Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 21-22

ಯೆಹೋವನ ಖಡ್ಗ ಮತ್ತು ಬಾಬಿಲೋನ್

21 ಯೆಹೋವನ ಸಂದೇಶ ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಜೆರುಸಲೇಮಿನ ಕಡೆಗೆ ನೋಡಿ ಅವರ ಪವಿತ್ರ ಸ್ಥಳಗಳಿಗೆ ವಿರುದ್ಧವಾಗಿ ಹೇಳು. ನನ್ನ ಪರವಾಗಿ ಇಸ್ರೇಲ್ ದೇಶದ ವಿರುದ್ಧವಾಗಿ ಮಾತನಾಡು. ಇಸ್ರೇಲ್ ದೇಶಕ್ಕೆ ಹೀಗೆ ಹೇಳು: ‘ಯೆಹೋವನು ನನಗೆ ಹೀಗೆಂದಿದ್ದಾನೆ, ನಾನು ನಿನಗೆ ವಿರೋಧವಾಗಿದ್ದೇನೆ. ನನ್ನ ಖಡ್ಗವನ್ನು ಅದರ ಒರೆಯಿಂದ ಹೊರತೆಗೆಯುವೆನು. ನಿನ್ನಲ್ಲಿರುವ ಒಳ್ಳೆಯ ಜನರನ್ನೂ ಕೆಟ್ಟ ಜನರನ್ನೂ ತೆಗೆದುಬಿಡುವೆನು. ಒಳ್ಳೆಯ ಜನರನ್ನೂ ಕೆಟ್ಟ ಜನರನ್ನೂ ನಿನ್ನಿಂದ ಕಡಿದುಹಾಕುವೆನು. ನನ್ನ ಖಡ್ಗವನ್ನು ಒರೆಯಿಂದ ತೆಗೆದು ದಕ್ಷಿಣದಿಂದ ಉತ್ತರದ ತನಕ ಇರುವ ಎಲ್ಲಾ ಜನರಿಗೆ ವಿರುದ್ಧವಾಗಿ ಉಪಯೋಗಿಸುವೆನು. ಆಗ, ಯೆಹೋವನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ತೆಗೆದಿದ್ದೇನೆಂದು ಎಲ್ಲಾ ಜನರಿಗೆ ಗೊತ್ತಾಗುವುದು. ನನ್ನ ಖಡ್ಗವು ತನ್ನ ಕಾರ್ಯಮಾಡದೆ ತಿರುಗಿ ಒರೆಯೊಳಗೆ ಹೋಗುವದಿಲ್ಲ.’”

ದೇವರು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಹೃದಯ ಒಡೆದ ಮನುಷ್ಯನು ದುಃಖದಿಂದಿರುವಾಗ ಅಳುವ ಶಬ್ದವನ್ನು ಮಾಡು. ಈ ಶಬ್ದವನ್ನು ಜನರ ಮುಂದೆ ಮಾಡು. ಆಗ ಅವರು, ‘ನೀನು ದುಃಖದಿಂದ ಅಳುವದೇಕೆ?’ ಎಂದು ವಿಚಾರಿಸುವರು. ಆಗ ನೀನು ಹೀಗೆ ಹೇಳಬೇಕು: ‘ಭೀತಿಯನ್ನು ಉಂಟು ಮಾಡುವ ವಾರ್ತೆ ಬರುವದರಿಂದ ಎಲ್ಲರ ಹೃದಯಗಳು ಭಯದಿಂದ ಕರಗಿಹೋಗಿರುತ್ತವೆ; ಕೈಗಳು ಬಲಹೀನವಾಗುತ್ತವೆ. ಪ್ರತಿ ಮನುಷ್ಯನ ಆತ್ಮವು ಕೃಶವಾಗುವುದು. ಮೊಣಗಂಟುಗಳು ನೀರಿನಂತಿರುವವು.’ ನೋಡಿ, ಆ ಕೆಟ್ಟ ಸುದ್ದಿಯು ಬರುತ್ತಲಿದೆ. ಇವೆಲ್ಲಾ ನಡೆಯುವವು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.

ಖಡ್ಗವು ತಯಾರಿದೆ

ಯೆಹೋವನ ನುಡಿ ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ನನ್ನ ಪರವಾಗಿ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:

“‘ನೋಡು, ಒಂದು ಖಡ್ಗ, ಹರಿತವಾದ ಖಡ್ಗ,
    ಆ ಖಡ್ಗವು ಉಜ್ಜಿ ಶುಭ್ರಮಾಡಲ್ಪಟ್ಟಿದೆ.
10 ಕೊಲ್ಲುವದಕ್ಕಾಗಿ ಆ ಖಡ್ಗವು ಹರಿತಮಾಡಲ್ಪಟ್ಟಿದೆ,
    ಮಿಂಚಿನಂತೆ ಹೊಳೆಯುತ್ತಿದೆ.
ನನ್ನ ಮಗನೇ, ನಾನು ನಿನ್ನನ್ನು ಶಿಕ್ಷಿಸುತ್ತಿದ್ದ ಬೆತ್ತದಿಂದ ನೀನು ಓಡಿಹೋದೆ.
    ಬೆತ್ತದ ಶಿಕ್ಷೆಯನ್ನು ಅನುಭವಿಸಲು ನೀನು ಒಪ್ಪಲಿಲ್ಲ.
11 ಖಡ್ಗವು ಉಜ್ಜಲ್ಪಟ್ಟಿದೆ.
    ಅದು ಈಗ ಉಪಯೋಗಿಸಲ್ಪಡುತ್ತದೆ.
ಖಡ್ಗವು ಹರಿತಮಾಡಲ್ಪಟ್ಟು ಚೆನ್ನಾಗಿ ಉಜ್ಜಲ್ಪಟ್ಟಿದೆ.
    ಅದನ್ನು ಈಗ ಕೊಲ್ಲುವವನ ಕೈಯಲ್ಲಿ ಕೊಡಲಾಗುವುದು.

12 “‘ಬೊಬ್ಬೆಹಾಕು, ಕಿರುಚು, ಓ ನರಪುತ್ರನೇ, ಯಾಕೆಂದರೆ ಖಡ್ಗವು ನನ್ನ ಜನರ ಮೇಲೆ ಮತ್ತು ಇಸ್ರೇಲಿನ ಎಲ್ಲಾ ಅಧಿಪತಿಗಳ ಮೇಲೆ ಉಪಯೋಗಿಸಲ್ಪಡುವುದು. ಇಸ್ರೇಲನ್ನು ಆಳುವವರಿಗೆ ಯುದ್ಧವು ಬೇಕು. ಆಗ ಅವರು ಖಡ್ಗವು ಬಂದಾಗ ನನ್ನ ಜನರೊಂದಿಗೆ ಇರಬಹುದು. ಆದ್ದರಿಂದ ನಿನ್ನ ತೊಡೆಗೆ ಬಡಿದು ಗಟ್ಟಿಯಾದ ಸ್ವರದಿಂದ ನಿನ್ನ ದುಃಖವನ್ನು ಪ್ರದರ್ಶಿಸು. 13 ಯಾಕೆಂದರೆ ಶೋಧನೆಯು ಸಂಭವಿಸಿತು. ಆದರೆ ನೀನು ಬೆತ್ತದ ಶಿಕ್ಷೆ ಅನುಭವಿಸಲು ನಿರಾಕರಿಸಿದಿ. ಹಾಗಾದರೆ ನಾನು ನಿನಗೆ ಏನು ಉಪಯೋಗಿಸಬೇಕು? ಹೌದು, ಖಡ್ಗವೇ?’” ನನ್ನ ಒಡೆಯನಾದ ಯೆಹೋವನು ನುಡಿದಿದ್ದಾನೆ. 14 ಆತನು ಹೀಗೆ ಹೇಳಿದನು: “ನರಪುತ್ರನೇ, ಕೈತಟ್ಟಿ ನನ್ನ ಪರವಾಗಿ ಜನರೊಂದಿಗೆ ಮಾತನಾಡು.

“ಖಡ್ಗವು ಎರಡು ಬಾರಿ ಕೆಳಕ್ಕೆ ಹಾಕಲ್ಪಡಲಿ,
    ಹೌದು, ಮೂರು ಬಾರಿ!
ಈ ಖಡ್ಗವು ಜನರನ್ನು ಕೊಲ್ಲುವದಕ್ಕಾಗಿಯೇ ಇದೆ.
    ಇದು ಮಹಾಹತ್ಯೆ ಮಾಡುವದಕ್ಕಾಗಿ ಇದೆ.
    ಈ ಖಡ್ಗವು ಅವರನ್ನು ತೂರಿಹೋಗುವುದು.
15 ಅವರ ಹೃದಯಗಳು ಭಯದಿಂದ ಕರಗಿಹೋಗುವುದು.
    ಬಹು ಜನರು ಪ್ರಜ್ಞೆ ತಪ್ಪಿ ಬೀಳುವರು.
ನಗರದ್ವಾರದ ಬಳಿಯಲ್ಲಿದ್ದು
    ಈ ಖಡ್ಗವು ಬಹು ಜನರನ್ನು ಕೊಲ್ಲುವುದು.
ಹೌದು, ಖಡ್ಗವು ಮಿಂಚಿನಂತೆ ಹೊಳೆಯುವುದು.
    ಜನರನ್ನು ಕೊಲ್ಲುವುದಕ್ಕಾಗಿ ಅದು ಹೊಳಪುಮಾಡಲ್ಪಟ್ಟಿದೆ.
16 ಖಡ್ಗವೇ, ಹರಿತವಾಗು,
    ಬಲಭಾಗದಲ್ಲಿ ತುಂಡರಿಸು;
    ಮುಂಭಾಗದಲ್ಲಿ ತುಂಡರಿಸು,
    ಎಡಭಾಗದಲ್ಲಿ ತುಂಡರಿಸು.
ನಿನ್ನ ಖಡ್ಗವು ಯಾವ ಸ್ಥಳಕ್ಕೆ ನುಗ್ಗಬೇಕೆಂದಿದೆಯೋ ಆ ಸ್ಥಳಕ್ಕೆ ಹೋಗು.

17 “ಆಗ ನಾನೂ ಚಪ್ಪಾಳೆ ಬಡಿದು ನನ್ನ ಕೋಪವನ್ನು ನಿಲ್ಲಿಸುವೆನು.
    ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”

ಜೆರುಸಲೇಮ್ ದಂಡಿಸಲ್ಪಟ್ಟಿತು

18 ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೀಗೆ ಹೇಳಿದನು: 19 “ನರಪುತ್ರನೇ, ಬಾಬಿಲೋನಿನ ರಾಜನ ಖಡ್ಗವು ಇಸ್ರೇಲಿಗೆ ಬರಲು ಎರಡು ಮಾರ್ಗಗಳ ನಕ್ಷೆಯನ್ನು ರಚಿಸು. ಅವರೆಡೂ ಒಂದೇ ಪ್ರದೇಶದಿಂದ (ಬಾಬಿಲೋನಿನಿಂದ) ಆರಂಭವಾಗುತ್ತವೆ. ಪ್ರತಿಯೊಂದು ರಸ್ತೆಯ ಆರಂಭದಲ್ಲಿ ಸೂಚನೆ ಕಂಬವನ್ನು ಚಿತ್ರಿಸು. 20 ಯಾವ ಮಾರ್ಗದಲ್ಲಿ ಖಡ್ಗವು ಬರುವದೋ ಆ ದಾರಿಯನ್ನು ಗುರುತಿಸು. ಒಂದು ರಸ್ತೆಯು ಅಮ್ಮೋನಿಯರ ನಗರವಾದ ರಬ್ಬಾಗೆ ಹೋಗುವದು. ಇನ್ನೊಂದು ಮಾರ್ಗವು ಯೆಹೂದದಲ್ಲಿರುವ ಭದ್ರಪಡಿಸಲ್ಪಟ್ಟ ಪಟ್ಟಣವಾಗಿರುವ ಜೆರುಸಲೇಮಿಗೆ ಹೋಗುವುದು. 21 ಇದರ ಅರ್ಥವೇನೆಂದರೆ, ರಸ್ತೆಯು ಶಾಖೆಗಳಾಗಿ ಒಡೆಯುವ ಸ್ಥಳದಲ್ಲಿ ಬಾಬಿಲೋನಿನ ರಾಜನು ಶಕುನವನ್ನು ಕೇಳಲು ನಿಂತಿದ್ದಾನೆ. ಅವನು ಕೆಲವು ಬಾಣಗಳನ್ನು ಅಲುಗಾಡಿಸಿದ್ದಾನೆ. ಅವನು ಕೆಲವು ಬಾಣಗಳನ್ನು ಚದರಿಸಿ, ತನ್ನ ವಂಶದ ವಿಗ್ರಹಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು, ಮತ್ತು ತಾನು ಕೊಂದ ಪ್ರಾಣಿಯ ಕಾಳಿಜವನ್ನು ನೋಡಿದನು.

22 “ಜೆರುಸಲೇಮನ್ನು ಸೂಚಿಸುವ ಮಂತ್ರಶಕ್ತಿಯ ವಸ್ತು ಅವನ ಬಲಗೈಗೆ ಬರುವುದು. ಅವನು ತನ್ನೊಂದಿಗೆ ಭಿತ್ತಿಭೇದಕ ಯಂತ್ರಗಳನ್ನು ತರುವನು. ಅವನು ಅಪ್ಪಣೆ ಮಾಡಿದ ಕೂಡಲೇ ಅವನ ಸೈನಿಕರು ಕೊಲ್ಲಲು ಪ್ರಾರಂಭಿಸುವರು. ರಣರಂಗದ ಆರ್ಭಟ ಮಾಡುವರು. ಆಮೇಲೆ ನಗರದ ಸುತ್ತಲೂ ಮಣ್ಣಿನ ದಿಬ್ಬ ಕಟ್ಟುವರು. ಕೋಟೆಗೋಡೆಯ ತನಕ ಮಣ್ಣಿನ ರಸ್ತೆ ಮಾಡುವರು. ಮರದಿಂದ ಮಾಡಿದ ಗೋಪುರಗಳನ್ನು ಮಾಡಿ ಅಲ್ಲಿಂದ ನಗರಕ್ಕೆ ಧಾಳಿ ಮಾಡುವರು. 23 ಇಸ್ರೇಲ್ ಜನರಿಗೆ ಆ ಮಂತ್ರತಂತ್ರಗಳ ಗುರುತು ಅರ್ಥವಿಲ್ಲದ್ದಾಗಿದೆ. ಅವರು ಮಾಡಿದ ವಾಗ್ದಾನವು ಅವರೊಂದಿಗಿದೆ. ಆದರೆ ಯೆಹೋವನು ಅವರ ಪಾಪಗಳನ್ನು ನೆನಪಿಗೆ ತರುವನು. ಆಗ ಇಸ್ರೇಲರು ಶತ್ರುವಶವಾಗುವರು.”

24 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀನು ಅನೇಕ ದುಷ್ಕೃತ್ಯಗಳನ್ನು ಮಾಡಿರುವೆ. ನಿನ್ನ ಪಾಪಗಳು ಬಹಳ ಸ್ಪಷ್ಟವಾಗಿವೆ. ನೀನು ದೋಷಿ ಎಂಬುದನ್ನು ನಾನು ನೆನಪುಮಾಡಿಕೊಳ್ಳುವಂತೆ ಮಾಡುವೆ. ವೈರಿಯು ನಿನ್ನನ್ನು ಹಿಡಿಯುವನು. 25 ಇಸ್ರೇಲಿನ ದುಷ್ಟ ಅಧಿಪತಿಯೇ, ನೀನು ಸಾಯುವಿ. ನಿನಗೆ ನನ್ನ ಶಿಕ್ಷೆಯು ಬಂದಾಯಿತು. ನಿನ್ನ ಅಂತ್ಯವು ಹತ್ತಿರವೇ ಇದೆ.”

26 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನಿನ್ನ ಮುಂಡಾಸವನ್ನು ತೆಗೆ! ನಿನ್ನ ಕಿರೀಟವನ್ನು ತೆಗೆ! ಈಗ ಇರುವಂತೆಯೇ ಸಂಗತಿಗಳು ಇರುವುದಿಲ್ಲ. ಮುಖ್ಯಾಧಿಕಾರಿಗಳು ತಗ್ಗಿಸಲ್ಪಡುವರು. ಈಗ ಸಾಧಾರಣ ವ್ಯಕ್ತಿಗಳಾಗಿರುವವರು ಪ್ರಮುಖ ನಾಯಕರುಗಳಾಗುವರು. 27 ನಾನು ಆ ನಗರವನ್ನು ಸಂಪೂರ್ಣವಾಗಿ ನಾಶಮಾಡುವೆನು ಆದರೆ ನಾನು ನೇಮಿಸಿದ ವ್ಯಕ್ತಿಯು ರಾಜನಾಗುವ ತನಕ ಇದು ಸಂಭವಿಸುವುದಿಲ್ಲ; ಅವನು ರಾಜನಾದ ಮೇಲೆ ಈ ಪಟ್ಟಣವನ್ನು ಅವನಿಗೊಪ್ಪಿಸುವೆನು.”

ಅಮ್ಮೋನಿನ ವಿರುದ್ಧ ಪ್ರವಾದನೆ

28 ದೇವರು ಹೇಳಿದ್ದು, “ನರಪುತ್ರನೇ, ನನ್ನ ಪರವಾಗಿ ಜನರ ಕೂಡ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಅಮ್ಮೋನಿಯರ ಬಗ್ಗೆಯೂ ಅವರ ದೂಷಣೆಗಳ ಬಗ್ಗೆಯೂ ಹೀಗೆ ಹೇಳುತ್ತಾನೆ:

“‘ನೋಡು, ಒಂದು ಖಡ್ಗ.
    ಆ ಖಡ್ಗವು ಒರೆಯಿಂದ ಹೊರಬಂದಿದೆ.
    ಆ ಖಡ್ಗವನ್ನು ಹರಿತಗೊಳಿಸಲಾಗಿದೆ ಮತ್ತು ನಯಗೊಳಿಸಲಾಗಿದೆ.
ಖಡ್ಗವು ಕೊಲ್ಲಲು ಸಿದ್ಧವಾಗಿದೆ.
    ಮಿಂಚಿನಂತೆ ಹೊಳೆಯಲೆಂದು ಅದನ್ನು ನಯಗೊಳಿಸಲಾಗಿದೆ.

29 “‘ಓ ಖಡ್ಗವೇ, ನಿನ್ನ ಕುರಿತು ಅವರು ಸುಳ್ಳುದರ್ಶನಗಳನ್ನು ಕಾಣುವರು.
ನಿನ್ನ ಕುರಿತು ಅವರು ಹೇಳುವ ಕಣಿಯು ದಾರಿ ತಪ್ಪಿಸುತ್ತದೆ.
    ಅದು ಕೇವಲ ಸುಳ್ಳುಗಳ ಕಂತೆ.
ಓ ಖಡ್ಗವೇ, ನಿನ್ನನ್ನು ದುಷ್ಟರ ಕುತ್ತಿಗೆಗಳ ಮೇಲೆ ಇರಿಸಲಾಗುವುದು.
    ಬೇಗನೇ ಅವರು ಹೆಣಗಳಾಗಿ ಬೀಳುವರು.
ಅವರ ಸಮಯವು ಬಂದಿದೆ.
    ಇದು ಅವರ ಅಂತ್ಯದಂಡನೆಯ ಸಮಯವಾಗಿದೆ.

ಬಾಬಿಲೋನ್ ವಿರುದ್ಧ ಪ್ರವಾದನೆ

30 “‘ಬಾಬಿಲೋನೇ, ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನೀನು ಎಲ್ಲಿ ನಿರ್ಮಿಸಲ್ಪಟ್ಟಿದ್ದೆಯೋ, ಎಲ್ಲಿ ನೀನು ಜನ್ಮತಾಳಿದೆಯೋ ಅಲ್ಲಿ ನಿನ್ನ ನ್ಯಾಯತೀರಿಸುವೆನು. 31 ನಿನ್ನ ಮೇಲೆ ನನ್ನ ರೌದ್ರವನ್ನು ಸುರಿಸುವೆನು. ನನ್ನ ರೌದ್ರವು ಬಿಸಿಗಾಳಿಯಂತೆ ನಿನ್ನನ್ನು ಸುಡುವದು. ನಾನು ನಿನ್ನನ್ನು ಕ್ರೂರ ಮನುಷ್ಯರ ಕೈಗೆ ಒಪ್ಪಿಸುವೆನು. ಅವರು ಜನರನ್ನು ಕೊಲ್ಲುವುದರಲ್ಲಿ ನಿಪುಣರು. 32 ನೀನು ಬೆಂಕಿಗೆ ಸೌದೆಯಂತೆ ಇರುವಿ. ನಿನ್ನ ರಕ್ತವು ಭೂಮಿಯ ಆಳಕ್ಕೆ ಹರಿಯುವದು. ಜನರು ಇನ್ನು ಮುಂದಕ್ಕೆ ನಿನ್ನನ್ನು ಎಂದಿಗೂ ನೆನಪು ಮಾಡರು. ಇದನ್ನು ಯೆಹೋವನಾದ ನಾನೇ ಹೇಳಿದ್ದೇನೆ.’”

ಜೆರುಸಲೇಮಿನ ವಿರುದ್ಧವಾಗಿ ಯೆಹೆಜ್ಕೇಲನ ಮಾತುಗಳು

22 ಯೆಹೋವನ ಸಂದೇಶವು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ನೀನು ಹಂತಕರ ನಗರಕ್ಕೆ ನ್ಯಾಯತೀರಿಸುವೆಯಾ? ಆಕೆಯ ಭಯಂಕರ ದುಷ್ಟತನದ ಬಗ್ಗೆ ಆಕೆಗೆ ತಿಳಿಸು. ನೀನು ಹೀಗೆ ಹೇಳಬೇಕು: ‘ನನ್ನ ಒಡೆಯನಾದ ಯೆಹೋವನ ಮಾತುಗಳಿವು. ಈ ನಗರವು ಕೊಲೆಗಾರರಿಂದ ತುಂಬಿದೆ. ಆದ್ದರಿಂದ ಆಕೆಯ ಶಿಕ್ಷೆಯ ದಿನವು ಬಂದಿದೆ. ಆಕೆ ತನಗೋಸ್ಕರ ಹೊಲಸು ವಿಗ್ರಹಗಳನ್ನು ಮಾಡಿ ತನ್ನನ್ನು ಹೊಲಸು ಮಾಡಿಕೊಂಡಿದ್ದಾಳೆ.

“‘ಜೆರುಸಲೇಮಿನ ನಿವಾಸಿಗಳೇ, ನೀವು ಅನೇಕರನ್ನು ಕೊಂದಿದ್ದೀರಿ. ಆದ್ದರಿಂದ ನೀವು ದೋಷಿಗಳು. ನೀವು ಹೊಲಸು ವಿಗ್ರಹಗಳನ್ನು ಮಾಡಿಕೊಂಡಿದ್ದೀರಿ. ಆದ್ದರಿಂದ ನೀವು ಅಶುದ್ಧರು. ನಿಮ್ಮನ್ನು ಶಿಕ್ಷಿಸುವ ಸಮಯ ಈಗ ಬಂದಿದೆ. ನಿಮ್ಮ ಅಂತ್ಯವು ಬಂದಿದೆ. ಆದ್ದರಿಂದಲೇ ಇತರ ಜನಾಂಗಗಳವರು ನಿಮ್ಮನ್ನು ಗೇಲಿಮಾಡುವರು. ಎಲ್ಲಾ ದೇಶಗಳು ನಿಮ್ಮನ್ನು ನೋಡಿ ನಗುವವು. ದೂರ ಮತ್ತು ಹತ್ತಿರದಲ್ಲಿರುವ ಎಲ್ಲರೂ ನಿನ್ನನ್ನು ಹಾಸ್ಯ ಮಾಡುವರು. ನಿನ್ನ ಹೆಸರನ್ನು ನೀನು ಕೆಡಿಸಿದ್ದೀ. ನೀನು ಗದ್ದಲದಿಂದ ತುಂಬಿಹೋಗಿರುವೆ.

“‘ಇಗೋ, ಜೆರುಸಲೇಮಿನಲ್ಲಿ ಇತರರನ್ನು ಕೊಲ್ಲುವದಕ್ಕಾಗಿಯೇ ತಮ್ಮನ್ನು ಬಲಿಷ್ಠರನ್ನಾಗಿ ಮಾಡಿಕೊಂಡಿರುವ ಇಸ್ರೇಲಿನ ಅಧಿಪತಿಗಳು ಇದ್ದಾರೆ. ಜೆರುಸಲೇಮಿನ ಜನರು ತಮ್ಮನ್ನು ಹೆತ್ತವರನ್ನು ಸನ್ಮಾನಿಸುವುದಿಲ್ಲ. ಪರದೇಶಸ್ಥರನ್ನು ಹಿಂಸಿಸುವರು. ಆ ಸ್ಥಳದಲ್ಲಿ ವಿಧೆವೆಯರಿಗೂ ಅನಾಥರಿಗೂ ಮೋಸ ಮಾಡುವರು. ನೀವು ನನ್ನ ಪವಿತ್ರ ವಸ್ತುಗಳನ್ನು ಕಡೆಗಾಣಿಸಿರುವಿರಿ. ನಾನು ನೇಮಿಸಿರುವ ವಿಶೇಷ ವಿಶ್ರಾಂತಿಯ ದಿವಸಗಳನ್ನು ಅಲಕ್ಷ್ಯ ಮಾಡುತ್ತೀರಿ. ಜೆರುಸಲೇಮ್ ನಿವಾಸಿಗಳು ಇತರರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಆ ನಿರಪರಾಧಿ ಜನರನ್ನು ಹತ್ಯೆ ಮಾಡಲು ಹಾಗೆ ಮಾಡುತ್ತಾರೆ. ಆ ಜನರು ಬೆಟ್ಟದ ಮೇಲೆ ಹೋಗಿ ಸುಳ್ಳುದೇವರುಗಳನ್ನು ಸನ್ಮಾನಿಸುವುದಕ್ಕಾಗಿ ಊಟಮಾಡುತ್ತಾರೆ.

“‘ಜೆರುಸಲೇಮಿನ ಜನರು ಎಲ್ಲಾ ಬಗೆಯ ಲೈಂಗಿಕ ಪಾಪಗಳನ್ನು ಮಾಡುತ್ತಾರೆ. 10 ತಮ್ಮ ತಂದೆಯ ಹೆಂಡತಿಯರೊಂದಿಗೆ ಅನೈತಿಕ ಸಂಬಂಧವಿಟ್ಟುಕೊಳ್ಳುತ್ತಾರೆ. ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುತ್ತಾರೆ; ಮುಟ್ಟಾಗಿ ಅಶುದ್ಧರಾಗಿರುವ ಸ್ತ್ರೀಯರ ಮೇಲೂ ಅವರು ಅತ್ಯಾಚಾರ ಮಾಡುತ್ತಾರೆ. 11 ಇಂತಹ ಪಾಪಗಳನ್ನು ತಮ್ಮ ನೆರೆಯವನ ಹೆಂಡತಿಯೊಂದಿಗೆ ನಡಿಸುತ್ತಾರೆ. ಒಬ್ಬನು ತನ್ನ ಸ್ವಂತ ಸೊಸೆಯೊಂದಿಗೆ ಮಲಗಿ ಆಕೆಯನ್ನು ಅಶುದ್ಧಳನ್ನಾಗಿ ಮಾಡಿದನು. ಮತ್ತೊಬ್ಬನು ತನ್ನ ತಂದೆಯ ಮಗಳು, ತನ್ನ ತಂಗಿಯನ್ನೇ ಬಲವಂತದಿಂದ ಕೆಡಿಸಿರುತ್ತಾನೆ. 12 ಜೆರುಸಲೇಮಿನಲ್ಲಿ ನೀವು ಕೊಲೆ ಮಾಡುವದಕ್ಕಾಗಿ ಹಣ ತೆಗೆದುಕೊಳ್ಳುತ್ತೀರಿ. ಸಾಲಕೊಟ್ಟು ಅದಕ್ಕೆ ಬಡ್ಡಿ ತೆಗೆದುಕೊಳ್ಳುತ್ತೀರಿ. ಸ್ವಲ್ಪ ಹಣ ಮಾಡುವದಕ್ಕಾಗಿ ನಿಮ್ಮ ನೆರೆಯವನನ್ನೆ ಮೋಸ ಮಾಡುತ್ತೀರಿ. ನನ್ನನ್ನು ನೀವು ಮರೆತುಬಿಟ್ಟಿರುವಿರಿ.’” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.

13 ದೇವರು ಹೀಗೆ ಹೇಳಿದನು: “‘ನೋಡಿರಿ, ನಾನು ಕೈಯನ್ನು ಬಡಿದು ನಿಮ್ಮನ್ನು ನಿಲ್ಲಿಸಿ ಬಿಡುವೆನು. ನೀವು ಮೋಸ ಮಾಡಿದ್ದಕ್ಕಾಗಿಯೂ, ಜನರನ್ನು ಕೊಲೆ ಮಾಡಿದ್ದಕ್ಕಾಗಿಯೂ ನಿಮ್ಮನ್ನು ಶಿಕ್ಷಿಸುವೆನು. 14 ನಾನು ನಿಮ್ಮನ್ನು ಶಿಕ್ಷಿಸಲು ಬಂದಾಗ ನೀವು ಧೈರ್ಯಶಾಲಿಗಳಾಗುವಿರಾ? ನಿಮ್ಮಲ್ಲಿ ಬಲವಿರುವದೋ? ನಾನೇ ಯೆಹೋವನು. ನಾನು ಹೇಳಿದ ಪ್ರಕಾರ ಮಾಡುವೆನು. 15 ನಾನು ನಿಮ್ಮನ್ನು ಜನಾಂಗಗಳ ಮಧ್ಯೆ ಚದರಿಸಿಬಿಡುವೆನು. ನಿಮ್ಮನ್ನು ಬಹುದೇಶಗಳ ಮಧ್ಯೆ ಅಟ್ಟಿಬಿಡುವೆನು. ಈ ನಗರದಲ್ಲಿರುವ ಅಸಹ್ಯ ವಸ್ತುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡುವೆನು. 16 ಜೆರುಸಲೇಮೇ, ನಿನಗೆ ಸಂಭವಿಸುವ ಸಂಗತಿಗಳಿಂದ ಜನಾಂಗಗಳ ಮುಂದೆ ನಿನ್ನ ಕೀರ್ತಿಯು ಹಾಳಾಗುವುದು. ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವೆ.’”

ಇಸ್ರೇಲ್ ಉಪಯೋಗವಿಲ್ಲದ ಹೊಲಸು

17 ಯೆಹೋವನ ವಾಕ್ಯವು ನನಗೆ ಬಂತು. ಆತನು ಹೀಗೆಂದನು: 18 “ನರಪುತ್ರನೇ, ಇಸ್ರೇಲ್ ಜನಾಂಗವು ನನ್ನ ಪಾಲಿಗೆ ನಿಷ್ಪ್ರಯೋಜಕವಾಗಿದೆ. ಅವರು ತಾಮ್ರದಂತೆ, ತವರದಂತೆ, ಕಬ್ಬಿಣದಂತೆ ಮತ್ತು ಸೀಸದಂತೆ ಮತ್ತು ಬೆಳ್ಳಿಯನ್ನು ಕುಲುಮೆಯಲ್ಲಿ ಕರಗಿಸಿ ಶುದ್ಧೀಕರಿಸಿದಾಗ ಉಳಿಯುವ ಕಂದುಬೆಳ್ಳಿಯಂತೆ ಇದ್ದಾರೆ. 19 ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ. ‘ನೀವೆಲ್ಲರೂ ಪ್ರಯೋಜನವಿಲ್ಲದ ಲೋಹವಾಗಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಜೆರುಸಲೇಮಿನೊಳಗೆ ಒಟ್ಟುಗೂಡಿಸುತ್ತೇನೆ. 20 ಕೆಲಸಗಾರರು ಬೆಳ್ಳಿ, ತಾಮ್ರ, ಸೀಸ, ತವರ, ಕಬ್ಬಿಣ ಇವುಗಳನ್ನೆಲ್ಲಾ ಬೆಂಕಿಗೆ ಹಾಕುವರು. ಬೆಂಕಿಯನ್ನೂದಿ ಶಾಖ ಹೆಚ್ಚು ಮಾಡುವರು. ಆಗ ಲೋಹಗಳು ಕರಗಲು ಪ್ರಾರಂಭವಾಗುವವು. ಅದೇ ರೀತಿಯಲ್ಲಿ ನಾನು ನಿಮ್ಮನ್ನು ನನ್ನ ಬೆಂಕಿಯಲ್ಲಿ ಹಾಕಿ ಕರಗಿಸುವೆನು. ನನ್ನ ರೌದ್ರವೇ ಆ ಬೆಂಕಿ. 21 ನಾನು ನಿಮ್ಮನ್ನು ಆ ಬೆಂಕಿಯಲ್ಲಿ ಹಾಕುವೆನು. ನನ್ನ ರೌದ್ರವೆಂಬ ಬೆಂಕಿಯನ್ನು ಊದಿ ಶಾಖ ಹೆಚ್ಚಿಸುವೆನು. ಆಗ ನೀವು ಕರಗಲು ಪ್ರಾರಂಭಿಸುವಿರಿ. 22 ಬೆಳ್ಳಿಯು ಕುಲುಮೆಯಲ್ಲಿ ಕರಗಿಹೋಗುವಂತೆಯೇ ನೀವು ಪಟ್ಟಣದಲ್ಲಿ ಕರಗಿಹೋಗುವಿರಿ. ಯೆಹೋವನಾದ ನಾನೇ ನನ್ನ ಕೋಪವನ್ನು ನಿಮ್ಮ ಮೇಲೆ ಸುರಿದೆನೆಂದು ಆಗ ನೀವು ಅರ್ಥಮಾಡಿಕೊಳ್ಳುವಿರಿ.’”

ಜೆರುಸಲೇಮ್ ವಿರುದ್ಧ ಯೆಹೆಜ್ಕೇಲನ ಮಾತುಗಳು

23 ಯೆಹೋವನ ವಾಕ್ಯವು ನನಗೆ ಬಂದಿತು. ಆತನು, 24 “ನರಪುತ್ರನೇ, ಇದನ್ನು ಜೆರುಸಲೇಮಿಗೆ ಹೇಳು. ಮಳೆಯನ್ನೇ ಪಡೆದಿಲ್ಲದ ಭೂಮಿಯಂತೆ ಆಕೆ ಇದ್ದಾಳೆಂದು ಆಕೆಗೆ ತಿಳಿಸು. ನನ್ನ ಕೋಪದ ಸಮಯದಲ್ಲಿ ಆಕೆಯ ಮೇಲೆ ಮಳೆಯೇ ಸುರಿದಿಲ್ಲ. 25 ಜೆರುಸಲೇಮಿನ ಪ್ರವಾದಿಗಳು ತಾನು ಬೇಟೆಯಾಡಿ ಕೊಂದ ಪ್ರಾಣಿಯನ್ನು ತಿನ್ನುವ ಗರ್ಜಿಸುವ ಸಿಂಹದಂತಿದ್ದಾರೆ. ಆ ಪ್ರವಾದಿಗಳು ಅನೇಕ ಪ್ರಾಣಗಳನ್ನು ತೆಗೆದುಕೊಂಡಿದ್ದಾರೆ. ಅವರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡಿದ್ದಾರೆ. ಜೆರುಸಲೇಮಿನಲ್ಲಿ ಅನೇಕ ಸ್ತ್ರೀಯರು ವಿಧವೆಯರಾಗಲು ಅವರೇ ಕಾರಣರಾಗಿದ್ದಾರೆ.

26 “ಯಾಜಕರು ನನ್ನ ಉಪದೇಶವನ್ನು ನಿರಾಕರಿಸಿರುತ್ತಾರೆ; ಪರಿಶುದ್ಧ ವಸ್ತುಗಳನ್ನು ಸರಿಯಾಗಿ ಲಕ್ಷ್ಯ ಮಾಡುತ್ತಿಲ್ಲ; ಅವುಗಳಿಗೆ ಮಹತ್ವವನ್ನು ಕೊಡುತ್ತಿಲ್ಲ. ಅವರು ಪವಿತ್ರ ವಸ್ತುಗಳನ್ನು ಅಪವಿತ್ರ ವಸ್ತುಗಳಂತೆ ನೋಡುತ್ತಿದ್ದಾರೆ. ಯಾವುದು ಶುದ್ಧ, ಯಾವುದು ಅಶುದ್ಧ ಎಂಬುದರ ಬಗ್ಗೆ ಅವರು ಜನರಿಗೆ ಸರಿಯಾಗಿ ಉಪದೇಶಿಸುತ್ತಿಲ್ಲ. ನನ್ನ ವಿಶೇಷ ವಿಶ್ರಾಂತಿ ದಿವಸಗಳನ್ನು ಮಾನ್ಯ ಮಾಡುತ್ತಿಲ್ಲ. ನಾನು ಏನೂ ಅಲ್ಲವೆಂಬಂತೆ ನನ್ನನ್ನು ಅವರು ನೋಡುತ್ತಾರೆ.

27 “ಜೆರುಸಲೇಮಿನ ನಾಯಕರು ತಾನು ಹಿಡಿದ ಪ್ರಾಣಿಯನ್ನು ತಿನ್ನುವ ತೋಳಕ್ಕೆ ಸಮಾನರಾಗಿದ್ದಾರೆ. ಅವರು ಧನಿಕರಾಗುವದಕ್ಕಾಗಿ ಜನರನ್ನು ಹಿಡಿದು ಕೊಲ್ಲುವರು.

28 “ಪ್ರವಾದಿಗಳು ಜನರನ್ನು ಎಚ್ಚರಿಸುವದಿಲ್ಲ. ಸತ್ಯವನ್ನು ಮುಚ್ಚಿಡುತ್ತಾರೆ. ಒಂದು ಗೋಡೆಯನ್ನು ದುರಸ್ತಿ ಮಾಡದೆ ಅದರ ರಂಧ್ರಗಳನ್ನು ಗಾರೆಯಿಂದ ಮುಚ್ಚುವ ಕೆಲಸಗಾರರಂತಿದ್ದಾರೆ. ಅವರು ಸುಳ್ಳುದರ್ಶನಗಳನ್ನೆ ನೋಡುತ್ತಾರೆ. ತಮ್ಮ ಭವಿಷ್ಯದ ಬಗ್ಗೆ ಶಕುನದ ಮೂಲಕ ತಿಳಿದುಕೊಳ್ಳುವುದೆಲ್ಲ ಸುಳ್ಳಾಗಿರುತ್ತದೆ. ಅವರು, ‘ನನ್ನ ಒಡೆಯನಾದ ಯೆಹೋವನು ಹೇಳಿದನು’ ಎಂಬುದಾಗಿ ಸುಳ್ಳು ಹೇಳುವರು. ಆದರೆ ನಿಜವಾಗಿಯೂ ಯೆಹೋವನು ಅವರ ಕೂಡ ಮಾತನಾಡಲಿಲ್ಲ.

29 “ಸಾಮಾನ್ಯ ಜನರು ಮೋಸ ಮಾಡುತ್ತಾರೆ ಮತ್ತು ದರೋಡೆ ಮಾಡುತ್ತಾರೆ. ತಾವು ಧನಿಕರಾಗುವದಕ್ಕೆ ನಿಸ್ಸಹಾಯಕರಾದ ಭಿಕ್ಷೆಗಾರರನ್ನು ಸುಲುಕೊಳ್ಳುವರು. ಅವರು ಪರದೇಶಿಗಳಿಗೆ ಮೋಸಮಾಡಿ ಅವರಿಗೆ ಅನ್ಯಾಯ ಮಾಡುವರು.

30 “ನನ್ನ ಕೋಪದಿಂದ ದೇಶವು ನಾಶವಾಗದಂತೆ ಅದನ್ನು ರಕ್ಷಿಸಲು ಗೋಡೆಯನ್ನು ಸರಿಪಡಿಸುವುದಕ್ಕಾಗಿಯೂ ಗೋಡೆಯು ಒಡೆದುಹೋಗಿದ್ದ ಸ್ಥಳದಲ್ಲಿ ನಿಂತುಕೊಳ್ಳುವುದಕ್ಕಾಗಿ ಅವರಲ್ಲಿ ನಾನು ಒಬ್ಬನನ್ನು ಎದುರುನೋಡಿದೆ. ಆದರೆ ಯಾರೂ ನನಗೆ ಸಿಗಲಿಲ್ಲ. 31 ಅದಕ್ಕಾಗಿ ನಾನು ಅವರಿಗೆ ನನ್ನ ಕೋಪವನ್ನು ತೋರಿಸುವೆನು. ಅವರ ದುಷ್ಟತನಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು. ಅವರೇ ಅದಕ್ಕೆ ಜವಾಬ್ದಾರರು.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International