Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 61:10-62:3

ದೇವರ ಸೇವಕನು ರಕ್ಷಣೆಯನ್ನು ತರುತ್ತಾನೆ

10 ಯೆಹೋವನು ನನ್ನನ್ನು ಸಂತೋಷಭರಿತನನ್ನಾಗಿ ಮಾಡುತ್ತಾನೆ.
    ನನ್ನ ಸಂಪೂರ್ಣ ವ್ಯಕ್ತಿತ್ವವು ನನ್ನ ದೇವರಲ್ಲಿ ಸಂತೋಷಿಸುತ್ತದೆ.
ಯೆಹೋವನು ರಕ್ಷಣೆಯೆಂಬ ವಸ್ತ್ರವನ್ನು ನನಗೆ ತೊಡಿಸಿದ್ದಾನೆ.
    ಮದುವೆಯಲ್ಲಿ ಮದುಮಗನು ಧರಿಸಿಕೊಳ್ಳುವ ಬಟ್ಟೆಯಂತೆ ಅದು ನಯವಾಗಿದೆ.
ಯೆಹೋವನು ನನಗೆ ನೀತಿಯೆಂಬ ನಿಲುವಂಗಿಯನ್ನು ತೊಡಿಸಿರುತ್ತಾನೆ.
    ಅದು ಮದುಮಗಳು ಮದುವೆಯಲ್ಲಿ ಧರಿಸಿಕೊಳ್ಳುವ ಬಟ್ಟೆಯಂತಿದೆ.
11 ಭೂಮಿಯು ಸಸಿಗಳನ್ನು ಬೆಳೆಸುತ್ತದೆ.
    ಜನರು ತೋಟದಲ್ಲಿ ಬೀಜ ಬಿತ್ತುವರು.
    ತೋಟವು ಬೀಜವನ್ನು ಬೆಳೆಸುತ್ತದೆ.
ಅದೇ ರೀತಿಯಲ್ಲಿ ಯೆಹೋವನು ಎಲ್ಲಾ ಜನಾಂಗಗಳಲ್ಲಿ ನೀತಿಯನ್ನೂ ಸ್ತೋತ್ರವನ್ನೂ ಬೆಳೆಸುತ್ತಾನೆ.

ನೀತಿಯುತವಾದ ಹೊಸ ಜೆರುಸಲೇಮ್

62 ಚೀಯೋನನ್ನು ನಾನು ಪ್ರೀತಿಸುತ್ತೇನೆ.
    ಆಕೆಯ ವಿಷಯವಾಗಿ ನಾನು ಮಾತಾಡುತ್ತಲೇ ಇರುವೆನು.
ನಾನು ಜೆರುಸಲೇಮನ್ನು ಪ್ರೀತಿಸುತ್ತೇನೆ.
    ಅದರ ವಿಷಯವಾಗಿ ಮಾತನಾಡುವದನ್ನು ನಾನು ನಿಲ್ಲಿಸುವದಿಲ್ಲ.
ಧರ್ಮವು ಬೆಳಕಿನಂತೆ ಪ್ರಕಾಶಿಸುವ ತನಕ ನಾನು ಮಾತನಾಡುವೆನು.
    ರಕ್ಷಣೆಯು ಬೆಂಕಿಯಂತೆ ಪ್ರಜ್ವಲಿಸುವವರೆಗೆ ನಾನು ಮಾತನಾಡುವೆನು.
ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು.
    ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು.
ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು;
    ಯೆಹೋವನು ತಾನೇ ಆ ಹೆಸರನ್ನು ಕೊಡುವನು.
ಯೆಹೋವನು ನಿನ್ನಲ್ಲಿ ಬಹಳವಾಗಿ ಹೆಚ್ಚಳಪಡುವನು.
    ನೀನು ಆತನ ಕೈಯಲ್ಲಿ ಒಂದು ಸುಂದರವಾದ ಕಿರೀಟದಂತಿರುವೆ.

ಕೀರ್ತನೆಗಳು 148

148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
    ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
    ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
    ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
ಅವು ಯೆಹೋವನ ಹೆಸರನ್ನು ಸ್ತುತಿಸಲಿ.
    ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
    ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
    ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
    ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
    ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
    ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
    ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
    ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
    ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
    ಆತನ ಭಕ್ತರನ್ನು ಜನರು ಹೊಗಳುವರು.
    ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
    ಯೆಹೋವನಿಗೆ ಸ್ತೋತ್ರವಾಗಲಿ!

ಗಲಾತ್ಯದವರಿಗೆ 4:4-7

ಆದರೆ ತಕ್ಕ ಕಾಲ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿದನು. ದೇವರ ಮಗನು ಸ್ತ್ರೀಯಲ್ಲಿ ಜನಿಸಿ, ಧರ್ಮಶಾಸ್ತ್ರದ ಅಧೀನದಲ್ಲಿ ಜೀವಿಸಿದನು. ಧರ್ಮಶಾಸ್ತ್ರದ ಅಧೀನದಲ್ಲಿದ್ದ ನಮ್ಮನ್ನು ಬಿಡಿಸಿ ತನ್ನ ಮಕ್ಕಳನ್ನಾಗಿ ಮಾಡಿಕೊಳ್ಳಬೇಕೆಂಬುದೇ ದೇವರ ಉದ್ದೇಶವಾಗಿತ್ತು.

ನೀವು ದೇವರ ಮಕ್ಕಳು. ಆದಕಾರಣವೇ ದೇವರು ತನ್ನ ಆತ್ಮವನ್ನು ನಿಮ್ಮ ಹೃದಯಗಳಿಗೆ ಕಳುಹಿಸಿದನು. “ತಂದೆಯೇ, ಅಪ್ಪಾ ತಂದೆಯೇ” ಎಂದು ಆತ್ಮನು ಕೂಗುತ್ತಾನೆ. ಆದ್ದರಿಂದ ಈಗ ನೀನು ಮೊದಲಿನಂತೆ ಗುಲಾಮನಲ್ಲ. ನೀನು ದೇವರ ಮಗನು. ನೀನು ದೇವರ ಮಗನಾಗಿರುವುದರಿಂದ ಆತನು ನಿನ್ನನ್ನು ಬಾಧ್ಯಸ್ತನನ್ನಾಗಿಯೂ ಮಾಡಿದ್ದಾನೆ.

ಲೂಕ 2:22-40

ದೇವಾಲಯದಲ್ಲಿ ಯೇಸುವಿನ ಪ್ರತಿಷ್ಠೆ

22 ಶುದ್ಧೀಕರಣದ[a] ಬಗ್ಗೆ ಮೋಶೆಯ ಧರ್ಮಶಾಸ್ತ್ರವು ಬೋಧಿಸಿದ್ದ ಕಾರ್ಯಗಳನ್ನು ಮರಿಯಳು ಮತ್ತು ಯೋಸೇಫನು ಮಾಡುವ ಸಮಯ ಬಂತು. ಯೇಸುವನ್ನು ಪ್ರಭುವಿಗೆ (ದೇವರಿಗೆ) ಪ್ರತಿಷ್ಠಿಸಲು ಯೋಸೇಫನು ಮತ್ತು ಮರಿಯಳು ಆತನನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. 23 ಏಕೆಂದರೆ “ಪ್ರತಿ ಕುಟುಂಬದಲ್ಲಿ, ‘ಚೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಷ್ಠಿಸಬೇಕು’”[b] ಎಂದು ಪ್ರಭುವಿನ ಧರ್ಮಶಾಸ್ತ್ರದಲ್ಲಿ ಬರೆದಿದೆ. 24 “ಎರಡು ಪಾರಿವಾಳಗಳನ್ನು ಅಥವಾ ಎರಡು ಬೆಳವಕ್ಕಿಗಳನ್ನು ಯಜ್ಞವಾಗಿ ಸಮರ್ಪಿಸಬೇಕು”(A) ಎಂದು ಸಹ ಪ್ರಭುವಿನ ಧರ್ಮಶಾಸ್ತ್ರವು ಹೇಳುತ್ತದೆ. ಆದ್ದರಿಂದ ಯೋಸೇಫನು ಮತ್ತು ಮರಿಯಳು ಜೆರುಸಲೇಮಿಗೆ ಹೋದರು.

ಸಿಮೆಯೋನನು ಯೇಸುವನ್ನು ನೋಡಿದನು

25 ಸಿಮೆಯೋನನೆಂಬ ಒಬ್ಬ ಮನುಷ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಒಳ್ಳೆಯವನಾಗಿದ್ದನು ಮತ್ತು ಬಹಳ ಧಾರ್ಮಿಕನಾಗಿದ್ದನು. ದೇವರು ಇಸ್ರೇಲರಿಗೆ ಸಹಾಯ ಮಾಡುವ ಕಾಲವನ್ನೇ ಸಿಮೆಯೋನನು ಎದುರು ನೋಡುತ್ತಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು. 26 ಪ್ರಭುವು ಕಳುಹಿಸುವ ಕ್ರಿಸ್ತನನ್ನು ನೋಡುವ ತನಕ ನೀನು ಸಾಯುವುದಿಲ್ಲ ಎಂದು ಪವಿತ್ರಾತ್ಮನು ಸಿಮೆಯೋನನಿಗೆ ತಿಳಿಸಿದ್ದನು. 27 ಸಿಮೆಯೋನನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಯೆಹೂದ್ಯರ ಧರ್ಮಶಾಸ್ತ್ರದ ವಿಧಿಗಳನ್ನು ಪೂರೈಸಲು ಮರಿಯಳು ಮತ್ತು ಯೋಸೇಫನು ದೇವಾಲಯಕ್ಕೆ ಹೋದರು. ಅವರು ಮಗು ಯೇಸುವನ್ನು ದೇವಾಲಯಕ್ಕೆ ತಂದರು. 28 ಸಿಮೆಯೋನನು ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸ್ತೋತ್ರ ಸಲ್ಲಿಸಿದನು:

29 “ಪ್ರಭುವೇ, ನಿನ್ನ ವಾಗ್ದಾನದಂತೆ ಸಮಾಧಾನದಿಂದ ಸಾಯಲು ನಿನ್ನ ದಾಸನಿಗೆ ಅಪ್ಪಣೆಯಾಗಲಿ.
30 ನೀನು ದಯಪಾಲಿಸಿದ ರಕ್ಷಕನನ್ನು[c] ಕಣ್ಣಾರೆಕಂಡೆನು.
31 ನೀನು ಆತನನ್ನು ಜನರೆಲ್ಲರಿಗೆ ಪ್ರತ್ಯಕ್ಷ ಮಾಡಿರುವೆ.
32 ಆತನು ಯೆಹೂದ್ಯರಲ್ಲದ ಜನರಿಗೆ ನಿನ್ನ ಮಾರ್ಗವನ್ನು ತೋರಿಸುವ ಬೆಳಕಾಗಿದ್ದಾನೆ.
    ಆತನಿಂದ ನಿನ್ನ ಜನರಾದ ಇಸ್ರೇಲರಿಗೆ ಕೀರ್ತಿಯಾಗುವುದು.”

33 ಸಿಮೆಯೋನನು ಮಗುವಿನ ಕುರಿತಾಗಿ ಹೇಳಿದ ಮಾತುಗಳನ್ನು ಕೇಳಿ ತಂದೆತಾಯಿಗಳಿಗೆ ಆಶ್ಚರ್ಯವಾಯಿತು. 34 ಬಳಿಕ ಸಿಮೆಯೋನನು ಅವರನ್ನು ಆಶೀರ್ವದಿಸಿ ಮರಿಯಳಿಗೆ, “ಈ ಮಗುವಿನ ನಿಮಿತ್ತ ಯೆಹೂದ್ಯರಲ್ಲಿ ಅನೇಕರು ಬೀಳುವರು. ಅನೇಕರು ಏಳುವರು. ಕೆಲವರು ಅಂಗೀಕರಿಸರು ಎಂಬುದಕ್ಕೆ ಈತನು ದೇವರಿಂದ ಬಂದ ಗುರುತಾಗಿರುವನು. 35 ಜನರು ಗುಟ್ಟಾಗಿ ಯೋಚಿಸುವ ಸಂಗತಿಗಳು ಬಯಲಾಗುವವು. ಮುಂದೆ ಸಂಭವಿಸುವ ಸಂಗತಿಗಳಿಂದ ನಿನ್ನ ಹೃದಯಕ್ಕೆ ಅಲಗು ನಾಟಿದಂತಾಗುವುದು” ಎಂದು ಹೇಳಿದನು.

ಅನ್ನಳು ಯೇಸುವನ್ನು ನೋಡಿದಳು

36 ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ[d] ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು. 37 ತನ್ನ ಉಳಿದ ಜೀವಮಾನವೆಲ್ಲಾ ವಿಧವೆಯಾಗಿದ್ದ ಆಕೆಗೆ ಈಗ ಎಂಭತ್ತನಾಲ್ಕು ವರ್ಷ ವಯಸ್ಸಾಗಿತ್ತು. ಅನ್ನಳು ಯಾವಾಗಲೂ ದೇವಾಲಯದಲ್ಲಿಯೇ ಇದ್ದಳು. ಆಕೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ಆಕೆ ಉಪವಾಸ ಮಾಡುತ್ತಾ ಮತ್ತು ಹಗಲಿರುಳು ಪ್ರಾರ್ಥಿಸುತ್ತಾ ದೇವರನ್ನು ಆರಾಧಿಸುತ್ತಿದ್ದಳು.

38 ಅವಳು ಅದೇ ಸಮಯದಲ್ಲಿ ಅಲ್ಲಿಗೆ ಬಂದು, ದೇವರಿಗೆ ಸ್ತೋತ್ರ ಸಲ್ಲಿಸಿ ದೇವರು ಜೆರುಸಲೇಮಿಗೆ ದಯಪಾಲಿಸುವ ಬಿಡುಗಡೆಯನ್ನು ಎದುರುನೋಡುತ್ತಿದ್ದ ಜನರಿಗೆ ಯೇಸುವಿನ ವಿಷಯವಾಗಿ ತಿಳಿಸಿದಳು.

ಯೋಸೇಫನು ಮತ್ತು ಮರಿಯಳು ಮನೆಗೆ ಮರಳಿದರು

39 ಪ್ರಭುವಿನ ಧರ್ಮಶಾಸ್ತ್ರದ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಯೋಸೇಫ ಮತ್ತು ಮರಿಯಳು ಗಲಿಲಾಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಂತ ಊರಾದ ನಜರೇತಿಗೆ ಹಿಂತಿರುಗಿದರು. 40 ಬಾಲಕ ಯೇಸು ಬೆಳೆದು ಬಲಗೊಂಡು ಸಂಪೂರ್ಣ ಜ್ಞಾನಿಯಾದನು. ದೇವರ ಆಶೀರ್ವಾದವು ಆತನೊಡನೆ ಇತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International