Print Page Options
Previous Prev Day Next DayNext

Book of Common Prayer

Daily Old and New Testament readings based on the Book of Common Prayer.
Duration: 861 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 40

ರಚನೆಗಾರ: ದಾವೀದ.

40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
    ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
    ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
    ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
    ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
    ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
    ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
    ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
    ಅವು ಅಸಂಖ್ಯಾತವಾಗಿವೆ.

ನಾನು ಗ್ರಹಿಸಿಕೊಂಡಿದ್ದೇನೆಂದರೆ,
    ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
    ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
    ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
    ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
    ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
    ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
    ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
    ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.

12 ದುಷ್ಟರು ನನ್ನನ್ನು ಸುತ್ತುಗಟ್ಟಿದ್ದಾರೆ
    ಅವರು ಅಸಂಖ್ಯಾತರಾಗಿದ್ದಾರೆ.
ನನ್ನ ಪಾಪಗಳು ನನ್ನನ್ನು ಹಿಡಿದಿರುವುದರಿಂದ
    ಅವುಗಳಿಂದ ತಪ್ಪಿಸಿಕೊಳ್ಳಲಾರೆ.
ನನ್ನ ತಲೆಯ ಕೂದಲುಗಳಿಗಿಂತಲೂ ನನ್ನ ಪಾಪಗಳು ಹೆಚ್ಚಾಗಿವೆ.
    ನಾನು ಧೈರ್ಯವನ್ನು ಕಳೆದುಕೊಂಡಿರುವೆ.
13 ಯೆಹೋವನೇ, ನನ್ನನ್ನೇ ರಕ್ಷಿಸು!
    ಬೇಗನೆ ಬಂದು ನನ್ನನ್ನು ಕಾಪಾಡು!
14 ಆ ದುಷ್ಟರು ನನ್ನನ್ನು ಕೊಲ್ಲಬೇಕೆಂದಿದ್ದಾರೆ.
    ಯೆಹೋವನೇ, ಅವರಿಗೆ ನಾಚಿಕೆಯನ್ನೂ ನಿರಾಶೆಯನ್ನೂ ಬರಮಾಡು.
ನನಗೆ ಕೇಡುಮಾಡಬೇಕೆಂದಿರುವ ಅವರು
    ನಾಚಿಕೆಯಿಂದ ಓಡಿಹೋಗಲಿ!
15 ನನ್ನನ್ನು ಗೇಲಿಮಾಡುವ ಆ ದುಷ್ಟರು
    ತಮಗಾಗುವ ಅವಮಾನದಿಂದ ಗಾಬರಿಗೊಳ್ಳಲಿ!
16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ.
    ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.

17 ಒಡೆಯನೇ, ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
    ನನಗೆ ಸಹಾಯಮಾಡಿ ನನ್ನನ್ನು ರಕ್ಷಿಸು.
ನನ್ನ ದೇವರೇ, ತಡಮಾಡಬೇಡ.

ಕೀರ್ತನೆಗಳು 54

ಜಿಫೆಂಬ ಸ್ಥಳದವರು ಸೌಲನ ಬಳಿಗೆ ಹೋಗಿ, “ದಾವೀದನು ನಮ್ಮಲ್ಲಿ ಅಡಗಿಕೊಂಡಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.

54 ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸು!
    ನಿನ್ನ ಮಹಾಶಕ್ತಿಯಿಂದ ನನ್ನ ನ್ಯಾಯವನ್ನು ಸ್ಥಾಪಿಸು.
ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮಾತುಗಳನ್ನು ಕೇಳು.
ದೇವರ ಕುರಿತು ಆಲೋಚಿಸದ ಅನ್ಯರು ನನಗೆ ವಿರೋಧವಾಗಿ ತಿರುಗಿದ್ದಾರೆ.
    ಆ ಬಲಾತ್ಕಾರಿಗಳು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.

ಇಗೋ, ನನ್ನ ದೇವರೇ ನನಗೆ ಸಹಾಯಮಾಡುವನು.
    ನನ್ನ ಒಡಯನೇ ನನಗೆ ಆಧಾರ ನೀಡುವನು.
ನನಗೆ ವಿರೋಧವಾಗಿ ತಿರುಗಿರುವ ಜನರನ್ನು ನನ್ನ ದೇವರು ದಂಡಿಸುವನು.
    ದೇವರು ನನಗೆ ನಂಬಿಗಸ್ತನಾಗಿದ್ದಾನೆ. ಆತನು ಅವರನ್ನು ನಾಶಮಾಡುವನು.

ದೇವರೇ, ನಾನು ನಿನಗೆ ಸ್ವಇಚ್ಛೆಯಿಂದ ಯಜ್ಞಗಳನ್ನು ಅರ್ಪಿಸುವೆನು.
    ಯೆಹೋವನೇ, ನಿನ್ನ ಒಳ್ಳೆಯ ಹೆಸರನ್ನು ನಾನು ಕೊಂಡಾಡುವೆನು.
ಯಾಕೆಂದರೆ ನನ್ನೆಲ್ಲಾ ಆಪತ್ತುಗಳಿಂದ ರಕ್ಷಿಸಿದಾತನು ನೀನೇ.
    ನನ್ನ ವೈರಿಗಳಿಗಾದ ಸೋಲನ್ನು ನಾನು ಕಣ್ಣಾರೆ ಕಂಡೆನು.

ಕೀರ್ತನೆಗಳು 51

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
    ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
    ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
    ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
    ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15     ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
    ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
    ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.

18 ಚೀಯೋನಿಗೆ ಕರುಣೆತೋರಿ
    ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
    ನಿನಗೆ ಸಂತೋಷವನ್ನು ಉಂಟು ಮಾಡುವರು.
    ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.

ಪ್ರಸಂಗಿ 5:1-7

ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ

ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ. ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ:

“ಅನೇಕ ಚಿಂತೆಗಳಿಂದ ದುಸ್ವಪ್ನಗಳಾಗುವಂತೆ
    ಮೂಢನು ಅನೇಕ ಮಾತುಗಳನ್ನಾಡುವನು.”

ನೀವು ಹರಕೆ ಮಾಡಿಕೊಂಡರೆ ತಡಮಾಡದೆ ಅದನ್ನು ನೆರವೇರಿಸಿ. ಮೂಢರ ವಿಷಯದಲ್ಲಿ ದೇವರಿಗೆ ಸಂತೋಷವಿಲ್ಲ. ನೀವು ದೇವರಿಗೆ ಹರಕೆ ಮಾಡಿಕೊಂಡದ್ದನ್ನು ಸಲ್ಲಿಸಿರಿ. ಹರಕೆ ಮಾಡಿ ಸಲ್ಲಿಸದಿರುವುದಕ್ಕಿಂತ ಹರಕೆ ಮಾಡದಿರುವುದೇ ಉತ್ತಮ. ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು. ಉಪಯೋಗವಿಲ್ಲದ ನಿಮ್ಮ ಕನಸುಗಳಾಗಲಿ ಜಂಬದ ಮಾತುಗಳಾಗಲಿ ನಿಮ್ಮನ್ನು ಕೇಡಿಗೆ ನಡೆಸದಂತೆ ನೋಡಿಕೊಳ್ಳಿರಿ; ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.

ಗಲಾತ್ಯದವರಿಗೆ 3:15-22

ಧರ್ಮಶಾಸ್ತ್ರ ಮತ್ತು ವಾಗ್ದಾನ

15 ಸಹೋದರ ಸಹೋದರಿಯರೇ, ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬನು ಇನ್ನೊಬ್ಬನೊಂದಿಗೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಯೋಚಿಸಿ. ಆ ಒಪ್ಪಂದವು ಅಧಿಕೃತವಾದಾಗ ಅದನ್ನು ರದ್ದುಮಾಡುವುದಕ್ಕಾಗಲಿ ಅಥವಾ ಅದಕ್ಕೆ ಬೇರೆ ಏನಾದರು ಸೇರಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ. 16 ದೇವರು ಅಬ್ರಹಾಮನಿಗೂ ಅವನ ಸಂತಾನದವರಿಗೂ ವಾಗ್ದಾನಗಳನ್ನು ಮಾಡಿದನು. “ನಿನ್ನ ಸಂತತಿಗಳಿಗೆ” ಎಂದು ದೇವರು ಹೇಳಲಿಲ್ಲ. ಏಕೆಂದರೆ ಅನೇಕ ಜನರು ಎಂಬರ್ಥವನ್ನು ಅದು ಕೊಡುತ್ತದೆ. ಆದರೆ ದೇವರು ಅವನಿಗೆ, “ನಿನ್ನ ಸಂತತಿಗೆ”[a] ಎಂದು ಹೇಳಿದನು. ಅದರರ್ಥವೇನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ. ಆತನೇ ಕ್ರಿಸ್ತನು. 17 ನಾನು ಹೇಳುತ್ತಿರುವುದೇನೆಂದರೆ, ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದನು. ಆದ್ದರಿಂದ ನಾನೂರಮೂವತ್ತು ವರ್ಷಗಳಾದ ನಂತರ ಬಂದ ಧರ್ಮಶಾಸ್ತ್ರವು ಅಬ್ರಹಾಮನಿಗೆ ದೇವರು ಮಾಡಿದ ವಾಗ್ದಾನವನ್ನು ರದ್ದುಪಡಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ.

18 ದೇವರು ವಾಗ್ದಾನ ಮಾಡಿದಂಥವುಗಳು ಧರ್ಮಶಾಸ್ತ್ರದ ಅನುಸರಣೆಯಿಂದ ದೊರೆಯುತ್ತವೆಯೇ? ಇಲ್ಲ! ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನಾವು ಅವುಗಳನ್ನು ಪಡೆದುಕೊಳ್ಳಬಹುದಾಗಿದ್ದರೆ ಅವುಗಳನ್ನು ನಮಗೆ ಕೊಡುವಂಥದ್ದು ದೇವರ ವಾಗ್ದಾನವಲ್ಲ. ಆದರೆ ದೇವರು ತಾನು ಮಾಡಿದ ವಾಗ್ದಾನದ ಮೂಲಕ ತನ್ನ ಆಶೀರ್ವಾದಗಳನ್ನು ಅಬ್ರಹಾಮನಿಗೆ ಉಚಿತವಾಗಿ ಕೊಟ್ಟನು.

19 ಹಾಗಾದರೆ ಧರ್ಮಶಾಸ್ತ್ರವಿದ್ದದ್ದು ಯಾಕೆ? ಜನರ ಅಪರಾಧಗಳನ್ನು ತೋರಿಸುವುದಕ್ಕಾಗಿ ಧರ್ಮಶಾಸ್ತ್ರವನ್ನು ಕೊಡಲಾಯಿತು. ಅಬ್ರಹಾಮನ ವಿಶೇಷ ಸಂತಾನವು ಬರುವ ತನಕ ಧರ್ಮಶಾಸ್ತ್ರವಿತ್ತು. ಈ ಸಂತಾನದ (ಕ್ರಿಸ್ತನು) ಬಗ್ಗೆಯೇ ದೇವರು ವಾಗ್ದಾನ ಮಾಡಿದನು. ಧರ್ಮಶಾಸ್ತ್ರವನ್ನು ದೇವದೂತರ ಮೂಲಕ ಕೊಡಲಾಯಿತು. ಜನರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕಾಗಿ ದೇವದೂತರು ಮೋಶೆಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿದರು. 20 ಒಂದೇ ಪಕ್ಷವಿದ್ದರೆ ಮಧ್ಯಸ್ತನು ಬೇಕಿಲ್ಲ. ದೇವರು ಒಬ್ಬನೇ.

ಮೋಶೆಯ ಧರ್ಮಶಾಸ್ತ್ರದ ಉದ್ದೇಶ

21 ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರೋಧವಾಗಿದೆ ಎಂಬುದು ಇದರರ್ಥವೇ? ಇಲ್ಲ! ಜೀವವನ್ನು ಕೊಡುವಂಥ ಧರ್ಮಶಾಸ್ತ್ರವಿದ್ದಿದ್ದರೆ ಅದನ್ನು ಅನುಸರಿಸುವುದರ ಮೂಲಕ ನೀತಿವಂತರಾಗಬಹುದಾಗಿತ್ತು. 22 ಆದರೆ ಇದು ಸತ್ಯವಲ್ಲ. ಏಕೆಂದರೆ ಸಮಸ್ತವೂ ಪಾಪಕ್ಕೆ ಒಳಗಾಗಿದೆ ಎಂದು ಪವಿತ್ರ ಗ್ರಂಥ ಪ್ರಕಟಿಸುತ್ತದೆ. ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರಿಗೆ ಅವರ ನಂಬಿಕೆಯ ಆಧಾರದ ಮೇಲೆ ವಾಗ್ದಾನದ ಫಲವು ದೊರೆಯಬೇಕೆಂದೇ ಪವಿತ್ರ ಗ್ರಂಥವು ಹೀಗೆ ಪ್ರಕಟಿಸಿದೆ.

ಮತ್ತಾಯ 14:22-36

ಸರೋವರದ ಮೇಲೆ ಯೇಸುವಿನ ಕಾಲುನಡಿಗೆ

(ಮಾರ್ಕ 6:45-52; ಯೋಹಾನ 6:15-21)

22 ಬಳಿಕ ಯೇಸು ತನ್ನ ಶಿಷ್ಯರಿಗೆ, “ನಾನು ಈ ಜನರನ್ನು ಬೀಳ್ಕೊಟ್ಟು ಬರುತ್ತೇನೆ. ನೀವು ಈಗಲೇ ದೋಣಿ ಹತ್ತಿಕೊಂಡು ಸರೋವರದ ಆಚೆದಡಕ್ಕೆ ಹೋಗಿರಿ” ಎಂದು ಹೇಳಿ ಕಳುಹಿಸಿದನು. 23 ಆತನು ಜನರಿಗೆ ಶುಭವನ್ನು ಕೋರಿ ಕಳುಹಿಸಿದ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ತಾನೊಬ್ಬನೇ ಬೆಟ್ಟದ ಮೇಲಕ್ಕೆ ಹೋದನು. ಆಗಲೇ ರಾತ್ರಿಯಾಗಿತ್ತು. ಅಲ್ಲಿ ಆತನೊಬ್ಬನೇ ಇದ್ದನು. 24 ಅಷ್ಟರಲ್ಲಿ ದೋಣಿಯು ಸರೋವರದ ಮೇಲೆ ಬಹಳ ದೂರ ಹೋಗಿತ್ತು. ಎದುರುಗಾಳಿಯಿಂದ ಅಲೆಗಳ ಬಡಿತಕ್ಕೆ ಸಿಕ್ಕಿಹಾಕಿಕೊಂಡಿತ್ತು.

25 ಆ ರಾತ್ರಿಯ ಕಡೇ ಜಾವದ ಸಮಯದಲ್ಲಿ ಆತನ ಶಿಷ್ಯರು ದೋಣಿಯಲ್ಲೇ ಇದ್ದರು. ಆತನು ಸರೋವರದ ನೀರಿನ ಮೇಲೆ ನಡೆಯುತ್ತಾ ಅವರ ಬಳಿಗೆ ಬರತೊಡಗಿದನು. 26 ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದ ಆತನನ್ನು ಕಂಡ ಶಿಷ್ಯರು ಭೂತವೆಂದು ಭಾವಿಸಿ ಭಯದಿಂದ ಕೂಗಿಕೊಂಡರು.

27 ಕೂಡಲೇ ಯೇಸು, “ಚಿಂತಿಸಬೇಡಿ! ನಾನೇ! ಭಯಪಡಬೇಡಿ” ಎಂದು ಅವರೊಂದಿಗೆ ಮಾತಾಡಿದನು.

28 ಪೇತ್ರನು, “ಪ್ರಭುವೇ, ನಿಜವಾಗಿಯೂ ನೀನೇ ಆಗಿದ್ದರೆ, ನೀರಿನ ಮೇಲೆ ನಡೆದುಕೊಂಡು ನಿನ್ನ ಬಳಿಗೆ ಬರಲು ನನಗೆ ಆಜ್ಞಾಪಿಸು” ಎಂದನು.

29 ಯೇಸು, “ಪೇತ್ರನೇ, ಬಾ” ಅಂದನು.

ಕೂಡಲೆ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ನೀರಿನ ಮೇಲೆ ನಡೆದನು. 30 ಆದರೆ ಅವನು ಗಾಳಿಯನ್ನು ಮತ್ತು ಅಲೆಗಳನ್ನು ನೋಡಿ ಭಯಪಟ್ಟದ್ದರಿಂದ ನೀರಿನಲ್ಲಿ ಮುಳುಗತೊಡಗಿ, “ಪ್ರಭುವೇ, ನನ್ನನ್ನು ರಕ್ಷಿಸು” ಎಂದು ಕೂಗಿಕೊಂಡನು.

31 ಯೇಸು ತನ್ನ ಕೈ ಚಾಚಿ ಪೇತ್ರನನ್ನು ಹಿಡಿದುಕೊಂಡನು. ಯೇಸು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದನು.

32 ಪೇತ್ರನು ಮತ್ತು ಯೇಸು ದೋಣಿ ಹತ್ತಿದ ಮೇಲೆ ಗಾಳಿ ಶಾಂತವಾಯಿತು. 33 ದೋಣಿಯಲ್ಲಿದ್ದ ಶಿಷ್ಯರು ಯೇಸುವನ್ನು ಆರಾಧಿಸಿ, “ನೀನು ನಿಜವಾಗಿಯೂ ದೇವರ ಮಗನು” ಎಂದು ಹೇಳಿದರು.

ಅನೇಕ ರೋಗಿಗಳಿಗೆ ಯೇಸುವಿನಿಂದ ಸ್ವಸ್ಥತೆ

(ಮಾರ್ಕ 6:53-56)

34 ಅವರು ಸರೋವರವನ್ನು ದಾಟಿ ಗೆನೆಸರೇತ್ ದಡಕ್ಕೆ ಬಂದರು. 35 ಅಲ್ಲಿದ್ದ ಜನರು ಯೇಸುವನ್ನು ನೋಡಿದರು. ಆತನು ಯಾರೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯೇಸು ಬಂದಿದ್ದಾನೆ ಎಂದು ತಿಳಿಸಿದರು. ಜನರು ರೋಗಗಳಿಂದ ಬೇನೆಗಳಿಂದ ನರಳುತ್ತಿದ್ದವರನ್ನೆಲ್ಲ ಆತನ ಬಳಿಗೆ ತಂದರು. 36 ಆತನ ಮೇಲಂಗಿಯನ್ನಾದರೂ ಮುಟ್ಟಿ ಗುಣಹೊಂದಲು ಅವಕಾಶಕೊಡಬೇಕೆಂದು ಅವರು ಬೇಡಿಕೊಂಡರು. ಆತನ ಮೇಲಂಗಿಯನ್ನು ಮುಟ್ಟಿದ ಜನರೆಲ್ಲರೂ ಗುಣಹೊಂದಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International