Revised Common Lectionary (Semicontinuous)
ರಚನೆಗಾರ: ಜೇರಹ ಕುಟುಂಬದ ಏತಾನ.
89 ಯೆಹೋವನೇ, ನಿನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
2 ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.
3 ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
4 ‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”
19 ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ:
“ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ.
ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು
ಗಣ್ಯವ್ಯಕ್ತಿಯನ್ನಾಗಿ ಮಾಡಿದೆ.
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.
2 ಚೊರ್ಗಾ ನಗರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಮಾನೋಹ, ಅವನು ದಾನ್ ಕುಲದವನಾಗಿದ್ದನು. ಮಾನೋಹನಿಗೆ ಒಬ್ಬ ಹೆಂಡತಿಯಿದ್ದಳು. ಆದರೆ ಅವಳು ಬಂಜೆಯಾಗಿದ್ದಳು. 3 ಒಮ್ಮೆ ಯೆಹೋವನ ದೂತನು ಮಾನೋಹನ ಹೆಂಡತಿಗೆ ಪ್ರತ್ಯಕ್ಷನಾಗಿ, “ನೀನು ಮಕ್ಕಳನ್ನು ಪಡೆಯಲು ಸಾಧ್ಯವಾಗಿಲ್ಲ; ಆದರೆ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. 4 ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡಬೇಡ. 5 ಏಕೆಂದರೆ ನೀನು ಗರ್ಭವತಿಯಾಗಿರುವೆ ಮತ್ತು ನಿನಗೊಬ್ಬ ಮಗನು ಹುಟ್ಟಲಿದ್ದಾನೆ. ಅವನು ಹುಟ್ಟಿದಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾಗಿದ್ದಾನೆ. ಆದ್ದರಿಂದ ಅವನ ಕೂದಲನ್ನು ಕತ್ತರಿಸಕೂಡದು. ಅವನು ಇಸ್ರೇಲರನ್ನು ಫಿಲಿಷ್ಟಿಯರ ಹಿಡಿತದಿಂದ ಬಿಡಿಸುವನು” ಎಂದು ಹೇಳಿದನು.
6 ಆಗ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವಪುರುಷನು ನನ್ನಲ್ಲಿಗೆ ಬಂದನು. ಅವನು ದೇವರಿಂದ ಬಂದ ದೇವದೂತನಂತೆ ಕಂಡನು. ನನಗೆ ಭಯವಾಯಿತು. ನಾನು ಅವನಿಗೆ, ‘ನೀನು ಎಲ್ಲಿಂದ ಬಂದೆ?’ ಎಂದು ಕೇಳಲಿಲ್ಲ; ಅವನೂ ನನಗೆ ತನ್ನ ಹೆಸರನ್ನು ಹೇಳಲಿಲ್ಲ. 7 ಆದರೆ ಅವನು ನನಗೆ, ‘ನೀನು ಗರ್ಭವತಿಯಾಗಿರುವೆ; ನಿನಗೊಬ್ಬ ಮಗನು ಹುಟ್ಟುತ್ತಾನೆ. ನೀನು ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ. ಯಾವ ನಿಷಿದ್ಧ ಆಹಾರವನ್ನೂ ತಿನ್ನಬೇಡ. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಸಾಯುವವರೆಗೂ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು’” ಅಂದಳು.
8 ಆಗ ಮಾನೋಹನು ಯೆಹೋವನಿಗೆ, “ಸ್ವಾಮೀ, ಆ ದೇವಪುರುಷನನ್ನು ನಮ್ಮಲ್ಲಿಗೆ ಇನ್ನೊಮ್ಮೆ ದಯವಿಟ್ಟು ಕಳುಹಿಸೆಂದು ಬೇಡಿಕೊಳ್ಳುತ್ತೇವೆ. ಹುಟ್ಟಿಲಿರುವ ಮಗನಿಗಾಗಿ ನಾವು ಮಾಡಬೇಕಾದದ್ದನ್ನು ಅವನು ನಮಗೆ ತಿಳಿಸಲಿ” ಎಂದು ಬೇಡಿಕೊಂಡನು.
9 ದೇವರು ಮಾನೋಹನ ಪ್ರಾರ್ಥನೆಯನ್ನು ಕೇಳಿದನು. ದೇವದೂತನು ಮತ್ತೊಮ್ಮೆ ಆ ಸ್ತ್ರೀಯ ಬಳಿಗೆ ಬಂದನು. ಆಗ ಅವಳು ಹೊಲದಲ್ಲಿ ಕುಳಿತಿದ್ದಳು; ಅವಳ ಗಂಡ ಅಲ್ಲಿರಲಿಲ್ಲ. 10 ಆ ಸ್ತ್ರೀಯು ಓಡಿಹೋಗಿ ತನ್ನ ಗಂಡನಿಗೆ, “ಆ ಮನುಷ್ಯನು ತಿರುಗಿ ಬಂದಿದ್ದಾನೆ, ಆ ದಿನ ನನ್ನಲ್ಲಿಗೆ ಬಂದ ಮನುಷ್ಯನು ಈಗ ಇಲ್ಲಿದ್ದಾನೆ” ಅಂದಳು.
11 ಮಾನೋಹನು ಎದ್ದು ತನ್ನ ಹೆಂಡತಿಯನ್ನು ಹಿಂಬಾಲಿಸಿದನು. ಅವನು ಆ ಮನುಷ್ಯನ ಹತ್ತಿರ ಬಂದಾಗ, “ನನ್ನ ಹೆಂಡತಿಯ ಜೊತೆಗೆ ಹಿಂದೆ ಮಾತನಾಡಿದ ಮನುಷ್ಯನು ನೀನೋ?” ಎಂದು ಕೇಳಿದನು.
ಆ ದೇವದೂತನು, “ಹೌದು, ನಾನೇ” ಅಂದನು.
12 ಮಾನೋಹನು, “ನೀನು ಹೇಳಿದ್ದು ನೆರವೇರುವುದೆಂದು ನಾನು ನಂಬುತ್ತೇನೆ. ಆ ಮಗುವಿಗೋಸ್ಕರ ನಾವು ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು” ಎಂದು ಕೇಳಿದನು.
13 ಯೆಹೋವನ ದೂತನು ಮಾನೋಹನಿಗೆ, “ನಿನ್ನ ಹೆಂಡತಿಯು ನಾನು ಹೇಳಿದ್ದೆಲ್ಲವನ್ನು ಮಾಡಬೇಕು. ಅವಳು ದ್ರಾಕ್ಷಾಫಲಗಳನ್ನು ತಿನ್ನಬಾರದು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬಾರದು. 14 ಅವಳು ನಿಷಿದ್ಧವಾದ ಯಾವ ಆಹಾರವನ್ನೂ ತಿನ್ನಬಾರದು. ಹೀಗೆ ನಾನು ಅವಳಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಬೇಕು” ಎಂದು ಹೇಳಿದನು.
15 ಆಗ ಮಾನೋಹನು ಯೆಹೋವನ ದೂತನಿಗೆ, “ನೀನು ಸ್ವಲ್ಪಹೊತ್ತು ಇಲ್ಲಿಯೇ ಇರಬೇಕೆಂಬುದು ನಮ್ಮ ಇಚ್ಛೆ. ನಾವು ನಿನ್ನ ಊಟಕ್ಕಾಗಿ ಒಂದು ಮರಿಹೋತವನ್ನು ಬೇಯಿಸಿ ಬಡಿಸುತ್ತೇವೆ” ಎಂದನು.
16 ಆಗ ಯೆಹೋವನ ದೂತನು ಮಾನೋಹನಿಗೆ, “ನೀನು ನನ್ನನ್ನು ಹೋಗದಂತೆ ನಿಲ್ಲಿಸಿಕೊಂಡರೂ ಸಹ ನಾನು ನಿಮ್ಮ ಆಹಾರವನ್ನು ಊಟ ಮಾಡುವುದಿಲ್ಲ. ಏನಾದರೂ ಕೊಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸು” ಅಂದನು. (ಅವನು ಯೆಹೋವನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.)
17 ಆದ್ದರಿಂದ ಮಾನೋಹನು ಯೆಹೋವನ ದೂತನಿಗೆ, “ನೀನು ಹೇಳಿದ್ದು ನೆರವೇರಿದಾಗ ನಿನ್ನನ್ನು ಸನ್ಮಾನಿಸಬೇಕೆಂದಿರುತ್ತೇವೆ. ನಿನ್ನ ಹೆಸರೇನು?” ಎಂದು ಕೇಳಿದನು.
18 ಯೆಹೋವನ ದೂತನು, “ನೀನು ನನ್ನ ಹೆಸರನ್ನು ಏಕೆ ಕೇಳುವೆ? ಅದು ನೀನು ನಂಬಲಾರದಷ್ಟು ಆಶ್ಚರ್ಯಕರವಾದದ್ದು” ಅಂದನು.
19 ಮಾನೋಹನು ಒಂದು ಮರಿಹೋತವನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು. 20 ಮಾನೋಹ ಮತ್ತು ಅವನ ಹೆಂಡತಿಯ ಕಣ್ಣೆದುರಿನಲ್ಲಿಯೇ ಯಜ್ಞವೇದಿಕೆಯಿಂದ ಆಕಾಶಕ್ಕೆ ಹೋಗುತ್ತಿರುವ ಅಗ್ನಿಜ್ವಾಲೆಯಲ್ಲಿ ಆ ಯೆಹೋವನ ದೂತನು ಆಕಾಶಕ್ಕೆ ಏರಿ ಹೋದನು.
ಮಾನೋಹ ಮತ್ತು ಅವನ ಹೆಂಡತಿ ಅದನ್ನು ಕಂಡು ನೆಲದ ಮೇಲೆ ಅಡ್ಡಬಿದ್ದರು. 21 ಆ ಮನುಷ್ಯನು ನಿಜವಾಗಿಯೂ ಯೆಹೋವನ ದೂತನೆಂದು ಕೊನೆಗೆ ಮಾನೋಹನು ಅರಿತುಕೊಂಡನು. ಯೆಹೋವನ ದೂತನು ಅವರಿಗೆ ಪುನಃ ಕಾಣಿಸಲಿಲ್ಲ. 22 ನಂತರ ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಣ್ಣಾರೆ ಕಂಡೆವು, ಆದ್ದರಿಂದ ಖಂಡಿತವಾಗಿ ನಾವು ಸತ್ತುಹೋಗುತ್ತೇವೆ” ಅಂದನು.
23 ಆದರೆ ಅವನ ಹೆಂಡತಿಯು ಅವನಿಗೆ, “ಯೆಹೋವನು ನಮ್ಮನ್ನು ಕೊಲ್ಲಬಯಸುವುದಿಲ್ಲ. ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ ಆತನು ನಮ್ಮ ಕೈಯಿಂದ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಆತನು ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ; ಇದನ್ನೆಲ್ಲ ನಮಗೆ ಹೇಳುತ್ತಿರಲಿಲ್ಲ” ಅಂದಳು.
24 ಆ ಸ್ತ್ರೀಗೆ ಒಂದು ಗಂಡುಮಗು ಜನಿಸಿತು. ಅವಳು ಅದಕ್ಕೆ ಸಂಸೋನ ಎಂದು ಹೆಸರಿಟ್ಟಳು. ಸಂಸೋನನು ಬೆಳೆದು ದೊಡ್ಡವನಾದನು. ಯೆಹೋವನು ಅವನನ್ನು ಆಶೀರ್ವದಿಸಿದನು.
ಯೇಸುವಿನ ಬಗ್ಗೆ ಜನರ ವಾದವಿವಾದ
40 ಈ ಸಂಗತಿಗಳನ್ನು ಕೇಳಿದ ಜನರಲ್ಲಿ ಕೆಲವರು, “ಈ ಮನುಷ್ಯನು ನಿಜವಾಗಿಯೂ ಪ್ರವಾದಿ” ಎಂದರು.
41 “ಆತನೇ ಕ್ರಿಸ್ತನು” ಎಂದು ಇನ್ನು ಕೆಲವರು ಹೇಳಿದರು.
ಮತ್ತೆ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದಿಲ್ಲ. 42 ಕ್ರಿಸ್ತನು ದಾವೀದನ ಕುಟುಂಬದವನೆಂತಲೂ ದಾವೀದನು ವಾಸಿಸಿದ ಬೆತ್ಲೆಹೇಮ್ ಊರಿನಿಂದ ಆತನು ಬರುತ್ತಾನೆಂತಲೂ ಪವಿತ್ರ ಗ್ರಂಥವು ತಿಳಿಸುತ್ತದೆ” ಎಂದರು. 43 ಹೀಗೆ ಯೇಸುವಿನ ಕುರಿತು ಜನರಲ್ಲಿ ಭೇದ ಉಂಟಾಯಿತು. 44 ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಬಂಧಿಸಲು ಯಾರೂ ಪ್ರಯತ್ನಿಸಲಿಲ್ಲ.
ಯೆಹೂದ್ಯನಾಯಕರ ಅಪನಂಬಿಕೆ
45 ದೇವಾಲಯದ ಸಿಪಾಯಿಗಳು ಹಿಂತಿರುಗಿದಾಗ, ಮಹಾಯಾಜಕರು ಮತ್ತು ಫರಿಸಾಯರು ಅವರಿಗೆ, “ನೀವು ಅವನನ್ನು ಏಕೆ ಹಿಡಿದುಕೊಂಡು ಬರಲಿಲ್ಲ?” ಎಂದು ಕೇಳಿದರು.
46 ದೇವಾಲಯದ ಸಿಪಾಯಿಗಳು, “ಈತನಂತೆ ಆಶ್ಚರ್ಯಕರವಾದ ಸಂಗತಿಗಳನ್ನು ಬೇರೆ ಯಾರೂ ಹೇಳಿಲ್ಲ” ಎಂದು ಉತ್ತರಕೊಟ್ಟರು.
47 ಫರಿಸಾಯರು, “ಹಾಗಾದರೆ, ಯೇಸು ನಿಮ್ಮನ್ನು ಸಹ ಮರುಳುಗೊಳಿಸುತ್ತಿದ್ದಾನೆ! 48 ನಾಯಕರಲ್ಲಿ ಯಾರಾದರೂ ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದಾರೋ? ಇಲ್ಲ! ಫರಿಸಾಯರಾದ ನಮ್ಮಲ್ಲಿ ಯಾರಾದರೂ ಆತನನ್ನು ನಂಬಿದ್ದಾರೋ? ಇಲ್ಲ! 49 ಆದರೆ ಹೊರಗಿನ ಜನರಿಗೆ ಧರ್ಮಶಾಸ್ತ್ರದ ಬಗ್ಗೆ ಏನೂ ಗೊತ್ತಿಲ್ಲ. ಅವರು ದೇವರ ಶಾಪಕ್ಕೆ ಒಳಗಾಗಿದ್ದಾರೆ!” ಎಂದು ಉತ್ತರಕೊಟ್ಟರು.
50 ಆದರೆ ಆ ಗುಂಪಿನಲ್ಲಿ ನಿಕೊದೇಮನು ಇದ್ದನು. ಮೊದಲೊಮ್ಮೆ ಯೇಸುವನ್ನು ನೋಡಲು ಹೋಗಿದ್ದವನು ಇವನೇ. 51 ನಿಕೊದೇಮನು, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ ತೀರ್ಪು ನೀಡಲು ನಮ್ಮ ಧರ್ಮಶಾಸ್ತ್ರವು ಸಮ್ಮತಿಸುವುದಿಲ್ಲ. ಆತನು ಮಾಡಿರುವುದನ್ನು ನಾವು ತಿಳಿದುಕೊಳ್ಳುವವರೆಗೆ ಆತನಿಗೆ ತೀರ್ಪು ಮಾಡಲಾಗದು” ಎಂದು ಹೇಳಿದನು.
52 ಯೆಹೂದ್ಯನಾಯಕರು, “ನೀನೂ ಗಲಿಲಾಯದವನೋ? ಪವಿತ್ರ ಗ್ರಂಥವನ್ನು ಅಧ್ಯಯನಮಾಡು. ಗಲಿಲಾಯದಿಂದ ಯಾವ ಪ್ರವಾದಿಯೂ ಬರುವುದಿಲ್ಲವೆಂಬುದು ಆಗ ನಿನಗೆ ತಿಳಿಯುತ್ತದೆ” ಎಂದು ಉತ್ತರಕೊಟ್ಟರು.
Kannada Holy Bible: Easy-to-Read Version. All rights reserved. © 1997 Bible League International