Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 14-15

14 ಅಬೀಯನು ತನ್ನ ಪೂರ್ವಿಕರೊಂದಿಗೆ ವಿಶ್ರಾಂತಿಗೆ ಸೇರಿದನು. ಜನರು ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. ಅಬೀಯನ ನಂತರ ಅವನ ಮಗನಾದ ಆಸನು ಪಟ್ಟಕ್ಕೆ ಬಂದನು. ಆಸನ ಆಳ್ವಿಕೆಯ ಹತ್ತು ವರ್ಷ ದೇಶದಲ್ಲಿ ಸಮಾಧಾನ ನೆಲೆಸಿತ್ತು.

ಯೆಹೂದದ ಅರಸನಾದ ಆಸ

ಆಸನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೂ ನೀತಿವಂತನಾಗಿಯೂ ಇದ್ದನು. ಮೂರ್ತಿಪೂಜೆಗಾಗಿ ಮಾಡಿದ ಯಜ್ಞವೇದಿಕೆಗಳನ್ನು ತೆಗೆದುಹಾಕಿಸಿದನು. ವಿಗ್ರಹಾರಾಧಕರ ಪೂಜಾಸ್ಥಳಗಳನ್ನು, ಸ್ಮಾರಕಕಲ್ಲುಗಳನ್ನು ಒಡೆದು ಹಾಳುಮಾಡಿಸಿದನು. ಅಶೇರಸ್ತಂಭಗಳನ್ನು ತುಂಡು ಮಾಡಿಸಿದನು. “ನಿಮ್ಮ ಪೂರ್ವಿಕರ ದೇವರಾದ ಯೆಹೋವನನ್ನೇ ಅನುಸರಿಸಿ ಆತನ ಆಜ್ಞೆಗಳಿಗೂ ಕಟ್ಟಳೆಗಳಿಗೂ ವಿಧೇಯರಾಗಿರಿ” ಎಂದು ಆಸನು ಆಜ್ಞಾಪಿಸಿದನು. ಯೆಹೂದ ದೇಶದ ಪಟ್ಟಣಗಳಲ್ಲಿದ್ದ ಎಲ್ಲಾ ವಿಗ್ರಹಗಳನ್ನೂ ಪೂಜಾಸ್ಥಳಗಳನ್ನೂ ಕಿತ್ತುಹಾಕಿಸಿದನು. ಆತನ ಆಳ್ವಿಕೆಯಲ್ಲಿ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. ಆ ಕಾಲದಲ್ಲಿ ಆಸನು ಯೆಹೂದ ಪ್ರಾಂತ್ಯದಲ್ಲಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ಆಸನ ಆಳ್ವಿಕೆಯಲ್ಲಿ ಯುದ್ಧವೇ ಇರಲಿಲ್ಲ. ಯಾಕೆಂದರೆ ಯೆಹೋವನು ಅವನಿಗೆ ಸಮಾಧಾನವನ್ನು ಅನುಗ್ರಹಿಸಿದ್ದನು.

ಆಸನು ಜನರಿಗೆ, “ನಾವು ಈ ಪಟ್ಟಣಗಳ ಸುತ್ತಲೂ ಕೋಟೆಯನ್ನು ಕಟ್ಟೋಣ; ಬುರುಜುಗಳನ್ನೂ ಕದಗಳನ್ನೂ ಭದ್ರಪಡಿಸೋಣ. ನಾವು ನಮ್ಮ ದೇವರಾದ ಯೆಹೋವನನ್ನು ಅನುಸರಿಸುವದರಿಂದ ಈ ದೇಶವು ನಮ್ಮದಾಗಿರುತ್ತದೆ. ಆದ್ದರಿಂದ ನಾವು ಹೀಗೆ ಮಾಡೋಣ. ಆತನು ನಮ್ಮ ಸುತ್ತಲೂ ಸಮಾಧಾನವನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿದನು. ಅಂತೆಯೇ ಅವರು ಕಟ್ಟಿ ಪೂರೈಸಿದರು.

ಆಸನ ಬಳಿ ಮೂರು ಲಕ್ಷ ಸೈನಿಕರಿದ್ದರು, ಯೆಹೂದಕುಲದ ಇವರು ಗುರಾಣಿಗಳನ್ನೂ ಬರ್ಜಿಗಳನ್ನೂ ಬಳಸಬಲ್ಲವರಾಗಿದ್ದರು. ಇವರಲ್ಲದೆ ಬೆನ್ಯಾಮೀನ್ ಕುಲದಿಂದ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಸೈನಿಕರಿದ್ದರು. ಇವರು ಸಣ್ಣ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಬಳಸಬಲ್ಲವರಾಗಿದ್ದರು. ಇವರೆಲ್ಲರೂ ರಣವೀರರಾಗಿದ್ದರು.

ಇಥಿಯೋಪಿಯಾ ದೇಶದ ಜೆರಹನು ಆಸನ ಮೇಲೆ ಯುದ್ಧಮಾಡಲು ಬಂದನು. ಅವನೊಡನೆ ಹತ್ತು ಲಕ್ಷ ಸೈನಿಕರಿದ್ದರು; ಮೂನ್ನೂರು ರಥಗಳಿದ್ದವು. ಅವನ ಸೈನ್ಯವು ಮಾರೇಷದ ತನಕ ಬಂದಿತ್ತು. 10 ಆಸನು ಜೆರಹನ ವಿರುದ್ಧ ಯುದ್ಧಮಾಡಲು ಹೊರಟನು. ಮಾರೇಷದ ಚೆಫಾತ ಎಂಬ ಕಣಿವೆಯಲ್ಲಿ ವ್ಯೂಹ ಕಟ್ಟಿದರು.

11 ಆಸನು ದೇವರಾದ ಯೆಹೋವನನ್ನು ಪ್ರಾರ್ಥಿಸಿ, “ಯೆಹೋವನೇ, ಬಲಹೀನರಾದವರು ಬಲಿಷ್ಠರಾದವರನ್ನು ಸೋಲಿಸಲು ನೀನೇ ಸಹಾಯಿಸಬೇಕು. ದೇವರಾದ ಯೆಹೋವನೇ, ನಮಗೆ ಸಹಾಯಮಾಡು. ನೀನೇ ನಮ್ಮ ರಕ್ಷಕನು. ನಾವು ನಿನ್ನ ಮೇಲೆ ಭರವಸವಿಟ್ಟಿರುತ್ತೇವೆ. ನಿನ್ನ ಹೆಸರಿನಲ್ಲಿ ನಾವು ದೊಡ್ಡ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟಿರುತ್ತೇವೆ. ಯೆಹೋವನೇ, ನೀನೇ ನಮ್ಮ ದೇವರು. ನಿನ್ನನ್ನು ಸೋಲಿಸಲು ಯಾರಿಗೂ ಅವಕಾಶಕೊಡಬೇಡ” ಎಂದು ಬೇಡಿಕೊಂಡನು.

12 ಆಗ ಯೆಹೂದ ದೇಶದ ಆಸನ ಸೈನ್ಯವು ಇಥಿಯೋಪಿಯಾದ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡಿದನು. 13 ಆಸನ ಸೈನಿಕರು ಇಥಿಯೋಪಿಯಾದ ಸೈನ್ಯವನ್ನು ಗೆರಾರಿನ ತನಕ ಹಿಂದಟ್ಟಿಕೊಂಡು ಹೋದರು. ಅವರು ಮತ್ತೆ ಸೈನ್ಯವನ್ನು ಕಟ್ಟಿ ಯುದ್ಧಮಾಡಲು ಸಾಧ್ಯವಾಗದಷ್ಟು ಸೈನಿಕರು ಸತ್ತರು. ಅವರ ಬಲವನ್ನು ಮುರಿಯಲು ಯೆಹೋವನು ತನ್ನ ಸೈನ್ಯವನ್ನು ಬಳಸಿಕೊಂಡನು. 14 ಆಸನು ತನ್ನ ಸೈನ್ಯದೊಡನೆ ಗೆರಾರಿನ ಎಲ್ಲಾ ಪಟ್ಟಣಗಳನ್ನು ಸೋಲಿಸಿಬಿಟ್ಟನು. ಅವುಗಳಲ್ಲಿ ವಾಸಿಸುವ ಜನರು ಯೆಹೋವನಿಗೆ ಭಯಪಟ್ಟರು. ಆ ಪಟ್ಟಣಗಳಲ್ಲಿ ಇದ್ದ ನಿಕ್ಷೇಪಗಳನ್ನು ಆಸನ ಸೈನಿಕರು ದೋಚಿದರು. 15 ಆಸನ ಸೈನಿಕರು ಕುರುಬರ ಪಾಳೆಯವನ್ನು ಧ್ವಂಸಮಾಡಿ ಅನೇಕಾನೇಕ ಕುರಿಗಳನ್ನೂ ಒಂಟೆಗಳನ್ನೂ ಸೂರೆಮಾಡಿ ಜೆರುಸಲೇಮಿಗೆ ತಂದರು.

ಆಸನ ಪರಿವರ್ತನೆ

15 1-2 ಓಬೇದನ ಮಗನಾದ ಅಜರ್ಯನ ಮೇಲೆ ದೇವರಾತ್ಮವು ಬಂದಿತು. ಅಜರ್ಯನು ಆಸನನ್ನು ಸಂಧಿಸಿ ಹೀಗೆ ಹೇಳಿದನು: “ಆಸನೇ, ನನ್ನ ಮಾತನ್ನು ಕೇಳು. ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನನ್ನ ಮಾತನ್ನು ಕೇಳಿರಿ. ನೀವು ಯೆಹೋವನೊಡನೆ ಇದ್ದರೆ ಆತನು ನಿಮ್ಮ ಸಂಗಡ ಇರುವನು. ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು. ಆದರೆ ನೀವು ಆತನನ್ನು ತೊರೆದರೆ ಆತನು ನಿಮ್ಮನ್ನೂ ತೊರೆಯುವನು. ಬಹಳಕಾಲದ ತನಕ ಇಸ್ರೇಲರಲ್ಲಿ ನಿಜವಾದ ದೇವರಿರಲಿಲ್ಲ; ಬೋಧಕನಿರಲಿಲ್ಲ; ಧರ್ಮಶಾಸ್ತ್ರವೂ ಇರಲಿಲ್ಲ. ಆದರೆ ಇಸ್ರೇಲರು ತಮಗೆ ಕಷ್ಟಬಂದಾಗ ದೇವರ ಕಡೆಗೆ ತಿರುಗಿದರು. ಆತನೇ ಇಸ್ರೇಲಿನ ದೇವರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಸಿಕ್ಕಿದನು. ಆ ಕಷ್ಟದ ಸಮಯದಲ್ಲಿ ಯಾರೂ ಸುರಕ್ಷಿತವಾಗಿ ಪ್ರಯಾಣ ಮಾಡುವಂತಿರಲಿಲ್ಲ. ಎಲ್ಲಾ ದೇಶಗಳಲ್ಲಿಯೂ ಕಷ್ಟ ತೊಂದರೆಗಳು ತುಂಬಿದ್ದವು. ಒಂದು ದೇಶವು ಇನ್ನೊಂದು ದೇಶವನ್ನು ನಾಶಮಾಡುತ್ತಿತ್ತು; ಒಂದು ಪಟ್ಟಣವು ಇನ್ನೊಂದು ಪಟ್ಟಣವನ್ನು ಸೂರೆಮಾಡುತ್ತಿತ್ತು. ಹೀಗೆ ದೇವರು ಎಲ್ಲಾ ಬಗೆಯ ತೊಂದರೆಗಳಿಂದ ಅವರನ್ನು ತಳಮಳಗೊಳಿಸಿದನು. ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನೀವು ಶಕ್ತರಾಗಿರಿ, ನಿರಾಶರಾಗಬೇಡಿರಿ; ಯಾಕೆಂದರೆ ನಿಮ್ಮ ಒಳ್ಳೆಯ ಕೆಲಸಕ್ಕೆ ನಿಮಗೆ ಪ್ರತಿಫಲ ದೊರೆಯುವುದು.”

ಪ್ರವಾದಿಯಾದ ಓಬೇದನು ತಂದ ಸಂದೇಶವನ್ನು ಆಸನು ಕೇಳಿ ತುಂಬಾ ಪ್ರೋತ್ಸಾಹಗೊಂಡನು. ಅನಂತರ ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದಲ್ಲಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಗೆದ್ದಿದ್ದ ಎಫ್ರಾಯೀಮ್ ಬೆಟ್ಟಪ್ರದೇಶಗಳಲ್ಲಿದ್ದ ವಿಗ್ರಹಗಳನ್ನು ತೆಗೆದುಹಾಕಿಸಿದನು. ದೇವಾಲಯದ ಮಂಟಪದೆದುರು ಇದ್ದ ಯೆಹೋವನ ಯಜ್ಞವೇದಿಕೆಯನ್ನು ಸರಿಪಡಿಸಿದನು.

ಆಮೇಲೆ ಆಸನು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದ ಜನರನ್ನೆಲ್ಲಾ ಒಟ್ಟಾಗಿ ಸೇರಿಸಿದನು. ಅದೇ ಪ್ರಕಾರ ಅವನು ಇಸ್ರೇಲನ್ನು ಬಿಟ್ಟು ಯೆಹೂದದಲ್ಲಿ ನೆಲೆಸಲು ಬಂದಿದ್ದ ಎಫ್ರಾಯೀಮ್, ಮನಸ್ಸೆ ಮತ್ತು ಸಿಮೆಯೋನ್ ಪ್ರಾಂತ್ಯಗಳವರನ್ನೂ ಒಟ್ಟಾಗಿ ಸೇರಿಸಿದನು. ದೇವರಾದ ಯೆಹೋವನು ಆಸನ ಕೂಡ ಇರುವದನ್ನು ನೋಡಿ ಅವನೊಂದಿಗೆ ಸೇರಲು ಅನೇಕ ಜನರು ಬಂದಿದ್ದರು.

10 ಅವರೆಲ್ಲರೂ ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಸೇರಿಬಂದರು. 11 ಆ ಸಮಯದಲ್ಲಿ ಅವರು ಏಳುನೂರು ಹೋರಿಗಳನ್ನೂ ಏಳುಸಾವಿರ ಆಡುಕುರಿಗಳನ್ನೂ, ಯೆಹೋವನಿಗೆ ಸಮರ್ಪಿಸಿದರು. ಇವುಗಳನ್ನು ಆಸನ ಸೈನ್ಯವು ಶತ್ರುಗಳಿಂದ ಸುಲಿದುಕೊಂಡಿದ್ದರು. 12 ತಮ್ಮ ಪೂರ್ವಿಕರು ಸೇವೆಮಾಡಿದ ದೇವರೊಂದಿಗೆ ಅಲ್ಲಿ ಅವರು ಒಡಂಬಡಿಕೆ ಮಾಡಿಕೊಂಡು ತಾವು ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಆತನ ಸೇವೆ ಮಾಡುವುದಾಗಿ ಪ್ರಮಾಣಮಾಡಿದರು. 13 ಯಾವನಾದರೂ ದೇವರಾದ ಯೆಹೋವನ ಸೇವೆಮಾಡಲು ನಿರಾಕರಿಸುವದಾದರೆ ಆ ವ್ಯಕ್ತಿಯು ಗಂಡಸಾಗಿದ್ದರೂ ಹೆಂಗಸಾಗಿದ್ದರೂ ಮುಖ್ಯವಾದವನಾಗಿದ್ದರೂ ಮುಖ್ಯವಲ್ಲದವನಾಗಿದ್ದರೂ ಕೊಲ್ಲಲ್ಪಡಬೇಕು ಎಂಬುದಾಗಿ ಹೇಳಿದರು. 14 ಆಮೇಲೆ ಆಸನೂ ಅವನ ಜನರೂ ದೇವರಿಗೆ ಪ್ರಮಾಣಮಾಡಿ ಸಂತೋಷದಿಂದ ಹರ್ಷಧ್ವನಿ ಮಾಡಿದರು. ಅಲ್ಲದೆ ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿದರು. 15 ಯೆಹೂದದ ಎಲ್ಲಾ ಜನರು ತಾವು ಯೆಹೋವನಿಗೆ ಮಾಡಿದ ಪ್ರಮಾಣದ ನಿಮಿತ್ತ ಸಂತೋಷಪಟ್ಟರು. ಯಾಕೆಂದರೆ ಅವರು ತಮ್ಮ ಪೂರ್ಣ ಹೃದಯದಿಂದ ಪ್ರಮಾಣಮಾಡಿದ್ದರು. ಅವರು ಯೆಹೋವನನ್ನು ಪೂರ್ಣ ಮನಸ್ಸಿನಿಂದ ಹಿಂಬಾಲಿಸಿದರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಪ್ರಸನ್ನನಾಗಿ ಅವರಿಗೆ ಸಮಾಧಾನವನ್ನು ಕೊಟ್ಟನು.

16 ಆಸನು ತನ್ನ ತಾಯಿಯಾದ ಮಾಕಳನ್ನು ರಾಜಮಾತೆ ಎಂಬ ಪದವಿಯಿಂದ ತಳ್ಳಿಬಿಟ್ಟನು. ಯಾಕೆಂದರೆ ಆಕೆಯು ಅಶೇರ್ ದೇವತೆಯ ಅಸಹ್ಯವಾದ ಕಂಬವನ್ನು ಮಾಡಿಸಿದ್ದಳು. ಆಸನು ಅದನ್ನು ಕಡಿದು ಚೂರುಚೂರಾಗಿ ಮಾಡಿಸಿದನು. ನಂತರ ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಬಿಟ್ಟನು. 17 ಆದರೂ ಯೆಹೂದದ ಎಲ್ಲಾ ಉನ್ನತಸ್ಥಳಗಳು ತೆಗೆಯಲ್ಪಡಲಿಲ್ಲ, ಆದರೆ ಆಸನು ತನ್ನ ಜೀವಮಾನದಲ್ಲೆಲ್ಲಾ ಯೆಹೋವನಿಗೆ ನಂಬಿಗಸ್ತನಾಗಿದ್ದನು.

18 ಆಸನು ತನ್ನ ತಂದೆಯು ಕೊಟ್ಟ ಪರಿಶುದ್ಧ ಕಾಣಿಕೆಗಳನ್ನು ದೇವಾಲಯದಲ್ಲಿ ಇಡಿಸಿದನು. ಅವು ಬೆಳ್ಳಿಬಂಗಾರಗಳ ವಸ್ತುಗಳಾಗಿದ್ದವು. 19 ಆಸನ ಆಳ್ವಿಕೆಯ ಮೂವತ್ತೈದನೆಯ ವರ್ಷದ ತನಕ ದೇಶದಲ್ಲಿ ಯುದ್ಧವೇ ಇರಲಿಲ್ಲ.

ಪ್ರಕಟನೆ 4

ಯೋಹಾನನು ಪರಲೋಕವನ್ನು ನೋಡಿದನು

ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು. ಕೂಡಲೇ ನಾನು ಪವಿತ್ರಾತ್ಮನ ವಶನಾದೆನು. ಪರಲೋಕದಲ್ಲಿ ನನ್ನೆದುರಿಗೆ ಒಂದು ಸಿಂಹಾಸನವಿತ್ತು. ಯಾರೋ ಒಬ್ಬನು ಆ ಸಿಂಹಾಸನದ ಮೇಲೆ ಕುಳಿತಿದ್ದನು. ಸಿಂಹಾಸನದ ಮೇಲೆ ಕುಳಿತಿದ್ದಾತನು ಅಮೂಲ್ಯವಾದ ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಬಣ್ಣದ ಕಾಮನಬಿಲ್ಲಿತ್ತು.

ಆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿದ್ದರು. ಅವರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. ಆ ಸಿಂಹಾಸನದಿಂದ ಸಿಡಿಲಿನ ಆರ್ಭಟವೂ ಗುಡುಗಿನ ಧ್ವನಿಯೂ ಬರುತ್ತಿತ್ತು. ಆ ಸಿಂಹಾಸನದ ಮುಂದೆ ಏಳು ದೀಪಗಳು ಬೆಳಗುತ್ತಿದ್ದವು. ಈ ದೀಪಗಳು ದೇವರ ಏಳು ಆತ್ಮಗಳಾಗಿದ್ದವು. ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಣುವ ವಸ್ತುವೊಂದಿತ್ತು. ಅದು ಸ್ಫಟಿಕದಂತೆ ಸ್ಪಚ್ಛವಾಗಿತ್ತು.

ಆ ಸಿಂಹಾಸನದ ಮುಂದೆ ಮತ್ತು ಅದರ ಪ್ರತಿಯೊಂದು ಮಗ್ಗುಲಿನಲ್ಲೂ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗದಲ್ಲೆಲ್ಲಾ ಮತ್ತು ಮುಂಭಾಗದಲ್ಲೆಲ್ಲಾ ಕಣ್ಣುಗಳು ತುಂಬಿದ್ದವು. ಮೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖದಂತಿತ್ತು. ನಾಲ್ಕನೆಯದು ಹಾರುವ ಗರುಡನಂತಿತ್ತು.[a] ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಈ ಜೀವಿಗಳ ಹೊರಭಾಗದಲ್ಲೆಲ್ಲಾ ಮತ್ತು ಒಳಭಾಗದಲ್ಲೆಲ್ಲಾ ಕಣ್ಣುಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡಬಿಡದೆ ಹೀಗೆ ಹೇಳುತ್ತಿದ್ದವು:

“ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು.
ಆತನು ಭೂತಕಾಲದಲ್ಲಿ ಇದ್ದವನೂ ವರ್ತಮಾನಕಾಲದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”

ಈ ಜೀವಿಗಳು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಪ್ರಭಾವ, ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಯುಗಯುಗಾಂತರಗಳಲ್ಲಿಯೂ ಜೀವಿಸುವವನು ಆತನೇ. 10 ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಕಾಲೂರಿ ನಮಸ್ಕರಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವ ಆತನನ್ನು ಆರಾಧಿಸುತ್ತಾ ಇಂತೆಂದರು:

11 “ನಮ್ಮ ಪ್ರಭುವೇ, ನಮ್ಮ ದೇವರೇ!
ನೀನು ಪ್ರಭಾವ, ಗೌರವ, ಅಧಿಕಾರಗಳನ್ನು ಪಡೆಯಲು ಯೋಗ್ಯನಾಗಿರುವೆ.
    ಎಲ್ಲವನ್ನೂ ನಿರ್ಮಿಸಿದಾತನು ನೀನೇ.
ನಿನ್ನ ಚಿತ್ತದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಸೃಷ್ಟಿಗೊಂಡವು.”

ಹಗ್ಗಾಯ 2

ಯೆಹೋವನ ಉತ್ತೇಜನ; ಕೆಲಸದ ಪ್ರಾರಂಭ

ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಹಗ್ಗಾಯನಿಗೆ ಯೆಹೋವನಿಂದ ಈ ಸಂದೇಶವು ದೊರಕಿತು: “ಶೆಯಲ್ತಿಯೇಲನ ಮಗನೂ ರಾಜ್ಯಪಾಲನೂ ಆಗಿರುವ ಜೆರುಬ್ಬಾಬೆಲನಿಗೂ ಮಹಾಯಾಜಕನೂ ಯೆಹೋಚಾದಾಕನ ಮಗನೂ ಆಗಿರುವ ಯೆಹೋಶುವನಿಗೂ ಮತ್ತು ಎಲ್ಲಾ ಜನರಿಗೂ ಈ ವಿಷಯಗಳನ್ನು ತಿಳಿಸು. ‘ನಿಮ್ಮಲ್ಲಿ ಎಷ್ಟು ಮಂದಿ ಹೊಸ ಆಲಯವನ್ನು ನೋಡುವಾಗ ಕೆಡವಲ್ಪಟ್ಟ ಮೊದಲನೇ ಆಲಯದ ಸೌಂದರ್ಯವನ್ನೂ ಗಾಂಭೀರ್ಯವನ್ನೂ ನೆನಪು ಮಾಡುತ್ತೀರಿ? ನಿಮ್ಮ ಆಲೋಚನೆಯೇನು? ಮೊದಲಿನ ಆಲಯದೊಡನೆ ಈ ಆಲಯವನ್ನು ಹೋಲಿಸಿದಾಗ ಇದು ಏನೂ ಅಲ್ಲವೆಂದು ತೋರುತ್ತದೋ? ಆದರೆ ಜೆರುಬ್ಬಾಬೆಲನೇ, ಯೆಹೋವನು ಹೀಗೆನ್ನುತ್ತಾನೆ, “ನಿರುತ್ಸಾಹಗೊಳ್ಳಬೇಡ! ಮಹಾಯಾಜಕನಾದ ಯೆಹೋಶುವನೇ, ನಿರುತ್ಸಾಹಗೊಳ್ಳಬೇಡ! ಈ ದೇಶದ ಎಲ್ಲಾ ಜನರೇ, ನಿರುತ್ಸಾಹಗೊಳ್ಳಬೇಡಿ, ಕೆಲಸವನ್ನು ಮುಂದುವರಿಸಿರಿ, ಯಾಕೆಂದರೆ ನಾನೇ ನಿಮ್ಮೊಂದಿಗಿದ್ದೇನೆ” ಎಂದು ಯೆಹೋವನು ಹೇಳುತ್ತಾನೆ.’” ಇದು ಸರ್ವಶಕ್ತನಾದ ಯೆಹೋವನ ನುಡಿ.

ಯೆಹೋವನು ಹೇಳುವುದೇನೆಂದರೆ, “‘ನೀವು ಈಜಿಪ್ಟ್ ದೇಶವನ್ನು ಬಿಟ್ಟಾಗ ನಾನು ನಿಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ನಾನು ಆ ವಾಗ್ದಾನವನ್ನು ನೆರವೇರಿಸಿದ್ದೇನೆ! ನನ್ನ ಆತ್ಮವು ನಿಮ್ಮೊಂದಿಗಿದೆ. ಆದ್ದರಿಂದ ಭಯಪಡಬೇಡಿ!’ ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಇನ್ನು ಸ್ವಲ್ಪ ಸಮಯದಲ್ಲಿ ನಾನು ಭೂಪರಲೋಕಗಳನ್ನು ಅದುರಿಸುವೆನು. ಸಮುದ್ರವನ್ನೂ ಒಣನೆಲವನ್ನೂ ಕಂಪಿಸುವೆನು, ನಾನು ಜನಾಂಗಗಳನ್ನು ನಡುಗಿಸುವೆನು. ಆಗ ಅವರು ಎಲ್ಲಾ ಜನಾಂಗಗಳ ಐಶ್ವರ್ಯದೊಡನೆ ನಿಮ್ಮಲ್ಲಿಗೆ ಬರುವರು. ಆಗ ನನ್ನ ಈ ಆಲಯವನ್ನು ಮಹಿಮೆಯಿಂದ ತುಂಬಿಸುವೆನು.’ ಸರ್ವಶಕ್ತನಾದ ದೇವರು ಇದನ್ನು ಹೇಳುತ್ತಿದ್ದಾನೆ! ‘ಅವರ ಬೆಳ್ಳಿಯೆಲ್ಲವೂ ನನ್ನದೇ, ಅವರ ಬಂಗಾರವೂ ನನ್ನದೇ.’ ಇದು ಸರ್ವಶಕ್ತನಾದ ಯೆಹೋವನ ನುಡಿ. ‘ಈ ಅಂತಿಮ ದೇವಾಲಯವು ಮೊದಲನೆ ಆಲಯಕ್ಕಿಂತಲೂ ಸುಂದರವಾಗಿಯೂ ವೈಭವವಾಗಿಯೂ ಇರುವುದು! ನಾನು ಈ ಸ್ಥಳಕ್ಕೆ ಸಮಾಧಾನವನ್ನು ತರುವೆನು!’ ಜ್ಞಾಪಕದಲ್ಲಿಡಿ, ಇವುಗಳನ್ನು ಸರ್ವಶಕ್ತನಾದ ಯೆಹೋವನು ಹೇಳುತ್ತಿದ್ದಾನೆ!”

10 ಪರ್ಶಿಯ ದೇಶದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಒಂಭತ್ತನೆಯ ತಿಂಗಳಿನ ಇಪ್ಪತ್ನಾಲ್ಕನೆಯ ದಿನದಂದು ಯೆಹೋವನ ಸಂದೇಶವು ಪ್ರವಾದಿಯಾದ ಹಗ್ಗಾಯನಿಗೆ ಬಂದಿತು. 11 “ಈ ವಿಷಯದ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಲು ಯಾಜಕರನ್ನು ವಿಚಾರಿಸು ಎಂಬುದಾಗಿ ಸರ್ವಶಕ್ತನಾದ ಯೆಹೋವನು ನಿನಗೆ ಆಜ್ಞಾಪಿಸುತ್ತಾನೆ. 12 ‘ಒಬ್ಬನು ತನ್ನ ಬಟ್ಟೆಯ ಸೆರಗಿನಲ್ಲಿ ಮಾಂಸವನ್ನು ಒಯ್ಯುತ್ತಿದ್ದಾನೆಂದು ನೆನಸಿರಿ. ಆ ಮಾಂಸವು ಯಜ್ಞದ ಒಂದು ಭಾಗವಾಗಿದೆ. ಆದ್ದರಿಂದ ಅದು ಪವಿತ್ರವಾದದ್ದು. ಆ ಬಟ್ಟೆಯು ರೊಟ್ಟಿಯನ್ನಾಗಲಿ ಅಡಿಗೆ ಮಾಡಿದ ಆಹಾರವಾಗಲಿ ದ್ರಾಕ್ಷಾರಸವನ್ನಾಗಲಿ ಎಣ್ಣೆಯನ್ನಾಗಲಿ ಮುಟ್ಟಿದರೆ ಮುಟ್ಟಿದ ವಸ್ತು ಪವಿತ್ರವಸ್ತುವಾಗಬಹುದೇ?’”

ಯಾಜಕರು ಉತ್ತರವಾಗಿ, “ಇಲ್ಲ” ಎಂದರು.

13 ಆಗ ಹಗ್ಗಾಯನು, “ಒಬ್ಬ ಮನುಷ್ಯನು ಸತ್ತ ಹೆಣವನ್ನು ಮುಟ್ಟಿದರೆ, ಅವನು ಅಪವಿತ್ರನಾಗುವನು. ಆ ಸ್ಥಿತಿಯಲ್ಲಿ ಅವನು ಮುಟ್ಟಿದ ಯಾವ ವಸ್ತುವೇ ಆಗಲಿ ಅಪವಿತ್ರವಾಗುವದೇ?”

ಆಗ ಯಾಜಕರು, “ಹೌದು, ಆ ವಸ್ತುಗಳೂ ಅಪವಿತ್ರವಾಗುವವು” ಎಂದು ಉದ್ಗರಿಸಿದರು.

14 ಆಗ ಹಗ್ಗಾಯನು, “ನಿಮ್ಮ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಈ ಜನಾಂಗದ ಜನರ ವಿಷಯದಲ್ಲಿಯೂ ಅದು ಸತ್ಯವಾಗಿದೆ. ಅವರು ನನ್ನ ಮುಂದೆ ಪವಿತ್ರರಲ್ಲ. ಆದ್ದರಿಂದ ಅವರು ಯಾವ ವಸ್ತುವನ್ನಾದರೂ ಮುಟ್ಟಿದರೆ ಅದು ಅಶುದ್ಧವಾಗುವುದು ಮತ್ತು ಅವರು ಯಜ್ಞವೇದಿಕೆಯ ಮೇಲೆ ಅರ್ಪಿಸುವುದೆಲ್ಲಾ ಅಶುದ್ಧವಾಗಿರುವುದು.

15 “‘ಈ ಹೊತ್ತಿಗಿಂತ ಮುಂಚೆ ನಡೆದ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ. ನೀವು ದೇವಾಲಯವನ್ನು ಕಟ್ಟಲು ಆರಂಭಿಸಿದ ಹಿಂದಿನ ದಿವಸಗಳನ್ನು ನೆನಪಿಗೆ ತಂದುಕೊಳ್ಳಿರಿ. 16 ಜನರಿಗೆ ಇಪ್ಪತ್ತು ಕಿಲೋ ಧಾನ್ಯ ಬೇಕಿದ್ದರೆ ರಾಶಿಯಲ್ಲಿ ಹತ್ತು ಕಿಲೋ ಮಾತ್ರ ಇರುತ್ತಿತ್ತು. ಜನರು ದ್ರಾಕ್ಷಾರಸದ ಪೀಪಾಯಿಯಿಂದ ಐವತ್ತು ಲೀಟರ್ ದ್ರಾಕ್ಷಾರಸ ತೆಗೆಯಲು ಹೋದರೆ ಅಲ್ಲಿ ಇಪ್ಪತ್ತು ಲೀಟರ್ ಮಾತ್ರ ಇರುತ್ತಿತ್ತು. 17 ಯಾಕೆ ಹೀಗಾಯಿತು? ಯಾಕೆಂದರೆ ನಾನು ನಿಮ್ಮನ್ನು ಶಿಕ್ಷಿಸಿದೆನು. ನೀವು ನೆಟ್ಟ ಮರಗಳನ್ನು ನಾಶಮಾಡಲು ನಾನು ರೋಗವನ್ನು ಕಳುಹಿಸಿದೆನು. ನಿಮ್ಮ ಕೈಕೆಲಸವನ್ನು ಹಾಳುಮಾಡಲು ನಾನು ಆಲಿಕಲ್ಲಿನ ಮಳೆಯನ್ನು ಕಳುಹಿಸಿದೆನು. ನಾನು ಇಷ್ಟೆಲ್ಲಾ ಮಾಡಿದರೂ ನೀವು ಯಾರೂ ನನ್ನ ಬಳಿಗೆ ಬರಲಿಲ್ಲ.’ ಇದು ಯೆಹೋವನ ನುಡಿ.”

18 ಯೆಹೋವನು ಹೀಗೆನ್ನುತ್ತಾನೆ, “ಈ ಹೊತ್ತು ಒಂಭತ್ತನೇ ತಿಂಗಳಿನ ಇಪ್ಪತ್ನಾಲ್ಕನೆಯ ದಿವಸವಾಗಿದೆ. ಆಲಯದ ಶಂಕುಸ್ಥಾಪನೆ ಮಾಡಿ ಮುಗಿಸಿರುತ್ತೀರಿ. ಇನ್ನು ಮುಂದಕ್ಕೆ ಏನು ನಡಿಯುತ್ತದೆಂದು ಗಮನಿಸಿರಿ. 19 ಉಗ್ರಾಣದಲ್ಲಿ ಗೋಧಿಯ ಕಾಳು ಏನಾದರೂ ಉಳಿದಿದೆಯೋ? ಇಲ್ಲ! ದ್ರಾಕ್ಷಿಬಳ್ಳಿಗಳನ್ನು, ಅಂಜೂರದ ಮರಗಳನ್ನು, ದಾಳಿಂಬದ ಮರಗಳನ್ನು, ಆಲೀವ್ ಮರಗಳನ್ನು ನೋಡಿರಿ. ಅವು ಹಣ್ಣುಗಳನ್ನು ಬಿಡುತ್ತವೋ? ಇಲ್ಲ. ಆದರೆ ಈ ದಿನದಿಂದ ನಾನು ನಿಮ್ಮನ್ನು ಆಶೀರ್ವದಿಸುತ್ತೇನೆ!”

20 ಒಂಭತ್ತನೇ ತಿಂಗಳ ಇಪ್ಪತ್ನಾಲ್ಕನೆಯ ದಿವಸದಲ್ಲಿ ಇನ್ನೊಂದು ಸಂದೇಶವು ಹಗ್ಗಾಯನಿಗೆ ಯೆಹೋವನಿಂದ ಬಂದಿತು. ಇದೇ ಆ ಸಂದೇಶ: 21 “ಯೆಹೂದ ಪ್ರಾಂತ್ಯದ ರಾಜ್ಯಪಾಲನಾದ ಜೆರುಬ್ಬಾಬೆಲನ ಬಳಿಗೆ ಹೋಗು. ನಾನು ಭೂಮ್ಯಾಕಾಶಗಳನ್ನು ಅಲ್ಲಾಡಿಸುವೆನು ಎಂದು ಅವನಿಗೆ ಹೇಳು. 22 ನಾನು ಅನೇಕ ಅರಸರನ್ನೂ ದೇಶಗಳನ್ನೂ ಕೆಡವಿಹಾಕುವೆನು; ಆ ಅನ್ಯ ಜನರ ಬಲಿಷ್ಠ ಸಾಮ್ರಾಜ್ಯಗಳನ್ನು ನಾಶಮಾಡುವೆನು. ಅವರ ರಥಗಳನ್ನೂ ರಾಹುತರನ್ನೂ ನಾಶಮಾಡುವೆನು. ಅವರ ಯುದ್ಧದ ಕುದುರೆಗಳನ್ನೂ ಸವಾರರನ್ನೂ ಸೋಲಿಸುವೆನು. ಆ ಸೈನ್ಯಗಳವರು ಈಗ ಸ್ನೇಹಿತರಾಗಿದ್ದರೂ ಒಬ್ಬರಿಗೊಬ್ಬರು ವೈರಿಗಳಾಗಿ ಒಬ್ಬರನ್ನೊಬ್ಬರು ಖಡ್ಗಗಳಿಂದ ಕೊಲ್ಲುವರು.” 23 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನೇ, ನೀನು ನನ್ನ ಸೇವಕ. ನಿನ್ನನ್ನು ನಾನು ಆರಿಸಿಕೊಂಡಿದ್ದೇನೆ. ಆ ಸಮಯದಲ್ಲಿ ನಾನು ನಿನ್ನನ್ನು ಒಂದು ಮುದ್ರೆಯುಂಗುರವನ್ನಾಗಿ ಮಾಡುವೆನು. ನಾನು ಇವೆಲ್ಲವನ್ನು ಮಾಡಿದೆನೆಂಬುದಕ್ಕೆ ನೀನು ಸಾಕ್ಷಿಯಾಗಿರುವೆ.”

ಸರ್ವಶಕ್ತನಾದ ಯೆಹೋವನು ಇವೆಲ್ಲವನ್ನು ನುಡಿದಿದ್ದಾನೆ.

ಯೋಹಾನ 3

ಯೇಸು ಮತ್ತು ನಿಕೊದೇಮ

ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು. ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.

ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.

ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.

ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು. ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು. ‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ. ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.

ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.

10 ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ? 11 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ. 12 ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ! 13 ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.

14 “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15 ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.

16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18 ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ. 19 ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು. 20 ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21 ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.

ಯೇಸು ಮತ್ತು ಸ್ನಾನಿಕ ಯೋಹಾನ

22 ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು. 23 ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು. 24 (ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)

25 ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಮತ್ತೊಬ್ಬ ಯೆಹೂದ್ಯನಿಗೂ ಶುದ್ಧಾಚಾರದ ಬಗ್ಗೆ ವಾದವಾಯಿತು. 26 ಆದ್ದರಿಂದ ಶಿಷ್ಯರು ಯೋಹಾನನ ಬಳಿಗೆ ಬಂದು, “ಗುರುವೇ, ಜೋರ್ಡನ್ ನದಿಯ ಆಚೆದಡದಲ್ಲಿ ನಿನ್ನೊಂದಿಗಿದ್ದ ವ್ಯಕ್ತಿಯನ್ನು ಜ್ಞಾಪಿಸಿಕೊ. ಆತನ ಕುರಿತಾಗಿ ನೀನೇ ಸಾಕ್ಷಿ ಹೇಳಲಿಲ್ಲವೇ? ಆತನು ಜನರಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾನೆ. ಅನೇಕ ಜನರು ಆತನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.

27 ಯೋಹಾನನು, “ದೇವರು ಏನು ಕೊಡುತ್ತಾನೋ ಅದನ್ನು ಮಾತ್ರ ಒಬ್ಬನು ಪಡೆದುಕೊಳ್ಳಬಲ್ಲನು. 28 ‘ನಾನು ಕ್ರಿಸ್ತನಲ್ಲ. ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದಕ್ಕಾಗಿ ಮಾತ್ರ ಕಳುಹಿಸಲ್ಪಟ್ಟಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29 ಮದುಮಗಳು ಮದುಮಗನಿಗೆ ಮಾತ್ರ ಸೇರಿದವಳಾಗಿದ್ದಾಳೆ. ಮದುಮಗನಿಗೆ ಸಹಾಯಮಾಡುವ ಸ್ನೇಹಿತನು ಮದುಮಗನ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಮತ್ತು ಆತನ ಕರೆಗಾಗಿ ಆಲಿಸುತ್ತಿರುತ್ತಾನೆ. ಮದುಮಗನ ಸ್ವರವನ್ನು ಕೇಳುವಾಗ ಈ ಸ್ನೇಹಿತನು ಬಹು ಸಂತೋಷಪಡುವನು. ಅದೇ ಸಂತೋಷ ನನಗಿದೆ. ನನ್ನ ಪೂರ್ಣಾನಂದದ ಸಮಯವು ಇದೇ ಆಗಿದೆ. 30 ಆತನು (ಯೇಸು) ವೃದ್ಧಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕು.

ಪರಲೋಕದಿಂದ ಬರುವ ವ್ಯಕ್ತಿ

31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International