Chronological
ರಾಜನಂತೆ ಜೆರುಸಲೇಮಿಗೆ ಪ್ರವೇಶ
(ಮತ್ತಾಯ 21:1-11; ಲೂಕ 19:28-40; ಯೋಹಾನ 12:12-19)
11 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನ ಸಮೀಪಕ್ಕೆ ಬಂದಿದ್ದರು. ಅವರು ಆಲಿವ್ ಗುಡ್ಡದ ಬಳಿಯಿರುವ ಬೆತ್ಛಗೆ ಹಾಗೂ ಬೆಥಾನಿ ಎಂಬ ಊರುಗಳಿಗೆ ಬಂದಾಗ ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, 2 “ಅಲ್ಲಿ ಕಾಣುತ್ತಿರುವ ಊರಿಗೆ ಹೋಗಿರಿ. ನೀವು ಅದನ್ನು ಪ್ರವೇಶಿಸಿದಾಗ, ಯಾರೂ ಸವಾರಿ ಮಾಡಿಲ್ಲದ ಒಂದು ಕತ್ತೆ ಮರಿಯನ್ನು ಅಲ್ಲಿ ಕಟ್ಟಿರುವುದನ್ನು ಕಾಣುವಿರಿ. ಆ ಕತ್ತೆಯನ್ನು ಬಿಚ್ಚಿಕೊಂಡು, ನನ್ನ ಬಳಿಗೆ ತನ್ನಿರಿ. 3 ಯಾವನಾದರೂ ‘ಆ ಕತ್ತೆಯನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ’ ಎಂದು ನಿಮ್ಮನ್ನು ಕೇಳಿದರೆ, ‘ಒಡೆಯನಿಗೆ ಈ ಕತ್ತೆ ಬೇಕಾಗಿದೆ. ಆತನು ಇದನ್ನು ಬೇಗನೆ ಕಳುಹಿಸಿಕೊಡುವನು’ ಎಂದು ಅವನಿಗೆ ಹೇಳಿರಿ” ಎಂದನು.
4 ಶಿಷ್ಯರು ಊರಿನೊಳಗೆ ಹೋದಾಗ ರಸ್ತೆಯಲ್ಲಿನ ಒಂದು ಮನೆಯ ಬಾಗಿಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕತ್ತೆಮರಿಯೊಂದನ್ನು ಕಂಡರು. ಶಿಷ್ಯರು ಹೋಗಿ ಆ ಕತ್ತೆಯನ್ನು ಬಿಚ್ಚಿದಾಗ, 5 ಅಲ್ಲಿ ನಿಂತಿದ್ದ ಕೆಲವು ಜನರು, “ನೀವು ಮಾಡುತ್ತಿರುವುದೇನು? ಆ ಕತ್ತೆಯನ್ನು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದರು. 6 ಯೇಸು ತಮಗೆ ಹೇಳಿದ ರೀತಿಯಲ್ಲಿಯೇ ಶಿಷ್ಯರು ಉತ್ತರಿಸಿದರು. ಆಗ ಜನರು ಆ ಕತ್ತೆಯನ್ನು ಶಿಷ್ಯರಿಗೆ ಬಿಟ್ಟುಕೊಟ್ಟರು.
7 ಶಿಷ್ಯರು ಕತ್ತೆಯನ್ನು ಯೇಸುವಿನ ಬಳಿಗೆ ತಂದು ತಮ್ಮ ಹೊದಿಕೆಗಳನ್ನು ಅದರ ಮೇಲೆ ಹಾಸಿದರು. ಆಗ ಯೇಸು ಅದರ ಮೇಲೆ ಕುಳಿತನು. 8 ಅನೇಕ ಜನರು ಯೇಸುವಿಗಾಗಿ ರಸ್ತೆಯ ಮೇಲೆ ತಮ್ಮ ಹೊದಿಕೆಗಳನ್ನು ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಲೆಗಳನ್ನು ಕೊಯ್ದುತಂದು ರಸ್ತೆಯ ಮೇಲೆ ಹರಡಿದರು. 9 ಕೆಲವು ಜನರು ಯೇಸುವಿನ ಮುಂದೆ ಹೋಗುತ್ತಿದ್ದರು. ಇತರ ಜನರು ಆತನ ಹಿಂದೆ ಹೋಗುತ್ತಿದ್ದರು. ಜನರೆಲ್ಲರೂ,
10 “ನಮ್ಮ ಪಿತೃವಾದ ದಾವೀದನ
ರಾಜ್ಯವು ಬರಲಿ!
ಮೇಲೋಕಗಳಲ್ಲಿ ದೇವರಿಗೆ ಜಯವಾಗಲಿ” ಎಂದು ಕೂಗಿದರು.
11 ಯೇಸು ಜೆರುಸಲೇಮನ್ನು ತಲುಪಿದಾಗ, ದೇವಾಲಯಕ್ಕೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನೂ ನೋಡಿದನು. ಆದರೆ ಆಗಲೇ ತಡವಾಗಿತ್ತು. ಆದ್ದರಿಂದ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಬೆಥಾನಿಯಕ್ಕೆ ಹೋದನು.
ಒಣಗಿಹೋದ ಅಂಜೂರ ಮರ
(ಮತ್ತಾಯ 21:18-19)
12 ಮರುದಿನ, ಯೇಸು ಬೆಥಾನಿಯದಿಂದ ಹೋಗುತ್ತಿರಲು ಆತನಿಗೆ ಹಸಿವಾಗಿತ್ತು. 13 ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ನೋಡಿದನು. ಆದ್ದರಿಂದ ಆ ಮರದಲ್ಲಿ ಅಂಜೂರದ ಹಣ್ಣೇನಾದರೂ ಸಿಕ್ಕಬಹುದೆಂದು ಅದರ ಬಳಿಗೆ ಹೋದನು. ಆದರೆ ಆತನು ಆ ಮರದಲ್ಲಿ ಅಂಜೂರದ ಹಣ್ಣುಗಳನ್ನು ಕಾಣಲಿಲ್ಲ. ಅಲ್ಲಿ ಎಲೆಗಳು ಮಾತ್ರ ಇದ್ದವು. ಏಕೆಂದರೆ ಅದು ಅಂಜೂರ ಹಣ್ಣಿನ ಕಾಲವಾಗಿರಲಿಲ್ಲ. 14 ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನಿನ್ನ ಹಣ್ಣನ್ನು ಯಾರೂ ತಿನ್ನದಂತಾಗಲಿ” ಎಂದನು. ಯೇಸುವಿನ ಶಿಷ್ಯರಿಗೂ ಈ ಮಾತು ಕೇಳಿಸಿತು.
ದೇವಾಲಯವೇ ಪ್ರಾರ್ಥನಾಲಯ
(ಮತ್ತಾಯ 21:12-17; ಲೂಕ 19:45-48; ಯೋಹಾನ 2:13-22)
15 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮನ್ನು ಪ್ರವೇಶಿಸಿದರು. ಅವರು ದೇವಾಲಯದೊಳಗೆ ಬಂದಾಗ ಅಲ್ಲಿ ವಸ್ತುಗಳನ್ನು ಮಾರುತ್ತಿದ್ದ ಮತ್ತು ಕೊಳ್ಳುತ್ತಿದ್ದ ಜನರನ್ನು ಆತನು ಅಲ್ಲಿಂದ ಹೊರಡಿಸತೊಡಗಿದನು; ಹಣ ವಿನಿಮಯಮಾಡಿಕೊಳ್ಳುತ್ತಿದ್ದ ವ್ಯಾಪಾರಿಗಳ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 16 ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುತ್ತಿದ್ದವರನ್ನು ಆತನು ತಡೆದನು. 17 ನಂತರ ಯೇಸು ಜನರಿಗೆ ಉಪದೇಶಿಸಿ, “‘ನನ್ನ ಆಲಯವು ಎಲ್ಲಾ ಜನರಿಗೂ ಪ್ರಾರ್ಥನೆಯ ಆಲಯವೆನಿಸಿಕೊಳ್ಳುವುದು’(B) ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರು ಅಡಗಿಕೊಳ್ಳುವ ಸ್ಥಳವನ್ನಾಗಿ ಮಾಡಿದ್ದೀರಿ’”(C) ಎಂದು ಹೇಳಿದನು.
18 ಮಹಾಯಾಜಕರು ಹಾಗೂ ಧರ್ಮೋಪದೇಶಕರು ಈ ಸಂಗತಿಗಳನ್ನು ಕೇಳಿ ಯೇಸುವನ್ನು ಕೊಲ್ಲಿಸಲು ತಕ್ಕ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸತೊಡಗಿದರು. ಜನರೆಲ್ಲರೂ ಯೇಸುವಿನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಯೇಸುವಿಗೆ ಭಯಪಟ್ಟರು. 19 ಆ ರಾತ್ರಿ ಯೇಸು ಮತ್ತು ಆತನ ಶಿಷ್ಯರು ಪಟ್ಟಣವನ್ನು ಬಿಟ್ಟುಹೋದರು.
ನಂಬಿಕೆಯ ಶಕ್ತಿ
(ಮತ್ತಾಯ 21:20-22)
20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.
22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ. 25 ನೀವು ಪ್ರಾರ್ಥಿಸಲು ಸಿದ್ಧರಾಗಿರುವಾಗ, ನೀವು ಇನ್ನೊಬ್ಬನ ವಿಷಯದಲ್ಲಿ ಯಾವುದೇ ಕಾರಣದಿಂದಾಗಲಿ ಕೋಪದಿಂದಿರುವುದು ನಿಮ್ಮ ನೆನಪಿಗೆ ಬಂದರೆ, ಅವನನ್ನು ಕ್ಷಮಿಸಿಬಿಡಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ಉತ್ತರಿಸಿದನು. 26 [b]
ಯೇಸುವಿನ ಅಧಿಕಾರವನ್ನು ಕುರಿತು ಯೆಹೂದ್ಯ ನಾಯಕರ ಸಂಶಯ
(ಮತ್ತಾಯ 21:23-27; ಲೂಕ 20:1-8)
27 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿಗೆ ಮತ್ತೆ ಹೋದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿದ್ದಾಗ, ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯನಾಯಕರು ಆತನ ಬಳಿಗೆ ಬಂದು, 28 “ಇವುಗಳನ್ನೆಲ್ಲ ಮಾಡಲು ನಿನಗೆ ಯಾವ ಅಧಿಕಾರವಿದೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ನಮಗೆ ತಿಳಿಸು!” ಎಂದರು.
29 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನ್ನ ಪ್ರಶ್ನೆಗೆ ಉತ್ತರಿಸಿದರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿಸುತ್ತೇನೆ. 30 ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿದ್ದು ದೇವರಿಂದ ಬಂದ ಅಧಿಕಾರದಿಂದಲೋ ಅಥವಾ ಮನುಷ್ಯರಿಂದ ಬಂದ ಅಧಿಕಾರದಿಂದಲೋ? ನನಗೆ ತಿಳಿಸಿ!” ಎಂದನು.
31 ಯೆಹೂದ್ಯನಾಯಕರು ಈ ಪ್ರಶ್ನೆಯ ಬಗ್ಗೆ ಚರ್ಚಿಸಿ ಒಬ್ಬರಿಗೊಬ್ಬರು, “‘ಯೋಹಾನನು ದೀಕ್ಷಾಸ್ನಾನ ಕೊಟ್ಟದ್ದು ದೇವರಿಂದ ಬಂದ ಅಧಿಕಾರದಿಂದ’ ಎಂದು ನಾವು ಉತ್ತರಿಸಿದರೆ, ಆಗ ‘ಮತ್ತೆ ನೀವು ಏಕೆ ಯೋಹಾನನನ್ನು ನಂಬಲಿಲ್ಲ?’ ಎಂದು ಯೇಸು ಕೇಳುತ್ತಾನೆ. 32 ಆದರೆ ‘ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮನುಷ್ಯನಿಂದ ಬಂದ ಅಧಿಕಾರದಿಂದ’ ಎಂದು ಹೇಳಿದರೆ, ಆಗ ಜನರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ” ಎಂದು ಮಾತಾಡಿಕೊಂಡರು. ಜನರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರಿಂದ ಅವರು ಜನರಿಗೆ ಭಯಪಟ್ಟರು.
33 ಆದಕಾರಣ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.
ಯೇಸು ಅವರಿಗೆ, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತಿದ್ದೇನೆಂದು ನಿಮಗೆ ಹೇಳುವುದಿಲ್ಲ” ಎಂದನು.
ಬೆಥಾನಿಯಲ್ಲಿ ಯೇಸು
(ಮತ್ತಾಯ 26:6-13; ಮಾರ್ಕ 14:3-9)
12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) 2 ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. 3 ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.
4 ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. 5 ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. 6 ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.
7 ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. 8 ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.
ಲಾಜರನ ವಿರುದ್ಧ ಸಂಚು
9 ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು. 10 ಆದರೆ ಮಹಾಯಾಜಕರು ಲಾಜರನನ್ನು ಸಹ ಕೊಲ್ಲಲು ಯೋಜನೆಗಳನ್ನು ಮಾಡಿದರು. 11 ಲಾಜರನ ನಿಮಿತ್ತ ಅನೇಕ ಯೆಹೂದ್ಯರು ತಮ್ಮ ನಾಯಕರನ್ನು ತೊರೆದು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು. ಆದಕಾರಣವೇ ಯೆಹೂದ್ಯ ನಾಯಕರು ಲಾಜರನನ್ನು ಸಹ ಕೊಲ್ಲಬೇಕೆಂದಿದ್ದರು.
ಜೆರುಸಲೇಮಿಗೆ ಯೇಸುವಿನ ಪ್ರವೇಶ
(ಮತ್ತಾಯ 21:1-11; ಮಾರ್ಕ 11:1-11; ಲೂಕ 19:28-40)
12 ಮರುದಿನ, ಯೇಸು ಜೆರುಸಲೇಮಿಗೆ ಬರುತ್ತಿದ್ದಾನೆ ಎಂಬ ಸುದ್ದಿ ಅಲ್ಲಿಯ ಜನರಿಗೆ ತಿಳಿಯಿತು. ಪಸ್ಕಹಬ್ಬಕ್ಕಾಗಿ ಬಂದಿದ್ದ ಅನೇಕರು ಅಲ್ಲಿದ್ದರು. 13 ಜನರು ಖರ್ಜೂರದ ಗರಿಗಳನ್ನು ತೆಗೆದುಕೊಂಡು ಯೇಸುವನ್ನು ಎದುರುಗೊಳ್ಳಲು ಹೋದರು.
“ಆತನಿಗೆ ಸ್ತೋತ್ರವಾಗಲಿ!
‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ದೇವರಾಶೀರ್ವಾದವಾಗಲಿ!’(A)
ಇಸ್ರೇಲ್ ರಾಜನಿಗೆ ದೇವರಾಶೀರ್ವಾದವಾಗಲಿ!”
ಎಂದು ಜನರು ಕೂಗಿದರು.
14 ಯೇಸು ಅಲ್ಲಿದ್ದ ಕತ್ತೆಯೊಂದನ್ನು ಕಂಡು, ಅದರ ಮೇಲೆ ಕುಳಿತುಕೊಂಡು ಹೊರಟನು. ಪವಿತ್ರ ಗ್ರಂಥ ಹೇಳುವಂತೆಯೇ ಇದು ನೆರವೇರಿತು:
15 “ಸಿಯೋನ್ ನಗರವೇ, ಭಯಪಡಬೇಡ!
ನೋಡು! ನಿನ್ನ ರಾಜನು ಬರುತ್ತಿದ್ದಾನೆ.
ಆತನು ಪ್ರಾಯದ ಕತ್ತೆಯ ಮೇಲೆ ಕುಳಿತುಕೊಂಡು ಬರುತ್ತಿದ್ದಾನೆ.”(B)
16 ಯೇಸುವಿನ ಶಿಷ್ಯರು ಆ ಸಮಯದಲ್ಲಿ ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ಯೇಸು ಮಹಿಮಾಪದವಿಗೆ ಏರಿಹೋದ ನಂತರ, ಈ ಸಂಗತಿಗಳು ಆತನ ವಿಷಯವಾಗಿ ಬರೆಯಲ್ಪಟ್ಟಿವೆ ಎಂಬುದನ್ನು ಶಿಷ್ಯರು ಅರ್ಥಮಾಡಿಕೊಂಡರು; ಮತ್ತು ತಾವು ಆತನಿಗಾಗಿ ಮಾಡಿದ ಕಾರ್ಯಗಳನ್ನು ಜ್ಞಾಪಿಸಿಕೊಂಡರು.
17 ಯೇಸು ಲಾಜರನಿಗೆ ಸಮಾಧಿಯೊಳಗಿಂದ ಬರುವಂತೆ ಹೇಳಿ ಅವನನ್ನು ಜೀವಂತವಾಗಿ ಎಬ್ಬಿಸಿದಾಗ ಅನೇಕ ಜನರು ಯೇಸುವಿನ ಸಂಗಡ ಇದ್ದರು. ಯೇಸು ಮಾಡಿದ ಈ ಕಾರ್ಯದ ಬಗ್ಗೆ ಅವರು ಇತರರಿಗೆ ಹೇಳುತ್ತಿದ್ದರು. 18 ಯೇಸು ಮಾಡಿದ ಈ ಅದ್ಭುತಕಾರ್ಯವನ್ನು ಕೇಳಿ, ಅನೇಕ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು. 19 ಆದ್ದರಿಂದ ಫರಿಸಾಯರು, “ನೋಡಿ! ನಮ್ಮ ಯೋಜನೆಯು ನಿಷ್ಪ್ರಯೋಜಕವಾಯಿತು. ಜನರು ಆತನನ್ನೇ ಹಿಂಬಾಲಿಸುತ್ತಿದ್ದಾರೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
ಜೀವ, ಮರಣಗಳ ಬಗ್ಗೆ ಯೇಸುವಿನ ಉಪದೇಶ
20 ಅಲ್ಲಿ ಗ್ರೀಕ್ ಜನರು ಸಹ ಇದ್ದರು. ಪಸ್ಕಹಬ್ಬದಲ್ಲಿ ಆರಾಧಿಸುವುದಕ್ಕಾಗಿ ಜೆರುಸಲೇಮಿಗೆ ಹೋಗಿದ್ದವರಲ್ಲಿ ಇವರೂ ಸೇರಿದ್ದರು. 21 ಈ ಗ್ರೀಕ್ ಜನರು ಫಿಲಿಪ್ಪನ ಬಳಿಗೆ ಹೋದರು. (ಫಿಲಿಪ್ಪನು ಗಲಿಲಾಯದ ಬೆತ್ಸಾಯಿ ಎಂಬ ಊರಿನವನಾಗಿದ್ದವನು.) ಅವರು, “ಸ್ವಾಮೀ, ನಾವು ಯೇಸುವನ್ನು ನೋಡಬೇಕು” ಎಂದು ಅವನನ್ನು ಕೇಳಿಕೊಂಡರು. 22 ಫಿಲಿಪ್ಪನು ಅಂದ್ರೆಯನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದನು. ಬಳಿಕ ಅಂದ್ರೆಯನು ಮತ್ತು ಫಿಲಿಪ್ಪನು ಒಟ್ಟಾಗಿ ಯೇಸುವಿನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದರು.
23 ಯೇಸು ಅವರಿಗೆ, “ಮನುಷ್ಯಕುಮಾರನು ತನ್ನ ಮಹಿಮೆಯನ್ನು ಹೊಂದುವ ಸಮಯ ಇದೇ ಆಗಿದೆ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಗೋಧಿಯ ಕಾಳು ಭೂಮಿಗೆ ಬಿದ್ದು ಸಾಯಲೇಬೇಕು. ಬಳಿಕ ಅದು ಬೆಳೆದು ಅನೇಕ ಕಾಳುಗಳನ್ನು ಫಲಿಸುವುದು. ಸಾಯದಿದ್ದರೆ, ಅದು ಯಾವಾಗಲೂ ಕೇವಲ ಒಂದೇ ಕಾಳಾಗಿರುವುದು. 25 ತನ್ನ ಸ್ವಂತ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ಉಳಿಸಿಕೊಳ್ಳುವನು. ಅವನು ನಿತ್ಯಜೀವವನ್ನು ಹೊಂದುವನು. 26 ನನ್ನ ಸೇವೆ ಮಾಡುವವನು ನನ್ನನ್ನು ಹಿಂಬಾಲಿಸಬೇಕು. ಆಗ ನಾನು ಇರುವಲ್ಲೆಲ್ಲಾ ನನ್ನ ಸೇವಕನು ಇರುವನು. ನನ್ನ ಸೇವೆಮಾಡುವ ಜನರನ್ನು ನನ್ನ ತಂದೆಯು ಸನ್ಮಾನಿಸುವನು” ಎಂದು ಹೇಳಿದನು.
ತನ್ನ ಮರಣದ ಕುರಿತು ಯೇಸುವಿನ ಹೇಳಿಕೆ
27 ಯೇಸು ಮಾತನ್ನು ಮುಂದುವರಿಸಿ, “ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ನನ್ನನ್ನು ಈ ಸಂಕಟ ಕಾಲದಿಂದ ರಕ್ಷಿಸು ಎನ್ನಬೇಕೇ?’ ಇಲ್ಲ! ಸಂಕಟಪಡುವುದಕ್ಕೋಸ್ಕರವೇ ನಾನು ಬಂದಿದ್ದೇನೆ. 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೊ!” ಎಂದು ಹೇಳಿದನು.
ಆಗ ಪರಲೋಕದಿಂದ, “ನನ್ನ ಹೆಸರನ್ನು ಮಹಿಮೆಪಡಿಸಿಕೊಂಡಿದ್ದೇನೆ. ನಾನು ಮತ್ತೆ ಮಹಿಮೆಪಡಿಸಿಕೊಳ್ಳುವೆನು” ಎಂಬ ವಾಣಿ ಆಯಿತು.
29 ಅಲ್ಲಿ ನಿಂತಿದ್ದ ಜನರು ಈ ವಾಣಿಯನ್ನು ಕೇಳಿ “ಅದು ಗುಡುಗು” ಎಂದರು.
ಆದರೆ ಇತರರು, “ದೇವದೂತನೊಬ್ಬನು ಯೇಸುವಿನೊಂದಿಗೆ ಮಾತಾಡಿದನು!” ಎಂದರು.
30 ಯೇಸು ಜನರಿಗೆ, “ಆ ವಾಣಿಯಾದದ್ದು ನನಗೋಸ್ಕರವಲ್ಲ, ನಿಮಗೋಸ್ಕರ. 31 ಈ ಲೋಕಕ್ಕೆ ತೀರ್ಪಾಗುವ ಕಾಲ ಇದೇ ಆಗಿದೆ. ಈಗ ಈ ಲೋಕದ ಅಧಿಪತಿಯನ್ನು (ಸೈತಾನ) ಹೊರಗೆ ದಬ್ಬಲಾಗುವುದು. 32 ನಾನು ಭೂಮಿಯಿಂದ ಮೇಲೆತ್ತಲ್ಪಡುವೆನು. ಆಗ ನಾನು ಎಲ್ಲಾ ಜನರನ್ನು ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33 ತಾನು ಸಾಯುವ ರೀತಿಯನ್ನು ಯೇಸು ಈ ಮಾತಿನ ಮೂಲಕ ಸೂಚಿಸಿದನು.
34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.
35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.
ಯೆಹೂದ್ಯರ ಅಪನಂಬಿಕೆ
37 ಯೇಸು ಅನೇಕ ಮಹತ್ಕಾರ್ಯಗಳನ್ನು ಮಾಡಿದನು. ಜನರು ಆ ಕಾರ್ಯಗಳನ್ನೆಲ್ಲಾ ನೋಡಿದರೂ ಆತನಲ್ಲಿ ನಂಬಿಕೆ ಇಡಲಿಲ್ಲ. 38 ಇದರಿಂದಾಗಿ, ಪ್ರವಾದಿಯಾದ ಯೆಶಾಯನು ಹೇಳಿದ್ದ ಮಾತುಗಳು ನೆರವೇರಿದವು. ಅದೇನೆಂದರೆ:
“ಪ್ರಭುವೇ, ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು?
ಪ್ರಭುವಿನ ಬಾಹುಬಲವು ಯಾರಿಗೆ ಗೋಚರವಾಯಿತು?”(C)
39 ಆದಕಾರಣವೇ ಜನರು ನಂಬಲಾಗಲಿಲ್ಲ. ಏಕೆಂದರೆ ಯೆಶಾಯನು ಮತ್ತೊಂದು ಕಡೆಯಲ್ಲಿ ಹೀಗೆ ಹೇಳಿದ್ದಾನೆ:
40 “ತಮ್ಮ ಕಣ್ಣುಗಳಿಂದ ಕಾಣದಂತೆ
ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆ
ಪರಿವರ್ತನೆಗೊಂಡು ಗುಣಹೊಂದದಂತೆ ಆತನು ಅವರನ್ನು ಕುರುಡರನ್ನಾಗಿ ಮಾಡಿದ್ದಾನೆ,
ಅವರ ಮನಸ್ಸುಗಳನ್ನು ಕಲ್ಲಾಗಿಸಿದ್ದಾನೆ.”(D)
41 ಯೆಶಾಯನು ಆತನ (ಯೇಸುವಿನ) ಮಹಿಮೆಯನ್ನು ನೋಡಿದ್ದರಿಂದಲೇ ಹೀಗೆ ಹೇಳಿದನು.
42 ಆದರೆ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅನೇಕ ಯೆಹೂದ್ಯನಾಯಕರು ಸಹ ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಅವರು ಫರಿಸಾಯರಿಗೆ ಹೆದರಿಕೊಂಡು ತಮ್ಮ ನಂಬಿಕೆಯನ್ನು ಬಹಿರಂಗಪಡಿಸಲಿಲ್ಲ. ತಮ್ಮನ್ನು ಫರಿಸಾಯರು ಸಭಾಮಂದಿರದಿಂದ ಬಹಿಷ್ಕರಿಸುತ್ತಾರೆ ಎಂಬ ಭಯ ಅವರಿಗಿತ್ತು. 43 ಈ ಜನರು ದೇವರ ಹೊಗಳಿಕೆಗಿಂತಲೂ ಜನರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು
44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.
47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”
Kannada Holy Bible: Easy-to-Read Version. All rights reserved. © 1997 Bible League International