Add parallel Print Page Options

ಬಿತ್ತಲ್ಪಟ್ಟ ಬೀಜದ ಕುರಿತು ಯೇಸು ಕೊಟ್ಟ ವಿವರಣೆ

(ಮತ್ತಾಯ 13:18-23; ಲೂಕ 8:11-15)

13 ನಂತರ ಯೇಸು ತನ್ನ ಶಿಷ್ಯರಿಗೆ, “ನಿಮಗೆ ಈ ಸಾಮ್ಯ ಅರ್ಥವಾಯಿತೇ? ನೀವು ಇದನ್ನೇ ಅರ್ಥಮಾಡಿಕೊಳ್ಳದಿದ್ದರೆ ಬೇರೆ ಯಾವ ಸಾಮ್ಯವನ್ನು ಅರ್ಥಮಾಡಿಕೊಳ್ಳುವಿರಿ? 14 ರೈತನು ದೇವರ ವಾಕ್ಯವನ್ನು ಬಿತ್ತುವವನಿಗೆ ಹೋಲಿಕೆಯಾಗಿದ್ದಾನೆ. 15 ಕೆಲವು ಜನರು ದೇವರ ವಾಕ್ಯವನ್ನು ಕೇಳುತ್ತಾರೆ. ಆದರೆ ಅವರಲ್ಲಿ ಬಿತ್ತಿದ ವಾಕ್ಯವನ್ನು ಸೈತಾನನು ಬಂದು ತೆಗೆದುಬಿಡುತ್ತಾನೆ. ಈ ಜನರೇ ದಾರಿಯ ಮಗ್ಗುಲಾಗಿದ್ದಾರೆ.

16 “ಇನ್ನು ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ಸಂತೋಷದಿಂದ ಅದನ್ನು ಬೇಗನೆ ಸ್ವೀಕರಿಸಿಕೊಳ್ಳುತ್ತಾರೆ. 17 ಆದರೆ ಆ ವಾಕ್ಯವು ತಮ್ಮಲ್ಲಿ ಆಳವಾಗಿ ಬೇರೂರಲು ಅವರು ಅವಕಾಶ ನೀಡುವುದಿಲ್ಲ. ಅವರು ಆ ವಾಕ್ಯವನ್ನು ಸ್ವಲ್ಪಕಾಲ ಮಾತ್ರ ಸ್ವೀಕರಿಸಿಕೊಂಡಿರುತ್ತಾರೆ. ಆ ವಾಕ್ಯದ ದೆಸೆಯಿಂದ ತೊಂದರೆಯಾಗಲಿ ಹಿಂಸೆಯಾಗಲಿ ಬಂದಾಗ ಅವರು ಅದನ್ನು ಬಹುಬೇಗನೆ ತ್ಯಜಿಸುತ್ತಾರೆ. ಇವರೇ ಬೀಜಬಿದ್ದ ಬಂಡೆಯ ನೆಲವಾಗಿದ್ದಾರೆ.

18 “ಇನ್ನು ಕೆಲವರು ಮುಳ್ಳಿನ ಗಿಡಗಳ ನೆಲದಂತಿರುವರು. ಈ ಜನರು ವಾಕ್ಯವನ್ನು ಕೇಳುತ್ತಾರೆ. 19 ಆದರೆ ಈ ಜೀವಿತದ ಚಿಂತೆಗಳು, ಹಣದ ಮೇಲಿನ ವ್ಯಾಮೋಹ ಮತ್ತು ಇತರ ಎಲ್ಲಾ ವಿಧವಾದ ಆಸೆಗಳು ಅವರಲ್ಲಿ ಬಿದ್ದ ವಾಕ್ಯಕ್ಕೆ ಬೆಳೆಯಲು ಅವಕಾಶ ಕೊಡುವುದಿಲ್ಲ. ಆದ್ದರಿಂದ ಅವರ ಜೀವಿತದಲ್ಲಿ ವಾಕ್ಯವು ಫಲ ಫಲಿಸುವುದಿಲ್ಲ.

20 “ಇನ್ನು ಕೆಲವರು ಬೀಜಬಿದ್ದ ಒಳ್ಳೆಯ ನೆಲದಂತಿದ್ದಾರೆ. ಅವರು ವಾಕ್ಯವನ್ನು ಸ್ವೀಕರಿಸಿಕೊಂಡು ಫಲವನ್ನು ಫಲಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೂವತ್ತರಷ್ಟು ಹೆಚ್ಚಾಗಿ, ಇನ್ನು ಕೆಲವು ಸಂದರ್ಭಗಳಲ್ಲಿ ಅರವತ್ತರಷ್ಟು ಹೆಚ್ಚಾಗಿ, ಮತ್ತೆ ಕೆಲವು ಸಂಧರ್ಭಗಳಲ್ಲಿ ನೂರರಷ್ಟು ಹೆಚ್ಚಾಗಿ ಫಲ ಫಲಿಸುತ್ತಾರೆ” ಎಂದು ಹೇಳಿದನು.

Read full chapter