Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಲೂಕ 1:46-55

ಮರಿಯಳು ದೇವರನ್ನು ಸ್ತುತಿಸಿದಳು

46 ಆಗ ಮರಿಯಳು,

47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
    ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
    ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
    ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
    ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
    ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
    ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
    ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.

1 ಸಮುವೇಲನು 1:1-18

ಶೀಲೋವಿನಲ್ಲಿ ಆರಾಧನೆ

ಎಲ್ಕಾನ ಎಂಬ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ರಾಮಾತಯಿಮ್ ಎಂಬ ಊರಿನವನು. ಅವನು ಚೋಫೀಮ್ ಕುಟುಂಬದವನೂ ಯೆರೋಹಾಮನ ಮಗನೂ ಆಗಿದ್ದನು. ಯೆರೋಹಾಮನು ಎಲೀಹುವಿನ ಮಗ. ಎಲೀಹುವನು ತೋಹುವನ ಮಗ. ತೋಹುವನು ಚೂಫನ ಮಗ. ಇವರೆಲ್ಲ ಎಫ್ರಾಯೀಮ್ ಕುಲದವರು.

ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಹನ್ನಳು ಎಂಬುದು ಒಬ್ಬಳ ಹೆಸರಾದರೆ, ಇನ್ನೊಬ್ಬಳು ಪೆನಿನ್ನಳು. ಪೆನಿನ್ನಳಿಗೆ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.

ಎಲ್ಕಾನನು ಪ್ರತಿ ವರ್ಷವೂ ತನ್ನ ಪಟ್ಟಣವಾದ ರಾಮಾತಯಿಮ್ ಬಿಟ್ಟು ಶೀಲೋವಿಗೆ ಹೋಗುತ್ತಿದ್ದನು. ಅವನು ಶೀಲೋವಿನಲ್ಲಿ ಸರ್ವಶಕ್ತನಾದ ಯೆಹೋವನನ್ನು ಆರಾಧಿಸಿ ಆತನಿಗೆ ಯಜ್ಞವನ್ನು ಅರ್ಪಿಸುತ್ತಿದ್ದನು. ಹೊಫ್ನಿ ಮತ್ತು ಫೀನೆಹಾಸರೆಂಬ ಯಾಜಕರು ಯೆಹೋವನ ಸೇವೆಮಾಡುವ ಸ್ಥಳವೇ ಶೀಲೋವ. ಹೊಫ್ನಿ ಮತ್ತು ಫೀನೆಹಾಸರು ಏಲಿಯನ ಮಕ್ಕಳು. ಎಲ್ಕಾನನು ಪ್ರತಿಸಲ ಯಜ್ಞವನ್ನು ಅರ್ಪಿಸುವಾಗ, ಪೆನಿನ್ನಳಿಗೆ ಯಜ್ಞದ ಒಂದು ಭಾಗವನ್ನೂ ಅವಳ ಮಕ್ಕಳಿಗೆ ಒಂದು ಭಾಗವನ್ನೂ ಕೊಡುತ್ತಿದ್ದನು. ಎಲ್ಕಾನನು ಹನ್ನಳಿಗೆ ಯಾವಾಗಲೂ ಎರಡು ಭಾಗವನ್ನು ಕೊಡುತ್ತಿದ್ದನು. ಯೆಹೋವನು ಹನ್ನಳಿಗೆ ಮಕ್ಕಳನ್ನು ಕೊಡದೇ ಇದ್ದರೂ, ಎಲ್ಕಾನನು ಎರಡು ಭಾಗವನ್ನು ಕೊಡುತ್ತಿದ್ದನು. ಎಲ್ಕಾನನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಹೀಗೆ ಮಾಡುತ್ತಿದ್ದನು.

ಪೆನಿನ್ನಳು ಹನ್ನಳನ್ನು ನೋಯಿಸುವಳು

ಪೆನಿನ್ನಳು ಯಾವಾಗಲೂ ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಹನ್ನಳು ಬಂಜೆಯಾಗಿದ್ದುದೇ ಅದಕ್ಕೆ ಕಾರಣ. ಪ್ರತಿ ವರ್ಷವೂ ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವರ ಕುಟುಂಬವು ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಒಂದು ದಿನ ಎಲ್ಕಾನನು ಯಜ್ಞವನ್ನು ಅರ್ಪಿಸುವಾಗ, ಹನ್ನಳು ನೊಂದುಕೊಂಡು ಅಳಲಾರಂಭಿಸಿದಳು. ಹನ್ನಳು ಊಟಮಾಡಲೇ ಇಲ್ಲ. ಅವಳ ಗಂಡನಾದ ಎಲ್ಕಾನನು ಅವಳನ್ನು ಕುರಿತು, “ಹನ್ನಾ, ಯಾಕೆ ಅಳುತ್ತಿರುವೆ? ಯಾಕೆ ಊಟಮಾಡುತ್ತಿಲ್ಲ? ಯಾಕೆ ವ್ಯಸನದಿಂದಿರುವೆ? ನಿನಗೆ ನಾನಿಲ್ಲವೇ? ನಾನು ನಿನ್ನ ಗಂಡ. ನಾನು ನಿನಗೆ ಹತ್ತು ಗಂಡುಮಕ್ಕಳಿಗಿಂತಲೂ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿದನು.

ಹನ್ನಳ ಪ್ರಾರ್ಥನೆ

ಹನ್ನಳು ಅನ್ನಪಾನಗಳನ್ನು ತೆಗೆದುಕೊಂಡು ಸದ್ದಿಲ್ಲದೆ ಮೇಲೆದ್ದು ಯೆಹೋವನಿಗೆ ಪ್ರಾರ್ಥಿಸಲು ಹೋದಳು. ಯೆಹೋವನ ಪವಿತ್ರ ಆಲಯದ ದ್ವಾರದ ಹತ್ತಿರ ಯಾಜಕನಾದ ಏಲಿಯು ಕುಳಿತಿದ್ದನು. 10 ಹನ್ನಳು ಬಹು ದುಃಖಿತಳಾಗಿದ್ದುದರಿಂದ ಕಣ್ಣೀರು ಸುರಿಯುತ್ತಿತ್ತು. ಅವಳು ಯೆಹೋವನಿಗೆ ಪ್ರಾರ್ಥಿಸುತ್ತಿದ್ದಳು. 11 ಅವಳು ದೇವರಲ್ಲಿ ಒಂದು ವಿಶೇಷ ವಾಗ್ದಾನವನ್ನು ಮಾಡಿದಳು. ಅವಳು, “ಯೆಹೋವನೇ, ಸರ್ವಶಕ್ತನೇ,[a] ನಾನು ಎಷ್ಟು ದುಃಖಿತಳೆಂಬುದನ್ನು ನೋಡು, ನನ್ನನ್ನು ಜ್ಞಾಪಿಸಿಕೊ! ನನ್ನನ್ನು ಮರೆಯದಿರು. ನೀನು ನನಗೊಬ್ಬ ಮಗನನ್ನು ಕರುಣಿಸಿದರೆ, ಅವನು ಜೀವದಿಂದಿರುವ ತನಕ ನಿನ್ನವನಾಗಿರುವಂತೆ ನಿನಗೇ ಪ್ರತಿಷ್ಠಿಸುತ್ತೇನೆ. ಅವನು ನಾಜೀರನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಇತರೆ ಮದ್ಯವನ್ನಾಗಲಿ ಸೇವಿಸುವುದಿಲ್ಲ. ಅವನ ತಲೆಕೂದಲನ್ನು ಕ್ಷೌರ ಕತ್ತಿಯಿಂದ ಕತ್ತರಿಸುವುದಿಲ್ಲ”[b] ಎಂದು ಹೇಳಿದಳು

12 ಹನ್ನಳು ಬಹಳ ಹೊತ್ತಿನವರೆಗೆ ಯೆಹೋವನಿಗೆ ಪ್ರಾರ್ಥನೆ ಮಾಡಿದಳು. ಅವಳು ಪ್ರಾರ್ಥನೆ ಮಾಡುತ್ತಿದ್ದಾಗ ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು. 13 ಹನ್ನಳು ತನ್ನ ಹೃದಯದಲ್ಲಿಯೇ ಪ್ರಾರ್ಥಿಸುತ್ತಿದ್ದಳು. ಅವಳ ತುಟಿಗಳು ಚಲಿಸಿದರೂ ಮಾತುಗಳು ಕೇಳಿಸಲಿಲ್ಲ. ಅವಳು ಮದ್ಯಪಾನ ಮಾಡಿರುತ್ತಾಳೆಂದು 14 ಏಲಿಯು ನೆನಸಿ, “ನೀನು ಹೆಚ್ಚು ಕುಡಿದಿರುವೆ. ಅಮಲನ್ನು ಇಳಿಸಿಕೊ” ಎಂದು ಹನ್ನಳಿಗೆ ಹೇಳಿದನು.

15 ಹನ್ನಳು “ಸ್ವಾಮೀ, ನಾನು ಯಾವುದೇ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದಿಲ್ಲ. ನಾನು ಬಹುದುಃಖಿತಳು. ನಾನು ಯೆಹೋವನಲ್ಲಿ ನನ್ನ ಎಲ್ಲ ತೊಂದರೆಗಳನ್ನು ನಿವೇದಿಸಿಕೊಳ್ಳುತ್ತಿದ್ದೆನು. 16 ನನ್ನನ್ನು ಅಯೋಗ್ಯ ಹೆಂಗಸೆಂದು ನೆನಸಬೇಡಿ. ನಾನು ಬಹು ದುಃಖಿತಳಾಗಿರುವುದರಿಂದ ಮತ್ತು ಹೆಚ್ಚು ನೊಂದಿರುವುದರಿಂದ ದೀರ್ಘಕಾಲ ಪ್ರಾರ್ಥನೆ ಮಾಡಿದೆ” ಎಂದು ಉತ್ತರಿಸಿದಳು.

17 ಏಲಿಯು, “ಸಮಾಧಾನದಿಂದ ಹೋಗು. ಇಸ್ರೇಲಿನ ದೇವರು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ” ಎಂದು ಉತ್ತರಿಸಿದನು.

18 ಹನ್ನಳು, “ನನ್ನ ಮೇಲೆ ನಿಮ್ಮ ದಯೆಯಿರಲಿ” ಎಂದು ಹೇಳಿದಳು. ಆಗ ಅವಳು ತನ್ನ ಮಾರ್ಗದಲ್ಲಿಯೇ ಹಿಂದಿರುಗಿ. ಸ್ವಲ್ಪ ಊಟ ಮಾಡಿದಳು. ಅಂದಿನಿಂದ ಅವಳು ದುಃಖಿತಳಾಗಲಿಲ್ಲ.

ಇಬ್ರಿಯರಿಗೆ 9:1-14

ಹಳೆಯ ಒಡಂಬಡಿಕೆಯ ಕ್ರಮಕ್ಕನುಸಾರವಾದ ಆರಾಧನೆ

ಮೊದಲನೆ ಒಡಂಬಡಿಕೆಯಲ್ಲಿ ಆರಾಧನೆಯ ನಿಯಮಗಳಿದ್ದವು. ಅದರಲ್ಲಿ ಮಾನವನಿರ್ಮಿತವಾದ ಆರಾಧನಾ ಸ್ಥಳವಿತ್ತು. ಈ ಸ್ಥಳವು ಗುಡಾರದ ಒಳಗಿತ್ತು. ಗುಡಾರದ ಮೊದಲ ಆವರಣವನ್ನು ಪವಿತ್ರ ಸ್ಥಳವೆಂದು ಕರೆಯುತ್ತಿದ್ದರು. ಪವಿತ್ರ ಸ್ಥಳದಲ್ಲಿ ದೀಪಸ್ತಂಭ, ಮೇಜು ಮತ್ತು ದೇವರಿಗೆ ಅರ್ಪಿಸಲ್ಪಟ್ಟ ರೊಟ್ಟಿಗಳಿದ್ದವು. ಎರಡನೆ ತೆರೆಯ ಹಿಂದೆ “ಮಹಾ ಪವಿತ್ರಸ್ಥಳ”ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು. ಮಹಾ ಪವಿತ್ರಸ್ಥಳದಲ್ಲಿ ಧೂಪವನ್ನು ಸುಡುವುದಕ್ಕಾಗಿ ಬಂಗಾರದ ಯಜ್ಞವೇದಿಕೆಯಿತ್ತು. ಅಲ್ಲದೆ ಮೊದಲನೆ ಒಡಂಬಡಿಕೆಯನ್ನು ಇಡಲಾಗಿದ್ದ ಪವಿತ್ರ ಪೆಟ್ಟಿಗೆಯಿತ್ತು. ಅದಕ್ಕೆ ಚಿನ್ನದ ತಗಡನ್ನು ಹೊದಿಸಲಾಗಿತ್ತು. ಅದರ ಒಳಗಡೆ ಚಿನ್ನದ ಪಾತ್ರೆಯಲ್ಲಿಟ್ಟಿದ್ದ ಮನ್ನಾ ಮತ್ತು ಒಂದಾನೊಂದು ಕಾಲದಲ್ಲಿ ಚಿಗುರಿ ಎಲೆಗಳನ್ನು ಬಿಟ್ಟಿದ್ದ ಆರೋನನ ಕೋಲು ಇದ್ದವು. ಅಲ್ಲದೆ ಆ ಮೊದಲನೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಬರೆಯಲಾಗಿದ್ದ ಕಲ್ಲಿನ ಹಲಗೆಗಳನ್ನು ಅದರಲ್ಲಿ ಇಡಲಾಗಿತ್ತು. ಆ ಪೆಟ್ಟಿಗೆಯ ಮೇಲ್ಗಡೆ ದೇವರ ವೈಭವವನ್ನು ತೋರ್ಪಡಿಸುವ ಕೆರೂಬಿಗಳಿದ್ದವು. ಈ ಕೆರೂಬಿಗಳು ಕೃಪಾಸನವನ್ನು ಆಚ್ಛಾದಿಸಿಕೊಂಡಿದ್ದವು. ಆದರೆ ಇವುಗಳ ಕುರಿತು ಎಲ್ಲವನ್ನೂ ನಾವು ಈಗ ಹೇಳಲು ಸಾಧ್ಯವಿಲ್ಲ.

ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು. ಆದರೆ ಪ್ರಧಾನಯಾಜಕನು ಮಾತ್ರ ಎರಡನೆ ಕೊಠಡಿಯ ಒಳಗೆ ಹೋಗಬಹುದಿತ್ತು. ಅವನು ವರ್ಷಕ್ಕೊಮ್ಮೆ ಮಾತ್ರ ಅದರೊಳಗೆ ಹೋಗುತ್ತಿದ್ದನು. ಅವನು ತನ್ನೊಂದಿಗೆ ರಕ್ತವನ್ನು ತೆಗೆದುಕೊಳ್ಳದೆ ಎಂದೂ ಅದರೊಳಗೆ ಪ್ರವೇಶಿಸುತ್ತಿರಲಿಲ್ಲ. ತನಗೋಸ್ಕರವಾಗಿಯೂ ಜನರು ತಿಳಿಯದೆ ಮಾಡಿದ ಪಾಪಗಳಿಗಾಗಿಯೂ ಅವನು ಆ ರಕ್ತವನ್ನು ದೇವರಿಗೆ ಅರ್ಪಿಸುತ್ತಿದ್ದನು.

ಪವಿತ್ರಾತ್ಮನು ಆ ಎರಡು ಪ್ರತ್ಯೇಕವಾದ ಕೊಠಡಿಗಳ ಮೂಲಕ ನಮಗೆ ತಿಳಿಸುವುದೇನೆಂದರೆ, ಮೊದಲನೆ ಕೊಠಡಿಯು ಅಲ್ಲಿ ಇರುವವರೆಗೂ ಮಹಾ ಪವಿತ್ರಸ್ಥಳಕ್ಕೆ ಹೋಗುವ ಮಾರ್ಗವು ತೆರೆಯಲೇ ಇಲ್ಲ. ಈ ದಿನ ನಮಗೆ ಇದೊಂದು ಉದಾಹರಣೆಯಾಗಿದೆ. ದೇವರಿಗೆ ಅರ್ಪಿಸಲ್ಪಡುತ್ತಿದ್ದ ಕಾಣಿಕೆಗಳಿಗಾಗಲಿ ಯಜ್ಞಗಳಿಗಾಗಲಿ ದೇವಾರಾಧನೆ ಮಾಡುವ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. ಆ ವ್ಯಕ್ತಿಯ ಹೃದಯವನ್ನು ಪರಿಶುದ್ಧಗೊಳಿಸಲು ಆ ಯಜ್ಞಗಳಿಗೆ ಸಾಧ್ಯವಿರಲಿಲ್ಲ. 10 ಆ ಯಜ್ಞಗಳು ಮತ್ತು ಕಾಣಿಕೆಗಳು ಅನ್ನಪಾನಾದಿಗಳನ್ನೂ ವಿಶೇಷವಾದ ಸ್ನಾನಗಳನ್ನೂ ಕುರಿತಾಗಿದ್ದವು. ಅವು ದೇಹಕ್ಕೆ ಸಂಬಂಧಿಸಿದ ನಿಯಮಗಳೇ ಹೊರತು ಜನರ ಹೃದಯಕ್ಕೆ ಸಂಬಂಧಿಸಿದ್ದವುಗಳಲ್ಲ. ಜನರಿಗೆ ದೇವರ ಹೊಸ ಮಾರ್ಗವು ಲಭಿಸುವ ಕಾಲದವರೆಗೆ, ಅವರು ಅನುಸರಿಸಲೆಂದು ಆ ನಿಯಮಗಳನ್ನು ದೇವರೇ ಕೊಟ್ಟನು.

ಹೊಸ ಒಡಂಬಡಿಕೆಗನುಸಾರವಾಗಿ ಆರಾಧನೆ

11 ಆದರೆ ಕ್ರಿಸ್ತನು ಈಗಾಗಲೇ ಪ್ರಧಾನಯಾಜಕನಾಗಿ ಬಂದಿದ್ದಾನೆ. ಈಗ ನಾವು ಹೊಂದಿರುವ ಉತ್ತಮ ಸಂಗತಿಗಳಿಗೆ ಆತನು ಪ್ರಧಾನಯಾಜಕನಾಗಿದ್ದಾನೆ. ಇತರ ಯಾಜಕರಾದರೊ ಗುಡಾರದಲ್ಲಿ ಸೇವೆಯನ್ನು ಮಾಡಿದರು. ಆದರೆ ಕ್ರಿಸ್ತನು ಗುಡಾರದಲ್ಲಿ ಸೇವೆ ಮಾಡದೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಳದಲ್ಲಿ ಸೇವೆ ಮಾಡುತ್ತಾನೆ. ಅದು ಮತ್ತಷ್ಟು ಪರಿಪೂರ್ಣವಾದದ್ದು. ಅದು ಮನುಷ್ಯರಿಂದ ನಿರ್ಮಿತವಾದದ್ದಲ್ಲ. ಲೋಕಕ್ಕೆ ಸೇರಿದ್ದೂ ಅಲ್ಲ. 12 ಆತನು ಒಂದೇ ಒಂದು ಸಾರಿ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿದನು. ಆತನು ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತದಿಂದಲೇ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸಿ ನಮಗೆ ನಿತ್ಯಸ್ವಾತಂತ್ರ್ಯವನ್ನು ತಂದುಕೊಟ್ಟನು.

13 ಹೋತಗಳ ಮತ್ತು ಹೋರಿಗಳ ರಕ್ತವನ್ನೂ ಹಸುಗಳ ಬೂದಿಯನ್ನೂ ಆ ಆರಾಧನೆಯ ಸ್ಥಳದಲ್ಲಿ ಪ್ರವೇಶಿಸುವಷ್ಟು ಶುದ್ಧರಾಗಿಲ್ಲದ ಜನರ ಮೇಲೆ ಚಿಮುಕಿಸಲಾಗುತ್ತಿತ್ತು. ಆ ರಕ್ತ ಮತ್ತು ಬೂದಿ ಜನರ ದೇಹಗಳನ್ನು ಮಾತ್ರ ಶುದ್ಧಿಗೊಳಿಸುತ್ತಿದ್ದವು. 14 ಆದ್ದರಿಂದ ಆತನ ರಕ್ತವು ಖಚಿತವಾಗಿ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತದೆ. ಆತನು ನಿತ್ಯಾತ್ಮನ ಮೂಲಕ ತನ್ನನ್ನು ತಾನೇ ದೇವರಿಗೆ ನಿಷ್ಕಳಂಕವಾದ ಯಜ್ಞವನ್ನಾಗಿ ಅರ್ಪಿಸಿಕೊಂಡನು. ಆತನ ರಕ್ತವು ನಮ್ಮನ್ನು ನಮ್ಮ ಕೆಟ್ಟಕಾರ್ಯಗಳಿಂದ ಪರಿಪೂರ್ಣವಾಗಿ ಬಿಡಿಸಿ ನಾವು ಜೀವಸ್ವರೂಪನಾದ ದೇವರನ್ನು ಆರಾಧಿಸಲು ಸಾಧ್ಯವಾಗುವಂತೆ ನಮ್ಮ ಹೃದಯವನ್ನೂ ಪರಿಶುದ್ಧಗೊಳಿಸುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International