Chronological
ವಿರೋಧಿಗಳ ಕುಯುಕ್ತಿ
6 ಸನ್ಬಲ್ಲಟನಿಗೆ, ಟೋಬೀಯನಿಗೆ, ಅರಬಿಯವನಾದ ಗೆಷೆಮನಿಗೆ ಮತ್ತು ಇನ್ನಿತರ ವೈರಿಗಳಿಗೆ ನಾವು ಗೋಡೆಯನ್ನು ಕಟ್ಟಿ ಮುಗಿಸಿದ್ದು ಗೊತ್ತಾಯಿತು. ಗೋಡೆಯಲ್ಲಿದ್ದ ಎಲ್ಲಾ ಕಿಂಡಿಗಳನ್ನು ನಾವು ಮುಚ್ಚಿದೆವು. ಆದರೆ ಗೋಡೆಯಲ್ಲಿನ ದ್ವಾರಗಳಿಗೆ ಇನ್ನೂ ಬಾಗಿಲುಗಳನ್ನು ಇಟ್ಟಿರಲಿಲ್ಲ. 2 ಸನ್ಬಲ್ಲಟನು ಮತ್ತು ಗೆಷೆಮನು ನನಗೆ ಒಂದು ಸಂದೇಶವನ್ನು ಕಳುಹಿಸಿ, “ನೆಹಮೀಯನೇ, ನಾವು ಓನೋ ಬಯಲಿನಲ್ಲಿರುವ ಹಕ್ಕೆಫಿರೀಮ್ ಎಂಬ ಪಟ್ಟಣದಲ್ಲಿ ಭೇಟಿಯಾಗೋಣ” ಎಂದು ಬರೆದಿದ್ದರು. ಓನೋ ಬಯಲಿನಲ್ಲಿ ನನಗೆ ಅವರು ಕೇಡು ಮಾಡಬೇಕೆಂದಿದ್ದರು.
3 ನಾನು ಅವರಿಗೆ ಸೇವಕರ ಮುಖಾಂತರ ಈ ಉತ್ತರವನ್ನು ಕಳುಹಿಸಿದೆನು: “ನಾನು ಬಹಳ ವಿಶೇಷವಾದ ಕೆಲಸ ಮಾಡಿಸುತ್ತಿದ್ದೇನೆ. ಆದ್ದರಿಂದ ನನಗೆ ಬರಲು ಸಾಧ್ಯವಿಲ್ಲ. ನನ್ನ ಬರುವಿಕೆಯಿಂದಾಗಿ ಈ ಕೆಲಸವು ನಿಂತು ಹೋಗಬಾರದು.”
4 ಸನ್ಬಲ್ಲಟನೂ ಗೆಷೆಮನೂ ಅದೇ ಸಂದೇಶವನ್ನು ನಾಲ್ಕು ಸಲ ಕಳುಹಿಸಿದರು. ಪ್ರತಿ ಸಾರಿಯೂ ಅದೇ ಉತ್ತರವನ್ನು ನಾನು ಅವರಿಗೆ ಕಳುಹಿಸಿದೆನು. 5 ಐದನೆಯ ಸಾರಿ ಸನ್ಬಲ್ಲಟನು ತನ್ನ ಸೇವಕನೊಂದಿಗೆ ಮುದ್ರೆಯಿಂದ ಮುಚ್ಚಲ್ಪಡದ ಪತ್ರವನ್ನು ಕಳುಹಿಸಿಕೊಟ್ಟನು. 6 ಅದರಲ್ಲಿ,
“ಒಂದು ಸುದ್ದಿಯು ಹರಡುತ್ತಲಿದೆ. ಎಲ್ಲಾ ಕಡೆಗಳಲ್ಲಿ ಜನರು ಅದರ ವಿಷಯವಾಗಿ ಮಾತಾಡುತ್ತಿದ್ದಾರೆ. ಆ ಸುದ್ದಿಯು ಸತ್ಯವೆಂದು ಗೆಷೆಮನು ನನಗೆ ಹೇಳಿದನು. ನೀನು ಮತ್ತು ಯೆಹೂದ್ಯರು ಅರಸನಿಗೆ ವಿರುದ್ಧವಾಗಿ ದಂಗೆ ಏಳಲು ಯೋಚಿಸುತ್ತಿದ್ದೀರೆಂಬ ವದಂತಿ ಇದೆ. ಅದಕ್ಕೋಸ್ಕರವಾಗಿಯೇ ನೀವು ಕೋಟೆಗೋಡೆಯನ್ನು ಕಟ್ಟುತ್ತಿದ್ದೀರಿ. ನೀನು ಯೆಹೂದ್ಯರ ಅರಸನಾಗುವೆ ಎಂದೂ ಜನರಲ್ಲಿ ಸುದ್ದಿ ಹಬ್ಬಿದೆ. 7 ಮಾತ್ರವಲ್ಲದೆ ನಿನ್ನನ್ನು ಯೆಹೂದ ಪ್ರಾಂತ್ಯದ ಅರಸನೆಂದು ಪ್ರಕಟಿಸಲಿಕ್ಕೆ ಪ್ರವಾದಿಗಳನ್ನು ಆರಿಸಿಕೊಂಡಿರುವೆ ಎಂಬ ಸುದ್ದಿಯೂ ಇದೆ. ರಾಜನಾದ ಅರ್ತಷಸ್ತನು ಇದರ ಬಗ್ಗೆ ಕೇಳುವುದಕ್ಕಿಂತ ಮೊದಲೇ ನಾವು ಕುಳಿತುಕೊಂಡು ಮಾತನಾಡೋಣ” ಎಂದು ಬರೆಯಲಾಗಿತ್ತು.
8 ನಾನು ಆ ಕಾಗದವನ್ನು ಹಾಗೆಯೇ ಹಿಂದಕ್ಕೆ ಕಳುಹಿಸಿದೆನು. ಅಲ್ಲದೆ, “ನೀನು ಹೇಳುವಂಥದ್ದೇನೂ ಆಗಲಿಲ್ಲ. ಇದು ಕೇವಲ ನಿನ್ನ ಊಹೆಯಷ್ಟೇ!” ಎಂದು ಹೇಳಿ ಕಳುಹಿಸಿದೆನು.
9 ನಾವು ಹೆದರಿಹೋಗಬೇಕೆಂದು ನಮ್ಮ ವೈರಿಗಳ ಕುತಂತ್ರವಿದೆ. “ಯೆಹೂದ್ಯರು ಭಯಗೊಂಡು ಬಲಹೀನರಾಗುವುದರಿಂದ ಅವರ ಕೆಲಸವನ್ನು ಮುಂದುವರಿಸಲು ಆಗುವುದಿಲ್ಲ, ಗೋಡೆಯೂ ಪೂರ್ಣಗೊಳ್ಳುವುದಿಲ್ಲ” ಎಂದು ಅವರು ಯೋಚಿಸಿಕೊಂಡಿದ್ದಾರೆ.
ಆದರೆ ನಾನು, “ದೇವರೇ, ನನ್ನನ್ನು ಬಲಗೊಳಿಸು” ಎಂದು ಪ್ರಾರ್ಥಿಸಿದೆನು.
10 ಒಂದು ದಿನ ನಾನು ದೆಲಾಯನ ಮಗನಾದ ಶೆಮಾಯನ ಮನೆಗೆ ಹೋದೆನು. ದೆಲಾಯನು ಮೆಹೇಟಬೇಲನ ಮಗ. ಆಗ ಶೆಮಾಯನು ಮನೆಯಲ್ಲಿದ್ದನು. ಅವನು, “ನೆಹೆಮೀಯನೇ, ನಾವು ದೇವಾಲಯದಲ್ಲಿ ಭೇಟಿಯಾಗೋಣ. ನಾವು ಅದರ ಒಳಗೆ ಹೋಗಿ ಕದಗಳನ್ನು ಮುಚ್ಚಿಕೊಳ್ಳೋಣ. ಯಾಕೆಂದರೆ ನಿನ್ನನ್ನು ಕೊಲ್ಲಲು ಈ ರಾತ್ರಿ ಜನರು ಬರುತ್ತಾರೆ” ಎಂದು ಹೇಳಿದನು.
11 ಆದರೆ ನಾನು ಶೆಮಾಯನಿಗೆ, “ನನ್ನಂಥ ಪುರುಷನು ಓಡಿಹೋಗಬೇಕೆ? ನನ್ನಂಥ ಸಾಮಾನ್ಯ ವ್ಯಕ್ತಿ ದೇವಾಲಯಕ್ಕೆ ಹೋಗಿ ಅವಿತುಕೊಳ್ಳಬಾರದು. ನಾನು ಬರುವುದಿಲ್ಲ” ಎಂದು ಹೇಳಿದೆನು.
12 ಶೆಮಾಯನನ್ನು ದೇವರು ಕಳುಹಿಸಿಲ್ಲವೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಟೋಬೀಯ ಮತ್ತು ಸನ್ಬಲ್ಲಟ್ ಅವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದ್ದರು. 13 ನಾನು ಭಯಗೊಂಡು ದೇವಾಲಯದೊಳಗೆ ಓಡಿಹೋಗಿ ದೋಷಿಯಾಗುವಂತೆಯೂ ನನ್ನ ಮೇಲೆ ಹಾಗೆ ಅಪರಾಧ ಹೊರಿಸಲು ತಮಗೆ ಕಾರಣ ದೊರೆಯುವಂತೆಯೂ ಅವರು ಶೆಮಾಯನನ್ನು ಉಪಯೋಗಿಸಿಕೊಂಡರು.
14 ದೇವರೇ, ಟೋಬೀಯ ಮತ್ತ ಸನ್ಬಲ್ಲಟನ ವಿಚಾರವಾಗಿ ನಿನ್ನ ಜ್ಞಾಪಕದಲ್ಲಿರಿಸು. ಅವರು ಮಾಡಿದ ಕೆಟ್ಟಕಾರ್ಯಗಳನ್ನು ನೆನಪಿನಲ್ಲಿಡು. ಅದೇ ಸಮಯದಲ್ಲಿ ಪ್ರವಾದಿನಿಯಾದ ನೋವದ್ಯಳನ್ನು, ಇತರ ಪ್ರವಾದಿಗಳನ್ನು, ನನ್ನನ್ನು ಹೆದರಿಸುವವರನ್ನು ನೆನಪು ಮಾಡಿಕೊ.
ಗೋಡೆಯ ಕೆಲಸ ಮುಕ್ತಾಯವಾಯಿತು
15 ಏಲೂಲ್ ತಿಂಗಳ ಇಪ್ಪತ್ತೈದನೆಯ ದಿನದಲ್ಲಿ ಜೆರುಸಲೇಮಿನ ಪೌಳಿಗೋಡೆಗಳ ಕೆಲಸ ಮುಕ್ತಾಯವಾಯಿತು. ಅದಕ್ಕೆ ಒಟ್ಟು ಐವತ್ತೆರಡು ದಿನಗಳು ಬೇಕಾದವು. 16 ನಮ್ಮ ವೈರಿಗಳೆಲ್ಲಾ ಕೆಲಸ ಸಂಪೂರ್ಣವಾದದ್ದನ್ನು ಕೇಳಿದರು. ನಮ್ಮ ಸುತ್ತಮುತ್ತಲಿನ ಪ್ರಾಂತ್ಯಗಳವರಿಗೂ ದೇಶಗಳವರಿಗೂ ಈ ಸುದ್ದಿಮುಟ್ಟಿತು. ಆಗ ಅವರ ಧೈರ್ಯವು ಕುಗ್ಗಿತು. ಯಾಕೆಂದರೆ ಈ ಮಹಾಕಾರ್ಯವನ್ನು ನಮ್ಮ ದೇವರ ಸಹಾಯದಿಂದಲೇ ನಾವು ಮಾಡಿದ್ದೇವೆಂದು ಅವರಿಗೆ ಅರ್ಥವಾಯಿತು.
17 ಅದೇ ಸಮಯದಲ್ಲಿ ಗೋಡೆಯ ಕೆಲಸ ಮುಗಿದ ಬಳಿಕ ಯೆಹೂದ ಪ್ರಾಂತ್ಯದ ಧನಿಕರು ಟೋಬೀಯನಿಗೆ ಆಗಾಗ್ಗೆ ಅನೇಕ ಪತ್ರ ಬರೆಯುತ್ತಿದ್ದರು. 18 ಟೋಬೀಯನೂ ಅವರಿಗೆ ಉತ್ತರಿಸುತ್ತಿದ್ದನು. ಅವರು ಆ ಪತ್ರಗಳನ್ನು ಕಳುಹಿಸಲು ಕಾರಣವೇನೆಂದರೆ ಯೆಹೂದ್ಯರಲ್ಲಿ ಅನೇಕ ಜನರು ಅವನಿಗೆ ನಂಬಿಗಸ್ತರಾಗಿರುವುದಾಗಿ ವಾಗ್ದಾನ ಮಾಡಿದ್ದರು. ಟೋಬೀಯನು ಆರಹನ ಮಗನಾದ ಶೆಕನ್ಯನ ಅಳಿಯನಾಗಿದ್ದುದೇ ಇದಕ್ಕೆ ಕಾರಣ. ಟೋಬೀಯನ ಮಗನಾದ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳೊಂದಿಗೆ ಲಗ್ನವಾಗಿದ್ದನು. 19 ಹಿಂದಿನ ಕಾಲದಲ್ಲಿ ಆ ಜನರು ಟೋಬೀಯನಿಗೆ ಒಂದು ವಿಶೇಷ ವಾಗ್ದಾನ ಮಾಡಿದ್ದರು. ಆದ್ದರಿಂದ ಟೋಬೀಯನು ಎಷ್ಟು ಒಳ್ಳೆಯವನೆಂದು ನನ್ನೊಂದಿಗೆ ಹೇಳುತ್ತಿದ್ದರು; ನಾನು ಮಾಡುತ್ತಿರುವ ಕಾರ್ಯಗಳ ಬಗ್ಗೆಯೂ ಅವರು ಟೋಬೀಯನಿಗೆ ವರದಿ ಮಾಡುತ್ತಿದ್ದರು. ಟೋಬೀಯನು ನನ್ನನ್ನು ಬೆದರಿಸುವುದಕ್ಕೋಸ್ಕರ ನನಗೆ ಪದೇಪದೇ ಪತ್ರ ಬರೆಯುತ್ತಿದ್ದನು.
7 ಗೋಡೆಯ ಕೆಲಸ ಪೂರ್ತಿಯಾದ ಬಳಿಕ ದ್ವಾರಗಳಿಗೆ ಬಾಗಿಲುಗಳನ್ನು ಇಡಲು ಪ್ರಾರಂಭಿಸಿದೆವು; ಬಾಗಿಲುಗಳಿಗೆ ಕಾವಲುಗಾರರನ್ನು ನೇಮಿಸಿದೆವು. ದೇವಾಲಯದಲ್ಲಿ ಬೇಕಾಗಿರುವ ಗಾಯಕರನ್ನು ಮತ್ತು ಯಾಜಕರಿಗೆ ಬೇಕಾದ ಸಹಾಯಕರನ್ನು ಆರಿಸಿದೆವು. 2 ಇದಾದ ಬಳಿಕ ನನ್ನ ಸಹೋದರ ಹಾನಾನಿಯನನ್ನು ಜೆರುಸಲೇಮಿನ ಆಡಳಿತಗಾರನನ್ನಾಗಿ ನೇಮಿಸಿದೆನು. ಹನನ್ಯನನ್ನು ಜೆರುಸಲೇಮಿನ ಕೋಟೆಗೆ ಅಧಿಪತಿಯನ್ನಾಗಿ ಆರಿಸಿದೆನು. ಹಾನಾನಿಯು ನಂಬಿಗಸ್ತನೂ ದೇವರಿಗೆ ಭಯಪಡುವವನೂ ಆಗಿದ್ದುದರಿಂದ ನಾನು ಅವನನ್ನು ಆರಿಸಿಕೊಂಡೆನು. 3 ಹನಾನಿಗೆ ಮತ್ತು ಹನನ್ಯನಿಗೆ ನಾನು ಆಜ್ಞಾಪಿಸಿದ್ದೇನೆಂದರೆ: “ಸೂರ್ಯೋದಯವಾಗಿ ಕೆಲವು ತಾಸು ಕಳೆದ ಮೇಲೆಯೇ ನೀವು ಜೆರುಸಲೇಮಿನ ಬಾಗಿಲುಗಳನ್ನು ತೆರೆಯಬೇಕು; ಸೂರ್ಯನು ಮುಳುಗುವ ಮೊದಲೇ ನೀವು ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಬೇಕು. ಜೆರುಸಲೇಮಿನಲ್ಲಿ ವಾಸವಾಗಿರುವವರನ್ನೇ ಕಾವಲುಗಾರರನ್ನಾಗಿ ಆರಿಸಿಕೊಳ್ಳಿರಿ. ವಿಶೇಷವಾದ ಸ್ಥಳಗಳಲ್ಲಿ ಪಟ್ಟಣವನ್ನು ಕಾಯುವುದಕ್ಕಾಗಿ ಅವರಲ್ಲಿ ಕೆಲವರನ್ನು ನೇಮಿಸಿರಿ; ಉಳಿದವರನ್ನು ಅವರವರ ಮನೆಯ ಸಮೀಪದಲ್ಲಿಯೇ ಕಾಯಲು ನೇಮಿಸಿರಿ.”
ಸೆರೆಹಿಡಿಯಲ್ಪಟ್ಟವರಲ್ಲಿ ಹಿಂತಿರುಗಿಬಂದವರ ಪಟ್ಟಿ
4 ಜೆರುಸಲೇಮ್ ಪಟ್ಟಣವು ವಿಸ್ತಾರವಾಗಿದ್ದರೂ ಅದರಲ್ಲಿ ವಾಸಿಸುವ ಜನರು ಸ್ವಲ್ಪವೇ ಆಗಿದ್ದರು. ಕೆಡವಲ್ಪಟ್ಟಿದ್ದ ಮನೆಗಳು ತಿರುಗಿ ಕಟ್ಟಲ್ಪಡಲಿಲ್ಲ. 5 ಆದ್ದರಿಂದ ನನ್ನ ದೇವರು ನಮ್ಮ ಜನರನ್ನು ಒಟ್ಟುಗೂಡಿಸುವಂತೆ ನನ್ನನ್ನು ಪ್ರೇರೇಪಿಸಿದನು. ಅಂತೆಯೇ ನಾನು ಎಲ್ಲಾ ಗಣ್ಯರನ್ನು, ಅಧಿಕಾರಿಗಳನ್ನು ಮತ್ತು ಸಾಮಾನ್ಯರನ್ನು ಒಟ್ಟಾಗಿ ಸೇರಿಬರಲು ಆಮಂತ್ರಿಸಿದೆನು. ಇವರ ಕುಟುಂಬಗಳ ಪಟ್ಟಿಯನ್ನು ನಾನು ಮಾಡಬೇಕಿತ್ತು. ಮೊಟ್ಟಮೊದಲನೆಯ ಸಾರಿ ಸೆರೆಯಿಂದ ಹಿಂತಿರುಗಿ ಬಂದ ಸಂಸಾರಗಳ ಪಟ್ಟಿಯು ನನಗೆ ದೊರೆಯಿತು. ಅದರ ವಿವರ ಹೀಗಿದೆ:
6 ಬಹಳ ಕಾಲದ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಯಾಳುಗಳನ್ನಾಗಿ ಬಾಬಿಲೋನಿಗೆ ಒಯ್ದಿದ್ದನು. ಇವರು ಹಿಂದೆ ಜೆರುಸಲೇಮಿಗೂ ಯೆಹೂದ ಪ್ರಾಂತ್ಯಕ್ಕೂ ಹಿಂತಿರುಗಿ ತಮ್ಮತಮ್ಮ ಊರುಗಳಿಗೆ ಹೋಗಿ ನೆಲೆಸಿದರು. 7 ಇವರು ಜೆರುಬ್ಬಾಬೆಲ್‌ನೊಂದಿಗೆ ಹಿಂತಿರುಗಿದರು. ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್ ಮತ್ತು ಬಾಣ. ಇಸ್ರೇಲಿನ ಜನರಲ್ಲಿ ಹಿಂದೆ ಬಂದವರ ವಿವರ:
8 ಪರೋಷನ ಸಂತಾನದವರು | 2,172 |
9 ಶೆಫಟ್ಯನ ಸಂತಾನದವರು | 372 |
10 ಆರಹನ ಸಂತಾನದವರು | 652 |
11 ಪಹತ್ ಮೋವಾಬಿನವರಾದ ಯೇಷೂವನ ಮತ್ತು ಯೋವಾಬನ ಸಂತಾನದವರು | 2,818 |
12 ಏಲಾಮನ ಸಂತಾನದವರು | 1,254 |
13 ಜತ್ತೂವಿನ ಸಂತಾನದವರು | 845 |
14 ಜಕ್ಕೈನ ಸಂತಾನದವರು | 760 |
15 ಬಿನ್ನೂಯನ ಸಂತಾನದವರು | 648 |
16 ಬೇಬೈಯ ಸಂತಾನದವರು | 628 |
17 ಅಜ್ಗಾದಿನ ಸಂತಾನದವರು | 2,322 |
18 ಅದೋನಿಕಾಮನ ಸಂತಾನದವರು | 667 |
19 ಬಿಗ್ವೈನ ಸಂತಾನದವರು | 2,067 |
20 ಆದೀನನ ಸಂತಾನದವರು | 655 |
21 ಹಿಜ್ಕೀಯ ಕುಟುಂಬಕ್ಕೆ ಸೇರಿದ ಆಟೇರಿನ ಸಂತಾನದವರು | 98 |
22 ಹಾಷುಮಿನ ಸಂತಾನದವರು | 328 |
23 ಬೇಚೈಯ ಸಂತಾನದವರು | 324 |
24 ಹಾರಿಫನ ಸಂತಾನದವರು | 112 |
25 ಗಿಬ್ಯೋನನ ಸಂತಾನದವರು | 95 |
26 ಬೆತ್ಲೆಹೇಮ್ ಮತ್ತು ನೆಟೋಫ ಊರಿನವರು | 188 |
27 ಅನಾತೋತ್ ಊರಿನವರು | 128 |
28 ಬೇತಜ್ಮಾವೇತ್ ಪಟ್ಟಣದವರು | 42 |
29 ಕಿರ್ಯತ್ಯಾರೀಮ್, ಕೆಫೀರಾ ಮತ್ತು ಬೇರೋತ್ ಪಟ್ಟಣದವರು | 743 |
30 ರಾಮಾ ಮತ್ತು ಗೆಬ ಪಟ್ಟಣದವರು | 621 |
31 ಮಿಕ್ಮಾಸಿಯ ಪಟ್ಟಣದವರು | 122 |
32 ಬೇತೇಲ್ ಮತ್ತು ಆಯಿ ಪಟ್ಟಣದವರು | 123 |
33 ನೆಬೋ ಎಂಬ ಇನ್ನೊಂದು ಪಟ್ಟಣದವರು | 52 |
34 ಏಲಾಮ್ ಎಂಬ ಇನ್ನೊಂದು ಊರಿನವರು | 1,254 |
35 ಹಾರಿಮ್ ಪಟ್ಟಣದವರು | 320 |
36 ಜೆರಿಕೊ ಪಟ್ಟಣದವರು | 345 |
37 ಲೋದ್, ಹಾದೀದ್ ಮತ್ತು ಓನೋ ಪಟ್ಟಣದವರು | 721 |
38 ಸೆನಾಹ ಪಟ್ಟಣದವರು | 3,930 |
39 ಯಾಜಕರಲ್ಲಿ:
ಯೆದಾಯನವರಾದ ಯೇಷೂವನ ಸಂತಾನದವರು | 973 |
40 ಇಮ್ಮೇರನ ಸಂತಾನದವರು | 1,052 |
41 ಪಷ್ಹೂರನ ಸಂತಾನದವರು | 1,247 |
42 ಹಾರಿಮನ ಸಂತಾನದವರು | 1,017 |
43 ಲೇವಿಕುಲದವರಲ್ಲಿ:
ಹೋದವ್ಯನವರಾದ ಯೇಷೂವನ ಮತ್ತು ಕದ್ಮೀಯೇಲನ ಸಂತಾನದವರು | 74 |
44 ಗಾಯಕರಲ್ಲಿ:
ಆಸಾಫನ ಸಂತಾನದವರು | 148 |
45 ದ್ವಾರಪಾಲಕರಲ್ಲಿ:
ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ ಮತ್ತು ಶೋಬೈಯ ಸಂತಾನದವರು | 138 |
46 ದೇವಾಲಯದ ಸೇವಕರಲ್ಲಿ:
ಜೀಹನ ಸಂತಾನದವರು, ಹಸೂಫ, ಟಬ್ಬಾವೋತ್,
47 ಕೇರೋಸ್, ಸೀಯ, ಪಾದೋನ್,
48 ಲೆಬಾನ, ಹಗಾಬ, ಸಲ್ಮೈ,
49 ಹಾನಾನ್, ಗಿದ್ದೇಲ್, ಗಹರ್,
50 ರೆವಾಯ, ರೆಚೀನ್, ನೆಕೋದ,
51 ಗಜ್ಜಾಮ್, ಉಜ್ಜ, ಪಾಸೇಹ,
52 ಬೇಸೈ, ಮೆಯನೀಮ್, ನೆಫೀಷೆಸೀಮ್,
53 ಬಕ್ಬೂಕ್, ಹಕ್ಕೂಫ, ಹರ್ಹೂರ್,
54 ಬಚ್ಲೂತ್, ಮೆಹೀದ್, ಹರ್ಷ,
55 ಬರ್ಕೋಸ್, ಸೀಸೆರ, ತೆಮಹ,
56 ನೆಚೀಹ ಮತ್ತು ಹಟೀಫ.
57 ಇವರು ಸೊಲೊಮೋನನ ಸೇವಕರ ಸಂತಾನದವರು:
ಸೋಟೈ, ಸೋಫೆರೆತ್, ಪೆರೀದ,
58 ಯಾಲ, ದರ್ಕೋನ್, ಗಿದ್ದೇಲ್,
59 ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮೋನ್.
60 ದೇವಾಲಯದ ಸೇವಕರು ಮತ್ತು ಸೊಲೊಮೋನನ ಸೇವಕರ ಸಂತಾನದವರು | 392 |
61 ತೇಲ್ಮೆಲಹ ತೇಲ್ಹರ್ಷ, ಕೆರೂಬದ್ದೋನ್ ಮತ್ತು ಇಮ್ಮೇರ್ ಪಟ್ಟಣಗಳಿಂದ ಜೆರುಸಲೇಮಿಗೆ ಕೆಲವು ಮಂದಿ ಬಂದರು. ಆದರೆ ಇವರು ನಿಜವಾಗಿಯೂ ಇಸ್ರೇಲ್ ಜನಾಂಗದವರೆಂಬದಾಗಿ ಅವರಿಗೆ ರುಜುವಾತು ಮಾಡಲಾಗಲಿಲ್ಲ.
62 ದೆಲಾಯ, ಟೋಬೀಯ ಮತ್ತು ನೆಕೋದನ ಸಂತಾನದವರು | 642 |
63 ಯಾಜಕರಲ್ಲಿ:
ಹೋಬಾಯ, ಹಕ್ಕೋಚ್ ಮತ್ತು ಬರ್ಜಿಲ್ಲೈ (ಗಿಲ್ಯಾದ್ಯನಾದ ಬರ್ಜಿಲ್ಲೈಯ ಮಗಳನ್ನು ಮದುವೆಯಾದವನು ಬರ್ಜಿಲ್ಲೈ ಎಂಬ ಹೆಸರನ್ನು ಇಟ್ಟುಕೊಂಡಿದ್ದನು.) ಸಂತಾನದವರು.
64 ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಾಡಿದರೂ ಸಿಗಲಿಲ್ಲ. ತಮ್ಮ ಪೂರ್ವಿಕರು ಯಾಜಕರೆಂದು ರುಜುವಾತು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಯಾಜಕ ಪಟ್ಟಿಯಲ್ಲಿ ಅವರನ್ನು ಸೇರಿಸಲಿಲ್ಲ. 65 ಒಬ್ಬ ಪ್ರಧಾನ ಯಾಜಕನು ಊರೀಮ್ ತುಮ್ಮೀಮ್ ಧರಿಸಿ ದೇವರಿಂದ ಉತ್ತರವನ್ನು ಹೊಂದುವ ತನಕ ಅವರಲ್ಲಿ ಯಾರೂ ಪವಿತ್ರ ಆಹಾರದಲ್ಲಿ ಯಾವುದನ್ನೂ ತಿನ್ನಬಾರದೆಂದು ರಾಜ್ಯಪಾಲನು ಆಜ್ಞಾಪಿಸಿದನು.
66-67 ಹೀಗೆ ಹಿಂತಿರುಗಿ ಬಂದವರ ಒಟ್ಟು ಸಂಖ್ಯೆ 42,360. ಇವರಲ್ಲಿ 7,337 ಮಂದಿ ಅವರ ಸೇವಕಸೇವಕಿಯರಾಗಿದ್ದರು. 245 ಮಂದಿ ಗಾಯಕಗಾಯಕಿಯರು ಈ ಸಂಖ್ಯೆಯಲ್ಲಿ ಸೇರಿರಲಿಲ್ಲ. 68-69 ಅವರಲ್ಲಿ 736 ಕುದುರೆಗಳು, 245 ಹೇಸರಕತ್ತೆಗಳು, 435 ಒಂಟೆಗಳು ಮತ್ತು 6,720 ಕತ್ತೆಗಳು ಇದ್ದವು.
70 ಇವರ ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕ್ಕಾಗಿ ಹಣವನ್ನು ದಾನವಾಗಿ ಕೊಟ್ಟರು. ರಾಜ್ಯಪಾಲನು ಹತ್ತೊಂಭತ್ತು ಪೌಂಡು ಬಂಗಾರವನ್ನು. ಐವತ್ತು ಬೋಗುಣಿಗಳನ್ನು ಮತ್ತು ಐನೂರ ಮೂವತ್ತು ಯಾಜಕರ ವಸ್ತ್ರಗಳನ್ನು ಕೊಟ್ಟನು. 71 ಗೋತ್ರಪ್ರಧಾನರು ಮೂನ್ನೂರ ಎಪ್ಪತ್ತೈದು ಪೌಂಡು ಬಂಗಾರವನ್ನು, ಹದಿಮೂರುವರೆ ಕ್ವಿಂಟಾಲ್ ಬೆಳ್ಳಿಯನ್ನು ದಾನವಾಗಿ ಕೊಟ್ಟರು. 72 ಒಟ್ಟು ಇತರರು ಮುನ್ನೂರ ಎಪ್ಪತ್ತೈದು ಪೌಂಡು ಬಂಗಾರ, ಹದಿಮೂರುವರೆ ಕ್ವಿಂಟಾಲ್ ಬೆಳ್ಳಿ ಮತ್ತು ಅರವತ್ತೇಳು ಯಾಜಕರ ಬಟ್ಟೆಯನ್ನು ದಾನವಾಗಿ ಕೊಟ್ಟರು.
73 ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು ಮತ್ತು ದೇವಾಲಯದ ಸೇವಕರು ತಮ್ಮ ತಮ್ಮ ಊರುಗಳಿಗೆ ಹೋಗಿ ನೆಲೆಸಿದರು. ಇತರ ಎಲ್ಲಾ ಇಸ್ರೇಲರು ತಮ್ಮ ಪಟ್ಟಣಗಳಲ್ಲಿ ನೆಲೆಸಿದರು. ಆ ವರ್ಷದ ಏಳನೆಯ ತಿಂಗಳಲ್ಲಿ ಎಲ್ಲಾ ಇಸ್ರೇಲರು ತಮ್ಮತಮ್ಮ ಪಟ್ಟಣಗಳಲ್ಲಿ ನೆಲೆಸಿದರು.
Kannada Holy Bible: Easy-to-Read Version. All rights reserved. © 1997 Bible League International