Add parallel Print Page Options

ಯೇಸುವನ್ನು ಬಿಡಿಸಲು ಪಿಲಾತನ ವಿಫಲ ಯತ್ನ

(ಮಾರ್ಕ 15:6-15; ಲೂಕ 23:13-25; ಯೋಹಾನ 18:39–19:16)

15 ಪ್ರತಿವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸುವ ಕೈದಿಗಳಲ್ಲಿ ಒಬ್ಬನನ್ನು ರಾಜ್ಯಪಾಲನು ಬಿಡುಗಡೆ ಮಾಡಬೇಕೆಂಬುದು ಅಂದಿನ ಪದ್ಧತಿಯಾಗಿತ್ತು. 16 ಆ ಕಾಲದಲ್ಲಿ ಪ್ರಸಿದ್ಧನಾದ ಕೈದಿಯೊಬ್ಬನು ಸೆರೆಮನೆಯಲ್ಲಿದ್ದನು. ಅವನ ಹೆಸರು ಬರಬ್ಬ.[a]

17 ಜನರೆಲ್ಲರೂ ಪಿಲಾತನ ಭವನದ ಬಳಿ ನೆರೆದಿದ್ದರು. ಪಿಲಾತನು ಅವರಿಗೆ, “ನಾನು ನಿಮಗಾಗಿ ಯಾವ ಕೈದಿಯನ್ನು ಬಿಡುಗಡೆ ಮಾಡಲಿ, ಬರಬ್ಬನನ್ನೋ ಅಥವಾ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು. 18 ಜನರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ಗೊತ್ತಿತ್ತು.

19 ಪಿಲಾತನು ನ್ಯಾಯಸ್ಥಾನದಲ್ಲಿ ಕುಳಿತುಕೊಂಡಿದ್ದಾಗ ಅವನ ಪತ್ನಿಯು ಒಂದು ಸಂದೇಶವನ್ನು ಕಳುಹಿಸಿದ್ದಳು. “ಆ ಮನುಷ್ಯನಿಗೆ ಏನನ್ನೂ ಮಾಡಬೇಡ. ಅವನು ತಪ್ಪಿತಸ್ಥನಲ್ಲ. ಆತನ ನಿಮಿತ್ತ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ” ಎಂಬುದೇ ಆ ಸಂದೇಶ.

20 ಆದರೆ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಬರಬ್ಬನನ್ನು ಬಿಡುಗಡೆ ಮಾಡಬೇಕೆಂದೂ ಯೇಸುವನ್ನು ಕೊಲ್ಲಿಸಬೇಕೆಂದೂ ಕೇಳಿಕೊಳ್ಳಲು ಜನರಿಗೆ ಹೇಳಿಕೊಟ್ಟರು.

21 ಪಿಲಾತನು, “ನಿಮಗಾಗಿ ನಾನು ಯಾರನ್ನು ಬಿಡುಗಡೆ ಮಾಡಲಿ? ಬರಬ್ಬನನ್ನೋ? ಯೇಸುವನ್ನೋ?” ಎಂದು ಕೇಳಿದನು.

ಜನರು “ಬರಬ್ಬನನ್ನು!” ಎಂದು ಉತ್ತರಕೊಟ್ಟರು.

22 ಪಿಲಾತನು, “ಹಾಗಾದರೆ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಿದನು.

ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಉತ್ತರಕೊಟ್ಟರು.

23 ಪಿಲಾತನು, “ಅವನನ್ನು ಶಿಲುಬೆಗೇರಿಸೆಂದು ನೀವು ಕೇಳುವುದೇಕೆ? ಅವನೇನು ತಪ್ಪುಮಾಡಿದ್ದಾನೆ?” ಎಂದು ಕೇಳಿದನು.

ಆದರೆ ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಕೂಗಿದರು.

24 ಜನರ ಮನಸ್ಸನ್ನು ಬದಲಾಯಿಸಲು ತನಗೆ ಸಾಧ್ಯವಿಲ್ಲವೆಂದೂ ಜನರು ಗಲಭೆ ಆರಂಭಿಸಲಿದ್ದಾರೆಂದೂ ತಿಳಿದುಕೊಂಡ ಪಿಲಾತನು ಸ್ವಲ್ಪ ನೀರನ್ನು ತೆಗೆದುಕೊಂಡು ಜನರೆಲ್ಲರ ಎದುರಿನಲ್ಲಿ ತನ್ನ ಕೈಗಳನ್ನು ತೊಳೆದುಕೊಳ್ಳುತ್ತಾ, “ಈ ಮನುಷ್ಯನ ಸಾವಿಗೆ ನಾನು ಜವಾಬ್ದಾರನಲ್ಲ. ಆತನನ್ನು ಶಿಲುಬೆಗೇರಿಸುತ್ತಿರುವವರು ನೀವೇ!” ಎಂದು ಹೇಳಿದನು.

25 ಜನರೆಲ್ಲರೂ, “ಅವನ ಸಾವಿಗೆ ನಾವೇ ಜವಾಬ್ದಾರರು. ಅವನ ಸಾವಿಗೆ ಏನಾದರೂ ದಂಡನೆಯಿದ್ದರೆ ಅದನ್ನು ನಾವು ಮತ್ತು ನಮ್ಮ ಮಕ್ಕಳು ಅನುಭವಿಸುತ್ತೇವೆ” ಎಂದು ಉತ್ತರಕೊಟ್ಟರು.

26 ಆಗ ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊರಡೆಗಳಿಂದ ಹೊಡೆಯಿಸಿ ಶಿಲುಬೆಗೇರಿಸಲು ಸೈನಿಕರಿಗೆ ಒಪ್ಪಿಸಿಬಿಟ್ಟನು.

Read full chapter

Footnotes

  1. 27:16 ಬರಬ್ಬ ಕೆಲವು ಗ್ರೀಕ್ ಪ್ರತಿಗಳಲ್ಲಿ “ಏಸು ಬರಬ್ಬ” ಎಂದಿದೆ.