Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 23-27

ಲೆಬನೋನಿಗೆ ದೇವರ ಸಂದೇಶ

23 ತೂರಿನ ವಿಷಯವಾಗಿ ದುಃಖಕರವಾದ ಸಂದೇಶ:

“ತಾರ್ಷೀಷಿನ ಹಡಗುಗಳೇ, ದುಃಖಿಸಿರಿ!
    ನಿಮ್ಮ ರೇವು ಕೆಡವಲ್ಪಟ್ಟಿದೆ.”
    ಕಿತ್ತಿಮಿನಿಂದ ಹೊರಟ ಹಡಗುಗಳಿಗೆ ಈ ವಾರ್ತೆಯು ತಲುಪಿತು.

ಸಮುದ್ರ ತೀರದಲ್ಲಿ ವಾಸಿಸುವ ಜನರೇ, ನೀವು ಸ್ತಬ್ಧರಾಗಿದ್ದು ದುಃಖಿಸಿರಿ.
    ತೂರು “ಚೀದೋನಿನ ವ್ಯಾಪಾರಿ” ಆಗಿತ್ತು. ಆ ನಗರವು ವರ್ತಕರನ್ನು ಸಮುದ್ರದಾಚೆ ಕಳುಹಿಸಿತು.
    ಆ ಜನರು ನಿನ್ನನ್ನು ಐಶ್ವರ್ಯಗಳಿಂದ ತುಂಬಿಸಿದರು.
ಅವರು ಸಮುದ್ರ ಪ್ರಯಾಣ ಮಾಡುತ್ತಾ ಧಾನ್ಯಕ್ಕಾಗಿ ಹುಡುಕುತ್ತಿದ್ದಾರೆ.
    ತೂರಿನ ಜನರು ನೈಲ್ ನದಿಯ ಬದಿಗಳಲ್ಲಿ ಬೆಳೆಸುವ ಧಾನ್ಯವನ್ನು ಕೊಂಡುಕೊಂಡು
    ಇತರ ದೇಶಗಳಿಗೆ ಮಾರುವರು.

ಚೀದೋನೇ, ನೀನು ತುಂಬಾ ದುಃಖದಿಂದಿರಬೇಕು.
    ಯಾಕೆಂದರೆ ಸಮುದ್ರವೂ ಸಮುದ್ರದ ಕೋಟೆಯೂ ಹೇಳುವುದೇನೆಂದರೆ,
“ನನಗೆ ಮಕ್ಕಳಿಲ್ಲ, ನಾನು ಪ್ರಸವವೇದನೆ ಅನುಭವಿಸಲಿಲ್ಲ.
    ನಾನು ಮಕ್ಕಳನ್ನು ಹೆರಲಿಲ್ಲ.
    ನಾನು ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಬೆಳೆಸಲಿಲ್ಲ.”

ತೂರಿನ ವಿಷಯವಾದ ವಾರ್ತೆಯನ್ನು ಈಜಿಪ್ಟ್ ಕೇಳಿಸಿಕೊಳ್ಳುವದು.
    ಆ ವರ್ತಮಾನವು ಈಜಿಪ್ಟನ್ನು ದುಃಖದಲ್ಲಿ ಮುಳುಗಿಸುವದು.
ಹಡಗುಗಳೇ, ನೀವು ತಾರ್ಷೀಷಿಗೆ ಹಿಂದಿರುಗಿರಿ!
    ಸಮುದ್ರ ತೀರದಲ್ಲಿ ವಾಸಿಸುವವರಾದ ನೀವು ದುಃಖಿಸಬೇಕು!
ಹಿಂದಿನ ಕಾಲದಲ್ಲಿ ನೀವು ತೂರ್ ನಗರದಲ್ಲಿ ಉಲ್ಲಾಸಿಸಿದಿರಿ.
    ಪ್ರಾರಂಭದಿಂದಲೇ ಆ ನಗರವು ಅಭಿವೃದ್ಧಿಹೊಂದುತ್ತಿತ್ತು.
    ಆ ನಗರದ ಜನರು ಬಹುದೂರ ಪ್ರಯಾಣಮಾಡಿ ನೆಲೆಸಿರುವರು.
ತೂರ್ ಪಟ್ಟಣವು ಅನೇಕ ಗಣ್ಯವ್ಯಕ್ತಿಗಳನ್ನು ಕೊಟ್ಟಿರುತ್ತದೆ.
    ಅಲ್ಲಿಯ ವರ್ತಕರಿಗೆ ಪ್ರಪಂಚದ ಎಲ್ಲಾ ಕಡೆಯೂ ಗೌರವವಿದೆ.
    ಆದ್ದರಿಂದ ಇಂಥ ತೂರ್ ವಿರುದ್ಧ ಯೋಜನೆ ಮಾಡಿದವರಾರು?
ಸರ್ವಶಕ್ತನಾದ ಯೆಹೋವನೇ.
    ಅದು ಪ್ರಾಮುಖ್ಯವಾಗದಂತೆ ಆತನೇ ತೀರ್ಮಾನಿಸಿದ್ದಾನೆ.
    ಆತನು ಗೌರವಿಸಲ್ಪಡುವ ಜನರನ್ನು ಅವಮಾನಪಡಿಸಬೇಕೆಂತಲೂ ಮಾಡಿದ್ದಾನೆ.
10 ತಾರ್ಷೀಷಿನ ಹಡಗಿನವರೇ, ನೀವು ಊರಿಗೆ ಹಿಂತಿರುಗಿರಿ.
    ಸಮುದ್ರವನ್ನು ಸಣ್ಣ ನದಿಯೋ ಎಂಬಂತೆ ದಾಟಿರಿ.
    ಯಾರೂ ನಿಮ್ಮನ್ನು ನಿಲ್ಲಿಸಲಾರರು.
11 ಯೆಹೋವನು ಸಮುದ್ರದ ಮೇಲೆ ತನ್ನ ಕೈಯನ್ನು ಚಾಚಿದ್ದಾನೆ.
    ಆತನು ತೂರಿಗೆ ವಿರುದ್ಧವಾಗಿ ಯುದ್ಧಮಾಡಲು ರಾಜ್ಯಗಳನ್ನು ಒಟ್ಟುಗೂಡಿಸುತ್ತಾನೆ.
    ಯೆಹೋವನು ಕಾನಾನಿಗೆ ತೂರಿನ ಆಶ್ರಯಸ್ಥಳಗಳನ್ನು ನಾಶಮಾಡಲು ಆಜ್ಞಾಪಿಸುತ್ತಾನೆ.
12 ಯೆಹೋವನು ಹೇಳುವುದೇನೆಂದರೆ, “ಚೀದೋನ್ ಕುಮಾರಿಯೇ, ನೀನು ನಾಶವಾಗುವೆ;
    ಎಂದಿಗೂ ನೀನು ಹರ್ಷಿಸುವದಿಲ್ಲ.
ತೂರಿನ ಜನರು, ‘ನಮಗೆ ಸೈಪ್ರಸ್‌ನವರು ಸಹಾಯ ಮಾಡುತ್ತಾರೆ’ ಎಂದು ಹೇಳುತ್ತಾರೆ.
    ಆದರೆ ನೀನು ಸಮುದ್ರ ಮಾರ್ಗವಾಗಿ ಸೈಪ್ರಸ್‌ಗೆ ಹೋದರೆ ಅಲ್ಲಿ ನಿನಗೆ ವಿಶ್ರಮಿಸಲು ಸ್ಥಳ ದೊರಕುವದಿಲ್ಲ.”
13 ಆಗ ತೂರಿನ ಜನರು ಹೀಗೆನ್ನುವರು: “ಬಾಬಿಲೋನಿನವರು ನಮಗೆ ಸಹಾಯಮಾಡುವರು.” ಆದರೆ ಕಸ್ದೀಯರ ದೇಶವನ್ನು ನೋಡಿ.
    ಬಾಬಿಲೋನ್ ಈಗ ದೇಶವಲ್ಲ.
ಬಾಬಿಲೋನನ್ನು ಅಶ್ಶೂರವು ವಶಪಡಿಸಿಕೊಂಡು ಅದರ ಸುತ್ತಲೂ ಕಾವಲು ಬುರುಜುಗಳನ್ನು ಕಟ್ಟಿಸಿದೆ.
    ಅಲ್ಲಿದ್ದ ಸುಂದರ ಮನೆಗಳಿಂದ ಸೈನಿಕರು ಎಲ್ಲವನ್ನು ದೋಚಿರುತ್ತಾರೆ.
ಅಶ್ಶೂರ ಬಾಬಿಲೋನನ್ನು ಕಾಡುಪ್ರಾಣಿಗಳ ವಾಸಸ್ಥಳವನ್ನಾಗಿ ಮಾಡಿದೆ.
    ಅವರು ಬಾಬಿಲೋನನ್ನು ಪಾಳುಬಿದ್ದ ಅವಶೇಷವನ್ನಾಗಿ ಮಾಡಿದ್ದಾರೆ.
14 ಆದ್ದರಿಂದ ತಾರ್ಷೀಷಿನ ಹಡಗುಗಳವರೇ, ದುಃಖಿಸಿರಿ!
    ನಿಮ್ಮ ಆಶ್ರಯದ ರೇವು ನಾಶವಾಗಿದೆ.

15 ಎಪ್ಪತ್ತು ವರ್ಷಗಳ ತನಕ ಜನರಿಗೆ ತೂರಿನ ಜ್ಞಾಪಕವಿರುವದಿಲ್ಲ. ಇದು ಒಬ್ಬ ಅರಸನು ಆಳುವ ಕಾಲ. ಎಪ್ಪತ್ತು ವರ್ಷಗಳ ತರುವಾಯ ತೂರ್ ಈ ಹಾಡಿನಲ್ಲಿರುವ ವೇಶ್ಯೆಯಂತಿರುವದು:

16 “ಪುರುಷರು ಮರೆತಿರುವ ವೇಶ್ಯೆಯೇ,
    ನಿನ್ನ ಕಿನ್ನರಿಯನ್ನು ತೆಗೆದುಕೊಂಡು ಊರೊಳಗೆ ಹೋಗಿ ನಿನ್ನ ಹಾಡನ್ನು ನುಡಿಸು,
ಮತ್ತೆಮತ್ತೆ ಹಾಡು.
    ಆಗ ಯಾರಾದರೂ ನಿನ್ನನ್ನು ನೆನಪುಮಾಡಿಕೊಳ್ಳಬಹುದೇನೋ.”

17 ಎಪ್ಪತ್ತು ವರ್ಷಗಳ ನಂತರ ಯೆಹೋವನು ತೂರಿನ ಕುರಿತು ಮತ್ತೆ ಆಲೋಚಿಸಿ ತೀರ್ಮಾನಿಸುವನು. ತೂರಿನಲ್ಲಿ ವ್ಯಾಪಾರವು ಮತ್ತೆ ಪ್ರಾರಂಭವಾಗುವದು. ಅದು ಲೋಕದ ಎಲ್ಲಾ ರಾಜ್ಯಗಳಿಗೆ ವೇಶ್ಯೆಯಂತಿದೆ. 18 ಆದರೆ ಆಕೆ ತಾನು ಗಳಿಸಿದ ಹಣವನ್ನು ತನ್ನಲ್ಲಿ ಇಟ್ಟುಕೊಳ್ಳುವದಿಲ್ಲ. ತೂರ್ ತನ್ನ ವ್ಯಾಪಾರದಲ್ಲಿ ಗಳಿಸಿದ ಲಾಭವನ್ನು ಯೆಹೋವನಿಗಾಗಿ ಶೇಖರಿಸಿಟ್ಟಿದ್ದಾಳೆ. ಯೆಹೋವನನ್ನು ಸೇವಿಸುವವರಿಗೆ ಆ ಲಾಭವನ್ನು ಮೀಸಲಾಗಿಟ್ಟಿದ್ದಾಳೆ. ಹೀಗೆ ಯೆಹೋವನ ಸೇವಕರು ಹೊಟ್ಟೆತುಂಬ ಊಟಮಾಡುವರು, ಒಳ್ಳೆಯ ಬಟ್ಟೆ ಧರಿಸಿಕೊಳ್ಳುವರು.

ದೇವರು ಇಸ್ರೇಲನ್ನು ಶಿಕ್ಷಿಸುವನು

24 ಇಗೋ, ಯೆಹೋವನು ಈ ದೇಶವನ್ನು ನಾಶಮಾಡುವನು. ಆತನು ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವನು. ಜನರನ್ನು ಅತಿದೂರಕ್ಕೆ ಚದರಿಸಿಬಿಡುವನು. ಆ ಸಮಯದಲ್ಲಿ ಸಾಧಾರಣ ಜನರಿಗೂ ಯಾಜಕವರ್ಗದವರಿಗೂ ವ್ಯತ್ಯಾಸವಿರದು. ಸೇವಕರಿಗೂ ಅವರ ಯಜಮಾನರಿಗೂ ವ್ಯತ್ಯಾಸವಿರದು. ದಾಸಿಯರಿಗೂ ಅವರ ಯಜಮಾನಿಯರಿಗೂ ವ್ಯತ್ಯಾಸವಿರದು. ಮಾರುವವರಿಗೂ ಕೊಳ್ಳುವವರಿಗೂ ವ್ಯತ್ಯಾಸವಿರದು. ಸಾಲಕೊಡುವವರಿಗೂ ಸಾಲ ತೆಗೆದುಕೊಳ್ಳುವವರಿಗೂ ವ್ಯತ್ಯಾಸವಿರದು. ಬಡ್ಡಿಹಾಕುವವನಿಗೂ ಬಡ್ಡಿಕೊಡುವವನಿಗೂ ವ್ಯತ್ಯಾಸವಿರದು. ಎಲ್ಲಾ ಜನರು ದೇಶದಿಂದ ಹೊರಕ್ಕೆ ಹಾಕಲ್ಪಡುವರು. ದೇಶದ ಸಂಪತ್ತನ್ನು ಕಿತ್ತುಕೊಳ್ಳಲಾಗುವದು. ಇದು ಯೆಹೋವನ ಆಜ್ಞೆಯಾಗಿರುವದರಿಂದ ನೆರವೇರುವದು. ದೇಶವು ನಿರ್ಜನವಾಗಿ ಶೋಕಿಸುವದು. ಇಡೀ ಪ್ರಪಂಚವೇ ನಿರ್ಜನವಾಗಿ ಬಲಹೀನವಾಗುವದು. ಈ ಪ್ರಪಂಚದ ಪ್ರಸಿದ್ಧ ಜನರೂ ಬಲಹೀನರಾಗುವರು.

ದೇಶದ ಜನರು ದೇವರ ಉಪದೇಶಗಳಿಗೆ ವಿರುದ್ಧವಾಗಿ ನಡೆದು ತಮ್ಮ ದೇಶವನ್ನು ಹೊಲಸುಮಾಡಿದರು. ದೇವರ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ಬಹಳ ಕಾಲದ ಹಿಂದೆ ಜನರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ ಆ ಜನರು ಆ ಒಡಂಬಡಿಕೆಯನ್ನು ಮುರಿದರು. ಆ ದೇಶದಲ್ಲಿ ವಾಸಿಸುವ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಆದ್ದರಿಂದ ದೇವರು ಈ ದೇಶವನ್ನು ನಾಶಮಾಡಲು ತೀರ್ಮಾನಿಸಿದನು. ಜನರು ಶಿಕ್ಷಿಸಲ್ಪಡುವರು. ಕೆಲವೇ ಮಂದಿ ಮಾತ್ರ ಉಳಿಯುವರು.

ದ್ರಾಕ್ಷಿಬಳ್ಳಿಗಳು ಸಾಯುತ್ತಲಿವೆ. ಹೊಸ ದ್ರಾಕ್ಷಾರಸವು ಹುಳಿಯಾಗಿದೆ. ಹಿಂದಿನ ಕಾಲದಲ್ಲಿ ಜನರು ಹರ್ಷಭರಿತರಾಗಿದ್ದರು. ಆದರೆ ಈಗ ಆ ಜನರು ದುಃಖದಲ್ಲಿರುತ್ತಾರೆ. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವದಿಲ್ಲ. ಸಂತಸದ ಗದ್ದಲವು ಕೇಳಿಸುವದಿಲ್ಲ. ಆ ಶಬ್ದಗಳೆಲ್ಲಾ ನಿಂತುಹೋಗಿವೆ. ಹಾರ್ಪ್‌ವಾದ್ಯದ ಮತ್ತು ದಮ್ಮಡಿಗಳ ಶಬ್ದವು ನಿಂತಿದೆ. ಜನರು ದ್ರಾಕ್ಷಾರಸ ಕುಡಿಯುತ್ತಿರುವಾಗ ಹಾಡು ಹಾಡುವುದಿಲ್ಲ. ಅವರು ಕುಡಿಯುವ ಮದ್ಯವು ಅವರಿಗೆ ಕಹಿಯಾಗಿದೆ.

10 ಈ ನಗರಕ್ಕೆ “ಪೂರ್ಣ ಗಲಿಬಿಲಿ” ಎಂಬುದೇ ತಕ್ಕ ಹೆಸರು. ನಗರವು ಕೆಡವಲ್ಪಟ್ಟಿತು. ಜನರು ಮನೆಗಳಿಗೆ ಪ್ರವೇಶಿಸಲಿಕ್ಕಾಗದು. ಕದಗಳನ್ನು ತೆರೆಯಲು ಸಾಧ್ಯವಾಗದು. 11 ಮಾರುಕಟ್ಟೆಗಳಲ್ಲಿ ಜನರು ಈಗಲೂ ದ್ರಾಕ್ಷಾರಸವನ್ನು ಕೇಳುವರು. ಆದರೆ ಸಂತೋಷವೇ ಹೋಗಿಬಿಟ್ಟಿದೆ. ಹರ್ಷವು ಬಹುದೂರ ಒಯ್ಯಲ್ಪಟ್ಟಿದೆ. 12 ನಗರಕ್ಕೆ ನಾಶನವು ಕಾದಿದೆ; ಪುರದ್ವಾರವು ನಜ್ಜುಗುಜ್ಜಾಗಿದೆ.

13 ಕೊಯ್ಯುವ ಕಾಲದಲ್ಲಿ ಜನರು ಆಲೀವ್ ಮರಗಳನ್ನು ಹೊಡೆದು ಕಾಯಿಗಳನ್ನು ಉದುರಿಸುವರು.
    ಆದರೆ ಕೆಲವು ಕಾಯಿಗಳು ಮರದಲ್ಲಿ ಉಳಿಯುವವು.
ಜನಾಂಗಗಳ ಮಧ್ಯದಲ್ಲಿ ದೇಶವೂ ಹೀಗೆಯೇ ಇರುವದು.
14 ಉಳಿದ ಜನರು ಚೀರಾಡುವರು.
    ಅದು ಭೋರ್ಗರೆಯುವ ಸಮುದ್ರದ ಶಬ್ದಕ್ಕಿಂತಲೂ ಜೋರಾಗಿ ಕೇಳಿಸುವದು.
    ದೇವರ ಕೃಪೆಯ ನಿಮಿತ್ತ ಅವರು ಸಂತೋಷದಲ್ಲಿರುವರು.
15 ಆ ಜನರು, “ಪೂರ್ವದಲ್ಲಿರುವ ಜನರೇ, ದೇವರಿಗೆ ಸ್ತೋತ್ರಮಾಡಿರಿ!
    ದೂರ ದೇಶಗಳಲ್ಲಿರುವ ಜನರೇ,
    ಇಸ್ರೇಲರ ದೇವರಾದ ಯೆಹೋವನ ಹೆಸರನ್ನು ಕೊಂಡಾಡಿರಿ” ಎಂದು ಹೇಳುವರು.
16 ದೇವರ ಸ್ತುತಿಯನ್ನು ನಾವು ಭೂಮಿಯ ಎಲ್ಲಾ ಕಡೆಗಳಿಂದಲೂ ಕೇಳಿಸಿಕೊಳ್ಳುತ್ತೇವೆ.
    ಈ ಸ್ತುತಿಹಾಡುಗಳು ದೇವರ ಒಳ್ಳೆತನವನ್ನು ವರ್ಣಿಸುವವು.
ಆದರೆ ನಾನು, “ಸಾಕು, ನನಗೆ ಸಾಕು.
ನಾನು ನೋಡುವ ವಿಷಯಗಳು ಭಯಂಕರವಾಗಿವೆ.
    ದ್ರೋಹಿಗಳು ಜನರಿಗೆ ವಿರುದ್ಧವಾಗಿ ಎದ್ದು ಅವರಿಗೆ ಹಾನಿಮಾಡುವರು.”

17 ಈ ದೇಶದಲ್ಲಿ ವಾಸಿಸುವ ಜನರಿಗೆ ಅಪಾಯವು ಕಾದಿದೆ ಎಂದು ನನಗೆ ತೋರುತ್ತಿದೆ.
    ಅವರಿಗೆ ಭಯ, ಉರುಲು, ಗುಂಡಿಗಳು ಕಾದಿವೆ.
18 ಜನರು ಅಪಾಯದ ವಿಷಯ ಕೇಳಿ ಭಯಗ್ರಸ್ಥರಾಗುವರು.
ಕೆಲವರು ಓಡಿಹೋಗುವರು.
    ಆದರೆ ಅವರು ಗುಂಡಿಯೊಳಗೆ ಬಿದ್ದು ಸಿಕ್ಕಿಕೊಳ್ಳುವರು.
ಅವರಲ್ಲಿ ಕೆಲವರು ಗುಂಡಿಯಿಂದ ಹೊರಬರುವರು,
    ಆದರೆ ಅವರು ಇನ್ನೊಂದು ಉರುಲಿನೊಳಗೆ ಸಿಕ್ಕಿಹಾಕಿಕೊಳ್ಳುವರು.
ಆಕಾಶದಲ್ಲಿರುವ ಪ್ರವಾಹದ ದ್ವಾರಗಳು ತೆರೆಯಲ್ಪಡುವವು.
    ಪ್ರವಾಹವು ತುಂಬುವದು; ಭೂಮಿಯ ಅಸ್ತಿವಾರಗಳು ಕದಲುವವು.
19 ಭೂಕಂಪಗಳಾಗುವವು.
    ಭೂಮಿಯು ಸೀಳಿಹೋಗುವದು.
20 ಲೋಕದ ಪಾಪವು ತುಂಬಾ ಭಾರವಾಗಿದೆ.
    ಆ ಭಾರದಿಂದಾಗಿ ಭೂಮಿಯು ಬೀಳುವದು.
ಒಂದು ಹಳೆಯ ಮನೆಯಂತೆ ಭೂಮಿಯು ಅಲುಗಾಡುವದು.
    ಕುಡಿದು ಮತ್ತನಾಗಿ ನೆಲಕ್ಕೆ ಬೀಳುವವನಂತೆ ಭೂಮಿಯು ಇರುವದು.
    ಭೂಮಿಗೆ ಮುಂದುವರಿಯಲು ಆಗದು.

21 ಆ ಸಮಯದಲ್ಲಿ ಯೆಹೋವನು ಪರಲೋಕ ಸೈನ್ಯಕ್ಕೆ
    ಪರಲೋಕದಲ್ಲಿ ನ್ಯಾಯತೀರಿಸುವನು.
    ಭೂಮಿಯ ಅರಸರನ್ನು ಭೂಮಿಯ ಮೇಲೆ ನ್ಯಾಯವಿಚಾರಣೆಮಾಡುವನು.
22 ಅನೇಕ ಮಂದಿ ಒಟ್ಟು ಸೇರುವರು.
    ಕೆಲವರು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುವರು.
    ಕೆಲವರು ಸೆರೆಹಿಡಿಯಲ್ಪಡುವರು.
    ಆಮೇಲೆ ಸ್ವಲ್ಪ ಕಾಲದ ನಂತರ ಅವರ ನ್ಯಾಯವಿಚಾರಣೆ ನಡಿಯುವದು.
23 ಯೆಹೋವನು ಜೆರುಸಲೇಮಿನ ಚೀಯೋನ್ ಪರ್ವತದಿಂದ ರಾಜ್ಯವನ್ನಾಳುವನು.
    ಆತನ ಮಹಿಮೆಯು ಹಿರಿಯರ ಮುಂದಿರುವದು.
    ಆತನ ಮಹಿಮೆಯ ಪ್ರಕಾಶಕ್ಕೆ ಚಂದ್ರನು ನಾಚಿಕೊಳ್ಳುವನು;
    ಸೂರ್ಯನು ಲಜ್ಜೆಗೊಳ್ಳುವನು.

ದೇವರಿಗೆ ಸ್ತೋತ್ರಗಾನ

25 ಯೆಹೋವನೇ, ನೀನೇ ನನ್ನ ದೇವರು.
ನಿನ್ನನ್ನು ಗೌರವಿಸಿ ನಿನ್ನ ನಾಮವನ್ನು ಸ್ತುತಿಸುವೆನು.
    ನೀನು ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ಬಹಳ ಕಾಲದ ಹಿಂದೆ ನೀನು ಹೇಳಿರುವ ವಿಷಯಗಳು ಸತ್ಯವೇ ಸರಿ.
    ನೀನು ಮುಂತಿಳಿಸಿದಂತೆಯೇ ಎಲ್ಲವೂ ಸಂಭವಿಸಿದವು.
ನೀನು ವಿದೇಶದ ಪಟ್ಟಣವನ್ನು ಕೆಡವಿಹಾಕಿರುವೆ.
    ಆ ಪಟ್ಟಣವು ಮಹಾಗೋಡೆಗಳಿಂದ ಸಂರಕ್ಷಿಸಲ್ಪಟ್ಟದ್ದಾಗಿತ್ತು.
    ಆದರೆ ಈಗ ಅದು ಕೇವಲ ಕಲ್ಲುಗಳ ರಾಶಿ.
ಅರಮನೆಯು ಕೆಡವಲ್ಪಟ್ಟಿದೆ.
    ಅದನ್ನು ತಿರುಗಿ ಕಟ್ಟಲು ಸಾಧ್ಯವೇ ಇಲ್ಲ.
ಬಲಾಢ್ಯ ದೇಶಗಳ ಜನರು ನಿನ್ನನ್ನು ಸನ್ಮಾನಿಸುವರು.
    ಬಲಿಷ್ಠ ನಗರಗಳ ಬಲಶಾಲಿಗಳು ನಿನಗೆ ಭಯಪಡುವರು.
ಯೆಹೋವನೇ, ನೀನೇ ನಮ್ಮ ಆಶ್ರಯವು. ಬಡವರಿಗೆ ನೀನೇ ಆಧಾರ.
    ಅವರ ಸಮಸ್ಯೆಗಳು ಅವರನ್ನು ಕಷ್ಟಕ್ಕೆ ಗುರಿಪಡಿಸುವವು. ಆದರೆ ನೀನು ಅವರನ್ನು ಸಂರಕ್ಷಿಸುವೆ.
    ಯೆಹೋವನೇ, ಒಂದು ಮನೆಯ ಜನರನ್ನು ಪ್ರವಾಹದಿಂದಲೂ,
    ಬಿಸಿಲಿನ ತಾಪದಿಂದಲೂ ಕಾಪಾಡುವಂತೆ ನೀನಿರುವೆ.
ಮುಂದಿನ ತೊಂದರೆಗಳು ಬಿರುಗಾಳಿಯಂತೆಯೂ ಮಳೆಯಂತೆಯೂ ಇವೆ.
    ಮಳೆಯು ಗೋಡೆಗೆ ಬಡಿದು ಕೆಳಗೆ ಇಳಿಯುವದು. ಆದರೆ ಮನೆಯೊಳಗಿರುವವರಿಗೆ ಹಾನಿಯೇ ಆಗದು.
ವೈರಿಯು ಆರ್ಭಟಿಸುತ್ತಾ ಗದ್ದಲ ಮಾಡುತ್ತಾನೆ.
    ಆ ಭಯಂಕರ ಶತ್ರುವು ಯುದ್ಧಕ್ಕೆ ಬಾ ಎಂದು ಸವಾಲು ಹಾಕುತ್ತಾನೆ.
    ಆದರೆ ದೇವರೇ, ನೀನು ಅವನನ್ನು ತಡೆಯುವೆ.
ಬೇಸಿಗೆ ಕಾಲದಲ್ಲಿ ಮರುಭೂಮಿಯಲ್ಲಿರುವ ಸಸಿಗಳು ಬಾಡಿಹೋಗಿ ನೆಲದ ಮೇಲೆ ಬಿದ್ದುಹೋಗುವವು.
    ಅದೇ ರೀತಿಯಲ್ಲಿ ನೀನು ವೈರಿಯನ್ನು ಸೋಲಿಸಿ ಅವನು ಮೊಣಕಾಲೂರುವಂತೆ ಮಾಡುವೆ.
ಕಾರ್ಮುಗಿಲು ಬೇಸಿಗೆಯ ತಾಪವನ್ನು ನಿವಾರಿಸುವದು.
    ಅದೇ ರೀತಿಯಲ್ಲಿ ನೀನು ಶತ್ರುವಿನ ಆರ್ಭಟವನ್ನು ನಿಲ್ಲಿಸುವೆ.

ಸೇವಕರಿಗಾಗಿ ದೇವರ ಔತಣ

ಆ ಸಮಯದಲ್ಲಿ, ಸರ್ವಶಕ್ತನಾದ ಯೆಹೋವನು ಎಲ್ಲಾ ಜನರಿಗಾಗಿ ಈ ಪರ್ವತದ ಮೇಲೆ ಔತಣವನ್ನು ಏರ್ಪಡಿಸುವನು. ಅದು ಉತ್ಕೃಷ್ಟವಾದ ದ್ರಾಕ್ಷಾರಸದಿಂದಲೂ ಮೃಷ್ಠಾನ್ನದಿಂದಲೂ ಕೂಡಿರುವದು.

ಆದರೆ ಎಲ್ಲಾ ಜನಾಂಗಗಳನ್ನು ಮತ್ತು ಜನರನ್ನು ಮುಚ್ಚುವ ಒಂದು ಮುಸುಕು ಇದೆ. ಆ ಮುಸುಕು ಯಾವದೆಂದರೆ ಮರಣ. ಆದರೆ ಮರಣವು ಎಂದೆಂದಿಗೂ ನಾಶಮಾಡಲ್ಪಡುವದು. ನನ್ನ ಒಡೆಯನಾಗಿರುವ ಯೆಹೋವನು ಪ್ರತೀ ಮುಖದಲ್ಲಿರುವ ಕಣ್ಣೀರನ್ನು ಒರೆಸುವನು. ಹಿಂದೆ ಆತನ ಜನರೆಲ್ಲಾ ದುಃಖಕ್ಕೆ ಒಳಗಾಗಿದ್ದರು. ಆದರೆ ದೇವರು ಆ ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕುವನು. ಇವೆಲ್ಲಾ ಯೆಹೋವನು ಹೇಳಿದಂತೆಯೇ ಸಂಭವಿಸುವದು.

ಆ ಸಮಯದಲ್ಲಿ ಜನರು,
    “ನಮ್ಮ ದೇವರು ಇಲ್ಲಿದ್ದಾನೆ.
ಆತನಿಗಾಗಿಯೇ ನಾವು ಕಾಯುತ್ತಿದ್ದೆವು.
    ಆತನು ನಮ್ಮನ್ನು ರಕ್ಷಿಸಲು ಬಂದಿದ್ದಾನೆ.
ನಾವು ನಮ್ಮ ದೇವರಾದ ಯೆಹೋವನಿಗಾಗಿ ಕಾಯುತ್ತಿದ್ದೆವು.
    ಆತನು ನಮ್ಮನ್ನು ರಕ್ಷಿಸುವಾಗ ನಾವು ಹರ್ಷಭರಿತರಾಗಿ ಸಂತೋಷಿಸುವೆವು” ಎಂದು ಹೇಳುವರು.
10 ಏಕೆಂದರೆ ಯೆಹೋವನ ಬಲವು ಈ ಪರ್ವತದಲ್ಲಿದೆ.
    ಮೋವಾಬ್ ಸೋಲಿಸಲ್ಪಡುವದು.
ಯೆಹೋವನು ವೈರಿಯನ್ನು ಹುಲ್ಲಿನಂತೆ ತುಳಿದುಬಿಡುವನು.
11 ಯೆಹೋವನು ತನ್ನ ಕೈಗಳನ್ನು ಈಜುವವನಂತೆ ಅಗಲವಾಗಿ ತೆರೆದು
    ಮನುಷ್ಯರು ಹೆಚ್ಚಳಪಡುವ ವಸ್ತುಗಳನ್ನೆಲ್ಲಾ ಬಾಚಿಕೊಳ್ಳುವನು.
ಜನರು ತಯಾರಿಸಿದ ಅಂದವಾದ ವಸ್ತುಗಳನ್ನು
    ಒಟ್ಟುಗೂಡಿಸಿ ಬಿಸಾಡುವನು.
12 ಯೆಹೋವನು ಜನರ ಉನ್ನತವಾದ ಗೋಡೆಗಳನ್ನೂ ಸುರಕ್ಷಿತ ಸ್ಥಳಗಳನ್ನೂ ನಾಶಮಾಡುವನು.
    ಯೆಹೋವನು ಅವುಗಳನ್ನೆಲ್ಲಾ ನೆಲಸಮಮಾಡಿ ಧೂಳಿಗೇ ತರುವನು.

ದೇವರಿಗೆ ಸ್ತೋತ್ರ ಗೀತೆ

26 ಆ ಸಮಯದಲ್ಲಿ ಜನರು ಈ ಹಾಡನ್ನು ಯೆಹೂದದಲ್ಲಿ ಹಾಡುವರು:

ಯೆಹೋವನು ನಮಗೆ ರಕ್ಷಣೆಯನ್ನು ಕೊಡುತ್ತಾನೆ.
    ನಮಗೆ ಬಲವಾದ ಪಟ್ಟಣವಿದೆ. ಅದಕ್ಕೆ ಬಲವಾದ ಗೋಡೆಗಳೂ ಕೋಟೆಗಳೂ ಇವೆ.
ದ್ವಾರಗಳನ್ನು ತೆರೆಯಿರಿ. ಒಳ್ಳೆಯ ಜನರು ಅದರಲ್ಲಿ ಪ್ರವೇಶಿಸುವರು.
    ಅವರು ದೇವರ ನಿಯಮಗಳನ್ನು ಅನುಸರಿಸುತ್ತಾರೆ.

ಯೆಹೋವನೇ, ನಿನ್ನಲ್ಲಿ ಭರವಸವಿಟ್ಟವರಿಗೆ
    ನೀನು ನಿಜವಾದ ಸಮಾಧಾನವನ್ನು ಅನುಗ್ರಹಿಸುವೆ.

ಆದ್ದರಿಂದ ಯೆಹೋವನ ಮೇಲೆ ಯಾವಾಗಲೂ ಭರವಸವಿಡಿರಿ.
    ಯಾಕೆಂದರೆ ನಿಮಗೆ ದೇವರಾದ ಯೆಹೋವನಲ್ಲಿ ಸುರಕ್ಷತೆಯ ಸ್ಥಳವಿದೆ.
ಆದರೆ ಯೆಹೋವನು ಗರ್ವದ ನಗರವನ್ನು ನಾಶಮಾಡುವನು.
    ಅಲ್ಲಿ ವಾಸಿಸುವವರನ್ನು ಆತನು ಶಿಕ್ಷಿಸುತ್ತಾನೆ.
ಯೆಹೋವನು ಆ ಉನ್ನತವಾದ ನಗರವನ್ನು ಧೂಳಿಗೆ ಹಾಕಿಬಿಡುವನು.
    ಅದು ಕಾಲುತುಳಿತಕ್ಕೆ ಈಡಾಗಿದೆ.
ಆಗ ದೀನರೂ ಬಡಜನರೂ ಆ ಅವಶೇಷಗಳ ಮೇಲೆ ನಡೆಯುವರು.

ಪ್ರಾಮಾಣಿಕತೆಯು ಒಳ್ಳೆಯವರ ಜೀವನ ಶೈಲಿ.
    ಅವರು ನೇರವಾದ ಮತ್ತು ಸತ್ಯವಾದ ಮಾರ್ಗವನ್ನು ಅನುಸರಿಸುವರು.
ಯೆಹೋವನೇ, ನೀನು ಆ ಮಾರ್ಗವನ್ನು ಅನುಸರಿಸಲು
    ಸುಲಭವಾಗುವಂತೆ ಮಾಡುವೆ.
ಆದರೆ ಯೆಹೋವನೇ, ನಾವು ನಿನ್ನ ನ್ಯಾಯವಿಚಾರಣೆಯ ರೀತಿಗಾಗಿ ಕಾಯುತ್ತಿದ್ದೇವೆ.
    ನಮ್ಮ ಆತ್ಮಗಳು ನಿನ್ನನ್ನೂ ನಿನ್ನ ನಾಮವನ್ನೂ ನೆನಪು ಮಾಡುತ್ತವೆ.
ನಮ್ಮ ಆತ್ಮವು ನಿನ್ನೊಂದಿಗೆ ರಾತ್ರಿಯಲ್ಲಿರಲು ಆಶಿಸುತ್ತದೆ.
    ನಮ್ಮೊಳಗಿರುವ ಆತ್ಮವು ನಿನ್ನ ಸಹವಾಸವನ್ನು ಬಯಸುತ್ತದೆ.
ಹೊಸ ದಿವಸಗಳ ಮುಂಜಾನೆಯಲ್ಲಿ ನಿನ್ನೊಂದಿಗಿರಲು ಆಶಿಸುತ್ತದೆ.
    ನಿನ್ನ ನ್ಯಾಯವು ಈ ಭೂಮಿಗೆ ಬಂದಾಗ ಜನರು ಜೀವನದ ಸತ್ಯಮಾರ್ಗವನ್ನು ಅರಿಯುವರು.
10 ದುಷ್ಟರಿಗೆ ದಯೆತೋರಿಸಿದರೆ
    ಅವರು ಸುಕಾರ್ಯಗಳನ್ನು ಮಾಡಲು ಕಲಿಯುವುದಿಲ್ಲ.
ದುಷ್ಟರು ಯಥಾರ್ಥರ ಲೋಕದಲ್ಲಿ ಜೀವಿಸಿದರೂ ಅವರು ದುಷ್ಕೃತ್ಯಗಳನ್ನೇ ಮಾಡುವರು.
    ಆ ದುಷ್ಟರು ಯೆಹೋವನ ಮಹತ್ವವನ್ನು ಎಂದೂ ಗಮನಿಸಲಾರರು.
11 ಆದರೆ ದೇವರೇ, ನೀನು ಅವರನ್ನು ಶಿಕ್ಷಿಸಿದರೆ
    ಅವರು ಅದನ್ನು ನೋಡುವರು.
ನಿನ್ನ ಜನರ ಮೇಲೆ ನಿನಗಿರುವ ಗಾಢಪ್ರೀತಿಯನ್ನು ಆ ದುಷ್ಟಜನರು ನೋಡಲಿ.
    ಆಗ ಅವರು ಅವಮಾನ ಹೊಂದುವರು.
    ನಿನ್ನ ಶತ್ರುಗಳು ತಮ್ಮ ದುಷ್ಟತನದ ಬೆಂಕಿಯಲ್ಲಿಯೇ ಸುಟ್ಟುಹೋಗುವರು.
12 ಯೆಹೋವನೇ, ನೀನು ಮಾಡಬಯಸಿದ ಎಲ್ಲವುಗಳಲ್ಲಿ ಯಶಸ್ವಿಯಾಗಿರುವೆ.
    ಆದ್ದರಿಂದ ನಮಗೆ ಶಾಂತಿಯನ್ನು ಅನುಗ್ರಹಿಸು.

ದೇವರು ತನ್ನ ಜನರಿಗೆ ಹೊಸ ಜೀವವನ್ನು ಕೊಡುವನು

13 ಯೆಹೋವನೇ, ನೀನೇ ನಮ್ಮ ದೇವರು. ಆದರೆ ಹಿಂದಿನ ಕಾಲದಲ್ಲಿ ನಾವು ಇತರ ಪ್ರಭುಗಳನ್ನು ಅನುಸರಿಸಿದೆವು.
ನಾವು ನಮ್ಮ ಒಡೆಯರುಗಳಿಗೆ ಸೇರಿದ್ದೆವು.
    ಆದರೆ ಈಗ ಜನರು ಒಂದೇ ಹೆಸರನ್ನು, ಅಂದರೆ ನಿನ್ನ ಹೆಸರನ್ನೇ ನೆನಪುಮಾಡಲಿ.
14 ಇತರ ದೇವರುಗಳಿಗೆ ಜೀವವಿಲ್ಲ.
    ಪ್ರೇತಗಳು ಸತ್ತವರೊಳಗಿಂದ ಏಳುವದಿಲ್ಲ.
ನೀನು ಅವುಗಳನ್ನು ನಾಶಮಾಡಲು ತೀರ್ಮಾನಿಸಿದೆ.
    ಅದರ ಬಗ್ಗೆ ನಮಗೆ ನೆನಪು ಹುಟ್ಟಿಸುವ ಎಲ್ಲಾ ವಿಚಾರಗಳನ್ನು ನೀನು ನಾಶಮಾಡಿದೆ.
15 ನೀನು ಪ್ರೀತಿಸುವ ಜನಾಂಗಕ್ಕೆ ನೀನು ಸಹಾಯ ಮಾಡಿದೆ.
    ಬೇರೆ ಜನಾಂಗದವರು ಅವರನ್ನು ಸೋಲಿಸದಂತೆ ಮಾಡಿದೆ.
16 ಯೆಹೋವನೇ, ಕಷ್ಟ ಬಂದಾಗ
    ಜನರಿಗೆ ನಿನ್ನ ನೆನಪಾಗುವುದು.
ನೀನು ಅವರನ್ನು ಶಿಕ್ಷಿಸಿದಾಗ
    ಅವರು ನಿನಗೆ ಮೌನ ಪ್ರಾರ್ಥನೆ ಮಾಡುವರು.
17 ಯೆಹೋವನೇ, ನಾವು ನಿನ್ನೊಂದಿಗೆ ಇಲ್ಲದಿರುವಾಗ
    ಪ್ರಸವವೇದನೆಯಿಂದ ನರಳುವ ಸ್ತ್ರೀಯರಂತಿದ್ದೇವೆ.
18 ಅದೇ ರೀತಿಯಲ್ಲಿ ನಾವು ನೋವನ್ನು ಅನುಭವಿಸುತ್ತೇವೆ.
    ನಾವು ಹೆರುವದು ಕೇವಲ ಗಾಳಿಯನ್ನೇ.
ನಾವು ಈ ಲೋಕದೊಳಗೆ ಹೊಸಜೀವಿಗಳನ್ನು ನಿರ್ಮಿಸುವದಿಲ್ಲ.
    ನಾವು ದೇಶಕ್ಕೆ ರಕ್ಷಣೆಯನ್ನು ತರುವದಿಲ್ಲ.
19 ಆದರೆ ಯೆಹೋವನು ಹೇಳುವುದೇನೆಂದರೆ,
“ನಿನ್ನ ಜನರು ಸತ್ತಿದ್ದಾರೆ.
    ಆದರೆ ಅವರು ಮತ್ತೆ ಬದುಕುವರು.
ನನ್ನ ಜನರ ದೇಹಗಳು
    ಸತ್ತವರೊಳಗಿಂದ ಏಳುವವು.
ಭೂಮಿಯ ಮೇಲೆ ಸತ್ತಿರುವ ಜನರೇ,
    ಎದ್ದುನಿಂತು ಸಂತೋಷಿಸಿರಿ.
ನಿಮ್ಮನ್ನು ಆವರಿಸಿದ ಮಂಜು
    ಮುಂಜಾನೆಯ ಬೆಳಕಿನಂತೆ ಪ್ರಕಾಶಿಸುತ್ತದೆ.
ಭೂಮಿಯು ತನ್ನಲ್ಲಿರುವ ಸತ್ತವರನ್ನು ಒಪ್ಪಿಸಿಕೊಡುವಾಗ
    ಪ್ರಾರಂಭವಾಗುವ ಹೊಸ ದಿನವನ್ನು ಅದು ಸೂಚಿಸುವದು.”

ಶಿಕ್ಷೆ ಅಥವಾ ಬಹುಮಾನ

20 ನನ್ನ ಜನರೇ, ನಿಮ್ಮ ನಿಮ್ಮ ಕೋಣೆಯೊಳಗೆ
    ಹೋಗಿ ಕದಮುಚ್ಚಿರಿ.
ಸ್ವಲ್ಪಕಾಲ ನೀವು ಅಲ್ಲಿಯೇ ಅಡಗಿಕೊಳ್ಳಿರಿ.
    ದೇವರ ಕೋಪ ತೀರುವ ತನಕ ಅಲ್ಲಿಯೇ ಅವಿತುಕೊಳ್ಳಿರಿ.
21 ಇಗೋ, ಈ ಲೋಕದ ಜನರು ಮಾಡಿದ ಪಾಪಕೃತ್ಯಗಳಿಗೆ
    ನ್ಯಾಯತೀರಿಸಲು ಯೆಹೋವನು ತನ್ನ ಸ್ಥಳದಿಂದ ಎದ್ದಿದ್ದಾನೆ.
ಭೂಮಿಯು ತನ್ನಲ್ಲಿರುವ ರಕ್ತವನ್ನು ತೋರಿಸುವದು.
    ಭೂಮಿಯು ಇನ್ನುಮುಂದೆ ಸತ್ತವರನ್ನು ಮರೆಮಾಡುವುದಿಲ್ಲ.

27 ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು.
ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ
    ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು.
    ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.

ಆ ಸಮಯದಲ್ಲಿ ಜನರು ಮನೋಹರವಾದ ದ್ರಾಕ್ಷಿತೋಟದ ವಿಷಯವಾಗಿ ಹಾಡುವರು.
“ಯೆಹೋವನಾದ ನಾನು ಆ ತೋಟವನ್ನು ಚೆನ್ನಾಗಿ ನೋಡಿಕೊಳ್ಳುವೆನು;
    ಸರಿಯಾದ ಕಾಲದಲ್ಲಿ ತೋಟಕ್ಕೆ ನೀರು ಹೊಯ್ಯುವೆನು.
ಹಗಲಿರುಳು ತೋಟವನ್ನು ಕಾಯುವೆನು.
    ಆ ತೋಟವನ್ನು ಯಾರೂ ಹಾಳುಮಾಡುವದಿಲ್ಲ.
ನಾನು ಕೋಪಗೊಂಡಿಲ್ಲ.
ಆದರೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಮುಳ್ಳುಬೇಲಿಯನ್ನು ಹಾಕಿದರೆ,
    ನಾನು ಮುನ್ನುಗ್ಗಿ ಅದನ್ನು ಸುಟ್ಟುಹಾಕುವೆನು.
ಆದರೆ ಯಾವನಾದರೂ ಆಶ್ರಯಕ್ಕಾಗಿ ನನ್ನ ಬಳಿಗೆ ಬಂದು ನನ್ನೊಡನೆ ಸಮಾಧಾನ ಮಾಡಿಕೊಳ್ಳುವುದಾದರೆ
    ಅವನು ನನ್ನ ಬಳಿಗೆ ಬಂದು ಸಮಾಧಾನದಲ್ಲಿರಲಿ.
ಜನರು ನನ್ನ ಬಳಿಗೆ ಬರುವರು.
    ಆ ಜನರು ಮುಂದಿನ ಕಾಲದಲ್ಲಿ ಯಾಕೋಬನನ್ನು ಆಳವಾದ ಬೇರುಳ್ಳ ಗಿಡದಂತೆ ಬಲಶಾಲಿಯನ್ನಾಗಿ ಮಾಡುವರು.
ಬೆಳೆದು ಹೂಬಿಡುವ ಗಿಡದಂತೆ ಅವರು ಇಸ್ರೇಲಿಗೆ ಮಾಡುವರು.
    ಹಣ್ಣುಗಳಂತೆ ಇಸ್ರೇಲರ ಮಕ್ಕಳು ಭೂಮಿಯ ಮೇಲೆ ತುಂಬಿಹೋಗುವರು.”

ದೇವರು ಇಸ್ರೇಲರನ್ನು ಕಳುಹಿಸಿ ಬಿಡುವನು

ಯೆಹೋವನು ತನ್ನ ಜನರನ್ನು ಹೇಗೆ ಶಿಕ್ಷಿಸುವನು? ಹಿಂದಿನ ಕಾಲದಲ್ಲಿ ಶತ್ರುಗಳು ಜನರನ್ನು ಗಾಯಪಡಿಸಿದರು. ಯೆಹೋವನೂ ಹಾಗೆ ಮಾಡುವನೇ? ಹಿಂದಿನ ಕಾಲದಲ್ಲಿ ಅನೇಕ ಮಂದಿ ಕೊಲ್ಲಲ್ಪಟ್ಟರು. ಹಾಗೆಯೇ ಯೆಹೋವನು ಜನರನ್ನು ಕೊಲ್ಲುವನೇ?

ಯೆಹೋವನು ತನ್ನ ಜನರನ್ನು ದೂರದೇಶಕ್ಕೆ ಕಳುಹಿಸುವದರ ಮೂಲಕ ಅವರನ್ನು ಶಿಕ್ಷಿಸುವನು. ಇಸ್ರೇಲರೊಂದಿಗೆ ಯೆಹೋವನು ಕಟುವಾಗಿ ಮಾತನಾಡುವನು. ಆತನ ಮಾತುಗಳು ಮರುಭೂಮಿಯ ಬಿಸಿಗಾಳಿಯಂತೆ ಸುಡುವವು.

ಯಾಕೋಬನ ದೋಷವು ಹೇಗೆ ಕ್ಷಮಿಸಲ್ಪಡುವದು? ಅವನ ಪಾಪಗಳು ನಿವಾರಣೆಯಾಗುವದಕ್ಕೆ ಏನು ಮಾಡಬೇಕಾಗುವದು? ಇತರ ದೇವತೆಗಳ ಪೂಜಾಸ್ಥಳಗಳೂ ವೇದಿಕೆಯ ಕಲ್ಲುಗಳೂ ಪುಡಿಪುಡಿಯಾಗಿ ನಾಶವಾಗುವವು.

10 ಆ ಸಮಯದಲ್ಲಿ ಆ ಮಹಾನಗರವು ನಿರ್ಜನವಾಗಿರುವದು. ಅದು ಮರುಭೂಮಿಯಂತಿರುವದು. ಜನರೆಲ್ಲರೂ ಹೊರಟುಹೋಗಿರುವರು. ಅವರು ಪಲಾಯನಗೈದಿದ್ದಾರೆ. ನಗರವು ತೆರೆದ ಹುಲ್ಲುಗಾವಲಿನಂತಿರುವುದು. ಪಶುಗಳು ಅಲ್ಲಿ ಹುಲ್ಲನ್ನು ಮೇಯುತ್ತವೆ. ದನಗಳು ದ್ರಾಕ್ಷಾಲತೆಯ ಚಿಗುರೆಲೆಗಳನ್ನು ತಿನ್ನುವವು. 11 ದ್ರಾಕ್ಷಿಬಳ್ಳಿ ಒಣಗಿಹೋಗುವದು. ಅದರ ಕೊಂಬೆಗಳು ಮುರಿದುಬೀಳುವವು. ಹೆಂಗಸರು ಆ ಕೊಂಬೆಗಳನ್ನು ಸೌದೆಯಾಗಿ ಉಪಯೋಗಿಸುವರು.

ಜನರು ತಿಳಿದುಕೊಳ್ಳುವದಕ್ಕೆ ಮನಸ್ಸು ಕೊಡುವದಿಲ್ಲ. ಆದ್ದರಿಂದ ಅವರ ನಿರ್ಮಾಣಿಕನಾದ ದೇವರು ಅವರನ್ನು ಸಂತೈಸುವದಿಲ್ಲ. ಅವರ ನಿರ್ಮಾಣಿಕನು ಅವರಿಗೆ ದಯೆ ತೋರುವದಿಲ್ಲ.

12 ಆ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಬೇರೆಯವರಿಂದ ಬೇರ್ಪಡಿಸುವನು. ಆತನು ಯೂಫ್ರೇಟೀಸ್ ನದಿಯಿಂದ ಪ್ರಾರಂಭಿಸಿ ಈಜಿಪ್ಟಿನ ನದಿಯತನಕ ಎಲ್ಲಾ ಜನರನ್ನು ಒಟ್ಟುಗೂಡಿಸುವನು.

ಇಸ್ರೇಲ್ ಜನರೇ, ನೀವು ಒಬ್ಬೊಬ್ಬರಾಗಿಯೇ ಒಟ್ಟುಗೂಡಿಸಲ್ಪಡುವಿರಿ. 13 ನನ್ನ ಜನರಲ್ಲಿ ಹೆಚ್ಚಿನವರು ಅಶ್ಶೂರದಲ್ಲಿ ಈಗ ಕಳೆದುಹೋಗಿರುತ್ತಾರೆ; ಕೆಲವರು ಈಜಿಪ್ಟಿಗೆ ಓಡಿಹೋಗಿದ್ದಾರೆ. ಆ ಸಮಯದಲ್ಲಿ ಮಹಾದೊಡ್ಡ ತುತ್ತೂರಿಯ ಶಬ್ದವು ಕೇಳಿಸುವದು. ಆಗ ಆ ಜನರೆಲ್ಲರೂ ಜೆರುಸಲೇಮಿಗೆ ಹಿಂತಿರುಗುವರು. ಆ ಜನರು ಪರಿಶುದ್ಧ ಪರ್ವತದ ಮೇಲೆ ಯೆಹೋವನ ಮುಂದೆ ಅಡ್ಡಬೀಳುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International