Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 3-4

ಸೊಲೊಮೋನನು ದೇವಾಲಯವನ್ನು ಕಟ್ಟಿದನು

ಜೆರುಸಲೇಮಿನಲ್ಲಿರುವ ಮೋರೀಯಾ ಬೆಟ್ಟದ ಮೇಲೆ ಸೊಲೊಮೋನನು ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದನು. ಅದೇ ಸ್ಥಳದಲ್ಲಿ ಸೊಲೊಮೋನನ ತಂದೆಯಾದ ದಾವೀದನಿಗೆ ಯೆಹೋವನು ದರ್ಶನ ಕೊಟ್ಟಿದ್ದನು. ಅದು ಯೆಬೂಸಿಯನಾದ ಒರ್ನಾನನ ಕಣವಾಗಿತ್ತು. ಆಲಯವನ್ನು ಕಟ್ಟಲು ದಾವೀದನು ಆ ಸ್ಥಳವನ್ನು ತಯಾರು ಮಾಡಿದ್ದನು. ಸೊಲೊಮೋನನು ತನ್ನ ರಾಜ್ಯಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ದೇವಾಲಯದ ಕೆಲಸವನ್ನು ಪ್ರಾರಂಭಿಸಿದನು.

ದೇವಾಲಯದ ಅಸ್ತಿವಾರದ ಉದ್ದಳತೆಯು ಹೀಗಿತ್ತು: ಉದ್ದ ಅರವತ್ತು ಮೊಳ, ಅಗಲ ಇಪ್ಪತ್ತು ಮೊಳ. ದೇವಾಲಯದ ಅಳತೆಗಾಗಿ ಸೊಲೊಮೋನನು ಹಳೆಯ ಮೊಳದ ಅಳತೆಯನ್ನು ಉಪಯೋಗಿಸಿದನು. ದೇವಾಲಯದ ಮುಂದುಗಡೆಯಿದ್ದ ಮಂಟಪವು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಎತ್ತರವಿತ್ತು. ಮಂಟಪದ ಒಳಮೈಯನ್ನು ಸೊಲೊಮೋನನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. ದೊಡ್ಡ ಕೋಣೆಯ ಗೋಡೆಗೆ ಸೊಲೊಮೋನನು ತುರಾಯಿ ಮರದ ಹಲಗೆಗಳಿಂದ ಹೊದಿಸಿ ಅದರ ಮೇಲೆ ಬಂಗಾರದ ತಗಡನ್ನು ಹೊದಿಸಿದನು. ಅದರಲ್ಲಿ ಖರ್ಜೂರ ಮರಗಳೂ ಸರಪಣಿಗಳೂ ಬಂಗಾರದಿಂದ ಮಾಡಲ್ಪಟ್ಟು ಜೋಡಿಸಲ್ಪಟ್ಟಿದ್ದವು. ದೇವಾಲಯವನ್ನು ಬೆಲೆಯುಳ್ಳ ರತ್ನಗಳಿಂದ ಅಲಂಕರಿಸಿದನು. ಸೊಲೊಮೋನನು ಪರ್ವಯಿಮ್ ದೇಶದ ಬಂಗಾರವನ್ನು ಉಪಯೋಗಿಸಿದನು. ದೇವಾಲಯದ ಗೋಡೆಯ ಒಳಭಾಗವನ್ನು ಸೊಲೊಮೋನನು ಬಂಗಾರದಿಂದ ಹೊದಿಸಿದನು ಮತ್ತು ಆಲಯದ ತೊಲೆ, ಹೊಸ್ತಿಲು, ಗೋಡೆ, ಕದ ಇವುಗಳನ್ನೂ ಬಂಗಾರದ ತಗಡಿನಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನು ಕೆತ್ತಿಸಿದನು.

ಸೊಲೊಮೋನನು ಮಹಾಪವಿತ್ರ ಸ್ಥಳವನ್ನು ತಯಾರಿಸಿದನು. ಅದು ಇಪ್ಪತ್ತು ಮೊಳ ಉದ್ದ ಮತ್ತು ಇಪ್ಪತ್ತು ಮೊಳ ಅಗಲವಿತ್ತು. ದೇವಾಲಯದ ಅಗಲದಷ್ಟೇ ಅದು ಅಗಲವಿತ್ತು. ಅದರ ಗೋಡೆಗಳನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. ಆ ಬಂಗಾರವು ಇಪ್ಪತ್ತಮೂರು ಟನ್ ತೂಕವಿತ್ತು. ಬಂಗಾರದ ಮೊಳೆಗಳ ತೂಕ ಅರ್ಧ ಕಿಲೋಗ್ರಾಂ. ಸೊಲೊಮೋನನು ಮೇಲುಪ್ಪರಿಗೆಯ ಕೋಣೆಗಳನ್ನೂ ಬಂಗಾರದ ತಗಡಿನಿಂದ ಹೊದಿಸಿದನು. 10 ಸೊಲೊಮೋನನು ಮಹಾಪವಿತ್ರ ಸ್ಥಾನದೊಳಗೆ ಇಡುವದಕ್ಕಾಗಿ ಎರಡು ಕೆರೂಬಿಗಳನ್ನು ಮಾಡಿಸಿ ಅವುಗಳನ್ನು ಬಂಗಾರದ ತಗಡಿನಿಂದ ಹೊದಿಸಿದನು. 11 ಕೆರೂಬಿಗಳ ಒಂದೊಂದು ರೆಕ್ಕೆಯು ಐದೈದು ಮೊಳ ಉದ್ದವಿದ್ದವು. ರೆಕ್ಕೆಗಳ ಒಟ್ಟು ಉದ್ದ ಇಪ್ಪತ್ತು ಮೊಳ. ಕೆರೂಬಿಯ ಒಂದು ರೆಕ್ಕೆಯು ಗೋಡೆಗೆ ತಾಗಿತ್ತು; ಅದರ ಇನ್ನೊಂದು ರೆಕ್ಕೆಯು ಮತ್ತೊಂದು ಕೆರೂಬಿಯ ರೆಕ್ಕೆಯನ್ನು ತಾಗಿತ್ತು. 12 ಅಂತೆಯೇ ಎರಡನೆಯ ಕೆರೂಬಿಯ ಇನ್ನೊಂದು ರೆಕ್ಕೆಯು ಮತ್ತೊಂದು ಗೋಡೆಗೆ ತಾಗಿತ್ತು. 13 ಹೀಗೆ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಸ್ಥಳವನ್ನು ಆವರಿಸಿಕೊಂಡಿದ್ದವು. ಅವು ಪವಿತ್ರಸ್ಥಳದ ಕಡೆಗೆ ಮುಖಮಾಡಿಕೊಂಡು ನಿಂತಿದ್ದವು.

14 ಸೊಲೊಮೋನನು ದೇವಾಲಯಕ್ಕೆ ನೀಲ, ಧೂಮ್ರ ಮತ್ತು ಕೆಂಪು ಬಟ್ಟೆ ಮತ್ತು ಬೆಲೆಬಾಳುವ ನಾರುಬಟ್ಟೆಗಳಿಂದ ಪರದೆಗಳನ್ನು ತಯಾರಿಸಿ ಅದರ ಮೇಲೆ ಕೆರೂಬಿಯರ ಚಿತ್ರವನ್ನು ಕಸೂತಿ ಮಾಡಿಸಿದನು.

15 ಸೊಲೊಮೋನನು ದೇವಾಲಯದ ಎದುರಿನಲ್ಲಿ ಮೂವತ್ತೈದು ಮೊಳ ಎತ್ತರದ ಎರಡು ಕಂಬಗಳನ್ನು ನಿಲ್ಲಿಸಿದನು. ಅದರ ಮೇಲಿನ ಭಾಗ ಐದು ಮೊಳ ಎತ್ತರವಿತ್ತು. 16 ಅವನು ಕೊರಳಿನ ಸರಗಳನ್ನು ಮಾಡಿಸಿ ಅವುಗಳನ್ನು ಕಂಬಗಳ ಮೇಲ್ಭಾಗದಲ್ಲಿ ಸಿಕ್ಕಿಸಿದನು. ಅವನು ನೂರು ದಾಳಿಂಬೆ ಹಣ್ಣುಗಳನ್ನು ಮಾಡಿಸಿ ತೂಗುಹಾಕಿದನು. 17 ಈ ಕಂಬಗಳನ್ನು ದೇವಾಲಯದ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯ ಕಂಬಕ್ಕೆ ಯಾಕೀನ್ ಎಂತಲೂ ಎಡಗಡೆಯ ಕಂಬಕ್ಕೆ ಬೋವಜ್ ಎಂತಲೂ ಹೆಸರಿಟ್ಟನು.

ದೇವಾಲಯದ ವಸ್ತುಗಳು

ಸೊಲೊಮೋನನು ತಾಮ್ರದ ಯಜ್ಞವೇದಿಕೆಯನ್ನು ಮಾಡಿಸಿದನು. ಅದು ಇಪ್ಪತ್ತು ಮೊಳ ಉದ್ದ; ಇಪ್ಪತ್ತು ಮೊಳ ಅಗಲ; ಮತ್ತು ಹತ್ತು ಮೊಳ ಎತ್ತರವಿತ್ತು. ಅವನು ಎರಕಹೊಯ್ದ ದೊಡ್ಡ ಗಾತ್ರದ ನೀರಿನ ಪಾತ್ರೆಯನ್ನು ಮಾಡಿಸಿದನು. ಇದು ದುಂಡಾಕಾರವಾಗಿದ್ದು ಅದರ ಬಾಯಿಯ ಅಂಚಿನಿಂದ ಅಂಚಿಗೆ ಹತ್ತು ಮೊಳ ಅಗಲವಿತ್ತು; ಅದರ ಸುತ್ತಳತೆ ಮೂವತ್ತು ಮೊಳ; ಎತ್ತರ ಐದು ಮೊಳ. ಆ ನೀರಿನ ಪಾತ್ರೆಯನ್ನು ಎರಕ ಹೊಯ್ಯುವಾಗ ಅದರ ಬಾಯಿಯ ಅಂಚಿನ ಕೆಳಗೆ ಸುತ್ತಲೂ ಹೋರಿಯ ಚಿತ್ರವನ್ನು ಎರಡು ಸಾಲಾಗಿ ಹತ್ತು ಮೊಳ ಎರಕ ಹೊಯ್ಸಿದನು. ಆ ಬೃಹದಾಕಾರದ ಪಾತ್ರೆಯನ್ನು ಹನ್ನೆರಡು ದೊಡ್ಡ ಎರಕದ ಹೋರಿಗಳ ಮೇಲೆ ಇಡಲಾಗಿತ್ತು. ಇವುಗಳಲ್ಲಿ ಮೂರು ಹೋರಿಗಳು ಪೂರ್ವದ ಕಡೆಗೂ ಮೂರು ಹೋರಿಗಳು ಪಶ್ಚಿಮದ ಕಡೆಗೂ ಮೂರು ಹೋರಿಗಳು ಉತ್ತರದ ಕಡೆಗೂ ಮೂರು ಹೋರಿಗಳು ದಕ್ಷಿಣದ ಕಡೆಗೂ ಮುಖಮಾಡಿ ನಿಂತಿದ್ದವು. ಎಲ್ಲಾ ಹೋರಿಗಳು ಒಂದಕ್ಕೊಂದಕ್ಕೆ ಮತ್ತು ಮಧ್ಯಭಾಗಕ್ಕೆ ಹಿಮ್ಮುಖವಾಗಿ ನಿಂತುಕೊಂಡಿದ್ದವು. ಈ ತಾಮ್ರದ ಎರಕದ ಪಾತ್ರೆಯು ಮೂರು ಇಂಚು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದರಲ್ಲಿ ಅರವತ್ತಾರು ಸಾವಿರ ಲೀಟರ್ ನೀರನ್ನು ತುಂಬ ಬಹುದಾಗಿತ್ತು.

ಸೊಲೊಮೋನನು ಹತ್ತು ಗಂಗಾಳಗಳನ್ನು ಮಾಡಿಸಿದನು. ಐದು ಗಂಗಾಳಗಳನ್ನು ತಾಮ್ರದ ನೀರಿನ ತೊಟ್ಟಿಯ ಬಲಗಡೆಯಲ್ಲಿಡಿಸಿದನು. ಉಳಿದ ಐದು ಗಂಗಾಳಗಳನ್ನು ಪಾತ್ರೆಯ ಎಡಗಡೆಯಲ್ಲಿಡಿಸಿದನು. ಈ ಗಂಗಾಳಗಳ ನೀರನ್ನು ಯಜ್ಞ ಮಾಡಲಿಕ್ಕಿರುವ ಪದಾರ್ಥಗಳನ್ನು ತೊಳೆಯುವದಕ್ಕಾಗಿ ಉಪಯೋಗಿಸಿದರು. ಯಾಜಕರು ಯಜ್ಞಗಳನ್ನು ಅರ್ಪಿಸುವ ಮೊದಲು ತಮ್ಮನ್ನು ಶುದ್ಧ ಮಾಡಿಕೊಳ್ಳುವದಕ್ಕಾಗಿ ದೊಡ್ಡ ತಾಮ್ರದ ಪಾತ್ರೆಯ ನೀರನ್ನು ಉಪಯೋಗಿಸುತ್ತಿದ್ದರು.

ಸೊಲೊಮೋನನು ಹತ್ತು ದೀಪಸ್ತಂಭಗಳನ್ನು ಬಂಗಾರದಿಂದ ಮಾಡಿಸಿದನು. ಮೊದಲೇ ತೋರಿಸಿದ ಮಾದರಿಯ ಮೇರೆಗೆ ದೀಪಸ್ತಂಭಗಳನ್ನು ಮಾಡಿಸಿದನು. ಇವುಗಳಲ್ಲಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು. ಅವನು ಹತ್ತು ಮೇಜುಗಳನ್ನು ಮಾಡಿಸಿ ಅವುಗಳಲ್ಲಿ ಐದನ್ನು ದೇವಾಲಯದ ಬಲಗಡೆಯಲ್ಲಿಯೂ ಉಳಿದ ಐದನ್ನು ಎಡಗಡೆಯಲ್ಲಿಯೂ ಇರಿಸಿದನು. ಅನಂತರ ಸೊಲೊಮೋನನು ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು. ಇದಲ್ಲದೆ ಸೊಲೊಮೋನನು ಯಾಜಕರ ಅಂಗಳವನ್ನೂ ಮಹಾಅಂಗಳವನ್ನೂ ಮಹಾಅಂಗಳಕ್ಕೆ ಬಾಗಿಲುಗಳನ್ನೂ ಸಿದ್ಧಪಡಿಸಿದನು. ಅವುಗಳ ಕದಗಳನ್ನು ತಾಮ್ರದ ತಗಡಿನಿಂದ ಹೊದಿಸಲಾಗಿದ್ದವು. 10 ಅವನು ಆ ದೊಡ್ಡ ನೀರಿನ ಪಾತ್ರೆಯನ್ನು ದೇವಾಲಯದ ಬಲ ಬದಿಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.

11 ಹೂರಾಮನು ಪಾತ್ರೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ[a] ಮತ್ತು ದೇವಾಲಯದ ಉಪಕರಣಗಳನ್ನೂ ಸೊಲೊಮೋನನು ಹೇಳಿದಂತೆಯೇ ಮಾಡಿ ಮುಗಿಸಿದನು.

12 ಹೂರಾಮನು ದೇವಾಲಯದ ಎದುರಿನಲ್ಲಿಟ್ಟಿದ್ದ ಎತ್ತರದ ಕಂಬಗಳನ್ನೂ

ಅವುಗಳ ತುತ್ತತುದಿಯಲ್ಲಿ ಎರಡು ಬೋಗುಣಿಗಳನ್ನೂ ಮಾಡಿಸಿದನು. ಆ ಬೋಗುಣಿಗಳಿಗೆ ಅಲಂಕೃತವಾದ ಜಾಲರಿಗಳನ್ನು ಹೊದಿಸಿದನು.

13 ಆ ಜಾಲರಿಯಲ್ಲಿ ಸಿಕ್ಕಿಸಲು ನಾನೂರು ದಾಳಿಂಬೆಗಳನ್ನು ಮಾಡಿದನು. ಪ್ರತಿಯೊಂದು ಜಾಲರಿಯಲ್ಲಿ ಎರಡು ಸಾಲಾಗಿ ದಾಳಿಂಬೆಗಳನ್ನು ಸಿಕ್ಕಿಸಿಟ್ಟನು. ಈ ಜಾಲರಿಯು ಕಂಬದ ಮೇಲ್ಭಾಗವನ್ನು ಮುಚ್ಚಿತ್ತು.

14 ಹೂರಾಮನು ಪೀಠಗಳನ್ನೂ ಅವುಗಳ ಮೇಲೆ ಬೋಗುಣಿಗಳನ್ನೂ ಮಾಡಿದನು.

15 ಎರಕಹೊಯ್ದ ತಾಮ್ರದ ದೊಡ್ಡ ಪಾತ್ರೆಯನ್ನೂ ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳನ್ನೂ ತಯಾರಿಸಿದನು.

16 ಹಂಡೆ, ಸಲಿಕೆ, ಮುಳ್ಳು ಇವುಗಳನ್ನೆಲ್ಲಾ ದೇವಾಲಯಕ್ಕಾಗಿ ಸೊಲೊಮೋನನು ಹೇಳಿದಂತೆಯೇ ಮಾಡಿದನು.

ಇವೆಲ್ಲವನ್ನು ಹೊಳೆಯುವ ತಾಮ್ರದಿಂದ ಮಾಡಿ ಮುಗಿಸಿದನು. 17 ರಾಜನಾದ ಸೊಲೊಮೋನನು ಈ ಉಪಕರಣಗಳನ್ನೆಲ್ಲಾ ಮೊದಲು ಜೋರ್ಡನ್ ತಗ್ಗಿನ ಸುಕ್ಕೋತ್ ಮತ್ತು ಚೆರೇದ ಸ್ಥಳಗಳಲ್ಲಿ ದೊರಕುವ ಆವೆಮಣ್ಣಿನಿಂದ ಆಕಾರಗಳನ್ನು ಸಿದ್ಧಪಡಿಸಿ ಅದಕ್ಕೆ ಎರಕಹೊಯಿಸಿದನು. 18 ಸೊಲೊಮೋನನು ತಾಮ್ರದಿಂದ ಮಾಡಿಸಿದ ಉಪಕರಣಗಳ ತೂಕಕ್ಕೆ ಲೆಕ್ಕವೇ ಇರಲಿಲ್ಲ.

19 ಸೊಲೊಮೋನನು ದೇವಾಲಯದೊಳಗೆ ಉಪಯೋಗಿಸುವ ಉಪಕರಣಗಳನ್ನು ಮಾಡಿಸಿದನು. ಅವನು ಬಂಗಾರದ ಯಜ್ಞವೇದಿಕೆಯನ್ನು ಮಾಡಿಸಿದನು; ನೈವೇದ್ಯದ ರೊಟ್ಟಿಗಳನ್ನು ಇಡಲು ಮೇಜುಗಳನ್ನು ಮಾಡಿಸಿದನು; 20 ಅಪ್ಪಟ ಬಂಗಾರದಿಂದ ದೀಪಸ್ತಂಭಗಳನ್ನೂ ದೀಪಗಳನ್ನೂ ಮಾಡಿಸಿದನು. ಈ ದೀಪಸ್ತಂಭಗಳು ಮಹಾಪವಿತ್ರ ಸ್ಥಳದ ಎದುರಿನಲ್ಲಿ ನೇಮಕವಾದ ರೀತಿಯಲ್ಲಿ ಉರಿಯಬೇಕು. 21 ಸೊಲೊಮೋನನು ಹಣತೆ, ಹೂವು, ಅಗ್ಗಿಷ್ಟಿಕೆ ಇವುಗಳನ್ನು ಅಪ್ಪಟ ಬಂಗಾರದಿಂದ ಮಾಡಿಸಿದನು; 22 ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಕೆ, ದೇವಾಲಯದ ಮಹಾ ಪವಿತ್ರಸ್ಥಳದೊಳಗಣ ಬಾಗಿಲಿನ ಕದಗಳು; ಪವಿತ್ರಸ್ಥಳದ ಕದಗಳು ಇವುಗಳನ್ನೆಲ್ಲಾ ಅಪ್ಪಟ ಬಂಗಾರದಿಂದ ಮಾಡಿಸಿದನು.

1 ಯೋಹಾನ 3

ನಾವು ದೇವರ ಮಕ್ಕಳಾಗಿದ್ದೇವೆ

ತಂದೆಯು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ದೇವರ ಮಕ್ಕಳು ಎಂಬ ಹೆಸರನ್ನು ನಮಗೆ ಕೊಡುವಷ್ಟರ ಮಟ್ಟಿಗೆ ದೇವರು ನಮ್ಮನ್ನು ಪ್ರೀತಿಸಿದನು. ನಾವು ನಿಜವಾಗಿಯೂ ದೇವರ ಮಕ್ಕಳಾಗಿದ್ದೇವೆ. ಆದರೆ ಲೋಕದಲ್ಲಿರುವ ಜನರಾದರೋ ನಾವು ದೇವರ ಮಕ್ಕಳೆಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವರು ದೇವರನ್ನು ತಿಳಿದಿಲ್ಲ. ಪ್ರಿಯ ಸ್ನೇಹಿತರೇ, ಈಗ ನಾವು ದೇವರ ಮಕ್ಕಳಾಗಿದ್ದೇವೆ. ನಾವು ಮುಂದೆ ಏನಾಗುವೆವೆಂಬುದನ್ನು ನಮಗಿನ್ನೂ ತೋರ್ಪಡಿಸಿಲ್ಲ. ಆದರೆ ಕ್ರಿಸ್ತನು ಮರಳಿ ಬಂದಾಗ ಅದನ್ನು ತಿಳಿದುಕೊಳ್ಳುತ್ತೇವೆ. ನಾವು ಆತನಂತಾಗುವೆವು. ನಾವು ಆತನ ನಿಜಸ್ವರೂಪವನ್ನೇ ನೋಡುವೆವು. ಕ್ರಿಸ್ತನಲ್ಲಿ ಈ ನಿರೀಕ್ಷೆಯನ್ನು ಹೊಂದಿರುವ ಪ್ರತಿಯೊಬ್ಬನೂ ಕ್ರಿಸ್ತನು ಶುದ್ಧನಾಗಿರುವಂತೆ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.

ಪಾಪ ಮಾಡುವವನು ದೇವರ ಕಟ್ಟಳೆಗಳನ್ನು ಉಲ್ಲಂಘಿಸುವವನಾಗಿದ್ದಾನೆ. ಹೌದು, ಪಾಪಮಾಡುವುದಕ್ಕೂ ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ಜೀವಿಸುವುದಕ್ಕೂ ಯಾವ ವ್ಯತ್ಯಾಸವಿಲ್ಲ. ಕ್ರಿಸ್ತನು ಜನರ ಪಾಪಗಳನ್ನು ಹೋಗಲಾಡಿಸಲು ಬಂದನೆಂಬುದು ನಿಮಗೆ ತಿಳಿದಿದೆ. ಆತನಲ್ಲಿ ಪಾಪವೆಂಬುದಿಲ್ಲ. ಆದ್ದರಿಂದ ಕ್ರಿಸ್ತನಲ್ಲಿ ನೆಲಸಿರುವ ವ್ಯಕ್ತಿಯು ಪಾಪದಲ್ಲೇ ಮುಂದುವರಿಯುವುದಿಲ್ಲ. ಪಾಪವನ್ನು ಮಾಡುತ್ತಲೇ ಇರುವವನು ಆತನನ್ನು ಎಂದೂ ಅರ್ಥಮಾಡಿಕೊಂಡವನಲ್ಲ ಮತ್ತು ಎಂದೂ ತಿಳಿದವನಲ್ಲ.

ಪ್ರಿಯ ಮಕ್ಕಳೇ, ನಿಮ್ಮನ್ನು ಯಾರೂ ತಪ್ಪುಮಾರ್ಗಕ್ಕೆ ಎಳೆಯದಂತೆ ನೋಡಿಕೊಳ್ಳಿರಿ. ಕ್ರಿಸ್ತನು ನೀತಿವಂತನಾಗಿದ್ದಾನೆ. ಆತನಂತೆ ನೀತಿವಂತನಾಗಿರಲು ಬಯಸುವವನು ಒಳ್ಳೆಯದನ್ನು ಮಾಡಬೇಕು. ಸೈತಾನನು ಆರಂಭದಿಂದಲೂ ಪಾಪಗಳನ್ನು ಮಾಡುತ್ತಿದ್ದಾನೆ. ಪಾಪಗಳನ್ನು ಮಾಡುತ್ತಲೇ ಇರುವವನು ಸೈತಾನನಿಗೆ ಸೇರಿದವನಾಗಿದ್ದಾನೆ. ದೇವರ ಮಗನಾದ ಕ್ರಿಸ್ತನು ಸೈತಾನನ ಕಾರ್ಯವನ್ನು ನಾಶಪಡಿಸುವುದಕ್ಕಾಗಿಯೇ ಬಂದನು.

ದೇವರಿಂದ ಹೊಸದಾಗಿ ಹುಟ್ಟಿದವನು ಪಾಪಗಳಲ್ಲಿ ನೆಲೆಗೊಂಡಿರುವುದಿಲ್ಲ. ಏಕೆಂದರೆ ದೇವರು ದಯಪಾಲಿಸಿದ ಹೊಸ ಜೀವವು ಅವನಲ್ಲಿ ನೆಲೆಸಿರುತ್ತದೆ. ಅವನು ದೇವರಿಂದ ಹೊಸದಾಗಿ ಹುಟ್ಟಿದ ಕಾರಣ ಪಾಪದಲ್ಲೇ ಮುಂದುವರಿಯಲು ಅವನಿಗೆ ಸಾಧ್ಯವಿಲ್ಲ. 10 ಆದ್ದರಿಂದ ದೇವರ ಮಕ್ಕಳು ಯಾರೆಂಬುದನ್ನೂ ಸೈತಾನನ ಮಕ್ಕಳು ಯಾರೆಂಬುದನ್ನೂ ನಾವು ತಿಳಿದುಕೊಳ್ಳಬಹುದು. ಯೋಗ್ಯವಾದುದನ್ನು ಮಾಡದಿರುವ ಜನರು ದೇವರ ಮಕ್ಕಳಲ್ಲ. ತನ್ನ ಸಹೋದರನನ್ನು ಪ್ರೀತಿಸದಿರುವವನು ದೇವರ ಮಗನಲ್ಲ.

ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು

11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ. 12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.

13 ಸಹೋದರ ಸಹೋದರಿಯರೇ, ಈ ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ. 14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.

16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು. 17 ಈ ಲೋಕದ ಐಶ್ವರ್ಯವನ್ನು ಹೊಂದಿರುವ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿದರೂ ಸಹಾಯ ಮಾಡದೆ ಹೋದರೆ, ಅವನಲ್ಲಿ ದೇವರ ಪ್ರೀತಿಯು ನೆಲೆಗೊಂಡಿಲ್ಲ. ಅವನೇಕೆ ಸಹಾಯ ಮಾಡಲಿಲ್ಲ? ಏಕೆಂದರೆ ಅವನ ಹೃದಯದಲ್ಲಿ ದೇವರ ಮೇಲೆ ಪ್ರೀತಿಯೇ ಇಲ್ಲ. 18 ನನ್ನ ಮಕ್ಕಳೇ, ನಮ್ಮ ಪ್ರೀತಿಯು ಕೇವಲ ಶಬ್ಧಗಳಲ್ಲಿ ಮತ್ತು ಮಾತಿನಲ್ಲಿ ಇರಬಾರದು. ನಮ್ಮ ಪ್ರೀತಿಯು ನಿಜವಾದ ಪ್ರೀತಿಯಾಗಿರಬೇಕು. ನಾವು ಮಾಡುವ ಕಾರ್ಯಗಳಲ್ಲಿಯೇ ನಮ್ಮ ಪ್ರೀತಿಯನ್ನು ತೋರ್ಪಡಿಸಬೇಕು.

19-20 ನಾವು ಸತ್ಯಮಾರ್ಗಕ್ಕೆ ಸೇರಿದವರೆಂಬುದನ್ನು ಈ ಮೂಲಕವಾಗಿಯೇ ತಿಳಿದುಕೊಳ್ಳುತ್ತೇವೆ. ನಮ್ಮ ಮನಸ್ಸಾಕ್ಷಿಯು ನಮ್ಮನ್ನು ತಪ್ಪಿತಸ್ಥರೆಂದು ಹೇಳಿದರೂ ನಾವು ದೇವರ ಎದುರಿನಲ್ಲಿ ಸಮಾಧಾನದಿಂದಿರಲು ಸಾಧ್ಯ. ಏಕೆಂದರೆ ನಮ್ಮ ಮನಸ್ಸಾಕ್ಷಿಗಿಂತ ದೇವರೇ ದೊಡ್ಡವನು. ಆತನಿಗೆ ಎಲ್ಲವೂ ತಿಳಿದಿದೆ.

21 ನನ್ನ ಪ್ರಿಯ ಸ್ನೇಹಿತರೇ, ನಾವು ತಪ್ಪು ಮಾಡುತ್ತಿಲ್ಲ ಎಂದು ನಮಗೆ ತಿಳಿದಿದ್ದರೆ, ನಾವು ದೇವರ ಬಳಿಗೆ ಧೈರ್ಯವಾಗಿ ಬರಲು ಸಾಧ್ಯ. 22 ಮತ್ತು ನಾವು ಕೇಳಿಕೊಳ್ಳುವವುಗಳನ್ನು ದೇವರು ನಮಗೆ ನೀಡುತ್ತಾನೆ. ನಾವು ಆತನಿಗೆ ವಿಧೇಯರಾಗಿರುವುದರಿಂದ ಮತ್ತು ಆತನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವುದರಿಂದ ಅವುಗಳನ್ನು ಆತನಿಂದ ಪಡೆದುಕೊಳ್ಳುತ್ತೇವೆ. 23 ದೇವರ ಆಜ್ಞೆ ಏನೆಂದರೆ ಆತನ ಮಗನಾದ ಯೇಸು ಕ್ರಿಸ್ತನಲ್ಲಿ ನಾವು ನಂಬಿಕೆಯಿಟ್ಟು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ. 24 ದೇವರ ಆಜ್ಞೆಗಳಿಗೆ ವಿಧೇಯನಾಗಿರುವವನು ದೇವರಲ್ಲಿ ನೆಲೆಸಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಸಿರುತ್ತಾನೆ. ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ಹೇಗೆ ತಿಳಿದದೆ? ದೇವರು ನಮಗೆ ದಯಪಾಲಿಸಿರುವ ಪವಿತ್ರಾತ್ಮನಿಂದಲೇ ನಮಗೆ ತಿಳಿದದೆ.

ನಹೂಮ 2

ನಿನೆವೆಯು ನಾಶವಾಗುವದು

ವೈರಿಯು ನಿನ್ನ ಮೇಲೆ ಬರುವನು.
    ಆದ್ದರಿಂದ ನಿನ್ನ ಪಟ್ಟಣದ ಬುರುಜುಗಳನ್ನು ಕಾಯಿ.
    ಮಾರ್ಗದ ಮೇಲೆ ಕಣ್ಣಿಡು.
ಯುದ್ಧಕ್ಕೆ ತಯಾರಾಗು.
    ರಣರಂಗಕ್ಕೆ ಹೋಗಲು ಸಿದ್ಧನಾಗು.
ಹೌದು, ಯೆಹೋವನು ಯಾಕೋಬನ ವೈಭವವನ್ನು
    ಇಸ್ರೇಲಿನ ವೈಭವವಾಗಿ ಸ್ಥಾಪಿಸುವನು.
ವೈರಿಯು ಅವರನ್ನು ನಾಶಮಾಡಿ
    ಅವರ ದ್ರಾಕ್ಷಿಬಳ್ಳಿಯನ್ನು ಹಾಳುಮಾಡಿದ್ದನು.

ಆ ಸೈನಿಕರ ಗುರಾಣಿಗಳು ಕೆಂಪಗಿವೆ.
    ಅವರ ಸಮವಸ್ತ್ರಗಳು ಕೆಂಪುಬಣ್ಣದಿಂದ ಹೊಳೆಯುತ್ತಿವೆ.
ಅವರ ರಥಗಳು ಯುದ್ಧಕ್ಕಾಗಿ ಸಾಲುಗಟ್ಟಿ ನಿಂತಿವೆ
    ಮತ್ತು ಬೆಂಕಿಯ ಜ್ವಾಲೆಯಂತೆ ಹೊಳೆಯುತ್ತಿವೆ.
    ಅವರ ಭರ್ಜಿಗಳು ಎತ್ತಲ್ಪಟ್ಟಿವೆ.
ರಸ್ತೆಯ ಮೇಲೆ ರಥಗಳು ರಭಸದಿಂದ ಓಡುತ್ತಿವೆ.
    ನಗರದ ಚೌಕಕ್ಕೆ ಹಿಂದೆ ಮುಂದೆ ಓಡುತ್ತಿವೆ.
ಅವು ಉರಿಯುವ ಪಂಜಿನೋಪಾದಿಯಲ್ಲಿವೆ,
    ಒಂದೆಡೆಯಿಂದ ಇನ್ನೊಂದೆಡೆಗೆ ಹಾರುವ ಮಿಂಚಿನಂತಿವೆ.

ವೈರಿಗಳು ತಮ್ಮ ಶೂರ ಯೋಧರನ್ನು ಕರೆಯುತ್ತಿದ್ದಾರೆ.
    ಅವರು ಮುನ್ನುಗ್ಗುವಾಗ ಎಡವಿಬೀಳುವರು,
ಗೋಡೆಗಳ ಕಡೆಗೆ ನುಗ್ಗಿ
    ತಮ್ಮ ಗುರಾಣಿಗಳನ್ನು ಇಡುವರು.
ಆದರೆ ಹೊಳೆಯ ಕದಗಳು ತೆರೆಯಲ್ಪಟ್ಟಿವೆ.
    ಅದರ ಮೂಲಕ ವೈರಿಗಳು ಮುನ್ನುಗ್ಗುತ್ತಿದ್ದಾರೆ.
    ಅರಸನ ಮನೆಯನ್ನು ನಾಶಮಾಡುತ್ತಿದ್ದಾರೆ.
ವೈರಿಗಳು ರಾಣಿಯನ್ನು ಎತ್ತಿಕೊಂಡು ಹೋಗುತ್ತಾರೆ.
    ಆಕೆಯ ಸೇವಕಿಯರು ಪಾರಿವಾಳಗಳಂತೆ ಗೋಳಾಡುತ್ತಿದ್ದಾರೆ.
    ತಮ್ಮ ದುಃಖವನ್ನು ಪ್ರದರ್ಶಿಸಲು ಎದೆಯನ್ನು ಬಡಕೊಳ್ಳುತ್ತಿದ್ದಾರೆ.

ನಿನೆವೆಯು ನೀರು ಬತ್ತುತ್ತಿರುವ ಕೊಳದಂತಿದೆ.
“ನಿಲ್ಲಿ, ನಿಲ್ಲಿ, ಓಡಿಹೋಗಬೇಡಿ” ಎಂದು ಜನರು ಬೊಬ್ಬಿಡುತ್ತಾರೆ.
    ಆದರೆ ಅದರಿಂದ ಪ್ರಯೋಜನವಿಲ್ಲ.

ನಿನೆವೆಯನ್ನು ನಾಶಮಾಡುವ ಸೈನಿಕರೇ,
    ಬೆಳ್ಳಿಬಂಗಾರಗಳನ್ನು ತೆಗೆದುಕೊಳ್ಳಿರಿ.
ತೆಗೆದುಕೊಳ್ಳಲು ಎಷ್ಟೋ ವಸ್ತುಗಳಿವೆ.
    ಎಷ್ಟೋ ನಿಕ್ಷೇಪಗಳಿವೆ.
10 ಈಗ ನಿನೆವೆಯು ಖಾಲಿಯಾಯಿತು.
    ಎಲ್ಲಾ ದೋಚಲ್ಪಟ್ಟಿತು.
    ನಗರವು ನಾಶವಾಯಿತು.
ಜನರು ತಮ್ಮ ಧೈರ್ಯ ಕಳೆದುಕೊಂಡಿದ್ದಾರೆ.
    ಭಯದಿಂದ ಅವರ ಹೃದಯವು ಕರಗುತ್ತಿದೆ.
ಮೊಣಕಾಲುಗಳು ನಡುಗುತ್ತಿದೆ.
    ಅವರ ದೇಹವು ಅಲ್ಲಾಡುತ್ತಿದೆ.
    ಭಯದಿಂದ ಅವರ ಮುಖವು ರಕ್ತಹೀನವಾಗಿದೆ.

11 ಸಿಂಹದ ಗುಹೆಯಂತಿದ್ದ ನಿನೆವೆಯು ಎಲ್ಲಿ?
ಗಂಡು ಹೆಣ್ಣು ಸಿಂಹಗಳು ಅದರೊಳಗೆ ವಾಸಿಸುತ್ತಿದ್ದವು.
    ಅದರ ಮರಿಗಳಿಗೆ ಭಯವಿಲ್ಲ.
12 ನಿನೆವೆಯು (ಅರಸನಾದ ಸಿಂಹವು) ಜನರನ್ನು ಕೊಂದಿತು.
    ತನ್ನ ಮರಿಗಳಿಗೂ ಸಿಂಹಿಣಿಗೂ ಆಹಾರವನ್ನು ಕೊಟ್ಟಿತು.
ತನ್ನ ಗುಹೆಯನ್ನು (ನಿನೆವೆ ರಾಜನು) ಮನುಷ್ಯರ ಶರೀರಗಳಿಂದಲೂ
    ತಾನು ಕೊಂದ ಹೆಂಗಸರಿಂದಲೂ ತುಂಬಿಸಿತು.

13 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
    “ನಿನೆವೆಯೇ, ನಾನು ನಿನಗೆ ವಿರೋಧವಾಗಿದ್ದೇನೆ.
ನಿನ್ನ ರಥಗಳನ್ನು ಸುಟ್ಟುಹಾಕುತ್ತೇನೆ.
    ನಿನ್ನ ಎಳೆ ಸಿಂಹಗಳನ್ನು ರಣರಂಗದಲ್ಲಿ ಸಾಯಿಸುತ್ತೇನೆ.
    ಈ ಭೂಮಿಯ ಮೇಲೆ ಇನ್ನು ಯಾರನ್ನೂ ಭೇಟಿ ಮಾಡದಿರುವೆ.
ನಿನ್ನ ಸಂದೇಶವಾಹಕರಿಂದ ಕೆಟ್ಟ ಸಮಾಚಾರವನ್ನು
    ಜನರು ಇನ್ನು ಎಂದಿಗೂ ಕೇಳರು.”

ಲೂಕ 18

ತನ್ನ ಜನರಿಗೆ ದೇವರ ಉತ್ತರ

18 ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು: “ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶನಿದ್ದನು. ಅವನಿಗೆ ದೇವರಲ್ಲಿ ಭಯಭಕ್ತಿಯಿರಲಿಲ್ಲ. ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಅವನು ಗಮನ ಕೊಡಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಆಕೆಯು ಅನೇಕ ಸಲ ನ್ಯಾಯಾಧೀಶನ ಬಳಿಗೆ ಬಂದು, ‘ಇಲ್ಲಿ ನನಗೊಬ್ಬನು ತೊಂದರೆ ಕೊಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯವನ್ನು ದೊರಕಿಸಿಕೊಡಿ!’ ಎಂದು ಬೇಡಿಕೊಂಡಳು. ಆದರೆ ನ್ಯಾಯಾಧೀಶನು ಆ ಸ್ತ್ರೀಗೆ ಸಹಾಯಮಾಡಲು ಬಯಸಲಿಲ್ಲ. ಬಹಳ ಸಮಯದ ನಂತರ ಆ ನ್ಯಾಯಾಧೀಶನು ತನ್ನೊಳಗೆ, ‘ನನಗಂತೂ ದೇವರಲ್ಲಿ ಭಯಭಕ್ತಿಯಿಲ್ಲ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆಯೂ ಗಮನವಿಲ್ಲ. ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.”

ಪ್ರಭುವು ಈ ಸಾಮ್ಯವನ್ನು ಹೇಳಿದ ಮೇಲೆ ತನ್ನ ಶಿಷ್ಯರಿಗೆ, “ಕೇಳಿರಿ! ಆ ಅನ್ಯಾಯಗಾರನಾದ ನ್ಯಾಯಾಧೀಶನು ಹೇಳಿದ್ದರಲ್ಲಿ ಅರ್ಥವಿದೆ. ದೇವಜನರು ದೇವರಿಗೆ ಹಗಲಿರುಳು ಮೊರೆಯಿಡಬೇಕು. ದೇವರು ತನ್ನ ಜನರಿಗೆ ಸರಿಯಾದದ್ದನ್ನೇ ಯಾವಾಗಲೂ ಕೊಡುತ್ತಾನೆ. ತನ್ನ ಜನರಿಗೆ ಉತ್ತರ ಕೊಡುವುದರಲ್ಲಿ ದೇವರು ತಡಮಾಡುವುದಿಲ್ಲ! ದೇವರು ತನ್ನ ಜನರಿಗೆ ಬೇಗನೆ ಸಹಾಯ ಮಾಡುತ್ತಾನೆ ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಮನುಷ್ಯಕುಮಾರನು ಮತ್ತೆ ಬಂದಾಗ, ಜಗತ್ತಿನಲ್ಲಿ ನಂಬಿಕೆಯನ್ನು ಕಾಣುವನೋ?” ಎಂದನು.

ನೀತಿನಿರ್ಣಯ

ಅಲ್ಲಿ ಕೆಲವರು ತಾವೇ ಬಹಳ ಒಳ್ಳೆಯವರೆಂದು ಭಾವಿಸಿಕೊಂಡಿದ್ದರು. ಈ ಜನರು ತಾವು ಬೇರೆಯವರಿಗಿಂತ ಉತ್ತಮರೋ ಎಂಬಂತೆ ವರ್ತಿಸುತ್ತಿದ್ದರು. ಯೇಸು ಅವರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು. 10 “ಒಮ್ಮೆ ಒಬ್ಬ ಫರಿಸಾಯನು ಮತ್ತು ಒಬ್ಬ ಸುಂಕವಸೂಲಿಗಾರನು ಪ್ರಾರ್ಥಿಸಲು ದೇವಾಲಯಕ್ಕೆ ಹೋದರು. 11 ಫರಿಸಾಯನು ಸುಂಕವಸೂಲಿಗಾರನನ್ನು ಕಂಡು ದೂರದಲ್ಲಿ ನಿಂತುಕೊಂಡು ಹೀಗೆ ಪ್ರಾರ್ಥಿಸಿದನು: ‘ದೇವರೇ, ನಾನು ಬೇರೆಯವರಂತೆ ಸುಲಿಗೆಗಾರನಲ್ಲ, ಮೋಸಗಾರನಲ್ಲ, ಅಥವಾ ವ್ಯಭಿಚಾರಿಯಲ್ಲ. ನಾನು ಈ ಸುಂಕವಸೂಲಿಗಾರನಂತೆಯೂ ಅಲ್ಲ. ಇದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. 12 ನಾನಾದರೋ ವಾರದಲ್ಲಿ ಎರಡಾವರ್ತಿ ಉಪವಾಸ ಮಾಡುತ್ತೇನೆ. ಸಂಪಾದಿಸುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ನಿನಗೆ ಕೊಡುತ್ತೇನೆ!’ ಅಂದನು.

13 “ಸುಂಕವಸೂಲಿಗಾರನು ಅಲ್ಲಿ ಒಬ್ಬಂಟಿಗನಾಗಿಯೇ ನಿಂತುಕೊಂಡಿದ್ದನು. ಅವನು ಆಕಾಶದ ಕಡೆಗೆ ಕಣ್ಣೆತ್ತಿ ನೋಡದೇ, ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು, ‘ದೇವರೇ, ನನಗೆ ಕರುಣೆತೋರು; ನಾನು ಪಾಪಿಯಾಗಿದ್ದೇನೆ’ ಎಂದು ಪ್ರಾರ್ಥಿಸಿದನು. 14 ಅವನು ಪ್ರಾರ್ಥಿಸಿದ ಬಳಿಕ ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಆ ಫರಿಸಾಯನು ನೀತಿವಂತನೆಂದು ನಿರ್ಣಯಿಸಲ್ಪಡಲಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”

ದೇವರ ರಾಜ್ಯಕ್ಕೆ ಯಾರು ಪ್ರವೇಶಿಸುವರು?

(ಮತ್ತಾಯ 19:13-15; ಮಾರ್ಕ 10:13-16)

15 ಕೆಲವು ಜನರು ತಮ್ಮ ಚಿಕ್ಕಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತಂದರು. ಆದರೆ ಶಿಷ್ಯರು ಇದನ್ನು ನೋಡಿ, “ಮಕ್ಕಳನ್ನು ತರಕೂಡದು” ಎಂದು ಜನರಿಗೆ ಹೇಳಿದರು. 16 ಆದರೆ ಯೇಸುವು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಕರೆದು ತನ್ನ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಈ ಚಿಕ್ಕಮಕ್ಕಳಂತಿರುವ ಜನರದೇ. 17 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಶಿಶುಭಾವದಿಂದ ನೀವು ದೇವರ ರಾಜ್ಯವನ್ನು ಅಂಗೀಕರಿಸಬೇಕು. ಇಲ್ಲವಾದರೆ, ನೀವು ಎಂದಿಗೂ ಅದರೊಳಗೆ ಪ್ರವೇಶಿಸುವುದಿಲ್ಲ!” ಎಂದು ಹೇಳಿದನು.

ಐಶ್ವರ್ಯವಂತನೊಬ್ಬನು ಯೇಸುವಿಗೆ ಕೇಳಿದ ಪ್ರಶ್ನೆ

(ಮತ್ತಾಯ 19:16-30; ಮಾರ್ಕ 10:17-31)

18 ಒಬ್ಬ ಯೆಹೂದ್ಯನಾಯಕನು ಯೇಸುವಿಗೆ, “ಒಳ್ಳೆಯ ಉಪದೇಶಕನೇ, ನಿತ್ಯಜೀವ ಹೊಂದಲು ನಾನೇನು ಮಾಡಬೇಕು?” ಎಂದು ಕೇಳಿದನು.

19 ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ನೀನು ಏಕೆ ಕರೆಯುತ್ತೀ? ದೇವರೊಬ್ಬನೇ ಒಳ್ಳೆಯವನು. 20 ದೇವರ ಈ ಆಜ್ಞೆಗಳು ನಿನಗೆ ಗೊತ್ತೇ ಇವೆ: ‘ನೀನು ವ್ಯಭಿಚಾರ ಮಾಡಬಾರದು, ಯಾರನ್ನೂ ಕೊಲೆಮಾಡಬಾರದು, ಯಾವುದನ್ನೂ ಕದಿಯಬಾರದು, ಬೇರೆ ಜನರ ಬಗ್ಗೆ ನೀನು ಸುಳ್ಳನ್ನು ಹೇಳಬಾರದು ಮತ್ತು ನೀನು ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’”(A) ಎಂದನು.

21 ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಆ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ!” ಎಂದು ಹೇಳಿದನು.

22 ಆಗ ಯೇಸು ಅವನಿಗೆ, “ನೀನು ಮಾಡಬೇಕಾದ ಇನ್ನೊಂದು ಕಾರ್ಯವಿದೆ. ನಿನ್ನ ಆಸ್ತಿಯನ್ನೆಲ್ಲಾ ಮಾರಿ ಅದರಿಂದ ಬಂದ ಹಣವನ್ನು ಬಡ ಜನರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ದೊರೆಯುವುದು. ನೀನಾದರೋ ಬಂದು ನನ್ನನ್ನು ಹಿಂಬಾಲಿಸು!” ಅಂದನು. 23 ಯೇಸುವಿನ ಈ ಮಾತುಗಳನ್ನು ಕೇಳಿದಾಗ ಅವನಿಗೆ ಬಹಳ ದುಃಖವಾಯಿತು. ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.

24 ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25 ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.

ಯಾರಿಗೆ ರಕ್ಷಣೆಯಾಗುವುದು?

26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.

27 ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು.

28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.

29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30 ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು.

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ

(ಮತ್ತಾಯ 20:17-19; ಮಾರ್ಕ 10:32-34)

31 ಬಳಿಕ ಯೇಸು ತನ್ನ ಹನ್ನೆರಡು ಮಂದಿ ಅಪೊಸ್ತಲರೊಂದಿಗೆ ಪ್ರತ್ಯೇಕವಾಗಿ ಮಾತಾಡಿದನು. ಅವರಿಗೆ, “ಕೇಳಿರಿ! ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ದೇವರು ತನ್ನ ಪ್ರವಾದಿಗಳ ಮೂಲಕ ಮನುಷ್ಯಕುಮಾರನ ಬಗ್ಗೆ ಬರೆಸಿರುವ ಪ್ರತಿಯೊಂದು ಸಂಗತಿಯೂ ಸಂಭವಿಸುವುದು! 32 ಆತನ ಜನರೇ ಆತನಿಗೆ ವಿರೋಧವಾಗಿ ಎದ್ದು ಯೆಹೂದ್ಯರಲ್ಲದ ಜನರಿಗೆ ಆತನನ್ನು ಒಪ್ಪಿಸಿಕೊಡುವರು. ಅವರು ಆತನನ್ನು ಗೇಲಿಮಾಡಿ ಆತನ ಮುಖಕ್ಕೆ ಉಗುಳುವರು. ಆತನಿಗೆ ಅವಮಾನ ಮಾಡುವರು ಮತ್ತು ನಾಚಿಕೆಪಡಿಸುವರು. 33 ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು. 34 ಅಪೊಸ್ತಲರು ಇದನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಅರ್ಥವು ಅವರಿಗೆ ಮರೆಯಾಗಿತ್ತು.

ಯೇಸುವಿನಿಂದ ಕಣ್ಣುಪಡೆದ ಕುರುಡ

(ಮತ್ತಾಯ 20:29-34; ಮಾರ್ಕ 10:46-52)

35 ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36 ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು.

37 ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು.

38 ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.

39 ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.

40 ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ 41 “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.

ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು.

42 ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು.

43 ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International