Print Page Options
Previous Prev Day Next DayNext

Read the Gospels in 40 Days

Read through the four Gospels--Matthew, Mark, Luke, and John--in 40 days.
Duration: 40 days
Kannada Holy Bible: Easy-to-Read Version (KERV)
Version
ಲೂಕ 23-24

ರಾಜ್ಯಪಾಲ ಪಿಲಾತನಿಂದ ಯೇಸುವಿನ ವಿಚಾರಣೆ

(ಮತ್ತಾಯ 27:1-2,11-14; ಮಾರ್ಕ 15:1-5; ಯೋಹಾನ 18:28-38)

23 ಬಳಿಕ ಅಲ್ಲಿ ಸೇರಿಬಂದಿದ್ದವರೆಲ್ಲ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು. ಅವರು ಯೇಸುವಿನ ಮೇಲೆ ದೋಷಾರೋಪಣೆ ಮಾಡತೊಡಗಿದರು. ಅವರು ಪಿಲಾತನಿಗೆ, “ಈ ಮನುಷ್ಯನು ನಮ್ಮ ಜನರನ್ನು ತಪ್ಪುದಾರಿಗೆ ನಡೆಸುವ ಸಂಗತಿಗಳನ್ನು ಹೇಳುತ್ತಿದ್ದನು. ನಾವು ಸೀಸರನಿಗೆ ತೆರಿಗೆ ಕೊಡಬಾರದೆಂದೂ ಇವನು ಹೇಳುತ್ತಿದ್ದನು. ಅಲ್ಲದೆ ಇವನು ತನ್ನನ್ನು ಕ್ರಿಸ್ತನೆಂಬ ಅರಸನೆಂದು ಹೇಳಿಕೊಳ್ಳುತ್ತಾನೆ. ಆದ್ದರಿಂದ ನಾವು ಇವನನ್ನು ಬಂಧಿಸಿದೆವು” ಎಂದು ಹೇಳಿದರು.

ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.

ಯೇಸು, “ನೀನೇ ಹೇಳಿರುವೆ!” ಎಂದು ಉತ್ತರಿಸಿದನು.

ಪಿಲಾತನು ಮಹಾಯಾಜಕರಿಗೆ ಮತ್ತು ಜನರಿಗೆ, “ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ” ಎಂದು ಹೇಳಿದನು.

ಅದಕ್ಕೆ ಅವರು, “ಇವನು ಜುದೇಯ ಪ್ರಾಂತ್ಯದಲ್ಲೆಲ್ಲಾ ಉಪದೇಶಿಸಿ ಕ್ರಾಂತಿ ಎಬ್ಬಿಸಿದ್ದಾನೆ. ಗಲಿಲಾಯದಲ್ಲಿ ಪ್ರಾರಂಭಿಸಿದ ಇವನು ಈಗ ಇಲ್ಲಿಗೂ ಬಂದಿದ್ದಾನೆ” ಎಂದು ಪದೇಪದೇ ಹೇಳಿದರು.

ಹೆರೋದನ ಮುಂದೆ ಯೇಸು

ಪಿಲಾತನು ಇದನ್ನು ಕೇಳಿ, “ಇವನು ಗಲಿಲಾಯದವನೋ?” ಎಂದು ಕೇಳಿದನು. ಯೇಸು ಹೆರೋದನ ಅಧಿಕಾರಕ್ಕೊಳಪಟ್ಟವನೆಂದು ಪಿಲಾತನಿಗೆ ತಿಳಿಯಿತು. ಆ ಸಮಯದಲ್ಲಿ ಹೆರೋದನು ಜೆರುಸಲೇಮಿನಲ್ಲಿದ್ದನು. ಆದ್ದರಿಂದ ಪಿಲಾತನು ಯೇಸುವನ್ನು ಅವನ ಬಳಿಗೆ ಕಳುಹಿಸಿದನು.

ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ಬಗ್ಗೆ ಎಲ್ಲವನ್ನೂ ಕೇಳಿದ್ದನು ಮತ್ತು ಬಹಳ ಕಾಲದಿಂದ ಆತನಿಂದ ಒಂದು ಅದ್ಭುತಕಾರ್ಯವನ್ನು ನೋಡಬೇಕೆಂದಿದ್ದನು. ಹೆರೋದನು ಯೇಸುವಿಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. ಆದರೆ ಯೇಸು ಒಂದಕ್ಕೂ ಉತ್ತರ ನೀಡಲಿಲ್ಲ. 10 ಮಹಾಯಾಜಕರು ಮತ್ತು ಧರ್ಮೋಪದೇಶಕರು ಅಲ್ಲಿ ನಿಂತುಕೊಂಡಿದ್ದರು. ಅವರು ಯೇಸುವಿಗೆ ವಿರುದ್ಧವಾಗಿ ಕೂಗುತ್ತಿದ್ದರು. 11 ಆಗ ಹೆರೋದನು ಮತ್ತು ಅವನ ಸೈನಿಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು ಯೇಸುವಿಗೆ ರಾಜನ ಬಟ್ಟೆ ಉಡಿಸಿ ಹಾಸ್ಯ ಮಾಡಿದರು. ಬಳಿಕ ಹೆರೋದನು ಯೇಸುವನ್ನು ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು. 12 ಮೊದಲು ಪಿಲಾತನು ಮತ್ತು ಹೆರೋದನು ವೈರಿಗಳಾಗಿದ್ದರು. ಆದರೆ ಅಂದು ಹೆರೋದನು ಮತ್ತು ಪಿಲಾತನು ಮತ್ತೆ ಸ್ನೇಹಿತರಾದರು.

ಯೇಸುವಿಗೆ ಮರಣದಂಡನೆ

(ಮತ್ತಾಯ 27:15-26; ಮಾರ್ಕ 15:6-15; ಯೋಹಾನ 18:39–19:16)

13 ಪಿಲಾತನು ಮಹಾಯಾಜಕರನ್ನೂ ಯೆಹೂದ್ಯನಾಯಕರನ್ನೂ ಇತರ ಜನರನ್ನೂ ಒಟ್ಟಾಗಿ ಕರೆಸಿ, 14 ಅವರಿಗೆ, “ನೀವು ಈ ಮನುಷ್ಯನನ್ನು (ಯೇಸುವನ್ನು) ನನ್ನ ಬಳಿಗೆ ಕರೆದುಕೊಂಡು ಬಂದಿರಿ. ಇವನು ಜನರನ್ನು ತಪ್ಪುದಾರಿಗೆ ನಡೆಸುತ್ತಿದ್ದಾನೆ ಎಂದು ಹೇಳಿದಿರಿ. ಆದರೆ ನಾನು ನಿಮ್ಮೆಲ್ಲರ ಮುಂದೆ ಇವನನ್ನು ವಿಚಾರಣೆ ಮಾಡಿದೆನು. ಆದರೆ ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ನಿಮ್ಮ ದೋಷಾರೋಪಣೆಗಳು ಇವನಿಗೆ ಅನ್ವಯಿಸುವುದಿಲ್ಲ. 15 ಇದಲ್ಲದೆ ಹೆರೋದನು ಸಹ ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಹೆರೋದನು ಯೇಸುವನ್ನು ನಮ್ಮ ಬಳಿಗೆ ಮತ್ತೆ ಕಳುಹಿಸಿದನು. ನೋಡಿರಿ, ಯೇಸು ಯಾವ ತಪ್ಪನ್ನೂ ಮಾಡಿಲ್ಲ. ಅವನಿಗೆ ಮರಣದಂಡನೆ ಆಗಬಾರದು. 16 ಆದ್ದರಿಂದ ನಾನು ಇವನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು. 17 [a]

18 ಆದರೆ ಜನರೆಲ್ಲರೂ, “ಅವನನ್ನು ಕೊಲ್ಲಿಸು! ಬರಬ್ಬನನ್ನು ಬಿಟ್ಟುಕೊಡು” ಎಂದು ಕೂಗಿದರು. 19 (ಬರಬ್ಬನು ಪಟ್ಟಣದಲ್ಲಿ ದಂಗೆ ಎಬ್ಬಿಸಿದ್ದರಿಂದ ಸೆರೆಮನೆಯಲ್ಲಿದ್ದನು. ಅವನು ಕೆಲವು ಜನರನ್ನು ಕೊಂದಿದ್ದನು.)

20 ಪಿಲಾತನು ಯೇಸುವನ್ನು ಬಿಡಿಸಬೇಕೆಂದಿದ್ದನು. ಆದ್ದರಿಂದ ಯೇಸುವನ್ನು ಬಿಟ್ಟುಬಿಡೋಣ ಎಂದು ಪಿಲಾತನು ಮತ್ತೆ ಅವರಿಗೆ ಹೇಳಿದನು. 21 ಆದರೆ ಅವರು ಮತ್ತೆ, “ಅವನನ್ನು ಕೊಲ್ಲಿಸು! ಅವನನ್ನು ಶಿಲುಬೆಗೇರಿಸು!” ಎಂದು ಕೂಗಿದರು.

22 ಮೂರನೇ ಸಲ ಪಿಲಾತನು ಜನರಿಗೆ, “ಏಕೆ? ಆತನು ಏನು ತಪ್ಪುಮಾಡಿದನು? ಆತನು ತಪ್ಪಿತಸ್ಥನಲ್ಲ. ಆತನನ್ನು ಕೊಲ್ಲಿಸುವುದಕ್ಕೆ ನನಗೆ ಯಾವ ಕಾರಣವೂ ಕಾಣಿಸುವುದಿಲ್ಲ. ಆದ್ದರಿಂದ ಆತನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು.

23 ಆದರೆ ಅವರು ಕೂಗಾಟವನ್ನು ಮುಂದುವರಿಸಿ ಯೇಸುವನ್ನು ಶಿಲುಬೆಗೆ ಹಾಕಿ ಕೊಲ್ಲಿಸಬೇಕೆಂದು ಬಲವಂತಪಡಿಸಿದರು. ಅವರ ಕೂಗಾಟ ಬಹಳ ಹೆಚ್ಚಾದದ್ದರಿಂದ, 24 ಪಿಲಾತನು ಅವರ ಬಯಕೆಯನ್ನು ಈಡೇರಿಸಲು ನಿರ್ಧರಿಸಿದನು. 25 ಬರಬ್ಬನನ್ನು ಬಿಡುಗಡೆ ಮಾಡಬೇಕೆಂದು ಜನರು ಕೇಳಿಕೊಂಡರು. ದಂಗೆ ಎಬ್ಬಿಸಿದ್ದರಿಂದ ಮತ್ತು ಕೊಲೆಮಾಡಿದ್ದರಿಂದ ಬರಬ್ಬನು ಸೆರೆಮನೆಯಲ್ಲಿದ್ದನು. ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊಲ್ಲಿಸುವುದಕ್ಕೆ ಜನರಿಗೆ ಒಪ್ಪಿಸಿದನು. ಜನರ ಬಯಕೆಯೂ ಇದೇ ಆಗಿತ್ತು.

ಯೇಸುವನ್ನು ಶಿಲುಬೆಗೇರಿಸಿದರು

(ಮತ್ತಾಯ 27:32-44; ಮಾರ್ಕ 15:21-32; ಯೋಹಾನ 19:17-19)

26 ಸೈನಿಕರು ಯೇಸುವನ್ನು ಕೊಲ್ಲಲು ಕರೆದೊಯ್ಯುವಾಗ ಹೊಲದಿಂದ ಪಟ್ಟಣದೊಳಗೆ ಬರುತ್ತಿದ್ದ ಸೀಮೋನ ಎಂಬವನನ್ನು ಕಂಡರು. ಸೀಮೋನನು ಸಿರೇನ್ ಪಟ್ಟಣದವನು. ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಯೇಸುವಿನ ಹಿಂದೆ ಬರುವಂತೆ ಸೈನಿಕರು ಸೀಮೋನನನ್ನು ಬಲವಂತ ಮಾಡಿದರು.

27 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ದೊಡ್ಡಗುಂಪಾಗಿ ಸೇರಿದ್ದ ಸ್ತ್ರೀಯರು ಯೇಸುವಿಗಾಗಿ ದುಃಖಪಟ್ಟು ಎದೆ ಬಡಿದುಕೊಂಡು ಗೋಳಾಡುತ್ತಿದ್ದರು. 28 ಆದರೆ ಯೇಸು, ಆ ಸ್ತ್ರೀಯರಿಗೆ, “ಜೆರುಸಲೇಮಿನ ಸ್ತ್ರೀಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ! 29 ‘ಬಂಜೆಯರೇ ಭಾಗ್ಯವಂತರು! ಹೆರದವಳೇ ಹಾಲುಕುಡಿಸದವಳೇ ಭಾಗ್ಯವಂತಳು’ ಎಂದು ಜನರು ಹೇಳುವ ಸಮಯ ಬರುತ್ತದೆ. 30 ಆಗ ಜನರು ಬೆಟ್ಟಕ್ಕೆ, ‘ನಮ್ಮ ಮೇಲೆ ಬೀಳು!’ ಎಂತಲೂ ಗುಡ್ಡಗಳಿಗೆ, ‘ನಮ್ಮನ್ನು ಮುಚ್ಚಿಕೊಳ್ಳಿರಿ!’(A) ಎಂತಲೂ ಕೂಗಿಕೊಳ್ಳುವರು. 31 ಜೀವನ ಸುಖಕರವಾಗಿರುವಾಗ ಜನರು ಈ ರೀತಿ ವರ್ತಿಸಿದರೆ, ಜೀವನ ಕಷ್ಟಕರವಾದಾಗ ಏನು ಮಾಡುವರು?”[b] ಎಂದು ಹೇಳಿದನು.

32 ಯೇಸುವಿನ ಸಂಗಡ ಇಬ್ಬರು ದುಷ್ಕರ್ಮಿಗಳನ್ನು ಕೊಲ್ಲಬೇಕೆಂದು ಅವರು ನಿರ್ಧರಿಸಿದರು. 33 ಯೇಸುವನ್ನು ಮತ್ತು ಇಬ್ಬರು ದುಷ್ಕರ್ಮಿಗಳನ್ನು ಅವರು “ಕಪಾಲ”ವೆಂಬ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸೈನಿಕರು ಯೇಸುವನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗಳಿಗೆ ಜಡಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದರು.

34 ಯೇಸು, “ತಂದೆಯೇ, ಇವರನ್ನು ಕ್ಷಮಿಸು. ಇವರಿಗೆ ತಾವು ಮಾಡುತ್ತಿರುವುದು ತಿಳಿದಿಲ್ಲ” ಎಂದು ಪ್ರಾರ್ಥಿಸಿದನು.

ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳು ಯಾರಿಗೆ ಸೇರಬೇಕೆಂದು ತೀರ್ಮಾನಿಸಿದರು. 35 ಜನರು ನೋಡುತ್ತಾ ಅಲ್ಲಿ ನಿಂತಿದ್ದರು. ಯೆಹೂದ್ಯನಾಯಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು, “ಇವನು ದೇವರಿಂದ ಆರಿಸಲ್ಪಟ್ಟ ಕ್ರಿಸ್ತನಾಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ. ಇವನು ಬೇರೆಯವರನ್ನು ರಕ್ಷಿಸಿದನಲ್ಲವೇ?” ಅಂದರು.

36 ಸೈನಿಕರೂ ಯೇಸುವನ್ನು ಗೇಲಿಮಾಡಿದರು. ಅವರು ಯೇಸುವಿನ ಬಳಿಗೆ ಬಂದು, ಸ್ವಲ್ಪ ಹುಳಿದ್ರಾಕ್ಷಾರಸವನ್ನು ನೀಡಿ, 37 “ನೀನು ಯೆಹೂದ್ಯರ ಅರಸನಾಗಿದ್ದರೆ, ನಿನ್ನನ್ನು ರಕ್ಷಿಸಿಕೊ!” ಎಂದು ಹೇಳಿದರು. 38 (ಶಿಲುಬೆಯ ಮೇಲ್ಭಾಗದಲ್ಲಿ, “ಈತನು ಯೆಹೂದ್ಯರ ಅರಸನು” ಎಂದು ಬರೆಯಲಾಗಿತ್ತು.)

39 ದುಷ್ಕರ್ಮಿಗಳಲ್ಲೊಬ್ಬನು ಯೇಸುವನ್ನು ದೂಷಿಸಿ, “ನೀನು ಕ್ರಿಸ್ತನಲ್ಲವೋ? ಹಾಗಾದರೆ ನಿನ್ನನ್ನು ರಕ್ಷಿಸಿಕೊ! ನಮ್ಮನ್ನೂ ರಕ್ಷಿಸು!” ಅಂದನು.

40 ಆದರೆ ಇನ್ನೊಬ್ಬ ದುಷ್ಕರ್ಮಿಯು ಅವನನ್ನು ಗದರಿಸಿ, “ನೀನು ದೇವರಿಗೆ ಹೆದರಬೇಕು! ನಾವೆಲ್ಲರೂ ಬೇಗನೆ ಸಾಯುವೆವು! 41 ನೀನೂ ನಾನೂ ಅಪರಾಧಿಗಳಾಗಿದ್ದೇವೆ. ನಾವು ತಪ್ಪು ಮಾಡಿದ್ದರಿಂದ ಶಿಕ್ಷಿಸಲ್ಪಡಬೇಕು. ಆದರೆ ಈ ಮನುಷ್ಯನು (ಯೇಸು) ಯಾವ ತಪ್ಪನ್ನೂ ಮಾಡಲಿಲ್ಲ!” ಎಂದು ಹೇಳಿದನು. 42 ಬಳಿಕ ಆ ದುಷ್ಕರ್ಮಿಯು ಆತನಿಗೆ, “ಯೇಸುವೇ ನೀನು ನಿನ್ನ ರಾಜ್ಯವನ್ನು ಸ್ಥಾಪಿಸುವಾಗ ನನ್ನನ್ನು ನೆನಸಿಕೊ!” ಎಂದು ಹೇಳಿದನು.

43 ಆಗ ಯೇಸು ಅವನಿಗೆ, “ಕೇಳು! ನಾನು ಸತ್ಯವನ್ನೇ ಹೇಳುತ್ತೇನೆ. ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದು ಹೇಳಿದನು.

ಯೇಸುವಿನ ಮರಣ

(ಮತ್ತಾಯ 27:45-56; ಮಾರ್ಕ 15:33-41; ಯೋಹಾನ 19:28-30)

44 ಇಷ್ಟರಲ್ಲಿ ಹೆಚ್ಚುಕಡಿಮೆ ಮಧ್ಯಾಹ್ನವಾಗಿತ್ತು. ಆದರೆ ಇಡೀ ಪ್ರದೇಶವು ಮಧ್ಯಾಹ್ನ ಮೂರು ಗಂಟೆಯ ತನಕ ಕತ್ತಲಾಯಿತು. 45 ಸೂರ್ಯನ ಬೆಳಕೇ ಇರಲಿಲ್ಲ! ದೇವಾಲಯದ ಪರದೆಯು ಎರಡು ಭಾಗವಾಗಿ ಹರಿದುಹೋಯಿತು. 46 ಆಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನಗೆ ಒಪ್ಪಿಸುತ್ತೇನೆ”[c] ಎಂದು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.

47 ಅಲ್ಲಿದ್ದ ಶತಾಧಿಪತಿ ನಡೆದದ್ದನ್ನು ನೋಡಿ, “ಈ ಮನುಷ್ಯನು ಒಳ್ಳೆಯವನೆಂದು ನನಗೆ ಗೊತ್ತಿತ್ತು” ಎಂದು ಹೇಳಿ ದೇವರನ್ನು ಸ್ತುತಿಸಿದನು.

48 ಈ ಸಂಗತಿಯನ್ನು ನೋಡುವುದಕ್ಕೆ ಅನೇಕ ಜನರು ಪಟ್ಟಣದ ಹೊರಗೆ ಬಂದಿದ್ದರು. ಜನರು ಇದ್ದನ್ನು ನೋಡಿ, ಬಹಳ ದುಃಖದಿಂದ ಹೊರಟುಹೋದರು. 49 ಯೇಸುವಿನ ಆತ್ಮೀಯ ಸ್ನೇಹಿತರೂ ಅಲ್ಲಿದ್ದರು. ಗಲಿಲಾಯದಿಂದ ಯೇಸುವನ್ನು ಹಿಂಬಾಲಿಸಿದ ಕೆಲವು ಸ್ತ್ರೀಯರೂ ಅಲ್ಲಿದ್ದರು. ಅವರೆಲ್ಲರೂ ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ಈ ಸಂಗತಿಗಳನ್ನು ನೋಡಿದರು.

ಅರಿಮಥಾಯದ ಯೋಸೇಫನು

(ಮತ್ತಾಯ 27:57-61; ಮಾರ್ಕ 15:42-47; ಯೋಹಾನ 19:38-42)

50-51 ಅರಿಮಥಾಯ ಎಂಬುದು ಯೆಹೂದ್ಯರ ಒಂದು ಊರು. ಯೋಸೇಫನು ಇದರ ನಿವಾಸಿ. ಇವನು ಒಳ್ಳೆಯ ಧಾರ್ಮಿಕ ವ್ಯಕ್ತಿಯಾಗಿದ್ದನು. ದೇವರ ರಾಜ್ಯದ ಆಗಮನವನ್ನು ಇವನು ನಿರೀಕ್ಷಿಸಿದ್ದನು. ಯೋಸೇಫನು ಯೆಹೂದ್ಯರ ಹಿರಿಸಭೆಯ ಸದಸ್ಯನಾಗಿದ್ದನು. ಆದರೆ ಬೇರೆ ಯೆಹೂದ್ಯ ನಾಯಕರು ಯೇಸುವನ್ನು ಕೊಲ್ಲಲು ತೀರ್ಮಾನಿಸಿದಾಗ ಇವನು ಅದಕ್ಕೆ ಒಪ್ಪಲಿಲ್ಲ. 52 ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಯೋಸೇಫನು ಪಿಲಾತನನ್ನು ಕೇಳಿಕೊಂಡನು. 53 ಬಳಿಕ ಇವನು ಯೇಸುವಿನ ದೇಹವನ್ನು ಶಿಲುಬೆಯಿಂದ ಇಳಿಸಿ ಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಈ ಸಮಾಧಿಯಲ್ಲಿ ಬೇರೆ ಯಾರನ್ನೂ ಎಂದೂ ಹೂಳಿರಲಿಲ್ಲ. 54 ಅದು ಸಿದ್ಧತೆಯ ದಿನದ[d] ಸಾಯಂಕಾಲವಾಗಿತ್ತು. ಸೂರ್ಯನು ಮುಳುಗಿದಾಗ, ಸಬ್ಬತ್‌ದಿನ ಪ್ರಾರಂಭವಾಗಲಿಕ್ಕಿತ್ತು.

55 ಗಲಿಲಾಯದಿಂದ ಯೇಸುವಿನ ಸಂಗಡ ಬಂದಿದ್ದ ಸ್ತ್ರೀಯರು ಯೋಸೇಫನನ್ನು ಹಿಂಬಾಲಿಸಿದರು. ಅವರು ಸಮಾಧಿಯನ್ನೂ ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳವನ್ನೂ ನೋಡಿದರು. 56 ಬಳಿಕ ಆ ಸ್ತ್ರೀಯರು ಯೇಸುವಿನ ದೇಹಕ್ಕೆ ಹಚ್ಚಲು ಪರಿಮಳದ್ರವ್ಯಗಳನ್ನು ಸಿದ್ಧಮಾಡುವುದಕ್ಕಾಗಿ ಹೊರಟುಹೋದರು.

ಸಬ್ಬತ್ ದಿನದಲ್ಲಿ ಅವರು ವಿಶ್ರಮಿಸಿಕೊಂಡರು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಸಬ್ಬತ್‌ದಿನದಂದು ಜನರೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು.

ಯೇಸುವಿನ ಪುನರುತ್ಥಾನ

(ಮತ್ತಾಯ 28:1-10; ಮಾರ್ಕ 16:1-8; ಯೋಹಾನ 20:1-10)

24 ಭಾನುವಾರ ಮುಂಜಾನೆ ಇನ್ನೂ ಮೊಬ್ಬಿರುವಾಗ ಯೇಸುವಿನ ದೇಹವನ್ನಿಟ್ಟ ಸಮಾಧಿಯ ಬಳಿಗೆ ಆ ಸ್ತ್ರೀಯರು ತಾವು ಸಿದ್ಧಮಾಡಿದ ಪರಿಮಳದ್ರವ್ಯಗಳನ್ನು ತೆಗೆದುಕೊಂಡು ಬಂದರು. ಬಂಡೆ ಉರಳಿಸಲ್ಪಟ್ಟಿರುವುದನ್ನು ಕಂಡ ಅವರು ಒಳಗೆ ಹೋದರು. ಆದರೆ ಪ್ರಭು ಯೇಸುವಿನ ದೇಹವನ್ನು ಅವರು ಕಾಣಲಿಲ್ಲ. ಸ್ತ್ರೀಯರಿಗೆ ಇದು ಅರ್ಥವಾಗದೆ ಆಶ್ಚರ್ಯಪಡುತ್ತಿರಲು, ಹೊಳೆಯುವ ಉಡುಪುಗಳನ್ನು ಧರಿಸಿಕೊಂಡಿದ್ದ ಇಬ್ಬರು (ದೇವದೂತರು) ಅವರ ಬಳಿಯಲ್ಲಿ ನಿಂತರು. ಆ ಸ್ತ್ರೀಯರು ಬಹಳವಾಗಿ ಹೆದರಿ ತಮ್ಮ ಮುಖಗಳನ್ನು ನೆಲದ ಕಡೆಗೆ ಬಗ್ಗಿಸಿಕೊಂಡು ನಿಂತರು. ಆ ಮನುಷ್ಯರು, “ಬದುಕಿರುವ ವ್ಯಕ್ತಿಯನ್ನು ಇಲ್ಲಿ ಹುಡುಕುವುದೇಕೆ? ಇದು ಸತ್ತ ಜನರನ್ನು ಇಡುವ ಸ್ಥಳ! ಯೇಸು ಇಲ್ಲಿಲ್ಲ. ಆತನು ಜೀವಂತವಾಗಿ ಎದ್ದಿದ್ದಾನೆ! ಆತನು ಗಲಿಲಾಯದಲ್ಲಿದ್ದಾಗ ಹೇಳಿದ ವಿಷಯ ಜ್ಞಾಪಕವಿಲ್ಲವೋ? ಮನುಷ್ಯಕುಮಾರನು ಕೆಡುಕರ ವಶಕ್ಕೆ ಒಪ್ಪಿಸಲ್ಪಟ್ಟು; ಶಿಲುಬೆಯ ಮೇಲೆ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು ಎಂದು ಯೇಸು ತಿಳಿಸಲಿಲ್ಲವೇ!” ಎಂದು ಹೇಳಿದರು. ಆಗ ಆ ಸ್ತ್ರೀಯರು ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಂಡರು.

ಆ ಸ್ತ್ರೀಯರು ಸಮಾಧಿಯಿಂದ ಹೊರಟು ಹನ್ನೊಂದು ಮಂದಿ ಅಪೊಸ್ತಲರ ಮತ್ತು ಇತರ ಹಿಂಬಾಲಕರ ಬಳಿಗೆ ಹೋದರು. ಆ ಸ್ತ್ರೀಯರು ಸಮಾಧಿಯ ಬಳಿ ನಡೆದ ಸಂಗತಿಗಳನ್ನೆಲ್ಲಾ ಅವರಿಗೆ ಹೇಳಿದರು. 10 ಈ ಸ್ತ್ರೀಯರು ಯಾರೆಂದರೆ: ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಮತ್ತು ಬೇರೆ ಕೆಲವು ಸ್ತ್ರೀಯರು. ನಡೆದ ಪ್ರತಿಯೊಂದನ್ನೂ ಈ ಸ್ತ್ರೀಯರು ಅಪೊಸ್ತಲರಿಗೆ ತಿಳಿಸಿದರು. 11 ಆದರೆ ಅಪೊಸ್ತಲರು ನಂಬಲಿಲ್ಲ. ಅವರಿಗೆ ಅದು ಹರಟೆಮಾತಾಗಿ ತೋರಿತು. 12 ಆದರೆ ಪೇತ್ರನು ಎದ್ದು ಇದು ನಿಜವೇ ಎಂದು ನೋಡಲು ಸಮಾಧಿಗೆ ಓಡಿಹೋದನು. ಅವನು ಒಳಗೆ ಹೋಗಿ ಬಗ್ಗಿ ನೋಡಿದಾಗ ಯೇಸುವಿನ ದೇಹಕ್ಕೆ ಸುತ್ತಿದ್ದ ಬಟ್ಟೆಯನ್ನು ಮಾತ್ರ ನೋಡಿದನು. ಕೇವಲ ಬಟ್ಟೆಯು ಅಲ್ಲಿ ಬಿದ್ದಿತ್ತು. ನಡೆದ ಈ ಸಂಗತಿಯ ಬಗ್ಗೆ ಪೇತ್ರನು ಆಶ್ಚರ್ಯಪಡುತ್ತಾ ಹೊರಟುಹೋದನು.

ಎಮ್ಮಾಹುವಿನ ದಾರಿಯಲ್ಲಿ

(ಮಾರ್ಕ 16:12-13)

13 ಅದೇ ದಿನ ಯೇಸುವಿನ ಶಿಷ್ಯರಲ್ಲಿ ಇಬ್ಬರು ಎಮ್ಮಾಹು ಎಂಬ ಪಟ್ಟಣಕ್ಕೆ ಹೋಗುತ್ತಿದ್ದರು. ಅದು ಜೆರುಸಲೇಮಿನಿಂದ ಏಳು ಮೈಲಿ ದೂರದಲ್ಲಿತ್ತು. 14 ನಡೆದ ಪ್ರತಿಯೊಂದು ಸಂಗತಿಯ ಕುರಿತು ಅವರು ಮಾತಾಡುತ್ತಿದ್ದರು. 15 ಆಗ ಯೇಸು ತಾನೇ ಅವರ ಹತ್ತಿರಕ್ಕೆ ಬಂದು, ಅವರ ಜೊತೆಯಲ್ಲಿ ಹೋದನು. 16 (ಆದರೆ ಅವರಿಗೆ ಆತನ ಗುರುತು ಸಿಕ್ಕಲಿಲ್ಲ.) 17 ಯೇಸು ಅವರಿಗೆ, “ನೀವು ಯಾವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.

ಅವರಿಬ್ಬರು ಅಲ್ಲೇ ನಿಂತರು. ಅವರ ಮುಖಗಳು ಬಹಳ ದುಃಖದಿಂದ ತುಂಬಿಹೋಗಿದ್ದವು. 18 ಅವರಲ್ಲಿ ಕ್ಲೆಯೋಫನೆಂಬುವನು, “ಇತ್ತೀಚೆಗೆ ಜೆರುಸಲೇಮಿನಲ್ಲಿ ನಡೆದ ಸಂಗತಿಯನ್ನು ತಿಳಿಯದಿರುವ ವ್ಯಕ್ತಿ ಎಂದರೆ ನೀನೊಬ್ಬನೇ ಇರಬೇಕು” ಎಂದು ಉತ್ತರಿಸಿದನು.

19 ಯೇಸು ಅವರಿಗೆ, “ನೀವು ಯಾವುದರ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.

ಅವರು ಆತನಿಗೆ, “ನಜರೇತಿನ ಯೇಸುವಿನ ಬಗ್ಗೆ. ಆತನು ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಮಹಾಪ್ರವಾದಿಯಾಗಿದ್ದನು. ಆತನು ಅನೇಕ ಸಂಗತಿಗಳನ್ನು ಹೇಳಿದನು ಮತ್ತು ಅದ್ಭುತಕಾರ್ಯಗಳನ್ನು ಮಾಡಿದನು. 20 ನಮ್ಮ ನಾಯಕರು ಮತ್ತು ಮಹಾಯಾಜಕರು ಆತನಿಗೆ ಮರಣದಂಡನೆ ವಿಧಿಸಲು ಒಪ್ಪಿಸಿಕೊಟ್ಟು ಶಿಲುಬೆಗೆ ಜಡಿಸಿದರು. 21 ಯೇಸುವೇ ಇಸ್ರೇಲ್ ಜನರನ್ನು (ಯೆಹೂದ್ಯರನ್ನು) ಬಿಡಿಸುತ್ತಾನೆಂದು ನಾವು ನಿರೀಕ್ಷಿಸಿಕೊಂಡಿದ್ದೆವು. ಆದರೆ ಇದೆಲ್ಲಾ ನಡೆದುಹೋಯಿತು.

“ಈಗ ಮತ್ತೊಂದು ಸಂಗತಿಯಾಗಿದೆ. ಈಗಾಗಲೇ ಆತನು ಸತ್ತು ಮೂರು ದಿನಗಳಾದವು. 22 ಇಂದು ನಮ್ಮ ಕೆಲವು ಸ್ತ್ರೀಯರು ಆಶ್ಚರ್ಯಕರವಾದ ಸಂಗತಿಗಳನ್ನು ಹೇಳಿದರು. ಮುಂಜಾನೆ ಬೆಳಗಾಗುವಾಗ, ಯೇಸುವಿನ ದೇಹವನ್ನು ಇಟ್ಟಿದ್ದ ಸಮಾಧಿಯ ಬಳಿಗೆ ಆ ಸ್ತ್ರೀಯರು ಹೋಗಿದ್ದರು. 23 ಆದರೆ ಅವರು ಆತನ ದೇಹವನ್ನು ಅಲ್ಲಿ ಕಾಣಲಿಲ್ಲ. ಆ ಸ್ತ್ರೀಯರು ಹಿಂತಿರುಗಿ ಬಂದು ತಮಗೆ ದೇವದೂತರಿಬ್ಬರ ದರ್ಶನವಾಯಿತೆಂದೂ ಯೇಸು ಬದುಕಿದ್ದಾನೆಂದೂ ತಮಗೆ ಇದನ್ನು ದೇವದೂತರೇ ತಿಳಿಸಿದರೆಂದೂ ನಮಗೆ ಹೇಳಿದರು. 24 ಆದ್ದರಿಂದ ನಮ್ಮ ಗುಂಪಿನಲ್ಲಿದ್ದ ಕೆಲವರು ಸಹ ಸಮಾಧಿಯ ಬಳಿಗೆ ಹೋದರು. ಸ್ತ್ರೀಯರು ಹೇಳಿದ ಹಾಗೆಯೇ ಸಮಾಧಿಯು ಬರಿದಾಗಿತ್ತು. ನಾವು ಸುತ್ತಮುತ್ತ ನೋಡಿದೆವು. ಆದರೆ ನಮ್ಮಲ್ಲಿ ಯಾರಿಗೂ ಆತನು (ಯೇಸು) ಕಾಣಲಿಲ್ಲ” ಎಂದು ಹೇಳಿದರು.

25 ಆಗ ಯೇಸು ಅವರಿಗೆ, “ನೀವು ಬುದ್ಧಿಹೀನರು ಮತ್ತು ಸತ್ಯವನ್ನು ಗ್ರಹಿಸುವುದರಲ್ಲಿ ಮಂದಗತಿಗಳು! ಪ್ರವಾದಿಗಳು ಹೇಳಿದ ಪ್ರತಿಯೊಂದನ್ನೂ ನೀವು ನಂಬಬೇಕು. 26 ಕ್ರಿಸ್ತನು ತನ್ನ ಮಹಿಮೆಯನ್ನು ಪ್ರವೇಶಿಸುವ ಮೊದಲು ಇಂಥ ಶ್ರಮೆಗಳನ್ನು ಅನುಭವಿಸಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ” ಅಂದನು. 27 ಬಳಿಕ ಯೇಸು ತನ್ನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದನ್ನೂ ವಿವರಿಸತೊಡಗಿದನು. ಯೇಸುವು ಮೋಶೆಯ ಗ್ರಂಥಗಳಿಂದ ಪ್ರಾರಂಭಿಸಿ ಪ್ರವಾದಿಗಳು ತನ್ನ ಬಗ್ಗೆ ಹೇಳಿದ ವಿಷಯಗಳ ಕುರಿತು ವಿವರಿಸಿದನು.

28 ಅವರು ಎಮ್ಮಾಹು ಊರಿನ ಹತ್ತಿರಕ್ಕೆ ಬಂದಾಗ ಆತನು ತಾನು ಅಲ್ಲಿ ಇಳಿದುಕೊಳ್ಳದವನಂತೆ ನಟಿಸಿದನು. 29 ಆದರೆ ಅವರು ಆತನಿಗೆ, “ಈಗ ಹೊತ್ತಾಯಿತು, ರಾತ್ರಿಯಾಗುತ್ತಾ ಬಂದಿದೆ. ನಮ್ಮೊಂದಿಗೆ ಇರು” ಎಂದು ಬೇಡಿಕೊಂಡರು. ಆದ್ದರಿಂದ ಆತನು ಅವರೊಂದಿಗಿರಲು ಊರೊಳಗೆ ಹೋದನು.

30 ಯೇಸು ಅವರ ಸಂಗಡ ಕುಳಿತುಕೊಂಡು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ಆಹಾರಕ್ಕಾಗಿ ದೇವರಿಗೆ ಸೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಟ್ಟನು. 31 ಆಗ ಅವರು ಯೇಸುವನ್ನು ಗುರುತಿಸಿದರು. ಆದರೆ ಆತನೇ ಯೇಸುವೆಂದು ಅವರು ತಿಳಿದಾಕ್ಷಣವೇ ಆತನು ಅವರ ಕಣ್ಣಿಗೆ ಮಾಯವಾದನು. 32 ಅವರಿಬ್ಬರು, “ಯೇಸು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗ ನಮ್ಮಲ್ಲಿ ಬೆಂಕಿ ಉರಿದಂತಾಯಿತಲ್ಲವೇ? ಪವಿತ್ರ ಗ್ರಂಥದ ನಿಜ ಅರ್ಥವನ್ನು ಆತನು ವಿವರಿಸಿದಾಗ, ಬಹಳ ರೋಮಾಂಚಕಾರಿಯಾಗಿರಲಿಲ್ಲವೇ?” ಎಂದು ಮಾತಾಡಿಕೊಂಡರು.

33 ಆ ಕೂಡಲೇ ಅವರಿಬ್ಬರೂ ಎದ್ದು ಜೆರುಸಲೇಮಿಗೆ ಹಿಂತಿರುಗಿ ಹೋದರು. ಜೆರುಲೇಮಿನಲ್ಲಿ ಯೇಸುವಿನ ಶಿಷ್ಯರು ಒಟ್ಟಾಗಿ ಸೇರಿಬಂದಿದ್ದರು. ಹನ್ನೊಂದು ಮಂದಿ ಅಪೊಸ್ತಲರು ಮತ್ತು ಅವರ ಸಂಗಡ ಇದ್ದ ಆ ಜನರು, 34 “ಪ್ರಭುವು (ಯೇಸು) ಸತ್ತವರೊಳಗಿಂದ ನಿಜವಾಗಿ ಎದ್ದಿದ್ದಾನೆ! ಆತನು ಸೀಮೋನನಿಗೆ (ಪೇತ್ರ) ಕಾಣಿಸಿಕೊಂಡನು” ಎಂದು ಹೇಳಿದರು.

35 ಆಗ ಆ ಇಬ್ಬರು ದಾರಿಯಲ್ಲಿ ನಡೆದ ಸಂಗತಿಗಳನ್ನು ತಿಳಿಸಿದರು. ಆತನು ರೊಟ್ಟಿ ಮುರಿದಾಗ ತಾವು ಆತನನ್ನು ಗುರುತಿಸಿದ್ದಾಗಿ ಅವರು ಹೇಳಿದರು.

ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು

(ಮತ್ತಾಯ 28:16-20; ಮಾರ್ಕ 16:14-18; ಯೋಹಾನ 20:19-23; ಅ.ಕಾ. 1:6-8)

36 ಅವರಿಬ್ಬರೂ ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಯೇಸುವು ಶಿಷ್ಯರ ಗುಂಪಿನ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಾಗಲಿ” ಅಂದನು.

37 ಆಗ ಶಿಷ್ಯರು ಬೆರಗಾದರು. ಅವರಿಗೆ ಭಯವಾಯಿತು. ಅದು ಭೂತವೇ ಇರಬೇಕೆಂದು ಅವರು ಭಾವಿಸಿದರು. 38 ಆದರೆ ಯೇಸು, “ನೀವು ಏಕೆ ಗಲಿಬಿಲಿಗೊಂಡಿದ್ದೀರಿ? ನೀವು ಕಣ್ಣಾರೆ ಕಂಡರೂ ಏಕೆ ಸಂಶಯಪಡುತ್ತೀರಿ? 39 ನನ್ನ ಕೈಗಳನ್ನು ಮತ್ತು ಪಾದಗಳನ್ನು ನೋಡಿರಿ. ನಾನೇ ಅಲ್ಲವೇ! ನನ್ನನ್ನು ಮುಟ್ಟಿರಿ. ನನ್ನ ಈ ಜೀವಂತ ದೇಹವನ್ನು ನೀವೇ ನೋಡಿರಿ. ಭೂತಕ್ಕೆ ಈ ರೀತಿಯ ದೇಹವಿರುವುದಿಲ್ಲ” ಅಂದನು.

40 ಯೇಸು ಅವರಿಗೆ ಇದನ್ನು ಹೇಳಿದ ನಂತರ, ತನ್ನ ಕೈಗಳಲ್ಲಿ ಮತ್ತು ಪಾದಗಳಲ್ಲಿರುವ ಗಾಯದ ಗುರುತುಗಳನ್ನು ತೋರಿಸಿದನು. 41 ಶಿಷ್ಯರು ಅತ್ಯಾಶ್ಚರ್ಯಗೊಂಡರು ಮತ್ತು ಯೇಸುವನ್ನು ಜೀವಂತವಾಗಿ ಕಂಡು ಅತ್ಯಂತ ಸಂತೋಷಪಟ್ಟರು. ಆದರೆ ಅವರಿಗಿನ್ನೂ ನಂಬಲಾಗಲಿಲ್ಲ. ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದನು. 42 ಅವರು ಸುಟ್ಟ ಮೀನಿನ ತುಂಡನ್ನು ಕೊಟ್ಟರು. 43 ಶಿಷ್ಯರ ಕಣ್ಣೆದುರಿನಲ್ಲಿಯೇ, ಯೇಸು ಆ ಮೀನನ್ನು ತೆಗೆದುಕೊಂಡು ತಿಂದನು.

44 ಯೇಸು ಅವರಿಗೆ, “ನಾನು ಮೊದಲು ನಿಮ್ಮ ಸಂಗಡ ಇದ್ದುದನ್ನು ಜ್ಞಾಪಕಮಾಡಿಕೊಳ್ಳಿರಿ. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವಾದಿಗಳ ಗ್ರಂಥಗಳಲ್ಲಿ, ಕೀರ್ತನೆಗಳಲ್ಲಿ ಬರೆದಿರುವ ಪ್ರತಿಯೊಂದು ಸಂಗತಿಯೂ ನೆರವೇರಬೇಕಾಗಿದೆ ಎಂದು ನಾನು ಹೇಳಿದೆನು” ಅಂದನು.

45 ಬಳಿಕ ಯೇಸು ಪವಿತ್ರ ಗ್ರಂಥವನ್ನು ತನ್ನ ಶಿಷ್ಯರಿಗೆ ವಿವರಿಸಿದನು. ತನ್ನ ಬಗ್ಗೆ ಬರೆದಿರುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದನು. 46 ಬಳಿಕ ಯೇಸು ಅವರಿಗೆ, “ಕ್ರಿಸ್ತನು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎದ್ದುಬರುವನು ಎಂದು ಬರೆಯಲ್ಪಟ್ಟಿದೆ. 47-48 ಈ ಸಂಗತಿಗಳು ನೆರವೇರುವುದನ್ನು ನೀವು ನೋಡಿದಿರಿ. ನೀವೇ ಇದಕ್ಕೆ ಸಾಕ್ಷಿಗಳು. ನೀವು ಜನರ ಬಳಿಗೆ ಹೋಗಿ, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವವರಿಗೆ ಪಾಪಕ್ಷಮೆಯಾಗುತ್ತದೆ ಎಂದು ತಿಳಿಸಿರಿ. ನೀವು ಈ ಸುವಾರ್ತೆಯನ್ನು ಜೆರುಸಲೇಮಿನಲ್ಲಿ ಪ್ರಾರಂಭಿಸಿ ಲೋಕದ ಜನರೆಲ್ಲರಿಗೂ ನನ್ನ ಹೆಸರಿನಲ್ಲಿ ತಿಳಿಸಬೇಕು. 49 ಕೇಳಿರಿ! ನನ್ನ ತಂದೆ ನಿಮಗೆ ವಾಗ್ದಾನ ಮಾಡಿದ್ದನ್ನು ನಾನು ನಿಮಗೆ ಕಳುಹಿಸಿಕೊಡುತ್ತೇನೆ. ಆದರೆ ನೀವು ಪರಲೋಕದಿಂದ ಆ ಶಕ್ತಿಯನ್ನು ಪಡೆಯುವ ತನಕ ಜೆರುಸಲೇಮಿನಲ್ಲೇ ಕಾದುಕೊಂಡಿರಿ” ಅಂದನು.

ಯೇಸುವಿನ ಪರಲೋಕಾರೋಹಣ

(ಮಾರ್ಕ 16:19-20; ಅ.ಕಾ. 1:9-11)

50 ಯೇಸು ತನ್ನ ಶಿಷ್ಯರನ್ನು ಜೆರುಸಲೇಮಿನ ಹೊರಗೆ ಬೆಥಾನಿಯದ ಸಮೀಪಕ್ಕೆ ಕರೆದುಕೊಂಡು ಹೋದನು. ಯೇಸು ತನ್ನ ಕೈಗಳನ್ನು ಎತ್ತಿ ಶಿಷ್ಯರನ್ನು ಆಶೀರ್ವದಿಸಿದನು. 51 ಯೇಸು ಅವರನ್ನು ಆಶೀರ್ವದಿಸುತ್ತಿದ್ದಾಗ ಅವರಿಂದ ಬೇರ್ಪಟ್ಟು ಪರಲೋಕಕ್ಕೆ ಎತ್ತಲ್ಪಟ್ಟನು. 52 ಶಿಷ್ಯರು ಅಲ್ಲಿ ಆತನನ್ನು ಆರಾಧಿಸಿದರು. ಬಳಿಕ ಅವರು ಪಟ್ಟಣಕ್ಕೆ ಹಿಂತಿರುಗಿ ಹೋದರು. ಅವರು ಬಹಳ ಸಂತೋಷಗೊಂಡಿದ್ದರು. 53 ಅವರು ಯಾವಾಗಲೂ ದೇವಾಲಯದಲ್ಲಿ ದೇವರನ್ನು ಸ್ತುತಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International