Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 14-15

ಜನರು ಮತ್ತೆ ಗೊಣಗುಟ್ಟಿದ್ದು

14 ಆ ರಾತ್ರಿಯಲ್ಲಿ ಜನರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು. ಇಸ್ರೇಲರು ಮೋಶೆ ಆರೋನರ ವಿರುದ್ಧ ಗೊಣಗುಟ್ಟಿದರು. ಜನರೆಲ್ಲರೂ ಒಟ್ಟಾಗಿ ಮೋಶೆ ಆರೋನರ ಬಳಿಗೆ ಬಂದು, “ನಾವು ಈಜಿಪ್ಟಿನಲ್ಲಿಯಾಗಲೀ ಅಥವಾ ಈ ಮರುಭೂಮಿಯಲ್ಲಾಗಲಿ ಸತ್ತಿದ್ದರೆ ಒಳ್ಳೆಯದಿತ್ತು. ಯುದ್ಧದಲ್ಲಿ ನಾವು ಸತ್ತುಹೋಗುವಂತೆ ಯೆಹೋವನು ನಮ್ಮನ್ನು ಈ ಹೊಸ ದೇಶಕ್ಕೆ ತರುತ್ತಿರುವುದೇಕೆ? ವೈರಿಗಳು ನಮ್ಮನ್ನು ಕೊಂದು ನಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತೆಗೆದುಕೊಳ್ಳುವರು. ನಾವು ಈಜಿಪ್ಟಿಗೆ ಮರಳಿಹೋಗುವುದೇ ಉತ್ತಮ” ಎಂದು ಹೇಳಿದರು.

ಬಳಿಕ ಜನರು, “ನಾವು ಇನ್ನೊಬ್ಬ ನಾಯಕನನ್ನು ಆರಿಸಿಕೊಂಡು ಈಜಿಪ್ಟಿಗೆ ಮರಳಿಹೋಗೋಣ” ಎಂದು ಮಾತಾಡಿಕೊಂಡರು.

ಆಗ ಮೋಶೆ ಆರೋನರು ಇಸ್ರೇಲರ ಸರ್ವ ಸಮೂಹದವರ ಮುಂದೆ ಬೋರಲಬಿದ್ದರು. ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬಂದವರಲ್ಲಿ ಇಬ್ಬರಾಗಿದ್ದರು. ಅವರು ಬೇಸರಗೊಂಡು ತಮ್ಮ ಬಟ್ಟೆಗಳನ್ನು ಹರಿದುಕೊಂಡರು. ಇವರಿಬ್ಬರು ಇಸ್ರೇಲರೆಲ್ಲರಿಗೆ, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು, ಅದು ಹಾಲೂ ಜೇನೂ ಹರಿಯುವ ದೇಶ. ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಆ ದೇಶದೊಳಗೆ ನಮ್ಮನ್ನು ಕರೆದೊಯ್ದು ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು. ಹೀಗಿರುವುದರಿಂದ ಯೆಹೋವನಿಗೆ ವಿರುದ್ಧವಾಗಿ ಏಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ನಾವು ಅವರನ್ನು ಸೋಲಿಸಬಹುದು. ಅವರಿಗೆ ಯಾವ ಸಂರಕ್ಷಣೆ ಇರುವುದಿಲ್ಲ. ಆದರೆ ನಮ್ಮ ಕಡೆ ಯೆಹೋವನು ಇದ್ದಾನೆ. ಆದ್ದರಿಂದ ಭಯಪಡಬೇಡಿರಿ” ಅಂದರು.

10 ಎಲ್ಲಾ ಜನರು ಯೆಹೋಶುವನನ್ನು ಮತ್ತು ಕಾಲೇಬನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತಾಡತೊಡಗಿದರು. ಆದರೆ ಯೆಹೋವನ ಮಹಿಮೆ ದೇವದರ್ಶನಗುಡಾರ ಮೇಲೆ ಪ್ರತ್ಯಕ್ಷವಾದದ್ದು ಇಸ್ರೇಲರೆಲ್ಲರಿಗೆ ಕಾಣಿಸಿತು. ಯೆಹೋವನು ಮೋಶೆಯೊಡನೆ ಮಾತಾಡಿ, 11 “ಈ ಜನರು ಇನ್ನೆಷ್ಟು ಕಾಲದವರೆಗೆ ನನ್ನನ್ನು ತಿರಸ್ಕರಿಸುವರು? ನಾನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನೆಷ್ಟು ಕಾಲದವರೆಗೆ ನನ್ನನ್ನು ನಂಬದೆ ಇರುವರು? 12 ಸರಿ, ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು” ಎಂದು ಹೇಳಿದನು.

13 ಅದಕ್ಕೆ ಮೋಶೆ ಯೆಹೋವನಿಗೆ, “ನೀನು ನಿನ್ನ ಜನರಾದ ಇಸ್ರೇಲರನ್ನು ನಿನ್ನ ಶಕ್ತಿಯ ಮೂಲಕ ಈಜಿಪ್ಟಿನಿಂದ ಕರೆದುಕೊಂಡು ಬಂದೆ. ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು ಈ ಸುದ್ದಿಯನ್ನು ಕೇಳಿ ಕಾನಾನಿನ ನಿವಾಸಿಗಳಿಗೆ ಅದರ ಬಗ್ಗೆ ತಿಳಿಸುವರು. 14 ಅದಲ್ಲದೆ, ಈ ದೇಶದವರು ನೀನು ಇಸ್ರೇಲರ ಮಧ್ಯದಲ್ಲಿರುವ ಸಂಗತಿಯನ್ನು ಕೇಳಿದ್ದಾರೆ. ನೀನು ಇಸ್ರೇಲರಿಗೆ ಪ್ರತ್ಯಕ್ಷನಾಗಿ ಕಾಣಿಸಿಕೊಂಡದ್ದು ಅವರಿಗೆ ತಿಳಿದಿದೆ. ನಿನ್ನ ಮೇಘವು ಇಸ್ರೇಲರ ಮೇಲಿರುವುದು ಅವರಿಗೆ ಗೊತ್ತಿದೆ. ನೀನು ಇಸ್ರೇಲರನ್ನು ಹಗಲಲ್ಲಿ ಮೇಘಸ್ತಂಭದ ಮೂಲಕವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದ ಮೂಲಕವಾಗಿಯೂ ಮುನ್ನಡೆಸುತ್ತಿರುವುದು ಅವರಿಗೆ ತಿಳಿದಿದೆ. 15 ಹೀಗಿರಲಾಗಿ, ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ, ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ, 16 ‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಇಸ್ರೇಲರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ ಅವರನ್ನು ಮರುಭೂಮಿಯಲ್ಲಿ ನಾಶಮಾಡಿದನು’ ಎಂದು ಮಾತಾಡಿಕೊಳ್ಳುವರು.

17 “ಆದ್ದರಿಂದ ಒಡೆಯನೇ, ನೀನು ಹೇಳಿದಂತೆಯೇ ನಿನ್ನ ತಾಳ್ಮೆಯು ದೀರ್ಘವಾಗಿರಲಿ. 18 ನೀನು ನಿನ್ನ ವಿಷಯದಲ್ಲಿ ‘ಯೆಹೋವನು ದೀರ್ಘಶಾಂತನು, ಬಹುಪ್ರೀತಿಯುಳ್ಳವನು, ಅಪರಾಧ, ಪಾಪಗಳನ್ನು ಕ್ಷಮಿಸುವವನಾಗಿದ್ದರೂ ಎಲ್ಲಾ ದಂಡನೆಯನ್ನು ರದ್ದುಪಡಿಸದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ನೀನೇ ಹೇಳಿರುವಿಯಲ್ಲಾ! 19 ನಾವು ಈಜಿಪ್ಟಿನಿಂದ ಬಂದದ್ದು ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.

20 ಅದಕ್ಕೆ ಯೆಹೋವನು, “ನೀನು ಕೇಳಿಕೊಂಡಂತೆ ನಾನು ಜನರನ್ನು ಕ್ಷಮಿಸುವೆನು. 21 ಆದಾಗ್ಯೂ ನನ್ನ ಜೀವದಾಣೆ ಮತ್ತು ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರಬೇಕೆಂಬುವ ನಿಶ್ಚಯ ವಾಕ್ಯದ ಆಣೆ, 22 ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಾನು ನಡಿಸಿರುವ ಮಹಾತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಜನರೆಲ್ಲರೂ ಪದೇಪದೇ ನನ್ನನ್ನು ಪರೀಕ್ಷಿಸಿದ್ದರಿಂದ ಮತ್ತು ನನಗೆ ವಿಧೇಯರಾಗದಿದ್ದ ಕಾರಣ, 23 ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ. ನನ್ನನ್ನು ತಿರಸ್ಕರಿಸಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ. 24 ಆದರೆ ನನ್ನ ಸೇವಕನಾದ ಕಾಲೇಬನು ಅವರ ಹಾಗಲ್ಲ, ಅವನು ನನ್ನನ್ನು ಮನಃಪೂರ್ವಕವಾಗಿ ಹಿಂಬಾಲಿಸಿದ್ದಾನೆ. ಆದ್ದರಿಂದ ಅವನು ಸಂಚರಿಸಿ ನೋಡಿದ ದೇಶಕ್ಕೆ ಅವನನ್ನು ಬರಮಾಡುವೆನು ಮತ್ತು ಅವನ ಸಂತತಿಯವರು ಆ ದೇಶವನ್ನು ಹೊಂದುವರು. 25 ಅಮಾಲೇಕ್ಯರೂ ಕಾನಾನ್ಯರೂ ಆ ಕಣಿವೆಯಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಕೆಂಪುಸಮುದ್ರಕ್ಕೆ ಹೋಗುವ ದಾರಿಯ ಮೂಲಕ ಮರುಭೂಮಿಗೆ ಮರಳಿ ಪ್ರಯಾಣ ಮಾಡಬೇಕು” ಎಂದು ಹೇಳಿದನು.

ಯೆಹೋವನು ಜನರನ್ನು ಶಿಕ್ಷಿಸಿದ್ದು

26-27 ಯೆಹೋವನು ಮೋಶೆ ಆರೋನರಿಗೆ, “ಈ ದುಷ್ಟ ಸಮೂಹದವರು ನನಗೆ ವಿರುದ್ಧವಾಗಿ ಇನ್ನೆಷ್ಟರವರೆಗೆ ಗುಣುಗುಟ್ಟುತ್ತಲೇ ಇರುತ್ತಾರೆ. ಇಸ್ರೇಲರು ನನಗೆ ವಿರೋಧವಾಗಿ ಗುಣುಗುಟ್ಟುವುದು ನನಗೆ ಕೇಳಿಸಿದೆ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ‘ಯೆಹೋವನು ಹೇಳುವುದೇನೆಂದರೆ: ನನ್ನ ಜೀವದಾಣೆ. ನೀವು ಏನನ್ನು ಹೇಳಿದಿರೋ ಅದನ್ನೇ ನಿಮಗೆ ಮಾಡುತ್ತೇನೆ; 29 ನಿಮ್ಮ ಶವಗಳು ಈ ಮರುಭೂಮಿಯಲ್ಲಿಯೇ ಬೀಳುವವು. ನೀವು ನನಗೆ ವಿರೋಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಲೆಕ್ಕಿಸಲ್ಪಟ್ಟವರೆಲ್ಲರೂ ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. 30 ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಬೇರೆ ಯಾರೂ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಸೇರುವುದಿಲ್ಲ. 31 ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಪ್ರವೇಶಿಸುವಂತೆ ಮಾಡುವೆನು. ನೀವು ತಿರಸ್ಕರಿಸಿದ ದೇಶವನ್ನು ಅವರು ಅನುಭೋಗಿಸುವರು. 32 ನೀವಂತೂ ಈ ಮರುಭೂಮಿಯಲ್ಲಿ ಸಾಯುವಿರಿ. ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲ್ಲಿ ಪರ್ಯಂತರ ಬೀಳುವವು.

33 “‘ನಿಮ್ಮ ಅಪನಂಬಿಗಸ್ತಿಕೆಯ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನೀವು ಸಾಯುವತನಕ ನಲವತ್ತು ವರ್ಷ ಮರುಭೂಮಿಯಲ್ಲಿ ಅಲೆದಾಡುವರು. 34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ ನಲವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ. ನನ್ನನ್ನು ತಿರಸ್ಕರಿಸುವುದೆಂದರೆ ಏನೆಂಬುದು ನಿಮಗೆ ಗೊತ್ತಾಗುತ್ತದೆ.’

35 “ಇದು ಯೆಹೋವನೆಂಬ ನಾನು ಹೇಳಿದ ಮಾತು. ನನಗೆ ವಿರೋಧವಾಗಿ ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಖಂಡಿತವಾಗಿ ಮಾಡುತ್ತೇನೆ. ಈ ಮರುಭೂಮಿಯಲ್ಲಿಯೇ ಇವರೆಲ್ಲರೂ ಸಾಯಬೇಕು” ಎಂದು ಹೇಳಿದನು.

36-37 ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟು ಹಿಂದಿರುಗಿಬಂದು ಆ ದೇಶದ ವಿಷಯದಲ್ಲಿ ಅಶುಭಸಮಾಚಾರವನ್ನು ಹೇಳಿ ಸರ್ವಸಮೂಹದರವರನ್ನು ಅವರಿಗೆ ವಿರೋಧವಾಗಿ ಗುಣುಗುಟ್ಟುವಂತೆ ಮಾಡಿದ ಹತ್ತು ಜನರು ಯೆಹೋವನಿಂದ ವ್ಯಾಧಿಗೊಳಗಾಗಿ ಸತ್ತರು. 38 ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನ ಹೊರತು ಉಳಿದ ಹತ್ತು ಮಂದಿ ಸತ್ತರು. ಯೆಹೋವನು ಅವರಿಬ್ಬರನ್ನು ಉಳಿಸಿದನು. ಅವರಿಗೆ ವ್ಯಾಧಿಯು ತಗಲಲಿಲ್ಲ.

ಜನರು ಕಾನಾನಿಗೆ ಹೋಗಲು ಪ್ರಯತ್ನಿಸಿದ್ದು

39 ಮೋಶೆಯು ಈ ಎಲ್ಲಾ ಸಂಗತಿಗಳನ್ನು ಇಸ್ರೇಲರಿಗೆಲ್ಲಾ ಹೇಳಲಾಗಿ ಅವರು ಬಹಳ ದುಃಖಪಟ್ಟರು. 40 ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ. ಯೆಹೋವನು ವಾಗ್ದಾನ ಮಾಡಿರುವ ದೇಶಕ್ಕೆ ಹೋಗಲು ನಾವು ಈಗ ಸಿದ್ಧರಾಗಿದ್ದೇವೆ” ಎಂದು ಹೇಳಿದರು.

41 ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ನೀವು ಯಶಸ್ವಿಯಾಗುವುದಿಲ್ಲ. 42 ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ. ನೀವು ಆ ದೇಶಕ್ಕೆ ಹೋಗಬೇಡಿರಿ. ಇಲ್ಲವಾದರೆ, ನಿಮ್ಮ ಶತ್ರುಗಳಿಂದ ಸೋಲಿಸಲ್ಪಡುವಿರಿ. 43 ಅಮಾಲೇಕ್ಯರೂ ಕಾನಾನ್ಯರೂ ನಿಮ್ಮನ್ನು ಎದುರಿಸಲು ಅಲ್ಲಿರುವುದರಿಂದ ನೀವು ಅವರ ಖಡ್ಗದಿಂದ ಸಾಯುವಿರಿ. ನೀವು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು.

44 ಆದರೆ ಜನರು ಮೋಶೆಯ ಮಾತನ್ನು ನಂಬಲಿಲ್ಲ. ಅವರು ಪರ್ವತಪ್ರದೇಶದ ಕಡೆಗೆ ಹೊರಟರು. ಆದರೆ ಮೋಶೆಯೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯೂ ಜನರೊಂದಿಗೆ ಹೋಗಲಿಲ್ಲ. 45 ಆಗ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾನ್ಯರೂ ಇಳಿದುಬಂದು ಅವರನ್ನು ಸೋಲಿಸಿ ಹೊರ್ಮಾ ಪಟ್ಟಣದವರೆಗೂ ಅಟ್ಟಿಸಿಕೊಂಡುಬಂದು ಸಂಹರಿಸಿದರು.

ಯಜ್ಞಗಳ ನಿಯಮಗಳು

15 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು: ನಾನು ನಿಮ್ಮ ನಿವಾಸಕ್ಕಾಗಿ ಒಂದು ದೇಶವನ್ನು ಕೊಡುತ್ತಿದ್ದೇನೆ. ನೀವು ಆ ದೇಶಕ್ಕೆ ಸೇರಿದ ನಂತರ ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ನಿಮ್ಮ ಮಂದೆಯಿಂದಾಗಲಿ ಹಿಂಡಿನಿಂದಾಗಲಿ ಅಗ್ನಿಯ ಮೂಲಕ ಯಜ್ಞವನ್ನರ್ಪಿಸುವವನು ಸರ್ವಾಂಗಹೋಮ ಮಾಡಿದರೂ ಅಥವಾ ಸಮಾಧಾನಯಜ್ಞಮಾಡಿದರೂ ಹರಕೆಯ ಯಜ್ಞಮಾಡಿದರೂ ಅಥವಾ ಸ್ವಇಚ್ಛೆಯಿಂದ ಯಜ್ಞಮಾಡಿದರೂ ನಿಯಮಿತ ಹಬ್ಬಗಳಲ್ಲಿ ಯಜ್ಞಮಾಡಿದರೂ ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದೂವರೆ ಸೇರು ಎಣ್ಣೆ ಬೆರಸಿದ ಮೂರು ಸೇರು ಗೋಧಿಯ ಹಿಟ್ಟನ್ನೂ ಪಾನದ್ರವ್ಯಕ್ಕಾಗಿ ಒಂದೂವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ಸರ್ವಾಂಗಹೋಮವಾಗಿ ಇಲ್ಲವೆ ಸಮಾಧಾನಯಜ್ಞವಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನೂ ಸಮರ್ಪಿಸಬೇಕು.

“ನೀವು ಟಗರನ್ನು ಸಮರ್ಪಿಸುವುದಾದರೆ, ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರಸಿದ ಆರು ಸೇರು ಒಳ್ಳೆಯ ಗೋಧಿಯ ಹಿಟ್ಟನ್ನೂ ಪಾನದ್ರವ್ಯಕ್ಕಾಗಿ ಎರಡು ಸೇರು ದ್ರಾಕ್ಷಾರಸವನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಯಜ್ಞವಾಗಿರುತ್ತದೆ.

“ನಿಮ್ಮಲ್ಲಿ ಎಳೆಹೋರಿಯನ್ನು ಯೆಹೋವನಿಗೆ ಸರ್ವಾಂಗಹೋಮವನ್ನಾಗಲಿ ಹರಕೆಯ ಯಜ್ಞವನ್ನಾಗಲಿ ಸಮಾಧಾನಯಜ್ಞವನ್ನಾಗಲಿ ಅರ್ಪಿಸುವವನು ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರಸಿದ ಒಂಭತ್ತು ಸೇರು ಗೋಧಿಯ ಹಿಟ್ಟನ್ನೂ 10 ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು. ಇದು ಅಗ್ನಿಯ ಮೂಲಕ ಸಮರ್ಪಿಸುವ ಯಜ್ಞವಾಗಿದೆ. ಇದರ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯನ್ನು ಉಂಟುಮಾಡುತ್ತದೆ. 11 ಕುರಿ, ಆಡು, ಟಗರು, ಹೋರಿ ಇವುಗಳಲ್ಲಿ ಯಾವುದನ್ನು ಅರ್ಪಿಸಿದರೂ ಇದನ್ನು ಮಾಡಲೇಬೇಕು. 12 ನೀವು ಸಮರ್ಪಿಸುವ ಪಶುಗಳ ಲೆಕ್ಕದ ಪ್ರಕಾರವೇ ಒಂದೊಂದು ಪಶುವಿನ ಸಂಗಡ ಈ ರೀತಿಯಾಗಿ ಮಾಡಬೇಕು.

13 “ಇಸ್ರೇಲಿನ ಪ್ರತಿಯೊಬ್ಬ ಸ್ವದೇಶಿಯೂ ಯೆಹೋವನಿಗೆ ಸುಗಂಧಹೋಮವನ್ನು ಸಮರ್ಪಿಸುವಾಗ ಈ ರೀತಿಯಾಗಿ ಮಾಡಬೇಕು. 14 ನಿಮ್ಮ ಮಧ್ಯದಲ್ಲಿ ವಾಸಿಸುವ ವಿದೇಶಿಯರಲ್ಲಿ ಯಾವನೇ ಆಗಲಿ, ಯೆಹೋವನಿಗೆ ಸುಗಂಧಹೋಮ ಮಾಡಬೇಕಾದರೆ ನಿಮ್ಮಂತೆಯೇ ಅವನು ಮಾಡಬೇಕು. 15 ನಿಮಗೂ ನಿಮ್ಮಲ್ಲಿರುವ ಪರದೇಶದವರಿಗೂ ಒಂದೇ ವಿಧಿಯಿರಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ. ಯೆಹೋವನ ಸನ್ನಿಧಿಯಲ್ಲಿ ನೀವೂ ಪರದೇಶಿಯರೂ ಒಂದೇ ಆಗಿದ್ದೀರಿ. 16 ನಿಮಗೂ ನಿಮ್ಮ ಬಳಿಯಲ್ಲಿ ವಾಸಿಸುವ ಪರದೇಶದವನಿಗೂ ಒಂದೇ ವಿಧವಾದ ಪ್ರಮಾಣ ವಿಧಿಗಳಿರಬೇಕು.”

17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 18 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನಾನು ನಿಮ್ಮನ್ನು ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. 19 ನೀವು ಆ ದೇಶದ ಭೂಮಿಯ ಬೆಳೆಯನ್ನು ಅನುಭೋಗಿಸುವಾಗ, ಸ್ವಲ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. 20 ನೀವು ಕಣದಲ್ಲಿರುವ ಗೋಧಿಯಲ್ಲಿ ಪ್ರಥಮಫಲವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡುವಂತೆಯೇ ನೀವು ಪ್ರಥಮವಾಗಿ ನಾದಿದ ಹಿಟ್ಟಿನಿಂದ ಒಂದು ರೊಟ್ಟಿಯನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. 21 ನೀವೂ ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು.

22-23 “ಯೆಹೋವನು ಮೋಶೆಯ ಮೂಲಕ ಪ್ರಕಟಿಸಿದ ಆಜ್ಞೆಗಳನ್ನು ಅಂದರೆ ಯೆಹೋವನು ಆಜ್ಞೆಯನ್ನು ಕೊಟ್ಟ ದಿನದಿಂದಿಡಿದು ಮುಂದಿನ ಎಲ್ಲಾ ಕಾಲದಲ್ಲಿ ನೀವು ತಿಳಿಯದೆ ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿದರೆ ಹೀಗೆ ಮಾಡಬೇಕು: 24 ನಿರುದ್ದೇಶದಿಂದ ಮತ್ತು ಸಮುದಾಯಕ್ಕೆ ತಿಳಿಯದಂತೆ ಇದನ್ನು ಮಾಡಿದ್ದಾಗಿದ್ದರೆ, ಯೆಹೋವನಿಗೆ ಸುಗಂಧ ವಾಸನೆಯನ್ನು ಉಂಟುಮಾಡುವುದಕ್ಕಾಗಿ ಒಂದು ಎಳೆಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಬೇಕು ಮತ್ತು ಅದರೊಡನೆ ಧಾನ್ಯಾರ್ಪಣೆಯನ್ನೂ ಪಾನಾರ್ಪಣೆಯನ್ನೂ ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನೂ ಅರ್ಪಿಸಬೇಕು.

25 “ಈ ರೀತಿಯಲ್ಲಿ ಇಸ್ರೇಲರ ಇಡೀ ಸಮುದಾಯದವರ ಕ್ಷಮೆಗಾಗಿ ಯಾಜಕನು ಪ್ರಾಯಶ್ಚಿತ್ತ ಮಾಡುವನು. ಯಾಕೆಂದರೆ ಅದು ತಿಳಿಯದೆ ಮಾಡಿದ ತಪ್ಪಾಗಿತ್ತು ಮತ್ತು ಆ ತಪ್ಪಿಗಾಗಿ ಅವರು ತಮ್ಮ ಅರ್ಪಣೆಯನ್ನು ಯೆಹೋವನಿಗೆ ಕಾಣಿಕೆಯಾಗಿ ತಂದರು ಮತ್ತು ಯೆಹೋವನ ಎದುರಿನಲ್ಲಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿದರು.[a] 26 ಆದ್ದರಿಂದ ಇಡೀ ಇಸ್ರೇಲ್ ಸಮುದಾಯದವರಿಗೆ ಕ್ಷಮಾಪಣೆಯಾಗುವುದು ಮತ್ತು ಅವರ ಮಧ್ಯದಲ್ಲಿ ವಾಸಿಸುವ ಪರದೇಶಸ್ಥರಿಗೂ ಕ್ಷಮಾಪಣೆಯಾಗುವುದು; ಯಾಕೆಂದರೆ ಜನರೆಲ್ಲರೂ ನಿರುದ್ದೇಶದಿಂದ ಮಾಡಿದ ಆ ತಪ್ಪಿನಲ್ಲಿ ಸಿಕ್ಕಿಕೊಂಡಿದ್ದರು.

27 “ಆದರೆ ಒಬ್ಬನು ತಿಳಿಯದೆ ಪಾಪಮಾಡಿದರೆ, ಅವನು ಒಂದು ವರ್ಷದ ಹೆಣ್ಣು ಆಡನ್ನು ದೋಷ ಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 28 ಆಗ ಯಾಜಕನು ನಿರುದ್ದೇಶದಿಂದ ತಪ್ಪುಮಾಡಿದವನ ಕ್ಷಮಾಪಣೆಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು. 29 ನಿರುದ್ದೇಶದಿಂದ ತಪ್ಪುಮಾಡಿದ ಪ್ರತಿಯೊಬ್ಬರಿಗೂ ಈ ನಿಯಮ ಅನ್ವಯಿಸುತ್ತದೆ. ಈ ವಿಷಯದಲ್ಲಿ ಇಸ್ರೇಲರಲ್ಲಿರುವ ಸ್ವದೇಶದವರಿಗೂ ಪರದೇಶದವರಿಗೂ ಒಂದೇ ವಿಧಿಯಿರಬೇಕು.

30 “ಆದರೆ ಉದ್ದೇಶಪೂರ್ವಕವಾಗಿ ಪಾಪಮಾಡುವವನು ಯೆಹೋವನಿಗೆ ಅವಮಾನ ಮಾಡುವವನಾಗಿದ್ದಾನೆ. ಅವನನ್ನು ಕುಲದಿಂದ ಬಹಿಷ್ಕರಿಸಬೇಕು. ಈ ನಿಯಮವು ಇಸ್ರೇಲರಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಹಾಗೂ ಪರದೇಶಸ್ಥರಿಗೂ ಅನ್ವಯಿಸುವುದು. 31 ಆ ಮನುಷ್ಯನು ಯೆಹೋವನ ಮಾತನ್ನು ತಾತ್ಸಾರಮಾಡಿ ಆತನ ಆಜ್ಞೆಯನ್ನು ಮೀರಿದ್ದರಿಂದ ಕುಲದಿಂದ ತೆಗೆದುಹಾಕಲ್ಪಡಲೇಬೇಕು. ಅವನು ತನ್ನ ಪಾಪದ ಫಲವನ್ನು ಅನುಭವಿಸಲಿ.”

ಸಬ್ಬತ್ ದಿನದಲ್ಲಿ ಕೆಲಸಮಾಡುವ ಮನುಷ್ಯನು

32 ಇಸ್ರೇಲರು ಇನ್ನೂ ಮರುಭೂಮಿಯಲ್ಲಿದ್ದಾಗ ಒಬ್ಬನು ಸಬ್ಬತ್‌ದಿನದಲ್ಲಿ ಕಟ್ಟಿಗೆ ಕೂಡಿಸುವುದನ್ನು ಅವರಲ್ಲಿ ಕೆಲವರು ಕಂಡರು. 33 ಕಂಡವರು ಅವನನ್ನು ಮೋಶೆ ಆರೋನರ ಮತ್ತು ಸರ್ವಸಮೂಹದವರ ಬಳಿಗೆ ಹಿಡಿದುಕೊಂಡು ಬಂದರು. 34 ಅವನನ್ನು ಶಿಕ್ಷಿಸಬೇಕಾದ ವಿಧಿಯನ್ನು ಅವರು ತಿಳಿಯದೆ ಇದ್ದುದರಿಂದ ಅವನನ್ನು ಕಾವಲಲ್ಲಿಟ್ಟರು.

35 ಆಗ ಯೆಹೋವನು ಮೋಶೆಗೆ, “ಆ ಮನುಷ್ಯನು ಸಾಯಬೇಕು. ಅವನನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಎಲ್ಲಾ ಜನರು ಕಲ್ಲೆಸೆದು ಕೊಲ್ಲಬೇಕು” ಎಂದು ಹೇಳಿದನು. 36 ಆಗ ಜನರು ಅವನನ್ನು ಪಾಳೆಯದ ಹೊರಗೆ ಕರೆದುಕೊಂಡು ಹೋಗಿ ಕಲ್ಲೆಸೆದು ಕೊಂದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಇದನ್ನು ಮಾಡಿದರು.

ಜನರು ವಿಧಿಗಳನ್ನು ಜ್ಞಾಪಕ ಮಾಡುವಂತೆ ದೇವರು ಸಹಾಯ ಮಾಡಿದ್ದ

37 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 38 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನನ್ನ ಅಪ್ಪಣೆಗಳನ್ನು ಜ್ಞಾಪಕಮಾಡುವುದಕ್ಕೆ ನಿಮಗೆ ಒಂದು ಗುರುತನ್ನು ಕೊಡುತ್ತೇನೆ. ನಿಮ್ಮ ಬಟ್ಟೆಗಳ ಮೂಲೆಯಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕು. ನೀವು ಇವುಗಳನ್ನು ಇಂದಿನಿಂದ ಯಾವಾಗಲೂ ಧರಿಸಿಕೊಳ್ಳಬೇಕು. 39 ಈ ಗೊಂಡೆಗಳನ್ನು ನೀವು ನೋಡುವಾಗ, ಯೆಹೋವನು ನಿಮಗೆ ಕೊಟ್ಟ ಅಪ್ಪಣೆಗಳನ್ನೆಲ್ಲ ಜ್ಞಾಪಕಮಾಡಿಕೊಳ್ಳಬೇಕು ಮತ್ತು ಅವುಗಳಿಗೆ ವಿಧೇಯರಾಗಬೇಕು. ನೀವು ನಿಮ್ಮ ಮನಸ್ಸಿಗೆ ಮತ್ತು ಕಣ್ಣಿಗೆ ತೋರಿದ ಪ್ರಕಾರ ನಡೆಯದೆ ನಂಬಿಗಸ್ತರಾಗಿರಬೇಕು. 40 ನೀವು ನನ್ನ ಎಲ್ಲಾ ಆಜ್ಞೆಗಳನ್ನು ಜ್ಞಾಪಿಸಿಕೊಂಡು ವಿಧೇಯರಾಗಿರಬೇಕು. ಆಗ ನೀವು ನಿಮ್ಮ ದೇವರ ವಿಶೇಷವಾದ ಜನರಾಗಿರುವಿರಿ. 41 ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆತಂದ ನಿಮ್ಮ ದೇವರಾದ ಯೆಹೋವನು ನಾನೇ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International