Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 96

96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
    ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
    ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
    ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
    ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
    ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
    ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
    ಯೆಹೋವನನ್ನು ಮಹಿಮೆಪಡಿಸಿರಿ.
ಯೆಹೋವನ ಹೆಸರನ್ನು ಸ್ತುತಿಸಿರಿ.
    ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
    ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10     ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
    ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
    ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
    ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
    ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.

ಚೆಫನ್ಯ 3:8-13

ಯೆಹೋವನು ಹೀಗೆ ಹೇಳುತ್ತಾನೆ: “ನನ್ನನ್ನು ಕಾದುಕೊಂಡಿರಿ. ನೀವು ನನ್ನ ನ್ಯಾಯತೀರ್ಪಿನ ತನಕ ಕಾದುಕೊಂಡಿರಿ. ನಾನು ಬೇರೆ ಜನಾಂಗಗಳನ್ನು ಇಲ್ಲಿಗೆ ಕರೆದು ನಿಮ್ಮನ್ನು ಶಿಕ್ಷಿಸುವಂತೆ ಮಾಡುವ ಹಕ್ಕು ನನಗಿದೆ. ನಿಮ್ಮ ಮೇಲೆ ನನಗಿರುವ ಸಿಟ್ಟು ತೋರಿಸಲು ನಾನು ಆ ಜನಾಂಗಗಳನ್ನು ಉಪಯೋಗಿಸುವೆನು. ನಿಮ್ಮ ಮೇಲೆ ನಾನು ಎಷ್ಟರಮಟ್ಟಿಗೆ ಕೋಪಗೊಂಡಿದ್ದೇನೆ ಎಂದು ಅವರ ಮೂಲಕ ನಿಮಗೆ ತಿಳಿದುಬರುವುದು. ಆಗ ಇಡೀ ದೇಶವೇ ನಾಶವಾಗುವುದು. ಆಗ ನಾನು ಇತರ ಜನಾಂಗಗಳವರ ಭಾಷೆಯನ್ನು ಬದಲಾಯಿಸಿ ದೇವರಾದ ಯೆಹೋವನ ನಾಮವನ್ನು ಉಚ್ಚರಿಸುವಂತೆ ಮಾಡುವೆನು. ಅವರೆಲ್ಲರೂ ನನ್ನನ್ನು ಆರಾಧಿಸುವರು. ಒಟ್ಟಾಗಿ ಸೇರಿ ಒಂದೇ ಜನಾಂಗವಾಗಿ ನನ್ನನ್ನು ಆರಾಧಿಸುವರು. 10 ಇಥಿಯೋಪ್ಯದಲ್ಲಿ ನದಿಯ ಆಚೆ ದಡದವರೆಗೂ ಜನರು ಬರುವರು. ನನ್ನಿಂದ ಚದರಿಹೋಗಿದ್ದ ಜನರು ನನ್ನ ಬಳಿಗೆ ಬರುವರು. ನನ್ನನ್ನು ಆರಾಧಿಸಲು ಬರುವವರು ನನಗೆ ಕಾಣಿಕೆಗಳನ್ನು ತರುವರು.

11 “ಆಗ ಜೆರುಸಲೇಮೇ, ನಿನ್ನ ಜನರು ನನಗೆ ವಿರುದ್ಧವಾಗಿ ಮಾಡಿದ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವುದಿಲ್ಲ. ಯಾಕೆಂದರೆ ನಾನು ಆ ದುಷ್ಟ ಜನರನ್ನೆಲ್ಲಾ ನಿರ್ಮೂಲ ಮಾಡುವೆನು. ಅಹಂಕಾರ ತುಂಬಿದ ಜನರನ್ನು ನಾನು ತೆಗೆದುಬಿಡುವೆನು. ನನ್ನ ಪವಿತ್ರ ಪರ್ವತದಲ್ಲಿ ಗರ್ವವುಳ್ಳವರು ಯಾರೂ ಇರುವದಿಲ್ಲ. 12 ನನ್ನ ಪಟ್ಟಣದೊಳಗೆ ಬರೇ ದೀನದರಿದ್ರರೇ ವಾಸಮಾಡುವರು. ಅವರು ಯೆಹೋವನ ಹೆಸರಿನಲ್ಲಿ ಭರವಸೆ ಇಡುವವರಾಗಿರುವರು. 13 ಇಸ್ರೇಲಿನಲ್ಲಿ ಉಳಿದವರು ದುಷ್ಕೃತ್ಯಗಳನ್ನು ಮಾಡುವುದಿಲ್ಲ. ಸುಳ್ಳು ಹೇಳುವದಿಲ್ಲ. ಜನರನ್ನು ಮೋಸಗೊಳಿಸುವದಿಲ್ಲ. ಅವರು ಕುರಿಗಳಂತೆ ಮೇದು ವಿಶ್ರಾಂತಿ ತೆಗೆದುಕೊಳ್ಳುವರು. ಯಾರೂ ಅವರ ಗೊಡವೆಗೆ ಹೋಗುವುದಿಲ್ಲ.”

ರೋಮ್ನಗರದವರಿಗೆ 10:5-13

ಧರ್ಮಶಾಸ್ತ್ರದಿಂದಾಗುವ ನೀತಿಯ ಬಗ್ಗೆ, “ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಜೀವವನ್ನು ಪಡೆದುಕೊಳ್ಳಲು ಬಯಸುವವನು, ಧರ್ಮಶಾಸ್ತವು ಹೇಳುವ ಕಾರ್ಯಗಳನ್ನು ಮಾಡಲೇಬೇಕು”(A) ಎಂದು ಮೋಶೆ ಹೇಳಿದ್ದಾನೆ. ಆದರೆ ನಂಬಿಕೆಯ ಮೂಲಕ ನೀತಿನಿರ್ಣಯ ಹೊಂದುವುದರ ಬಗ್ಗೆ, “(ಕ್ರಿಸ್ತನನ್ನು ಕೆಳಕ್ಕೆ ಕರೆದುಕೊಂಡು ಬರಲು) ‘ಯಾರು ಪರಲೋಕಕ್ಕೆ ಏರಿಹೋಗಬಲ್ಲರು?’” ಎಂದಾಗಲಿ (ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು.) “‘ಯಾರು ಪಾತಾಳಕ್ಕೆ ಇಳಿದುಹೋಗಬಲ್ಲರು’ ಎಂದಾಗಲಿ ಹೇಳಬೇಡಿ” ಎಂದು ಪವಿತ್ರ ಗ್ರಂಥವು ಹೇಳುತ್ತದೆ.

ಇದಲ್ಲದೆ, “ದೇವರ ವಾಕ್ಯವು ನಿಮ್ಮ ಸಮೀಪದಲ್ಲೇ ಇದೆ. ಅದು ನಿಮ್ಮ ಬಾಯಲ್ಲಿಯೂ ನಿಮ್ಮ ಹೃದಯದಲ್ಲಿಯೂ ಇದೆ” ಎಂದು ಪವಿತ್ರ ಗ್ರಂಥವು ಹೇಳುತ್ತದೆ. ನಾವು ಜನರಿಗೆ ನಂಬಿಕೆಯ ಕುರಿತಾಗಿ ಸಾರುವ ವಾಕ್ಯವೇ ಅದು. “ಯೇಸುವೇ ಪ್ರಭು”ವೆಂದು ನಿನ್ನ ಬಾಯಿಯ ಮೂಲಕ ಹೇಳುವುದಾದರೆ ಮತ್ತು ಯೇಸುವನ್ನು ಸತ್ತವರೊಳಗಿಂದ ಜೀವಂತನಾಗಿ ಎಬ್ಬಿಸಿದವನು ದೇವರೇ ಎಂದು ನಿನ್ನ ಹೃದಯದಲ್ಲಿ ನಂಬುವುದಾದರೆ, ನೀನು ರಕ್ಷಣೆ ಹೊಂದುವೆ. 10 ಹೌದು, ನಾವು ನಮ್ಮ ಹೃದಯಗಳಲ್ಲಿ ನಂಬುವುದರ ಮೂಲಕ ನೀತಿವಂತರಾಗುತ್ತೇವೆ. “ನಂಬುತ್ತೇವೆ” ಎಂದು ಬಾಯಾರೆ ಹೇಳುವುದರ ಮೂಲಕ ರಕ್ಷಣೆ ಹೊಂದುತ್ತೇವೆ.

11 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ.”(B) 12 ಏಕೆಂದರೆ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಒಬ್ಬನೇ ಪ್ರಭು. ತನ್ನಲ್ಲಿ ನಂಬಿಕೆಯಿಡುವ ಜನರೆಲ್ಲರಿಗೆ ಪ್ರಭುವು ಅನೇಕ ಆಶೀರ್ವಾದಗಳನ್ನು ಕೊಡುತ್ತಾನೆ. 13 ಹೌದು, ಪವಿತ್ರ ಗ್ರಂಥವು ಹೇಳುವಂತೆ, “ಪ್ರಭುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ರಕ್ಷಣೆ ಹೊಂದುವನು.”(C)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International