Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 24-26

ಪೌಲನ ಮೇಲೆ ಯೆಹೂದ್ಯರ ದೋಷಾರೋಪಣೆ

24 ಐದು ದಿನಗಳ ನಂತರ, ಪ್ರಧಾನಯಾಜಕ ಅನನೀಯನು ಯೆಹೂದ್ಯರ ಹಿರೀನಾಯಕರಲ್ಲಿ ಕೆಲವರನ್ನು ಮತ್ತು ತೆರ್ತುಲ್ಲ ಎಂಬ ವಕೀಲನನ್ನು ಕರೆದುಕೊಂಡು ರಾಜ್ಯಪಾಲನ ಎದುರಿನಲ್ಲಿ ಪೌಲನ ಮೇಲೆ ದೋಷಾರೋಪಣೆ ಮಾಡಲು ಸೆಜರೇಯ ಪಟ್ಟಣಕ್ಕೆ ಹೋದನು. ಪೌಲನನ್ನು ಸಭೆಗೆ ಕರೆಸಲಾಯಿತು. ಆಗ ತೆರ್ತುಲ್ಲನು ತನ್ನ ಆಪಾದನೆಗಳನ್ನು ಹೊರಿಸಲಾರಂಭಿಸಿದನು:

“ಮಹಾರಾಜಶ್ರೀಗಳಾದ ಫೇಲಿಕ್ಸನೇ, ನಿನ್ನ ದೆಸೆಯಿಂದಾಗಿ ನಮ್ಮ ಜನರು ಶಾಂತಿಯಿಂದ ಜೀವಿಸುತ್ತಿದ್ದಾರೆ. ನಿನ್ನ ವಿವೇಕದ ಸಹಾಯದಿಂದ ನಮ್ಮ ದೇಶದ ಅನೇಕ ದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡಲಾಗಿದೆ. ನಾವು ಇವುಗಳನ್ನು ಬಹು ಕೃತಜ್ಞತೆಯಿಂದ ಎಲ್ಲಾ ಸ್ಥಳಗಳಲ್ಲಿ ಯಾವಾಗಲೂ ಒಪ್ಪಿಕೊಳ್ಳುತ್ತೇವೆ. ಆದರೆ ನಾನು ನಿನ್ನ ಸಮಯವನ್ನು ಇನ್ನೂ ಹೆಚ್ಚಿಗೆ ತೆಗೆದುಕೊಳ್ಳಬಯಸದೆ, ಕೆಲವೇ ಮಾತುಗಳಲ್ಲಿ ಹೇಳುವೆ. ದಯವಿಟ್ಟು ತಾಳ್ಮೆಯಿಂದಿರು. ಈ ಮನುಷ್ಯನು (ಪೌಲನು) ಗಲಭೆ ಮಾಡುತ್ತಿದ್ದಾನೆ. ಯೆಹೂದ್ಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅಲ್ಲೆಲ್ಲಾ ಇವನು ಗಲಭೆಯನ್ನು ಎಬ್ಬಿಸುತ್ತಾನೆ. ಇವನು ‘ನಜರೇನ’ ಪಂಗಡದ ನಾಯಕನಾಗಿದ್ದಾನೆ. ಅಲ್ಲದೆ, ಇವನು ದೇವಾಲಯವನ್ನು ಅಶುದ್ಧಗೊಳಿಸಲು ಪ್ರಯತ್ನಿಸಿದನು, ಆದರೆ ನಾವು ಇವನನ್ನು ತಡೆದೆವು. [a] ಸ್ವತಃ ನೀನೇ ಇವನಿಗೆ ಕೆಲವು ಪ್ರಶ್ನೆಗಳನ್ನು ಕೇಳು. ಆಗ ಈ ಸಂಗತಿಗಳೆಲ್ಲಾ ಸತ್ಯವಾಗಿವೆಯೋ ಇಲ್ಲವೋ ಎಂದು ನಿರ್ಣಯಿಸಲು ನಿನಗೆ ಸಾಧ್ಯವಾಗುವುದು.” ಉಳಿದ ಯೆಹೂದ್ಯರು, “ಈ ಸಂಗತಿಗಳು ನಿಜವಾಗಿಯೂ ಸತ್ಯವಾದುವುಗಳು!” ಎಂದರು.

ಫೇಲಿಕ್ಸನ ಎದುರು ಪೌಲನ ಪ್ರತಿಪಾದನೆ

10 ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ, ಮಾತಾಡಲು ಸೂಚಿಸಿದನು. ಆಗ ಪೌಲನು ಹೀಗೆಂದನು: “ರಾಜ್ಯಪಾಲನಾದ ಫೇಲಿಕ್ಸನೇ, ನೀನು ಅನೇಕ ವರ್ಷಗಳಿಂದ ಈ ದೇಶಕ್ಕೆ ನ್ಯಾಯಾಧೀಶನಾಗಿರುವುದು ನನಗೆ ಗೊತ್ತಿದೆ. ಆದ್ದರಿಂದ ಸಂತೋಷದಿಂದ ನಿನ್ನ ಮುಂದೆ ನನ್ನನ್ನು ಪ್ರತಿಪಾದಿಸಿಕೊಳ್ಳುವೆನು. 11 ನಾನು ಆರಾಧನೆಗೋಸ್ಕರ ಜೆರುಸಲೇಮಿಗೆ ಹೋದದ್ದು ಕೇವಲ ಹನ್ನೆರಡು ದಿನಗಳ ಹಿಂದೆಯಷ್ಟೆ. ಅದು ಸತ್ಯವೆಂದು ಸ್ವತಃ ನೀನೇ ತಿಳಿದುಕೊಳ್ಳಬಲ್ಲೆ. 12 ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ. 13 ಈಗ ನನಗೆ ವಿರೋಧವಾಗಿ ಹೇಳುತ್ತಿರುವ ಸಂಗತಿಗಳನ್ನು ಈ ಯೆಹೂದ್ಯರು ನಿರೂಪಿಸಲಾರರು.

14 “ಆದರೆ ನಾನು ನಿನಗೆ ಹೇಳುವುದೇನೆಂದರೆ, ಯೇಸುವಿನ ಮಾರ್ಗದ ಹಿಂಬಾಲಕನಾದ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುತ್ತೇನೆ. ಯೇಸುವಿನ ಮಾರ್ಗವು ಸರಿಯಲ್ಲವೆಂದು ಯೆಹೂದ್ಯರು ಹೇಳುತ್ತಾರೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಪುಸ್ತಕಗಳಲ್ಲಿಯೂ ಬರೆದಿರುವ ಪ್ರತಿಯೊಂದನ್ನು ನಾನು ನಂಬುತ್ತೇನೆ. 15 ಈ ಯೆಹೂದ್ಯರಿಗೆ ದೇವರಲ್ಲಿ ಯಾವ ನಿರೀಕ್ಷೆಯಿದೆಯೋ ಅದೇ ನಿರೀಕ್ಷೆ ನನಗೂ ಇದೆ. ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುತ್ತದೆ ಎಂಬುದೇ ಆ ನಿರೀಕ್ಷೆ. 16 ಈ ಕಾರಣದಿಂದ ನಾನು ಯಾವುದನ್ನು ಸರಿಯಾದದ್ದು ಎಂದು ನಂಬಿದ್ದೇನೋ ಅದನ್ನು ದೇವರ ಮುಂದೆಯೂ ಮನುಷ್ಯರ ಮುಂದೆಯೂ ಮಾಡಲು ಯಾವಾಗಲು ಪ್ರಯತ್ನಿಸುತ್ತಿದ್ದೇನೆ.

17 “ನಾನು ಅನೇಕ ವರ್ಷಗಳಿಂದ ಜೆರುಸಲೇಮಿನಲ್ಲಿ ಇರಲಿಲ್ಲ. ಬಳಿಕ ನಾನು ನನ್ನ ಜನರಿಗಾಗಿ ಹಣವನ್ನು ತರುವುದಕ್ಕಾಗಿಯೂ ಉಡುಗೊರೆಗಳನ್ನು ಕೊಡುವುದಕ್ಕಾಗಿಯೂ ಜೆರುಸಲೇಮಿಗೆ ಮರಳಿ ಹೋದೆನು. 18 ನಾನು ಈ ಕಾರ್ಯದಲ್ಲಿ ನಿರತನಾಗಿದ್ದಾಗ ಕೆಲವು ಮಂದಿ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಕಂಡರು. ನಾನು ಶುದ್ಧಾಚಾರದ ವಿಧಿಯನ್ನು ಮುಗಿಸಿದ್ದೆನು. ನಾನು ಯಾವ ಗಲಭೆಯನ್ನೂ ಮಾಡಿರಲಿಲ್ಲ. ನನ್ನ ಸುತ್ತಲೂ ಯಾವ ಜನರೂ ಇರಲಿಲ್ಲ. 19 ಆದರೆ ಏಷ್ಯಾದ ಕೆಲವು ಮಂದಿ ಯೆಹೂದ್ಯರು ಅಲ್ಲಿದ್ದರು. ಅವರು ಈಗ ನಿನ್ನೆದುರಿನಲ್ಲಿ ಇರಬೇಕಿತ್ತು. ನಾನು ನಿಜವಾಗಿ ಏನಾದರೂ ತಪ್ಪು ಮಾಡಿದ್ದರೆ ಏಷ್ಯಾದ ಆ ಯೆಹೂದ್ಯರೇ ನನ್ನ ಮೇಲೆ ದೋಷಾರೋಪಣೆ ಮಾಡಬೇಕಿತ್ತು. 20 ನಾನು ಜೆರುಸಲೇಮಿನಲ್ಲಿ ಯೆಹೂದ್ಯ ನ್ಯಾಯಸಭೆಯ ಮುಂದೆ ನಿಂತಿದ್ದಾಗ, ನನ್ನಲ್ಲಿ ಅವರಿಗೆ ಯಾವ ಅಪರಾಧಗಳು ಕಂಡುಬಂದವೆಂದು ಇಲ್ಲಿರುವ ಈ ಯೆಹೂದ್ಯರನ್ನೇ ಕೇಳು. 21 ನಾನು ಅವರ ಮುಂದೆ ನಿಂತಿದ್ದಾಗ, ‘ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!’ ಎಂಬ ಒಂದೇ ಒಂದು ಸಂಗತಿಯನ್ನು ನಾನು ಕೂಗಿ ಹೇಳಿದೆ.”

22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು. 23 ಪೌಲನನ್ನು ಕಾವಲಿನಲ್ಲಿರಿಸಬೇಕೆಂದು ಫೇಲಿಕ್ಸನು ಸೇನಾಧಿಕಾರಿಗೆ ತಿಳಿಸಿದನು. ಆದರೆ ಪೌಲನಿಗೆ ಸ್ವಲ್ಪ ಸ್ವತಂತ್ರವನ್ನು ಕೊಡುವಂತೆಯೂ ಪೌಲನ ಮಿತ್ರರು ಅವನಿಗೆ ಅಗತ್ಯವಾದ ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶ ಕೊಡಬೇಕೆಂತಲೂ ಅವನು ಅಧಿಕಾರಿಗೆ ಹೇಳಿದನು.

ಫೇಲಿಕ್ಸ ಮತ್ತು ಅವನ ಪತ್ನಿಯ ಮುಂದೆ ಪೌಲನು

24 ಕೆಲವು ದಿನಗಳಾದ ಮೇಲೆ ಫೇಲಿಕ್ಸನು ತನ್ನ ಹೆಂಡತಿಯಾದ ದ್ರೂಸಿಲ್ಲಳೊಂದಿಗೆ ಬಂದನು. ಆಕೆ ಯೆಹೂದ್ಯಳು. ಫೇಲಿಕ್ಸನು ಪೌಲನನ್ನು ಕರೆಯಿಸಿದನು. ಕ್ರಿಸ್ತನಾದ ಯೇಸುವಿನಲ್ಲಿ ನಂಬಿಕೆ ಇಡುವುದರ ಬಗ್ಗೆ ಪೌಲನು ಹೇಳಿದ್ದನ್ನು ಅವನು ಆಲಿಸಿದನು. 25 ಆದರೆ ನೀತಿಯಬಾಳ್ವೆ, ಇಂದ್ರಿಯನಿಗ್ರಹ ಮತ್ತು ಮುಂದೆ ಬರಲಿರುವ ನ್ಯಾಯತೀರ್ಪುಗಳ ಬಗ್ಗೆ ಪೌಲನು ಮಾತಾಡಿದಾಗ ಅವನು ಭಯಗೊಂಡು, “ಈಗ ನೀನು ಹೋಗು! ನನಗೆ ಹೆಚ್ಚು ಸಮಯವಿರುವಾಗ ನಿನ್ನನ್ನು ಕರೆಯಿಸುತ್ತೇನೆ” ಎಂದು ಹೇಳಿದನು. 26 ಆದರೆ ಪೌಲನು ಲಂಚ ಕೊಡಬಹುದೆಂದು ಅವನು ನಿರೀಕ್ಷಿಸಿಕೊಂಡಿದ್ದರಿಂದ ಅವನು ಅನೇಕ ಸಲ ಪೌಲನನ್ನು ಕರೆಯಿಸಿ ಅವನೊಂದಿಗೆ ಮಾತಾಡಿದನು.

27 ಆದರೆ ಎರಡು ವರ್ಷಗಳ ನಂತರ ಫೇಲಿಕ್ಸನ ಬದಲಾಗಿ ಪೊರ್ಸಿಯ ಫೆಸ್ತನು ರಾಜ್ಯಪಾಲನಾದನು. ಆದರೆ ಫೇಲಿಕ್ಸನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ಪೌಲನನ್ನು ಸೆರೆಮನೆಯಲ್ಲಿಯೇ ಬಿಟ್ಟುಹೋದನು.

ಸೀಸರನನ್ನು ಕಾಣಲು ಪೌಲನು ಮಾಡಿದ ಮನವಿ

25 ಫೆಸ್ತನು ರಾಜ್ಯಪಾಲನಾಗಿ ಮೂರು ದಿನಗಳಾದ ಮೇಲೆ ಸೆಜರೇಯದಿಂದ ಜೆರುಸಲೇಮಿಗೆ ಹೋದನು. ಮಹಾಯಾಜಕರು ಮತ್ತು ಪ್ರಮುಖ ಯೆಹೂದ್ಯ ನಾಯಕರು ಫೆಸ್ತನ ಎದುರಿನಲ್ಲಿ ಪೌಲನಿಗೆ ವಿರೋಧವಾಗಿ ದೋಷಾರೋಪಣೆಗಳನ್ನು ಹೇಳಿದರು. ಅಲ್ಲದೆ ಪೌಲನನ್ನು ಜೆರುಸಲೇಮಿಗೆ ಮರಳಿ ಕಳುಹಿಸಿಕೊಡಬೇಕೆಂದು ಅವರು ಫೆಸ್ತನನ್ನು ಕೇಳಿಕೊಂಡರು. ಅವರು ಪೌಲನನ್ನು ಮಾರ್ಗದಲ್ಲೇ ಕೊಲ್ಲಬೇಕೆಂಬ ಯೋಜನೆ ಮಾಡಿಕೊಂಡಿದ್ದರು. ಆದರೆ ಫೆಸ್ತನು, “ಇಲ್ಲ! ಪೌಲನನ್ನು ಸೆಜರೇಯದಲ್ಲೇ ಇರಿಸಲಾಗುವುದು. ನಾನೇ ಅಲ್ಲಿಗೆ ಬೇಗ ಹೋಗಲಿದ್ದೇನೆ. ನಿಮ್ಮ ನಾಯಕರಲ್ಲಿ ಕೆಲವರು ನನ್ನೊಂದಿಗೆ ಬರಲಿ. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ ಅವನ ಮೇಲೆ ಸೆಜರೇಯದಲ್ಲೇ ಅವರು ದೋಷಾರೋಪಣೆ ಮಾಡಲಿ” ಎಂದು ಉತ್ತರಕೊಟ್ಟನು.

ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು. ಪೌಲನು ನ್ಯಾಯಾಲಯದೊಳಗೆ ಬಂದನು. ಜೆರುಸಲೇಮಿನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತುಕೊಂಡು ಅವನ ಮೇಲೆ ಅನೇಕ ದೋಷಾರೋಪಗಳನ್ನು ಮಾಡಿದರು. ಆದರೆ ಅವುಗಳಲ್ಲಿ ಯಾವುದಕ್ಕೂ ಆಧಾರವಿರಲಿಲ್ಲ. ಪೌಲನು ಪ್ರತಿವಾದ ಮಾಡುತ್ತಾ, “ನಾನು ಯೆಹೂದ್ಯರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಲಿ ದೇವಾಲಯಕ್ಕೆ ವಿರುದ್ಧವಾಗಲಿ ಸೀಸರನಿಗೆ ವಿರುದ್ಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ” ಎಂದು ಹೇಳಿದನು.

ಆದರೆ ಫೆಸ್ತನು ಯೆಹೂದ್ಯರ ಮೆಚ್ಚಿಕೆ ಗಳಿಸಿಕೊಳ್ಳಬೇಕೆಂದಿದ್ದನು. ಆದ್ದರಿಂದ ಅವನು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಯಸುವೆಯಾ? ಈ ದೋಷಾರೋಪಣೆಗಳ ಕುರಿತು ನಾನು ಅಲ್ಲಿಯೇ ನಿನಗೆ ತೀರ್ಪು ಮಾಡಬೇಕೆಂದು ಅಪೇಕ್ಷಿಸುವಿಯಾ?” ಎಂದು ಕೇಳಿದನು.

10-11 ಪೌಲನು, “ಈಗ ನಾನು ಸೀಸರನ ನ್ಯಾಯಾಸ್ಥಾನದ ಮುಂದೆ ನಿಂತಿದ್ದೇನೆ. ನನಗೆ ತೀರ್ಪಾಗಬೇಕಾದದ್ದು ಇಲ್ಲಿಯೇ! ನಾನು ಯೆಹೂದ್ಯರಿಗೆ ಯಾವ ಅಪರಾಧವನ್ನೂ ಮಾಡಿಲ್ಲ. ಇದು ಸತ್ಯವೆಂದು ನಿನಗೆ ಗೊತ್ತಿದೆ. ನಾನು ಅಪರಾಧಿಯಾಗಿದ್ದು ಧರ್ಮಶಾಸ್ತ್ರವು ನನಗೆ ಮರಣದಂಡನೆ ವಿಧಿಸಿದರೆ, ನಾನು ಆ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇವರ ದೋಷಾರೋಪಣೆಗಳು ಸತ್ಯವಾಗಿಲ್ಲದಿದ್ದರೆ, ನನ್ನನ್ನು ಇವರ ಕೈಗೆ ಒಪ್ಪಿಸಲು ಯಾರಿಗೂ ಸಾಧ್ಯವಿಲ್ಲ! ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ!” ಎಂದನು.

12 ಫೆಸ್ತನು ತನ್ನ ಸಲಹೆಗಾರರೊಂದಿಗೆ ಇದರ ಬಗ್ಗೆ ಮಾತಾಡಿದನು. ಬಳಿಕ ಅವನು, “ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ ಎಂದು ನೀನು ಕೇಳಿಕೊಂಡದ್ದರಿಂದ ನಿನ್ನನ್ನು ಸೀಸರನ ಬಳಿಗೇ ಕಳುಹಿಸಿಕೊಡುತ್ತೇನೆ” ಎಂದನು.

ಹೆರೋದ ಅಗ್ರಿಪ್ಪನ ಮುಂದೆ ಪೌಲನು

13 ಕೆಲವು ದಿನಗಳಾದ ಮೇಲೆ ರಾಜ ಅಗ್ರಿಪ್ಪನು ಮತ್ತು ಬೆರ್ನಿಕೆ ರಾಣಿ ಫೆಸ್ತನನ್ನು ವಂದಿಸಲು ಸೆಜರೇಯಕ್ಕೆ ಬಂದರು. 14 ಅವರು ಅಲ್ಲಿ ಅನೇಕ ದಿನಗಳವರೆಗೆ ಇದ್ದರು. ಫೆಸ್ತನು ಪೌಲನ ವ್ಯಾಜ್ಯದ ಬಗ್ಗೆ ರಾಜನಿಗೆ ಈ ರೀತಿ ತಿಳಿಸಿದನು: “ಫೇಲಿಕ್ಸನು ಸೆರೆಮನೆಯಲ್ಲೇ ಬಿಟ್ಟುಹೋದ ಒಬ್ಬ ವ್ಯಕ್ತಿ ಇದ್ದಾನೆ. 15 ನಾನು ಜೆರುಸಲೇಮಿಗೆ ಹೋಗಿದ್ದಾಗ ಮಹಾಯಾಜಕರು ಮತ್ತು ಯೆಹೂದ್ಯ ಹಿರಿಯ ನಾಯಕರು ಅವನಿಗೆ ವಿರೋಧವಾಗಿ ದೋಷಾರೋಪಣೆ ಮಾಡಿದರು. ನಾನು ಅವನಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಯೆಹೂದ್ಯರ ಅಪೇಕ್ಷೆಯಾಗಿತ್ತು. 16 ಆದರೆ ನಾನು, ‘ದೋಷಾರೋಪಣೆ ಹೊರಿಸಲ್ಪಟ್ಟಿರುವ ವ್ಯಕ್ತಿಯನ್ನು ತೀರ್ಪಿಗಾಗಿ ಬೇರೆಯವರಿಗೆ ಒಪ್ಪಿಸುವುದು ರೋಮ್‌ನವರ ಪದ್ಧತಿಯಲ್ಲ. ಮೊದಲನೆಯದಾಗಿ, ಅವನು ತನ್ನ ಮೇಲೆ ದೋಷಾರೋಪಣೆ ಮಾಡುತ್ತಿರವವರನ್ನು ಮುಖಾಮುಖಿಯಾಗಿ ಸಂಧಿಸಿ ಅವರ ದೋಷಾರೋಪಣೆಗಳಿಗೆ ವಿರೋಧವಾಗಿ ತನ್ನನ್ನು ಪ್ರತಿಪಾದಿಸಿಕೊಳ್ಳಲು ಅವಕಾಶ ಕೊಡಲೇಬೇಕು’ ಎಂದು ಹೇಳಿದೆನು.

17 “ಆದ್ದರಿಂದ ಅವರು ಇಲ್ಲಿಗೆ ಬಂದಾಗ, ನಾನು ತಡಮಾಡದೆ ಮರುದಿನವೇ ನ್ಯಾಯಾಸ್ಥಾನದಲ್ಲಿ ಕುಳಿತು ಆ ಮನುಷ್ಯನನ್ನು (ಪೌಲನನ್ನು) ಒಳಗೆ ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದೆನು. 18 ಯೆಹೂದ್ಯರು ನಿಂತುಕೊಂಡು ಅವನ ಮೇಲೆ ದೋಷಾರೋಪಣೆಗಳನ್ನು ಹೊರಿಸಿದರು. ಆದರೆ ನಾನು ಯೋಚಿಸಿದ ಪ್ರಕಾರ ಯೆಹೂದ್ಯರು ಅವನ ಮೇಲೆ ಯಾವ ಕೆಟ್ಟ ಅಪರಾಧವನ್ನಾಗಲಿ ಹೊರಿಸಲಿಲ್ಲ. 19 ಅವರು ಹೇಳಿದ ಸಂಗತಿಗಳು ಅವರ ಸ್ವಂತ ಧರ್ಮಕ್ಕೆ ಸಂಬಂಧಪಟ್ಟಿದ್ದವು ಮತ್ತು ಯೇಸು ಎಂಬ ವ್ಯಕ್ತಿಯನ್ನು ಕುರಿತದ್ದಾಗಿದ್ದವು. ಸತ್ತುಹೋದ ಯೇಸು ಈಗ ಜೀವಂತವಾಗಿದ್ದಾನೆಂದು ಪೌಲನು ಹೇಳಿದನು. 20 ಈ ಸಂಗತಿಗಳ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ಪ್ರಶ್ನೆಗಳನ್ನು ಕೇಳಲಿಲ್ಲ. ಆದರೆ ನಾನು ಪೌಲನಿಗೆ, ‘ನೀನು ಜೆರುಸಲೇಮಿಗೆ ಹೋಗಿ ಅಲ್ಲೇ ನ್ಯಾಯತೀರ್ಪು ಹೊಂದಲು ಬಯಸುವೆಯಾ?’ ಎಂದು ಕೇಳಿದೆನು. 21 ಅದಕ್ಕೆ ಅವನು, ‘ಚಕ್ರವರ್ತಿಯೇ (ಸೀಸರನೇ) ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನ್ನನ್ನು ಸಂರಕ್ಷಿಸಬೇಕು’ ಎಂದು ಕೇಳಿಕೊಂಡನು. ಆದ್ದರಿಂದ ರೋಮಿನಲ್ಲಿರುವ ಚಕ್ರವರ್ತಿಯ ಬಳಿಗೆ ಕಳುಹಿಸುವ ತನಕ ಅವನನ್ನು ಕಾವಲಿನಲ್ಲಿರಿಸಬೇಕೆಂದು ಆಜ್ಞಾಪಿಸಿದೆನು.”

22 ಅಗ್ರಿಪ್ಪನು ಫೆಸ್ತನಿಗೆ, “ಈ ಮನುಷ್ಯನು ಹೇಳುವುದನ್ನು ಕೇಳುವುದಕ್ಕೆ ನನಗೂ ಇಷ್ಟವಿದೆ” ಎಂದು ಹೇಳಿದನು.

ಫೆಸ್ತನು, “ಅವನು ಹೇಳುವುದನ್ನು ನೀನು ನಾಳೆ ಕೇಳಬಹುದು!” ಎಂದು ಹೇಳಿದನು.

23 ಮರುದಿನ ಅಗ್ರಿಪ್ಪ ರಾಜ ಮತ್ತು ಬೆರ್ನಿಕೆ ರಾಣಿ ವೈಭವದ ಬಟ್ಟೆಗಳನ್ನು ಧರಿಸಿಕೊಂಡು ಸೇನಾಧಿಕಾರಿಗಳೊಡನೆ ಹಾಗೂ ಸೆಜರೇಯದ ಪ್ರಮುಖರೊಡನೆ ನ್ಯಾಯಾಲಯದೊಳಗೆ ಬಂದರು. ಪೌಲನನ್ನು ಒಳಗೆ ಕರೆದುಕೊಂಡು ಬರಬೇಕೆಂದು ಫೆಸ್ತನು ಸೈನಿಕರಿಗೆ ಆಜ್ಞಾಪಿಸಿದನು.

24 ಫೆಸ್ತನು ಹೀಗೆಂದನು: “ರಾಜ ಅಗ್ರಿಪ್ಪನೇ, ನಮ್ಮೊಂದಿಗೆ ಇಲ್ಲಿ ನೆರೆದಿರುವ ಎಲ್ಲಾ ಜನರೇ, ನೀವು ನೋಡುತ್ತಿರುವ ಈ ಮನುಷ್ಯನ (ಪೌಲನ) ಮೇಲೆ ಇಲ್ಲಿರುವ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರು ನನಗೆ ದೂರುಗಳನ್ನು ಹೇಳಿ, ಇವನಿಗೆ ಮರಣದಂಡನೆ ಆಗಬೇಕೆಂದು ಆರ್ಭಟಿಸಿದರು. 25 ನಾನು ಇವನನ್ನು ವಿಚಾರಣೆ ಮಾಡಿದಾಗ ಇವನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಸೀಸರನಿಂದಲೇ ತನಗೆ ನ್ಯಾಯತೀರ್ಪಾಗಬೇಕೆಂದು ಇವನು ಕೇಳಿಕೊಂಡಿದ್ದಾನೆ. ಆದ್ದರಿಂದ ಇವನನ್ನು ರೋಮಿಗೆ ಕಳುಹಿಸಲು ನಾನು ತೀರ್ಮಾನಿಸಿದೆ. 26 ಆದರೆ ಇವನ ವಿಷಯದಲ್ಲಿ ಸೀಸರನಿಗೆ ಬರೆಯಲು ನಿರ್ದಿಷ್ಟವಾದ ಅಪರಾಧವೇನೂ ನನಗೆ ತೋರುತ್ತಿಲ್ಲ. ಆದ್ದರಿಂದ ನಾನು ಇವನನ್ನು ನಿಮ್ಮೆಲ್ಲರ ಮುಂದೆಯೂ ವಿಶೇಷವಾಗಿ ರಾಜನಾದ ಅಗ್ರಿಪ್ಪನ ಮುಂದೆಯೂ ತಂದಿದ್ದೇನೆ. ಆದ್ದರಿಂದ ನೀವು ಇವನನ್ನು ಪ್ರಶ್ನಿಸಿ ಇವನ ಬಗ್ಗೆ ಸೀಸರನಿಗೆ ಬರೆಯಲು ಏನಾದರೂ ವಿಷಯವುನ್ನು ಕೊಡಬಲ್ಲಿರೆಂದು ನಿರೀಕ್ಷಿಸುತ್ತೇನೆ. 27 ನಾನು ಯೋಚಿಸುವಂತೆ, ಒಬ್ಬ ಕೈದಿಯ ವಿರುದ್ಧವಿರುವ ದೋಷಾರೋಪಣೆಗಳನ್ನು ಸ್ಪಷ್ಟಪಡಿಸದೆ ಅವನನ್ನು ಸೀಸರನ ಬಳಿಗೆ ಕಳುಹಿಸುವುದು ಮೂರ್ಖತನವಾಗಿದೆ.”

ರಾಜ ಅಗ್ರಿಪ್ಪನ ಮುಂದೆ ಪೌಲನು

26 ಅಗ್ರಿಪ್ಪನು ಪೌಲನಿಗೆ, “ಈಗ ನೀನು ನಿನ್ನ ಪರವಾಗಿ ಮಾತಾಡಬಹುದು” ಎಂದು ಹೇಳಿದನು. ಆಗ ಪೌಲನು ತನ್ನ ಕೈಯೆತ್ತಿ ಮಾತಾಡಲಾರಂಭಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆಲ್ಲಾ ನಾನು ಉತ್ತರಕೊಡುವೆನು. ಇಂದು ನಿನ್ನ ಮುಂದೆ ನಿಂತುಕೊಂಡು ಪ್ರತಿವಾದ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದೇ ಎಣಿಸುತ್ತೇನೆ. ನಾನು ನಿನ್ನೊಂದಿಗೆ ಮಾತಾಡಲು ಬಹು ಸಂತೋಷಪಡುತ್ತೇನೆ. ಯಾಕೆಂದರೆ, ಯೆಹೂದ್ಯರ ಎಲ್ಲಾ ಸಂಪ್ರದಾಯಗಳ ಬಗ್ಗೆ ಮತ್ತು ಯೆಹೂದ್ಯರು ವಾದಿಸುತ್ತಿರುವ ಸಂಗತಿಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ದಯವಿಟ್ಟು ನನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸು.

“ನನ್ನ ಇಡೀ ಜೀವಮಾನದ ಬಗ್ಗೆ ಎಲ್ಲಾ ಯೆಹೂದ್ಯರಿಗೆ ಗೊತ್ತಿದೆ. ನಾನು ಆರಂಭದಿಂದ ನನ್ನ ಸ್ವದೇಶದಲ್ಲಿಯೂ ಅನಂತರ ಜೆರುಸಲೇಮಿನಲ್ಲಿಯೂ ಜೀವಿಸಿದ ರೀತಿಯನ್ನು ಅವರು ಬಲ್ಲರು. ಈ ಯೆಹೂದ್ಯರು ಬಹುಕಾಲದಿಂದಲೂ ನನ್ನನ್ನು ತಿಳಿದಿದ್ದಾರೆ. ನೀನು ಅವರನ್ನು ಕೇಳುವುದಾದರೆ, ನಾನು ಒಳ್ಳೆಯ ಫರಿಸಾಯನಾಗಿದ್ದೆನೆಂದು ಅವರು ನಿನಗೆ ಹೇಳಬಲ್ಲರು. ಯೆಹೂದ್ಯರ ಇತರ ಯಾವುದೇ ಪಂಗಡಗಿಳಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಫರಿಸಾಯರು ಯೆಹೂದ್ಯ ಧರ್ಮದ ಕಟ್ಟೆಳೆಗಳಿಗೆ ವಿಧೇಯರಾಗುತ್ತಾರೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನಾನು ನಿರೀಕ್ಷಿಸಿಕೊಂಡಿರುವುದರಿಂದಲೇ ಈಗ ವಿಚಾರಣೆಗೆ ಗುರಿಯಾಗಿದ್ದೇನೆ. ಈ ವಾಗ್ದಾನವು ಖಂಡಿತವಾಗಿ ನೆರವೇರುತ್ತದೆ ಎಂದು ಹನ್ನೆರಡು ಕುಲಗಳ ನಮ್ಮ ಜನರು ನಿರೀಕ್ಷಿಸಿಕೊಂಡಿದ್ದಾರೆ. ಯೆಹೂದ್ಯರು ಹಗಲಿರುಳು ದೇವರ ಸೇವೆ ಮಾಡುತ್ತಿರುವುದು ಈ ನಿರೀಕ್ಷೆಯಿಂದಲೇ. ನಾನು ಸಹ ಇದೇ ನಿರೀಕ್ಷೆಯನ್ನು ಹೊಂದಿರುವುದರಿಂದ ಇವರು ನನ್ನ ಮೇಲೆ ಆಪಾದನೆಗಳನ್ನು ಹೊರಿಸಿದ್ದಾರೆ! ಸತ್ತವರನ್ನು ದೇವರು ಜೀವಂತವಾಗಿ ಎಬ್ಬಿಸುತ್ತಾನೆ ಎಂಬುದು ನಂಬತಕ್ಕದ್ದಲ್ಲವೆಂದು ನೀವು ಭಾವಿಸಿಕೊಂಡಿರುವುದೇಕೆ?

“ನಾನು ಫರಿಸಾಯನಾಗಿದ್ದಾಗ ನಜರೇತಿನ ಯೇಸುವಿನ ಹೆಸರಿಗೆ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಬೇಕೆಂದು ಆಲೋಚಿಸಿಕೊಂಡೆನು. 10 ಜೆರುಸಲೇಮಿನಲ್ಲಿ ವಿಶ್ವಾಸಿಗಳ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಿದೆ. ಈ ವಿಶ್ವಾಸಿಗಳಲ್ಲಿ ಅನೇಕರನ್ನು ಸೆರೆಮನೆಗೆ ಹಾಕಲು ಮಹಾಯಾಜಕರು ನನಗೆ ಅಧಿಕಾರವನ್ನು ಕೊಟ್ಟರು. ಯೇಸುವಿನ ಶಿಷ್ಯರನ್ನು ಕೊಂದಾಗ ಅದಕ್ಕೆ ನಾನೂ ನನ್ನ ಸಮ್ಮತಿಯನ್ನು ಸೂಚಿಸಿದೆ. 11 ಪ್ರತಿಯೊಂದು ಸಭಾಮಂದಿರದಲ್ಲಿಯೂ ನಾನು ಅವರನ್ನು ದಂಡಿಸಿದೆನು. ಯೇಸುವಿನ ವಿರುದ್ಧ ದೂಷಣೆಯ ಮಾತುಗಳನ್ನು ಅವರ ಬಾಯಿಂದ ಹೊರಡಿಸಲು ನಾನು ಪ್ರಯತ್ನಿಸಿದೆನು. ಆ ವಿಶ್ವಾಸಿಗಳ ಮೇಲೆ ಬಹುಕೋಪವುಳ್ಳವನಾಗಿದ್ದು ಅವರನ್ನು ಹುಡುಕಿಹುಡುಕಿ ಹಿಂಸಿಸುವುದಕ್ಕಾಗಿ ವಿದೇಶದ ಪಟ್ಟಣಗಳಿಗೂ ಹೋದೆನು.

ತನಗಾದ ದರ್ಶನದ ಬಗ್ಗೆ ಪೌಲನ ಸಾಕ್ಷಿ

12 “ಒಂದುಸಲ, ದಮಸ್ಕ ಪಟ್ಟಣಕ್ಕೆ ಹೋಗಲು ಮಹಾಯಾಜಕರು ನನಗೆ ಅಪ್ಪಣೆಯನ್ನೂ ಅಧಿಕಾರವನ್ನೂ ಕೊಟ್ಟರು. 13 ನಾನು ದಮಸ್ಕದ ದಾರಿಯಲ್ಲಿ ಹೋಗುತ್ತಿದ್ದೆನು. ಆಗ ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಆಗ ಆಕಾಶದಿಂದ ಸೂರ್ಯನಿಗಿಂತಲೂ ಪ್ರಕಾಶಮಾನವಾದ ಬೆಳಕೊಂದು ಬಂದು ನನ್ನ ಸುತ್ತಲೂ ಮತ್ತು ನನ್ನೊಂದಿಗೆ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಪ್ರಜ್ವಲಿಸಿತು. 14 ನಾವೆಲ್ಲರೂ ನೆಲಕ್ಕೆ ಬಿದ್ದೆವು. ಆಗ ವಾಣಿಯೊಂದು ಯೆಹೂದ್ಯರ ಭಾಷೆಯಲ್ಲಿ[b] ನನ್ನೊಂದಿಗೆ ಮಾತಾಡುವುದನ್ನು ಕೇಳಿದೆನು. ಆ ವಾಣಿಯು, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತಿರುವೆ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟ’ ಎಂದು ಹೇಳಿತು.

15 “ನಾನು, ‘ಪ್ರಭುವೇ, ನೀನು ಯಾರು?’ ಎಂದೆನು.

“ಪ್ರಭುವು, ‘ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು. 16 ಎದ್ದೇಳು! ನಿನ್ನನ್ನು ನನ್ನ ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ಆರಿಸಿಕೊಂಡಿದ್ದೇನೆ. ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡದ್ದರ ವಿಷಯವಾಗಿಯೂ ನಾನು ನಿನಗೆ ಕೊಡಲಿರುವ ದರ್ಶನಗಳ ವಿಷಯವಾಗಿಯೂ ನೀನು ಜನರಿಗೆ ಸಾಕ್ಷಿಯಾಗಿರುವೆ. ಇದಕ್ಕಾಗಿಯೇ ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡೆನು. 17 ನಿನ್ನ ಸ್ವಂತ ಜನರಿಂದಲೂ ಯೆಹೂದ್ಯರಲ್ಲದ ಜನರಿಂದಲೂ ನಿನಗೆ ಕೇಡಾಗದಂತೆ ಕಾಪಾಡುವೆನು. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತಿದ್ದೇನೆ. 18 ನೀನು ಅವರಿಗೆ ಸತ್ಯವನ್ನು ತಿಳಿಸಿ ಅವರನ್ನು ಕತ್ತಲೆಯಿಂದ ಬೆಳಕಿಗೆ ಬರುವಂತೆಯೂ ಸೈತಾನನ ಅಧಿಕಾರಕ್ಕೆ ವಿಮುಖರಾಗಿ ದೇವರ ಕಡೆಗೆ ತಿರುಗಿಕೊಳ್ಳುವಂತೆಯೂ ಮಾಡಬೇಕು. ಆಗ ಅವರ ಪಾಪಗಳು ಕ್ಷಮಿಸಲ್ಪಡುತ್ತವೆ. ನನ್ನಲ್ಲಿ ನಂಬಿಕೆ ಇಡುವುದರ ಮೂಲಕ ಪವಿತ್ರರಾದ ಜನರೊಂದಿಗೆ ಅವರು ಪಾಲು ಹೊಂದುವರು’ ಎಂದನು.”

ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ

19 ಪೌಲನು ಮಾತನ್ನು ಮುಂದುವರಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ನಾನು ಪರಲೋಕದ ಈ ದರ್ಶನವನ್ನು ಕಂಡ ಮೇಲೆ ಅದಕ್ಕೆ ವಿಧೇಯನಾದೆನು. 20 ನಾನು ಜನರಿಗೆ, ‘ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ’ ಎಂತಲೂ ಅವರಿಗಾಗಿರುವ ಮಾನಸಾಂತರವನ್ನು ಯೋಗ್ಯವಾದ ಕಾರ್ಯಗಳ ಮೂಲಕ ತೋರ್ಪಡಿಸಬೇಕೆಂತಲೂ ಹೇಳಿದೆನು. ಮೊದಲನೆಯದಾಗಿ ದಮಸ್ಕಕ್ಕೂ ಬಳಿಕ ಜೆರುಸಲೇಮಿಗೂ ಜುದೇಯದ ಪ್ರತಿಯೊಂದು ಭಾಗಕ್ಕೂ ಹೋಗಿ ಅಲ್ಲಿರುವ ಜನರಿಗೆ ಈ ಸಂಗತಿಗಳನ್ನು ತಿಳಿಸಿದೆನು. ಅಲ್ಲದೆ ಯೆಹೂದ್ಯರಲ್ಲದ ಜನರ ಬಳಿಗೂ ಹೋದೆನು.

21 “ಈ ಕಾರಣಗಳಿಂದ ಯೆಹೂದ್ಯರು ನನ್ನನ್ನು ದೇವಾಲಯದಲ್ಲಿ ಬಂಧಿಸಿ ಕೊಲ್ಲಲು ಪ್ರಯತ್ನಿಸಿದರು. 22 ಆದರೆ ದೇವರು ನನಗೆ ಸಹಾಯಮಾಡಿದನು. ಆತನು ಇಂದಿನವರೆಗೂ ನನಗೆ ಸಹಾಯಮಾಡುತ್ತಿದ್ದಾನೆ. ಆದ್ದರಿಂದಲೇ ಇಂದು ಇಲ್ಲಿ ನಿಂತುಕೊಂಡಿದ್ದೇನೆ ಮತ್ತು ನಾನು ಕಂಡ ಸಂಗತಿಗಳ ಬಗ್ಗೆ ಜನರಿಗೆಲ್ಲಾ ಸಾಕ್ಷಿ ಹೇಳುತ್ತಿದ್ದೇನೆ. ಆದರೆ ನಾನು ಯಾವ ಹೊಸದನ್ನೂ ಹೇಳದೆ, ಮೋಶೆ ಮತ್ತು ಪ್ರವಾದಿಗಳು ಮುಂದೆ ನೆರವೇರುತ್ತವೆ ಎಂದು ಹೇಳಿದ ಸಂಗತಿಗಳನ್ನೇ ಹೇಳುತ್ತಿದ್ದೇನೆ. 23 ಕ್ರಿಸ್ತನು ಬಾಧೆಪಟ್ಟು ಸತ್ತು, ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದುಬಂದು, ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಬೆಳಕನ್ನು ತರುತ್ತಾನೆಂದು ಮೋಶೆ ಮತ್ತು ಪ್ರವಾದಿಗಳು ಹೇಳಿದ್ದಾರೆ.”

ಅಗ್ರಿಪ್ಪನನ್ನು ಒಡಂಬಡಿಸಲು ಪೌಲನ ಪ್ರಯತ್ನ

24 ಪೌಲನು ತನ್ನ ಪರವಾಗಿ ಈ ಸಂಗತಿಗಳನ್ನು ಹೇಳುತ್ತಿರಲು ಫೆಸ್ತನು, “ಪೌಲನೇ, ನೀನು ಹುಚ್ಚನಾಗಿರುವೆ! ಅಧಿಕ ಅಧ್ಯಯನ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ!” ಎಂದು ಕೂಗಿ ಹೇಳಿದನು.

25 ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ. 26 ರಾಜನಾದ ಅಗ್ರಿಪ್ಪನಿಗೆ ಈ ಸಂಗತಿಗಳು ತಿಳಿದಿವೆ. ನಾನು ಅವನೊಂದಿಗೆ ಸ್ವತಂತ್ರವಾಗಿ ಮಾತಾಡಬಲ್ಲೆನು. ಈ ಎಲ್ಲಾ ಸಂಗತಿಗಳ ಬಗ್ಗೆ ಅವನು ಕೇಳಿದ್ದಾನೆಂದು ನನಗೆ ಗೊತ್ತಿದೆ. ಯಾಕೆಂದರೆ ಎಲ್ಲಾ ಜನರು ನೋಡಬಹುದಾದ ಸ್ಥಳದಲ್ಲಿ ಈ ಸಂಗತಿಗಳು ನೆರವೇರಿದವು. 27 ರಾಜ ಅಗ್ರಿಪ್ಪನೇ, ಪ್ರವಾದಿಗಳು ಬರೆದ ಸಂಗತಿಗಳನ್ನು ನೀನು ನಂಬುವಿಯಾ? ನೀನು ನಂಬುವೆ ಎಂದು ನನಗೆ ಗೊತ್ತಿದೆ!” ಎಂಬುದಾಗಿ ಹೇಳಿದನು.

28 ರಾಜ ಅಗ್ರಿಪ್ಪನು ಪೌಲನಿಗೆ, “ಬಹು ಸುಲಭವಾಗಿ ನನ್ನನ್ನು ಒಪ್ಪಿಸಿ ಕ್ರೈಸ್ತನನ್ನಾಗಿ ಮಾಡಬಹುದೆಂದು ನೀನು ಯೋಚಿಸಿಕೊಂಡಿರುವಿಯಾ?” ಎಂದು ಕೇಳಿದನು.

29 ಪೌಲನು, “ಸುಲಭವೋ ಕಷ್ಟವೋ ಅದು ನನಗೆ ಮುಖ್ಯವಲ್ಲ. ನೀನು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಪ್ರತಿಯೊಬ್ಬರೂ ರಕ್ಷಣೆಹೊಂದಿ ನನ್ನಂತೆಯೇ ಆಗಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ!” ಎಂದು ಹೇಳಿದನು.

30 ರಾಜ ಅಗ್ರಿಪ್ಪನು, ರಾಜ್ಯಪಾಲ ಫೆಸ್ತನು, ಬೆರ್ನಿಕೆರಾಣಿ ಮತ್ತು ಅವರೊಂದಿಗೆ ಕುಳಿತುಕೊಂಡಿದ್ದ ಜನರೆಲ್ಲರೂ ಎದ್ದುನಿಂತು 31 ಅಲ್ಲಿಂದ ಹೊರಗೆ ಹೋದರು. ಅವರು ಒಬ್ಬರಿಗೊಬ್ಬರು, “ಈ ಮನುಷ್ಯನನ್ನು ಕೊಲ್ಲಬಾರದು ಅಥವಾ ಸೆರೆಮನೆಗೆ ಹಾಕಬಾರದು. ಇವನು ನಿಜವಾಗಿಯೂ ಕೆಟ್ಟದ್ದೇನೂ ಮಾಡಿಲ್ಲ!” ಎಂದು ಮಾತಾಡಿಕೊಂಡರು. 32 ಬಳಿಕ ಅಗ್ರಿಪ್ಪನು ಫೆಸ್ತನಿಗೆ, “ಇವನು ಸೀಸರನಿಗೆ ಬಿನ್ನಹ ಮಾಡಿಕೊಳ್ಳದಿದ್ದರೆ, ಇವನನ್ನು ಬಿಡುಗಡೆ ಮಾಡಬಹುದಿತ್ತು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International