Print Page Options
Previous Prev Day Next DayNext

Read the Gospels in 40 Days

Read through the four Gospels--Matthew, Mark, Luke, and John--in 40 days.
Duration: 40 days
Kannada Holy Bible: Easy-to-Read Version (KERV)
Version
ಮಾರ್ಕ 1-3

ಯೇಸುವಿನ ಆಗಮನ

(ಮತ್ತಾಯ 3:1-12; ಲೂಕ 3:1-9,15-17; ಯೋಹಾನ 1:19-28)

ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು. ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ.

“ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
    ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.”(A)

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ,
ಆತನ ದಾರಿಯನ್ನು ಸುಗಮಗೊಳಿಸಿರಿ’
    ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.”(B)

ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.

ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.

ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.

ಯೇಸುವಿಗೆ ದೀಕ್ಷಾಸ್ನಾನ

(ಮತ್ತಾಯ 3:13-17; ಲೂಕ 3:21-22)

ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.

ಯೇಸುವಿಗಾದ ಪರಿಶೋಧನೆ

(ಮತ್ತಾಯ 4:1-11; ಲೂಕ 4:1-13)

12 ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು. 13 ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.

ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ

(ಮತ್ತಾಯ 4:12-17; ಲೂಕ 4:14-15)

14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮತ್ತಾಯ 4:18-22; ಲೂಕ 5:1-11)

16 ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು. 17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು. 18 ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.

19 ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು. 20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ದೆವ್ವದಿಂದ ಪೀಡಿತನಾಗಿದ್ದವನಿಗೆ ವಿಮೋಚನೆ

(ಲೂಕ 4:31-37)

21 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು. 22 ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು. 23 ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು, 24 “ನಜರೇತಿನ ಯೇಸುವೇ! ನಮ್ಮಿಂದ ನಿನಗೆ ಏನಾಗಬೇಕಾಗಿದೆ? ನಮ್ಮನ್ನು ನಾಶಗೊಳಿಸಲು ಬಂದಿರುವೆಯಾ? ನೀನು ದೇವರಿಂದ ಬಂದ ಪರಿಶುದ್ಧನೆಂದು ನನಗೆ ಗೊತ್ತಿದೆ!” ಎಂದು ಕೂಗಿಕೊಂಡನು.

25 ಯೇಸು, “ಸುಮ್ಮನಿರು! ಅವನೊಳಗಿಂದ ಹೊರಗೆ ಬಾ!” ಎಂದು ಆಜ್ಞಾಪಿಸಿದನು. 26 ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಅರಚುತ್ತಾ ಅವನೊಳಗಿಂದ ಹೊರಬಂದಿತು.

27 ಜನರೆಲ್ಲರೂ ದಿಗ್ಭ್ರಮೆಗೊಂಡು, “ಇದೇನು? ಹೊಸದೊಂದನ್ನು ಈತನು ಅಧಿಕಾರದಿಂದ ಉಪದೇಶಿಸುತ್ತಿದ್ದಾನೆ! ಈತನ ಆಜ್ಞೆಗೆ ದೆವ್ವಗಳೂ ವಿಧೇಯವಾಗುತ್ತಿವೆ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 28 ಯೇಸುವಿನ ಸುದ್ದಿಯು ಗಲಿಲಾಯ ಪ್ರದೇಶದ ಎಲ್ಲೆಡೆಯಲ್ಲಿಯೂ ಹರಡಿತು.

ಅನೇಕರಿಗೆ ಸ್ವಸ್ಥತೆ

(ಮತ್ತಾಯ 8:14-17; ಲೂಕ 4:38-41)

29 ಯೇಸು ಮತ್ತು ಆತನ ಶಿಷ್ಯರು ಸಭಾಮಂದಿರದಿಂದ ಹೊರಟು ಯಾಕೋಬ ಮತ್ತು ಯೋಹಾನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಹೋದರು. 30 ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು. 31 ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.

32 ಅಂದು ಸೂರ್ಯನು ಮುಳುಗಿದ ಮೇಲೆ, ಜನರು ಕಾಯಿಲೆಯವರನ್ನೂ ದೆವ್ವಗಳಿಂದ ಪೀಡಿತರಾಗಿದ್ದವರನ್ನೂ ಆತನ ಬಳಿಗೆ ಕರೆತಂದರು. 33 ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು. 34 ಯೇಸು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದ ಅನೇಕ ಜನರನ್ನು ಗುಣಪಡಿಸಿದನು; ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಬಿಡಿಸಿದನು. ಆದರೆ ಆ ದೆವ್ವಗಳಿಗೆ ಮಾತನಾಡಲು ಆತನು ಅವಕಾಶ ಕೊಡಲಿಲ್ಲ; ಏಕೆಂದರೆ ಯೇಸು ಯಾರೆಂಬುದು ದೆವ್ವಗಳಿಗೆ ಗೊತ್ತಿತ್ತು.

ಸುವಾರ್ತೆ ಸಾರಲು ಯೇಸುವಿನ ಸಿದ್ಧತೆ

(ಲೂಕ 4:42-44)

35 ಮರುದಿನ ಮುಂಜಾನೆ, ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ಪ್ರಾರ್ಥಿಸುವುದಕ್ಕಾಗಿ ಏಕಾಂತವಾದ ಸ್ಥಳಕ್ಕೆ ಹೋದನು. 36 ತರುವಾಯ, ಸೀಮೋನ ಮತ್ತು ಅವನ ಗೆಳೆಯರು ಯೇಸುವನ್ನು ಹುಡುಕುತ್ತಾ ಹೋದರು. 37 ಅವರು ಯೇಸುವನ್ನು ಕಂಡುಕೊಂಡು, “ಜನರೆಲ್ಲರೂ ನಿನ್ನನ್ನೇ ಎದುರು ನೋಡುತ್ತಿದ್ದಾರೆ!” ಎಂದು ಹೇಳಿದರು.

38 ಯೇಸು, “ಇಲ್ಲಿಗೆ ಸಮೀಪದಲ್ಲಿರುವ ಊರುಗಳಿಗೆ ನಾವು ಹೋಗೋಣ. ಆ ಸ್ಥಳಗಳಲ್ಲಿಯೂ ನಾನು ಉಪದೇಶಿಸಬೇಕು. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು” ಎಂದು ಹೇಳಿದನು. 39 ಹೀಗೆ ಯೇಸು ಗಲಿಲಾಯದ ಎಲ್ಲಾ ಕಡೆಗೆ ಪ್ರವಾಸಮಾಡಿ ಸಭಾಮಂದಿರಗಳಲ್ಲಿ ಉಪದೇಶಿಸಿದನು; ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು.

ಕುಷ್ಠರೋಗಿಗೆ ಸ್ವಸ್ಥತೆ

(ಮತ್ತಾಯ 8:1-4; ಲೂಕ 5:12-16)

40 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ ಆತನಿಗೆ, “ನೀನು ಇಷ್ಟಪಟ್ಟರೆ, ನನ್ನನ್ನು ಗುಣಪಡಿಸಬಲ್ಲೆ” ಎಂದು ಬೇಡಿಕೊಂಡನು.

41 ಯೇಸು ಅವನಿಗಾಗಿ ದುಃಖಪಟ್ಟು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಇಷ್ಟವಿದೆ. ನಿನಗೆ ಗುಣವಾಗಲಿ” ಎಂದು ಹೇಳಿದನು. 42 ಆ ಕೂಡಲೇ ಅವನಿಗೆ ಗುಣವಾಯಿತು.

43-44 ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.[a] 45 ಅವನು ಅಲ್ಲಿಂದ ಹೋಗಿ ಯೇಸುವೇ ತನ್ನನ್ನು ಗುಣಪಡಿಸಿದನೆಂದು ಜನರೆಲ್ಲರಿಗೆ ತಿಳಿಸಿದನು. ಈ ಸುದ್ದಿಯು ಎಲ್ಲೆಡೆ ಹರಡಿದ್ದರಿಂದ ಆತನು ಬಹಿರಂಗವಾಗಿ ಊರೊಳಗೆ ಹೋಗಲು ಸಾಧ್ಯವಾಗದೆ ಏಕಾಂತವಾದ ಸ್ಥಳಗಳಲ್ಲಿ ವಾಸಿಸಬೇಕಾಯಿತು. ಆದರೂ ಎಲ್ಲಾ ಕಡೆಗಳಿಂದ ಜನರು ಯೇಸುವಿದ್ದಲ್ಲಿಗೆ ಬರುತ್ತಿದ್ದರು.

ಪಾರ್ಶ್ವವಾಯುರೋಗಿಗೆ ಸ್ವಸ್ಥತೆ

(ಮತ್ತಾಯ 9:1-8; ಲೂಕ 5:17-26)

ಕೆಲವು ದಿನಗಳ ತರುವಾಯ, ಯೇಸು ಕಪೆರ್ನೌಮಿಗೆ ಹಿಂದಿರುಗಿ ಬಂದನು. ಯೇಸು ಮನೆಯಲ್ಲಿದ್ದಾನೆಂಬ ಸುದ್ದಿಯು ಹಬ್ಬಿತು. ಜನರು ಗುಂಪುಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಒಟ್ಟುಗೂಡಿದರು. ಮನೆಯು ತುಂಬಿಹೋಯಿತು. ಅಲ್ಲಿ ನಿಲ್ಲಲು ಹೊರಗಡೆಯಲ್ಲಿಯೂ ಸ್ಥಳವಿರಲಿಲ್ಲ. ಯೇಸು ಉಪದೇಶಿಸುತ್ತಿದ್ದನು. ಕೆಲವು ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು. ಅವನನ್ನು ನಾಲ್ಕು ಮಂದಿ ಹೊತ್ತುಕೊಂಡಿದ್ದರು. ಮನೆಯು ಜನರಿಂದ ತುಂಬಿಹೋಗಿದ್ದುದರಿಂದ ಅವರು ಅವನನ್ನು ಯೇಸುವಿನ ಬಳಿಗೆ ತರಲಾಗಲಿಲ್ಲ. ಆದ್ದರಿಂದ ಅವರು ಯೇಸುವಿದ್ದ ಮನೆಯ ಮೇಲ್ಛಾವಣೆಯ ಮೇಲಕ್ಕೆ ಹೋಗಿ ಯೇಸುವಿದ್ದ ಸ್ಥಳದ ಮೇಲೆ ಹೆಂಚುಗಳನ್ನು ತೆಗೆದುಹಾಕಿದರು. ಹೀಗೆ ಅಲ್ಲಿ ಒಂದು ದ್ವಾರವನ್ನು ಮಾಡಿ ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. ಈ ಜನರ ದೊಡ್ಡ ನಂಬಿಕೆಯನ್ನು ಕಂಡ ಯೇಸು ರೋಗಿಗೆ, “ಯುವಕನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

ಕೆಲವು ಮಂದಿ ಧರ್ಮೋಪದೇಶಕರು ಅಲ್ಲಿ ಕುಳಿತಿದ್ದರು. ಯೇಸು ಹೇಳಿದ್ದನ್ನು ಕೇಳಿದ ಅವರು, “ಇವನು ಹೀಗೇಕೆ ಹೇಳುತ್ತಿದ್ದಾನೆ? ಇದು ದೇವದೂಷಣೆ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಲು ಸಾಧ್ಯ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಂಡರು.

ಧರ್ಮೋಪದೇಶಕರ ಆಲೋಚನೆಯನ್ನು ತಕ್ಷಣವೇ ಗ್ರಹಿಸಿಕೊಂಡ ಯೇಸು ಅವರಿಗೆ, “ನೀವು ಹೀಗೇಕೆ ಆಲೋಚಿಸುತ್ತೀರಿ? ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೋ? ಇಲ್ಲವೇ, ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಹೋಗು’ ಎಂದು ಹೇಳುವುದೋ? 10 ಆದರೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಎಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿದನು. ಬಳಿಕ ಯೇಸು ರೋಗಿಗೆ, 11 “ನಾನು ನಿನಗೆ ಹೇಳುತ್ತಿದ್ದೇನೆ, ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.

12 ಆ ಕೂಡಲೇ ರೋಗಿಯು ಎದ್ದುನಿಂತು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಗೆ ಹೋದನು. ಇದನ್ನು ಕಂಡ ಆ ಜನರೆಲ್ಲರೂ ಆಶ್ಚರ್ಯಚಕಿತರಾಗಿ, “ನಾವು ಹಿಂದೆಂದೂ ಇಂಥ ಸಂಗತಿಯನ್ನು ನೋಡಿಯೇ ಇಲ್ಲ” ಎಂದು ಹೇಳಿ ದೇವರನ್ನು ಕೊಂಡಾಡಿದರು.

ಯೇಸುವನ್ನು ಹಿಂಬಾಲಿಸಿದ ಲೇವಿ

(ಮತ್ತಾಯ 9:9-13; ಲೂಕ 5:27-32)

13 ಯೇಸು ಮತ್ತೆ ಸರೋವರಕ್ಕೆ ಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿ ಅಲ್ಲಿಗೆ ಹೋದದ್ದರಿಂದ ಆತನು ಅವರಿಗೆ ಉಪದೇಶಿಸಿದನು. 14 ಯೇಸು ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸುಂಕವಸೂಲಿ ಮಾಡುತ್ತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡನು. ಲೇವಿಯು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. ಆಗ ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.

15 ಅಂದು ಸ್ವಲ್ಪ ಹೊತ್ತಾದ ಬಳಿಕ ಯೇಸು ಲೇವಿಯ ಮನೆಯಲ್ಲಿ ಊಟಮಾಡುತ್ತಿದ್ದನು. ಅಲ್ಲಿ ಅನೇಕ ಸುಂಕದ ಅಧಿಕಾರಿಗಳು ಮತ್ತು ಇತರ ಕೆಟ್ಟ ಜನರು ಸಹ ಯೇಸು ಮತ್ತು ಆತನ ಶಿಷ್ಯರ ಸಂಗಡ ಊಟಮಾಡುತ್ತಿದ್ದರು. ಈ ಜನರಲ್ಲಿ ಅನೇಕರು ಯೇಸುವಿನ ಹಿಂಬಾಲಕರಾಗಿದ್ದರು. 16 ಈ ಸುಂಕದ ಅಧಿಕಾರಿಗಳೊಂದಿಗೆ ಮತ್ತು ಇತರ ಕೆಟ್ಟ ಜನರೊಂದಿಗೆ ಯೇಸು ಊಟಮಾಡುತ್ತಿರುವುದನ್ನು ಧರ್ಮೋಪದೇಶಕರು ಮತ್ತು ಫರಿಸಾಯರು ನೋಡಿ ಆತನ ಶಿಷ್ಯರಿಗೆ, “ಯೇಸು ಪಾಪಿಗಳೊಂದಿಗೆ ಮತ್ತು ಸುಂಕದ ಅಧಿಕಾರಿಗಳೊಂದಿಗೆ ಏಕೆ ಊಟ ಮಾಡುತ್ತಾನೆ?” ಎಂದು ಕೇಳಿದರು.

17 ಬಳಿಕ ಯೇಸು ಅವರಿಗೆ, “ಆರೋಗ್ಯವಂತರಿಗೆ ವೈದ್ಯನ ಅಗತ್ಯವಿಲ್ಲ, ಆರೋಗ್ಯವಿಲ್ಲದವರಿಗೆ ವೈದ್ಯನ ಅಗತ್ಯವಿದೆ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು.

ಯೇಸು ಇತರ ಧಾರ್ಮಿಕ ನಾಯಕರಂತಲ್ಲ

(ಮತ್ತಾಯ 9:14-17; ಲೂಕ 5:33-39)

18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸ ಮಾಡುತ್ತಿದ್ದರು. ಕೆಲವು ಜನರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಹಿಂಬಾಲಕರು ಉಪವಾಸ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.

19 ಯೇಸು, “ಮದುವೆಯಲ್ಲಿ ಮದುಮಗನು ತಮ್ಮ ಜೊತೆಯಲ್ಲಿ ಇರುವಾಗ ಅವನ ಗೆಳೆಯರು ವ್ಯಸನಪಡುವುದಿಲ್ಲ. ಉಪವಾಸ ಮಾಡುವುದಿಲ್ಲ. 20 ಆದರೆ ಮದುಮಗನು ಅವರನ್ನು ಬಿಟ್ಟುಹೋಗುವ ಕಾಲ ಬರುತ್ತದೆ. ಆಗ ಅವನ ಗೆಳೆಯರು ವ್ಯಸನಪಡುತ್ತಾರೆ, ಉಪವಾಸ ಮಾಡುತ್ತಾರೆ.

21 “ಒಬ್ಬ ವ್ಯಕ್ತಿಯು ತನ್ನ ಹಳೆಯ ಮೇಲಂಗಿಯ ಹರಕಿಗೆ ಹೊಸ ಬಟ್ಟೆಯನ್ನು ತೇಪೆ ಹಚ್ಚುವುದಿಲ್ಲ. ಒಂದುವೇಳೆ ಹಚ್ಚಿದರೆ, ಆ ತೇಪೆಯು ಹಿಂಜಿಕೊಂಡು ಆ ಹರಕನ್ನು ಮತ್ತಷ್ಟು ದೊಡ್ಡದನ್ನಾಗಿ ಮಾಡುತ್ತದೆ. 22 ಹಾಗೆಯೇ, ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಬುದ್ದಲಿಗಳಲ್ಲಿ ಹಾಕಿಡುವುದಿಲ್ಲ. ಏಕೆಂದರೆ ಅದು ಬುದ್ದಲಿಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಹಾಳಾಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ” ಎಂದು ಉತ್ತರಕೊಟ್ಟನು.

ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ

(ಮತ್ತಾಯ 12:1-8; ಲೂಕ 6:1-5)

23 ಸಬ್ಬತ್‌ದಿನದಂದು, ಯೇಸು ತನ್ನ ಶಿಷ್ಯರೊಂದಿಗೆ ಕೆಲವು ಹೊಲಗಳ ಮೂಲಕ ಹಾದುಹೋಗುತ್ತಿದ್ದನು. ಶಿಷ್ಯರು ತಿನ್ನಲು ಕೆಲವು ಕಾಳಿನ ತೆನೆಗಳನ್ನು ಕಿತ್ತುಕೊಂಡರು. 24 ಫರಿಸಾಯರು ಇದನ್ನು ಕಂಡು ಯೇಸುವಿಗೆ, “ನಿನ್ನ ಶಿಷ್ಯರು ಹೀಗೇಕೆ ಮಾಡುತ್ತಾರೆ? ಸಬ್ಬತ್‌ದಿನದಂದು ಹೀಗೆ ಮಾಡುವುದು ಯೆಹೊದ್ಯರ ನಿಯಮಗಳಿಗೆ ವಿರುದ್ಧವಲ್ಲವೆ?” ಎಂದು ಕೇಳಿದರು.

25 ಯೇಸು ಅವರಿಗೆ, “ದಾವೀದನು ಮತ್ತು ಅವನ ಜನರು ಹಸಿದು ಆಹಾರವನ್ನು ಬಯಸಿದಾಗ ಅವನೇನು ಮಾಡಿದನೆಂಬುದನ್ನು ನೀವು ಓದಿದ್ದೀರಿ.[b] 26 ಅದು ಮಹಾಯಾಜಕನಾದ ಅಬಿಯಾತರನ ಕಾಲ. ದಾವೀದನು ದೇವಾಲಯಕ್ಕೆ ಹೋಗಿ, ದೇವರಿಗೆ ಅರ್ಪಿಸಿದ ರೊಟ್ಟಿಯನ್ನು ತಿಂದನು. ಯಾಜಕರು ಮಾತ್ರ ಆ ರೊಟ್ಟಿಯನ್ನು ತಿನ್ನತಕ್ಕದ್ದೆಂದು ಮೋಶೆಯ ಧರ್ಮಶಾಸ್ತ್ರ ಹೇಳುತ್ತದೆ. ದಾವೀದನು ತನ್ನೊಂದಿಗಿದ್ದ ಜನರಿಗೂ ಆ ರೊಟ್ಟಿಯನ್ನು ನೀಡಿದನು” ಎಂದು ಉತ್ತರಕೊಟ್ಟನು.

27 ನಂತರ ಯೇಸು ಫರಿಸಾಯರಿಗೆ, “ಸಬ್ಬತ್‌ದಿನವನ್ನು ನಿರ್ಮಾಣ ಮಾಡಿರುವುದು ಜನರ ಸಹಾಯಕ್ಕಾಗಿ. ಆದರೆ ಜನರನ್ನು ಸೃಷ್ಟಿಸಿರುವುದು ಸಬ್ಬತ್‌ದಿನಕ್ಕೆ ಅವರು ಅಧೀನರಾಗಿರಲಿ ಎಂದಲ್ಲ. 28 ಆದ್ದರಿಂದ ಮನುಷ್ಯಕುಮಾರನು ಸಬ್ಬತ್‌ದಿನಕ್ಕೂ ಉಳಿದೆಲ್ಲ ದಿನಗಳಿಗೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.

ಕೈಬತ್ತಿದವನಿಗೆ ಸ್ವಸ್ಥತೆ

(ಮತ್ತಾಯ 12:9-14; ಲೂಕ 6:6-11)

ಮತ್ತೊಂದು ದಿನದಲ್ಲಿ, ಯೇಸು ಸಭಾಮಂದಿರದೊಳಕ್ಕೆ ಹೋದನು. ಅಲ್ಲಿ ಕೈಬತ್ತಿದ್ದ ಒಬ್ಬ ಮನುಷ್ಯನಿದ್ದನು. ಅಲ್ಲಿದ್ದ ಕೆಲವು ಯೆಹೂದ್ಯರು, ಯೇಸುವನ್ನು ದೂಷಿಸುವುದಕ್ಕಾಗಿ ಆತನಲ್ಲಿ ಏನಾದರೂ ತಪ್ಪನ್ನು ಕಂಡುಹಿಡಿಯಲು ಎದುರು ನೋಡುತ್ತಿದ್ದರು. ಸಬ್ಬತ್‌ದಿನದಂದು ಆ ಮನುಷ್ಯನನ್ನು ಯೇಸು ಗುಣಪಡಿಸಬಹುದೆಂದು ಅವರು ಆತನ ಸಮೀಪದಲ್ಲಿಯೇ ಇದ್ದರು. ಯೇಸು ಕೈಬತ್ತಿದ್ದ ಆ ಮನುಷ್ಯನಿಗೆ, “ಎದ್ದುನಿಲ್ಲು, ಜನರೆಲ್ಲರೂ ನಿನ್ನನ್ನು ನೋಡಲಿ” ಎಂದು ಹೇಳಿದನು.

ನಂತರ ಯೇಸು ಜನರಿಗೆ, “ಸಬ್ಬತ್‌ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು? ಒಳ್ಳೆಯ ಕಾರ್ಯವನ್ನೇ? ಕೆಟ್ಟಕಾರ್ಯವನ್ನೇ? ಒಂದು ಜೀವವನ್ನು ರಕ್ಷಿಸಬೇಕೇ? ಅಥವಾ ನಾಶಪಡಿಸಬೇಕೇ?” ಎಂದು ಕೇಳಿದನು. ಆಗ ಅವರು ಏನೂ ಉತ್ತರ ಕೊಡಲಾರದೆ ಮೌನವಾಗಿದ್ದರು.

ಯೇಸು ಕೋಪಗೊಂಡು ಜನರ ಕಡೆಗೆ ನೋಡಿದನು. ಅವರ ಮೊಂಡುತನವನ್ನು ಕಂಡು ಆತನಿಗೆ ದುಃಖವಾಯಿತು. ಯೇಸು ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ತನ್ನ ಕೈಯನ್ನು ಯೇಸುವಿನತ್ತ ಚಾಚಿದನು. ಕೂಡಲೇ ಅವನ ಕೈ ವಾಸಿಯಾಯಿತು. ಆಗ ಫರಿಸಾಯರು ಹೊರಗೆ ಹೋಗಿ, ಹೆರೋದ್ಯರನ್ನು ಕೂಡಿಕೊಂಡು ಯೇಸುವನ್ನು ಯಾವ ರೀತಿ ಕೊಲ್ಲಬೇಕೆಂದು ಆಲೋಚಿಸಿದರು.

ಯೇಸುವನ್ನು ಹಿಂಬಾಲಿಸಿದ ಜನಸಮೂಹ

ಯೇಸು ತನ್ನ ಶಿಷ್ಯರೊಂದಿಗೆ ಸರೋವರಕ್ಕೆ ಹೊರಟುಹೋದನು. ಗಲಿಲಾಯದ ಅನೇಕ ಜನರು ಆತನನ್ನು ಹಿಂಬಾಲಿಸಿದರು. ಅನೇಕಾನೇಕ ಜನರು ಜುದೇಯದಿಂದ, ಜೆರುಸಲೇಮಿನಿಂದ, ಇದೂಮಾಯದಿಂದ, ಜೋರ್ಡನ್ ನದಿಯ ಆಚೆಗಿರುವ ಪ್ರದೇಶದಿಂದ ಮತ್ತು ಟೈರ್, ಸೀದೋನ್‌ಗಳ ಸುತ್ತಲಿನ ಪ್ರದೇಶಗಳಿಂದ ಬಂದರು. ಯೇಸುವು ಮಾಡುತ್ತಿದ್ದ ಕಾರ್ಯಗಳ ಬಗ್ಗೆ ಅವರು ಕೇಳಿ ಬಂದಿದ್ದರು.

ಯೇಸು ಈ ಜನಸಮೂಹವನ್ನು ನೋಡಿ ಅವರು ತನ್ನ ಮೈಮೇಲೆ ಬಿದ್ದು ನೂಕಬಹುದೆಂದು ತನಗಾಗಿ ಒಂದು ಚಿಕ್ಕ ದೋಣಿಯನ್ನು ತಂದು ಅದನ್ನು ಸಿದ್ದಪಡಿಸುವಂತೆ ತನ್ನ ಶಿಷ್ಯರಿಗೆ ಹೇಳಿದನು. 10 ಯೇಸು ಅನೇಕ ಜನರನ್ನು ಗುಣಪಡಿಸಿದನು. ಆದ್ದರಿಂದ ಕಾಯಿಲೆಯಾಗಿದ್ದ ಜನರೆಲ್ಲರೂ ಆತನನ್ನು ಮುಟ್ಟುವುದಕ್ಕಾಗಿ ಆತನ ಮೇಲೆ ಬೀಳುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಕೆಲವು ಜನರು ಅಲ್ಲಿದ್ದರು. 11 ದೆವ್ವಗಳು ಯೇಸುವನ್ನು ನೋಡಿ, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, “ನೀನು ದೇವಕುಮಾರ” ಎಂದು ಜೋರಾಗಿ ಕೂಗುತ್ತಿದ್ದವು. 12 ಆದರೆ ಯೇಸು ತಾನು ಯಾರೆಂಬುದನ್ನು ಜನರಿಗೆ ತಿಳಿಸಬಾರದೆಂದು ಅವುಗಳಿಗೆ ಖಂಡಿತವಾಗಿ ಆಜ್ಞಾಪಿಸಿದನು.

ಹನ್ನೆರಡು ಮಂದಿ ಅಪೊಸ್ತಲರ ಆಯ್ಕೆ

(ಮತ್ತಾಯ 10:1-4; ಲೂಕ 6:12-16)

13 ನಂತರ ಯೇಸು ಒಂದು ಬೆಟ್ಟದ ಮೇಲಕ್ಕೆ ಹೋದನು. ಯೇಸು ಕೆಲವು ಜನರಿಗೆ ತನ್ನೊಂದಿಗೆ ಬರಲು ಹೇಳಿದನು. ಯೇಸು ಅಪೇಕ್ಷಿಸಿದ ಜನರು ಇವರೇ. ಈ ಜನರು ಯೇಸುವಿನೊಂದಿಗೆ ಮೇಲಕ್ಕೆ ಹೋದರು. 14 ಆತನು ಅವರಲ್ಲಿ ಹನ್ನೆರಡು ಮಂದಿಯನ್ನು ತನ್ನ ಅಪೊಸ್ತಲರನ್ನಾಗಿ ಆರಿಸಿಕೊಂಡನು. ಈ ಹನ್ನೆರಡು ಮಂದಿ ತನ್ನೊಂದಿಗಿರಬೇಕೆಂಬುದು ಮತ್ತು ಉಪದೇಶ ಮಾಡುವುದಕ್ಕಾಗಿ ಅವರನ್ನು ಬೇರೆ ಸ್ಥಳಗಳಿಗೆ ಕಳುಹಿಸಬೇಕೆಂಬುದು 15 ಅಲ್ಲದೆ ದೆವ್ವಗಳಿಂದ ಪೀಡಿತರಾಗಿರುವ ಜನರನ್ನು ಅವುಗಳಿಂದ ಬಿಡಿಸುವುದಕ್ಕೆ ಅವರಿಗೆ ಅಧಿಕಾರ ಕೊಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು. 16 ಯೇಸುವು ಈ ಹನ್ನೆರಡು ಮಂದಿಯನ್ನು ಆರಿಸಿಕೊಂಡನು:

ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರನ್ನಿತ್ತನು),

17 ಜಿಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನ (ಯೇಸು ಅವರಿಗೆ ಬೊವನೆರ್ಗೆಸ್ ಎಂಬ ಹೆಸರನ್ನಿತ್ತನು. ಈ ಹೆಸರಿಗೆ “ಸಿಡಿಲಿನ ಜನರು” ಎಂದರ್ಥ.)

18 ಅಂದ್ರೆಯ,

ಫಿಲಿಪ್ಪ,

ಬಾರ್ತೊಲೊಮಾಯ,

ಮತ್ತಾಯ,

ತೋಮ,

ಅಲ್ಫಾಯನ ಮಗನಾದ ಯಾಕೋಬ,

ತದ್ದಾಯ,

ದೇಶಾಭಿಮಾನಿಯಾದ ಸೀಮೋನ

19 ಮತ್ತು ಇಸ್ಕರಿಯೋತ ಯೂದ. ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿದವನೇ ಯೂದ.

ಯೇಸುವಿಗೆ ದೆವ್ವಹಿಡಿದಿದೆ ಎಂಬ ಆರೋಪ

(ಮತ್ತಾಯ 12:22-32; ಲೂಕ 11:14-23; 12:10)

20 ನಂತರ ಯೇಸು ಮನೆಗೆ ಹೋದನು. ಮತ್ತೆ ಅನೇಕ ಜನರು ಅಲ್ಲಿಗೆ ಸೇರಿಬಂದರು. ಆದ್ದರಿಂದ ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ. 21 ಯೇಸುವಿನ ಕುಟುಂಬದವರಿಗೆ ಈ ವಿಷಯಗಳೆಲ್ಲ ತಿಳಿದವು. ಯೇಸುವಿಗೆ ಹುಚ್ಚು ಹಿಡಿದಿದೆಯೆಂದು ಕೆಲವರು ಹೇಳಿದ್ದರಿಂದ ಆತನ ಕುಟುಂಬದವರು ಆತನನ್ನು ಕರೆದೊಯ್ಯಲು ಅಲ್ಲಿಗೆ ಬಂದರು.

22 ಜೆರುಸಲೇಮಿನ ಧರ್ಮೋಪದೇಶಕರು, “ಇವನೊಳಗೆ ದೆವ್ವಗಳ ಒಡೆಯನಾದ ಬೆಲ್ಜೆಬೂಲನು ವಾಸಿಸುತ್ತಿದ್ದಾನೆ. ದೆವ್ವಗಳಿಂದ ಪೀಡಿತರಾಗಿರುವವರನ್ನು ಇವನು ಬಿಡಿಸುವುದು ದೆವ್ವಗಳ ಒಡೆಯನ ಸಹಾಯದಿಂದಲೇ” ಎಂದು ಹೇಳಿದರು.

23 ಆದ್ದರಿಂದ ಯೇಸು ಜನರನ್ನು ಒಟ್ಟಿಗೆ ಕರೆದು, ಅವರಿಗೆ ಸಾಮ್ಯಗಳ ಮೂಲಕ ಬೋಧಿಸಿ, “ಸೈತಾನನು ತನ್ನ ದೆವ್ವಗಳನ್ನು ಜನರಿಂದ ಬಲವಂತವಾಗಿ ಹೊರಡಿಸುವುದಿಲ್ಲ. 24 ತನ್ನ ವಿರುದ್ಧವಾಗಿ ತಾನೇ ಹೋರಾಡುವ ರಾಜ್ಯ ಉಳಿಯುವುದಿಲ್ಲ. 25 ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ. 26 ಸೈತಾನನು ತನ್ನ ವಿರುದ್ಧವಾಗಿಯೂ ತನ್ನ ಜನರ ವಿರುದ್ಧವಾಗಿಯೂ ತಾನೇ ಹೋರಾಟ ಮಾಡಿದರೆ ಅವನು ಅಂತ್ಯಗೊಳ್ಳುತ್ತಾನೆ.

27 “ಒಬ್ಬ ವ್ಯಕ್ತಿಯು ಬಲಾಢ್ಯನ ಮನೆಗೆ ಪ್ರವೇಶಿಸಿ ಅವನ ವಸ್ತುಗಳನ್ನು ಕದಿಯಲು ಇಚ್ಛಿಸಿದರೆ, ಮೊದಲು ಅವನು ಬಲಾಢ್ಯನನ್ನು ಕಟ್ಟಿಹಾಕಬೇಕು. ಆಗ ಅವನು ಬಲಾಢ್ಯನ ಮನೆಯಿಂದ ವಸ್ತುಗಳನ್ನು ಕದಿಯಲು ಸಾಧ್ಯವಾಗುವುದು.

28 “ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಜನರು ಮಾಡುವ ಎಲ್ಲಾ ಪಾಪಗಳಿಗೂ ದೇವದೂಷಣೆಗಳಿಗೂ ಕ್ಷಮೆ ದೊರೆಯಲು ಸಾಧ್ಯ. 29 ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.

30 “ಇವನಿಗೆ ದೆವ್ವಹಿಡಿದಿದೆ” ಎಂದು ಧರ್ಮೋಪದೇಶಕರು ಆರೋಪಿಸಿದ್ದರಿಂದ ಯೇಸು ಹೀಗೆ ಹೇಳಬೇಕಾಯಿತು.

ಯೇಸುವಿನ ಶಿಷ್ಯರೇ ಆತನ ನಿಜ ಕುಟುಂಬದವರು

(ಮತ್ತಾಯ 12:46-50; ಲೂಕ 8:19-21)

31 ನಂತರ ಯೇಸುವಿನ ತಾಯಿ ಮತ್ತು ಆತನ ಸಹೋದರರು ಅಲ್ಲಿಗೆ ಬಂದರು. ಅವರು ಹೊರಗೆ ನಿಂತುಕೊಂಡು ಯೇಸುವಿಗೆ ಬರಬೇಕೆಂದು ಒಬ್ಬನ ಮೂಲಕ ಹೇಳಿ ಕಳುಹಿಸಿದರು. 32 ಅನೇಕ ಜನರು ಯೇಸುವಿನ ಸುತ್ತಲೂ ಕುಳಿತಿದ್ದರು. ಅವನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾಯುತ್ತಿದ್ದಾರೆ” ಎಂದು ಹೇಳಿದನು.

33 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಕೇಳಿ 34 ತನ್ನ ಸುತ್ತಲೂ ಕುಳಿತಿದ್ದ ಜನರ ಕಡೆಗೆ ನೋಡಿ, “ಈ ಜನರೇ ನನ್ನ ತಾಯಿ ಮತ್ತು ನನ್ನ ಸಹೋದರರು! 35 ದೇವರ ಚಿತ್ತಕ್ಕನುಸಾರವಾಗಿ ನಡೆಯುವ ಜನರೇ ನನ್ನ ಸಹೋದರರು, ಸಹೋದರಿಯರು ಮತ್ತು ತಾಯಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International