Beginning
ಯೋಹಾನನು ಪರಲೋಕವನ್ನು ನೋಡಿದನು
4 ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು. 2 ಕೂಡಲೇ ನಾನು ಪವಿತ್ರಾತ್ಮನ ವಶನಾದೆನು. ಪರಲೋಕದಲ್ಲಿ ನನ್ನೆದುರಿಗೆ ಒಂದು ಸಿಂಹಾಸನವಿತ್ತು. ಯಾರೋ ಒಬ್ಬನು ಆ ಸಿಂಹಾಸನದ ಮೇಲೆ ಕುಳಿತಿದ್ದನು. 3 ಸಿಂಹಾಸನದ ಮೇಲೆ ಕುಳಿತಿದ್ದಾತನು ಅಮೂಲ್ಯವಾದ ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಬಣ್ಣದ ಕಾಮನಬಿಲ್ಲಿತ್ತು.
4 ಆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿದ್ದರು. ಅವರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. 5 ಆ ಸಿಂಹಾಸನದಿಂದ ಸಿಡಿಲಿನ ಆರ್ಭಟವೂ ಗುಡುಗಿನ ಧ್ವನಿಯೂ ಬರುತ್ತಿತ್ತು. ಆ ಸಿಂಹಾಸನದ ಮುಂದೆ ಏಳು ದೀಪಗಳು ಬೆಳಗುತ್ತಿದ್ದವು. ಈ ದೀಪಗಳು ದೇವರ ಏಳು ಆತ್ಮಗಳಾಗಿದ್ದವು. 6 ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಣುವ ವಸ್ತುವೊಂದಿತ್ತು. ಅದು ಸ್ಫಟಿಕದಂತೆ ಸ್ಪಚ್ಛವಾಗಿತ್ತು.
ಆ ಸಿಂಹಾಸನದ ಮುಂದೆ ಮತ್ತು ಅದರ ಪ್ರತಿಯೊಂದು ಮಗ್ಗುಲಿನಲ್ಲೂ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗದಲ್ಲೆಲ್ಲಾ ಮತ್ತು ಮುಂಭಾಗದಲ್ಲೆಲ್ಲಾ ಕಣ್ಣುಗಳು ತುಂಬಿದ್ದವು. 7 ಮೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖದಂತಿತ್ತು. ನಾಲ್ಕನೆಯದು ಹಾರುವ ಗರುಡನಂತಿತ್ತು.[a] 8 ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಈ ಜೀವಿಗಳ ಹೊರಭಾಗದಲ್ಲೆಲ್ಲಾ ಮತ್ತು ಒಳಭಾಗದಲ್ಲೆಲ್ಲಾ ಕಣ್ಣುಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡಬಿಡದೆ ಹೀಗೆ ಹೇಳುತ್ತಿದ್ದವು:
“ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು.
ಆತನು ಭೂತಕಾಲದಲ್ಲಿ ಇದ್ದವನೂ ವರ್ತಮಾನಕಾಲದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”
9 ಈ ಜೀವಿಗಳು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಪ್ರಭಾವ, ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಯುಗಯುಗಾಂತರಗಳಲ್ಲಿಯೂ ಜೀವಿಸುವವನು ಆತನೇ. 10 ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಕಾಲೂರಿ ನಮಸ್ಕರಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವ ಆತನನ್ನು ಆರಾಧಿಸುತ್ತಾ ಇಂತೆಂದರು:
11 “ನಮ್ಮ ಪ್ರಭುವೇ, ನಮ್ಮ ದೇವರೇ!
ನೀನು ಪ್ರಭಾವ, ಗೌರವ, ಅಧಿಕಾರಗಳನ್ನು ಪಡೆಯಲು ಯೋಗ್ಯನಾಗಿರುವೆ.
ಎಲ್ಲವನ್ನೂ ನಿರ್ಮಿಸಿದಾತನು ನೀನೇ.
ನಿನ್ನ ಚಿತ್ತದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಸೃಷ್ಟಿಗೊಂಡವು.”
ಯಾರು ಸುರುಳಿಯನ್ನು ಬಿಚ್ಚಬಲ್ಲರು?
5 ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ನೋಡಿದೆನು. ಅದರ ಎರಡು ಕಡೆಗಳಲ್ಲಿಯೂ ಬರಹವಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು. 2 ಬಲಿಷ್ಠನಾದ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ಈ ಸುರುಳಿಯ ಮುದ್ರೆಗಳನ್ನು ತೆಗೆಯುವುದಕ್ಕೆ ಯೋಗ್ಯನಾದವನು ಯಾರು?” ಎಂದು ಪ್ರಕಟಿಸಿದನು. 3 ಆದರೆ ಪರಲೋಕದಲ್ಲಾಗಲಿ ಭೂಮಂಡಲದಲ್ಲಾಗಲಿ ಪಾತಾಳದಲ್ಲಾಗಲಿ ಈ ಸುರುಳಿಯನ್ನು ಬಿಚ್ಚಿ ನೋಡುವವರು ಯಾರೂ ಇರಲಿಲ್ಲವಾದ್ದರಿಂದ 4 ನಾನು ಮತ್ತೆಮತ್ತೆ ಗೋಳಾಡಿದೆನು. 5 ಆದರೆ ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ಯೂದ ಕುಲದ ಸಿಂಹವಾಗಿರುವಾತನು (ಕ್ರಿಸ್ತ) ಜಯಗಳಿಸಿದನು. ಆತನು ದಾವೀದನ ಸಂತತಿಯವನು. ಆತನು ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ತೆರೆಯಲು ಸಮರ್ಥನಾಗಿದ್ದಾನೆ” ಎಂದು ಹೇಳಿದನು.
6 ನಂತರ ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮಧ್ಯೆ ಒಂದು ಕುರಿಮರಿಯನ್ನು ನಾನು ನೋಡಿದೆನು. ಹಿರಿಯರು ಸಹ ಆ ಕುರಿಮರಿಯ ಸುತ್ತಲೂ ಇದ್ದರು. ಆ ಕುರಿಮರಿಯು ಕೊಲ್ಲಲ್ಪಟ್ಟಂತಿತ್ತು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇವು ಈ ಲೋಕಕ್ಕೆಲ್ಲಾ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳಾಗಿದ್ದವು. 7 ಆ ಕುರಿಮರಿಯು ಬಂದು ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಿಂದ ಸುರುಳಿಯನ್ನು ತೆಗೆದುಕೊಂಡಿತು. 8 ಆಗ ನಾಲ್ಕು ಜೀವಿಗಳು ಮತ್ತು ಇಪ್ಪತ್ನಾಲ್ಕು ಮಂದಿ ಹಿರಿಯರು ಆ ಕುರಿಮರಿಯ ಮುಂದೆ ಮೊಣಕಾಲೂರಿ ನಮಸ್ಕರಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ತಂತಿವಾದ್ಯವಿತ್ತು. ಧೂಪವು ತುಂಬಿದ್ದ ಚಿನ್ನದ ಪಾತ್ರೆಗಳನ್ನು ಅವರು ಹಿಡಿದುಕೊಂಡಿದ್ದರು. ಪಾತ್ರೆಗಳು ದೇವರ ಪರಿಶುದ್ಧ ಜನರ ಪ್ರಾರ್ಥನೆಗಳಾಗಿದ್ದವು. 9 ಅವರೆಲ್ಲರೂ ಕುರಿಮರಿಗೋಸ್ಕರ ಒಂದು ಹೊಸ ಹಾಡನ್ನು ಹಾಡಿದರು:
“ನೀನು ಕೊಲ್ಲಲ್ಪಟ್ಟವನಾದ್ದರಿಂದ,
ಸುರುಳಿಯನ್ನು ತೆಗೆದುಕೊಂಡು,
ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿರುವೆ.
ನೀನು ನಿನ್ನ ರಕ್ತದಿಂದ (ಮರಣದಿಂದ) ಸಕಲ ಕುಲ, ಭಾಷೆ,
ಜನಾಂಗಗಳಿಂದ ಜನರನ್ನು ದೇವರಿಗಾಗಿ ಕೊಂಡುಕೊಂಡಿರುವೆ.
10 ಅವರನ್ನು ಒಂದು ರಾಜ್ಯವನ್ನಾಗಿ ಮಾಡಿದೆ; ನಮ್ಮ ದೇವರಿಗೋಸ್ಕರ ಯಾಜಕರನ್ನಾಗಿ ಮಾಡಿದೆ;
ಅವರು ಲೋಕದಲ್ಲಿ ಆಳುವರು.”
11 ನಂತರ ನಾನು ನೋಡಿದಾಗ, ಅನೇಕ ದೇವದೂತರ ಧ್ವನಿಗಳನ್ನು ಕೇಳಿದೆನು. ಈ ದೇವದೂತರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸುತ್ತಲೂ ಇದ್ದರು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನು ಕೋಟಿಯಾಗಿಯೂ ಇತ್ತು. 12 ಈ ದೇವದೂತರು ಗಟ್ಟಿಯಾದ ಧ್ವನಿಯಿಂದ ಇಂತೆಂದರು:
“ವಧಿತನಾದ ಕುರಿಮರಿಯು ಅಧಿಕಾರವನ್ನು, ಸಂಪತ್ತನ್ನು, ಜ್ಞಾನವನ್ನು, ಬಲವನ್ನು,
ಗೌರವವನ್ನು, ಪ್ರಭಾವವನ್ನು, ಸ್ತೋತ್ರವನ್ನು ಪಡೆಯಲು ಯೋಗ್ಯನಾಗಿದ್ದಾನೆ!”
13 ಇದಲ್ಲದೆ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಭೂಮಿಯ ಕೆಳಭಾಗದಲ್ಲೂ ಸಮುದ್ರದಲ್ಲೂ ಇರುವ ಪ್ರತಿಯೊಂದು ಜೀವಿಗಳು ಹೀಗೆ ಹೇಳುವುದನ್ನು ಕೇಳಿದೆನು:
“ಸಿಂಹಾಸನದ ಮೇಲೆ ಕುಳಿತಿರುವಾತನಿಗೂ ಕುರಿಮರಿಯಾದಾತನಿಗೂ
ಸ್ತೋತ್ರ, ಗೌರವ, ಪ್ರಭಾವ, ಅಧಿಕಾರಗಳು ಯುಗಯುಗಾಂತರಗಳಲ್ಲಿಯೂ ಇರಲಿ!”
14 ಆ ನಾಲ್ಕು ಜೀವಿಗಳು “ಆಮೆನ್!” ಎಂದು ಹೇಳಿದವು. ಹಿರಿಯರು ಮೊಣಕಾಲೂರಿ ಆರಾಧಿಸಿದರು.
ಕುರಿಮರಿಯು ಸುರುಳಿಯನ್ನು ಬಿಚ್ಚಿತು
6 ನಂತರ ಕುರಿಮರಿಯು ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ಗಮನಿಸಿದೆನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತೆ ಮಾತನಾಡುವುದನ್ನು ನಾನು ಕೇಳಿದೆನು. ಅದು “ಬಾ!” ಎಂದು ಹೇಳಿತು. 2 ನಾನು ನೋಡಿದಾಗ ನನ್ನ ಮುಂದೆ ಒಂದು ಬಿಳಿ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಆ ಸವಾರನಿಗೆ ಒಂದು ಕಿರೀಟವನ್ನು ಕೊಡಲಾಯಿತು. ಅವನು ಶತ್ರುವನ್ನು ಸೋಲಿಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.
3 ಆ ಕುರಿಮರಿಯು ಎರಡನೆಯ ಮುದ್ರೆಯನ್ನು ತೆಗೆಯಿತು. ಆಗ ಎರಡನೆಯ ಜೀವಿಯು, “ಬಾ!” ಎಂದು ಹೇಳಿದ್ದನ್ನು ಕೇಳಿದೆನು. 4 ಆಗ ಮತ್ತೊಂದು ಕುದುರೆಯು ಹೊರಗೆ ಬಂದಿತು. ಇದು ಕೆಂಪು ಕುದುರೆಯಾಗಿತ್ತು. ಈ ಕುದುರೆಯ ಮೇಲೆ ಕುಳಿತಿದ್ದ ಸವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದುಹಾಕಲೂ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಈ ಸವಾರನಿಗೆ ಒಂದು ಮಹಾಖಡ್ಗವನ್ನೂ ಕೊಡಲಾಗಿತ್ತು.
5 ಆ ಕುರಿಮರಿಯು ಮೂರನೆಯ ಮುದ್ರೆಯನ್ನು ತೆಗೆಯಿತು. ಆಗ ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ನಾನು ಕೇಳಿದೆನು. ನಾನು ನೋಡಿದಾಗ, ನನ್ನ ಮುಂದೆ ಒಂದು ಕಪ್ಪು ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲಿದ್ದ ಸವಾರನು ತನ್ನ ಕೈಯಲ್ಲಿ ಎರಡು ತಕ್ಕಡಿಗಳನ್ನು ಹಿಡಿದಿದ್ದನು. 6 ಆಗ ಒಬ್ಬನ ಸ್ವರವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಆ ನಾಲ್ಕು ಜೀವಿಗಳಿದ್ದ ಸ್ಥಳದಿಂದ ಈ ಧ್ವನಿಯು ಹೊರ ಹೊಮ್ಮಿತು. ಆ ಧ್ವನಿಯು, “ಒಂದು ದಿನದ ಕೆಲಸಕ್ಕೆ ಒಂದು ಕಿಲೋಗ್ರಾಂ ಗೋಧಿ. ಒಂದು ದಿನದ ಕೆಲಸಕ್ಕೆ ಮೂರು ಕಿಲೋಗ್ರಾಂ ಬಾರ್ಲಿ. ಆದರೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡಿ!” ಎಂದು ಹೇಳಿತು.
7 ಆ ಕುರಿಮರಿಯು ನಾಲ್ಕನೆಯ ಮುದ್ರೆಯನ್ನು ತೆರೆಯಿತು. ಆಗ ನಾಲ್ಕನೆಯ ಜೀವಿಯು, “ಬಾ” ಎಂದು ಹೇಳಿದ ಧ್ವನಿಯು ನನಗೆ ಕೇಳಿಸಿತು. 8 ನಾನು ನೋಡಿದಾಗ, ನನ್ನ ಮುಂದೆ ಒಂದು ಬೂದುಬಣ್ಣದ ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲೆ ಕುಳಿತಿದ್ದ ಸವಾರನೇ ಮೃತ್ಯು.[b] ಅವನ ಹಿಂದೆ ಪಾತಾಳ ಎಂಬುವನು ಬಂದನು. ಅವರಿಗೆ ಭೂಮಿಯ ಕಾಲುಭಾಗದ ಮೇಲೆ ಅಧಿಕಾರವನ್ನು ನೀಡಲಾಯಿತು. ಕತ್ತಿಯಿಂದಲೂ ಬರಗಾಲದಿಂದಲೂ ರೋಗಗಳಿಂದಲೂ ಮತ್ತು ಲೋಕದ ಮೇಲಿರುವ ಕಾಡುಮೃಗಗಳಿಂದಲೂ ಜನರನ್ನು ಕೊಲ್ಲುವ ಅಧಿಕಾರವನ್ನು ಅವರಿಗೆ ನೀಡಲಾಯಿತು.
9 ಕುರಿಮರಿಯು ಐದನೆಯ ಮುದ್ರೆಯನ್ನು ತೆರೆಯಿತು. ಆಗ ಯಜ್ಞವೇದಿಕೆಯ ಕೆಳಗೆ ಕೆಲವು ಆತ್ಮಗಳಿರುವುದನ್ನು ನಾನು ನೋಡಿದೆನು. ದೇವರ ಸಂದೇಶಕ್ಕೂ ತಾವು ಸ್ವೀಕರಿಸಿ ಕೊಂಡ ಸತ್ಯಕ್ಕೂ ನಂಬಿಗಸ್ತರಾಗಿದ್ದ ಕಾರಣ ಕೊಲ್ಲಲ್ಪಟ್ಟವರ ಆತ್ಮಗಳೇ ಅವು. 10 ಈ ಆತ್ಮಗಳು, “ಪವಿತ್ರನಾದ ಮತ್ತು ಸತ್ಯವಂತನಾದ ಪ್ರಭುವೇ, ನಮ್ಮನ್ನು ಕೊಂದ ಜನರಿಗೆ ತೀರ್ಪು ನೀಡಲು ಮತ್ತು ಅವರನ್ನು ದಂಡಿಸಲು ನೀನು ಎಷ್ಟು ಕಾಲ ತೆಗೆದುಕೊಳ್ಳುವೆ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದವು. 11 ಆ ಆತ್ಮಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಬಿಳಿ ನಿಲುವಂಗಿಯನ್ನು ಕೊಡಲಾಯಿತು. ಇನ್ನೂ ಸ್ವಲ್ಪಕಾಲ ಕಾಯುವಂತೆ ಅವುಗಳಿಗೆ ತಿಳಿಸಲಾಯಿತು. ಅವರ ಸಹೋದರರಲ್ಲಿ ಕೆಲವರು ಇನ್ನೂ ಕ್ರಿಸ್ತನ ಸೇವೆಯಲ್ಲಿದ್ದಾರೆ. ಅವರೂ ಕೊಲ್ಲಲ್ಪಡಬೇಕು. ಈ ಕೊಲೆಗಳೆಲ್ಲಾ ಮುಗಿಯುವ ತನಕ ಕಾಯಬೇಕೆಂದು ಆ ಆತ್ಮಗಳಿಗೆ ಹೇಳಲಾಯಿತು.
12 ಆ ಕುರಿಮರಿಯು ಆರನೆಯ ಮುದ್ರೆಯನ್ನು ತೆರೆಯುವುದನ್ನು ನಾನು ನೋಡುತ್ತಲೇ ಇದ್ದೆನು. ಆಗ ಮಹಾಭೂಕಂಪವಾಯಿತು. ಸೂರ್ಯನು ಕಪ್ಪು ಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. 13 ಆಕಾಶದಲ್ಲಿದ್ದ ನಕ್ಷತ್ರಗಳು, ಬಿರುಗಾಳಿ ಬೀಸಿದಾಗ ಅಂಜೂರದ ಹಣ್ಣುಗಳು ಮರದಿಂದ ಭೂಮಿಯ ಮೇಲೆ ಉದುರುವಂತೆ ಉದುರಿದವು. 14 ಆಕಾಶವು ವಿಭಾಗಗೊಂಡು ಸುರುಳಿಯಂತೆ ಸುತ್ತಲ್ಪಟ್ಟಿತು. ಪ್ರತಿಯೊಂದು ಬೆಟ್ಟ ಮತ್ತು ದ್ವೀಪಗಳು ತಮ್ಮ ನೆಲೆಯಿಂದ ಚಲಿಸಿದವು.
15 ಆಗ ಲೋಕದ ರಾಜರುಗಳೂ ಅಧಿಪತಿಗಳೂ ಸೇನಾಧಿಪತಿಗಳೂ ಶ್ರೀಮಂತರೂ ಬಲಿಷ್ಠರೂ ಪ್ರತಿಯೊಬ್ಬ ಗುಲಾಮನೂ ಸ್ವತಂತ್ರ ಪ್ರಜೆಯೂ ಗವಿಗಳಲ್ಲಿ ಮತ್ತು ಬೆಟ್ಟಗಳ ಮೇಲಿನ ಬಂಡೆಗಳ ಮರೆಯಲ್ಲಿ ಅಡಗಿಕೊಂಡರು. 16 ಆ ಜನರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ, “ನಮ್ಮ ಮೇಲೆ ಬೀಳಿರಿ. ಸಿಂಹಾಸನದ ಮೇಲೆ ಕುಳಿತಿರುವಾತನ ದೃಷ್ಟಿಯಿಂದ ನಮ್ಮನ್ನು ಮರೆಮಾಡಿ; ಕುರಿಮರಿಯಾದಾತನ ಕೋಪದಿಂದ ನಮ್ಮನ್ನು ಮರೆಮಾಡಿ; 17 ಆತನ ಕೋಪವು ಪ್ರಕಟವಾಗುವ ಮಹಾದಿನವು ಬಂದುಬಿಟ್ಟಿದೆ. ಆ ಕೋಪದ ಎದುರಿನಲ್ಲಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದರು.
ಇಸ್ರೇಲಿನ 1,44,000 ಜನರು
7 ಇದಾದ ಮೇಲೆ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ಮೂಲೆಗಳಲ್ಲಿ ನಿಂತಿರುವುದನ್ನು ನಾನು ನೋಡಿದೆನು. ಗಾಳಿಯು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಮರದ ಮೇಲಾಗಲಿ ಬೀಸದಂತೆ ಅವರು ಭೂಮಿಯ ನಾಲ್ಕು ದಿಕ್ಕುಗಳ ಗಾಳಿಯನ್ನು ತಡೆಹಿಡಿದಿದ್ದರು. 2 ನಂತರ ಬೇರೊಬ್ಬ ದೇವದೂತನು ಪೂರ್ವದಿಕ್ಕಿನ ಕಡೆಯಿಂದ ಬರುತ್ತಿರುವುದನ್ನು ನಾನು ನೋಡಿದೆನು. ಜೀವಸ್ವರೂಪನಾದ ದೇವರ ಮುದ್ರೆಯು ಈ ದೇವದೂತನ ಬಳಿಯಿತ್ತು. ಈ ದೇವದೂತನು ನಾಲ್ಕುಮಂದಿ ದೇವದೂತರನ್ನು ಗಟ್ಟಿಯಾದ ಧ್ವನಿಯಲ್ಲಿ ಕರೆದನು. ಭೂಮಿಗೆ ಮತ್ತು ಸಮುದ್ರಕ್ಕೆ ತೊಂದರೆ ಮಾಡುವುದಕ್ಕೆ ಅಧಿಕಾರವನ್ನು ದೇವರು ಈ ನಾಲ್ವರು ದೇವದೂತರಿಗೆ ನೀಡಿದ್ದನು. ಆ ದೇವದೂತನು ಈ ನಾಲ್ವರು ದೇವದೂತರಿಗೆ, 3 “ನಮ್ಮ ದೇವರ ಸೇವೆಮಾಡುವ ಜನರ ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಗಾಗಲಿ ಸಮುದ್ರಕ್ಕಾಗಲಿ ಮರಗಳಿಗಾಗಲಿ ತೊಂದರೆಯನ್ನು ಮಾಡಬೇಡಿ” ಎಂದು ಕೂಗಿ ಹೇಳಿದನು.
4 ನಂತರ, ಮುದ್ರೆ ಒತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಅವರ ಒಟ್ಟು ಸಂಖ್ಯೆ 1,44,000 ಮಂದಿ. ಅವರು ಇಸ್ರೇಲರ ಹನ್ನೆರಡು ಕುಲಗಳಿಗೆ ಸೇರಿದವರಾಗಿದ್ದರು.
5 ಯೂದನ ಕುಲದಿಂದ | 12,000 |
ರೂಬೇನನ ಕುಲದಿಂದ | 12,000 |
ಗಾದನ ಕುಲದಿಂದ | 12,000 |
6 ಆಶೇರನ ಕುಲದಿಂದ | 12,000 |
ನಫ್ತಾಲಿಯ ಕುಲದಿಂದ | 12,000 |
ಮನಸ್ಸೆಯ ಕುಲದಿಂದ | 12,000 |
7 ಸಿಮೆಯೋನನ ಕುಲದಿಂದ | 12,000 |
ಲೇವಿಯ ಕುಲದಿಂದ | 12,000 |
ಇಸ್ಸಾಕಾರನ ಕುಲದಿಂದ | 12,000 |
8 ಜೆಬುಲೋನನ ಕುಲದಿಂದ | 12,000 |
ಯೋಸೇಫನ ಕುಲದಿಂದ | 12,000 |
ಬೆನ್ಯಾಮೀನನ ಕುಲದಿಂದ | 12,000 |
ಜನರ ಮಹಾಸಮೂಹ
9 ಬಳಿಕ ನಾನು ನೋಡಿದಾಗ, ಜನರ ಮಹಾಸಮೂಹವನ್ನು ಕಂಡೆನು. ಅವರು ಎಣಿಸಲಾಗದಷ್ಟು ಅಸಂಖ್ಯಾತರಾಗಿದ್ದರು. ಅವರಲ್ಲಿ ಸಕಲ ಜನಾಂಗ, ಕುಲ, ಪ್ರಜೆಗಳವರೂ ಲೋಕದ ಸಕಲ ಭಾಷೆಗಳನ್ನಾಡುವವರೂ ಇದ್ದರು. ಈ ಜನರು ಸಿಂಹಾಸನದ ಮುಂದೆ ಮತ್ತು ಕುರಿಮರಿಯ (ಯೇಸು) ಮುಂದೆ ನಿಂತಿದ್ದರು. ಅವರೆಲ್ಲರೂ ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡು ಖರ್ಜೂರದ ಗರಿಗಳನ್ನು ತಮ್ಮ ಕೈಗಳಲ್ಲಿ ಹಿಡಿದಿದ್ದರು. 10 ಅವರು ಗಟ್ಟಿಯಾದ ಧ್ವನಿಯಲ್ಲಿ, “ಸಿಂಹಾಸನದ ಮೇಲೆ ಕುಳಿತುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾತನಿಗೆ ಜಯವು ಲಭಿಸಿತು” ಎಂದು ಕೂಗಿದರು. 11 ಹಿರಿಯರು ಅಲ್ಲಿದ್ದರು ಮತ್ತು ನಾಲ್ಕು ಜೀವಿಗಳು ಅಲ್ಲಿದ್ದವು. ಅವರ ಸುತ್ತಲೂ ಮತ್ತು ಸಿಂಹಾಸನದ ಸುತ್ತಲೂ ದೇವದೂತರೆಲ್ಲಾ ನಿಂತಿದ್ದರು. ದೇವದೂತರು ಸಿಂಹಾಸನದ ಮುಂದೆ ಮೊಣಕಾಲೂರಿ ದೇವರನ್ನು ಆರಾಧಿಸಿದರು. 12 ಅವರು, “ಆಮೆನ್! ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸುತ್ತಿಯೂ ಗೌರವವೂ ಅಧಿಕಾರವೂ ಮತ್ತು ಬಲವೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್!” ಎಂದರು.
13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.
14 “ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು.
ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ.[c] ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ. 15 ಆದ್ದರಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಆಲಯದಲ್ಲಿ ಹಗಲಿರುಳು ಆರಾಧಿಸುತ್ತಾರೆ. ಸಿಂಹಾಸನದ ಮೇಲೆ ಕುಳಿತಿರುವಾತನು ಅವರನ್ನು ಸಂರಕ್ಷಿಸುತ್ತಾನೆ. 16 ಆ ಜನರಿಗೆ ಮತ್ತೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪವಾಗಲಿ ಇರುವುದಿಲ್ಲ. ಅವರನ್ನು ಯಾವ ತಾಪವೂ ಸುಡುವುದಿಲ್ಲ. 17 ಸಿಂಹಾಸನದ ಮಧ್ಯೆ ಇರುವ ಕುರಿಮರಿಯಾದಾತನು ಅವರ ಕುರುಬನಾಗಿರುತ್ತಾನೆ. ಆತನು ಅವರನ್ನು ಜೀವ ನೀಡುವ ನೀರಿನ ಬುಗ್ಗೆಗಳ ಬಳಿಗೆ ಕರೆದೊಯ್ಯುತ್ತಾನೆ. ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರನ್ನೆಲ್ಲ ದೇವರು ಒರಸಿಹಾಕುತ್ತಾನೆ” ಎಂದು ಹೇಳಿದನು.
ಏಳನೆಯ ಮುದ್ರೆ
8 ಕುರಿಮರಿಯಾದಾತನು ಏಳನೆಯ ಮುದ್ರೆಯನ್ನು ಒಡೆದನು. ಆಗ ಪರಲೋಕದಲ್ಲಿ ಅರ್ಧ ಗಂಟೆಯ ಕಾಲ ನಿಶ್ಯಬ್ದವಾಯಿತು. 2 ದೇವರ ಎದುರಿನಲ್ಲಿ ಏಳು ದೇವದೂತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಯಿತು.
3 ಮತ್ತೊಬ್ಬ ದೇವದೂತನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದೂತನು ಧೂಪವಿದ್ದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಅರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವನ್ನು ಕೊಡಲಾಯಿತು. ಈ ದೇವದೂತನು ಸಿಂಹಾಸನದ ಎದುರಿನಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲೆ ಈ ಧೂಪವನ್ನು ಇಟ್ಟನು. 4 ಧೂಪದ ಹೊಗೆಯು ದೇವದೂತನ ಕೈಯಿಂದ ದೇವಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು. 5 ಆಗ ದೇವದೂತನು ಧೂಪವಿದ್ದ ಪಾತ್ರೆಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತುಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚು ಗುಡುಗುಗಳೂ ಮತ್ತಿತರ ಧ್ವನಿಗಳೂ ಭೂಕಂಪಗಳೂ ಉಂಟಾದವು.
ಏಳು ತುತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು
6 ನಂತರ ಆ ಏಳು ಮಂದಿ ದೇವದೂತರು ಏಳು ತುತೂರಿಗಳನ್ನು ಊದಲು ಸಿದ್ಧರಾದರು.
7 ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ರಕ್ತದಲ್ಲಿ ಕಲಸಿದ್ದ ಆಲಿಕಲ್ಲುಗಳ ಮತ್ತು ಬೆಂಕಿಯ ಮಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರನೆಯ ಒಂದು ಭಾಗ ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋದವು; ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋದವು.
8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು. 9 ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾದವು.
10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಕೆಳಗೆ ಬಿತ್ತು. ಆ ನಕ್ಷತ್ರವು ನದಿಗಳಲ್ಲಿ ಮತ್ತು ನೀರಿನ ಬುಗ್ಗೆಗಳಲ್ಲಿ ಮೂರನೆಯ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರಕ್ಕೆ “ಕಹಿ ಮರ”[d] ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.
12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿ ಮೂರನೆಯ ಒಂದು ಭಾಗ, ಚಂದ್ರನಲ್ಲಿ ಮೂರನೆಯ ಒಂದು ಭಾಗ ಮತ್ತು ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗ ಬಡಿಯಲ್ಪಟ್ಟು ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.
13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.
Kannada Holy Bible: Easy-to-Read Version. All rights reserved. © 1997 Bible League International