Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
2 ಸಮುವೇಲನು 7:1-11

ದೇವಾಲಯ ಕಟ್ಟಲು ದಾವೀದನ ಅಪೇಕ್ಷೆ

ದಾವೀದನು ತನ್ನ ಅರಮನೆಯಲ್ಲಿ ಸುಖವಾಗಿ ವಾಸಿಸುವಂತೆಯೂ ಅವನ ಸುತ್ತಲಿನ ಶತ್ರುಗಳಿಂದ ಭಯವಿಲ್ಲದಂತೆಯೂ ಯೆಹೋವನು ಮಾಡಿದನು. ಆಗ ರಾಜನಾದ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದಿಂದ ನಿರ್ಮಿಸಿದ ವೈಭವದ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಪವಿತ್ರ ಪೆಟ್ಟಿಗೆಯನ್ನು ಇನ್ನೂ ಗುಡಾರದಲ್ಲಿಯೇ ಇಟ್ಟಿದ್ದೇನೆ. ಅದಕ್ಕಾಗಿ ಒಂದು ಆಲಯವನ್ನು ಕಟ್ಟಬೇಕು” ಎಂದು ಹೇಳಿದನು.

ನಾತಾನನು ರಾಜನಾದ ದಾವೀದನಿಗೆ, “ನೀನು ನಿಜವಾಗಿಯೂ ಏನನ್ನು ಮಾಡಬೇಕೆಂದಿರುವೆಯೋ ಅದನ್ನು ಮಾಡು; ಯೆಹೋವನು ನಿನ್ನೊಂದಿಗಿದ್ದಾನೆ” ಎಂದು ಹೇಳಿದನು.

ಆದರೆ ಅಂದು ರಾತ್ರಿ ನಾತಾನನಿಗೆ ಯೆಹೋವನು ಹೀಗೆ ಹೇಳಿದನು:

“ನೀನು ನನ್ನ ಸೇವಕನಾದ ದಾವೀದನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸು: ‘ನನ್ನ ವಾಸಕ್ಕಾಗಿ ಆಲಯವನ್ನು ಕಟ್ಟುವ ವ್ಯಕ್ತಿಯು ನೀನಲ್ಲ. ಈಜಿಪ್ಟಿನಿಂದ ಇಸ್ರೇಲರನ್ನು ಹೊರತಂದ ಸಮಯದಲ್ಲಿ ನಾನು ಆಲಯದಲ್ಲಿ ವಾಸಮಾಡಲಿಲ್ಲ. ನಾನು ಗುಡಾರದಲ್ಲಿ ವಾಸಮಾಡುತ್ತಾ ಸಂಚರಿಸಿದೆನು. ಗುಡಾರವೇ ನನ್ನ ಆಲಯವಾಗಿತ್ತು. ನನಗಾಗಿ ದೇವದಾರು ಮರದಿಂದ ಆಲಯ ಕಟ್ಟುವಂತೆ ಇಸ್ರೇಲರ ಯಾವ ಕುಲದವರನ್ನಾಗಲಿ ನಾನು ಕೇಳಿಕೊಳ್ಳಲಿಲ್ಲ ಎಂಬುದಾಗಿ ಯೆಹೋವನು ತಿಳಿಸುತ್ತಾನೆ’ ಎಂದು ಹೇಳು.

“ನೀನು ಇದನ್ನು ನನ್ನ ಸೇವಕನಾದ ದಾವೀದನಿಗೆ ಹೇಳಲೇಬೇಕು: ‘ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ಹುಲ್ಲುಗಾವಲಿನಲ್ಲಿ ಕುರಿಕಾಯುತ್ತಿದ್ದ ನಿನ್ನನ್ನು ನಾನು ನನ್ನ ಜನರಾದ ಇಸ್ರೇಲರಿಗೆ ನಾಯಕನಾಗಿ ಮಾಡಲು ಕರೆತಂದೆನು. ನೀನು ಹೋದ ಸ್ಥಳಗಳಲ್ಲೆಲ್ಲಾ ನಿನ್ನೊಂದಿಗಿದ್ದೆನು. ನಿನ್ನ ಶತ್ರುಗಳನ್ನು ಸೋಲಿಸಿದೆನು. ನಾನು ನಿನ್ನನ್ನು ಲೋಕದ ಇತರ ಮಹಾಪುರುಷರಂತೆಯೇ ಪ್ರಸಿದ್ಧಿಗೊಳಿಸುವೆನು. 10-11 ನಾನು ನನ್ನ ಜನರಾದ ಇಸ್ರೇಲರಿಗೆ ಒಂದು ಸ್ಥಳವನ್ನು ಆರಿಸಿಕೊಂಡು ಅವರನ್ನು ನೆಲೆಗೊಳಿಸಿದ್ದೇನೆ. ವಾಸಿಸುವುದಕ್ಕಾಗಿ ಅವರ ಸ್ವಂತ ಸ್ಥಳವನ್ನು ಅವರಿಗೆ ಕೊಟ್ಟಿದ್ದೇನೆ. ಆದ್ದರಿಂದ ಈಗ ಅವರು ಅಲೆದಾಡುವ ಅಗತ್ಯವೇ ಇಲ್ಲ. ಮೊದಲು ನನ್ನ ಜನರಾದ ಇಸ್ರೇಲರನ್ನು ಮುನ್ನಡೆಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದೆನು. ದುಷ್ಟಜನರು ಅವರಿಗೆ ತೊಂದರೆ ಕೊಟ್ಟರು. ಆದರೆ ಅದು ಈಗ ಸಂಭವಿಸುವುದಿಲ್ಲ. ನಿನಗೆ ಶತ್ರು ಭಯವಿಲ್ಲದಂತೆ ಮಾಡುತ್ತೇನೆ; ನಿನ್ನ ಕುಟುಂಬದಿಂದಲೇ ರಾಜರುಗಳನ್ನು ಬರಮಾಡುತ್ತೇನೆ.

2 ಸಮುವೇಲನು 7:16

16 ನಿನ್ನ ಕುಟುಂಬ ಮತ್ತು ರಾಜ್ಯ ಎಂದೆಂದಿಗೂ ಸ್ಥಿರವಾಗಿರುವುದು. ನಿನ್ನ ಸಿಂಹಾಸನವು ಶಾಶ್ವತವಾಗಿರುವುದು.’”

ಲೂಕ 1:46-55

ಮರಿಯಳು ದೇವರನ್ನು ಸ್ತುತಿಸಿದಳು

46 ಆಗ ಮರಿಯಳು,

47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
    ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
    ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
    ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
    ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
    ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
    ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
    ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.

ಕೀರ್ತನೆಗಳು 89:1-4

ರಚನೆಗಾರ: ಜೇರಹ ಕುಟುಂಬದ ಏತಾನ.

89 ಯೆಹೋವನೇ, ನಿನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
    ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.

ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
    ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
    ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”

ಕೀರ್ತನೆಗಳು 89:19-26

19 ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ:
    “ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ.
ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು
    ಗಣ್ಯವ್ಯಕ್ತಿಯನ್ನಾಗಿ ಮಾಡಿದೆ.
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
    ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
    ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
    ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
    ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
    ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
    ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
    ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.

ರೋಮ್ನಗರದವರಿಗೆ 16:25-27

25 ದೇವರಿಗೆ ಮಹಿಮೆಯಾಗಲಿ. ನಿಮ್ಮನ್ನು ನಂಬಿಕೆಯಲ್ಲಿ ಬಲಗೊಳಿಸಬಲ್ಲಾತನು ದೇವರೊಬ್ಬನೇ. ನಾನು ಉಪದೇಶಿಸುವ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಬಲಗೊಳಿಸಬಲ್ಲನು. ನಾನು ಯೇಸು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುತ್ತಿರುವುದೇ ಆ ಸುವಾರ್ತೆ. ದೇವರು ತಿಳಿಯಪಡಿಸಿದ ಆ ಸುವಾರ್ತೆಯು ರಹಸ್ಯವಾದ ಸತ್ಯವಾಗಿತ್ತು ಮತ್ತು ಆರಂಭದಿಂದಲೂ ಮರೆಯಾಗಿತ್ತು. 26 ಆದರೆ ರಹಸ್ಯವಾದ ಆ ಸತ್ಯವನ್ನು ಈಗ ನಮಗೆ ತೋರಿಸಲಾಗಿದೆ. ಮತ್ತು ಆ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಆಜ್ಞಾಪಿಸಿರುವುದು ಇದನ್ನೇ. ಎಲ್ಲಾ ಜನರು ನಂಬಿಕೊಂಡು ದೇವರಿಗೆ ವಿಧೇಯರಾಗಲೆಂದು ರಹಸ್ಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲಾಗಿದೆ. ದೇವರು ಸದಾಕಾಲ ಜೀವಿಸುತ್ತಾನೆ. 27 ಒಬ್ಬನೇ ಜ್ಞಾನಿಯಾದ ದೇವರಿಗೆ ಯೇಸು ಕ್ರಿಸ್ತನ ಮೂಲಕ ಎಂದೆಂದಿಗೂ ಮಹಿಮೆ ಉಂಟಾಗಲಿ. ಆಮೆನ್.

ಲೂಕ 1:26-38

ಕನ್ಯೆ ಮರಿಯಳು

26-27 ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. 28 ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.

29 ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯಪಟ್ಟಳು.

30 ದೇವದೂತನು ಆಕೆಗೆ, “ಮರಿಯಳೇ, ಭಯಪಡಬೇಡ. ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. 31 ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. 32 ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. 33 ಯೇಸುವು ಯಾಕೋಬನ ಜನರನ್ನು ಸದಾಕಾಲ ಆಳುವನು. ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದನು.

34 ಮರಿಯಳು ದೇವದೂತನಿಗೆ, “ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲಾ!” ಎಂದು ಹೇಳಿದಳು.

35 ದೇವದೂತನು ಮರಿಯಳಿಗೆ, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರಮಗುವು ‘ದೇವರ ಮಗ’ ಎನಿಸಿಕೊಳ್ಳುವನು. 36 ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. 37 ದೇವರಿಗೆ ಯಾವುದೂ ಅಸಾಧ್ಯವಲ್ಲ,” ಎಂದು ಹೇಳಿದನು.

38 ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International