಸಭೆಯವರು ಪೌಲ ಬಾರ್ನಬರೊಂದಿಗೆ ಕೆಲವು ಜನರನ್ನು ಅಂತಿಯೋಕ್ಯಕ್ಕೆ ಕಳುಹಿಸಬಯಸಿದರು. ತಮ್ಮವರೇ ಆದ ಕೆಲವರನ್ನು ಆರಿಸಿಕೊಳ್ಳಲು ಸಭೆಯು ನಿರ್ಧರಿಸಿತು. ಅವರು ಯೂದನನ್ನು (ಬಾರ್ಸಬನೆಂದೂ ಕರೆಯುತ್ತಿದ್ದರು) ಮತ್ತು ಸೀಲನನ್ನು ಆರಿಸಿಕೊಂಡರು. ಇವರು ಜೆರುಸಲೇಮಿನ ಸಭೆಯವರಲ್ಲಿ ಪ್ರಮುಖರಾಗಿದ್ದರು. 23 ಸಭೆಯು ಇವರ ಕೈಯಲ್ಲಿ ಪತ್ರವನ್ನು ಕಳುಹಿಸಿಕೊಟ್ಟಿತು. ಆ ಪತ್ರದಲ್ಲಿ ಹೀಗೆ ಬರೆದಿತ್ತು:

ಅಂತಿಯೋಕ್ಯ ಪಟ್ಟಣದಲ್ಲಿಯೂ ಸಿರಿಯ ಮತ್ತು ಸಿಲಿಸಿಯ ನಾಡುಗಳಲ್ಲಿಯೂ ಇರುವ ಯೆಹೂದ್ಯರಲ್ಲದ ಸಹೋದರರಿಗೆಲ್ಲಾ, ನಿಮ್ಮ ಸಹೋದರರಾದ ಅಪೊಸ್ತಲರೂ ಹಿರಿಯರೂ ಬರೆಯುವುದೇನೆಂದರೆ:

ಪ್ರಿಯ ಸಹೋದರರೇ,

24 ನಮ್ಮ ಸಮುದಾಯದಿಂದ ನಿಮ್ಮ ಬಳಿಗೆ ಬಂದ ಕೆಲವರು ನಿಮಗೆ ಕೆಲವು ಸಂಗತಿಗಳನ್ನು ಹೇಳುವುದರ ಮೂಲಕ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮಲ್ಲಿ ಗಲಿಬಿಲಿ ಉಂಟುಮಾಡಿದರೆಂಬ ಸಮಾಚಾರ ನಮಗೆ ತಿಳಿಯಿತು. ಆದರೆ ಹೀಗೆ ಮಾಡಬೇಕೆಂದು ನಾವು ಅವರಿಗೆ ಹೇಳಿರಲಿಲ್ಲ! 25 ಆದ್ದರಿಂದ ನಾವೆಲ್ಲರೂ ಕೆಲವರನ್ನು ಸರ್ವಾನುಮತದಿಂದ ಆರಿಸಿ ನಿಮ್ಮ ಬಳಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಿಯ ಸಹೋದರರಾದ ಬಾರ್ನಬ ಮತ್ತು ಪೌಲರೊಂದಿಗೆ ಅವರು ಬರುತ್ತಿದ್ದಾರೆ. 26 ಬಾರ್ನಬನು ಮತ್ತು ಪೌಲನು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಸೇವೆಗಾಗಿ ತಮ್ಮ ಜೀವಿತಗಳನ್ನೇ ಕೊಟ್ಟಿದ್ದಾರೆ. 27 ಆದ್ದರಿಂದ ನಾವು ಯೂದನನ್ನು ಮತ್ತು ಸೀಲನನ್ನು ಅವರೊಂದಿಗೆ ಕಳುಹಿಸಿದ್ದೇವೆ. ಕೆಳಕಂಡ ಸಂಗತಿಗಳನ್ನೆಲ್ಲ ಅವರು ನಿಮಗೆ ತಿಳಿಸುವರು. 28 ನಿಮಗೆ ಇನ್ನೂ ಹೆಚ್ಚಿನ ಭಾರಗಳು ಇರಕೂಡದೆಂಬುದು ಪವಿತ್ರಾತ್ಮನ ನಿರ್ಧಾರ. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನೀವು ಈ ನಿಯಮಗಳನ್ನು ಮಾತ್ರ ಅನುಸರಿಸಬೇಕಾಗಿದೆ:

29 ವಿಗ್ರಹಗಳಿಗೆ ಅರ್ಪಿಸಿರುವ ಆಹಾರವನ್ನು ತಿನ್ನಬೇಡಿ.

ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ.

ನೀವು ಇವುಗಳಿಂದ ದೂರವಿದ್ದರೆ ನಿಮಗೆ ಒಳ್ಳೆಯದಾಗುವುದು. ನಿಮಗೆ ಶುಭವಾಗಲಿ!

30 ಆದ್ದರಿಂದ ಪೌಲ ಬಾರ್ನಬರು ಮತ್ತು ಯೂದ ಸೀಲರು ಜೆರುಸಲೇಮಿನಿಂದ ಹೊರಟರು. ಅವರು ಅಂತಿಯೋಕ್ಯಕ್ಕೆ ಹೋಗಿ, ಅಲ್ಲಿ ವಿಶ್ವಾಸಿಗಳ ಸಭೆಸೇರಿಸಿ ಅವರಿಗೆ ಪತ್ರವನ್ನು ಕೊಟ್ಟರು. 31 ವಿಶ್ವಾಸಿಗಳು ಅದನ್ನು ಓದಿ ಬಹು ಸಂತೋಷಪಟ್ಟರು. ಆ ಪತ್ರವು ಅವರನ್ನು ಸಂತೈಸಿತು. 32 ಯೂದ ಸೀಲರು ಸಹ ಪ್ರವಾದಿಗಳಾಗಿದ್ದರು. ಅವರು ಅನೇಕ ಸಂಗತಿಗಳನ್ನು ಸಹೋದರರಿಗೆ ತಿಳಿಸಿ ಅವರನ್ನು ಬಲಪಡಿಸಿದರು. 33 ಯೂದ ಸೀಲರು ಸ್ವಲ್ಪಕಾಲ ಅಲ್ಲಿದ್ದು ಸಹೋದರರಿಂದ ಸಮಾಧಾನವೆಂಬ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಅವರು ತಮ್ಮನ್ನು ಕಳುಹಿಸಿಕೊಟ್ಟಿದ್ದ ಜೆರುಸಲೇಮಿನ ಸಹೋದರರ ಬಳಿಗೆ ಹಿಂತಿರುಗಿದರು. 34 [c]

35 ಆದರೆ ಪೌಲ ಬಾರ್ನಬರು ಅಂತಿಯೋಕ್ಯದಲ್ಲಿ ತಂಗಿದ್ದು ಇತರ ಅನೇಕರೊಂದಿಗೆ ಸೇರಿಕೊಂಡು ಸುವಾರ್ತೆಯನ್ನು ಸಾರಿದರು ಮತ್ತು ಪ್ರಭುವಿನ ಸಂದೇಶವನ್ನು ಜನರಿಗೆ ಬೋಧಿಸಿದರು.

ಪೌಲ ಬಾರ್ನಬರು ಬೇರ್ಪಡುವರು

36 ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ, “ನಾವು ಅನೇಕ ಪಟ್ಟಣಗಳಲ್ಲಿ ಪ್ರಭುವಿನ ಸಂದೇಶವನ್ನು ತಿಳಿಸಿದೆವು. ಆ ಪಟ್ಟಣಗಳಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ” ಎಂದು ಹೇಳಿದನು.

37 ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಬಾರ್ನಬನ ಇಷ್ಟವಾಗಿತ್ತು. 38 ಆದರೆ ಅವರ ಮೊದಲನೆ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಪಾಂಫೀಲಿಯದ ಬಳಿ ಬಿಟ್ಟುಹೋದನು. ಅವನು ಅವರೊಂದಿಗೆ ಸೇವೆಯಲ್ಲಿ ಮುಂದುವರಿಯಲಿಲ್ಲ. ಆದ್ದರಿಂದ ಅವನನ್ನು ಕರೆದುಕೊಂಡು ಹೋಗುವುದು ಒಳ್ಳೆಯ ಆಲೋಚನೆಯಲ್ಲವೆಂದು ಪೌಲನು ಯೋಚಿಸಿದನು. 39 ಇದರ ಬಗ್ಗೆ ಪೌಲ ಮತ್ತು ಬಾರ್ನಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಅವರಿಬ್ಬರೂ ಬೇರ್ಪಟ್ಟು ಬೇರೆ ಮಾರ್ಗಗಳಲ್ಲಿ ಹೋದರು. ಬಾರ್ನಬನು ಮಾರ್ಕನೊಂದಿಗೆ ಸೈಪ್ರಸ್‌ಗೆ ನೌಕಾಯಾನ ಮಾಡಿದನು.

40 ಪೌಲನು ತನ್ನೊಂದಿಗೆ ಸೀಲನನ್ನು ಕರೆದುಕೊಂಡು ಹೋದನು. ಅಂತಿಯೋಕ್ಯದ ಸಹೋದರರು ಪೌಲನನ್ನು ಪ್ರಭುವಿನ ಆಶ್ರಯಕ್ಕೆ ಒಪ್ಪಿಸಿ ಕಳುಹಿಸಿಕೊಟ್ಟರು. 41 ಪೌಲ ಸೀಲರು ಸಿರಿಯಾ ಮತ್ತು ಸಿಲಿಸಿಯ ನಾಡುಗಳಲ್ಲಿ ಹಾದು ಹೋಗುತ್ತಾ ಅಲ್ಲಿದ್ದ ಸಭೆಗಳಿಗೆ ಬಲವಾಗಿ ಬೆಳೆಯಲು ನೆರವು ನೀಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International