Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ಲೂಕ 24

ಯೇಸುವಿನ ಪುನರುತ್ಥಾನ

(ಮತ್ತಾಯ 28:1-10; ಮಾರ್ಕ 16:1-8; ಯೋಹಾನ 20:1-10)

24 ಭಾನುವಾರ ಮುಂಜಾನೆ ಇನ್ನೂ ಮೊಬ್ಬಿರುವಾಗ ಯೇಸುವಿನ ದೇಹವನ್ನಿಟ್ಟ ಸಮಾಧಿಯ ಬಳಿಗೆ ಆ ಸ್ತ್ರೀಯರು ತಾವು ಸಿದ್ಧಮಾಡಿದ ಪರಿಮಳದ್ರವ್ಯಗಳನ್ನು ತೆಗೆದುಕೊಂಡು ಬಂದರು. ಬಂಡೆ ಉರಳಿಸಲ್ಪಟ್ಟಿರುವುದನ್ನು ಕಂಡ ಅವರು ಒಳಗೆ ಹೋದರು. ಆದರೆ ಪ್ರಭು ಯೇಸುವಿನ ದೇಹವನ್ನು ಅವರು ಕಾಣಲಿಲ್ಲ. ಸ್ತ್ರೀಯರಿಗೆ ಇದು ಅರ್ಥವಾಗದೆ ಆಶ್ಚರ್ಯಪಡುತ್ತಿರಲು, ಹೊಳೆಯುವ ಉಡುಪುಗಳನ್ನು ಧರಿಸಿಕೊಂಡಿದ್ದ ಇಬ್ಬರು (ದೇವದೂತರು) ಅವರ ಬಳಿಯಲ್ಲಿ ನಿಂತರು. ಆ ಸ್ತ್ರೀಯರು ಬಹಳವಾಗಿ ಹೆದರಿ ತಮ್ಮ ಮುಖಗಳನ್ನು ನೆಲದ ಕಡೆಗೆ ಬಗ್ಗಿಸಿಕೊಂಡು ನಿಂತರು. ಆ ಮನುಷ್ಯರು, “ಬದುಕಿರುವ ವ್ಯಕ್ತಿಯನ್ನು ಇಲ್ಲಿ ಹುಡುಕುವುದೇಕೆ? ಇದು ಸತ್ತ ಜನರನ್ನು ಇಡುವ ಸ್ಥಳ! ಯೇಸು ಇಲ್ಲಿಲ್ಲ. ಆತನು ಜೀವಂತವಾಗಿ ಎದ್ದಿದ್ದಾನೆ! ಆತನು ಗಲಿಲಾಯದಲ್ಲಿದ್ದಾಗ ಹೇಳಿದ ವಿಷಯ ಜ್ಞಾಪಕವಿಲ್ಲವೋ? ಮನುಷ್ಯಕುಮಾರನು ಕೆಡುಕರ ವಶಕ್ಕೆ ಒಪ್ಪಿಸಲ್ಪಟ್ಟು; ಶಿಲುಬೆಯ ಮೇಲೆ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು ಎಂದು ಯೇಸು ತಿಳಿಸಲಿಲ್ಲವೇ!” ಎಂದು ಹೇಳಿದರು. ಆಗ ಆ ಸ್ತ್ರೀಯರು ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಂಡರು.

ಆ ಸ್ತ್ರೀಯರು ಸಮಾಧಿಯಿಂದ ಹೊರಟು ಹನ್ನೊಂದು ಮಂದಿ ಅಪೊಸ್ತಲರ ಮತ್ತು ಇತರ ಹಿಂಬಾಲಕರ ಬಳಿಗೆ ಹೋದರು. ಆ ಸ್ತ್ರೀಯರು ಸಮಾಧಿಯ ಬಳಿ ನಡೆದ ಸಂಗತಿಗಳನ್ನೆಲ್ಲಾ ಅವರಿಗೆ ಹೇಳಿದರು. 10 ಈ ಸ್ತ್ರೀಯರು ಯಾರೆಂದರೆ: ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಮತ್ತು ಬೇರೆ ಕೆಲವು ಸ್ತ್ರೀಯರು. ನಡೆದ ಪ್ರತಿಯೊಂದನ್ನೂ ಈ ಸ್ತ್ರೀಯರು ಅಪೊಸ್ತಲರಿಗೆ ತಿಳಿಸಿದರು. 11 ಆದರೆ ಅಪೊಸ್ತಲರು ನಂಬಲಿಲ್ಲ. ಅವರಿಗೆ ಅದು ಹರಟೆಮಾತಾಗಿ ತೋರಿತು. 12 ಆದರೆ ಪೇತ್ರನು ಎದ್ದು ಇದು ನಿಜವೇ ಎಂದು ನೋಡಲು ಸಮಾಧಿಗೆ ಓಡಿಹೋದನು. ಅವನು ಒಳಗೆ ಹೋಗಿ ಬಗ್ಗಿ ನೋಡಿದಾಗ ಯೇಸುವಿನ ದೇಹಕ್ಕೆ ಸುತ್ತಿದ್ದ ಬಟ್ಟೆಯನ್ನು ಮಾತ್ರ ನೋಡಿದನು. ಕೇವಲ ಬಟ್ಟೆಯು ಅಲ್ಲಿ ಬಿದ್ದಿತ್ತು. ನಡೆದ ಈ ಸಂಗತಿಯ ಬಗ್ಗೆ ಪೇತ್ರನು ಆಶ್ಚರ್ಯಪಡುತ್ತಾ ಹೊರಟುಹೋದನು.

ಎಮ್ಮಾಹುವಿನ ದಾರಿಯಲ್ಲಿ

(ಮಾರ್ಕ 16:12-13)

13 ಅದೇ ದಿನ ಯೇಸುವಿನ ಶಿಷ್ಯರಲ್ಲಿ ಇಬ್ಬರು ಎಮ್ಮಾಹು ಎಂಬ ಪಟ್ಟಣಕ್ಕೆ ಹೋಗುತ್ತಿದ್ದರು. ಅದು ಜೆರುಸಲೇಮಿನಿಂದ ಏಳು ಮೈಲಿ ದೂರದಲ್ಲಿತ್ತು. 14 ನಡೆದ ಪ್ರತಿಯೊಂದು ಸಂಗತಿಯ ಕುರಿತು ಅವರು ಮಾತಾಡುತ್ತಿದ್ದರು. 15 ಆಗ ಯೇಸು ತಾನೇ ಅವರ ಹತ್ತಿರಕ್ಕೆ ಬಂದು, ಅವರ ಜೊತೆಯಲ್ಲಿ ಹೋದನು. 16 (ಆದರೆ ಅವರಿಗೆ ಆತನ ಗುರುತು ಸಿಕ್ಕಲಿಲ್ಲ.) 17 ಯೇಸು ಅವರಿಗೆ, “ನೀವು ಯಾವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.

ಅವರಿಬ್ಬರು ಅಲ್ಲೇ ನಿಂತರು. ಅವರ ಮುಖಗಳು ಬಹಳ ದುಃಖದಿಂದ ತುಂಬಿಹೋಗಿದ್ದವು. 18 ಅವರಲ್ಲಿ ಕ್ಲೆಯೋಫನೆಂಬುವನು, “ಇತ್ತೀಚೆಗೆ ಜೆರುಸಲೇಮಿನಲ್ಲಿ ನಡೆದ ಸಂಗತಿಯನ್ನು ತಿಳಿಯದಿರುವ ವ್ಯಕ್ತಿ ಎಂದರೆ ನೀನೊಬ್ಬನೇ ಇರಬೇಕು” ಎಂದು ಉತ್ತರಿಸಿದನು.

19 ಯೇಸು ಅವರಿಗೆ, “ನೀವು ಯಾವುದರ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.

ಅವರು ಆತನಿಗೆ, “ನಜರೇತಿನ ಯೇಸುವಿನ ಬಗ್ಗೆ. ಆತನು ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಮಹಾಪ್ರವಾದಿಯಾಗಿದ್ದನು. ಆತನು ಅನೇಕ ಸಂಗತಿಗಳನ್ನು ಹೇಳಿದನು ಮತ್ತು ಅದ್ಭುತಕಾರ್ಯಗಳನ್ನು ಮಾಡಿದನು. 20 ನಮ್ಮ ನಾಯಕರು ಮತ್ತು ಮಹಾಯಾಜಕರು ಆತನಿಗೆ ಮರಣದಂಡನೆ ವಿಧಿಸಲು ಒಪ್ಪಿಸಿಕೊಟ್ಟು ಶಿಲುಬೆಗೆ ಜಡಿಸಿದರು. 21 ಯೇಸುವೇ ಇಸ್ರೇಲ್ ಜನರನ್ನು (ಯೆಹೂದ್ಯರನ್ನು) ಬಿಡಿಸುತ್ತಾನೆಂದು ನಾವು ನಿರೀಕ್ಷಿಸಿಕೊಂಡಿದ್ದೆವು. ಆದರೆ ಇದೆಲ್ಲಾ ನಡೆದುಹೋಯಿತು.

“ಈಗ ಮತ್ತೊಂದು ಸಂಗತಿಯಾಗಿದೆ. ಈಗಾಗಲೇ ಆತನು ಸತ್ತು ಮೂರು ದಿನಗಳಾದವು. 22 ಇಂದು ನಮ್ಮ ಕೆಲವು ಸ್ತ್ರೀಯರು ಆಶ್ಚರ್ಯಕರವಾದ ಸಂಗತಿಗಳನ್ನು ಹೇಳಿದರು. ಮುಂಜಾನೆ ಬೆಳಗಾಗುವಾಗ, ಯೇಸುವಿನ ದೇಹವನ್ನು ಇಟ್ಟಿದ್ದ ಸಮಾಧಿಯ ಬಳಿಗೆ ಆ ಸ್ತ್ರೀಯರು ಹೋಗಿದ್ದರು. 23 ಆದರೆ ಅವರು ಆತನ ದೇಹವನ್ನು ಅಲ್ಲಿ ಕಾಣಲಿಲ್ಲ. ಆ ಸ್ತ್ರೀಯರು ಹಿಂತಿರುಗಿ ಬಂದು ತಮಗೆ ದೇವದೂತರಿಬ್ಬರ ದರ್ಶನವಾಯಿತೆಂದೂ ಯೇಸು ಬದುಕಿದ್ದಾನೆಂದೂ ತಮಗೆ ಇದನ್ನು ದೇವದೂತರೇ ತಿಳಿಸಿದರೆಂದೂ ನಮಗೆ ಹೇಳಿದರು. 24 ಆದ್ದರಿಂದ ನಮ್ಮ ಗುಂಪಿನಲ್ಲಿದ್ದ ಕೆಲವರು ಸಹ ಸಮಾಧಿಯ ಬಳಿಗೆ ಹೋದರು. ಸ್ತ್ರೀಯರು ಹೇಳಿದ ಹಾಗೆಯೇ ಸಮಾಧಿಯು ಬರಿದಾಗಿತ್ತು. ನಾವು ಸುತ್ತಮುತ್ತ ನೋಡಿದೆವು. ಆದರೆ ನಮ್ಮಲ್ಲಿ ಯಾರಿಗೂ ಆತನು (ಯೇಸು) ಕಾಣಲಿಲ್ಲ” ಎಂದು ಹೇಳಿದರು.

25 ಆಗ ಯೇಸು ಅವರಿಗೆ, “ನೀವು ಬುದ್ಧಿಹೀನರು ಮತ್ತು ಸತ್ಯವನ್ನು ಗ್ರಹಿಸುವುದರಲ್ಲಿ ಮಂದಗತಿಗಳು! ಪ್ರವಾದಿಗಳು ಹೇಳಿದ ಪ್ರತಿಯೊಂದನ್ನೂ ನೀವು ನಂಬಬೇಕು. 26 ಕ್ರಿಸ್ತನು ತನ್ನ ಮಹಿಮೆಯನ್ನು ಪ್ರವೇಶಿಸುವ ಮೊದಲು ಇಂಥ ಶ್ರಮೆಗಳನ್ನು ಅನುಭವಿಸಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ” ಅಂದನು. 27 ಬಳಿಕ ಯೇಸು ತನ್ನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದನ್ನೂ ವಿವರಿಸತೊಡಗಿದನು. ಯೇಸುವು ಮೋಶೆಯ ಗ್ರಂಥಗಳಿಂದ ಪ್ರಾರಂಭಿಸಿ ಪ್ರವಾದಿಗಳು ತನ್ನ ಬಗ್ಗೆ ಹೇಳಿದ ವಿಷಯಗಳ ಕುರಿತು ವಿವರಿಸಿದನು.

28 ಅವರು ಎಮ್ಮಾಹು ಊರಿನ ಹತ್ತಿರಕ್ಕೆ ಬಂದಾಗ ಆತನು ತಾನು ಅಲ್ಲಿ ಇಳಿದುಕೊಳ್ಳದವನಂತೆ ನಟಿಸಿದನು. 29 ಆದರೆ ಅವರು ಆತನಿಗೆ, “ಈಗ ಹೊತ್ತಾಯಿತು, ರಾತ್ರಿಯಾಗುತ್ತಾ ಬಂದಿದೆ. ನಮ್ಮೊಂದಿಗೆ ಇರು” ಎಂದು ಬೇಡಿಕೊಂಡರು. ಆದ್ದರಿಂದ ಆತನು ಅವರೊಂದಿಗಿರಲು ಊರೊಳಗೆ ಹೋದನು.

30 ಯೇಸು ಅವರ ಸಂಗಡ ಕುಳಿತುಕೊಂಡು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ಆಹಾರಕ್ಕಾಗಿ ದೇವರಿಗೆ ಸೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಟ್ಟನು. 31 ಆಗ ಅವರು ಯೇಸುವನ್ನು ಗುರುತಿಸಿದರು. ಆದರೆ ಆತನೇ ಯೇಸುವೆಂದು ಅವರು ತಿಳಿದಾಕ್ಷಣವೇ ಆತನು ಅವರ ಕಣ್ಣಿಗೆ ಮಾಯವಾದನು. 32 ಅವರಿಬ್ಬರು, “ಯೇಸು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗ ನಮ್ಮಲ್ಲಿ ಬೆಂಕಿ ಉರಿದಂತಾಯಿತಲ್ಲವೇ? ಪವಿತ್ರ ಗ್ರಂಥದ ನಿಜ ಅರ್ಥವನ್ನು ಆತನು ವಿವರಿಸಿದಾಗ, ಬಹಳ ರೋಮಾಂಚಕಾರಿಯಾಗಿರಲಿಲ್ಲವೇ?” ಎಂದು ಮಾತಾಡಿಕೊಂಡರು.

33 ಆ ಕೂಡಲೇ ಅವರಿಬ್ಬರೂ ಎದ್ದು ಜೆರುಸಲೇಮಿಗೆ ಹಿಂತಿರುಗಿ ಹೋದರು. ಜೆರುಲೇಮಿನಲ್ಲಿ ಯೇಸುವಿನ ಶಿಷ್ಯರು ಒಟ್ಟಾಗಿ ಸೇರಿಬಂದಿದ್ದರು. ಹನ್ನೊಂದು ಮಂದಿ ಅಪೊಸ್ತಲರು ಮತ್ತು ಅವರ ಸಂಗಡ ಇದ್ದ ಆ ಜನರು, 34 “ಪ್ರಭುವು (ಯೇಸು) ಸತ್ತವರೊಳಗಿಂದ ನಿಜವಾಗಿ ಎದ್ದಿದ್ದಾನೆ! ಆತನು ಸೀಮೋನನಿಗೆ (ಪೇತ್ರ) ಕಾಣಿಸಿಕೊಂಡನು” ಎಂದು ಹೇಳಿದರು.

35 ಆಗ ಆ ಇಬ್ಬರು ದಾರಿಯಲ್ಲಿ ನಡೆದ ಸಂಗತಿಗಳನ್ನು ತಿಳಿಸಿದರು. ಆತನು ರೊಟ್ಟಿ ಮುರಿದಾಗ ತಾವು ಆತನನ್ನು ಗುರುತಿಸಿದ್ದಾಗಿ ಅವರು ಹೇಳಿದರು.

ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು

(ಮತ್ತಾಯ 28:16-20; ಮಾರ್ಕ 16:14-18; ಯೋಹಾನ 20:19-23; ಅ.ಕಾ. 1:6-8)

36 ಅವರಿಬ್ಬರೂ ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಯೇಸುವು ಶಿಷ್ಯರ ಗುಂಪಿನ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಾಗಲಿ” ಅಂದನು.

37 ಆಗ ಶಿಷ್ಯರು ಬೆರಗಾದರು. ಅವರಿಗೆ ಭಯವಾಯಿತು. ಅದು ಭೂತವೇ ಇರಬೇಕೆಂದು ಅವರು ಭಾವಿಸಿದರು. 38 ಆದರೆ ಯೇಸು, “ನೀವು ಏಕೆ ಗಲಿಬಿಲಿಗೊಂಡಿದ್ದೀರಿ? ನೀವು ಕಣ್ಣಾರೆ ಕಂಡರೂ ಏಕೆ ಸಂಶಯಪಡುತ್ತೀರಿ? 39 ನನ್ನ ಕೈಗಳನ್ನು ಮತ್ತು ಪಾದಗಳನ್ನು ನೋಡಿರಿ. ನಾನೇ ಅಲ್ಲವೇ! ನನ್ನನ್ನು ಮುಟ್ಟಿರಿ. ನನ್ನ ಈ ಜೀವಂತ ದೇಹವನ್ನು ನೀವೇ ನೋಡಿರಿ. ಭೂತಕ್ಕೆ ಈ ರೀತಿಯ ದೇಹವಿರುವುದಿಲ್ಲ” ಅಂದನು.

40 ಯೇಸು ಅವರಿಗೆ ಇದನ್ನು ಹೇಳಿದ ನಂತರ, ತನ್ನ ಕೈಗಳಲ್ಲಿ ಮತ್ತು ಪಾದಗಳಲ್ಲಿರುವ ಗಾಯದ ಗುರುತುಗಳನ್ನು ತೋರಿಸಿದನು. 41 ಶಿಷ್ಯರು ಅತ್ಯಾಶ್ಚರ್ಯಗೊಂಡರು ಮತ್ತು ಯೇಸುವನ್ನು ಜೀವಂತವಾಗಿ ಕಂಡು ಅತ್ಯಂತ ಸಂತೋಷಪಟ್ಟರು. ಆದರೆ ಅವರಿಗಿನ್ನೂ ನಂಬಲಾಗಲಿಲ್ಲ. ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದನು. 42 ಅವರು ಸುಟ್ಟ ಮೀನಿನ ತುಂಡನ್ನು ಕೊಟ್ಟರು. 43 ಶಿಷ್ಯರ ಕಣ್ಣೆದುರಿನಲ್ಲಿಯೇ, ಯೇಸು ಆ ಮೀನನ್ನು ತೆಗೆದುಕೊಂಡು ತಿಂದನು.

44 ಯೇಸು ಅವರಿಗೆ, “ನಾನು ಮೊದಲು ನಿಮ್ಮ ಸಂಗಡ ಇದ್ದುದನ್ನು ಜ್ಞಾಪಕಮಾಡಿಕೊಳ್ಳಿರಿ. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವಾದಿಗಳ ಗ್ರಂಥಗಳಲ್ಲಿ, ಕೀರ್ತನೆಗಳಲ್ಲಿ ಬರೆದಿರುವ ಪ್ರತಿಯೊಂದು ಸಂಗತಿಯೂ ನೆರವೇರಬೇಕಾಗಿದೆ ಎಂದು ನಾನು ಹೇಳಿದೆನು” ಅಂದನು.

45 ಬಳಿಕ ಯೇಸು ಪವಿತ್ರ ಗ್ರಂಥವನ್ನು ತನ್ನ ಶಿಷ್ಯರಿಗೆ ವಿವರಿಸಿದನು. ತನ್ನ ಬಗ್ಗೆ ಬರೆದಿರುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದನು. 46 ಬಳಿಕ ಯೇಸು ಅವರಿಗೆ, “ಕ್ರಿಸ್ತನು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎದ್ದುಬರುವನು ಎಂದು ಬರೆಯಲ್ಪಟ್ಟಿದೆ. 47-48 ಈ ಸಂಗತಿಗಳು ನೆರವೇರುವುದನ್ನು ನೀವು ನೋಡಿದಿರಿ. ನೀವೇ ಇದಕ್ಕೆ ಸಾಕ್ಷಿಗಳು. ನೀವು ಜನರ ಬಳಿಗೆ ಹೋಗಿ, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವವರಿಗೆ ಪಾಪಕ್ಷಮೆಯಾಗುತ್ತದೆ ಎಂದು ತಿಳಿಸಿರಿ. ನೀವು ಈ ಸುವಾರ್ತೆಯನ್ನು ಜೆರುಸಲೇಮಿನಲ್ಲಿ ಪ್ರಾರಂಭಿಸಿ ಲೋಕದ ಜನರೆಲ್ಲರಿಗೂ ನನ್ನ ಹೆಸರಿನಲ್ಲಿ ತಿಳಿಸಬೇಕು. 49 ಕೇಳಿರಿ! ನನ್ನ ತಂದೆ ನಿಮಗೆ ವಾಗ್ದಾನ ಮಾಡಿದ್ದನ್ನು ನಾನು ನಿಮಗೆ ಕಳುಹಿಸಿಕೊಡುತ್ತೇನೆ. ಆದರೆ ನೀವು ಪರಲೋಕದಿಂದ ಆ ಶಕ್ತಿಯನ್ನು ಪಡೆಯುವ ತನಕ ಜೆರುಸಲೇಮಿನಲ್ಲೇ ಕಾದುಕೊಂಡಿರಿ” ಅಂದನು.

ಯೇಸುವಿನ ಪರಲೋಕಾರೋಹಣ

(ಮಾರ್ಕ 16:19-20; ಅ.ಕಾ. 1:9-11)

50 ಯೇಸು ತನ್ನ ಶಿಷ್ಯರನ್ನು ಜೆರುಸಲೇಮಿನ ಹೊರಗೆ ಬೆಥಾನಿಯದ ಸಮೀಪಕ್ಕೆ ಕರೆದುಕೊಂಡು ಹೋದನು. ಯೇಸು ತನ್ನ ಕೈಗಳನ್ನು ಎತ್ತಿ ಶಿಷ್ಯರನ್ನು ಆಶೀರ್ವದಿಸಿದನು. 51 ಯೇಸು ಅವರನ್ನು ಆಶೀರ್ವದಿಸುತ್ತಿದ್ದಾಗ ಅವರಿಂದ ಬೇರ್ಪಟ್ಟು ಪರಲೋಕಕ್ಕೆ ಎತ್ತಲ್ಪಟ್ಟನು. 52 ಶಿಷ್ಯರು ಅಲ್ಲಿ ಆತನನ್ನು ಆರಾಧಿಸಿದರು. ಬಳಿಕ ಅವರು ಪಟ್ಟಣಕ್ಕೆ ಹಿಂತಿರುಗಿ ಹೋದರು. ಅವರು ಬಹಳ ಸಂತೋಷಗೊಂಡಿದ್ದರು. 53 ಅವರು ಯಾವಾಗಲೂ ದೇವಾಲಯದಲ್ಲಿ ದೇವರನ್ನು ಸ್ತುತಿಸುತ್ತಿದ್ದರು.

ಯೋಹಾನ 20-21

ಬರಿದಾದ ಸಮಾಧಿ

(ಮತ್ತಾಯ 28:1-10; ಮಾರ್ಕ 16:1-8; ಲೂಕ 24:1-12)

20 ಭಾನುವಾರದ ಮುಂಜಾನೆ ಮಗ್ದಲದ ಮರಿಯಳು ಯೇಸುವಿನ ದೇಹವಿದ್ದ ಸಮಾಧಿಯ ಬಳಿಗೆ ಬಂದಳು. ಆಗ ಇನ್ನೂ ಕತ್ತಲಿತ್ತು. ಸಮಾಧಿಯ ಬಾಗಿಲಿಗೆ ಮುಚ್ಚಿದ್ದ ದೊಡ್ಡ ಕಲ್ಲು ಅಲ್ಲಿಂದ ತೆಗೆದುಹಾಕಲ್ಪಟ್ಟಿರುವುದನ್ನು ಕಂಡ ಮರಿಯಳು ಸೀಮೋನ್ ಪೇತ್ರನ ಮತ್ತು (ಯೇಸು ಪ್ರೀತಿಸುತ್ತಿದ್ದ) ಮತ್ತೊಬ್ಬ ಶಿಷ್ಯನ ಬಳಿಗೆ ಓಡಿಬಂದು, “ಅವರು ಸಮಾಧಿಯೊಳಗಿಂದ ಪ್ರಭುವನ್ನು ತೆಗೆದುಕೊಂಡಿದ್ದಾರೆ, ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದು ಹೇಳಿದಳು.

ಆದ್ದರಿಂದ ಪೇತ್ರನು ಮತ್ತು ಮತ್ತೊಬ್ಬ ಶಿಷ್ಯನು ಸಮಾಧಿಯ ಬಳಿಗೆ ಹೊರಟರು. ಅವರಿಬ್ಬರೂ ಓಡುತ್ತಾ ಹೋದರು. ಆದರೆ ಆ ಮತ್ತೊಬ್ಬ ಶಿಷ್ಯನು ಪೇತ್ರನಿಗಿಂತಲೂ ವೇಗವಾಗಿ ಓಡುತ್ತಾ ಹೋಗಿ ಸಮಾಧಿಯನ್ನು ಮೊದಲು ತಲುಪಿದನು. ಆ ಶಿಷ್ಯನು ಬಗ್ಗಿ ಒಳಗೆ ನೋಡಿದನು.

ನಾರುಬಟ್ಟೆಯ ತುಂಡುಗಳು ಅಲ್ಲಿ ಬಿದ್ದಿರುವುದನ್ನು ಅವನು ಕಂಡನು. ಅಲ್ಲದೆ ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆಯನ್ನೂ ಅವನು ಕಂಡನು. ಆ ಬಟ್ಟೆಯು ಸುತ್ತಲ್ಪಟ್ಟು, ಇತರ ನಾರುಬಟ್ಟೆಗಳಿಂದ ಪ್ರತ್ಯೇಕವಾಗಿ ಬಿದ್ದಿತ್ತು. ಬಳಿಕ ಆ ಮತ್ತೊಬ್ಬ ಶಿಷ್ಯನು ಒಳಗೆ ಹೋದನು. ಸಮಾಧಿಯನ್ನು ಮೊದಲು ತಲುಪಿದವನೇ ಆ ಶಿಷ್ಯನು. ಅವನು ಸಂಭವಿಸಿರುವುದನ್ನು ಕಂಡು ನಂಬಿಕೊಂಡನು. (ಯೇಸು ಸತ್ತು ಜೀವಂತವಾಗಿ ಎದ್ದುಬರಬೇಕೆಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿರುವುದು ಈ ಶಿಷ್ಯರಿಗೆ ಇನ್ನೂ ಅರ್ಥವಾಗಿರಲಿಲ್ಲ.)

ಮಗ್ದಲದ ಮರಿಯಳಿಗೆ ಯೇಸುವಿನ ದರ್ಶನ

(ಮಾರ್ಕ 16:9-11)

10 ಬಳಿಕ ಶಿಷ್ಯರು ಹಿಂತಿರುಗಿ ಮನೆಗೆ ಹೋದರು. 11 ಆದರೆ ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ, 12 ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳದಲ್ಲಿ ಅವರಲ್ಲೊಬ್ಬನು ಯೇಸುವಿನ ತಲೆಯಿದ್ದ ಕಡೆಯಲ್ಲಿಯೂ ಮತ್ತೊಬ್ಬನು ಪಾದವಿದ್ದ ಕಡೆಯಲ್ಲಿಯೂ ಕುಳಿತುಕೊಂಡಿದ್ದನು.

13 ದೇವದೂತರು ಮರಿಯಳಿಗೆ, “ಅಮ್ಮಾ, ಏಕೆ ಅಳುತ್ತಿರುವೆ?” ಎಂದು ಕೇಳಿದರು.

ಮರಿಯಳು, “ನನ್ನ ಪ್ರಭುವಿನ ದೇಹವನ್ನು ಕೆಲವು ಜನರು ತೆಗೆದುಕೊಂಡು ಹೋಗಿದ್ದಾರೆ. ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟಳು. 14 ಮರಿಯಳು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದನ್ನು ಕಂಡಳು. ಆದರೆ ಆತನು ಯೇಸು ಎಂಬುದು ಆಕೆಗೆ ಗೊತ್ತಿರಲಿಲ್ಲ.

15 ಯೇಸು ಆಕೆಯನ್ನು “ಅಮ್ಮಾ ಏಕೆ ಅಳುತ್ತಿರುವೆ? ನೀನು ಯಾರನ್ನು ಹುಡುಕುತ್ತಿರುವೆ?” ಎಂದು ಕೇಳಿದನು.

ಇವನು ತೋಟವನ್ನು ನೋಡಿಕೊಳ್ಳುವವನಿರಬಹುದೆಂದು ಮರಿಯಳು ಯೋಚಿಸಿಕೊಂಡು ಅವನಿಗೆ, “ಅಯ್ಯಾ, ನೀನು ಯೇಸುವನ್ನು ತೆಗೆದುಕೊಂಡು ಹೋದೆಯಾ? ಆತನನ್ನು ಎಲ್ಲಿಟ್ಟಿರುವೆ, ನನಗೆ ಹೇಳು. ನಾನು ಹೋಗಿ ಆತನನ್ನು ತೆಗೆದು ಕೊಳ್ಳುತ್ತೇನೆ” ಎಂದು ಹೇಳಿದಳು.

16 ಯೇಸು ಆಕೆಗೆ, “ಮರಿಯಳೇ” ಎಂದನು.

ಮರಿಯಳು ಯೇಸುವಿನ ಕಡೆಗೆ ತಿರುಗಿ, ಯೆಹೂದ್ಯರ ಭಾಷೆಯಲ್ಲಿ “ರಬ್ಬೂನಿ” ಎಂದಳು. (ರಬ್ಬೂನಿ ಎಂದರೆ “ಗುರು”.)

17 ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ. ನಾನು ತಂದೆಯ ಬಳಿಗೆ ಇನ್ನೂ ಹಿಂತಿರುಗಿ ಹೋಗಿಲ್ಲ. ಆದರೆ ನೀನು ನನ್ನ ಸಹೋದರರ (ಶಿಷ್ಯರ) ಬಳಿಗೆ ಹೋಗಿ, ‘ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಹಿಂತಿರುಗಿ ಹೋಗುತ್ತಿದ್ದೇನೆ’ ಎಂಬುದಾಗಿ ಹೇಳು” ಎಂದನು.

18 ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಹೋಗಿ, “ನಾನು ಪ್ರಭುವನ್ನು ಕಂಡೆನು!” ಎಂದು ಹೇಳಿದಳು. ಮತ್ತು ಯೇಸು ಹೇಳಿದ ಸಂಗತಿಗಳನ್ನು ಆಕೆ ಅವರಿಗೆ ತಿಳಿಸಿದಳು.

ಶಿಷ್ಯರಿಗೆ ಯೇಸುವಿನ ದರ್ಶನ

(ಮತ್ತಾಯ 28:16-20; ಮಾರ್ಕ 16:14-18; ಲೂಕ 24:36-49)

19 ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 20 ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.

21 ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು. 22 ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ. 23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.

ತೋಮನಿಗೆ ಯೇಸುವಿನ ದರ್ಶನ

24 ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು. 25 ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.

26 ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 27 ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.

28 ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.

29 ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.

ಯೋಹಾನನು ಈ ಪುಸ್ತಕವನ್ನು ಬರೆದ ಉದ್ದೇಶ

30 ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ. 31 ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.

ಏಳು ಮಂದಿ ಶಿಷ್ಯರಿಗೆ ಯೇಸುವಿನ ದರ್ಶನ

21 ತರುವಾಯ, ಯೇಸು ತನ್ನ ಶಿಷ್ಯರಿಗೆ ತಿಬೇರಿಯ (ಗಲಿಲಾಯ) ಸರೋವರದ ಬಳಿ ಕಾಣಿಸಿಕೊಂಡನು. ಅದು ಹೀಗೆ ನಡೆಯಿತು: ಕೆಲವು ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯಾರೆಂದರೆ, ಸೀಮೋನ್ ಪೇತ್ರ, ದಿದುಮನೆಂಬ ತೋಮ, ಗಲಿಲಾಯಕ್ಕೆ ಸೇರಿದ ಕಾನಾ ಊರಿನವನಾದ ನತಾನಿಯೇಲ, ಜೆಬೆದಾಯನ ಇಬ್ಬರು ಗಂಡುಮಕ್ಕಳು ಮತ್ತು ಇನ್ನಿಬ್ಬರು ಶಿಷ್ಯರು. ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತಿದ್ದೇನೆ” ಎಂದನು.

ಉಳಿದ ಶಿಷ್ಯರು, “ನಾವೂ ನಿನ್ನೊಂದಿಗೆ ಬರುತ್ತೇವೆ” ಎಂದು ಹೇಳಿದರು. ಅಂತೆಯೇ ಶಿಷ್ಯರೆಲ್ಲಾ ಹೊರಟು ದೋಣಿಯನ್ನು ಹತ್ತಿದರು. ಅವರು ರಾತ್ರಿಯೆಲ್ಲಾ ಬಲೆ ಬೀಸಿದರೂ ಒಂದು ಮೀನೂ ಸಿಗಲಿಲ್ಲ.

ಅಂದು ಮುಂಜಾನೆಯಾದಾಗ, ಯೇಸು ತೀರದಲ್ಲಿ ನಿಂತುಕೊಂಡಿದ್ದನು. ಆದರೆ ಆತನೇ ಯೇಸು ಎಂಬುದು ಶಿಷ್ಯರಿಗೆ ಗೊತ್ತಿರಲಿಲ್ಲ. ಆಗ ಆತನು ತನ್ನ ಶಿಷ್ಯರಿಗೆ, “ಮಕ್ಕಳೇ, ನಿಮಗೆ ಮೀನು ಸಿಕ್ಕಿತೋ?” ಎಂದು ಕೇಳಿದನು.

ಶಿಷ್ಯರು, “ಇಲ್ಲ” ಎಂದು ಉತ್ತರಕೊಟ್ಟರು.

ಯೇಸು, “ನಿಮ್ಮ ದೋಣಿಯ ಬಲಭಾಗದಲ್ಲಿ ನಿಮ್ಮ ಬಲೆ ಬೀಸಿರಿ. ಅಲ್ಲಿ ಕೆಲವು ಮೀನುಗಳು ಸಿಕ್ಕುತ್ತವೆ” ಎಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಬಹಳ ಮೀನುಗಳು ಸಿಕ್ಕಿಕೊಂಡದ್ದರಿಂದ ಅವರು ಬಲೆಯನ್ನು ದೋಣಿಯೊಳಗೆ ಎಳೆದುಕೊಳ್ಳಲಾಗಲಿಲ್ಲ.

ಯೇಸುವಿನ ಪ್ರೀತಿಯ ಶಿಷ್ಯನು ಪೇತ್ರನಿಗೆ, “ಆ ಮನುಷ್ಯನು ಪ್ರಭುವೇ!” ಎಂದು ಹೇಳಿದನು. ಕೂಡಲೇ ಪೇತ್ರನು ತನ್ನ ಅಂಗಿಯನ್ನು ಹಾಕಿಕೊಂಡು, ನೀರಿಗೆ ಧುಮುಕಿದನು. (ಪೇತ್ರನು ಮೀನು ಹಿಡಿಯುವುದಕ್ಕಾಗಿ ತನ್ನ ಅಂಗಿಯನ್ನು ಬಿಚ್ಚಿಟ್ಟಿದ್ದನು.) ಉಳಿದ ಶಿಷ್ಯರು ದೋಣಿಯಲ್ಲಿ ತೀರಕ್ಕೆ ಹೋದರು. ಅವರು ಬಲೆತುಂಬ ಮೀನುಗಳನ್ನು ದಡಕ್ಕೆ ಎಳೆದುಕೊಂಡು ಹೋದರು. ಅವರು ದಡದಿಂದ ಬಹುದೂರದಲ್ಲೇನೂ ಇರಲಿಲ್ಲ. ಕೇವಲ ಮುನ್ನೂರು ಅಡಿಗಳಷ್ಟು ದೂರದಲ್ಲಿದ್ದರು. ಶಿಷ್ಯರು ದೋಣಿಯಿಂದ ಇಳಿದು ದಡಕ್ಕೆ ಹೋದಾಗ, ಬೆಂಕಿಯ ಕೆಂಡಗಳನ್ನು ಕಂಡರು. ಬೆಂಕಿಯ ಮೇಲೆ ಮೀನುಗಳಿದ್ದವು ಮತ್ತು ಕೆಲವು ರೊಟ್ಟಿಗಳೂ ಅಲ್ಲಿದ್ದವು. 10 ಬಳಿಕ ಯೇಸು, “ನೀವು ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು.

11 ಸೀಮೋನ್ ಪೇತ್ರನು ದೋಣಿಯೊಳಕ್ಕೆ ಹೋಗಿ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದನು. ಬಲೆಯು ದೊಡ್ಡ ಮೀನುಗಳಿಂದ ತುಂಬಿತ್ತು. ಅದರಲ್ಲಿ 153 ಮೀನುಗಳಿದ್ದವು. ಅವು ಬಹಳ ಭಾರವಾಗಿದ್ದರೂ ಬಲೆಯು ಹರಿದುಹೋಗಲಿಲ್ಲ. 12 ಯೇಸು ಅವರಿಗೆ, “ಬಂದು ಊಟ ಮಾಡಿ” ಎಂದು ಹೇಳಿದನು. ಶಿಷ್ಯರಲ್ಲಿ ಒಬ್ಬರಾದರೂ, “ನೀನು ಯಾರು?” ಎಂದು ಆತನನ್ನು ಕೇಳಲಿಲ್ಲ. ಆತನು ಪ್ರಭುವೆಂದು ಅವರಿಗೆ ತಿಳಿದಿತ್ತು. 13 ಯೇಸುವು ಸಮೀಪಕ್ಕೆ ಬಂದು ರೊಟ್ಟಿಯನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವರಿಗೆ ಕೊಟ್ಟನು.

14 ಯೇಸು ಪುನರುತ್ಥಾನ ಹೊಂದಿದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಲ.

ಪೇತ್ರನೊಂದಿಗೆ ಯೇಸುವಿನ ಸಂಭಾಷಣೆ

15 ಅವರು ಊಟಮಾಡಿದ ಮೇಲೆ, ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ಇಲ್ಲಿರುವ ಇವರು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.

ಪೇತ್ರನು, “ಹೌದು ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.

ಯೇಸು ಪೇತ್ರನಿಗೆ, “ನನ್ನ ಕುರಿಮರಿಗಳನ್ನು[a] ಮೇಯಿಸು” ಎಂದನು.

16 ಎರಡನೆಯ ಸಾರಿ ಯೇಸು ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.

ಪೇತ್ರನು, “ಹೌದು, ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.

ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಕಾಯಿ” ಎಂದನು.

17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.

ಯೇಸು, “ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಮೂರು ಸಾರಿ ಕೇಳಿದ್ದರಿಂದ ಪೇತ್ರನಿಗೆ ದುಃಖವಾಯಿತು. ಪೇತ್ರನು, “ಪ್ರಭುವೇ, ನಿನಗೆ ಪ್ರತಿಯೊಂದೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.

ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು. 18 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನೀನು ಯೌವನಸ್ಥನಾಗಿದ್ದಾಗ, ನಡುಕಟ್ಟಿಕೊಂಡು ನಿನಗೆ ಇಷ್ಟವಾದ ಕಡೆಗೆಲ್ಲಾ ಹೋದೆ. ಆದರೆ ನೀನು ಮುದುಕನಾದಾಗ, ನಿನ್ನ ಕೈಗಳನ್ನು ಚಾಚುವೆ ಮತ್ತು ಬೇರೊಬ್ಬನು ನಿನ್ನ ನಡುಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ನಡೆಸಿಕೊಂಡು ಹೋಗುವನು” ಎಂದು ಹೇಳಿದನು. 19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.

20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿನ ಪ್ರೀತಿಯ ಶಿಷ್ಯನು ತಮ್ಮ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಕಂಡನು. (ರಾತ್ರಿಭೋಜನದ ಸಮಯದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ, “ಪ್ರಭುವೇ, ನಿನಗೆ ದ್ರೋಹ ಮಾಡುವವನು ಯಾರು?” ಎಂದು ಕೇಳಿದ ಶಿಷ್ಯನೇ ಇವನು.) 21 ಪೇತ್ರನು ತಮ್ಮ ಹಿಂದೆ ಬರುತ್ತಿದ್ದ ಈ ಶಿಷ್ಯನನ್ನು ಕಂಡಾಗ ಯೇಸುವಿಗೆ, “ಪ್ರಭುವೇ, ಇವನ ವಿಷಯವೇನು?” ಎಂದು ಕೇಳಿದನು.

22 ಯೇಸು, “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.

23 ಆದ್ದರಿಂದ ಸಹೋದರರ (ಶಿಷ್ಯರ) ಮಧ್ಯೆ ಒಂದು ಕಥೆಯೇ ಹರಡಿಕೊಂಡಿತು. ಯೇಸುವಿನ ಪ್ರೀತಿಯ ಈ ಶಿಷ್ಯನು ಸಾಯುವುದಿಲ್ಲವೆಂದು ಅವರು ಹೇಳುತ್ತಿದ್ದರು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಹೇಳಲಿಲ್ಲ. “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು?” ಎಂದಷ್ಟೇ ಆತನು ಹೇಳಿದ್ದನು.

24 ಈ ಸಂಗತಿಗಳನ್ನು ಈಗ ಬರೆದಿರುವವನು ಮತ್ತು ಇವುಗಳ ವಿಷಯವಾಗಿ ಈಗ ಸಾಕ್ಷಿ ಹೇಳಿರುವ ಶಿಷ್ಯನು ಅವನೇ. ಅವನು ಹೇಳುವುದು ಸತ್ಯವೆಂದು ನಮಗೆ ಗೊತ್ತಿದೆ.

25 ಯೇಸು ಇತರ ಅನೇಕ ಕಾರ್ಯಗಳನ್ನು ಮಾಡಿದನು. ಅವುಗಳಲ್ಲಿ ಪ್ರತಿಯೊಂದನ್ನೂ ಬರೆಯುವುದಾದರೆ, ಬರೆಯಲ್ಪಡುವ ಪುಸ್ತಕಗಳನ್ನು ಇಡೀ ಪ್ರಪಂಚವೇ ಹಿಡಿಸಲಾರದೆಂದು ನಾನು ನೆನಸುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International