Add parallel Print Page Options

ಯೇಸುವನ್ನು ವಂಚಿಸಲು ಯೆಹೂದ್ಯನಾಯಕರ ಪ್ರಯತ್ನ

(ಮತ್ತಾಯ 22:15-22; ಲೂಕ 20:20-26)

13 ಅನಂತರ ಯೆಹೂದ್ಯನಾಯಕರು ಕೆಲವು ಫರಿಸಾಯರನ್ನು ಹಾಗೂ ಹೆರೋದ್ಯರ ಗುಂಪಿನಿಂದ ಕೆಲವರನ್ನು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲು ಕಳುಹಿಸಿದರು. 14 ಫರಿಸಾಯರು ಮತ್ತು ಹೆರೋದ್ಯರು ಯೇಸುವಿನ ಬಳಿಗೆ ಬಂದು, ಆತನಿಗೆ, “ಉಪದೇಶಕನೇ, ನೀನು ಯಥಾರ್ಥನೆಂಬುದು ನಮಗೆ ತಿಳಿದಿದೆ. ನಿನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬುದರ ಬಗ್ಗೆ ನಿನಗೆ ಹೆದರಿಕೆಯಿಲ್ಲ. ಜನರೆಲ್ಲರೂ ನಿನಗೆ ಒಂದೇ. ಮತ್ತು ನೀನು ದೇವರ ಮಾರ್ಗವನ್ನು ಕುರಿತು ಸತ್ಯವನ್ನೇ ಉಪದೇಶಿಸುತ್ತಿರುವೆ ಎಂದು ನಮಗೆ ಗೊತ್ತಿದೆ. ಆದ್ದರಿಂದ ನಮಗೆ ಹೇಳು: ಸೀಸರನಿಗೆ ತೆರಿಗೆ ಕೊಡುವುದು ಸರಿಯೋ? ಅಥವಾ ತಪ್ಪೋ? ನಾವು ತೆರಿಗೆಗಳನ್ನು ಕೊಡಬೇಕೇ ಅಥವಾ ಕೊಡಬಾರದೇ?” ಎಂದರು.

15 ಈ ಜನರು ನಿಜವಾಗಿಯೂ ತನ್ನನ್ನು ವಂಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ನನ್ನ ಮಾತಿನಲ್ಲಿ ತಪ್ಪನ್ನು ಕಂಡುಹಿಡಿಯಲು ಏಕೆ ಪ್ರಯತ್ನಿಸುತ್ತೀರಿ? ನನಗೆ ಒಂದು ಬೆಳ್ಳಿನಾಣ್ಯವನ್ನು[a] ಕೊಡಿರಿ, ನಾನು ಅದನ್ನು ನೋಡಬೇಕು” ಎಂದನು. 16 ಅವರು ಆತನಿಗೆ ಒಂದು ನಾಣ್ಯವನ್ನು ಕೊಟ್ಟರು. ಯೇಸು ಅವರಿಗೆ, “ನಾಣ್ಯದ ಮೇಲೆ ಯಾರ ಚಿತ್ರವಿದೆ? ಮತ್ತು ಅದರ ಮೇಲೆ ಯಾರ ಹೆಸರಿದೆ?” ಎಂದು ಕೇಳಿದನು. ಅವರು, “ಇದು ಸೀಸರನ ಚಿತ್ರ ಮತ್ತು ಸೀಸರನ ಹೆಸರು” ಎಂದು ಉತ್ತರಿಸಿದರು.

17 ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿ. ದೇವರದನ್ನು ದೇವರಿಗೆ ಕೊಡಿ” ಎಂದು ಹೇಳಿದನು. ಯೇಸು ಹೇಳಿದ್ದನ್ನು ಕೇಳಿ ಅವರು ಅತ್ಯಾಶ್ಚರ್ಯಪಟ್ಟರು.

Read full chapter

Footnotes

  1. 12:15 ಬೆಳ್ಳಿನಾಣ್ಯ ಮೂಲಭಾಷೆಯಲ್ಲಿ ದಿನಾರಿ. ರೋಮ್ ಸಾಮ್ರಾಜ್ಯದ ಬೆಳ್ಳಿನಾಣ್ಯ.