Read the Gospels in 40 Days
ಪಾಪ
(ಮತ್ತಾಯ 18:6-7,21-22; ಮಾರ್ಕ 9:42)
17 ಯೇಸು ತನ್ನ ಶಿಷ್ಯರಿಗೆ, “ಜನರನ್ನು ಪಾಪಕ್ಕೆ ನಡೆಸುವಂಥ ಸಂಗತಿಗಳು ಖಂಡಿತವಾಗಿ ಬರುತ್ತವೆ. ಆದರೆ ಅವುಗಳನ್ನು ಬರಮಾಡುವವನ ಗತಿಯನ್ನು ಏನು ಹೇಳಲಿ! 2 ಬಲಹೀನರಾದ ಇವರನ್ನು ಪಾಪಕ್ಕೆ ನಡೆಸುವವನು ತನ್ನ ಕುತ್ತಿಗೆಗೆ ಒಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗುವುದೇ ಉತ್ತಮ. 3 ಆದ್ದರಿಂದ ಎಚ್ಚರಿಕೆಯಾಗಿರಿ!
“ನಿನ್ನ ಸಹೋದರನು ಪಾಪಮಾಡಿದರೆ, ಅವನನ್ನು ಖಂಡಿಸು. ಒಂದುವೇಳೆ ಅವನೇನಾದರೂ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೆ ಅವನನ್ನು ಕ್ಷಮಿಸು. 4 ನಿನ್ನ ಸಹೋದರನು ನಿನಗೆ ಒಂದು ದಿನದಲ್ಲಿ ಏಳು ಸಲ ತಪ್ಪುಮಾಡಿ, ಪ್ರತಿಸಲವೂ, ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು.
ನಿಮ್ಮ ನಂಬಿಕೆ ಎಷ್ಟು ದೊಡ್ಡದು?
5 ಅಪೊಸ್ತಲರು ಪ್ರಭುವಿಗೆ (ಯೇಸು), “ನಮ್ಮ ನಂಬಿಕೆಯನ್ನು ಹೆಚ್ಚಿಸು!” ಎಂದು ಕೇಳಿಕೊಂಡರು.
6 ಪ್ರಭುವು ಅವರಿಗೆ ಹೀಗೆಂದನು: “ನಿಮ್ಮ ನಂಬಿಕೆ ಸಾಸಿವೆ ಕಾಳಷ್ಟು ದೊಡ್ಡದಾಗಿದ್ದರೆ, ನೀವು ಈ ಅತ್ತಿಮರಕ್ಕೆ, ‘ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿದರೂ ಅದು ನಿಮಗೆ ವಿಧೇಯವಾಗುತ್ತದೆ.
ಒಳ್ಳೆಯ ಸೇವಕರಾಗಿರಿ
7 “ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸ ಮಾಡುವಂಥ ಒಬ್ಬ ಸೇವಕನಿದ್ದಾನೆಂದು ಭಾವಿಸಿಕೊಳ್ಳೋಣ. ಆ ಸೇವಕನು ಭೂಮಿಯನ್ನು ಉಳುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಆ ಸೇವಕನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ನೀನು ಅವನಿಗೆ ಏನು ಹೇಳುವೆ? ‘ಒಳಗೆ ಬಾ! ಊಟಕ್ಕೆ ಕುಳಿತುಕೊ’ ಎಂದು ಹೇಳುವಿಯೋ? 8 ಇಲ್ಲ! ನೀನು ಅವನಿಗೆ, ‘ನನಗೋಸ್ಕರ ಅಡಿಗೆ ಮಾಡು. ಬಳಿಕ ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬಂದು ನನಗೆ ಊಟಬಡಿಸು. ನಾನು ತಿಂದು ಕುಡಿದ ಮೇಲೆ ನೀನು ಊಟಮಾಡು’ ಎಂದು ಹೇಳುವೆಯಷ್ಟೇ. 9 ಆ ಸೇವಕನು ತನ್ನ ಕೆಲಸ ಮಾಡಿದ್ದಕ್ಕಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯಷ್ಟೇ. 10 ಇದೇ ನಿಯಮ ನಿಮಗೂ ಅನ್ವಯಿಸುತ್ತದೆ. ನಿಮಗೆ ನೇಮಿಸಿದ ಕೆಲಸಗಳನ್ನು ನೀವು ಮಾಡಿ ಪೂರೈಸಿದಾಗ, ‘ನಾವು ಆಳುಗಳು, ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ’ ಎಂದು ಹೇಳಬೇಕು.”
ಕೃತಜ್ಞತೆಯುಳ್ಳವರಾಗಿರಿ
11 ಯೇಸುವು ಜೆರುಸಲೇಮಿಗೆ ಪ್ರಯಾಣಮಾಡುತ್ತಾ ಗಲಿಲಾಯದಿಂದ ಸಮಾರ್ಯಕ್ಕೆ ಹೋದನು. 12 ಅಲ್ಲಿ ಆತನು ಒಂದು ಗ್ರಾಮಕ್ಕೆ ಬಂದನು. ಅಲ್ಲಿ ಹತ್ತು ಜನರು ಆತನನ್ನು ಭೇಟಿಯಾದರು. ಅವರು ಯೇಸುವಿನ ಸಮೀಪಕ್ಕೆ ಬರಲಿಲ್ಲ. ಏಕೆಂದರೆ ಅವರೆಲ್ಲರೂ ಕುಷ್ಠರೋಗಿಗಳಾಗಿದ್ದರು. 13 ಆದರೆ ಅವರು, “ಯೇಸುವೇ! ಗುರುವೇ! ದಯಮಾಡಿ ನಮಗೆ ಸಹಾಯಮಾಡು!” ಎಂದು ಕೂಗಿಕೊಂಡರು.
14 ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ತೋರಿಸಿಕೊಳ್ಳಿರಿ” ಎಂದು ಹೇಳಿದನು.
ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು. 15 ಅವರಲ್ಲಿ ಒಬ್ಬನು ತನಗೆ ಗುಣವಾದುದ್ದನ್ನು ಕಂಡು ಯೇಸುವಿನ ಬಳಿಗೆ ಹಿಂತಿರುಗಿ ಬಂದು ಗಟ್ಟಿಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು. 16 ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ವಂದನೆ ಸಲ್ಲಿಸಿದನು. (ಅವನು ಸಮಾರ್ಯದವನು, ಯೆಹೂದ್ಯನಲ್ಲ.) 17 ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನುಳಿದ ಒಂಭತ್ತು ಮಂದಿ ಎಲ್ಲಿ? 18 ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾರ್ಯದವನನ್ನು ಬಿಟ್ಟು ಬೇರೆ ಯಾರೂ ಬರಲಿಲ್ಲವೇ?” ಎಂದು ಕೇಳಿದನು. 19 ಬಳಿಕ ಯೇಸು ಅವನಿಗೆ, “ಎದ್ದೇಳು! ಈಗ ನೀನು ಮನೆಗೆ ಹೋಗು! ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಅಂದನು.
ದೇವರ ರಾಜ್ಯವು ನಿಮ್ಮೊಳಗಿದೆ
(ಮತ್ತಾಯ 24:23-28,37-41)
20 ಫರಿಸಾಯರಲ್ಲಿ ಕೆಲವರು ಯೇಸುವನ್ನು, “ದೇವರ ರಾಜ್ಯವು ಯಾವಾಗ ಬರುವುದು?” ಎಂದು ಕೇಳಿದರು.
ಯೇಸು ಅವರಿಗೆ, “ದೇವರ ರಾಜ್ಯವು ಬರುತ್ತಿದೆ, ಆದರೆ ನಿಮ್ಮ ಕಣ್ಣುಗಳಿಗೆ ಕಾಣಿಸುವಂತೆ ಅದು ಬರುವುದಿಲ್ಲ. 21 ‘ಇಗೋ, ದೇವರ ರಾಜ್ಯವು ಇಲ್ಲಿದೆ!’ ‘ಅಗೋ ಅಲ್ಲಿದೆ!’ ಎಂದು ಜನರು ಹೇಳುವಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು.
22 ಬಳಿಕ ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನ ದಿನಗಳಲ್ಲೊಂದನ್ನು ನೀವು ನೋಡಬೇಕೆಂದು ಬಹಳವಾಗಿ ಆಶಿಸುವ ಕಾಲವು ಬರುವುದು, ಆದರೆ ನೀವು ಅದನ್ನು ನೋಡಲಾಗುವುದಿಲ್ಲ. 23 ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ!’ ಎಂದು ಹೇಳುವರು. ನೀವು ಇದ್ದಲ್ಲಿಯೇ ಇರಿ. ಅವರನ್ನು ಹಿಂಬಾಲಿಸಿ ಹೋಗಿ ಹುಡುಕಬೇಡಿ.
ಯೇಸು ತಿರುಗಿ ಬರುವಾಗ ಲೋಕದ ಸ್ಥಿತಿ
24 “ಮನುಷ್ಯಕುಮಾರನು ಬಂದಾಗ ನಿಮಗೇ ಗೊತ್ತಾಗುವುದು. ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಹೊಳೆಯುವ ಮಿಂಚಿನಂತೆ ಆತನು ಬರುವನು. 25 ಆದರೆ ಅದಕ್ಕಿಂತಲೂ ಮೊದಲು, ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಈ ಕಾಲದ ಜನರಿಂದ ತಿರಸ್ಕರಿಸಲ್ಪಡುವನು.
26 “ಮನುಷ್ಯಕುಮಾರನು ತಿರುಗಿ ಬರುವ ದಿವಸಗಳಲ್ಲಿ ಈ ಲೋಕದ ಸ್ಥಿತಿಯು ನೋಹನ ಕಾಲದ ಸ್ಥಿತಿಯಂತೆಯೇ ಇರುವುದು. 27 ನೋಹನ ಕಾಲದಲ್ಲಿ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯನ್ನು ಪ್ರವೇಶಿಸಿದ ದಿನದಲ್ಲಿಯೂ ಅವರು ಹಾಗೆಯೇ ಮಾಡುತ್ತಿದ್ದರು. ಆಗ ಜಲಪ್ರಳಯ ಬಂದು ಎಲ್ಲಾ ಜನರನ್ನು ನಾಶಮಾಡಿತು.
28 “ಲೋಟನ ಕಾಲದಲ್ಲಿ ದೇವರು ಸೊದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗಿತ್ತೋ ಅದೇರೀತಿಯಲ್ಲಿ ಮುಂದೆಯೂ ಇರುವುದು. ಆ ಜನರು ತಿನ್ನುತ್ತಾ, ಕುಡಿಯುತ್ತಾ, ಕೊಂಡುಕೊಳ್ಳುತ್ತಾ, ಮಾರಾಟ ಮಾಡುತ್ತಾ, ಬೀಜ ಬಿತ್ತುತ್ತಾ ಮತ್ತು ತಮಗಾಗಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಾ ಇದ್ದರು. 29 ಲೋಟನು ಆ ಪಟ್ಟಣವನ್ನು ಬಿಟ್ಟು ಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳೆಯಾಗಿ ಅವರೆಲ್ಲರನ್ನೂ ನಾಶಮಾಡಿತು. 30 ಮನುಷ್ಯಕುಮಾರನು ತಿರುಗಿ ಬರುವಾಗ ಲೋಕದ ಸ್ಥಿತಿ ಅದೇ ರೀತಿಯಲ್ಲಿರುವುದು.
31 “ಆ ದಿನದಲ್ಲಿ, ಮಾಳಿಗೆಯ ಮೇಲಿರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಹೋಗದಿರಲಿ. ಹೊಲದಲ್ಲಿರುವವನು ತನ್ನ ಮನೆಗೆ ಮರಳಿ ಹೋಗದಿರಲಿ. 32 ಲೋಟನ ಹೆಂಡತಿಗೆ[a] ಸಂಭವಿಸಿದ್ದು ಜ್ಞಾಪಕವಿದೆಯೇ?
33 “ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ತನ್ನ ಪ್ರಾಣವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು. 34 ನಾನು ತಿರುಗಿ ಬರುವಾಗ ಒಂದೇ ಕೋಣೆಯಲ್ಲಿ ಇಬ್ಬರು ಮಲಗಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 35 ಇಬ್ಬರು ಸ್ತ್ರೀಯರು ಒಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.” 36 [b]
37 ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಕೇಳಿದರು.
ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿಬಂದಿರುತ್ತವೆಯೋ ಅಲ್ಲಿ ಹೆಣ ಇದ್ದೇ ಇರುತ್ತದೆಯೆಂದು ಜನರು ತಿಳಿದುಕೊಳ್ಳುತ್ತಾರೆ” ಎಂದು ಉತ್ತರಿಸಿದನು.
ತನ್ನ ಜನರಿಗೆ ದೇವರ ಉತ್ತರ
18 ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು: 2 “ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶನಿದ್ದನು. ಅವನಿಗೆ ದೇವರಲ್ಲಿ ಭಯಭಕ್ತಿಯಿರಲಿಲ್ಲ. ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಅವನು ಗಮನ ಕೊಡಲಿಲ್ಲ. 3 ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಆಕೆಯು ಅನೇಕ ಸಲ ನ್ಯಾಯಾಧೀಶನ ಬಳಿಗೆ ಬಂದು, ‘ಇಲ್ಲಿ ನನಗೊಬ್ಬನು ತೊಂದರೆ ಕೊಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯವನ್ನು ದೊರಕಿಸಿಕೊಡಿ!’ ಎಂದು ಬೇಡಿಕೊಂಡಳು. 4 ಆದರೆ ನ್ಯಾಯಾಧೀಶನು ಆ ಸ್ತ್ರೀಗೆ ಸಹಾಯಮಾಡಲು ಬಯಸಲಿಲ್ಲ. ಬಹಳ ಸಮಯದ ನಂತರ ಆ ನ್ಯಾಯಾಧೀಶನು ತನ್ನೊಳಗೆ, ‘ನನಗಂತೂ ದೇವರಲ್ಲಿ ಭಯಭಕ್ತಿಯಿಲ್ಲ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆಯೂ ಗಮನವಿಲ್ಲ. 5 ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.”
6 ಪ್ರಭುವು ಈ ಸಾಮ್ಯವನ್ನು ಹೇಳಿದ ಮೇಲೆ ತನ್ನ ಶಿಷ್ಯರಿಗೆ, “ಕೇಳಿರಿ! ಆ ಅನ್ಯಾಯಗಾರನಾದ ನ್ಯಾಯಾಧೀಶನು ಹೇಳಿದ್ದರಲ್ಲಿ ಅರ್ಥವಿದೆ. 7 ದೇವಜನರು ದೇವರಿಗೆ ಹಗಲಿರುಳು ಮೊರೆಯಿಡಬೇಕು. ದೇವರು ತನ್ನ ಜನರಿಗೆ ಸರಿಯಾದದ್ದನ್ನೇ ಯಾವಾಗಲೂ ಕೊಡುತ್ತಾನೆ. ತನ್ನ ಜನರಿಗೆ ಉತ್ತರ ಕೊಡುವುದರಲ್ಲಿ ದೇವರು ತಡಮಾಡುವುದಿಲ್ಲ! 8 ದೇವರು ತನ್ನ ಜನರಿಗೆ ಬೇಗನೆ ಸಹಾಯ ಮಾಡುತ್ತಾನೆ ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಮನುಷ್ಯಕುಮಾರನು ಮತ್ತೆ ಬಂದಾಗ, ಜಗತ್ತಿನಲ್ಲಿ ನಂಬಿಕೆಯನ್ನು ಕಾಣುವನೋ?” ಎಂದನು.
ನೀತಿನಿರ್ಣಯ
9 ಅಲ್ಲಿ ಕೆಲವರು ತಾವೇ ಬಹಳ ಒಳ್ಳೆಯವರೆಂದು ಭಾವಿಸಿಕೊಂಡಿದ್ದರು. ಈ ಜನರು ತಾವು ಬೇರೆಯವರಿಗಿಂತ ಉತ್ತಮರೋ ಎಂಬಂತೆ ವರ್ತಿಸುತ್ತಿದ್ದರು. ಯೇಸು ಅವರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು. 10 “ಒಮ್ಮೆ ಒಬ್ಬ ಫರಿಸಾಯನು ಮತ್ತು ಒಬ್ಬ ಸುಂಕವಸೂಲಿಗಾರನು ಪ್ರಾರ್ಥಿಸಲು ದೇವಾಲಯಕ್ಕೆ ಹೋದರು. 11 ಫರಿಸಾಯನು ಸುಂಕವಸೂಲಿಗಾರನನ್ನು ಕಂಡು ದೂರದಲ್ಲಿ ನಿಂತುಕೊಂಡು ಹೀಗೆ ಪ್ರಾರ್ಥಿಸಿದನು: ‘ದೇವರೇ, ನಾನು ಬೇರೆಯವರಂತೆ ಸುಲಿಗೆಗಾರನಲ್ಲ, ಮೋಸಗಾರನಲ್ಲ, ಅಥವಾ ವ್ಯಭಿಚಾರಿಯಲ್ಲ. ನಾನು ಈ ಸುಂಕವಸೂಲಿಗಾರನಂತೆಯೂ ಅಲ್ಲ. ಇದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. 12 ನಾನಾದರೋ ವಾರದಲ್ಲಿ ಎರಡಾವರ್ತಿ ಉಪವಾಸ ಮಾಡುತ್ತೇನೆ. ಸಂಪಾದಿಸುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ನಿನಗೆ ಕೊಡುತ್ತೇನೆ!’ ಅಂದನು.
13 “ಸುಂಕವಸೂಲಿಗಾರನು ಅಲ್ಲಿ ಒಬ್ಬಂಟಿಗನಾಗಿಯೇ ನಿಂತುಕೊಂಡಿದ್ದನು. ಅವನು ಆಕಾಶದ ಕಡೆಗೆ ಕಣ್ಣೆತ್ತಿ ನೋಡದೇ, ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು, ‘ದೇವರೇ, ನನಗೆ ಕರುಣೆತೋರು; ನಾನು ಪಾಪಿಯಾಗಿದ್ದೇನೆ’ ಎಂದು ಪ್ರಾರ್ಥಿಸಿದನು. 14 ಅವನು ಪ್ರಾರ್ಥಿಸಿದ ಬಳಿಕ ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಆ ಫರಿಸಾಯನು ನೀತಿವಂತನೆಂದು ನಿರ್ಣಯಿಸಲ್ಪಡಲಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”
ದೇವರ ರಾಜ್ಯಕ್ಕೆ ಯಾರು ಪ್ರವೇಶಿಸುವರು?
(ಮತ್ತಾಯ 19:13-15; ಮಾರ್ಕ 10:13-16)
15 ಕೆಲವು ಜನರು ತಮ್ಮ ಚಿಕ್ಕಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತಂದರು. ಆದರೆ ಶಿಷ್ಯರು ಇದನ್ನು ನೋಡಿ, “ಮಕ್ಕಳನ್ನು ತರಕೂಡದು” ಎಂದು ಜನರಿಗೆ ಹೇಳಿದರು. 16 ಆದರೆ ಯೇಸುವು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಕರೆದು ತನ್ನ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಈ ಚಿಕ್ಕಮಕ್ಕಳಂತಿರುವ ಜನರದೇ. 17 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಶಿಶುಭಾವದಿಂದ ನೀವು ದೇವರ ರಾಜ್ಯವನ್ನು ಅಂಗೀಕರಿಸಬೇಕು. ಇಲ್ಲವಾದರೆ, ನೀವು ಎಂದಿಗೂ ಅದರೊಳಗೆ ಪ್ರವೇಶಿಸುವುದಿಲ್ಲ!” ಎಂದು ಹೇಳಿದನು.
ಐಶ್ವರ್ಯವಂತನೊಬ್ಬನು ಯೇಸುವಿಗೆ ಕೇಳಿದ ಪ್ರಶ್ನೆ
(ಮತ್ತಾಯ 19:16-30; ಮಾರ್ಕ 10:17-31)
18 ಒಬ್ಬ ಯೆಹೂದ್ಯನಾಯಕನು ಯೇಸುವಿಗೆ, “ಒಳ್ಳೆಯ ಉಪದೇಶಕನೇ, ನಿತ್ಯಜೀವ ಹೊಂದಲು ನಾನೇನು ಮಾಡಬೇಕು?” ಎಂದು ಕೇಳಿದನು.
19 ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ನೀನು ಏಕೆ ಕರೆಯುತ್ತೀ? ದೇವರೊಬ್ಬನೇ ಒಳ್ಳೆಯವನು. 20 ದೇವರ ಈ ಆಜ್ಞೆಗಳು ನಿನಗೆ ಗೊತ್ತೇ ಇವೆ: ‘ನೀನು ವ್ಯಭಿಚಾರ ಮಾಡಬಾರದು, ಯಾರನ್ನೂ ಕೊಲೆಮಾಡಬಾರದು, ಯಾವುದನ್ನೂ ಕದಿಯಬಾರದು, ಬೇರೆ ಜನರ ಬಗ್ಗೆ ನೀನು ಸುಳ್ಳನ್ನು ಹೇಳಬಾರದು ಮತ್ತು ನೀನು ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’”(A) ಎಂದನು.
21 ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಆ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ!” ಎಂದು ಹೇಳಿದನು.
22 ಆಗ ಯೇಸು ಅವನಿಗೆ, “ನೀನು ಮಾಡಬೇಕಾದ ಇನ್ನೊಂದು ಕಾರ್ಯವಿದೆ. ನಿನ್ನ ಆಸ್ತಿಯನ್ನೆಲ್ಲಾ ಮಾರಿ ಅದರಿಂದ ಬಂದ ಹಣವನ್ನು ಬಡ ಜನರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ದೊರೆಯುವುದು. ನೀನಾದರೋ ಬಂದು ನನ್ನನ್ನು ಹಿಂಬಾಲಿಸು!” ಅಂದನು. 23 ಯೇಸುವಿನ ಈ ಮಾತುಗಳನ್ನು ಕೇಳಿದಾಗ ಅವನಿಗೆ ಬಹಳ ದುಃಖವಾಯಿತು. ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
24 ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25 ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
ಯಾರಿಗೆ ರಕ್ಷಣೆಯಾಗುವುದು?
26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.
27 ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು.
28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.
29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30 ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
(ಮತ್ತಾಯ 20:17-19; ಮಾರ್ಕ 10:32-34)
31 ಬಳಿಕ ಯೇಸು ತನ್ನ ಹನ್ನೆರಡು ಮಂದಿ ಅಪೊಸ್ತಲರೊಂದಿಗೆ ಪ್ರತ್ಯೇಕವಾಗಿ ಮಾತಾಡಿದನು. ಅವರಿಗೆ, “ಕೇಳಿರಿ! ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ದೇವರು ತನ್ನ ಪ್ರವಾದಿಗಳ ಮೂಲಕ ಮನುಷ್ಯಕುಮಾರನ ಬಗ್ಗೆ ಬರೆಸಿರುವ ಪ್ರತಿಯೊಂದು ಸಂಗತಿಯೂ ಸಂಭವಿಸುವುದು! 32 ಆತನ ಜನರೇ ಆತನಿಗೆ ವಿರೋಧವಾಗಿ ಎದ್ದು ಯೆಹೂದ್ಯರಲ್ಲದ ಜನರಿಗೆ ಆತನನ್ನು ಒಪ್ಪಿಸಿಕೊಡುವರು. ಅವರು ಆತನನ್ನು ಗೇಲಿಮಾಡಿ ಆತನ ಮುಖಕ್ಕೆ ಉಗುಳುವರು. ಆತನಿಗೆ ಅವಮಾನ ಮಾಡುವರು ಮತ್ತು ನಾಚಿಕೆಪಡಿಸುವರು. 33 ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು. 34 ಅಪೊಸ್ತಲರು ಇದನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಅರ್ಥವು ಅವರಿಗೆ ಮರೆಯಾಗಿತ್ತು.
ಯೇಸುವಿನಿಂದ ಕಣ್ಣುಪಡೆದ ಕುರುಡ
(ಮತ್ತಾಯ 20:29-34; ಮಾರ್ಕ 10:46-52)
35 ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36 ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು.
37 ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು.
38 ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.
39 ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.
40 ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ 41 “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.
ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು.
42 ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು.
43 ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International