ಮತ್ತಾಯ 27:45-56
Kannada Holy Bible: Easy-to-Read Version
ಯೇಸುವಿನ ಮರಣ
(ಮಾರ್ಕ 15:33-41; ಲೂಕ 23:44-49; ಯೋಹಾನ 19:28-30)
45 ಅಂದು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯವರೆಗೆ ದೇಶದಲ್ಲೆಲ್ಲಾ ಕತ್ತಲೆ ಕವಿಯಿತು. 46 ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸು, “ಏಲೀ, ಏಲೀ, ಲಮಾ ಸಬಕ್ತಾನಿ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದನು. ಹೀಗೆಂದರೆ, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟುಬಿಟ್ಟೆ?”(A) ಎಂದರ್ಥ.
47 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದರು.
48 ಆ ಜನರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು, ಅದರಲ್ಲಿ ಹುಳಿರಸವನ್ನು ತುಂಬಿಸಿ, ಅದನ್ನು ಒಂದು ಕೋಲಿಗೆ ಕಟ್ಟಿ ಆ ಕೋಲಿನಿಂದ ಸ್ಪಂಜನ್ನು ಯೇಸುವಿಗೆ ಕುಡಿಯಲು ಕೊಟ್ಟನು. 49 ಆದರೆ ಇತರ ಜನರು, “ಅವನ ಬಗ್ಗೆ ಚಿಂತಿಸಬೇಡ, ಅವನನ್ನು ರಕ್ಷಿಸಲು ಎಲೀಯನು ಬರಬಹುದೇನೋ ನೋಡೋಣ” ಎಂದು ಹೇಳಿದರು.
50 ಬಳಿಕ ಯೇಸು ಮತ್ತೆ ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಪ್ರಾಣಬಿಟ್ಟನು.
51 ಆಗ ದೇವಾಲಯದ ತೆರೆಯು ಮೇಲ್ಗಡೆಯಿಂದ ತಳಭಾಗದವರೆಗೂ ಹರಿದು ಎರಡು ಭಾಗವಾಯಿತು. ಭೂಮಿಯು ನಡುಗಿತು. ಬಂಡೆಗಳು ಒಡೆದುಹೋದವು. 52 ಸಮಾಧಿಗಳು ತೆರೆದವು, ಸತ್ತುಹೋಗಿದ್ದ ಅನೇಕ ದೇವಜನರು ಸಮಾಧಿಗಳೊಳಗಿಂದ ಜೀವಂತವಾಗಿ ಮೇಲೆದ್ದರು. 53 ಯೇಸು ಪುನರುತ್ಥಾನ ಹೊಂದಿದ ಬಳಿಕ, ಅವರು ಪವಿತ್ರ ನಗರವಾದ ಜೆರುಸಲೇಮಿಗೆ ಹೋದರು. ಜನರು ಅವರನ್ನು ಕಣ್ಣಾರೆ ಕಂಡರು.
54 ಯೇಸುವನ್ನು ಕಾಯುತ್ತಿದ್ದ ಸೇನಾಧಿಪತಿ ಮತ್ತು ಸೈನಿಕರು ಭೂಕಂಪವನ್ನು ಮತ್ತು ನಡೆದದ್ದನ್ನು ಕಂಡು ಬಹಳವಾಗಿ ಹೆದರಿ, “ಈತನು ನಿಜವಾಗಿಯೂ ದೇವರ ಮಗನಾಗಿದ್ದನು!” ಎಂದು ಹೇಳಿದರು.
55 ಯೇಸುವಿನ ಸೇವೆ ಮಾಡುತ್ತಾ ಗಲಿಲಾಯದಿಂದ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಅನೇಕ ಸ್ತ್ರೀಯರು ದೂರದಲ್ಲಿ ನೋಡುತ್ತಾ ನಿಂತಿದ್ದರು. 56 ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೇಫನ ತಾಯಿಯಾದ ಮರಿಯಳು, ಹಾಗೂ ಯೋಹಾನ ಮತ್ತು ಯಾಕೋಬನ ತಾಯಿ ಅಲ್ಲಿದ್ದರು.
Read full chapterKannada Holy Bible: Easy-to-Read Version. All rights reserved. © 1997 Bible League International