Read the Gospels in 40 Days
ವಿವಾಹ ವಿಚ್ಛೇದನದ ಕುರಿತು ಯೇಸುವಿನ ಬೋಧನೆ
(ಮಾರ್ಕ 10:1-12)
19 ಯೇಸು ಈ ಸಂಗತಿಗಳನ್ನು ಹೇಳಿದ ಬಳಿಕ ಗಲಿಲಾಯದಿಂದ ಹೊರಟು ಜೋರ್ಡನ್ ನದಿಯ ಮತ್ತೊಂದು ತೀರದಲ್ಲಿದ್ದ ಜುದೇಯ ಪ್ರಾಂತ್ಯಕ್ಕೆ ಬಂದನು. 2 ಯೇಸುವನ್ನು ಅನೇಕ ಜನರು ಹಿಂಬಾಲಿಸಿದರು. ಯೇಸು ಅಲ್ಲಿ ರೋಗಿಗಳನ್ನು ಗುಣಪಡಿಸಿದನು.
3 ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ತಪ್ಪಿನಲ್ಲಿ ಸಿಕ್ಕಿಸುವುದಕ್ಕಾಗಿ, “ತನ್ನದೇ ಆದ ಯಾವ ಕಾರಣಕ್ಕಾಗಲಿ ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.
4 ಯೇಸು, “ನೀವು ನಿಜವಾಗಿಯೂ ಇದನ್ನು ಪವಿತ್ರಗ್ರಂಥದಲ್ಲಿ ಓದಿದ್ದೀರಿ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಸೃಷ್ಟಿಸಿದನು.’(A) 5 ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’(B) ಎಂದು ಹೇಳಿದನು. 6 ಆದ್ದರಿಂದ ಇವರಿಬ್ಬರು ಇನ್ನು ಮೇಲೆ ಇಬ್ಬರಲ್ಲ, ಒಬ್ಬರೇ. ಅವರಿಬ್ಬರನ್ನು ದೇವರೇ ಒಟ್ಟಿಗೆ ಕೂಡಿಸಿದ್ದಾನೆ. ಆದ್ದರಿಂದ ಯಾವ ಮನುಷ್ಯನೂ ಅವರನ್ನು ಪ್ರತ್ಯೇಕಿಸಬಾರದು” ಎಂದು ಉತ್ತರಕೊಟ್ಟನು.
7 ಫರಿಸಾಯರು, “ಹಾಗಾದರೆ ಒಬ್ಬ ಪುರುಷನು ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದೇಕೆ?” ಎಂದು ಕೇಳಿದರು.[a]
8 ಯೇಸು, “ನೀವು ದೇವರ ಬೋಧನೆಯನ್ನು ಸ್ವೀಕರಿಸದಿದ್ದ ಕಾರಣ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಮೋಶೆ ಅವಕಾಶಕೊಟ್ಟನು. ಆದರೆ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ಆರಂಭದಲ್ಲಿ ಅವಕಾಶ ಇರಲಿಲ್ಲ. 9 ನಾನು ನಿಮಗೆ ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರಿಯಾಗುತ್ತಾನೆ. ಮೊದಲಿನ ಹೆಂಡತಿಯು ಬೇರೊಬ್ಬನೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವನು ಆಕೆಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆ ಆಗಬಹುದು” ಎಂದು ಉತ್ತರಿಸಿದನು.
10 ಶಿಷ್ಯರು ಯೇಸುವಿಗೆ, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡಲು ಇದೊಂದೇ ಕಾರಣವಾಗಿದ್ದರೆ, ಮದುವೆ ಆಗದಿರುವುದೇ ಉತ್ತಮ” ಎಂದರು.
11 ಅದಕ್ಕೆ ಯೇಸು, “ಮದುವೆಯ ವಿಷಯವಾದ ಈ ಸತ್ಯವನ್ನು ಪ್ರತಿಯೊಬ್ಬರೂ ಸ್ವೀಕರಿಸಲು ಸಾಧ್ಯವಿಲ್ಲ. ಇದನ್ನು ಸ್ವೀಕರಿಸಲು ದೇವರು ಯಾರನ್ನು ಸಮರ್ಥರನ್ನಾಗಿ ಮಾಡಿದ್ದಾನೋ ಅವರಿಗೆ ಮಾತ್ರ ಸಾಧ್ಯ. 12 ಕೆಲವರು ಮದುವೆ ಆಗದಿರಲು ಬೇರೆಬೇರೆ ಕಾರಣಗಳಿವೆ. ಹುಟ್ಟಿದಂದಿನಿಂದಲೇ ಕೆಲವರು ನಪುಂಸಕರಾಗಿರುತ್ತಾರೆ. ಇನ್ನು ಕೆಲವರು ಬೇರೆಯವರಿಂದ ನಪುಂಸಕರಾಗಿ ಮಾಡಲ್ಪಡುತ್ತಾರೆ. ಬೇರೆ ಕೆಲವರು ಪರಲೋಕರಾಜ್ಯಕ್ಕೋಸ್ಕರ ಮದುವೆಯನ್ನು ತೊರೆದುಬಿಡುತ್ತಾರೆ. ಆದರೆ ಮದುವೆ ಆಗುವಂಥವನು ಮದುವೆ ವಿಷಯವಾದ ಈ ಬೋಧನೆಯನ್ನು ಸ್ವೀಕರಿಸಬೇಕು” ಎಂದು ಉತ್ತರಕೊಟ್ಟನು.
ಯೇಸುವಿನಿಂದ ಮಕ್ಕಳಿಗೆ ಸ್ವಾಗತ
(ಮಾರ್ಕ 10:13-16; ಲೂಕ 18:15-17)
13 ಬಳಿಕ ಜನರು ಯೇಸುವಿನ ಬಳಿಗೆ ಬಂದು ತಮ್ಮ ಚಿಕ್ಕ ಮಕ್ಕಳನ್ನು ತಂದು ಅವರಿಗಾಗಿ ಪ್ರಾರ್ಥಿಸಬೇಕೆಂದು ಆತನನ್ನು ಬೇಡಿಕೊಂಡರು. ಇದನ್ನು ಕಂಡ ಶಿಷ್ಯರು ಚಿಕ್ಕ ಮಕ್ಕಳನ್ನು ಆತನ ಬಳಿಗೆ ತರಕೂಡದೆಂದು ಗದರಿಸಿದರು. 14 ಆದರೆ ಯೇಸು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿ ಮಾಡಬೇಡಿ. ಏಕೆಂದರೆ ಪರಲೋಕರಾಜ್ಯ ಈ ಚಿಕ್ಕ ಮಕ್ಕಳಂಥವರದೇ” ಎಂದನು. 15 ನಂತರ ಯೇಸು ತನ್ನ ಕೈಗಳನ್ನು ಮಕ್ಕಳ ಮೇಲೆ ಇಟ್ಟು ಆಶೀರ್ವದಿಸಿದನು. ಬಳಿಕ ಅಲ್ಲಿಂದ ಹೊರಟುಹೋದನು.
ಧನಿಕ ಯುವಕನ ಸಮಸ್ಯೆ
(ಮಾರ್ಕ 10:17-31; ಲೂಕ 18:18-30)
16 ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
17 ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು.
18 ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು.
ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. 19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು”(C) ಎಂದು ಉತ್ತರಕೊಟ್ಟನು.
20 ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು.
21 ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
22 ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟುಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು.
23 ಆಗ ಯೇಸು ತನ್ನ ಶಿಷ್ಯರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಐಶ್ವರ್ಯವಂತನು ಪರಲೋಕರಾಜ್ಯಕ್ಕೆ ಪ್ರವೇಶಿಸುವುದು ಬಹಳ ಕಷ್ಟಕರ. 24 ಹೌದು, ಐಶ್ವರ್ಯವಂತನು ದೇವರ ರಾಜ್ಯ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂದು ನಾನು ನಿಮಗೆ ಹೇಳುತ್ತೇನೆ” ಎಂದನು.
25 ಶಿಷ್ಯರು ಇದನ್ನು ಕೇಳಿ ಬಹಳ ಆಶ್ಚರ್ಯದಿಂದ, “ಹಾಗಾದರೆ ಯಾರು ರಕ್ಷಣೆ ಹೊಂದಬಲ್ಲರು?” ಎಂದು ಕೇಳಿದರು.
26 ಯೇಸು ತನ್ನ ಶಿಷ್ಯರ ಕಡೆಗೆ ದೃಷ್ಟಿಸಿ, “ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.
27 ಪೇತ್ರನು ಯೇಸುವಿಗೆ, “ನಾವು ನಮಗಿದ್ದ ಪ್ರತಿಯೊಂದನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು. ನಮಗೆ ಏನು ದೊರಕುವುದು” ಎಂದನು.
28 ಯೇಸು ಶಿಷ್ಯರಿಗೆ ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಹೊಸ ಲೋಕವು ಸೃಷ್ಟಿಸಲ್ಪಟ್ಟಾಗ ಮನುಷ್ಯಕುಮಾರನು ತನ್ನ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುವನು. ನನ್ನನ್ನು ಹಿಂಬಾಲಿಸಿದ ನೀವೆಲ್ಲರೂ ಸಿಂಹಾಸನಗಳ ಮೇಲೆ ಕುಳಿತು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. 29 ನನ್ನನ್ನು ಹಿಂಬಾಲಿಸಲು ತಮ್ಮ ಮನೆಗಳನ್ನು, ಸಹೋದರ ಸಹೋದರಿಯರನ್ನು, ತಂದೆತಾಯಿಗಳನ್ನು, ಮಕ್ಕಳನ್ನು ಇಲ್ಲವೆ ಆಸ್ತಿಯನ್ನು ತ್ಯಜಿಸಿದ ಪ್ರತಿಯೊಬ್ಬರು ತಾವು ಬಿಟ್ಟವುಗಳಿಗಿಂತ ಹೆಚ್ಚಾಗಿ ಪಡೆಯುತ್ತಾರೆ. ಅಲ್ಲದೆ ನಿತ್ಯಜೀವವನ್ನೂ ಹೊಂದಿಕೊಳ್ಳುತ್ತಾರೆ. 30 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.
ಕೂಲಿಯಾಳುಗಳ ಕುರಿತು ಯೇಸು ಹೇಳಿದ ಸಾಮ್ಯ
20 “ಪರಲೋಕರಾಜ್ಯವು ಒಬ್ಬ ದ್ರಾಕ್ಷಿತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಒಂದು ಮುಂಜಾನೆ ಅವನು ತನ್ನ ತೋಟದಲ್ಲಿ ಕೆಲಸ ಮಾಡಲು ಬೇರೆ ಕೂಲಿಯಾಳುಗಳನ್ನು ಕರೆಯುವುದಕ್ಕೆ ಹೊರಟನು. 2 ಒಂದು ದಿನಕ್ಕೆ ಒಬ್ಬ ಕೆಲಸಗಾರನಿಗೆ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಹೇಳಿ ಆ ಕೆಲಸಗಾರರನ್ನು ಅವನು ತೋಟಕ್ಕೆ ಕಳುಹಿಸಿದನು.
3 “ಸುಮಾರು ಒಂಭತ್ತು ಗಂಟೆಗೆ ಯಜಮಾನನು ಪೇಟೆಯ ಸ್ಥಳಕ್ಕೆ ಹೋದನು. ಏನೂ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಕೆಲವರನ್ನು ಅವನು ಅಲ್ಲಿ ಕಂಡನು. 4 ಅವನು ಅವರಿಗೆ, ‘ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡುವುದಾದರೆ ನಿಮ್ಮ ಕೆಲಸಕ್ಕೆ ಯೋಗ್ಯವಾದ ಕೂಲಿಯನ್ನು ಕೊಡುತ್ತೇನೆ’ ಎಂದು ಹೇಳಿದನು. 5 ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು.
“ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು. 6 ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು.
7 “ಅದಕ್ಕೆ ಅವರು, ‘ನಮಗೆ ಯಾರೂ ಕೆಲಸ ಕೊಡಲಿಲ್ಲ’ ಎಂದು ಉತ್ತರಕೊಟ್ಟರು.
“ಆ ಯಜಮಾನನು, ‘ಹಾಗಾದರೆ ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡಿರಿ’ ಎಂದು ಹೇಳಿದನು.
8 “ಅಂದು ಸಾಯಂಕಾಲ, ತೋಟದ ಯಜಮಾನನು ಕೆಲಸಗಾರರನ್ನು ನೋಡಿಕೊಳ್ಳುವವನಿಗೆ, ‘ಕೂಲಿಯಾಳುಗಳನ್ನು ಕರೆದು ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದನು.
9 “ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10 ನಂತರ ಮೊಟ್ಟಮೊದಲು ಗೊತ್ತುಮಾಡಲ್ಪಟ್ಟಿದ್ದವರು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಬೇರೆ ಆಳುಗಳಿಗಿಂತ ತಮಗೆ ಹೆಚ್ಚು ಸಿಕ್ಕುವುದೆಂದು ಅವರು ಆಲೋಚಿಸಿಕೊಂಡಿದ್ದರು. ಆದರೆ ಅವರಿಗೂ ಸಹ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 11 ಅವರು ತಮ್ಮ ಬೆಳ್ಳಿನಾಣ್ಯವನ್ನು ತೆಗೆದುಕೊಂಡಾಗ ತೋಟದ ಯಜಮಾನನ ಬಗ್ಗೆ ಗೊಣಗುಟ್ಟುತ್ತಾ, 12 ‘ಕೊನೆಗೆ ಗೊತ್ತುಮಾಡಲ್ಪಟ್ಟ ಆಳುಗಳು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಇವನು ಅವರಿಗೂ ನಮ್ಮಷ್ಟೇ ಕೊಟ್ಟಿದ್ದಾನೆ. ನಾವಾದರೋ ದಿನವೆಲ್ಲಾ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ’ ಎಂದರು.
13 “ತೋಟದ ಯಜಮಾನನು ಆ ಆಳುಗಳಲ್ಲಿ ಒಬ್ಬನಿಗೆ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ಒಂದು ಬೆಳ್ಳಿನಾಣ್ಯಕ್ಕಾಗಿ ಕೆಲಸ ಮಾಡಲು ಒಪ್ಪಿಕೊಂಡೆಯಲ್ಲವೇ? 14 ಆದ್ದರಿಂದ ನೀನು ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು. ನಾನು ನಿನಗೆ ಎಷ್ಟು ಕೂಲಿ ಕೊಟ್ಟೆನೋ ಅಷ್ಟೇ ಕೂಲಿಯನ್ನು ಕೊನೆಗೆ ಗೊತ್ತುಮಾಡಲ್ಪಟ್ಟವನಿಗೂ ಕೊಡಲು ಇಷ್ಟಪಡುತ್ತೇನೆ. 15 ನನ್ನ ಸ್ವಂತ ಹಣವನ್ನು ನನಗೆ ಇಷ್ಟಬಂದ ಹಾಗೆ ನಾನು ಕೊಡಬಹುದಲ್ಲವೇ? ನಾನು ಅವರಿಗೆ ಒಳ್ಳೆಯದನ್ನು ಮಾಡಿದ್ದಕ್ಕಾಗಿ ನೀನು ಹೊಟ್ಟೆಕಿಚ್ಚುಪಡುವೆಯಾ?’ ಎಂದನು.
16 “ಇದೇಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.”
ತನ್ನ ಮರಣದ ಬಗ್ಗೆ ಯೇಸುವಿನ ಮೂರನೆ ಪ್ರಕಟನೆ
(ಮಾರ್ಕ 10:32-34; ಲೂಕ 18:31-34)
17 ಯೇಸು ಜೆರುಸಲೇಮಿಗೆ ಹೋಗುತ್ತಿದ್ದನು. ಆತನ ಹನ್ನೆರಡು ಮಂದಿ ಶಿಷ್ಯರೂ ಆತನೊಂದಿಗೆ ಇದ್ದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದು, 18 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೆ ಮತ್ತು ಧರ್ಮೋಪದೇಶಕರಿಗೆ ಒಪ್ಪಿಸಿಕೊಡಲಾಗುವುದು. ಅವರು ಆತನನ್ನು ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು. 19 ಅವರು ಮನುಷ್ಯಕುಮಾರನನ್ನು ಅಪಹಾಸ್ಯ ಮಾಡಿ, ಕೊರಡೆಗಳಿಂದ ಹೊಡೆದು, ಶಿಲುಬೆಗೇರಿಸುವರು. ಆದರೆ ಆತನು ಮರಣ ಹೊಂದಿದ ನಂತರ ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುವನು” ಎಂದು ಹೇಳಿದನು.
ತಾಯಿಯೊಬ್ಬಳ ವಿಶೇಷ ಕೋರಿಕೆ
(ಮಾರ್ಕ 10:35-45)
20 ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು.
21 ಯೇಸು, “ನಿನ್ನ ಕೋರಿಕೆ ಏನು?” ಎಂದನು.
ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು.
22 ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು.
ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.
23 ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು.
24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು. 25 ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. 26 ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು. 27 ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು. 28 ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ
(ಮಾರ್ಕ 10:46-52; ಲೂಕ 18:35-43)
29 ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.
31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.
32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.
33 ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.
34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.
Kannada Holy Bible: Easy-to-Read Version. All rights reserved. © 1997 Bible League International