Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 96

96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
    ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
    ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
    ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
    ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
    ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
    ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
    ಯೆಹೋವನನ್ನು ಮಹಿಮೆಪಡಿಸಿರಿ.
ಯೆಹೋವನ ಹೆಸರನ್ನು ಸ್ತುತಿಸಿರಿ.
    ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
    ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10     ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
    ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
    ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
    ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
    ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.

ಚೆಫನ್ಯ 3:14-20

ಸಂತಸದ ಹಾಡು

14 ಜೆರುಸಲೇಮೇ, ಹಾಡುತ್ತಾ ಸಂತೋಷಿಸುತ್ತಿರು.
    ಇಸ್ರೇಲೇ, ಸಂತೋಷದಿಂದ ಆರ್ಭಟಿಸು.
    ಜೆರುಸಲೇಮೇ, ಸಂತೋಷದಿಂದಿದ್ದು ಉಲ್ಲಾಸಿಸು.
15 ಯಾಕೆಂದರೆ ನಿನ್ನ ಯೆಹೋವನು ನಿನ್ನ ಶಿಕ್ಷೆಯನ್ನು ನಿಲ್ಲಿಸಿದ್ದಾನೆ.
    ನಿನ್ನ ವೈರಿಗಳ ಬಲವಾದ ಬುರುಜುಗಳನ್ನು ನಾಶಮಾಡಿದ್ದಾನೆ.
ಇಸ್ರೇಲಿನ ರಾಜನೇ, ನಿನ್ನ ದೇವರು ನಿನ್ನೊಂದಿಗಿದ್ದಾನೆ.
    ನಿನಗೆ ಕೆಟ್ಟದ್ದು ಸಂಭವಿಸುತ್ತದೆಂದು ನೀನು ಚಿಂತಿಸದಿರು.
16 ಆ ಸಮಯದಲ್ಲಿ ಜೆರುಸಲೇಮಿಗೆ ಹೀಗೆ ಹೇಳಲಾಗುವುದು:
    “ಬಲವಾಗಿರು! ಭಯಪಡದಿರು!
17 ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿದ್ದಾನೆ.
    ಆತನು ರಣಶೂರನು.
ನಿನ್ನನ್ನು ರಕ್ಷಿಸಿ ನಿನ್ನ ಮೇಲಿನ ತನ್ನ ಪ್ರೀತಿಯನ್ನು ತೋರ್ಪಡಿಸುವನು.
    ನಿನ್ನೊಂದಿಗೆ ಎಷ್ಟು ಸಂತೋಷದಲ್ಲಿರುವನೆಂದು ತೋರಿಸುವನು.
ನಿನ್ನೊಂದಿಗೆ ನಗಾಡುತ್ತಾ ಹರ್ಷಿಸುವನು.
18     ನಿನ್ನ ನಾಚಿಕೆಯನ್ನು ತೆಗೆದುಬಿಡುವನು.
ನಿನ್ನನ್ನು ಹಿಂಸಿಸುವ ಜನರನ್ನು ನಿಲ್ಲಿಸುವನು.
19 ಆ ಸಮಯದಲ್ಲಿ, ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
    ಗಾಯಗೊಂಡಿರುವ ನಿನ್ನ ಜನರನ್ನು ರಕ್ಷಿಸುವೆನು.
ತಮ್ಮ ದೇಶದಿಂದ ದೂರಕ್ಕೆ ಚದರಿಸಲ್ಪಟ್ಟ ಜನರನ್ನು ನಾನು ಹಿಂದಕ್ಕೆ ಕರೆದುಕೊಂಡು ಬರುವೆನು.
    ನಾನು ಅವರನ್ನು ಪ್ರಸಿದ್ಧಿಪಡಿಸುವೆನು.
    ಎಲ್ಲಾ ಜನರು ಅವರನ್ನು ಹೊಗಳುವರು.
20 ಆಗ ನಿಮ್ಮೆಲ್ಲರನ್ನು ನಾನು ಹಿಂದಕ್ಕೆ ಕರೆತರುವೆನು.
    ನಿನ್ನನ್ನು ಪ್ರಸಿದ್ಧಿಪಡಿಸುವೆನು.
ಎಲ್ಲಾ ಜನರು ನಿನ್ನನ್ನು ಹೊಗಳುವರು.
    ನಿನ್ನ ಕಣ್ಣೆದುರಿಗೆ ಸೆರೆಹಿಡಿದವರನ್ನು ಕರೆತರುವಾಗ ಹಾಗೆ ಆಗುವದು”
ಇದು ಯೆಹೋವನ ನುಡಿ.

ರೋಮ್ನಗರದವರಿಗೆ 13:11-14

11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International