Revised Common Lectionary (Semicontinuous)
148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
2 ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
3 ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
4 ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
5 ಅವು ಯೆಹೋವನ ಹೆಸರನ್ನು ಸ್ತುತಿಸಲಿ.
ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
6 ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
7 ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
8 ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
9 ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
ಆತನ ಭಕ್ತರನ್ನು ಜನರು ಹೊಗಳುವರು.
ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
ಯೆಹೋವನಿಗೆ ಸ್ತೋತ್ರವಾಗಲಿ!
15 ಯೆಹೋವನು ಹೀಗೆನ್ನುತ್ತಾನೆ:
“ರಾಮದಲ್ಲಿ ಅತಿ ದುಃಖದಿಂದ ಗೋಳಾಡುವ
ಒಂದು ಧ್ವನಿಯು ಕೇಳಿಬರುತ್ತದೆ.
ರಾಹೇಲಳು[a] ತನ್ನ ಮಕ್ಕಳಿಗಾಗಿ ಗೋಳಾಡುವಳು.
ಅವಳ ಮಕ್ಕಳು ಸತ್ತುಹೋದುದರಿಂದ
ರಾಹೇಲಳು ಸಮಾಧಾನ ಹೊಂದುವದಕ್ಕೆ ಒಪ್ಪಲಾರಳು.”
16 ಆದರೆ ಯೆಹೋವನು, “ಅಳುವದನ್ನು ನಿಲ್ಲಿಸು.
ಕಣ್ಣಿನಲ್ಲಿ ನೀರು ತುಂಬಿಕೊಳ್ಳಬೇಡ.
ನಿನ್ನ ಕೆಲಸಕ್ಕಾಗಿ ನಿನಗೆ ಪ್ರತಿಫಲ ಸಿಕ್ಕುವುದು” ಎಂದು ಹೇಳುವನು.
ಇದು ಯೆಹೋವನ ನುಡಿ.
“ಇಸ್ರೇಲರು ತಮ್ಮ ಶತ್ರುಗಳ ಪ್ರದೇಶದಿಂದ ಹಿಂತಿರುಗಿ ಬರುವರು.
17 ಆದ್ದರಿಂದ ಇಸ್ರೇಲೇ, ನಿನ್ನ ಮಕ್ಕಳು
ತಮ್ಮ ದೇಶಕ್ಕೆ ಹಿಂತಿರುಗಿ ಬರುವರೆಂಬ ನಿರೀಕ್ಷೆ ನಿನಗಿರಲಿ.”
ಇದು ಯೆಹೋವನ ನುಡಿ.
ಯೇಸುವಿನೊಡನೆ ಈಜಿಪ್ಟಿಗೆ ಪಲಾಯನ
13 ಜ್ಞಾನಿಗಳು ಹೊರಟುಹೋದ ನಂತರ ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎದ್ದೇಳು! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ಹೆರೋದನು ಮಗುವನ್ನು ಹುಡುಕಲು ಪ್ರಾರಂಭಿಸುವನು. ಅವನು ಮಗುವನ್ನು ಕೊಲ್ಲಬೇಕೆಂದಿದ್ದಾನೆ. ‘ಅಪಾಯವಿಲ್ಲ’ ಎಂದು ನಾನು ನಿನಗೆ ಹೇಳುವ ತನಕ ನೀನು ಈಜಿಪ್ಟಿನಲ್ಲೇ ಇರು” ಎಂದು ಹೇಳಿದನು.
14 ಕೂಡಲೇ, ಯೋಸೇಫನು ಎದ್ದು ಮಗು ಮತ್ತು ಅದರ ತಾಯಿಯೊಂದಿಗೆ ಈಜಿಪ್ಟಿಗೆ ರಾತ್ರಿ ಸಮಯದಲ್ಲಿ ಹೊರಟುಹೋದನು. 15 ಹೆರೋದನು ಸಾಯುವ ತನಕ ಯೋಸೇಫನು ಈಜಿಪ್ಟಿನಲ್ಲೇ ಇದ್ದನು. “ನಾನು ನನ್ನ ಮಗನನ್ನು ಈಜಿಪ್ಟಿನೊಳಗಿಂದ ಕರೆದೆ”(A) ಎಂದು ಪ್ರವಾದಿಯ ಮೂಲಕ ಪ್ರಭು ಹೇಳಿದ್ದ ಮಾತು ಇದರಿಂದ ನೆರವೇರಿತು.
ಬೆತ್ಲೆಹೇಮಿನಲ್ಲಿ ಗಂಡುಮಕ್ಕಳ ಸಂಹಾರ
16 ಜ್ಞಾನಿಗಳು ತನಗೆ ಮೋಸಮಾಡಿದರೆಂಬುದು ತಿಳಿದಾಗ ಹೆರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದ ಸಮಯವನ್ನು ಹೆರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಆದ್ದರಿಂದ ಹೆರೋದನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಚಿಕ್ಕವರಾದ ಗಂಡುಮಕ್ಕಳನ್ನೆಲ್ಲಾ ಕೊಲ್ಲಬೇಕೆಂದು ಆಜ್ಞಾಪಿಸಿದನು. 17 ಹೀಗೆ ದೇವರು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಈ ಮಾತು ನೆರವೇರಿತು:
18 “ರಾಮದಲ್ಲಿ ಬೊಬ್ಬೆಯು ಕೇಳಿಸಿತು.
ಅದು ಬಹು ಗೋಳಾಟದ ಮತ್ತು ದುಃಖದ ಬೊಬ್ಬೆಯಾಗಿತ್ತು.
ರಾಹೇಲಳು ತನ್ನ ಮಕ್ಕಳಿಗಾಗಿ ಅಳುವಳು;
ಅವರು ಸತ್ತುಹೋದದ್ದಕ್ಕಾಗಿ ಸಮಾಧಾನ ಹೊಂದಲೊಲ್ಲಳು.”(B)
Kannada Holy Bible: Easy-to-Read Version. All rights reserved. © 1997 Bible League International