Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 34

ಯೆಹೂದದ ಅರಸಾನದ ಯೋಷೀಯ

34 ಯೋಷೀಯನು ಅರಸನಾದಾಗ ಎಂಟು ವರ್ಷ ಪ್ರಾಯದವನಾಗಿದ್ದನು. ಅವನು ಮೂವತ್ತೊಂದು ವರ್ಷದ ತನಕ ಜೆರುಸಲೇಮಿನಲ್ಲಿ ರಾಜ್ಯಭಾರವನ್ನು ಮಾಡಿದನು. ಯೋಷೀಯನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನೇ ಮಾಡಿದನು. ಅವನು ತನ್ನ ಪೂರ್ವಿಕನಾದ ದಾವೀದನಂತೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. ಅವನು ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ಬಿಟ್ಟುಬಿಡಲಿಲ್ಲ. ಅವನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪಿತೃವಾದ ದಾವೀದನು ಅನುಸರಿಸಿದ್ದ ದೇವರನ್ನು ಅನುಸರಿಸಿದನು. ಆಗ ಅವನು ಇನ್ನೂ ಎಳೆಯ ಪ್ರಾಯದವನಾಗಿದ್ದನು. ಅವನು ಪಟ್ಟಕ್ಕೆ ಬಂದ ಹನ್ನೆರಡನೆಯ ವರ್ಷದಲ್ಲಿ, ಜೆರುಸಲೇಮಿನಲ್ಲಿ ಮತ್ತು ಯೆಹೂದದಲ್ಲಿದ್ದ ಎತ್ತರವಾದ ಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಎರಕದ ಮತ್ತು ಕೆತ್ತನೆಯ ವಿಗ್ರಹಗಳನ್ನೂ ನಾಶಮಾಡಿದನು. ಜನರು ಬಾಳ್ ದೇವರ ವಿಗ್ರಹಗಳನ್ನೂ ಯಜ್ಞವೇದಿಕೆಗಳನ್ನೂ ಯೋಷೀಯನ ಮುಂದೆಯೇ ಕೆಡವಿಹಾಕಿದರು. ಆಮೇಲೆ ಯೋಷೀಯನು ಉನ್ನತಸ್ಥಳದಲ್ಲಿದ್ದ ಧೂಪವೇದಿಕೆಯನ್ನು ಕೆಡವಿ ಹಾಕಿ, ವಿಗ್ರಹಗಳನ್ನೆಲ್ಲಾ ಒಡೆದು ಪುಡಿಮಾಡಿ ಬಾಳ್ ದೇವರ ಪೂಜಾರಿಗಳ ಸಮಾಧಿಯ ಮೇಲೆ ಚೆಲ್ಲಿದನು. ಯೋಷೀಯನು ಬಾಳ್ ದೇವರ ವಿಗ್ರಹಗಳನ್ನೂ ಪೂಜಾರಿಯವರ ಎಲುಬುಗಳನ್ನೂ ಅವರ ವೇದಿಕೆಗಳ ಮೇಲೆಯೇ ಸುಟ್ಟುಬಿಟ್ಟನು. ಹೀಗೆ ಅವನು ಯೆಹೂದವನ್ನು ಮತ್ತು ಜೆರುಸಲೇಮನ್ನು ಶುಚಿಗೊಳಿಸಿದನು ಮತ್ತು ಶುದ್ಧೀಕರಿಸಿದನು. ಅದೇ ಪ್ರಕಾರ ಎಫ್ರಾಯೀಮ್, ಮನಸ್ಸೆ, ಸಿಮೆಯೋನ್ ಮತ್ತು ನಫ್ತಾಲಿ ಪ್ರಾಂತ್ಯಗಳ ಉದ್ದಕ್ಕೂ ಮಾಡಿದನು. ಆ ಪಟ್ಟಣಗಳ ಸಮೀಪದಲ್ಲಿದ್ದ ಹಾಳುಬಿದ್ದವುಗಳಿಗೂ ಅವನು ಹಾಗೆಯೇ ಮಾಡಿದನು. ಅಲ್ಲಿಂದ ಮುಂದೆ ಇಸ್ರೇಲ್ ದೇಶದಲ್ಲೂ ಪೂಜಾಸ್ಥಳಗಳನ್ನು ಕೆಡವಿ, ಅಶೇರಸ್ತಂಭಗಳನ್ನು ತುಂಡರಿಸಿ ಎರಕದ ಕೆತ್ತನೆಯ ವಿಗ್ರಹಗಳನ್ನು ಪುಡಿಮಾಡಿ, ಧೂಪವೇದಿಕೆಗಳನ್ನೆಲ್ಲಾ ನಾಶಮಾಡಿ ಜೆರುಸಲೇಮಿಗೆ ಹಿಂತಿರುಗಿದನು.

ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಯೋಷೀಯನು ಶಾಫಾನ್, ಮಾಸೇಯ ಮತ್ತು ಯೋವಾಹ ಇವರನ್ನು ತನ್ನ ದೇವರಾದ ಯೆಹೋವನ ಆಲಯವನ್ನು ಸರಿಪಡಿಸಲು ಕಳುಹಿಸಿದನು. ಶಾಫಾನನ ತಂದೆಯ ಹೆಸರು ಅಚಲ್ಯ. ಮಾಸೇಯನು ನಗರದ ನಾಯಕನಾಗಿದ್ದನು. ಯೋವಾಹನ ತಂದೆಯ ಹೆಸರು ಯೆಹೋವಾಹಾಜ್. ಯೋವಾಹನು ರಾಜಲೇಖಕನೂ ಆಗಿದ್ದನು.

ಯೆಹೂದವನ್ನು ಮತ್ತು ದೇವಾಲಯವನ್ನು ಶುಚಿಮಾಡುವ ಉದ್ದೇಶದಿಂದ ಯೋಷೀಯನು ದೇವಾಲಯದ ದುರಸ್ತಿಕಾರ್ಯಕ್ಕೆ ಕೈ ಹಾಕಿದನು. ಜನರು ದೇವಾಲಯದ ದುರಸ್ತಿಗಾಗಿ ಅರ್ಪಿಸಿದ್ದ ಕಾಣಿಕೆಯನ್ನು ಅವರು ಮಹಾಯಾಜಕನಾದ ಹಿಲ್ಕೀಯನಿಗೆ ತಂದುಕೊಟ್ಟರು. ಮನಸ್ಸೆ, ಎಫ್ರಾಯೀಮ್ ಮತ್ತು ಇಸ್ರೇಲ್ ರಾಜ್ಯದ ಜನರು ಕೊಟ್ಟ ಕಾಣಿಕೆಯನ್ನು ದ್ವಾರಪಾಲಕರಾದ ಲೇವಿಯರು ಒಟ್ಟುಗೂಡಿಸಿದರು. ಯೆಹೂದ, ಬೆನ್ಯಾಮೀನ್ ಕುಲದವರೂ ಜೆರುಸಲೇಮಿನಲ್ಲಿ ವಾಸಿಸುವರೂ ಕೊಟ್ಟ ಕಾಣಿಕೆಗಳನ್ನು ಅವರು ತೆಗೆದುಕೊಂಡರು. 10 ದೇವಾಲಯದ ಕೆಲಸ ಮಾಡಿದವರಿಗೆ ಲೇವಿಯರು ಹಣವನ್ನು ಕೊಟ್ಟರು. 11 ಬಡಗಿಗಳಿಗೂ ಮೇಸ್ತ್ರಿಗಳಿಗೂ ಈ ಹಣದಿಂದ ಸಂಬಳ ಕೊಟ್ಟರು; ಬೇಕಾಗಿದ್ದ ಕಲ್ಲುಗಳನ್ನೂ ಮರದ ತೊಲೆಗಳನ್ನೂ ಇತರ ವಸ್ತುಗಳನ್ನೂ ಕೊಂಡುಕೊಂಡರು. ಹಿಂದಿನ ಕಾಲದಲ್ಲಿ ಯೆಹೂದದ ಅರಸರು ಯೆಹೋವನ ದೇವಾಲಯವನ್ನು ಸರಿಪಡಿಸುವುದರ ಬಗ್ಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಆದ್ದರಿಂದ ಕಟ್ಟಡವು ಹಳೆಯದಾಗಿ ಬೀಳುವ ಸ್ಥಿತಿಯಲ್ಲಿತ್ತು. 12-13 ಕೆಲಸಗಾರರು ನಂಬಿಗಸ್ತಿಕೆಯಿಂದ ಕೆಲಸ ಮಾಡಿದರು. ಅವರು ಮೇಲ್ವಿಚಾರಕರು ಯಹತ್ ಮತ್ತು ಓಬದ್ಯ. ಇವರು ಲೇವಿಯರಾಗಿದ್ದರು ಮತ್ತು ಮೆರಾರೀಯ ಸಂತತಿಯವರಾಗಿದ್ದರು. ಇತರ ಮೇಲ್ವಿಚಾರಕರು ಯಾರೆಂದರೆ: ಜೆಕರ್ಯ ಮತ್ತು ಮೆಷುಲ್ಲಾಮ್. ಇವರು ಕೆಹಾತ್ಯನ ಸಂತತಿಯವರಾಗಿದ್ದರು. ವಾದ್ಯಗಳನ್ನು ಬಾರಿಸುವುದರಲ್ಲಿ ನಿಪುಣರಾದ ಲೇವಿಯರೂ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಇತರ ಕೆಲವು ಲೇವಿಯರು, ಆ ಯೋಜನೆಯ ಅಧಿಕಾರಿಗಳಾಗಿಯೂ ಕಾರ್ಯದರ್ಶಿಗಳಾಗಿಯೂ ದ್ವಾರಪಾಲಕರಾಗಿಯೂ ನೇಮಕ ಮಾಡಲ್ಪಟ್ಟವರಾಗಿದ್ದರು.

ಧರ್ಮಶಾಸ್ತ್ರವು ದೊರೆತದ್ದು

14 ದೇವಾಲಯದೊಳಗೆ ಶೇಖರಿಸಿಟ್ಟಿದ್ದ ಹಣವನ್ನು ಲೇವಿಯರು ತಂದುಕೊಟ್ಟರು. ಅದೇ ಸಮಯದಲ್ಲಿ ಮಹಾಯಾಜಕನಾದ ಹಿಲ್ಕೀಯನು ಮೋಶೆಯ ಧರ್ಮಶಾಸ್ತ್ರದ ಪ್ರತಿಯೊಂದನ್ನು ದೇವಾಲಯದಲ್ಲಿ ಕಂಡನು. 15 ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಯೆಹೋವನ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿ ಅದನ್ನು ಕೊಟ್ಟನು. 16 ಶಾಫಾನನು ಅದನ್ನು ಅರಸನಾದ ಯೋಷೀಯನಿಗೆ ತಂದು ಅದು ದೊರೆತ ವಿಷಯವನ್ನು ತಿಳಿಸಿದನು. “ನೀನು ಹೇಳಿದ ಪ್ರಕಾರವೇ ನಿನ್ನ ಸೇವಕರು ಮಾಡುತ್ತಿದ್ದಾರೆ. 17 ದೇವಾಲಯದೊಳಗಿದ್ದ ಹಣವನ್ನು ಅವರು ತೆಗೆದು ಅದನ್ನು ಕೆಲಸಗಾರರಿಗೂ ಮೇಲ್ವಿಚಾರಕರಿಗೂ ಕೊಡುತ್ತಿದ್ದಾರೆ. ಯಾಜಕನಾದ ಹಿಲ್ಕೀಯನು ಈ ಪುಸ್ತಕವನ್ನು ನನಗೆ ಕೊಟ್ಟನು” 18 ಎಂದು ಹೇಳಿ ಆ ಪುಸ್ತಕವನ್ನು ಓದತೊಡಗಿದನು. ಅವನು ಅರಸನ ಮುಂದೆ ನಿಂತುಕೊಂಡು ಓದುತ್ತಿರಲು 19 ಅರಸನಾದ ಯೋಷೀಯನು ಧರ್ಮಶಾಸ್ತ್ರದ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡನು. 20 ಆಗ ಅರಸನು ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕನ ಮಗನಾದ ಅಬ್ದೋನ್, ಕಾರ್ಯದರ್ಶಿಯಾದ ಶಾಫಾನ್ ಮತ್ತು ಸೇವಕನಾದ ಅಸಾಯ ಇವರಿಗೆ ಹೇಳಿದ್ದೇನೆಂದರೆ, 21 “ಹೋಗಿ ನನ್ನ ವಿಷಯವಾಗಿಯೂ ಇಸ್ರೇಲ್ ಮತ್ತು ಯೆಹೂದದಲ್ಲಿರುವ ಜನರಿಗೋಸ್ಕರವಾಗಿಯೂ ಯೆಹೋವನಲ್ಲಿ ವಿಚಾರಿಸಿರಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಯಾಕೆಂದರೆ ನಮ್ಮ ಪೂರ್ವಿಕರು ಆತನ ಧರ್ಮಶಾಸ್ತ್ರದ ಪ್ರಕಾರ ನಡೆದುಕೊಂಡಿಲ್ಲ. ಈ ಪುಸ್ತಕದಲ್ಲಿ ಮಾಡಬೇಕೆಂದು ಹೇಳಿದ್ದನ್ನು ಅವರು ಮಾಡದೆ ಹೋಗಿದ್ದಾರೆ” ಎಂದು ಹೇಳಿದನು.

22 ಹಿಲ್ಕೀಯನೂ ಅರಸನ ಸೇವಕರೂ ಪ್ರವಾದಿನಿಯಾಗಿದ್ದ ಹುಲ್ದಳ ಬಳಿಗೆ ಹೋದರು. ಆಕೆ ತೊಕ್ಹತನ ಮಗನಾದ ಶಲ್ಲೂಮನ ಹೆಂಡತಿಯಾಗಿದ್ದಳು. ತೊಕ್ಹತನು ಹಸ್ರನ ಮಗ. ಇವನು ಅರಸನ ಬಟ್ಟೆಬರೆಗಳ ಮುಖ್ಯಸ್ತನಾಗಿದ್ದನು. ಹುಲ್ದಳು ಜೆರುಸಲೇಮಿನ ಹೊಸ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಳು. ಅರಸನು ಹೇಳಿದ್ದನ್ನೆಲ್ಲಾ ಸೇವಕರು ಆಕೆಗೆ ತಿಳಿಸಿದರು. 23 ಹುಲ್ದಳು ಅವರಿಗೆ, “ಅರಸನಾದ ಯೋಷೀಯನಿಗೆ ಹೋಗಿ ತಿಳಿಸಿರಿ. 24 ಯೆಹೋವನು ಹೇಳುವುದೇನೆಂದರೆ, ‘ನಾನು ಈ ಸ್ಥಳಕ್ಕೂ ಇಲ್ಲಿ ವಾಸಿಸುವವರಿಗೂ ಸಂಕಟವನ್ನು ಬರಮಾಡುವೆನು. ಯೆಹೂದ ದೇಶದ ಅರಸನ ಮುಂದೆ ಓದಿದಂಥ ಪುಸ್ತಕದಲ್ಲಿ ಬರೆಯಿಸಿದ ಎಲ್ಲಾ ಶಾಪಗಳನ್ನು ನಾನು ಬರಮಾಡುವೆನು. 25 ಯಾಕೆಂದರೆ ಜನರು ನನ್ನನ್ನು ತೊರೆದು ಸುಳ್ಳುದೇವರುಗಳಿಗೆ ಧೂಪಹಾಕಿದರು. ಅವರು ತಮ್ಮ ಕೆಟ್ಟಕಾರ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ಉರಿಯುವ ಬೆಂಕಿಯಂತಿರುವ ನನ್ನ ಕೋಪಾಗ್ನಿಯನ್ನು ಆರಿಸಲು ಸಾಧ್ಯವಿಲ್ಲ.’

26 “ಆದರೆ ಯೆಹೋವನನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಾದ ಯೋಷೀಯನಿಗೆ ಹೀಗೆ ಹೇಳಿರಿ: ‘ನೀನು ಸ್ವಲ್ಪಕಾಲದ ಹಿಂದೆ ಕೇಳಿದ ವಿಷಯಗಳ ಬಗ್ಗೆ ಇಸ್ರೇಲಿನ ಯೆಹೋವನು ಹೇಳುವುದೇನೆಂದರೆ, 27 ಯೋಷೀಯನೇ, ನೀನು ನನ್ನ ಮಾತುಗಳನ್ನು ಕೇಳಿದಾಗ ನನ್ನ ಮುಂದೆ ತಗ್ಗಿಸಿಕೊಂಡು ಪಶ್ಚಾತ್ತಾಪಪಟ್ಟು ನಿನ್ನ ಬಟ್ಟೆಗಳನ್ನು ಹರಿದುಕೊಂಡೆ. ನನ್ನ ಮುಂದೆ ನೀನು ಗೋಳಾಡಿದೆ. ನಿನ್ನ ಹೃದಯವು ಮೃದುವಾದದ್ದರಿಂದ, ನಿನ್ನನ್ನು ಲಕ್ಷಿಸಿದೆನು. 28 ನಿನ್ನನ್ನು ನಿನ್ನ ಪೂರ್ವಿಕರ ಬಳಿಗೆ ತೆಗೆದುಕೊಳ್ಳುತ್ತೇನೆ. ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆ. ನೀನು ನಿನ್ನ ಸಮಾಧಿಗೆ ಸಮಾಧಾನದಿಂದ ಸೇರುವೆ. ನಾನು ಈ ಸ್ಥಳದ ಮೇಲೂ ಈ ಸ್ಥಳದಲ್ಲಿ ವಾಸಿಸುವವರ ಮೇಲೂ ತರುವ ಸಂಕಟಗಳಲ್ಲಿ ನೀನು ಒಂದಾನ್ನಾದರೂ ಅನುಭವಿಸುವದಿಲ್ಲ.’” ಹಿಲ್ಕೀಯನೂ ಅರಸನ ಸೇವಕರೂ ಈ ಸಂದೇಶವನ್ನು ಅರಸನಾದ ಯೋಷೀಯನಿಗೆ ತಂದರು.

29 ಅರಸನಾದ ಯೋಷೀಯನು ಯೆಹೂದದ ಮತ್ತು ಜೆರುಸಲೇಮಿನ ಪ್ರಧಾನರನ್ನು ತನ್ನ ಬಳಿಗೆ ಕರೆಯಿಸಿದನು. 30 ಅರಸನೂ ಯೆಹೂದದಲ್ಲಿ ವಾಸಿಸುವ ಜನರೂ ಜೆರುಸಲೇಮಿನಲ್ಲಿ ವಾಸಿಸುವ ಜನರೂ ಯಾಜಕರೂ ಲೇವಿಯರೂ ದೊಡ್ಡವರು ಸಣ್ಣವರು ಎಂಬ ವ್ಯತ್ಯಾಸವಿಲ್ಲದೆ ತಮ್ಮ ಅರಸನೊಂದಿಗೆ ಇದ್ದರು. ಯೋಷೀಯನು ಧರ್ಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದನು. ಆ ಪುಸ್ತಕವು ದೇವಾಲಯದಲ್ಲಿ ಸಿಕ್ಕಿತ್ತು. 31 ಆಮೇಲೆ ಅರಸನು ತನ್ನ ಸ್ಥಳದಲ್ಲಿ ಎದ್ದುನಿಂತು, ಯೆಹೋವನ ಎಲ್ಲಾ ಕಟ್ಟಳೆಗಳಿಗೆ ವಿಧೇಯನಾಗಿ ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ಅನುಸರಿಸುವುದಾಗಿ ಪ್ರಮಾಣಮಾಡಿದನು. 32 ಆಮೇಲೆ ಎಲ್ಲಾ ಜೆರುಸಲೇಮಿನವರಿಂದಲೂ ಮತ್ತು ಬೆನ್ಯಾಮೀನ್ಯರಿಂದಲೂ ಪ್ರಮಾಣ ಮಾಡಿಸಿದನು. ತಮ್ಮ ಪೂರ್ವಿಕರು ವಿಧೇಯರಾಗಿದ್ದ ದೇವರಿಗೆ ತಾವೂ ವಿಧೇಯರಾಗಿರುವುದಾಗಿ ಅವರು ಪ್ರಮಾಣ ಮಾಡಿದರು. 33 ಇಸ್ರೇಲ್ ಜನರ ಬಳಿ ನಾನಾ ಜನಾಂಗದವರ ವಿಗ್ರಹಗಳಿದ್ದವು. ಆದರೆ ಯೋಷೀಯನು ಆ ವಿಗ್ರಹಗಳನ್ನೆಲ್ಲಾ ನಾಶಮಾಡಿದನು. ಇಸ್ರೇಲರು ದೇವರಾದ ಯೆಹೋವನ ಸೇವೆಮಾಡುವಂತೆ ಯೋಷೀಯನು ಮಾಡಿದನು. ಯೋಷೀಯನು ಬದುಕಿದ್ದಷ್ಟು ಕಾಲ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಸೇವೆಮಾಡಿದರು.

ಪ್ರಕಟನೆ 20

ಒಂದುಸಾವಿರ ವರ್ಷಗಳು

20 ಆಗ ಒಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಆ ದೇವದೂತನು ತಳವಿಲ್ಲದ ಕೂಪದ ಬೀಗದ ಕೈಯನ್ನು ಹೊಂದಿದ್ದನು ಮತ್ತು ಒಂದು ದೊಡ್ಡ ಸರಪಣಿಯನ್ನೂ ತನ್ನ ಕೈಯಲ್ಲಿ ಹಿಡಿದಿದ್ದನು. ಆ ದೇವದೂತನು ಪುರಾತನ ಘಟಸರ್ಪವನ್ನು ಹಿಡಿದನು. ಆ ಘಟಸರ್ಪವೇ ಸೈತಾನ. ದೇವದೂತನು ಅವನನ್ನು ಸರಪಣಿಗಳಿಂದ ಕಟ್ಟಿ ಒಂದುಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು. ಆ ದೇವದೂತನು ಘಟಸರ್ಪವನ್ನು ತಳವಿಲ್ಲದ ಕೂಪಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿ ಬೀಗಹಾಕಿದನು, ಆ ಘಟಸರ್ಪವು ಒಂದುಸಾವಿರ ವರ್ಷಗಳ ಕಾಲ ಮುಗಿಯುವ ತನಕ ಲೋಕದ ಜನರನ್ನು ಮರುಳು ಮಾಡದಿರಲೆಂದು ಆ ದೇವದೂತನು ಹೀಗೆ ಮಾಡಿದನು. ಒಂದುಸಾವಿರ ವರ್ಷಗಳ ತರುವಾಯ ಆ ಘಟಸರ್ಪಕ್ಕೆ ಸ್ವಲ್ಪಕಾಲ ಬಿಡುಗಡೆ ಮಾಡಲಾಗುವುದು.

ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತಿರುವುದನ್ನು ನೋಡಿದೆನು. ಈ ಜನರು ತೀರ್ಪು ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದೇಶಕ್ಕೆ ನಂಬಿಗಸ್ತರಾಗಿದ್ದರ ನಿಮಿತ್ತವಾಗಿ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವವನ್ನು ಪಡೆದು ಕ್ರಿಸ್ತನೊಂದಿಗೆ ಒಂದುಸಾವಿರ ವರ್ಷ ಆಳಿದರು. (ಸತ್ತುಹೋಗಿದ್ದ ಇತರ ಜನರು ಒಂದುಸಾವಿರ ವರ್ಷಗಳು ಮುಗಿಯುವ ತನಕ ಜೀವಂತರಾಗಲೇ ಇಲ್ಲ.)

ಇದೇ ಪ್ರಥಮ ಪುನರುತ್ಥಾನ. ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಪವಿತ್ರರೂ ಧನ್ಯರೂ ಆಗಿದ್ದಾರೆ. ಈ ಜನರ ಮೇಲೆ ಎರಡನೆ ಮರಣಕ್ಕೆ ಅಧಿಕಾರವಿಲ್ಲ. ಆ ಜನರು ದೇವರಿಗೆ ಮತ್ತು ಕ್ರಿಸ್ತನಿಗೆ ಯಾಜಕರಾಗಿರುತ್ತಾರೆ. ಅವರು ಆತನೊಂದಿಗೆ ಒಂದು ಸಾವಿರ ವರ್ಷ ಆಳುತ್ತಾರೆ.

ಸೈತಾನನಿಗೆ ಸೋಲು

ಒಂದುಸಾವಿರ ವರ್ಷಗಳು ಮುಗಿದ ನಂತರ, ಸೈತಾನನನ್ನು ಅವನ ಸೆರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಸೈತಾನನು ಗೋಗ್ ಮತ್ತು ಮಾಗೋಗ್ ಜನಾಂಗಗಳನ್ನು ಮರುಳುಗೊಳಿಸಲು ಭೂಲೋಕದಲ್ಲೆಲ್ಲಾ ಹೋಗಿ ಆ ಜನರನ್ನು ಯುದ್ಧಕ್ಕೆ ಒಟ್ಟುಗೂಡಿಸುತ್ತಾನೆ. ಅವರು ಸಮುದ್ರ ತೀರದ ಮರಳಿನ ಕಣಗಳಂತೆ ಅಸಂಖ್ಯಾತವಾಗಿರುತ್ತಾರೆ.

ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು. 10 ಸೈತಾನನನ್ನು (ಇವನೇ ಜನರನ್ನು ಮೋಸಗೊಳಿಸಿದವನು.) ಬೆಂಕಿಗಂಧಕಗಳು ಉರಿಯುತ್ತಿದ್ದ ಕೆರೆಗೆ ಎಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಳ್ಳುಪ್ರವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸುವರು.

ಲೋಕದ ಜನರಿಗಾಗುವ ತೀರ್ಪು

11 ಬಳಿಕ ನಾನು ಒಂದು ದೊಡ್ಡ ಬಿಳಿ ಸಿಂಹಾಸನವನ್ನೂ ಆ ಸಿಂಹಾಸನದ ಮೇಲೆ ಕುಳಿತಿದ್ದಾತನನ್ನೂ ನೋಡಿದೆನು. ಭೂಮಿ ಮತ್ತು ಆಕಾಶಗಳು ಆತನ ಬಳಿಯಿಂದ ಓಡಿಹೋಗಿ ಅದೃಶ್ಯವಾದವು. 12 ಸತ್ತುಹೋಗಿದ್ದ ಚಿಕ್ಕವರು ಮತ್ತು ದೊಡ್ಡವರು ಸಿಂಹಾಸನದ ಮುಂದೆ ನಿಂತಿದ್ದರು. ಆಗ ಜೀವಬಾಧ್ಯರ ಪುಸ್ತಕವನ್ನು ತೆರೆಯಲಾಯಿತು. ತೆರೆದಿದ್ದ ಇತರ ಪುಸ್ತಕಗಳೂ ಅಲ್ಲಿದ್ದವು. ಸತ್ತುಹೋಗಿದ್ದ ಈ ಜನರಿಗೆ ಅವರು ಮಾಡಿದ್ದ ಕಾರ್ಯಗಳ ಆಧಾರದ ಮೇಲೆ ತೀರ್ಪು ನೀಡಲಾಯಿತು. ಇವುಗಳು ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ.

13 ಸಮುದ್ರವು ತನ್ನಲ್ಲಿ ಸತ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತನ್ನಲ್ಲಿದ್ದ ಸತ್ತ ಜನರನ್ನು ಒಪ್ಪಿಸಿದವು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕಾರ್ಯಗಳಿಗನುಸಾರವಾಗಿ ತೀರ್ಪು ನೀಡಲಾಯಿತು. 14 ಆಮೇಲೆ ಮೃತ್ಯುವನ್ನೂ ಪಾತಾಳವನ್ನೂ ಬೆಂಕಿಯ ಕೆರೆಗೆ ಎಸೆಯಲಾಯಿತು. ಈ ಬೆಂಕಿಯ ಕೆರೆಯು ಎರಡನೆಯ ಮರಣ. 15 ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರು ಬರೆಯಲ್ಪಟ್ಟಿಲ್ಲವೋ ಆ ವ್ಯಕ್ತಿಯನ್ನು ಬೆಂಕಿಯ ಕೆರೆಗೆ ಎಸೆಯಲಾಯಿತು.

ಮಲಾಕಿ 2

ಯಾಜಕರ ನಿಯಮಗಳು

“ಯಾಜಕರೇ, ನನ್ನ ಮಾತನ್ನು ಕೇಳಿರಿ. ನಾನು ಹೇಳುವುದಕ್ಕೆ ಗಮನ ಕೊಡಿರಿ. ಈ ನಿಯಮಗಳನ್ನು ನಿಮಗಾಗಿ ಹೇಳುತ್ತಿದ್ದೇನೆ. ನನ್ನ ನಾಮವನ್ನು ಘನಪಡಿಸದೆ ಹೋದರೆ ಕೆಟ್ಟ ವಿಷಯಗಳು ನಿಮಗೆ ಪ್ರಾಪ್ತಿಯಾಗುವವು. ನೀವು ಆಶೀರ್ವದಿಸುವಿರಿ. ಆದರೆ ಅದು ಶಾಪವಾಗುವದು. ಕೆಟ್ಟ ವಿಷಯಗಳು ನೆರವೇರುವಂತೆ ನಾನು ಮಾಡುವೆನು. ಯಾಕೆಂದರೆ ನೀವು ನನ್ನ ಹೆಸರನ್ನು ಘನಪಡಿಸುವದಿಲ್ಲ.” ಇದನ್ನು ಸರ್ವಶಕ್ತನಾದ ಯೆಹೋವನು ನುಡಿದಿದ್ದಾನೆ.

“ನಿಮ್ಮ ಸಂತತಿಯವರನ್ನು ನಾನು ಶಿಕ್ಷಿಸುವೆನು. ಹಬ್ಬದ ದಿವಸಗಳಲ್ಲಿ ಯಾಜಕರೇ, ನೀವು ನನಗೆ ಯಜ್ಞಗಳನ್ನರ್ಪಿಸುತ್ತೀರಿ. ಪಶುವನ್ನು ಕೊಯಿದ ಬಳಿಕ ಅದರ ಒಳಗಿನ ಭಾಗಗಳನ್ನೂ ಅದರ ಮಲವನ್ನು ನಿಮ್ಮ ಮುಖಗಳಿಗೆ ಹಚ್ಚುವೆನು ಮತ್ತು ನೀವು ಅದರೊಂದಿಗೆ ಹೊರಗೆ ಬಿಸಾಡಲ್ಪಡುವಿರಿ. ಆಗ ನೀವು ನಾನು ಈ ಆಜ್ಞೆಯನ್ನು ಯಾಕೆ ಕೊಡುತ್ತಿದ್ದೇನೆಂದು ಅರಿಯುವಿರಿ. ಲೇವಿಯರೊಂದಿಗೆ ನಾನು ಮಾಡಿರುವ ಒಡಂಬಡಿಕೆಯು ಮುಂದುವರಿಯುವ ಹಾಗೆ ನಾನು ಈ ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇನೆ.” ಸೇನಾಧೀಶ್ವರನಾದ ಯೆಹೋವನು ಈ ಮಾತುಗಳನ್ನು ಅಂದಿದ್ದಾನೆ.

ಯೆಹೋವನು ಹೀಗೆನ್ನುತ್ತಾನೆ, “ಆ ಒಡಂಬಡಿಕೆಯನ್ನು ನಾನು ಲೇವಿಯರೊಂದಿಗೆ ಮಾಡಿದೆನು. ನಾನು ಅವನಿಗೆ ಜೀವ ಮತ್ತು ಸಮಾಧಾನವನ್ನು ವಾಗ್ದಾನ ಮಾಡಿ ಅವನಿಗೆ ಅದನ್ನು ಕೊಟ್ಟೆನು. ಲೇವಿಯು ನನ್ನನ್ನು ಘನಪಡಿಸಿದನು. ನನ್ನ ಹೆಸರನ್ನು ಗೌರವಿಸಿದನು. ಲೇವಿಯು ಸುಳ್ಳನ್ನು ಸಮರ್ಥಿಸದೆ ಸತ್ಯ ಬೋಧನೆಯನ್ನು ಬೋಧಿಸಿದನು. ಅವನು ಪ್ರಮಾಣಿಕನಾಗಿದ್ದು ಸಮಾಧಾನವನ್ನು ಪ್ರೀತಿಸುತ್ತಿದ್ದನು. ಲೇವಿಯು ನನಗೆ ವಿಧೇಯನಾಗಿದ್ದು ಎಷ್ಟೋ ಮಂದಿ ಕೆಟ್ಟದಾರಿಯಲ್ಲಿ ಹೋಗುತ್ತಿರುವವರನ್ನು ನನ್ನ ಶಿಕ್ಷೆಯಿಂದ ಪಾರುಮಾಡಿದನು. ಒಬ್ಬ ಯಾಜಕನು ಯೆಹೋವನ ಬೋಧನೆಯನ್ನು ಚೆನ್ನಾಗಿ ಅರಿತಿರಬೇಕು. ಜನರು ಯಾಜಕನ ಬಳಿಗೆ ಹೋಗಿ ದೇವರ ಬೋಧನೆಯನ್ನು ಕೇಳಿ ತಿಳಿದುಕೊಳ್ಳಬೇಕು. ಯಾಜಕನು ದೇವರ ಸಂದೇಶವನ್ನು ಜನರಿಗೆ ತಲುಪಿಸುವವನಾಗಿರಬೇಕು.

“ಆದರೆ ಯಾಜಕರೇ, ನೀವು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿ ಬಿಟ್ಟಿರಿ. ಅನೇಕ ಜನರು ತಪ್ಪು ದಾರಿಯಲ್ಲಿ ಹೋಗುವಂತೆ ಮಾಡಲು ನೀವು ಉಪದೇಶವನ್ನು ಬಳಸಿಕೊಂಡಿರಿ. ಲೇವಿಯೊಂದಿಗೆ ಮಾಡಿದ ಒಡಂಬಡಿಕೆಯನ್ನು ನೀವು ಹಾಳುಮಾಡಿಬಿಟ್ಟಿರಿ.” ಇದು ಸರ್ವಶಕ್ತನಾದ ಯೆಹೋವನ ನುಡಿ. “ನಾನು ಹೇಳಿರುವ ಪ್ರಕಾರ ನೀವು ಜೀವಿಸುತ್ತಿಲ್ಲ. ನೀವು ನನ್ನ ಉಪದೇಶವನ್ನು ಜನರಿಗೆ ತಿಳಿಸುವಾಗ ಮುಖದಾಕ್ಷಿಣ್ಯ ಮಾಡುತ್ತೀರಿ. ಈ ಕಾರಣದಿಂದಾಗಿ ನಿಮ್ಮನ್ನು ಗಣನೆಗೆ ಬಾರದವರಂತೆಯೂ ಜನರು ನಿಮ್ಮನ್ನು ಸನ್ಮಾನಿಸದಂತೆಯೂ ಮಾಡುವೆನು.”

ಯೆಹೂದವು ದೇವರಿಗೆ ನಂಬಿಗಸ್ತವಾಗಿಲ್ಲ

10 ನಮಗೆಲ್ಲರಿಗೂ ಒಬ್ಬನೇ ತಂದೆಯಾದ ದೇವರು. ಆ ದೇವರೇ ನಮ್ಮೆಲ್ಲರನ್ನು ಉಂಟುಮಾಡಿದನು. ಹೀಗಿರುವಾಗ ಜನರು ತಮ್ಮ ಸಹೋದರರನ್ನು ಯಾಕೆ ಮೋಸಪಡಿಸುತ್ತಾರೆ? ಒಡಂಬಡಿಕೆಯನ್ನು ಅವರು ಮಾನ್ಯತೆ ಮಾಡುವವರೆಂದು ಜನರಿಗೆ ತೋರಿಸುವದಿಲ್ಲ. ತಮ್ಮ ಪೂರ್ವಿಕರು ಯೆಹೋವನೊಂದಿಗೆ ಮಾಡಿದ್ದ ಒಡಂಬಡಿಕೆಯನ್ನು ಅವರು ಮಾನ್ಯತೆ ಮಾಡಲಿಲ್ಲ. 11 ಯೆಹೂದದ ಜನರು ಬೇರೆ ಜನರಿಗೆ ಮೋಸ ಮಾಡಿದರು. ಜೆರುಸಲೇಮಿನಲ್ಲಿಯೂ ಇಸ್ರೇಲಿನಲ್ಲಿಯೂ ಇರುವ ಜನರು ಭಯಂಕರ ಕೃತ್ಯಗಳನ್ನು ಮಾಡಿದರು. ದೇವರು ತನ್ನ ಆಲಯವನ್ನು ಪ್ರೀತಿಸುತ್ತಾನೆ. ಆದರೆ ಯೆಹೂದದ ಜನರು ಗೊತ್ತಿಲ್ಲದ ದೇವತೆಗಳನ್ನು ಪೂಜಿಸಲು ಪ್ರಾರಂಭಿಸುತ್ತಾರೆ. 12 ಅಂಥಾ ಜನರನ್ನು ಯೆಹೋವನು ಯೆಹೂದ ವಂಶದಿಂದಲೇ ತೆಗೆದುಹಾಕುವನು. ಅವರು ಯೆಹೋವನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬರಬಹುದು. ಆದರೆ ಅದು ಏನೂ ಪ್ರಯೋಜನವಿಲ್ಲ. 13 ನೀವು ಅತ್ತು ಗೋಳಾಡಿ ಯೆಹೋವನ ವೇದಿಕೆಯನ್ನು ಕಣ್ಣೀರಿನಿಂದ ತೋಯಿಸಿದರೂ ಪ್ರಯೋಜನವಿಲ್ಲ. ಯೆಹೋವನು ನಿಮ್ಮ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ. ನಿಮ್ಮ ಕಾಣಿಕೆಗಳನ್ನು ಆತನು ಮೆಚ್ಚುವವನಲ್ಲ.

14 “ನಮ್ಮ ಕಾಣಿಕೆಗಳನ್ನು ಯೆಹೋವನು ಏಕೆ ಸ್ವೀಕರಿಸುವುದಿಲ್ಲ?” ಎಂದು ನೀವು ಕೇಳಬಹುದು. ಯಾಕೆಂದರೆ ನಿಮ್ಮ ಪಾಪಕೃತ್ಯಗಳನ್ನು ಆತನು ನೋಡಿರುತ್ತಾನೆ. ಅವುಗಳಿಗೆ ವಿರೋಧವಾಗಿ ಆತನೇ ಸಾಕ್ಷಿಯಾಗಿರುತ್ತಾನೆ. ನಿಮ್ಮ ಹೆಂಡತಿಯರನ್ನು ನೀವು ಮೋಸಗೊಳಿಸಿದ್ದನ್ನು ಆತನು ನೋಡಿರುತ್ತಾನೆ. ನೀವು ಆಕೆಯನ್ನು ನಿಮ್ಮ ಯೌವನ ಕಾಲದಲ್ಲಿ ಹೆಂಡತಿಯನ್ನಾಗಿ ಮಾಡಿಕೊಂಡಿರುತ್ತೀರಿ. ಆಕೆಯು ನಿಮ್ಮ ಆಪ್ತ ಸ್ನೇಹಿತೆಯಾಗಿದ್ದಳು. ನೀವಿಬ್ಬರೂ ಮಾತುಕೊಟ್ಟಿರಿ. ಆಕೆ ನಿಮ್ಮ ಹೆಂಡತಿಯಾದಳು. ಆದರೆ ನೀವು ಅವಳಿಗೆ ಅಪನಂಬಿಗಸ್ಥರಾದಿರಿ. 15 ದೇವರ ಇಚ್ಫೆಗನುಸಾರವಾಗಿ ಗಂಡಹೆಂಡತಿಯರು ದೇಹದಲ್ಲಿಯೂ ಆತ್ಮದಲ್ಲಿಯೂ ಒಂದಾಗಿರಬೇಕು. ಆಗ ಅವರ ಮಕ್ಕಳೂ ಪರಿಶುದ್ಧರಾಗಿರುವರು. ಆದ್ದರಿಂದ ಆತ್ಮಿಕ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಹೆಂಡತಿಯರಿಗೆ ಮೋಸಮಾಡಬೇಡಿ. ಯಾಕೆಂದರೆ ಯೌವನ ಪ್ರಾಯದಿಂದಲೂ ಆಕೆ ನಿಮ್ಮ ಹೆಂಡತಿಯಾಗಿದ್ದಾಳೆ.

16 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, “ವಿವಾಹವಿಚ್ಪೇದನೆಯನ್ನು ನಾನು ಹಗೆ ಮಾಡುತ್ತೇನೆ. ಮತ್ತು ಮನುಷ್ಯನು ಮಾಡುವ ದುಷ್ಕೃತ್ಯವನ್ನು ನಾನು ಹಗೆ ಮಾಡುತ್ತೇನೆ. ಆದ್ದರಿಂದ ನಿಮ್ಮ ಆತ್ಮೀಯ ಒಗ್ಗಟ್ಟನ್ನು ಕಾಪಾಡಿಕೊಳ್ಳಿರಿ. ನಿಮ್ಮ ಹೆಂಡತಿಯರಿಗೆ ಮೋಸ ಮಾಡಬೇಡಿರಿ.”

ನ್ಯಾಯತೀರ್ಪಿನ ವಿಶೇಷವಾದ ಕಾಲ

17 ನೀವು ತಪ್ಪಾದ ವಿಷಯಗಳನ್ನು ಬೋಧಿಸಿದ್ದೀರಿ. ಅಂಥಾ ದುರ್ಬೋಧನೆಯು ಯೆಹೋವನನ್ನು ದುಃಖಗೊಳಿಸಿದೆ. ಯೆಹೋವನು ದುಷ್ಟರನ್ನು ಪ್ರೀತಿಸುತ್ತಾನೆ ಎಂದು ಜನರಿಗೆ ಬೋಧಿಸಿದ್ದೀರಿ. ಅಂಥಾ ಜನರನ್ನು ಯೆಹೋವನು ಒಳ್ಳೆಯವರೆಂದು ಕರೆಯುತ್ತಾನೆ ಎಂದು ನೀವು ಜನರಿಗೆ ಕಲಿಸಿದ್ದೀರಿ. ಅಲ್ಲದೆ ಪಾಪಮಾಡುವ ಜನರನ್ನು ಯೆಹೋವನು ಶಿಕ್ಷಿಸುವದಿಲ್ಲವೆಂದೂ ನೀವು ಹೇಳಿದ್ದೀರಿ.

ಯೋಹಾನ 19

19 ಬಳಿಕ, ಯೇಸುವನ್ನು ಕರೆದುಕೊಂಡು ಹೋಗಿ, ಕೊರಡೆಯಿಂದ ಹೊಡೆಯಬೇಕೆಂದು ಪಿಲಾತನು ಆಜ್ಞಾಪಿಸಿದನು. ಸೈನಿಕರು ಮುಳ್ಳುಬಳ್ಳಿಗಳಿಂದ ಒಂದು ಕಿರೀಟವನ್ನು ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. ಬಳಿಕ ಸೈನಿಕರು ಯೇಸುವಿಗೆ ಕಡುಕೆಂಪಾದ ಅಂಗಿಯನ್ನು ತೊಡಿಸಿದರು. ಸೈನಿಕರು ಪದೇಪದೇ ಯೇಸುವಿನ ಬಳಿಗೆ ಬಂದು, “ಯೆಹೂದ್ಯರ ರಾಜನೇ, ನಿನಗೆ ನಮಸ್ಕಾರ!” ಎಂದು ಹೇಳುತ್ತಾ ಆತನ ಕೆನ್ನೆಗೆ ಹೊಡೆದರು.

ಪಿಲಾತನು ಮತ್ತೆ ಹೊರಗೆ ಬಂದು, ಯೆಹೂದ್ಯರಿಗೆ, “ನೋಡಿ! ನಾನು ಯೇಸುವನ್ನು ನಿಮ್ಮ ಬಳಿಗೆ ತರುತ್ತಿದ್ದೇನೆ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ ಎಂಬುದು ನಿಮಗೆ ತಿಳಿದಿರಲಿ” ಎಂದು ಹೇಳಿದನು. ಆಗ ಯೇಸು ಹೊರಗೆ ಬಂದನು. ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಟ್ಟಿದ್ದರು ಮತ್ತು ಕೆಂಪು ಅಂಗಿಯನ್ನು ಆತನಿಗೆ ತೊಡಿಸಿದ್ದರು. ಪಿಲಾತನು ಯೆಹೂದ್ಯರಿಗೆ, “ಇಗೋ, ಈ ಮನುಷ್ಯನು!” ಎಂದು ಹೇಳಿದನು.

ಮಹಾಯಾಜಕರು ಮತ್ತು ಯೆಹೂದ್ಯ ಕಾವಲುಗಾರರು ಯೇಸುವನ್ನು ಕಂಡು, “ಅವನನ್ನು ಶಿಲುಬೆಗೆ ಹಾಕಿಸು! ಅವನನ್ನು ಶಿಲುಬೆಗೆ ಹಾಕಿಸು!” ಎಂದು ಕೂಗಿದರು.

ಆದರೆ ಪಿಲಾತನು, “ನೀವೇ ಆತನನ್ನು ಶಿಲುಬೆಗೆ ಹಾಕಿರಿ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ” ಎಂದು ಉತ್ತರಕೊಟ್ಟನು.

ಯೆಹೂದ್ಯರು, “ನಮಗೊಂದು ನಿಯಮವಿದೆ. ಅದರ ಪ್ರಕಾರ ಇವನಿಗೆ ಮರಣದಂಡನೆ ಆಗಲೇಬೇಕು. ಯಾಕೆಂದರೆ ಇವನು ತನ್ನನ್ನು ದೇವರ ಮಗನೆಂದು ಹೇಳಿಕೊಂಡಿದ್ದಾನೆ” ಎಂದು ಉತ್ತರಕೊಟ್ಟರು.

ಪಿಲಾತನು ಇದನ್ನು ಕೇಳಿ ಬಹು ಭಯಗೊಂಡು, ಮತ್ತೆ ಭವನದೊಳಗೆ ಹೋಗಿ, ಯೇಸುವಿಗೆ, “ನೀನು ಎಲ್ಲಿಯವನು?” ಎಂದು ಕೇಳಿದನು. ಆದರೆ ಯೇಸು ಮೌನವಾಗಿದ್ದನು. 10 ಪಿಲಾತನು, “ನೀನು ನನ್ನೊಂದಿಗೆ ಮಾತಾಡುವುದಿಲ್ಲವೇ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗಿದೆ ಎಂಬುದು ನಿನಗೆ ತಿಳಿಯದೋ?” ಎಂದನು.

11 ಯೇಸು “ನನ್ನ ಮೇಲೆ ನಿನಗಿರುವ ಅಧಿಕಾರವೆಂದರೆ ದೇವರು ನಿನಗೆ ಕೊಟ್ಟಿರುವ ಅಧಿಕಾರವೊಂದೇ. ಆದ್ದರಿಂದ ನನ್ನನ್ನು ನಿನ್ನ ಕೈಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪದೋಷವಿರುವುದು” ಎಂದು ಉತ್ತರಕೊಟ್ಟನು.

12 ಇದಾದ ಮೇಲೆ, ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ಪ್ರಯತ್ನಿಸಿದನು. ಆದರೆ ಯೆಹೂದ್ಯರು, “ತನ್ನನ್ನು ರಾಜನೆಂದು ಹೇಳಿಕೊಳ್ಳುವ ಯಾವ ವ್ಯಕ್ತಿಯಾಗಲಿ ಸೀಸರನ ವಿರೋಧಿಯಾಗಿದ್ದಾನೆ. ಆದ್ದರಿಂದ ನೀನು ಈ ಮನುಷ್ಯನನ್ನು (ಯೇಸುವನ್ನು) ಬಿಡುಗಡೆ ಮಾಡಿದರೆ, ನೀನು ಸೀಸರನ ಮಿತ್ರನಲ್ಲವೆಂದೇ ಅದರ ಅರ್ಥ” ಎಂದು ಕೂಗಿದರು.

13 ಯೆಹೂದ್ಯರು ಹೇಳಿದ್ದನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿ, “ಹಾಸುಗಲ್ಲು” ಎಂಬ ಕಟ್ಟೆಯ (ಯೆಹೂದ್ಯರ ಭಾಷೆ[a] ಯಲ್ಲಿ ಅದರ ಹೆಸರು ಗಬ್ಬಥ.) ಮೇಲಿದ್ದ ನ್ಯಾಯಪೀಠದಲ್ಲಿ ಕುಳಿತುಕೊಂಡನು. 14 ಅಂದು ಪಸ್ಕಹಬ್ಬದ ಸಿದ್ಧತೆಯ ದಿನ ಮತ್ತು ಆಗಲೇ ಮಧ್ಯಾಹ್ನವಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ರಾಜನು!” ಎಂದು ಹೇಳಿದನು.

15 ಯೆಹೂದ್ಯರು, “ಕೊಲ್ಲಿರಿ, ಕೊಲ್ಲಿರಿ; ಅವನನ್ನು ಶಿಲುಬೆಗೇರಿಸಿರಿ!” ಎಂದು ಕಿರುಚಿದರು.

ಪಿಲಾತನು ಯೆಹೂದ್ಯರಿಗೆ, “ನಿಮ್ಮ ರಾಜನನ್ನು ಶಿಲುಬೆಗೇರಿಸಬೇಕೇ?” ಎಂದು ಕೇಳಿದನು.

ಮಹಾಯಾಜಕರು, “ನಮಗಿರುವ ಒಬ್ಬನೇ ರಾಜನೆಂದರೆ ಸೀಸರ್!” ಎಂದು ಉತ್ತರಕೊಟ್ಟರು.

16 ಆಗ ಪಿಲಾತನು, ಯೇಸುವನ್ನು ಶಿಲುಬೆಗೇರಿಸಲು ಅವರಿಗೆ ಒಪ್ಪಿಸಿಕೊಟ್ಟನು.

ಯೇಸುವನ್ನು ಶಿಲುಬೆಗೇರಿಸಿದರು

(ಮತ್ತಾಯ 27:32-44; ಮಾರ್ಕ 15:21-32; ಲೂಕ 23:26-39)

ಸೈನಿಕರು ಯೇಸುವನ್ನು ಕರೆದೊಯ್ದರು. 17 ಯೇಸು ತನ್ನ ಸ್ವಂತ ಶಿಲುಬೆಯನ್ನು ಹೊತ್ತುಕೊಂಡು, “ಕಪಾಲ” ಎಂಬ ಸ್ಥಳಕ್ಕೆ ಹೊರಟನು. (ಯೆಹೂದ್ಯರ ಭಾಷೆಯಲ್ಲಿ ಈ ಸ್ಥಳದ ಹೆಸರು “ಗೊಲ್ಗೊಥಾ.”) 18 ಅವರು ಗೊಲ್ಗೊಥಾದಲ್ಲಿ ಯೇಸವನ್ನೂ ಆತನ ಸಂಗಡ ಇನ್ನಿಬ್ಬರನ್ನೂ ಶಿಲುಬೆಗೇರಿಸಿದರು. ಅವರಿಬ್ಬರನ್ನು ಯೇಸುವಿನ ಎರಡು ಕಡೆಗಳಲ್ಲಿ ಹಾಕಿ, ಯೇಸುವನ್ನು ಅವರ ಮಧ್ಯದಲ್ಲಿ ಹಾಕಿದರು.

19 ಪಿಲಾತನು ಒಂದು ಫಲಕವನ್ನು ಬರೆದು ಶಿಲುಬೆಯ ಮೇಲೆ ಹಚ್ಚಿದನು. ಆ ಫಲಕದಲ್ಲಿ, “ನಜರೇತಿನ ಯೇಸು, ಯೆಹೂದ್ಯರ ರಾಜನು” ಎಂದು ಬರೆದಿತ್ತು. 20 ಆ ಫಲಕವನ್ನು ಯೆಹೂದ್ಯರ ಭಾಷೆಯಲ್ಲಿ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು. ಫಲಕದಲ್ಲಿ ಬರೆದಿರುವುದನ್ನು ಅನೇಕ ಯೆಹೂದ್ಯರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳವು ಪಟ್ಟಣದ ಸಮೀಪದಲ್ಲಿತ್ತು.

21 ಯೆಹೂದ್ಯ ಮಹಾಯಾಜಕರು ಪಿಲಾತನಿಗೆ, “‘ಯೆಹೂದ್ಯರ ರಾಜನು’ ಎಂದು ಬರೆಯಬೇಡ. ಆದರೆ, ‘ಇವನು ತನ್ನನ್ನು ಯೆಹೂದ್ಯರ ರಾಜ ಎಂದು ಹೇಳಿಕೊಂಡನು’ ಎಂಬುದಾಗಿ ಬರೆ” ಎಂದರು.

22 ಪಿಲಾತನು, “ನಾನು ಬರೆದಿರುವುದನ್ನು ಬದಲಾಯಿಸಲಾಗುವುದಿಲ್ಲ” ಎಂದು ಉತ್ತರಕೊಟ್ಟನು.

23 ಸೈನಿಕರು ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಆತನ ಬಟ್ಟೆಗಳನ್ನು ನಾಲ್ಕು ಭಾಗ ಮಾಡಿ ಒಬ್ಬೊಬ್ಬರು ಒಂದೊಂದು ಭಾಗವನ್ನು ತೆಗೆದುಕೊಂಡರು. ಅಲ್ಲದೆ ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಅದು ಹೊಲಿಗೆಯಿಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು. 24 ಆದ್ದರಿಂದ ಸೈನಿಕರು, “ನಾವು ಇದನ್ನು ಹರಿದು ಪಾಲುಮಾಡಬಾರದು. ನಾವು ಚೀಟಿಹಾಕಿ ಇದು ಯಾರಿಗೆ ಬರುತ್ತದೋ ನೋಡೋಣ” ಎಂದು ಮಾತಾಡಿಕೊಂಡು ಹಾಗೆಯೇ ಮಾಡಿದರು.

“ಅವರು ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲು ಮಾಡಿಕೊಂಡರು;
    ನನ್ನ ಅಂಗಿಗಾಗಿ ಚೀಟಿ ಹಾಕಿದರು”(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ಮಾತು ಹೀಗೆ ನೆರವೇರಿತು.

25 ಯೇಸುವಿನ ತಾಯಿ, ತಾಯಿಯ ಸಹೋದರಿ, ಕ್ಲೋಪನ ಹೆಂಡತಿಯಾದ ಮರಿಯಳು ಮತ್ತು ಮಗ್ದಲದ ಮರಿಯಳು ಶಿಲುಬೆಯ ಬಳಿಯಲ್ಲಿ ನಿಂತುಕೊಂಡಿದ್ದರು. 26 ಯೇಸು ತನ್ನ ತಾಯಿಯನ್ನೂ ಅಲ್ಲೇ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಅಮ್ಮಾ, ಇಗೋ, ನಿನ್ನ ಮಗನು” ಎಂದು ಹೇಳಿದನು. 27 ಬಳಿಕ ಯೇಸು ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದನು. ಅಂದಿನಿಂದ ಆ ಶಿಷ್ಯನು ಆಕೆಯನ್ನು ಕರೆದುಕೊಂಡು ಹೋಗಿ ತನ್ನ ಮನೆಯಲ್ಲೇ ಇರಿಸಿಕೊಂಡನು.

ಯೇಸುವಿನ ಮರಣ

(ಮತ್ತಾಯ 27:45-56; ಮಾರ್ಕ 15:33-41; ಲೂಕ 23:44-49)

28 ಇದಾದ ಮೇಲೆ ಎಲ್ಲವೂ ನೆರವೇರಿತೆಂದು ತಿಳಿದುಕೊಂಡು ಪವಿತ್ರ ಗ್ರಂಥದ ಮಾತನ್ನು ನೆರವೇರಿಸುವುದಕ್ಕಾಗಿ ಆತನು, “ನನಗೆ ದಾಹವಾಗಿದೆ”[b] ಎಂದು ಹೇಳಿದನು. 29 ಅಲ್ಲಿ ಹುಳಿರಸ ತುಂಬಿದ ಪಾತ್ರೆಯೊಂದಿತ್ತು. ಸೈನಿಕರು ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಅದನ್ನು ಮೇಲೆತ್ತಿ ಯೇಸುವಿನ ಬಾಯಿಗೆ ಮುಟ್ಟಿಸಿದರು. 30 ಯೇಸು ಹುಳಿರಸವನ್ನು ರುಚಿನೋಡಿ, “ತೀರಿತು” ಎಂದು ಹೇಳಿ ತಲೆಬಾಗಿ ಪ್ರಾಣಬಿಟ್ಟನು.

31 ಆ ದಿನವು ಸಿದ್ಧತೆಯ ದಿನವಾಗಿತ್ತು. ಮರುದಿನ ವಿಶೇಷವಾದ ಸಬ್ಬತ್‌ದಿನವಾಗಿತ್ತು. ಸಬ್ಬತ್‌ದಿನದಂದು ದೇಹಗಳು ಶಿಲುಬೆಯ ಮೇಲಿರುವುದು ಯೆಹೂದ್ಯರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಕಾಲುಗಳನ್ನು ಮುರಿದು ಬೇಗನೆ ಸಾಯಿಸಲು ಆಜ್ಞಾಪಿಸಬೇಕೆಂಬುದಾಗಿ ಅವರು ಪಿಲಾತನನ್ನು ಕೇಳಿಕೊಂಡರು. 32 ಆದ್ದರಿಂದ ಸೈನಿಕರು ಬಂದು ಯೇಸುವಿನೊಂದಿಗೆ ಶಿಲುಬೆಗೇರಿಸಲ್ಪಟ್ಟಿದ್ದ ಇಬ್ಬರ ಕಾಲುಗಳನ್ನು ಮುರಿದುಹಾಕಿದರು. 33 ಬಳಿಕ ಅವರು ಯೇಸುವಿನ ಅತಿ ಸಮೀಪಕ್ಕೆ ಬಂದಾಗ ಆತನು ಆಗಲೇ ಸತ್ತುಹೋಗಿರುವುದನ್ನು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.

34 ಆದರೆ ಸೈನಿಕರಲ್ಲಿ ಒಬ್ಬನು ತನ್ನ ಈಟಿಯಿಂದ ಯೇಸುವಿನ ಪಕ್ಕೆಗೆ ತಿವಿದನು. ಪಕ್ಕೆಯಿಂದ ರಕ್ತ ಮತ್ತು ನೀರು ಹೊರಗೆ ಹರಿದುಬಂದವು. 35 (ಇದನ್ನು ಕಂಡವನೇ ಇದರ ಬಗ್ಗೆ ಹೇಳಿದ್ದಾನೆ. ನೀವು ಸಹ ನಂಬಬೇಕೆಂದು ಅವನು ಇದನ್ನು ತಿಳಿಸಿದ್ದಾನೆ. ಅವನು ಹೇಳುವ ಸಂಗತಿಗಳು ಸತ್ಯವಾಗಿವೆ. ತಾನು ಹೇಳುತ್ತಿರುವುದು ಸತ್ಯವೆಂದು ಅವನಿಗೆ ಗೊತ್ತಿದೆ.) 36 ಪವಿತ್ರ ಗ್ರಂಥದಲ್ಲಿ ಬರೆದಿರುವ, “ಆತನ ಎಲುಬುಗಳಲ್ಲಿ ಒಂದಾದರೂ ಮುರಿಯಲ್ಪಡುವುದಿಲ್ಲ”(B) ಎಂಬ ಮಾತು ಹೀಗೆ ನೆರವೇರಿತು. 37 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ, “ಜನರು ತಾವು ಈಟಿಯಿಂದ ಇರಿದವನನ್ನೇ ದಿಟ್ಟಿಸಿ ನೋಡುವರು”(C) ಎಂತಲೂ ಬರೆದಿದೆ.

ಯೇಸುವಿನ ಶವಸಂಸ್ಕಾರ

(ಮತ್ತಾಯ 27:57-61; ಮಾರ್ಕ 15:42-47; ಲೂಕ 23:50-56)

38 ತರುವಾಯ, ಅರಿಮಥಾಯ ಊರಿನ ಯೋಸೇಫ ಎಂಬವನು ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು. (ಯೋಸೇಫನು ಯೇಸುವಿನ ಒಬ್ಬ ಅನುಯಾಯಿ ಆಗಿದ್ದನು. ಆದರೆ ಅವನು ಯೆಹೂದ್ಯರಿಗೆ ಹೆದರಿಕೊಂಡಿದ್ದರಿಂದ ಅದರ ಬಗ್ಗೆ ಜನರಿಗೆ ಹೇಳಿಕೊಳ್ಳಲಿಲ್ಲ.) ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಲು ಪಿಲಾತನು ಅವನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.

39 ನಿಕೊದೇಮನೂ ಯೋಸೇಫನೊಂದಿಗೆ ಹೋದನು. ಹಿಂದೊಮ್ಮೆ, ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನೊಂದಿಗೆ ಮಾತಾಡಿದ್ದವನೇ ನಿಕೊದೇಮನು. ಅವನು ಸುಮಾರು ಐವತ್ತು ಕಿಲೋಗ್ರಾಮಿನಷ್ಟು ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಬಂದನು. ಆ ಸುಗಂಧದ್ರವ್ಯವು ರಕ್ತ ಬೋಳ ಮತ್ತು ಅಗರುಗಳ ಮಿಶ್ರಣವಾಗಿತ್ತು. 40 ಈ ಇಬ್ಬರು ಯೇಸುವಿನ ದೇಹವನ್ನು ತೆಗೆದುಕೊಂಡು ಅದಕ್ಕೆ ಸುಗಂಧದ್ರವ್ಯವನ್ನು ಹಾಕಿ ನಾರುಬಟ್ಟೆಗಳಿಂದ ಸುತ್ತಿದರು. (ಯೆಹೂದ್ಯರು ಸತ್ತವರನ್ನು ಇದೇರೀತಿ ಸಮಾಧಿ ಮಾಡುತ್ತಾರೆ.) 41 ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳದಲ್ಲೇ ಒಂದು ತೋಟವಿತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿಯಿತ್ತು. ಅದರಲ್ಲಿ ಹಿಂದೆಂದೂ ಯಾರನ್ನೂ ಸಮಾಧಿ ಮಾಡಿರಲಿಲ್ಲ. 42 ಅದು ಸಮೀಪವಾಗಿದ್ದುದರಿಂದ ಮತ್ತು ಯೆಹೂದ್ಯರು ತಮ್ಮ ಸಬ್ಬತ್ ದಿನವನ್ನು ಆರಂಭಮಾಡಲು ಸಿದ್ಧರಾಗುತ್ತಿದುದರಿಂದ ಅವರು ಯೇಸುವನ್ನು ಆ ಸಮಾಧಿಯಲ್ಲಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International