Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 148

148 ಯೆಹೋವನಿಗೆ ಸ್ತೋತ್ರವಾಗಲಿ!
ಮೇಲೋಕದಲ್ಲಿರುವ ದೇವದೂತರೇ, ಆಕಾಶಮಂಡಲದಿಂದ ಯೆಹೋವನನ್ನು ಸ್ತುತಿಸಿರಿ!
ಎಲ್ಲಾ ದೂತರುಗಳೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ!
ಸೂರ್ಯಚಂದ್ರರೇ, ಆತನನ್ನು ಸ್ತುತಿಸಿರಿ!
    ಆಕಾಶದಲ್ಲಿರುವ ನಕ್ಷತ್ರಗಳೇ, ಬೆಳಕುಗಳೇ, ಆತನನ್ನು ಸ್ತುತಿಸಿರಿ!
ಆತನಿಗೆ ಸ್ತೋತ್ರಮಾಡಿರಿ!
    ಆತನ ಸರ್ವಸೈನ್ಯಗಳೇ ಆತನನ್ನು ಸ್ತುತಿಸಿರಿ!
ಉನ್ನತೋನ್ನತವಾದ ಆಕಾಶವೇ, ಆತನನ್ನು ಸ್ತುತಿಸು!
    ಆಕಾಶದ ಮೇಲಿರುವ ನೀರುಗಳೇ ಆತನನ್ನು ಸ್ತುತಿಸಿರಿ!
ಅವು ಯೆಹೋವನ ಹೆಸರನ್ನು ಸ್ತುತಿಸಲಿ.
    ಆತನು ಆಜ್ಞಾಪಿಸಲು ಅವುಗಳೆಲ್ಲಾ ಸೃಷ್ಟಿಯಾದವು!
ಇವುಗಳೆಲ್ಲಾ ಶಾಶ್ವತವಾಗಿರುವಂತೆ ಆತನು ಮಾಡಿದನು.
    ಎಂದಿಗೂ ಕೊನೆಗೊಳ್ಳದ ನಿಯಮಗಳನ್ನು ಆತನು ಮಾಡಿದನು.
ಭೂಮಿಯ ಮೇಲಿರುವ ಸಮಸ್ತವೇ, ಯೆಹೋವನಿಗೆ ಸ್ತೋತ್ರಮಾಡಿರಿ!
    ಮಹಾಸಮುದ್ರ ಪ್ರಾಣಿಗಳೇ, ಆತನನ್ನು ಸ್ತುತಿಸಿರಿ!
ಆತನು ಬೆಂಕಿಯನ್ನೂ ಆಲಿಕಲ್ಲನ್ನೂ ಮಂಜನ್ನೂ
    ಹೊಗೆಯನ್ನೂ ಬಿರುಗಾಳಿಯನ್ನೂ ಉಂಟುಮಾಡಿದನು.
ಆತನು ಬೆಟ್ಟಗಳನ್ನೂ ಗುಡ್ಡಗಳನ್ನೂ
    ಹಣ್ಣಿನ ಮರಗಳನ್ನೂ ದೇವದಾರು ಮರಗಳನ್ನೂ ಸೃಷ್ಟಿಮಾಡಿದನು.
10 ಆತನು ಎಲ್ಲಾ ಕಾಡುಪ್ರಾಣಿಗಳನ್ನೂ ಪಶುಗಳನ್ನೂ ಕ್ರಿಮಿಕೀಟಗಳನ್ನೂ ಪಕ್ಷಿಗಳನ್ನೂ ಸೃಷ್ಟಿಮಾಡಿದನು.
11 ಆತನು ಭೂಮಿಯ ಮೇಲೆ ರಾಜರುಗಳನ್ನೂ ಜನಾಂಗಗಳನ್ನೂ
    ನಾಯಕರುಗಳನ್ನೂ ನ್ಯಾಯಾಧಿಪತಿಗಳನ್ನೂ ಸೃಷ್ಟಿಮಾಡಿದನು.
12 ಆತನು ಪ್ರಾಯಸ್ಥರಾದ ಸ್ತ್ರೀಪುರುಷರನ್ನೂ
    ವೃದ್ಧರನ್ನೂ ಯೌವನಸ್ಥರನ್ನೂ ಸೃಷ್ಟಿಸಿದನು.
13 ಯೆಹೋವನ ಹೆಸರನ್ನು ಕೊಂಡಾಡಿರಿ!
    ಆತನ ಹೆಸರನ್ನು ಶಾಶ್ವತವಾಗಿ ಸನ್ಮಾನಿಸಿರಿ!
    ಭೂಮ್ಯಾಕಾಶಗಳಲ್ಲಿರುವ ಸಮಸ್ತವೇ, ಆತನನ್ನು ಸ್ತುತಿಸು!
14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ.
    ಆತನ ಭಕ್ತರನ್ನು ಜನರು ಹೊಗಳುವರು.
    ಜನರು ಇಸ್ರೇಲರನ್ನು ಹೊಗಳುವರು.
ಆತನು ಹೋರಾಡುತ್ತಿರುವುದು ಅವರಿಗಾಗಿಯೇ.
    ಯೆಹೋವನಿಗೆ ಸ್ತೋತ್ರವಾಗಲಿ!

ಯೆರೆಮೀಯ 26:1-9

ಆಲಯದಲ್ಲಿ ಯೆರೆಮೀಯನ ಪ್ರಸಂಗ

26 ಯೆಹೋಯಾಕೀಮನು ಯೆಹೂದದ ರಾಜನಾದ ಮೊದಲನೇ ವರ್ಷದಲ್ಲಿ ಯೆಹೋವನಿಂದ ಈ ಸಂದೇಶ ಬಂದಿತು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಯೆಹೋವನು ಹೀಗೆಂದನು, “ಯೆರೆಮೀಯನೇ, ಯೆಹೋವನ ಆಲಯದ ಅಂಗಳದಲ್ಲಿ ನಿಲ್ಲು, ಯೆಹೋವನ ಆಲಯದಲ್ಲಿ ಆರಾಧನೆಗೆಂದು ಬರುವ ಯೆಹೂದದ ಎಲ್ಲಾ ಜನರಿಗೆ ಈ ಸಂದೇಶವನ್ನು ತಿಳಿಸು. ನಾನು ನಿನಗೆ ತಿಳಿಸೆಂದು ಹೇಳುವ ಎಲ್ಲವನ್ನೂ ಅವರಿಗೆ ಹೇಳು. ನನ್ನ ಸಂದೇಶದ ಯಾವ ಭಾಗವನ್ನೂ ಬಿಡಬೇಡ. ಅವರು ನನ್ನ ಸಂದೇಶವನ್ನು ಕೇಳಿ ಅದರಂತೆ ನಡೆಯಬಹುದು; ತಮ್ಮ ಕೆಟ್ಟ ಜೀವನವನ್ನು ತ್ಯಜಿಸಿ ಸನ್ಮಾರ್ಗವನ್ನು ಹಿಡಿಯಬಹುದು. ಅವರು ಪರಿವರ್ತನೆ ಹೊಂದಿದರೆ ನಾನು ಅವರನ್ನು ಶಿಕ್ಷಿಸಬೇಕೆಂದು ಮಾಡಿದ ಯೋಚನೆಗಳನ್ನು ಬದಲಾಯಿಸುವೆನು. ಅವರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದರಿಂದ ಅವರನ್ನು ಶಿಕ್ಷಿಸಬೇಕೆಂದು ನಾನು ಯೋಚಿಸುತ್ತಿದ್ದೇನೆ. ನೀನು ಅವರಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿಮಗೆ ನನ್ನ ಧರ್ಮೋಪದೇಶಗಳನ್ನು ಕೊಟ್ಟಿದ್ದೇನೆ. ನೀವು ಅವುಗಳನ್ನು ಪಾಲಿಸಬೇಕು; ಅನುಸರಿಸಬೇಕು. ನನ್ನ ಸೇವಕರು ಹೇಳುವುದನ್ನು ನೀವು ಕೇಳಬೇಕು. ಪ್ರವಾದಿಗಳು ನನ್ನ ಸೇವಕರಾಗಿದ್ದಾರೆ. ನಾನು ಮತ್ತೆಮತ್ತೆ ನನ್ನ ಪ್ರವಾದಿಗಳನ್ನು ನಿಮ್ಮಲ್ಲಿಗೆ ಕಳುಹಿಸಿದೆನು. ಆದರೆ ನೀವು ಅವರ ಮಾತುಗಳಿಗೆ ಕಿವಿಗೊಡಲಿಲ್ಲ. ನೀವು ನನ್ನ ಆಜ್ಞಾಪಾಲನೆ ಮಾಡದಿದ್ದರೆ ಜೆರುಸಲೇಮಿನ ನನ್ನ ಈ ಆಲಯಕ್ಕೆ ಶಿಲೋವಿನ ನನ್ನ ಪವಿತ್ರವಾದ ಗುಡಾರದ ಗತಿಯನ್ನು ತರುತ್ತೇನೆ. ಜಗತ್ತಿನ ಜನರು ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಕೇಳಿಕೊಳ್ಳುವಾಗ ಜೆರುಸಲೇಮನ್ನು ಜ್ಞಾಪಿಸಿಕೊಳ್ಳುವರು.’”

ಯೆಹೋವನ ಆಲಯದಲ್ಲಿ ಯೆರೆಮೀಯನು ಹೇಳಿದ ಇದೆಲ್ಲವನ್ನು ಯಾಜಕರು, ಪ್ರವಾದಿಗಳು ಮತ್ತು ಎಲ್ಲಾ ಜನರು ಕೇಳಿದರು. ಯೆಹೋವನು ಜನರಿಗೆ ತಿಳಿಸಬೇಕೆಂದು ಹೇಳಿದ ಎಲ್ಲವನ್ನು ಯೆರೆಮೀಯನು ಹೇಳಿ ಮುಗಿಸಿದನು. ಆಗ ಯಾಜಕರು, ಪ್ರವಾದಿಗಳು ಮತ್ತು ಎಲ್ಲಾ ಜನರು ಯೆರೆಮೀಯನನ್ನು ಹಿಡಿದುಕೊಂಡರು. ಅವರು “ನೀನು ಇಂಥಾ ಭಯಂಕರವಾದ ವಿಷಯವನ್ನು ಹೇಳಿದ್ದಕ್ಕಾಗಿ ನಿನಗೆ ಮರಣವೇ ಗತಿ! ಯೆಹೋವನ ಹೆಸರಿನಲ್ಲಿ ಹಾಗೆ ಪ್ರವಾದಿಸಲು ನಿನಗೆ ಹೇಗೆ ಧೈರ್ಯ ಬಂದಿತು? ಶಿಲೋವಿನಂತೆ ಯೆಹೋವನ ಈ ಆಲಯವು ಹಾಳಾಗುವದೆಂದು ಹೇಳಲು ನಿನಗೆ ಹೇಗೆ ಧೈರ್ಯ ಬಂದಿತು? ಜೆರುಸಲೇಮು ಜನರಿಲ್ಲದ ಒಂದು ಮರುಭೂಮಿಯಾಗುವುದೆಂದು ಹೇಳಲು ನಿನಗೆ ಹೇಗೆ ಧೈರ್ಯ ಬಂದಿತು?” ಎಂದು ಕೇಳಿದರು. ಯೆಹೋವನ ಆಲಯದಲ್ಲಿ ಎಲ್ಲಾ ಜನರು ಯೆರೆಮೀಯನನ್ನು ಮುತ್ತಿದರು.

ಯೆರೆಮೀಯ 26:12-15

12 ಆಗ ಯೆರೆಮೀಯನು ಯೆಹೂದದ ಸಕಲ ಸರದಾರರಿಗೂ ಸಮಸ್ತ ಜನರಿಗೂ ಹೀಗೆ ಹೇಳಿದನು: “ಈ ಆಲಯದ ಬಗ್ಗೆ ಮತ್ತು ಈ ನಗರದ ಬಗ್ಗೆ ಹೀಗೆ ಹೇಳಲು ಯೆಹೋವನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ. ನೀವು ಕೇಳಿದ ಪ್ರತಿಯೊಂದು ವಿಷಯವೂ ಯೆಹೋವನಿಂದಲೇ ಬಂದದ್ದು. 13 ನೀವು ನಿಮ್ಮ ನಡತೆಯನ್ನು ಬದಲಾಯಿಸಿಕೊಂಡು, ಸತ್ಕಾರ್ಯಗಳನ್ನು ಮಾಡಲಾರಂಭಿಸಬೇಕು. ನೀವು ನಿಮ್ಮ ದೇವರಾದ ಯೆಹೋವನ ಆಜ್ಞಾಪಾಲನೆ ಮಾಡಬೇಕು. ಆಗ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿ ನಿಮಗೆ ಕೇಡುಮಾಡುವುದಿಲ್ಲ. 14 ನಾನಂತೂ ನಿಮ್ಮ ಅಧಿನದಲ್ಲಿದ್ದೇನೆ. ನಿಮಗೆ ಒಳ್ಳೆಯದಾಗಿಯೂ ನ್ಯಾಯವಾಗಿಯೂ ತೋರಿದ್ದನ್ನು ಮಾಡಿರಿ. 15 ಆದರೆ ನೀವು ನನ್ನನ್ನು ಕೊಂದರೆ ಒಬ್ಬ ನಿರಪರಾಧಿಯನ್ನು ಕೊಂದದೋಷಕ್ಕೆ ಗುರಿಯಾಗುವಿರೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿರಿ. ನೀವು ಈ ನಗರವನ್ನೂ ಇದರ ಪ್ರತಿಯೊಬ್ಬ ನಿವಾಸಿಯನ್ನೂ ಸಹ ದೋಷಿಗಳನ್ನಾಗಿ ಮಾಡುವಿರಿ. ನಿಜವಾಗಿಯೂ, ಯೆಹೋವನು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದಾನೆ. ನೀವು ಕೇಳಿದ ಸಂದೇಶವು ನಿಜವಾಗಿಯೂ ಯೆಹೋವನಿಂದ ಬಂದದ್ದು.”

ಅಪೊಸ್ತಲರ ಕಾರ್ಯಗಳು 6:8-15

ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು

ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ[a] ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10 ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,

11 “ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12 ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.

13 ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14 ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15 ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.

ಅಪೊಸ್ತಲರ ಕಾರ್ಯಗಳು 7:51-60

51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”

ಸ್ತೆಫನನು ಕೊಲ್ಲಲ್ಪಟ್ಟನು

54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.

57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International