Add parallel Print Page Options

ರಾಜನಂತೆ ಜೆರುಸಲೇಮಿಗೆ ಪ್ರವೇಶ

(ಮತ್ತಾಯ 21:1-11; ಲೂಕ 19:28-40; ಯೋಹಾನ 12:12-19)

11 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನ ಸಮೀಪಕ್ಕೆ ಬಂದಿದ್ದರು. ಅವರು ಆಲಿವ್ ಗುಡ್ಡದ ಬಳಿಯಿರುವ ಬೆತ್ಛಗೆ ಹಾಗೂ ಬೆಥಾನಿ ಎಂಬ ಊರುಗಳಿಗೆ ಬಂದಾಗ ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ಅಲ್ಲಿ ಕಾಣುತ್ತಿರುವ ಊರಿಗೆ ಹೋಗಿರಿ. ನೀವು ಅದನ್ನು ಪ್ರವೇಶಿಸಿದಾಗ, ಯಾರೂ ಸವಾರಿ ಮಾಡಿಲ್ಲದ ಒಂದು ಕತ್ತೆ ಮರಿಯನ್ನು ಅಲ್ಲಿ ಕಟ್ಟಿರುವುದನ್ನು ಕಾಣುವಿರಿ. ಆ ಕತ್ತೆಯನ್ನು ಬಿಚ್ಚಿಕೊಂಡು, ನನ್ನ ಬಳಿಗೆ ತನ್ನಿರಿ. ಯಾವನಾದರೂ ‘ಆ ಕತ್ತೆಯನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ’ ಎಂದು ನಿಮ್ಮನ್ನು ಕೇಳಿದರೆ, ‘ಒಡೆಯನಿಗೆ ಈ ಕತ್ತೆ ಬೇಕಾಗಿದೆ. ಆತನು ಇದನ್ನು ಬೇಗನೆ ಕಳುಹಿಸಿಕೊಡುವನು’ ಎಂದು ಅವನಿಗೆ ಹೇಳಿರಿ” ಎಂದನು.

ಶಿಷ್ಯರು ಊರಿನೊಳಗೆ ಹೋದಾಗ ರಸ್ತೆಯಲ್ಲಿನ ಒಂದು ಮನೆಯ ಬಾಗಿಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕತ್ತೆಮರಿಯೊಂದನ್ನು ಕಂಡರು. ಶಿಷ್ಯರು ಹೋಗಿ ಆ ಕತ್ತೆಯನ್ನು ಬಿಚ್ಚಿದಾಗ, ಅಲ್ಲಿ ನಿಂತಿದ್ದ ಕೆಲವು ಜನರು, “ನೀವು ಮಾಡುತ್ತಿರುವುದೇನು? ಆ ಕತ್ತೆಯನ್ನು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದರು. ಯೇಸು ತಮಗೆ ಹೇಳಿದ ರೀತಿಯಲ್ಲಿಯೇ ಶಿಷ್ಯರು ಉತ್ತರಿಸಿದರು. ಆಗ ಜನರು ಆ ಕತ್ತೆಯನ್ನು ಶಿಷ್ಯರಿಗೆ ಬಿಟ್ಟುಕೊಟ್ಟರು.

ಶಿಷ್ಯರು ಕತ್ತೆಯನ್ನು ಯೇಸುವಿನ ಬಳಿಗೆ ತಂದು ತಮ್ಮ ಹೊದಿಕೆಗಳನ್ನು ಅದರ ಮೇಲೆ ಹಾಸಿದರು. ಆಗ ಯೇಸು ಅದರ ಮೇಲೆ ಕುಳಿತನು. ಅನೇಕ ಜನರು ಯೇಸುವಿಗಾಗಿ ರಸ್ತೆಯ ಮೇಲೆ ತಮ್ಮ ಹೊದಿಕೆಗಳನ್ನು ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಲೆಗಳನ್ನು ಕೊಯ್ದುತಂದು ರಸ್ತೆಯ ಮೇಲೆ ಹರಡಿದರು. ಕೆಲವು ಜನರು ಯೇಸುವಿನ ಮುಂದೆ ಹೋಗುತ್ತಿದ್ದರು. ಇತರ ಜನರು ಆತನ ಹಿಂದೆ ಹೋಗುತ್ತಿದ್ದರು. ಜನರೆಲ್ಲರೂ,

“‘ಆತನನ್ನು ಕೊಂಡಾಡಿರಿ![a]
    ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದವಾಗಲಿ.’(A)

10 “ನಮ್ಮ ಪಿತೃವಾದ ದಾವೀದನ
    ರಾಜ್ಯವು ಬರಲಿ!
ಮೇಲೋಕಗಳಲ್ಲಿ ದೇವರಿಗೆ ಜಯವಾಗಲಿ” ಎಂದು ಕೂಗಿದರು.

11 ಯೇಸು ಜೆರುಸಲೇಮನ್ನು ತಲುಪಿದಾಗ, ದೇವಾಲಯಕ್ಕೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನೂ ನೋಡಿದನು. ಆದರೆ ಆಗಲೇ ತಡವಾಗಿತ್ತು. ಆದ್ದರಿಂದ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಬೆಥಾನಿಯಕ್ಕೆ ಹೋದನು.

Read full chapter

Footnotes

  1. 11:9 ಕೊಂಡಾಡಿರಿ ಮೂಲಗ್ರಂಥದಲ್ಲಿ ಹೊಸನ್ನ ಎಂಬ ಹೀಬ್ರೂ ಪದವನ್ನು ಬಳಸಲಾಗಿದೆ. ಈ ಪದದ ಅರ್ಥ “ರಕ್ಷಿಸು.” ಇದನ್ನು “ಕೊಂಡಾಡಿರಿ” ಎಂಬರ್ಥದಲ್ಲಿ ಬಳಸಲಾಗುತ್ತಿತ್ತು.