M’Cheyne Bible Reading Plan
ಯೆಹೂದದ ಅರಸನಾದ ಉಜ್ಜೀಯ
26 ಆ ಬಳಿಕ ಯೆಹೂದದ ಜನರು ಅಮಚ್ಯನ ಮಗನಾದ ಉಜ್ಜೀಯನನ್ನು ತಮ್ಮ ಅರಸನನ್ನಾಗಿ ಆರಿಸಿಕೊಂಡರು. ಆಗ ಅವನಿಗೆ ಹದಿನಾರು ವರ್ಷ. 2 ಉಜ್ಜೀಯನು ಏಲೋತ್ ಪಟ್ಟಣವನ್ನು ಮತ್ತೆ ಕಟ್ಟಿಸಿ ಯೆಹೂದ ರಾಜ್ಯಕ್ಕೆ ಸೇರಿಸಿದನು. ಅಮಚ್ಯನು ಸತ್ತಾಗ ಉಜ್ಜೀಯನು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದನು.
3 ಉಜ್ಜೀಯನು ಪಟ್ಟಕ್ಕೆ ಬಂದಾಗ ಹದಿನಾರು ವರ್ಷದವನಾಗಿದ್ದನು. ಅವನು ಐವತ್ತೆರಡು ವರ್ಷ ಕಾಲ ಜೆರುಸಲೇಮಿನಲ್ಲಿ ರಾಜ್ಯಭಾರ ಮಾಡಿದನು. ಅವನ ತಾಯಿಯ ಹೆಸರು ಯೆಕೊಲ್ಯ. ಆಕೆ ಜೆರುಸಲೇಮಿನವಳು. 4 ಉಜ್ಜೀಯನು ತನ್ನ ತಂದೆಯಾದ ಅಮಚ್ಯನಂತೆ ದೇವರ ಮುಂದೆ ಯೋಗ್ಯನಾಗಿ ನಡೆದುಕೊಂಡನು. 5 ಜೆಕರ್ಯನು ಜೀವಿಸುತ್ತಿದ್ದಾಗ ಉಜ್ಜೀಯನು ದೇವರನ್ನು ಅನುಸರಿಸಿದನು. ಅವನು ಉಜ್ಜೀಯನಿಗೆ ದೇವರಿಗೆ ಹೇಗೆ ಭಯಪಡಬೇಕು, ದೇವರನ್ನು ಹೇಗೆ ಗೌರವಿಸಬೇಕೆಂದು ಕಲಿಸಿಕೊಟ್ಟನು. ಉಜ್ಜೀಯನು ದೇವರಿಗೆ ವಿಧೇಯನಾಗಿ ಬಾಳಿದಾಗ ಯೆಹೋವ ದೇವರು ಅವನಿಗೆ ಯಶಸ್ಸನ್ನು ದಯಪಾಲಿಸಿದನು.
6 ಉಜ್ಜೀಯನು ಫಿಲಿಷ್ಟಿಯರೊಂದಿಗೆ ಯುದ್ಧಮಾಡಿ ಅವರ ಪಟ್ಟಣಗಳಾದ ಗತ್, ಯೆಬ್ನೆ ಮತ್ತು ಅಷ್ಡೋದ್‌ಗಳ ಪೌಳಿಗೋಡೆಗಳನ್ನು ಕೆಡವಿಹಾಕಿದನು. ಅವನು ಅಷ್ಡೋದಿನ ಮತ್ತು ಇತರ ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. 7 ಫಿಲಿಷ್ಟಿಯರೊಂದಿಗೂ ಗೂರ್‌ಬಾಳಿನಲ್ಲಿ ವಾಸಿಸುತ್ತಿದ್ದ ಅರಬಿಯರೊಂದಿಗೂ ಹಾಗೂ ಮೆಗೂನ್ಯರೊಡನೆಯೂ ಯುದ್ಧಮಾಡಲು ದೇವರು ಅವನಿಗೆ ಸಹಾಯ ಮಾಡಿದನು. 8 ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪಕಾಣಿಕೆಯನ್ನು ತಂದುಕೊಟ್ಟರು. ಉಜ್ಜೀಯನು ಬಲಿಷ್ಠನಾಗಿದ್ದುದರಿಂದ ಅವನ ಹೆಸರು ಎಲ್ಲಾ ಕಡೆಗಳಲ್ಲಿ ಈಜಿಪ್ಟಿನ ಮೇರೆಯ ತನಕ ಪ್ರಸಿದ್ಧಿ ಹೊಂದಿತು.
9 ಉಜ್ಜೀಯನು ಜೆರುಸಲೇಮಿನಲ್ಲಿ ಮೂಲೆಬಾಗಿಲು, ತಗ್ಗಿನಬಾಗಿಲು ಮತ್ತು ಪೌಳಿಗೋಡೆ ತಿರುಗುವ ಭಾಗ ಇವುಗಳ ಮೇಲೆ ಬುರುಜುಗಳನ್ನು ಕಟ್ಟಿಸಿದನು. 10 ಮರುಭೂಮಿಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು; ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ಬಯಲಿನಲ್ಲಿಯೂ ಬೆಟ್ಟಪ್ರದೇಶಗಳಲ್ಲಿಯೂ ಅಸಂಖ್ಯಾತ ಪಶುಗಳಿದ್ದವು. ಪರ್ವತ ಪ್ರಾಂತ್ಯಗಳಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ ಹುಲುಸಾದ ಬೆಳೆಯನ್ನು ಬೆಳೆಯಿಸಿದನು. ಬಯಲುಗಳಲ್ಲಿ ಕೆಲಸಮಾಡಲು ಅವನು ರೈತರನ್ನು ಕೂಲಿಗೆ ನೇಮಿಸಿಕೊಂಡನು; ಬೆಟ್ಟಗಳಲ್ಲಿಯೂ ಕಾರ್ಮೆಲಿನಲ್ಲಿಯೂ ಇದ್ದ ತನ್ನ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ಕೆಲಸಗಾರರನ್ನು ಕೂಲಿಗೆ ತೆಗೆದುಕೊಂಡನು.
11 ಉಜ್ಜೀಯನ ಬಳಿ ಒಳ್ಳೆಯ ತರಬೇತಿ ಹೊಂದಿದ ಸೈನ್ಯವಿತ್ತು. ಕಾರ್ಯದರ್ಶಿಯಾದ ಯೆಗೀಯೇಲ್ ಮತ್ತು ಅಧಿಕಾರಿಯಾದ ಮಾಸೇಯರು ಅವರನ್ನು ಗುಂಪುಗುಂಪಾಗಿ ವಿಂಗಡಿಸಿದರು. ಹನನ್ಯನು ರಾಜನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. 12 ಸೈನ್ಯಕ್ಕೆ ಒಟ್ಟು ಎರಡು ಸಾವಿರದ ಆರುನೂರು ಮಂದಿ ಸೇನಾಪತಿಗಳಿದ್ದರು. 13 ಅವರು ಕುಟುಂಬದ ನಾಯಕರಾಗಿದ್ದು ಅವರ ಅಧೀನದಲ್ಲಿ ಯುದ್ಧವೀರರಾದ ಮೂರು ಲಕ್ಷದ ಏಳು ಸಾವಿರದ ಐನೂರು ಸೈನಿಕರಿದ್ದರು. ಇವರು ವೈರಿಯೊಂದಿಗೆ ಕಾದಾಡಿ ಅರಸನಿಗೆ ಜಯಗಳಿಸಿದರು. 14 ಉಜ್ಜೀಯನು ಸೈನಿಕರಿಗೆ ಗುರಾಣಿ, ಬರ್ಜಿ, ಶಿರಸ್ತ್ರಾಣ, ಕವಚ, ಬಿಲ್ಲು ಮತ್ತು ಕವಣೆಗೆ ಕಲ್ಲುಗಳನ್ನು ಒದಗಿಸಿದನು. 15 ಜೆರುಸಲೇಮಿನಲ್ಲಿ ವಿಜ್ಞಾನಿಗಳು ರೂಪಿಸಿದ ಯಂತ್ರಗಳನ್ನು ಉಜ್ಜೀಯನು ತಯಾರಿಸಿದನು. ಇವುಗಳನ್ನು ಪೌಳಿಗೋಡೆಯ ಮೇಲೆ ಇರಿಸಿದನು. ಇವು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ವೈರಿಗಳ ಮೇಲೆ ಹಾರಿಸಬಲ್ಲವಾಗಿದ್ದವು. ಉಜ್ಜೀಯನು ತುಂಬಾ ಪ್ರಸಿದ್ಧಿ ಹೊಂದಿದ್ದನು. ಬಹುದೂರದ ತನಕ ಅವನ ಹೆಸರು ಹಬ್ಬಿತು. ಅವನು ದೇವರ ವಿಶೇಷ ಸಹಾಯ ಪಡೆದುಕೊಂಡು ಬಲಿಷ್ಠನಾದನು.
16 ಬಲಶಾಲಿಯಾದ ಉಜ್ಜೀಯನಲ್ಲಿ ನಾಶಕರವಾದ ಗರ್ವವು ಸೇರಿತು. ಅವನು ತನ್ನ ದೇವರಾದ ಯೆಹೋವನಿಗೆ ದ್ರೋಹ ಮಾಡಿದನು. ಅವನು ದೇವಾಲಯದೊಳಗೆ ಧೂಪವೇದಿಕೆಯಲ್ಲಿ ತಾನೇ ಧೂಪವನ್ನು ಹಾಕಲು ಹೋದನು. 17 ಆಗ ಮಹಾಯಾಜಕನಾದ ಅಜರ್ಯನೂ ಧೈರ್ಯಶಾಲಿಗಳಾದ ಎಂಭತ್ತು ಮಂದಿ ಸೇವೆಮಾಡುವ ಯಾಜಕರೂ ಉಜ್ಜೀಯನಿಗೆ, 18 “ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕುವದು ನಿನ್ನ ಕೆಲಸವಲ್ಲ. ನೀನು ಹೀಗೆ ಮಾಡುವದು ಸರಿಯಲ್ಲ. ಆರೋನನ ಸಂತತಿಯವರಾದ ಯಾಜಕರೇ ಧೂಪ ಹಾಕಬೇಕಾದದ್ದು. ಅವರು ಪವಿತ್ರ ಸೇವೆಗೆ ನೇಮಿಸಲ್ಪಟ್ಟಿದ್ದಾರೆ. ನೀನು ಈ ಮಹಾ ಪವಿತ್ರಸ್ಥಾನದಿಂದ ಹೊರಗೆ ಹೋಗು. ನೀನು ದೇವರಾದ ಯೆಹೋವನಿಗೆ ವಿಧೇಯನಾಗಿಲ್ಲ. ಈ ಕಾರ್ಯವನ್ನು ಮಾಡಿದ್ದರಿಂದ ದೇವರು ನಿನ್ನನ್ನು ಮೆಚ್ಚುವದಿಲ್ಲ” ಎಂದು ಹೇಳಿದರು.
19 ಇದನ್ನು ಕೇಳಿ ಉಜ್ಜೀಯನು ಕೋಪಗೊಂಡನು. ಅವನು ಧೂಪ ಹಾಕಲು ಧೂಪಾರತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದನು. ಅವನು ಯಾಜಕರ ಮೇಲೆ ಕೋಪಿಸಿಕೊಂಡಾಗ ಕುಷ್ಠರೋಗವು ಅವನ ಹಣೆಯಲ್ಲಿ ಕಾಣಿಸಿಕೊಂಡಿತು. ಇದು ಯಾಜಕರ ಮುಂದೆ ದೇವಾಲಯದೊಳಗೆ ಧೂಪವೇದಿಕೆಯ ಬಳಿಯಲ್ಲೇ ಆಯಿತು. 20 ಮಹಾಯಾಜಕನಾದ ಅಜರ್ಯನೂ ಇತರ ಯಾಜಕರೂ ಉಜ್ಜೀಯನನ್ನು ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಾಣಿಸಿದ್ದರಿಂದ ಅವನನ್ನು ಕೂಡಲೇ ದೇವಾಲಯದಿಂದ ಹೊರಕ್ಕೆ ಹಾಕಿದರು. ಯೆಹೋವನು ಅವನನ್ನು ಶಿಕ್ಷಿಸಿದುದರಿಂದ ಉಜ್ಜೀಯನು ತಾನಾಗಿಯೇ ದೇವಾಲಯದೊಳಗಿಂದ ಅವಸರದಿಂದ ಹೊರಬಂದನು. 21 ಅರಸನಾದ ಉಜ್ಜೀಯನು ಕುಷ್ಠರೋಗಿಯಾದುದರಿಂದ ಅವನು ಯೆಹೋವನ ಆಲಯವನ್ನು ಪ್ರವೇಶಿಸಲಾಗಲಿಲ್ಲ. ಅವನು ದೂರದಲ್ಲಿದ್ದ ಪ್ರತ್ಯೇಕವಾದ ಮನೆಯಲ್ಲಿ ವಾಸಿಸಿದನು. ಅವನ ಮಗನಾದ ಯೋತಾಮನು ಪ್ರಜಾಪಾಲನೆ ಮಾಡಿದನು.
22 ಪ್ರಾರಂಭದಿಂದ ಕೊನೆಯವರೆಗೆ ಉಜ್ಜೀಯನು ಮಾಡಿದ ಕಾರ್ಯಗಳನ್ನೆಲ್ಲಾ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ತನ್ನ ಪುಸ್ತಕದಲ್ಲಿ ಬರೆದಿರುವನು. 23 ಉಜ್ಜೀಯನು ಸತ್ತು ತನ್ನ ಪೂರ್ವಿಕರನ್ನು ಸೇರಿದಾಗ, ಅವನ ಕುಷ್ಠದ ನಿಮಿತ್ತ ಅವನ ಶವವನ್ನು ರಾಜಕುಟುಂಬ ಸ್ಮಶಾನವಿದ್ದ ಹೊಲದಲ್ಲಿ ಹೂಳಿಟ್ಟರು. ಉಜ್ಜೀಯನ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.
ಎರಡು ಪ್ರಾಣಿಗಳು
13 ನಂತರ ಸಮುದ್ರದಿಂದ ಒಂದು ಮೃಗವು ಹೊರಗೆ ಬರುತ್ತಿರುವುದನ್ನು ನಾನು ನೋಡಿದೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದವು. ಅದರ ಪ್ರತಿಯೊಂದು ಕೊಂಬಿನ ಮೇಲೆ ಒಂದೊಂದು ಕಿರೀಟವಿತ್ತು. ಪ್ರತಿಯೊಂದು ತಲೆಯ ಮೇಲೂ ದೇವದೂಷಣೆ ನಾಮಗಳನ್ನು ಬರೆಯಲಾಗಿತ್ತು. 2 ಈ ಮೃಗವು ನೋಡಲು ಚಿರತೆ ಯಂತಿತ್ತು. ಅದರ ಪಾದಗಳು ಕರಡಿಯ ಪಾದಗಳಂತಿದ್ದವು. ಅದರ ಬಾಯಿಯು ಸಿಂಹದ ಬಾಯಿಯಂತಿತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನು, ತನ್ನ ಸಿಂಹಾಸನವನ್ನು ಮತ್ತು ಅಧಿಕವಾದ ಅಧಿಕಾರವನ್ನು ನೀಡಿತು.
3 ಮೃಗದ ತಲೆಗಳಲ್ಲಿ ಒಂದು ತಲೆಯು ಗಾಯಗೊಂಡು ಸತ್ತಂತೆ ಕಾಣುತ್ತಿತ್ತು. ಆದರೆ ಮರಣಕರವಾದ ಈ ಗಾಯವನ್ನು ವಾಸಿಮಾಡಲಾಯಿತು. ಈ ಲೋಕದಲ್ಲಿದ್ದ ಜನರೆಲ್ಲರೂ ಆಶ್ಚರ್ಯಗೊಂಡು ಆ ಮೃಗವನ್ನು ಹಿಂಬಾಲಿಸಿದರು. 4 ಆ ಘಟಸರ್ಪವು ತನ್ನ ಶಕ್ತಿಯನ್ನೆಲ್ಲಾ ಆ ಮೃಗಕ್ಕೆ ನೀಡಿದ್ದರಿಂದ ಜನರೆಲ್ಲರೂ ಆ ಸರ್ಪವನ್ನೂ ಆ ಮೃಗವನ್ನೂ ಆರಾಧಿಸಿ, “ಮೃಗಕ್ಕಿಂತಲೂ ಅಧಿಕ ಬಲಶಾಲಿಗಳು ಯಾರಿದ್ದಾರೆ? ಅದರ ವಿರುದ್ಧ ಯಾರು ಹೋರಾಡಬಲ್ಲರು?” ಎಂದು ಹೇಳುತ್ತಿದ್ದರು.
5 ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡಲು ಅವಕಾಶ ನೀಡಲಾಯಿತು. ಆ ಮೃಗಕ್ಕೆ ಅದರ ಶಕ್ತಿಯನ್ನು ನಲವತ್ತೆರಡು ತಿಂಗಳ ಕಾಲ ಬಳಸಲು ಅವಕಾಶ ನೀಡಲಾಯಿತು. 6 ಆ ಮೃಗವು ದೇವರಿಗೆ ಅಪಮಾನ ಮಾಡಲು ತನ್ನ ಬಾಯನ್ನು ತೆರೆಯಿತು. ಅಲ್ಲದೆ ದೇವರ ಹೆಸರಿನ ವಿರುದ್ಧವಾಗಿಯೂ ದೇವರು ವಾಸಿಸುವ ಸ್ಥಳದ ವಿರುದ್ಧವಾಗಿಯೂ ಪರಲೋಕದಲ್ಲಿ ಜೀವಿಸುವ ಜನರೆಲ್ಲರ ವಿರುದ್ಧವಾಗಿಯೂ ದೂಷಣೆ ಮಾಡಿತು. 7 ದೇವರ ಪರಿಶುದ್ಧ ಜನರ ವಿರುದ್ಧ ಯುದ್ಧಮಾಡಿ, ಅವರನ್ನು ಸೋಲಿಸುವ ಶಕ್ತಿಯನ್ನು ಮೃಗಕ್ಕೆ ನೀಡಲಾಯಿತು. ಸಕಲ ಕುಲ, ಪ್ರಜೆ, ಭಾಷೆ ಮತ್ತು ಜನಾಂಗಗಳ ಮೇಲಿನ ಅಧಿಕಾರವನ್ನು ಆ ಮೃಗಕ್ಕೆ ಕೊಡಲಾಯಿತು. 8 ಲೋಕದಲ್ಲಿ ವಾಸಿಸುವ ಜನರೆಲ್ಲರೂ ಆ ಮೃಗವನ್ನು ಆರಾಧಿಸುತ್ತಾರೆ. ಲೋಕವು ಆರಂಭಗೊಂಡಂದಿನಿಂದಲೂ ಕೊಲ್ಲಲ್ಪಟ್ಟ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿಲ್ಲವೋ ಅವರೇ ಈ ಜನರು.
9 ಇವುಗಳನ್ನು ಕೇಳುವವನು ಗಮನವಿಟ್ಟು ಆಲಿಸಲಿ:
10 ಸೆರೆ ಒಯ್ಯುವವನು
ಸೆರೆ ಒಯ್ಯಲ್ಪಡುವನು.
ಕತ್ತಿಯಿಂದ ಕೊಲ್ಲುವವನು
ಕತ್ತಿಯಿಂದಲೇ ಕೊಲ್ಲಲ್ಪಡುವನು.
ಆದ್ದರಿಂದ ದೇವರ ಪರಿಶುದ್ಧ ಜನರು ತಾಳ್ಮೆಯನ್ನೂ ನಂಬಿಕೆಯನ್ನೂ ಹೊಂದಿರಬೇಕು.
11 ನಂತರ ಭೂಮಿಯಿಂದ ಹೊರಗೆ ಬರುತ್ತಿರುವ ಮತ್ತೊಂದು ಮೃಗವನ್ನು ನಾನು ನೋಡಿದೆನು. ಅದಕ್ಕೆ ಟಗರಿನಂತೆ ಎರಡು ಕೊಂಬುಗಳಿದ್ದವು. ಆದರೆ ಅದು ಘಟಸರ್ಪದಂತೆ ಮಾತಾಡುತ್ತಿತ್ತು. 12 ಈ ಮೃಗವು ಮೊದಲಿನ ಮೃಗದ ಅಧಿಕಾರವನ್ನೇ ಬಳಸುತ್ತದೆ. ಭೂಮಿಯ ಮೇಲೆ ವಾಸಿಸುವ ಜನರೆಲ್ಲರೂ ಮೊದಲಿನ ಮೃಗವನ್ನು ಆರಾಧಿಸುವಂತೆ ಮಾಡಲು ಅದು ತನ್ನ ಶಕ್ತಿಯನ್ನೆಲ್ಲಾ ಬಳಸುತ್ತದೆ. ಮರಣಕರವಾದ ಗಾಯದಿಂದ ಗುಣಮುಖವಾದದ್ದೇ ಮೊದಲನೆಯ ಮೃಗ. 13 ಈ ಎರಡನೆಯ ಮೃಗವು ಮಹಾ ಅದ್ಭುತಗಳನ್ನು ಮಾಡುತ್ತದೆ. ಅದು ಜನರ ಕಣ್ಣೆದುರಿನಲ್ಲಿಯೇ ಬೆಂಕಿಯನ್ನು ಆಕಾಶದಿಂದ ಭೂಮಿಗೆ ಸುರಿಸುತ್ತದೆ.
14 ಈ ಎರಡನೆಯ ಮೃಗವು ಅದ್ಭುತಗಳನ್ನು ಮಾಡಲು ತನಗೆ ನೀಡಿರುವ ಶಕ್ತಿಯಿಂದ ಭೂಮಿಯ ಮೇಲೆ ವಾಸಿಸುವ ಜನರನ್ನು ಮರುಳು ಗೊಳಿಸುತ್ತದೆ. ಮೊದಲನೆಯ ಮೃಗದ ಸೇವೆಯನ್ನು ಮಾಡಲು ಅದು ಈ ಅದ್ಭುತಗಳನ್ನು ಮಾಡುತ್ತದೆ. ಕತ್ತಿಯಿಂದ ಗಾಯಗೊಂಡಿದ್ದೂ ಸಾಯದೆ ಬದುಕಿದ ಮೊದಲನೆಯ ಮೃಗಕ್ಕೆ ಗೌರವ ತೋರಲು ವಿಗ್ರಹವನ್ನು ನಿರ್ಮಿಸುವಂತೆ ಅದು ಜನರಿಗೆ ಆಜ್ಞಾಪಿಸಿತು. 15 ಮೊದಲನೆಯ ಮೃಗದ ವಿಗ್ರಹಕ್ಕೆ ಜೀವ ಬರುವಂತೆ ಮಾಡುವ ಶಕ್ತಿಯನ್ನು ಎರಡನೆಯ ಮೃಗಕ್ಕೆ ಕೊಡಲಾಯಿತು. ಆಗ ಆ ವಿಗ್ರಹಕ್ಕೆ ಮಾತಾಡುವ ಶಕ್ತಿ ಬಂದಿತು. ಅದು ತನ್ನನ್ನು ಪೂಜಿಸದವರನ್ನೆಲ್ಲಾ ಕೊಲ್ಲುವುದಾಗಿ ಆಜ್ಞೆ ಹೊರಡಿಸಿತು. 16 ಎರಡನೆಯ ಮೃಗವು ಸಹ ಎಲ್ಲರನ್ನು ಅಂದರೆ ಚಿಕ್ಕವರನ್ನು, ದೊಡ್ಡವರನ್ನು, ಶ್ರೀಮಂತರನ್ನು, ಬಡವರನ್ನು, ಗುಲಾಮರನ್ನು ಮತ್ತು ಸ್ವತಂತ್ರರನ್ನು, ತಮ್ಮ ಬಲಗೈಯ ಮೇಲಾಗಲಿ ಅಥವಾ ತಮ್ಮ ಹಣೆಗಳ ಮೇಲಾಗಲಿ ಗುರುತು ಹಾಕಿಕೊಳ್ಳಬೇಕೆಂದು ಒತ್ತಾಯಪಡಿಸಿತು. 17 ಈ ಗುರುತಿಲ್ಲದೆ ಯಾರೂ ಕೊಳ್ಳುವಂತಿಲ್ಲ ಮತ್ತು ಮಾರುವಂತಿಲ್ಲ. ಈ ಗುರುತು ಏನೆಂದರೆ ಆ ಮೃಗದ ಹೆಸರು ಅಥವಾ ಅದರ ಹೆಸರಿನ ಸಂಖ್ಯೆ.
18 ತಿಳುವಳಿಕೆಯುಳ್ಳ ಮನುಷ್ಯನು ಮೃಗದ ಸಂಖ್ಯೆಯ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ. ಇಲ್ಲಿ ಜ್ಞಾನದ ಅಗತ್ಯವಿದೆ. ಈ ಸಂಖ್ಯೆಯು ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆ 666.
ಇತರ ಜನಾಂಗಗಳ ಮೇಲೆ ನ್ಯಾಯತೀರ್ಪು
9 ಯೆಹೋವನಿಂದ ಬಂದ ಸಂದೇಶ: ಹದ್ರಾಕ್ ದೇಶದ ಮತ್ತು ಅದರ ರಾಜಧಾನಿಯಾದ ದಮಸ್ಕ ನಗರದ ವಿರುದ್ಧವಾಗಿ ಯೆಹೋವನ ಸಂದೇಶ: “ಇಸ್ರೇಲ್ ಕುಲದವರು ಮಾತ್ರವೇ ದೇವರನ್ನು ತಿಳಿದವರಲ್ಲ. ಪ್ರತಿಯೊಬ್ಬರೂ ಸಹಾಯಕ್ಕಾಗಿ ಆತನಿಗೆ ಮೊರೆಯಿಡುವರು. 2 ಈ ಸಂದೇಶವು ಹಮಾತನಿಗೆ ವಿರುದ್ಧವಾದದ್ದು. ಅವನ ಮೊರೆಯು ಹದ್ರಾಕ್ ದೇಶಕ್ಕೆ ತಾಗಿ ಇದೆ. ಈ ಸಂದೇಶವು ತೂರ್ ಚೀದೋನಿನ ಜನರ ವಿರುದ್ಧವಾಗಿಯೂ ಇದೆ. ಆ ಜನರು ಜ್ಞಾನಿಗಳೂ ಕುಶಲಕರ್ಮಿಗಳೂ ಆಗಿರಬಹುದು. 3 ತೂರ್ ಒಂದು ಕೋಟೆಯಂತೆ ಕಟ್ಟಲ್ಪಟ್ಟಿದೆ. ಅಲ್ಲಿರುವ ಜನರು ಬೆಳ್ಳಿಯನ್ನು ಧೂಳಿನಂತೆ ಸಂಗ್ರಹಿಸಿರುತ್ತಾರೆ. ಬಂಗಾರವಂತೂ ಮಣ್ಣಿನ ತರಹ ಸಾಮಾನ್ಯವಾಗಿರುತ್ತದೆ. 4 ಆದರೆ ನಮ್ಮ ಒಡೆಯನಾದ ಯೆಹೋವನು ಅದೆಲ್ಲವನ್ನು ತೆಗೆದುಕೊಳ್ಳುವನು. ಆಕೆಯ ನೌಕಾಬಲವನ್ನು ಮುರಿದುಬಿಡುವನು. ಮತ್ತು ಆ ನಗರವು ಬೆಂಕಿಯಿಂದ ನಾಶವಾಗುವದು.
5 “ಅಷ್ಕೆಲೋನಿನ ಜನರು ಇದನ್ನು ನೋಡಿ ಭಯಗ್ರಸ್ತರಾಗುವರು. ಗಾಜದ ಜನರು ಭಯದಿಂದ ನಡುಗುವರು. ಮತ್ತು ಎಕ್ರೋನಿನ ಜನರು ಇದನ್ನೆಲ್ಲಾ ನೋಡಿ ನಿರೀಕ್ಷೆ ಇಲ್ಲದವರಾಗಿರುವರು. ಗಾಜದಲ್ಲಿ ಯಾವ ಅರಸನೂ ಉಳಿಯನು. ಅಷ್ಕೆಲೋನಿನಲ್ಲಿ ಯಾರೂ ವಾಸಿಸರು. 6 ಅಷ್ಡೋದಿನ ಜನರಿಗೆ ತಮ್ಮ ತಂದೆ ಯಾರು ಎಂದು ತಿಳಿಯರು. ನಾನು ಅಹಂಕಾರದ ಪಿಲಿಷ್ಟಿಯ ಜನರನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. 7 ಅವರು ನಿಷಿದ್ಧ ಆಹಾರಪದಾರ್ಥವನ್ನಾಗಲಿ ರಕ್ತದಿಂದಿರುವ ಮಾಂಸವನ್ನಾಗಲಿ ಇನ್ನು ಮುಂದೆ ತಿನ್ನುವದಿಲ್ಲ. ಪಿಲಿಷ್ಟಿಯರಲ್ಲಿ ಯಾರಾದರೂ ಉಳಿದರೆ ಅವರು ನನ್ನ ಜನರೊಂದಿಗೆ ಒಂದಾಗುವರು. ಎಕ್ರೋನಿನ ಯೆಬೂಸಿಯರಂತೆ ಅವರು ಯೆಹೊದದ ಇನ್ನೊಂದು ಸಂತತಿಯವರಾಗುವರು. ನಾನು ನನ್ನ ದೇಶವನ್ನು ಸಂರಕ್ಷಿಸುವೆನು. 8 ಶತ್ರುಸೈನ್ಯವು ಅದರೊಳಗಿಂದ ದಾಟಿಹೋಗಲು ನಾನು ಬಿಡೆನು. ಇನ್ನು ಮುಂದೆ ನನ್ನ ಜನರಿಗೆ ಅವರು ಹಾನಿಮಾಡದಂತೆ ಮಾಡುವೆನು. ಕಳೆದುಹೋದ ಸಮಯಗಳಲ್ಲಿ ಅವರೆಷ್ಟು ಸಂಕಟ ಅನುಭವಿಸಿದರೆಂದು ನನ್ನ ಸ್ವಂತ ಕಣ್ಣುಗಳಿಂದ ನೋಡಿರುತ್ತೇನೆ.”
ಭವಿಷ್ಯತ್ತಿನ ಅರಸನು
9 ಚೀಯೋನ್ ನಗರಿಯೇ, ಹರ್ಷಿಸು!
ಜೆರುಸಲೇಮ್ ಜನರೇ, ಸಂತೋಷದಿಂದ ಆರ್ಭಟಿಸಿರಿ.
ನಿಮ್ಮ ಅರಸನು ನಿಮ್ಮ ಬಳಿಗೆ ಬರುತ್ತಿದ್ದಾನೆ!
ಆತನು ವಿಜಯಶಾಲಿಯಾದ ನೀತಿವಂತನಾಗಿದ್ದಾನೆ.
ಆದರೆ ದೀನನಂತೆ ಕತ್ತೆಯ ಮೇಲೆ,
ಹೌದು, ಕತ್ತೆಯ ಮರಿಯ ಮೇಲೆ ಸವಾರಿ ಮಾಡಿಕೊಂಡು ಬರುವನು.
10 ಅರಸನು ಹೀಗೆನ್ನುತ್ತಾನೆ: “ಎಫ್ರಾಯೀಮಿನಲ್ಲಿ ರಥಗಳನ್ನೂ ಜೆರುಸಲೇಮಿನಲ್ಲಿ ಅಶ್ವಾರೂಢರಾದ ಸೈನಿಕರನ್ನೂ ನಾಶಮಾಡಿದೆನು;
ಯುದ್ಧದ ಬಿಲ್ಲುಗಳನ್ನು ತುಂಡು ಮಾಡಿದೆನು.”
ಆ ಅರಸನು ಸಮಾಧಾನದ ವರ್ತಮಾನವನ್ನು ರಾಜ್ಯಗಳಿಗೆ ತರುವನು.
ಸಮುದ್ರದಿಂದ ಸಮುದ್ರದ ತನಕ ಯುಫ್ರೇಟೀಸ್ ನದಿಯಿಂದ
ಭೂಮಿಯ ಕಟ್ಟಕಡೆಯವರೆಗೆ ಆತನು ರಾಜ್ಯವನ್ನಾಳುವನು.
ಯೆಹೋವನು ತನ್ನ ಜನರನ್ನು ಕಾಪಾಡುವನು
11 ಜೆರುಸಲೇಮೇ, ನಾವು ನಿನ್ನ ಒಡಂಬಡಿಕೆಗೆ ಮುದ್ರೆ ಹಾಕಲು ರಕ್ತವನ್ನು ಉಪಯೋಗಿಸಿದೆವು.
ಆದ್ದರಿಂದ ನೆಲದ ಹೊಂಡದೊಳಗಿಂದ ಜನರನ್ನು ಬಿಡುಗಡೆ ಮಾಡಿದ್ದೇನೆ.
12 ಸೆರೆಹಿಡಿಯಲ್ಪಟ್ಟವರೇ, ಮನೆಗೆ ಹೋಗಿ.
ಈಗ ನಿಮಗೊಂದು ನಿರೀಕ್ಷೆಯಿದೆ.
ನಾನು ನಿಮಗೆ ಖಂಡಿತವಾಗಿ ಹೇಳುವುದೇನೆಂದರೆ,
ನಾನು ತಿರುಗಿ ಬರುತ್ತೇನೆ.
13 ಯೆಹೂದನೇ, ನಾನು ನಿನ್ನನ್ನು ಬಿಲ್ಲಿನಂತೆ ಉಪಯೋಗಿಸುವೆನು.
ಎಫ್ರಾಯೀಮನೇ, ನಾನು ನಿನ್ನನ್ನು ಬಾಣದಂತೆ ಉಪಯೋಗಿಸುವೆನು.
ಇಸ್ರೇಲೇ, ಗ್ರೀಸಿನ ಜನರೊಂದಿಗೆ ಯುದ್ಧಮಾಡಲು
ನಾನು ನಿನ್ನನ್ನು ಖಡ್ಗದಂತೆ ಉಪಯೋಗಿಸುವೆನು.
14 ಯೆಹೋವನು ಅವರಿಗೆ ಕಾಣಿಸಿಕೊಂಡು
ತನ್ನ ಬಾಣವನ್ನು ಮಿಂಚಿನ ವೇಗದಲ್ಲಿ ಹಾರಿಸುವನು.
ನನ್ನ ಒಡೆಯನಾದ ಯೆಹೋವನು ತುತ್ತೂರಿ ಊದಿದಾಗ
ಮರುಭೂಮಿಯ ಬಿರುಗಾಳಿಯಂತೆ ಸೈನ್ಯವು ಮುಂದಕ್ಕೆ ನುಗ್ಗುವುದು.
15 ಸರ್ವಶಕ್ತನಾದ ದೇವರು ಅವರನ್ನು ಕಾಪಾಡುವನು.
ಸೈನಿಕರು ಶತ್ರುವನ್ನು ಜಯಿಸಲು ಕವಣೆ ಮತ್ತು ಕಲ್ಲುಗಳನ್ನು ಉಪಯೋಗಿಸುವರು.
ಶತ್ರುಗಳ ರಕ್ತವನ್ನು ಚೆಲ್ಲುವರು.
ಅದು ದ್ರಾಕ್ಷಾರಸದಂತೆ ಹರಿಯುವದು.
ಅದು ಯಜ್ಞವೇದಿಕೆಯ ಮೂಲೆಗಳಲ್ಲಿ ರಕ್ತವನ್ನು ಹೊಯಿದಂತೆ ಕಾಣುವುದು.
16 ಆ ಸಮಯಗಳಲ್ಲಿ ದೇವರಾದ ಯೆಹೋವನು,
ಕುರುಬನು ತನ್ನ ಕುರಿಗಳನ್ನು ಸಂರಕ್ಷಿಸುವ ರೀತಿಯಲ್ಲಿ
ತನ್ನ ಜನರನ್ನು ರಕ್ಷಿಸುವನು.
ಅವರು ಆತನಿಗೆ ಅಮೂಲ್ಯರಾಗಿರುವರು.
ಆತನ ಕೈಯಲ್ಲಿ ಹೊಳೆಯುವ ಆಭರಣದಂತಿರುವರು.
17 ಆಗ ಪ್ರತಿಯೊಂದು ಸುಂದರವೂ ರಮಣೀಯವೂ ಆಗಿರುವುದು.
ಬೆಳೆಯು ಸುಭಿಕ್ಷವಾಗಿರುವುದು.
ಆಹಾರ ಮತ್ತು ದ್ರಾಕ್ಷಾರಸ ಮಾತ್ರವೇ ಅಲ್ಲ,
ಎಲ್ಲಾ ಯೌವನಸ್ಥರೂ ಯೌವನಸ್ಥೆಯರೂ ಹಾಗೆಯೇ ಇರುವರು.
ಬೆಥಾನಿಯಲ್ಲಿ ಯೇಸು
(ಮತ್ತಾಯ 26:6-13; ಮಾರ್ಕ 14:3-9)
12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) 2 ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. 3 ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.
4 ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. 5 ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. 6 ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.
7 ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. 8 ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.
ಲಾಜರನ ವಿರುದ್ಧ ಸಂಚು
9 ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು. 10 ಆದರೆ ಮಹಾಯಾಜಕರು ಲಾಜರನನ್ನು ಸಹ ಕೊಲ್ಲಲು ಯೋಜನೆಗಳನ್ನು ಮಾಡಿದರು. 11 ಲಾಜರನ ನಿಮಿತ್ತ ಅನೇಕ ಯೆಹೂದ್ಯರು ತಮ್ಮ ನಾಯಕರನ್ನು ತೊರೆದು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು. ಆದಕಾರಣವೇ ಯೆಹೂದ್ಯ ನಾಯಕರು ಲಾಜರನನ್ನು ಸಹ ಕೊಲ್ಲಬೇಕೆಂದಿದ್ದರು.
ಜೆರುಸಲೇಮಿಗೆ ಯೇಸುವಿನ ಪ್ರವೇಶ
(ಮತ್ತಾಯ 21:1-11; ಮಾರ್ಕ 11:1-11; ಲೂಕ 19:28-40)
12 ಮರುದಿನ, ಯೇಸು ಜೆರುಸಲೇಮಿಗೆ ಬರುತ್ತಿದ್ದಾನೆ ಎಂಬ ಸುದ್ದಿ ಅಲ್ಲಿಯ ಜನರಿಗೆ ತಿಳಿಯಿತು. ಪಸ್ಕಹಬ್ಬಕ್ಕಾಗಿ ಬಂದಿದ್ದ ಅನೇಕರು ಅಲ್ಲಿದ್ದರು. 13 ಜನರು ಖರ್ಜೂರದ ಗರಿಗಳನ್ನು ತೆಗೆದುಕೊಂಡು ಯೇಸುವನ್ನು ಎದುರುಗೊಳ್ಳಲು ಹೋದರು.
“ಆತನಿಗೆ ಸ್ತೋತ್ರವಾಗಲಿ!
‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ದೇವರಾಶೀರ್ವಾದವಾಗಲಿ!’(A)
ಇಸ್ರೇಲ್ ರಾಜನಿಗೆ ದೇವರಾಶೀರ್ವಾದವಾಗಲಿ!”
ಎಂದು ಜನರು ಕೂಗಿದರು.
14 ಯೇಸು ಅಲ್ಲಿದ್ದ ಕತ್ತೆಯೊಂದನ್ನು ಕಂಡು, ಅದರ ಮೇಲೆ ಕುಳಿತುಕೊಂಡು ಹೊರಟನು. ಪವಿತ್ರ ಗ್ರಂಥ ಹೇಳುವಂತೆಯೇ ಇದು ನೆರವೇರಿತು:
15 “ಸಿಯೋನ್ ನಗರವೇ, ಭಯಪಡಬೇಡ!
ನೋಡು! ನಿನ್ನ ರಾಜನು ಬರುತ್ತಿದ್ದಾನೆ.
ಆತನು ಪ್ರಾಯದ ಕತ್ತೆಯ ಮೇಲೆ ಕುಳಿತುಕೊಂಡು ಬರುತ್ತಿದ್ದಾನೆ.”(B)
16 ಯೇಸುವಿನ ಶಿಷ್ಯರು ಆ ಸಮಯದಲ್ಲಿ ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ಯೇಸು ಮಹಿಮಾಪದವಿಗೆ ಏರಿಹೋದ ನಂತರ, ಈ ಸಂಗತಿಗಳು ಆತನ ವಿಷಯವಾಗಿ ಬರೆಯಲ್ಪಟ್ಟಿವೆ ಎಂಬುದನ್ನು ಶಿಷ್ಯರು ಅರ್ಥಮಾಡಿಕೊಂಡರು; ಮತ್ತು ತಾವು ಆತನಿಗಾಗಿ ಮಾಡಿದ ಕಾರ್ಯಗಳನ್ನು ಜ್ಞಾಪಿಸಿಕೊಂಡರು.
17 ಯೇಸು ಲಾಜರನಿಗೆ ಸಮಾಧಿಯೊಳಗಿಂದ ಬರುವಂತೆ ಹೇಳಿ ಅವನನ್ನು ಜೀವಂತವಾಗಿ ಎಬ್ಬಿಸಿದಾಗ ಅನೇಕ ಜನರು ಯೇಸುವಿನ ಸಂಗಡ ಇದ್ದರು. ಯೇಸು ಮಾಡಿದ ಈ ಕಾರ್ಯದ ಬಗ್ಗೆ ಅವರು ಇತರರಿಗೆ ಹೇಳುತ್ತಿದ್ದರು. 18 ಯೇಸು ಮಾಡಿದ ಈ ಅದ್ಭುತಕಾರ್ಯವನ್ನು ಕೇಳಿ, ಅನೇಕ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು. 19 ಆದ್ದರಿಂದ ಫರಿಸಾಯರು, “ನೋಡಿ! ನಮ್ಮ ಯೋಜನೆಯು ನಿಷ್ಪ್ರಯೋಜಕವಾಯಿತು. ಜನರು ಆತನನ್ನೇ ಹಿಂಬಾಲಿಸುತ್ತಿದ್ದಾರೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
ಜೀವ, ಮರಣಗಳ ಬಗ್ಗೆ ಯೇಸುವಿನ ಉಪದೇಶ
20 ಅಲ್ಲಿ ಗ್ರೀಕ್ ಜನರು ಸಹ ಇದ್ದರು. ಪಸ್ಕಹಬ್ಬದಲ್ಲಿ ಆರಾಧಿಸುವುದಕ್ಕಾಗಿ ಜೆರುಸಲೇಮಿಗೆ ಹೋಗಿದ್ದವರಲ್ಲಿ ಇವರೂ ಸೇರಿದ್ದರು. 21 ಈ ಗ್ರೀಕ್ ಜನರು ಫಿಲಿಪ್ಪನ ಬಳಿಗೆ ಹೋದರು. (ಫಿಲಿಪ್ಪನು ಗಲಿಲಾಯದ ಬೆತ್ಸಾಯಿ ಎಂಬ ಊರಿನವನಾಗಿದ್ದವನು.) ಅವರು, “ಸ್ವಾಮೀ, ನಾವು ಯೇಸುವನ್ನು ನೋಡಬೇಕು” ಎಂದು ಅವನನ್ನು ಕೇಳಿಕೊಂಡರು. 22 ಫಿಲಿಪ್ಪನು ಅಂದ್ರೆಯನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದನು. ಬಳಿಕ ಅಂದ್ರೆಯನು ಮತ್ತು ಫಿಲಿಪ್ಪನು ಒಟ್ಟಾಗಿ ಯೇಸುವಿನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದರು.
23 ಯೇಸು ಅವರಿಗೆ, “ಮನುಷ್ಯಕುಮಾರನು ತನ್ನ ಮಹಿಮೆಯನ್ನು ಹೊಂದುವ ಸಮಯ ಇದೇ ಆಗಿದೆ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಗೋಧಿಯ ಕಾಳು ಭೂಮಿಗೆ ಬಿದ್ದು ಸಾಯಲೇಬೇಕು. ಬಳಿಕ ಅದು ಬೆಳೆದು ಅನೇಕ ಕಾಳುಗಳನ್ನು ಫಲಿಸುವುದು. ಸಾಯದಿದ್ದರೆ, ಅದು ಯಾವಾಗಲೂ ಕೇವಲ ಒಂದೇ ಕಾಳಾಗಿರುವುದು. 25 ತನ್ನ ಸ್ವಂತ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ಉಳಿಸಿಕೊಳ್ಳುವನು. ಅವನು ನಿತ್ಯಜೀವವನ್ನು ಹೊಂದುವನು. 26 ನನ್ನ ಸೇವೆ ಮಾಡುವವನು ನನ್ನನ್ನು ಹಿಂಬಾಲಿಸಬೇಕು. ಆಗ ನಾನು ಇರುವಲ್ಲೆಲ್ಲಾ ನನ್ನ ಸೇವಕನು ಇರುವನು. ನನ್ನ ಸೇವೆಮಾಡುವ ಜನರನ್ನು ನನ್ನ ತಂದೆಯು ಸನ್ಮಾನಿಸುವನು” ಎಂದು ಹೇಳಿದನು.
ತನ್ನ ಮರಣದ ಕುರಿತು ಯೇಸುವಿನ ಹೇಳಿಕೆ
27 ಯೇಸು ಮಾತನ್ನು ಮುಂದುವರಿಸಿ, “ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ನನ್ನನ್ನು ಈ ಸಂಕಟ ಕಾಲದಿಂದ ರಕ್ಷಿಸು ಎನ್ನಬೇಕೇ?’ ಇಲ್ಲ! ಸಂಕಟಪಡುವುದಕ್ಕೋಸ್ಕರವೇ ನಾನು ಬಂದಿದ್ದೇನೆ. 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೊ!” ಎಂದು ಹೇಳಿದನು.
ಆಗ ಪರಲೋಕದಿಂದ, “ನನ್ನ ಹೆಸರನ್ನು ಮಹಿಮೆಪಡಿಸಿಕೊಂಡಿದ್ದೇನೆ. ನಾನು ಮತ್ತೆ ಮಹಿಮೆಪಡಿಸಿಕೊಳ್ಳುವೆನು” ಎಂಬ ವಾಣಿ ಆಯಿತು.
29 ಅಲ್ಲಿ ನಿಂತಿದ್ದ ಜನರು ಈ ವಾಣಿಯನ್ನು ಕೇಳಿ “ಅದು ಗುಡುಗು” ಎಂದರು.
ಆದರೆ ಇತರರು, “ದೇವದೂತನೊಬ್ಬನು ಯೇಸುವಿನೊಂದಿಗೆ ಮಾತಾಡಿದನು!” ಎಂದರು.
30 ಯೇಸು ಜನರಿಗೆ, “ಆ ವಾಣಿಯಾದದ್ದು ನನಗೋಸ್ಕರವಲ್ಲ, ನಿಮಗೋಸ್ಕರ. 31 ಈ ಲೋಕಕ್ಕೆ ತೀರ್ಪಾಗುವ ಕಾಲ ಇದೇ ಆಗಿದೆ. ಈಗ ಈ ಲೋಕದ ಅಧಿಪತಿಯನ್ನು (ಸೈತಾನ) ಹೊರಗೆ ದಬ್ಬಲಾಗುವುದು. 32 ನಾನು ಭೂಮಿಯಿಂದ ಮೇಲೆತ್ತಲ್ಪಡುವೆನು. ಆಗ ನಾನು ಎಲ್ಲಾ ಜನರನ್ನು ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33 ತಾನು ಸಾಯುವ ರೀತಿಯನ್ನು ಯೇಸು ಈ ಮಾತಿನ ಮೂಲಕ ಸೂಚಿಸಿದನು.
34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.
35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.
ಯೆಹೂದ್ಯರ ಅಪನಂಬಿಕೆ
37 ಯೇಸು ಅನೇಕ ಮಹತ್ಕಾರ್ಯಗಳನ್ನು ಮಾಡಿದನು. ಜನರು ಆ ಕಾರ್ಯಗಳನ್ನೆಲ್ಲಾ ನೋಡಿದರೂ ಆತನಲ್ಲಿ ನಂಬಿಕೆ ಇಡಲಿಲ್ಲ. 38 ಇದರಿಂದಾಗಿ, ಪ್ರವಾದಿಯಾದ ಯೆಶಾಯನು ಹೇಳಿದ್ದ ಮಾತುಗಳು ನೆರವೇರಿದವು. ಅದೇನೆಂದರೆ:
“ಪ್ರಭುವೇ, ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು?
ಪ್ರಭುವಿನ ಬಾಹುಬಲವು ಯಾರಿಗೆ ಗೋಚರವಾಯಿತು?”(C)
39 ಆದಕಾರಣವೇ ಜನರು ನಂಬಲಾಗಲಿಲ್ಲ. ಏಕೆಂದರೆ ಯೆಶಾಯನು ಮತ್ತೊಂದು ಕಡೆಯಲ್ಲಿ ಹೀಗೆ ಹೇಳಿದ್ದಾನೆ:
40 “ತಮ್ಮ ಕಣ್ಣುಗಳಿಂದ ಕಾಣದಂತೆ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆ
ಪರಿವರ್ತನೆಗೊಂಡು ಗುಣಹೊಂದದಂತೆ ಆತನು ಅವರನ್ನು ಕುರುಡರನ್ನಾಗಿ ಮಾಡಿದ್ದಾನೆ,
ಅವರ ಮನಸ್ಸುಗಳನ್ನು ಕಲ್ಲಾಗಿಸಿದ್ದಾನೆ.”(D)
41 ಯೆಶಾಯನು ಆತನ (ಯೇಸುವಿನ) ಮಹಿಮೆಯನ್ನು ನೋಡಿದ್ದರಿಂದಲೇ ಹೀಗೆ ಹೇಳಿದನು.
42 ಆದರೆ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅನೇಕ ಯೆಹೂದ್ಯನಾಯಕರು ಸಹ ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಅವರು ಫರಿಸಾಯರಿಗೆ ಹೆದರಿಕೊಂಡು ತಮ್ಮ ನಂಬಿಕೆಯನ್ನು ಬಹಿರಂಗಪಡಿಸಲಿಲ್ಲ. ತಮ್ಮನ್ನು ಫರಿಸಾಯರು ಸಭಾಮಂದಿರದಿಂದ ಬಹಿಷ್ಕರಿಸುತ್ತಾರೆ ಎಂಬ ಭಯ ಅವರಿಗಿತ್ತು. 43 ಈ ಜನರು ದೇವರ ಹೊಗಳಿಕೆಗಿಂತಲೂ ಜನರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು
44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.
47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”
Kannada Holy Bible: Easy-to-Read Version. All rights reserved. © 1997 Bible League International