Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 15

ದೇವರು ಅಬ್ರಾಮನೊಡನೆ ಮಾಡಿಕೊಂಡ ಒಡಂಬಡಿಕೆ

15 ಈ ಸಂಗತಿಗಳಾದ ಮೇಲೆ, ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ಸಂದೇಶ ಬಂದಿತು. ದೇವರು ಅವನಿಗೆ, “ಅಬ್ರಾಮನೇ ಭಯಪಡಬೇಡ; ನಾನೇ ನಿನಗೆ ಗುರಾಣಿಯಾಗಿದ್ದೇನೆ. ನಾನು ನಿನಗೆ ದೊಡ್ಡ ಪ್ರತಿಫಲವನ್ನು ಕೊಡುತ್ತೇನೆ” ಎಂದು ಹೇಳಿದನು.

ಅದಕ್ಕೆ ಅಬ್ರಾಮನು, “ದೇವರಾದ ಯೆಹೋವನೇ, ನೀನು ನನಗೆ ಏನೇ ಕೊಟ್ಟರೂ ನನಗೆ ಸಂತೋಷವಾಗುವುದಿಲ್ಲ. ಯಾಕೆಂದರೆ, ನನಗೆ ಮಗನೇ ಇಲ್ಲ. ಆದ್ದರಿಂದ ನಾನು ಸತ್ತಮೇಲೆ ನನ್ನ ಆಸ್ತಿಯೆಲ್ಲ ನನ್ನ ಸೇವಕನಾದ ದಮಸ್ಕದ ಎಲೀಯೆಜರನ ಪಾಲಾಗುವುದು” ಎಂದು ಹೇಳಿದನು. ಮತ್ತೆ ಅಬ್ರಾಮನು, “ನೀನು ನನಗೆ ಮಗನನ್ನೇ ಕೊಟ್ಟಿಲ್ಲ. ಆದ್ದರಿಂದ ನನ್ನ ಮನೆಯಲ್ಲಿ ಹುಟ್ಟಿದ ಸೇವಕನೊಬ್ಬನು ನನಗಿರುವುದನ್ನೆಲ್ಲ ಪಡೆದುಕೊಳ್ಳುವನು” ಎಂದು ಹೇಳಿದನು.

ಆಗ ಯೆಹೋವನು ಅಬ್ರಾಮನಿಗೆ, “ನಿನ್ನ ಆಸ್ತಿಯನ್ನೆಲ್ಲ ಪಡೆದುಕೊಳ್ಳುವವನು ನಿನ್ನ ಸೇವಕನಲ್ಲ. ನೀನೇ ಮಗನನ್ನು ಪಡೆಯುವೆ; ನಿನ್ನ ಮಗನೇ ನಿನ್ನ ಆಸ್ತಿಯನ್ನೆಲ್ಲಾ ಪಡೆಯುವನು” ಎಂದು ಹೇಳಿದನು.

ನಂತರ ದೇವರು ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು ಅವನಿಗೆ, “ಆಕಾಶದ ಕಡೆಗೆ ಕಣ್ಣೆತ್ತಿ ನಕ್ಷತ್ರಗಳನ್ನು ನೋಡು. ನೀನು ಲೆಕ್ಕ ಮಾಡಲಾರದಷ್ಟು ನಕ್ಷತ್ರಗಳಿವೆ. ಮುಂದಿನ ಕಾಲದಲ್ಲಿ ನಿನ್ನ ಕುಟುಂಬವು ಅದೇ ರೀತಿಯಲ್ಲಿರುವುದು” ಎಂದು ಹೇಳಿದನು.

ಅಬ್ರಾಮನು ಯೆಹೋವನನ್ನು ನಂಬಿದನು. ಆ ನಂಬಿಕೆಯ ನಿಮಿತ್ತವೇ ಯೆಹೋವನು ಅಬ್ರಾಮನನ್ನು ನೀತಿವಂತನೆಂದು ಪರಿಗಣಿಸಿದನು. ಆತನು ಅಬ್ರಾಮನಿಗೆ, “ಯೆಹೋವನಾದ ನಾನು ನಿನ್ನನ್ನು ಕಲ್ದೀಯರ ಊರ್ ಪಟ್ಟಣದಿಂದ ಬರಮಾಡಿದೆನು. ನಿನಗೆ ಈ ದೇಶವನ್ನು ಕೊಡಬೇಕೆಂತಲೂ ನೀನು ಈ ದೇಶವನ್ನು ಹೊಂದಿಕೊಳ್ಳಬೇಕೆಂತಲೂ ನಾನು ನಿನ್ನನ್ನು ಬರಮಾಡಿದೆನು” ಎಂದು ಹೇಳಿದನು.

ಅದಕ್ಕೆ ಅಬ್ರಾಮನು, “ಯೆಹೋವನೇ, ನನ್ನ ಒಡೆಯನೇ, ನನಗೆ ಈ ದೇಶವು ದೊರೆಯುತ್ತದೆಯೆಂದು ಖಚಿತಪಡಿಸಿಕೊಳ್ಳುವುದು ಹೇಗೆ?” ಎಂದು ಕೇಳಿದನು.

ದೇವರು ಅಬ್ರಾಮನಿಗೆ, “ನಾವು ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳೋಣ. ಮೂರು ವರ್ಷದ ಒಂದು ಹಸುವನ್ನೂ ಮೂರು ವರ್ಷದ ಒಂದು ಆಡನ್ನೂ ಮತ್ತು ಮೂರು ವರ್ಷದ ಒಂದು ಟಗರನ್ನೂ ತೆಗೆದುಕೊಂಡು ಬಾ. ಇದಲ್ಲದೆ ಒಂದು ಬೆಳವಕ್ಕಿಯನ್ನೂ ಒಂದು ಪಾರಿವಾಳವನ್ನೂ ತೆಗೆದುಕೊಂಡು ಬಾ” ಎಂದು ಹೇಳಿದನು.

10 ಅಬ್ರಾಮನು ದೇವರಿಗೋಸ್ಕರ ಅವುಗಳನ್ನೆಲ್ಲ ತೆಗೆದುಕೊಂಡು ಬಂದನು. ಅಬ್ರಾಮನು ಅವುಗಳನ್ನು ಕತ್ತರಿಸಿ ಎರಡೆರಡು ಹೋಳು ಮಾಡಿದನು. ಆಮೇಲೆ ಅಬ್ರಾಮನು ತುಂಡಿಗೆ ತುಂಡನ್ನು ಎದುರಾಗಿಟ್ಟನು. ಅಬ್ರಾಮನು ಪಕ್ಷಿಗಳನ್ನು ಮಾತ್ರ ಎರಡೆರಡು ಹೋಳು ಮಾಡಲಿಲ್ಲ. 11 ಸ್ವಲ್ಪ ಸಮಯದ ನಂತರ, ದೊಡ್ಡ ಪಕ್ಷಿಗಳು ಆ ಪ್ರಾಣಿಗಳ ಮಾಂಸವನ್ನು ತಿನ್ನಲು ಹಾರಿ ಬಂದವು. ಆದರೆ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.

12 ಸಾಯಂಕಾಲವಾಯಿತು, ಸೂರ್ಯ ಮುಳುಗತೊಡಗಿದಾಗ ಅಬ್ರಾಮನಿಗೆ ಗಾಢ ನಿದ್ರೆ ಬಂದಿತು. ಅವನು ನಿದ್ರೆ ಮಾಡುತ್ತಿರುವಾಗ ಕಾರ್ಗತ್ತಲಾಯಿತು. 13 ಆಗ ಯೆಹೋವನು ಅಬ್ರಾಮನಿಗೆ, “ನಿನಗೆ ಈ ವಿಷಯಗಳು ತಿಳಿದಿರಬೇಕು. ನಿನ್ನ ಸಂತತಿಯವರು ಪರದೇಶಿಯರಾಗಿ ತಮ್ಮದಲ್ಲದ ದೇಶದಲ್ಲಿ ವಾಸಮಾಡುವರು. ಅಲ್ಲಿನ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವರು. ಅಲ್ಲಿ ಅವರು ನಾನೂರು ವರ್ಷಗಳವರೆಗೆ ಬಾಧೆಪಡುವರು. 14 ಆದರೆ ನಾನೂರು ವರ್ಷಗಳಾದ ಮೇಲೆ ಅವರ ಮೇಲೆ ದೊರೆತನ ಮಾಡಿದ ಆ ದೇಶವನ್ನು ನಾನು ದಂಡಿಸುವೆನು; ನಿನ್ನ ಜನರು ಆ ದೇಶವನ್ನು ಬಿಟ್ಟು ಹೊರಡುವರು. ನಿನ್ನ ಜನರು ಅದನ್ನು ಬಿಡುವಾಗ ತಮ್ಮೊಡನೆ ಸಂಪತ್ತುಗಳನ್ನು ತೆಗೆದುಕೊಂಡು ಹೋಗುವರು.

15 “ನೀನು ತುಂಬಾ ಮುದುಕನಾಗುವ ತನಕ ಜೀವಿಸಿ ಸಮಾಧಾನದಿಂದ ಸಾಯುವೆ; ನಿನ್ನನ್ನು ನಿನ್ನ ಕುಟುಂಬದವರೊಡನೆ ಸಮಾಧಿ ಮಾಡುವರು. 16 ನಾಲ್ಕು ತಲೆಮಾರುಗಳ ನಂತರ ನಿನ್ನ ಜನರು ಈ ನಾಡಿಗೆ ಹಿಂತಿರುಗುವರು. ಆ ಕಾಲದಲ್ಲಿ ನಿನ್ನ ಜನರು ಅಮೋರಿಯರನ್ನು ಸೋಲಿಸುವರು. ಇಲ್ಲಿ ವಾಸಿಸುತ್ತಿರುವ ಅಮೋರಿಯರನ್ನು ನಿನ್ನ ಜನರ ಮೂಲಕ ನಾನೇ ಶಿಕ್ಷಿಸುವೆನು. ಇದು ಮುಂದೆ ನಡೆಯುವ ಸಂಗತಿ. ಯಾಕೆಂದರೆ ಆ ಸಮಯದಲ್ಲಿ ಅಮೋರಿಯರು ಅಂಥ ಶಿಕ್ಷೆ ಅನುಭವಿಸುವಷ್ಟು ಕೆಟ್ಟವರಾಗಿರಲಿಲ್ಲ” ಎಂದು ಹೇಳಿದನು.

17 ಸೂರ್ಯನು ಮುಳುಗಿದ ಮೇಲೆ ತುಂಬ ಕತ್ತಲಾಯಿತು. ಕಡಿದುಹಾಕಿದ್ದ ಪ್ರತಿಯೊಂದು ಪ್ರಾಣಿಗಳ ದೇಹದ ಎರಡೆರಡು ಹೋಳುಗಳು ಇನ್ನೂ ನೆಲದ ಮೇಲೆ ಇದ್ದವು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹೊಗೆ ಮತ್ತು ಬೆಂಕಿಗಳಿಂದ ಕೂಡಿದ ದೀವಿಟಿಗೆಯು ಈ ತುಂಡುಗಳ ನಡುವೆ ಹಾದುಹೋಯಿತು.

18 ಆದ್ದರಿಂದ ಅಂದು ಯೆಹೋವನು ಒಂದು ವಾಗ್ದಾನವನ್ನು ಮಾಡಿ ಅಬ್ರಾಮನೊಡನೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಯೆಹೋವನು ಅವನಿಗೆ, “ನಾನು ನಿನ್ನ ಸಂತತಿಯವರಿಗೆ ಈ ನಾಡನ್ನು ಕೊಡುವೆನು. ನಾನು ಅವರಿಗೆ ಈಜಿಪ್ಟ್ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಇರುವ ನಾಡನ್ನು ಕೊಡುವೆನು. 19 ಇದು ಕೇನಿಯರ, ಕೆನಿಜೀಯರ, ಕದ್ಮೋನಿಯರ, 20 ಹಿತ್ತಿಯರ, ಪೆರಿಜೀಯರ, ರೆಷಾಯರ, 21 ಅಮೋರಿಯರ, ಕಾನಾನ್ಯರ, ಗಿರ್ಗಾಷಿಯರ ಮತ್ತು ಯೆಬೂಸಿಯರ ನಾಡು” ಎಂದು ಹೇಳಿದನು.

ಮತ್ತಾಯ 14

ಯೇಸುವಿನ ಕುರಿತು ಹೆರೋದನ ಅಭಿಪ್ರಾಯ

(ಮಾರ್ಕ 6:14-29; ಲೂಕ 9:7-9)

14 ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು. ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು.

ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟ ರೀತಿ

ಈ ಸಮಯಕ್ಕೆ ಮೊದಲೇ ಹೆರೋದ್ಯಳ ನಿಮಿತ್ತವಾಗಿ ಹೆರೋದನು ಯೋಹಾನನನ್ನು ಸರಪಣಿಗಳಿಂದ ಬಂಧಿಸಿ, ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಹೆಂಡತಿ. ಯೋಹಾನನು ಹೆರೋದನಿಗೆ, “ಹೆರೋದ್ಯಳನ್ನು ನೀನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದುದೇ ಈ ಸೆರೆವಾಸಕ್ಕೆ ಕಾರಣ. ಹೆರೋದನು ಯೋಹಾನನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟು ಕೊಲ್ಲಿಸಿರಲಿಲ್ಲ. ಜನರು ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು.

ಹೆರೋದನ ಹುಟ್ಟುಹಬ್ಬದ ದಿನದಂದು ಹೆರೋದ್ಯಳ ಮಗಳು ಹೆರೋದನ ಮತ್ತು ಅವನ ಅತಿಥಿಗಳ ಮುಂದೆ ನರ್ತಿಸಿದಳು. ಹೆರೋದನು ಅವಳನ್ನು ಬಹಳ ಮೆಚ್ಚಿಕೊಂಡನು. ಆದ್ದರಿಂದ ಅವನು, “ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ” ಎಂದು ಅವಳಿಗೆ ವಾಗ್ದಾನ ಮಾಡಿದನು. ಏನು ಕೇಳಿಕೊಳ್ಳಬೇಕೆಂದು ಹೆರೋದ್ಯಳು ತನ್ನ ಮಗಳಿಗೆ ಹೇಳಿಕೊಟ್ಟಳು. ಆದ್ದರಿಂದ ಅವಳು ಹೆರೋದನಿಗೆ, “ಸ್ನಾನಿಕ ಯೋಹಾನನ ತಲೆಯನ್ನು ಇಲ್ಲಿಯೇ ಈ ತಟ್ಟೆಯ ಮೇಲೆಯೇ ನನಗೆ ಕೊಡು” ಎಂದು ಹೇಳಿದಳು.

ರಾಜ ಹೆರೋದನು ಬಹಳವಾಗಿ ದುಃಖಪಟ್ಟನು. ಆದರೆ ಏನು ಕೇಳಿದರೂ ಕೊಡುತ್ತೇನೆಂದು ಅವನು ಅವಳಿಗೆ ವಾಗ್ದಾನ ಮಾಡಿದ್ದನು. ಹೆರೋದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರು ಸಹ ಆ ವಾಗ್ದಾನವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ಕೊಡುವುದಕ್ಕೆ ಹೆರೋದನು ಅಪ್ಪಣೆಕೊಟ್ಟನು. 10 ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿಕೊಂಡು ಬರಲು ಅವನು ಸೈನಿಕರನ್ನು ಕಳುಹಿಸಿಕೊಟ್ಟನು. 11 ಅವರು ಯೋಹಾನನ ತಲೆಯನ್ನು ತಟ್ಟೆಯ ಮೇಲೆ ತಂದು ಅವಳಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ತೆಗೆದುಕೊಂಡು ಹೋದಳು. 12 ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಬಳಿಕ ಅವರು ಯೇಸುವಿನ ಬಳಿಗೆ ಹೋಗಿ ಸಂಭವಿಸಿದ್ದನ್ನೆಲ್ಲ ತಿಳಿಸಿದರು.

ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮಾರ್ಕ 6:30-44; ಲೂಕ 9:10-17; ಯೋಹಾನ 6:1-14)

13 ಯೋಹಾನನಿಗೆ ಸಂಭವಿಸಿದ್ದನ್ನು ಕೇಳಿದಾಗ ಯೇಸು ದೋಣಿಹತ್ತಿ ನಿರ್ಜನವಾದ ಸ್ಥಳಕ್ಕೆ ಒಬ್ಬನೇ ಹೋದನು. ಆದರೆ ಈ ಸುದ್ದಿ ಜನರಿಗೆ ತಿಳಿಯಿತು. ಆದ್ದರಿಂದ ಅವರು ತಮ್ಮ ಊರುಗಳನ್ನು ಬಿಟ್ಟು ಕಾಲುನಡಿಗೆಯಲ್ಲೇ ಆತನಿದ್ದ ಸ್ಥಳಕ್ಕೆ ಹೋದರು. 14 ಯೇಸು ಅಲ್ಲಿಗೆ ಬಂದಾಗ, ಜನರು ಗುಂಪುಗುಂಪಾಗಿ ನೆರೆದಿರುವುದನ್ನು ಕಂಡು ಅವರಿಗಾಗಿ ದುಃಖಪಟ್ಟು ಕಾಯಿಲೆಯವರನ್ನು ಗುಣಪಡಿಸಿದನು.

15 ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಜನರು ವಾಸಿಸುವುದಿಲ್ಲ. ಈಗಾಗಲೇ ಸಮಯವಾಗಿದೆ. ಜನರು ತಮಗಾಗಿ ಆಹಾರವನ್ನು ಕೊಂಡುಕೊಳ್ಳಲು ಅವರನ್ನು ಊರುಗಳಿಗೆ ಕಳುಹಿಸಿಬಿಡು” ಎಂದು ಹೇಳಿದರು.

16 ಯೇಸು, “ಜನರು ಹೋಗುವುದು ಬೇಡ. ನೀವೇ ಅವರಿಗೆ ಸ್ವಲ್ಪ ಊಟವನ್ನು ಕೊಡಿ” ಎಂದು ಹೇಳಿದನು.

17 ಆಗ ಶಿಷ್ಯರು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ” ಎಂದು ಉತ್ತರಕೊಟ್ಟರು.

18 ಯೇಸು, “ಆ ರೊಟ್ಟಿ ಮತ್ತು ಮೀನುಗಳನ್ನು ನನ್ನ ಬಳಿಗೆ ತನ್ನಿರಿ” ಅಂದನು. 19 ಬಳಿಕ ಆತನು ಜನರಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ರೊಟ್ಟಿಯನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ರೊಟ್ಟಿಯನ್ನು ಜನರಿಗೆ ಹಂಚಿದರು. 20 ಜನರೆಲ್ಲರೂ ತಿಂದು ತೃಪ್ತರಾದರು. ಜನರು ತಿಂದು ಮುಗಿಸಿದ ನಂತರ, ತಿನ್ನಲಾರದೆ ಉಳಿಸಿದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 21 ಊಟ ಮಾಡಿದವರಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದುಸಾವಿರ ಇದ್ದರು.

ಸರೋವರದ ಮೇಲೆ ಯೇಸುವಿನ ಕಾಲುನಡಿಗೆ

(ಮಾರ್ಕ 6:45-52; ಯೋಹಾನ 6:15-21)

22 ಬಳಿಕ ಯೇಸು ತನ್ನ ಶಿಷ್ಯರಿಗೆ, “ನಾನು ಈ ಜನರನ್ನು ಬೀಳ್ಕೊಟ್ಟು ಬರುತ್ತೇನೆ. ನೀವು ಈಗಲೇ ದೋಣಿ ಹತ್ತಿಕೊಂಡು ಸರೋವರದ ಆಚೆದಡಕ್ಕೆ ಹೋಗಿರಿ” ಎಂದು ಹೇಳಿ ಕಳುಹಿಸಿದನು. 23 ಆತನು ಜನರಿಗೆ ಶುಭವನ್ನು ಕೋರಿ ಕಳುಹಿಸಿದ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ತಾನೊಬ್ಬನೇ ಬೆಟ್ಟದ ಮೇಲಕ್ಕೆ ಹೋದನು. ಆಗಲೇ ರಾತ್ರಿಯಾಗಿತ್ತು. ಅಲ್ಲಿ ಆತನೊಬ್ಬನೇ ಇದ್ದನು. 24 ಅಷ್ಟರಲ್ಲಿ ದೋಣಿಯು ಸರೋವರದ ಮೇಲೆ ಬಹಳ ದೂರ ಹೋಗಿತ್ತು. ಎದುರುಗಾಳಿಯಿಂದ ಅಲೆಗಳ ಬಡಿತಕ್ಕೆ ಸಿಕ್ಕಿಹಾಕಿಕೊಂಡಿತ್ತು.

25 ಆ ರಾತ್ರಿಯ ಕಡೇ ಜಾವದ ಸಮಯದಲ್ಲಿ ಆತನ ಶಿಷ್ಯರು ದೋಣಿಯಲ್ಲೇ ಇದ್ದರು. ಆತನು ಸರೋವರದ ನೀರಿನ ಮೇಲೆ ನಡೆಯುತ್ತಾ ಅವರ ಬಳಿಗೆ ಬರತೊಡಗಿದನು. 26 ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದ ಆತನನ್ನು ಕಂಡ ಶಿಷ್ಯರು ಭೂತವೆಂದು ಭಾವಿಸಿ ಭಯದಿಂದ ಕೂಗಿಕೊಂಡರು.

27 ಕೂಡಲೇ ಯೇಸು, “ಚಿಂತಿಸಬೇಡಿ! ನಾನೇ! ಭಯಪಡಬೇಡಿ” ಎಂದು ಅವರೊಂದಿಗೆ ಮಾತಾಡಿದನು.

28 ಪೇತ್ರನು, “ಪ್ರಭುವೇ, ನಿಜವಾಗಿಯೂ ನೀನೇ ಆಗಿದ್ದರೆ, ನೀರಿನ ಮೇಲೆ ನಡೆದುಕೊಂಡು ನಿನ್ನ ಬಳಿಗೆ ಬರಲು ನನಗೆ ಆಜ್ಞಾಪಿಸು” ಎಂದನು.

29 ಯೇಸು, “ಪೇತ್ರನೇ, ಬಾ” ಅಂದನು.

ಕೂಡಲೆ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ನೀರಿನ ಮೇಲೆ ನಡೆದನು. 30 ಆದರೆ ಅವನು ಗಾಳಿಯನ್ನು ಮತ್ತು ಅಲೆಗಳನ್ನು ನೋಡಿ ಭಯಪಟ್ಟದ್ದರಿಂದ ನೀರಿನಲ್ಲಿ ಮುಳುಗತೊಡಗಿ, “ಪ್ರಭುವೇ, ನನ್ನನ್ನು ರಕ್ಷಿಸು” ಎಂದು ಕೂಗಿಕೊಂಡನು.

31 ಯೇಸು ತನ್ನ ಕೈ ಚಾಚಿ ಪೇತ್ರನನ್ನು ಹಿಡಿದುಕೊಂಡನು. ಯೇಸು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದನು.

32 ಪೇತ್ರನು ಮತ್ತು ಯೇಸು ದೋಣಿ ಹತ್ತಿದ ಮೇಲೆ ಗಾಳಿ ಶಾಂತವಾಯಿತು. 33 ದೋಣಿಯಲ್ಲಿದ್ದ ಶಿಷ್ಯರು ಯೇಸುವನ್ನು ಆರಾಧಿಸಿ, “ನೀನು ನಿಜವಾಗಿಯೂ ದೇವರ ಮಗನು” ಎಂದು ಹೇಳಿದರು.

ಅನೇಕ ರೋಗಿಗಳಿಗೆ ಯೇಸುವಿನಿಂದ ಸ್ವಸ್ಥತೆ

(ಮಾರ್ಕ 6:53-56)

34 ಅವರು ಸರೋವರವನ್ನು ದಾಟಿ ಗೆನೆಸರೇತ್ ದಡಕ್ಕೆ ಬಂದರು. 35 ಅಲ್ಲಿದ್ದ ಜನರು ಯೇಸುವನ್ನು ನೋಡಿದರು. ಆತನು ಯಾರೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯೇಸು ಬಂದಿದ್ದಾನೆ ಎಂದು ತಿಳಿಸಿದರು. ಜನರು ರೋಗಗಳಿಂದ ಬೇನೆಗಳಿಂದ ನರಳುತ್ತಿದ್ದವರನ್ನೆಲ್ಲ ಆತನ ಬಳಿಗೆ ತಂದರು. 36 ಆತನ ಮೇಲಂಗಿಯನ್ನಾದರೂ ಮುಟ್ಟಿ ಗುಣಹೊಂದಲು ಅವಕಾಶಕೊಡಬೇಕೆಂದು ಅವರು ಬೇಡಿಕೊಂಡರು. ಆತನ ಮೇಲಂಗಿಯನ್ನು ಮುಟ್ಟಿದ ಜನರೆಲ್ಲರೂ ಗುಣಹೊಂದಿದರು.

ನೆಹೆಮೀಯ 4

ಸನ್ಬಲ್ಲಟ್ ಮತ್ತು ಟೋಬೀಯ

ನಾವು ಜೆರುಸಲೇಮಿನ ಗೋಡೆ ಕಟ್ಟುತ್ತಿದ್ದೇವೆ ಎಂಬುದನ್ನು ಕೇಳಿದ ಸನ್ಬಲ್ಲಟನು ಹೊಟ್ಟೆಕಿಚ್ಚಿನಿಂದ ಕೋಪಗೊಂಡನು. ಅವನು ಯೆಹೂದ್ಯರನ್ನು ಹಾಸ್ಯ ಮಾಡಿದನು. ಸಮಾರ್ಯದಲ್ಲಿರುವ ಅವನ ಸ್ನೇಹಿತರೊಡನೆ ಮತ್ತು ಸಮಾರ್ಯದ ಸೈನ್ಯದವರೊಡನೆ ಮಾತನಾಡಿ, “ಈ ಬಲಹೀನ ಯೆಹೂದ್ಯರು ಮಾಡುತ್ತಿರುವುದೇನು? ನಾವು ಇವರನ್ನು ಹೀಗೇಯೇ ಬಿಟ್ಟುಬಿಡುತ್ತೇವೆಂದು ತಿಳಿದುಕೊಂಡಿದ್ದಾರೆಯೇ? ತಾವು ಯಜ್ಞಗಳನ್ನು ಅರ್ಪಿಸುವುದಾಗಿ ತಿಳಿದುಕೊಂಡಿರುವರೇ? ಒಂದೇ ದಿನದಲ್ಲಿ ಕಟ್ಟಿಮುಗಿಸುವುದಾಗಿ ಅವರು ತಿಳಿದುಕೊಂಡಿರಬಹುದು. ಆ ತಿಪ್ಪೆಗುಂಡಿಯೊಳಗಿನ ಕಲ್ಲುಗಳ ರಾಶಿಗೆ ಜೀವಕೊಡಲು ಅವರಿಗೆ ಸಾಧ್ಯವಿಲ್ಲ. ಅವು ಕೇವಲ ಬೂದಿ ಮತ್ತು ಹೊಲಸುಗಳ ಗುಡ್ಡೆಗಳಾಗಿವೆ!” ಎಂದು ಹೇಳಿದನು.

ಅವನ ಜೊತೆಯಲ್ಲಿದ್ದ ಅಮ್ಮೋನಿಯನಾದ ಟೋಬೀಯನು, “ಈ ಯೆಹೂದ್ಯರು ಕಟ್ಟುತ್ತಿರುವುದೇನು? ಆ ಗೋಡೆಯ ಮೇಲೆ ಒಂದು ನರಿ ಹಾರಿದರೂ ಗೋಡೆಯು ಕುಸಿದುಬೀಳುವುದು” ಎಂದು ವ್ಯಂಗ್ಯವಾಗಿ ಹೇಳಿದನು.

ನೆಹೆಮೀಯನು ಯೆಹೋವನಿಗೆ ಪ್ರಾರ್ಥಿಸುತ್ತಾ, “ನಮ್ಮ ದೇವರೇ, ನಮ್ಮ ಪ್ರಾರ್ಥನೆಗೆ ಕಿವಿಗೊಡು. ಆ ಮನಷ್ಯರು ನಮ್ಮನ್ನು ದ್ವೇಷಿಸುತ್ತಾರೆ. ಸನ್ಬಲ್ಲಟನು ಮತ್ತು ಟೋಬೀಯನು ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಆ ಕೇಡುಗಳು ಅವರಿಗೇ ಸಂಭವಿಸಲಿ. ಅವರು ನಾಚಿಕೆಯಿಂದ ತಲೆತಗ್ಗಿಸಲಿ; ಸೆರೆಹಿಡಿಯಲ್ಪಟ್ಟವರಂತೆ ಅವಮಾನ ಹೊಂದಲಿ. ಅವರು ನಿನ್ನ ದೃಷ್ಟಿಯಲ್ಲಿ ಮಾಡಿದ ಪಾಪಗಳನ್ನು ಮನ್ನಿಸಬೇಡ. ಅವರು ಗೋಡೆಯನ್ನು ಕಟ್ಟುವ ನಿನ್ನ ದಾಸರನ್ನು ನಿಂದಿಸಿ ಅವರನ್ನು ನಿರುತ್ಸಾಹಗೊಳಿಸಿದ್ದಾರೆ.”

ಜೆರುಸಲೇಮಿನ ಗೋಡೆಯನ್ನು ನಾವು ಕಟ್ಟಿ ಮುಗಿಸಿದೆವು. ಪಟ್ಟಣದ ಸುತ್ತಲೂ ಪೌಳಿಗೋಡೆಯನ್ನು ಕಟ್ಟಿದೆವು. ಆದರೆ ಅದರ ಎತ್ತರ ಇರಬೇಕಾದಷ್ಟು ಇರದೆ ಅರ್ಧದ ತನಕ ಇದ್ದವು. ನಮ್ಮ ಜನರು ತಮ್ಮ ಹೃದಯ ಪೂರ್ವಕವಾಗಿ ಕೆಲಸ ಮಾಡಿದ್ದುದರಿಂದ ನಮಗೆ ಅಷ್ಟಾದರೂ ಮಾಡುವುದಕ್ಕೆ ಆಯಿತು.

ಸನ್ಬಲ್ಲಟನು, ಟೋಬೀಯನು, ಅರಬಿಯರು, ಅಮ್ಮೋನಿಯರು ಮತ್ತು ಅಷ್ಡೋದಿನವರು ತುಂಬಾ ಕೋಪಗೊಂಡಿದ್ದರು. ಯಾಕೆಂದರೆ ಜೆರುಸಲೇಮಿನ ಗೋಡೆಯ ಕೆಲಸ ಮುಂದುವರಿಯುತ್ತಿದೆಯೆಂದೂ ಮತ್ತು ಗೋಡೆಗಳ ಕಿಂಡಿಗಳನ್ನು ರಿಪೇರಿ ಮಾಡಲಾಗುತ್ತಿದೆಯೆಂದೂ ಅವರು ಕೇಳಿದ್ದರು. ಅವರೆಲ್ಲಾ ಸೇರಿ ಜೆರುಸಲೇಮಿಗೆ ವಿರುದ್ಧವಾಗಿ ಗಲಭೆ ಎಬ್ಬಿಸುವ ಹಂಚಿಕೆಯನ್ನು ಹೂಡಿದರು; ಯುದ್ಧ ಮಾಡುವ ಯೋಚನೆ ಮಾಡಿದರು. ನಾವು ದೇವರಿಗೆ ಪ್ರಾರ್ಥಿಸಿದೆವು ಮತ್ತು ನಮ್ಮ ಮೇಲೆ ಬೀಳಲು ಬರುವ ಶತ್ರುಗಳಿಗೆ ನಾವು ತಯಾರಿರುವಂತೆ ಹಗಲು ರಾತ್ರಿ ಪಹರೆ ಮಾಡಲು ಗೋಡೆಯ ಮೇಲೆ ಕಾವಲುಗಾರರನ್ನು ನೇಮಿಸಿದೆವು.

10 ಆ ಸಮಯದಲ್ಲಿ ಯೆಹೂದದ ಜನರು, “ಕೆಲಸಗಾರರು ಆಯಾಸಗೊಳ್ಳುತ್ತಿದ್ದಾರೆ; ದಾರಿಯಲ್ಲೆಲ್ಲಾ ತುಂಬಾ ಧೂಳು ಮತ್ತು ಕಸ ಇರುವುದರಿಂದ ನಾವು ಗೋಡೆಕಟ್ಟಡ ಕೆಲಸವನ್ನು ಮುಂದುವರಿಸಲು ಸಾಧ್ಯವಿಲ್ಲ. 11 ಅಲ್ಲದೆ ನಮ್ಮ ವೈರಿಗಳು, ‘ನಾವು ಅವರ ಮೇಲೆ ಇದ್ದಕ್ಕಿದ್ದಂತೆ ಆಕ್ರಮಣ ಮಾಡುವುದರಿಂದ ನಾವು ಅವರ ಮಧ್ಯದಲ್ಲಿರುವ ತನಕ ಅವರಿಗೆ ಗೊತ್ತಾಗುವುದೂ ಇಲ್ಲ ಕಾಣುವುದೂ ಇಲ್ಲ. ನಾವು ಅವರನ್ನು ಕೊಂದಾಗ ಕೆಲಸ ತಾನಾಗಿಯೇ ನಿಂತುಹೋಗುವುದು’ ಎಂದು ಹೇಳುತ್ತಿದ್ದಾರೆ” ಎಂದರು.

12 ಅನ್ಯಜನರ ಮಧ್ಯೆ ವಾಸಿಸುವ ಯೆಹೂದ್ಯರು ನಮ್ಮ ಬಳಿಗೆ ಬಂದು ಹತ್ತು ಬಾರಿ ನಮಗೆ ತಿಳಿಸಿದರು. “ವೈರಿಗಳು ನಮ್ಮ ಸುತ್ತಮುತ್ತಲೂ ಇದ್ದಾರೆ. ನಾವು ಎತ್ತ ತಿರುಗಿದರೂ ಅಲ್ಲಿ ಅವರಿದ್ದಾರೆ” ಎಂದರು.

13 ಆದ್ದರಿಂದ ನಮ್ಮ ಜನರಲ್ಲಿ ಕೆಲವರನ್ನು ಕುಟಂಬ ಸಮೇತವಾಗಿ ಖಡ್ಗ, ಬರ್ಜಿ ಮತ್ತು ಬಿಲ್ಲುಗಳೊಡನೆ ಗೋಡೆಯ ಉದ್ದಕ್ಕೂ ಇದ್ದ ತಗ್ಗಾದ ಸ್ಥಳಗಳಲ್ಲಿಯೂ ಗೋಡೆಗಳಲ್ಲಿದ್ದ ಕಿಂಡಿಗಳ ಬಳಿಯಲ್ಲಿಯೂ ಇರಿಸಿದೆನು. 14 ನಮಗೆದುರಾಗಿ ಬಂದಿದ್ದ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅವಲೋಕಿಸಿ ನಮ್ಮ ಜನರೊಂದಿಗೆ ಕುಟುಂಬ ಕುಟುಂಬವಾಗಿ, ಅಧಿಕಾರಿಗಳಿಗೆ ಮತ್ತು ಉಳಿದ ಜನರಿಗೆ ಹೀಗೆ ಹೇಳಿದೆನು: “ನಮ್ಮ ವೈರಿಗಳ ಬಗ್ಗೆ ನೀವು ಏನೂ ಹೆದರಬೇಡಿರಿ. ನಮ್ಮ ದೇವರನ್ನು ನೆನಪುಮಾಡಿರಿ. ಯೆಹೋವನು ಬಲಶಾಲಿಯೂ ಸರ್ವಶಕ್ತನೂ ಆಗಿದ್ದಾನೆ. ನೀವು ನಿಮ್ಮ ಸಹೋದರರಿಗಾಗಿ, ನಿಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ನಿಮ್ಮನಿಮ್ಮ ಹೆಂಡತಿಯರಿಗಾಗಿ ಮತ್ತು ಮನೆಗಳಿಗಾಗಿ ಹೋರಾಡಿರಿ.”

15 ಅವರ ಕುತಂತ್ರವು ನಮಗೆ ಗೊತ್ತಾಯಿತೆಂದು ವೈರಿಗಳಿಗೆ ತಿಳಿದಾಗ ದೇವರೇ ಅವರ ಯೋಜನೆಯನ್ನು ನಿಷ್ಫಲಮಾಡಿದನೆಂದು ಅವರು ತಿಳಿದರು. ಮತ್ತೆ ನಾವೆಲ್ಲಾ ಕಟ್ಟುವ ಕೆಲಸಕ್ಕೆ ಕೈಹಾಕಿದೆವು. ಅವರವರ ಭಾಗಕ್ಕೆ ಜನರು ತೆರಳಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. 16 ಆ ದಿವಸದಿಂದ ನನ್ನ ಜನರು ಅರ್ಧಭಾಗ ಗೋಡೆಯ ಕೆಲಸದಲ್ಲಿ ನಿರತರಾದರು; ಉಳಿದ ಅರ್ಧ ಜನರು ಭರ್ಜಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಕಾವಲಾಗಿದ್ದರು; ಗೋಡೆಯನ್ನು ಕಟ್ಟುತ್ತಿದ್ದ ಯೆಹೂದದ ಜನರ ಹಿಂಭಾಗದಲ್ಲಿ ಸೈನ್ಯಾಧಿಕಾರಿಗಳು ನಿಂತುಕೊಂಡಿದ್ದರು. 17 ಗೋಡೆ ಕಟ್ಟುವವರೂ ಅವರ ಸಹಾಯಕರೂ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಕೆಲಸ ಮಾಡುತ್ತಿದ್ದರು. 18 ಕೆಲಸಗಾರರು ತಮ್ಮ ಖಡ್ಗಗಳನ್ನು ಸೊಂಟಕ್ಕೆ ಬಿಗಿದುಕೊಂಡೇ ಕೆಲಸ ಮಾಡಿದರು. ಜನರನ್ನು ಎಚ್ಚರಗೊಳಿಸಲು ತುತ್ತೂರಿ ಊದುವವನು ನನ್ನ ಬಳಿಯಲ್ಲಿಯೇ ನಿಂತಿರುತ್ತಿದ್ದನು. 19 ಆಗ ನಾನು ಪ್ರಮುಖ ಕುಟುಂಬಗಳವರನ್ನೂ ಅಧಿಕಾರಿಗಳನ್ನೂ ಮತ್ತು ಉಳಿದ ಜನರನ್ನೂ ಕರೆದು, “ನಾವು ಮಾಡುತ್ತಿರುವುದು ಬಹು ದೊಡ್ಡ ಕಾರ್ಯ; ಗೋಡೆಯ ಉದ್ದಕ್ಕೂ ಚದರಿ ಒಬ್ಬರಿಗೊಬ್ಬರು ತುಂಬಾ ದೂರದಲ್ಲಿದ್ದೇವೆ. 20 ತುತ್ತೂರಿಯ ಶಬ್ದ ಕೇಳಿದ ಕೂಡಲೇ ನೀವು ಅಲ್ಲಿಗೆ ಹೋಗಬೇಕು. ನಾವೆಲ್ಲಾ ಆ ಸ್ಥಳದಲ್ಲಿ ಒಟ್ಟಾಗಿ ಸೇರಬೇಕು. ನಮ್ಮ ದೇವರು ನಮಗಾಗಿ ಯುದ್ಧ ಮಾಡುವನು” ಎಂದೆನು.

21 ಹೀಗೆ ನಾವು ಗೋಡೆ ಕಟ್ಟುವ ಕಾರ್ಯವನ್ನು ಮುಂದುವರಿಸಿದೆವು. ಅರ್ಧ ಜನರು ಭರ್ಜಿಗಳನ್ನು ಹಿಡಿದುಕೊಂಡರು. ಮುಂಜಾನೆಯ ಸೂರ್ಯನ ಕಿರಣ ಬೀಳುವ ಹೊತ್ತಿನಿಂದ ಹಿಡಿದು ರಾತ್ರಿ ನಕ್ಷತ್ರಗಳು ಕಾಣುವ ತನಕ ನಾವು ಕೆಲಸದಲ್ಲಿ ನಿರತರಾಗಿರುತ್ತಿದ್ದೆವು.

22 “ಪ್ರತಿಯೊಬ್ಬ ಕೆಲಸಗಾರನೂ ಅವನ ಸಹಾಯಕನೂ ಜೆರುಸಲೇಮಿನೊಳಗೇ ರಾತ್ರಿಯನ್ನು ಕಳೆಯಬೇಕು. ರಾತ್ರಿ ಕಾಲದಲ್ಲಿ ಅವರು ಪಹರೆಯವರಾಗಿಯೂ ಹಗಲಲ್ಲಿ ಗೋಡೆ ಕಟ್ಟುವವರಾಗಿಯೂ ಇರಬೇಕು” ಎಂದು ನಾನು ಜನರಿಗೆ ಹೇಳಿದೆನು. 23 ಇದರಿಂದಾಗಿ ಯಾರೂ ತಮ್ಮ ವಸ್ತ್ರಗಳನ್ನು ಬದಲಾಯಿಸಲಿಲ್ಲ. ನಾನಾಗಲಿ ನನ್ನ ಬಂಧುಗಳಾಗಲಿ ನನ್ನ ಜನರಾಗಲಿ ಪಹರೆಯವರಾಗಲಿ ವಸ್ತ್ರಗಳನ್ನು ಬದಲಾಯಿಸದೆ ಆಯುಧಗಳನ್ನು ಧರಿಸಿಕೊಂಡೇ ಇದ್ದೆವು. ನೀರು ಕುಡಿಯುವಾಗಲೂ ಆಯುಧ ಸನ್ನದ್ಧರಾಗಿರುತ್ತಿದ್ದೆವು.

ಅಪೊಸ್ತಲರ ಕಾರ್ಯಗಳು 14

ಇಕೋನಿಯಾದಲ್ಲಿ ಪೌಲ ಮತ್ತು ಬಾರ್ನಬ

14 ಪೌಲ ಬಾರ್ನಬರು ಇಕೋನಿಯಾ ಪಟ್ಟಣಕ್ಕೆ ಹೋದರು. (ಪ್ರತಿಯೊಂದು ಪಟ್ಟಣದಲ್ಲಿಯೂ ಅವರು ಮಾಡುತ್ತಿದ್ದಂತೆ) ಇಲ್ಲಿಯೂ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಜನರಿಗೆ ಬೋಧಿಸಿದರು. ಪೌಲ ಬಾರ್ನಬರ ಅಮೋಘ ಬೋಧನೆಯನ್ನು ಕೇಳಿ ಅನೇಕ ಯೆಹೂದ್ಯರು ಮತ್ತು ಗ್ರೀಕರು ನಂಬಿಕೊಂಡರು. ಆದರೆ ಯೆಹೂದ್ಯರಲ್ಲಿ ನಂಬದೆ ಹೋದ ಕೆಲವರು ಯೆಹೂದ್ಯರಲ್ಲದವರನ್ನು ಪ್ರಚೋಧಿಸಿ ಸಹೋದರರ ವಿರುದ್ಧ ಜನರನ್ನು ಎಬ್ಬಿಸಿದರು.

ಆದರೆ ಪೌಲ ಬಾರ್ನಬರು ಇಕೋನಿಯಾದಲ್ಲಿ ಬಹುಕಾಲವಿದ್ದು ಪ್ರಭುವಿನ ಕುರಿತು ಧೈರ್ಯದಿಂದ ಮಾತಾಡಿದರು. ಪ್ರಭುವು ಅವರ ಮೂಲಕ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡಿ ತನ್ನ ಕೃಪಾಸಂದೇಶವನ್ನು ನಿರೂಪಿಸಿದನು. ಆದರೆ ಪಟ್ಟಣದ ಜನರಲ್ಲಿ ಕೆಲವರು ಯೆಹೂದ್ಯರ ಮಾತನ್ನೂ ಇನ್ನು ಕೆಲವರು ಪೌಲ ಬಾರ್ನಬರ ಮಾತನ್ನೂ ನಂಬಿಕೊಂಡದ್ದರಿಂದ ಅವರಲ್ಲಿಯೇ ಎರಡು ಪಂಗಡವಾಯಿತು.

ಯೆಹೂದ್ಯರಲ್ಲದವರಲ್ಲಿ ಮತ್ತು ಯೆಹೂದ್ಯರಲ್ಲಿ ಕೆಲವರು ತಮ್ಮ ನಾಯಕರೊಡನೆ ಸೇರಿಕೊಂಡು ಪೌಲ ಬಾರ್ನಬರನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ಇದನ್ನು ಅರಿತುಕೊಂಡ ಪೌಲ ಬಾರ್ನಬರು ಆ ಪಟ್ಟಣವನ್ನು ಬಿಟ್ಟು ಲುಕವೋನಿಯಾದ ಪಟ್ಟಣಗಳಾದ ಲುಸ್ತ್ರ ಮತ್ತು ದರ್ಬೆಗಳಿಗೂ ಹಾಗೂ ಆ ಪಟ್ಟಣಗಳ ಸುತ್ತಮುತ್ತಲಿದ್ದ ಪ್ರದೇಶಗಳಿಗೂ ಹೋದರು. ಅವರು ಅಲ್ಲಿಯೂ ಸುವಾರ್ತೆ ತಿಳಿಸಿದರು.

ಲುಸ್ತ್ರ ಮತ್ತು ದರ್ಬೆಗಳಲ್ಲಿ ಪೌಲನು

ಲುಸ್ತ್ರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಕಾಲುಗಳಲ್ಲಿ ಬಲವಿರಲಿಲ್ಲ. ಹುಟ್ಟುಕುಂಟನಾಗಿದ್ದ ಅವನು ಎಂದೂ ನಡೆದಿರಲಿಲ್ಲ. ಈ ಮನುಷ್ಯನು ತಾನು ಕುಳಿತಲ್ಲೇ ಪೌಲನ ಮಾತನ್ನು ಆಲಿಸುತ್ತಿದ್ದನು. ಪೌಲನು ಅವನನ್ನು ದೃಷ್ಟಿಸಿ ನೋಡಿದನು. ದೇವರು ಗುಣಪಡಿಸಬಲ್ಲನೆಂಬ ನಂಬಿಕೆ ಅವನಲ್ಲಿರುವುದನ್ನು ಪೌಲನು ಕಂಡು, 10 ಅವನಿಗೆ, “ಎದ್ದೇಳು, ಕಾಲೂರಿ ನಿಂತುಕೊ!” ಎಂದು ಗಟ್ಟಿಯಾಗಿ ಹೇಳಿದನು. ಕೂಡಲೇ ಆ ಮನುಷ್ಯನು ಜಿಗಿದುನಿಂತು ನಡೆಯಲಾರಂಭಿಸಿದನು.

11 ಪೌಲನು ಮಾಡಿದ ಈ ಕಾರ್ಯವನ್ನು ಕಂಡ ಜನರು ತಮ್ಮ ಸ್ವಂತ ಲುಕವೋನಿಯ ಭಾಷೆಯಲ್ಲಿ “ದೇವರುಗಳು ಮನುಷ್ಯರೂಪ ಧರಿಸಿ ನಮ್ಮ ಬಳಿಗೆ ಇಳಿದು ಬಂದಿದ್ದಾರೆ!” ಎಂದು ಆರ್ಭಟಿಸಿದರು. 12 ಜನರು ಬಾರ್ನಬನನ್ನು “ಜೆಯುಸ್”[a] ದೇವರೆಂದೂ ಮುಖ್ಯ ಬೋಧಕನಾಗಿದ್ದ ಪೌಲನನ್ನು “ಹೆರ್ಮೆ”[b] ದೇವರೆಂದೂ ಕರೆದರು. 13 ಜೆಯುಸ್‌ನ ಗುಡಿಯು ಪಟ್ಟಣದ ಸಮೀಪದಲ್ಲಿತ್ತು. ಈ ಗುಡಿಯ ಅರ್ಚಕನು ಕೆಲವು ಹೋರಿಗಳನ್ನು ಮತ್ತು ಹೂವುಗಳನ್ನು ಪಟ್ಟಣದ ಬಾಗಿಲಿನ ಬಳಿಗೆ ತೆಗೆದುಕೊಂಡು ಬಂದನು. ಆ ಅರ್ಚಕನು ಮತ್ತು ಜನರು ಪೌಲ ಬಾರ್ನಬರಿಗೆ ಬಲಿಕೊಟ್ಟು ಅವರನ್ನು ಆರಾಧಿಸಬೇಕೆಂದಿದ್ದರು.

14 ಇದನ್ನು ಕೇಳಿದ ಪೌಲ ಬಾರ್ನಬರು ತಮ್ಮ ಬಟ್ಟೆಗಳನ್ನು ಹರಿದುಕೊಂಡು[c] ಜನಸಮೂಹದೊಳಕ್ಕೆ ಓಡಿಹೋಗಿ ಹೀಗೆಂದು ಕೂಗಿ ಹೇಳಿದರು: 15 “ಜನರೇ, ನೀವು ಈ ಕಾರ್ಯಗಳನ್ನು ಮಾಡುತ್ತಿರುವುದೇಕೆ? ನಾವು ದೇವರುಗಳಲ್ಲ. ನಾವು ನಿಮ್ಮಂತೆ ಕೇವಲ ಮನುಷ್ಯರು. ನಿಮಗೆ ಸುವಾರ್ತೆಯನ್ನು ಹೇಳುವುದಕ್ಕಾಗಿ ನಾವು ಬಂದೆವು. ವ್ಯರ್ಥವಾದ ಈ ಕಾರ್ಯಗಳನ್ನು ನೀವು ಬಿಟ್ಟುಬಿಡಿರಿ; ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಿರಿ. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಅವುಗಳಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಮಾಡಿದಾತನು ಆತನೇ.

16 “ಹಿಂದಿನ ಕಾಲದಲ್ಲಿ ದೇವರು ಎಲ್ಲಾ ಜನಾಂಗಗಳನ್ನು ಅವುಗಳ ಇಷ್ಟಕ್ಕನುಸಾರವಾಗಿ ನಡೆಯಲು ಬಿಟ್ಟುಕೊಟ್ಟನು. 17 ಆದರೆ ತಾನೊಬ್ಬನೇ ನಿಜದೇವರೆಂಬುದನ್ನು ಆತನು ತನ್ನ ಒಳ್ಳೆಯ ಕಾರ್ಯಗಳಿಂದ ನಿರೂಪಿಸುತ್ತಿದ್ದಾನೆ. ಆತನು ನಿಮಗೆ ಆಕಾಶದಿಂದ ಮಳೆಯನ್ನೂ ನಿಮ್ಮ ಆಹಾರಕೋಸ್ಕರ ಸಕಾಲದಲ್ಲಿ ಸುಗ್ಗಿಯನ್ನೂ ದಯಪಾಲಿಸಿ ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಿದ್ದಾನೆ.”

18 ಪೌಲ ಬಾರ್ನಬರು ಇಷ್ಟೆಲ್ಲಾ ಹೇಳಿದರೂ ಯಜ್ಞವರ್ಪಿಸಿ ಆರಾಧಿಸದಂತೆ ಜನರನ್ನು ತಡೆಯಲು ಬಹಳ ಪ್ರಯಾಸಪಡಬೇಕಾಯಿತು.

19 ಬಳಿಕ ಕೆಲವು ಯೆಹೂದ್ಯರು ಅಂತಿಯೋಕ್ಯದಿಂದ ಮತ್ತು ಇಕೋನಿಯದಿಂದ ಬಂದು ಪೌಲನಿಗೆ ವಿರೋಧವಾಗಿ ಜನರನ್ನು ಹುರಿದುಂಬಿಸಿ ಪೌಲನಿಗೆ ಕಲ್ಲೆಸೆದು, ಅವನು ಸತ್ತನೆಂದು ಭಾವಿಸಿ ಪಟ್ಟಣದಿಂದ ಹೊರಗೆ ಎಳೆದುಹಾಕಿದರು. 20 ಆದರೆ, ಯೇಸುವಿನ ಶಿಷ್ಯರು ಅವನ ಸುತ್ತಲೂ ನೆರೆದು ಬಂದಾಗ ಅವನು ಎದ್ದು ಪಟ್ಟಣದೊಳಗೆ ಹೋದನು. ಮರುದಿನ ಅವನು ಮತ್ತು ಬಾರ್ನಬನು ದರ್ಬೆಪಟ್ಟಣಕ್ಕೆ ಹೋದರು.

ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ

21 ಪೌಲ ಬಾರ್ನಬರು ದರ್ಬೆ ಪಟ್ಟಣದಲ್ಲೂ ಸುವಾರ್ತೆಯನ್ನು ತಿಳಿಸಿದರು. ಅನೇಕ ಜನರು ಯೇಸುವಿನ ಶಿಷ್ಯರಾದರು. ಪೌಲಬಾರ್ನಬರು ಲುಸ್ತ್ರ, ಇಕೋನಿಯ ಮತ್ತು ಅಂತಿಯೋಕ್ಯ ಪಟ್ಟಣಗಳಿಗೆ ಹಿಂತಿರುಗಿ, 22 ಯೇಸುವಿನ ಶಿಷ್ಯರನ್ನು ಬಲಗೊಳಿಸಿ, ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಪ್ರೋತ್ಸಾಹಿಸಿದರು, “ನಾವು ದೇವರ ರಾಜ್ಯಕ್ಕೆ ಅನೇಕ ಕಷ್ಟಗಳ ಮೂಲಕ ಹೋಗಬೇಕಾಗಿದೆ” ಎಂದು ಬೋಧಿಸಿದರು. 23 ಪೌಲ ಬಾರ್ನಬರು ಪ್ರತಿಯೊಂದು ಸಭೆಗೂ ಹಿರಿಯರನ್ನು ಆಯ್ಕೆ ಮಾಡಿದರು. ಅವರು ಈ ಹಿರಿಯರಿಗೋಸ್ಕರ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರನ್ನು ಪ್ರಭುವಿನ ಕೈಗೆ ಒಪ್ಪಿಸಿಕೊಟ್ಟರು.

24 ಪೌಲ ಬಾರ್ನಬರು ಪಿಸಿದಿಯ ನಾಡಿನ ಮೂಲಕವಾಗಿ ಪಾಂಫೀಲಿಯ ನಾಡಿಗೆ ಬಂದರು. 25 ಅವರು ದೇವರ ಸಂದೇಶವನ್ನು ಪೆರ್ಗ ಪಟ್ಟಣದಲ್ಲಿ ಬೋಧಿಸಿ, ಅಲ್ಲಿಂದ ಅತ್ತಾಲಿಯ ಪಟ್ಟಣಕ್ಕೆ ಬಂದರು. 26 ಅಲ್ಲಿಂದ ಅವರು ಸಿರಿಯಾದ ಅಂತಿಯೋಕ್ಯಕ್ಕೆ ನೌಕಾಯಾನ ಮಾಡಿದರು. ಈವರೆಗೆ ಮಾಡಿಮುಗಿಸಿದ್ದ ಸೇವಾಕಾರ್ಯಕ್ಕಾಗಿ ದೇವರ ಕೈಗೆ ಒಪ್ಪಿಸಿ ಕಳುಹಿಸಿಕೊಟ್ಟಿದ್ದವರು ಈ ಪಟ್ಟಣದ ವಿಶ್ವಾಸಿಗಳೇ.

27 ಪೌಲ ಬಾರ್ನಬರು ಇಲ್ಲಿಗೆ ತಲುಪಿದಾಗ, ಸಭಿಕರನ್ನೆಲ್ಲ ಒಟ್ಟುಗೂಡಿಸಿ, ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಅವರಿಗೆ ತಿಳಿಸಿದರು. ಮತ್ತು “ಇತರ ಜನಾಂಗಗಳವರು ಸಹ ನಂಬಿಕೊಳ್ಳುವಂತೆ ದೇವರು ಬಾಗಿಲನ್ನು ತೆರೆದಿದ್ದಾನೆ!” ಎಂದು ವಿವರಿಸಿದರು. 28 ಅಲ್ಲಿ ಪೌಲಬಾರ್ನಬರು ಯೇಸುವಿನ ಶಿಷ್ಯರೊಂದಿಗೆ ಬಹುಕಾಲ ಇದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International