Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 89:1-4

ರಚನೆಗಾರ: ಜೇರಹ ಕುಟುಂಬದ ಏತಾನ.

89 ಯೆಹೋವನೇ, ನಿನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
    ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.

ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
    ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
    ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”

ಕೀರ್ತನೆಗಳು 89:19-26

19 ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ:
    “ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ.
ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು
    ಗಣ್ಯವ್ಯಕ್ತಿಯನ್ನಾಗಿ ಮಾಡಿದೆ.
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
    ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
    ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
    ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
    ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
    ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
    ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
    ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.

2 ಸಮುವೇಲನು 6:1-11

ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತಂದರು

ಇಸ್ರೇಲಿನಲ್ಲಿ ಆರಿಸಲ್ಪಟ್ಟ ಮೂವತ್ತು ಸಾವಿರ ಮಂದಿಯನ್ನು ದಾವೀದನು ಮತ್ತೆ ಒಟ್ಟುಗೂಡಿಸಿದನು. ಆಗ ದಾವೀದನು ತನ್ನ ಜನರೊಂದಿಗೆ ಯೆಹೂದದ ಬಾಳಾ ಎಂಬಲ್ಲಿಗೆ ಹೋದನು. ಯೆಹೂದದ ಬಾಳಾ ಎಂಬ ಸ್ಥಳದಲ್ಲಿದ್ದ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದನು. ಯೆಹೋವನನ್ನು ಆರಾಧಿಸುವುದಕ್ಕಾಗಿ ಜನರು ಪವಿತ್ರ ಪೆಟ್ಟಿಗೆಯ ಬಳಿ ಹೋಗುತ್ತಿದ್ದರು. ಪವಿತ್ರ ಪೆಟ್ಟಿಗೆಯು ಯೆಹೋವನ ಪೀಠದಂತಿತ್ತು. ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಯೆಹೋವನು ರಾಜನಂತೆ ದೂತರ ಮೇಲೆ ಆಸೀನನಾಗಿದ್ದನು. ದಾವೀದನ ಜನರು ಪವಿತ್ರ ಪೆಟ್ಟಿಗೆಯನ್ನು ಹೊಸಬಂಡಿಯ ಮೇಲಿಟ್ಟರು. ಅವರು ಬೆಟ್ಟದ ಮೇಲಿರುವ ಅಬೀನಾದಾಬನ ಮನೆಯಿಂದ ದೇವರ ಪವಿತ್ರ ಪೆಟ್ಟಿಗೆಯನ್ನು ತಂದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ಹೊಡೆದರು.

ಬೆಟ್ಟದ ಮೇಲಿನ ಅಬೀನಾದಾಬನ ಮನೆಯಿಂದ ಹೊಸ ಬಂಡಿಯನ್ನು ತರುವಾಗ ಉಜ್ಜನೂ ಅಹಿಯೋವನೂ ಮುನ್ನಡೆಸಿದರು. ಈ ಬಂಡಿಯ ಮೇಲೆ ದೇವರ ಪವಿತ್ರ ಪೆಟ್ಟಿಗೆಯಿತ್ತು. ಉಜ್ಜನೂ ಬಂಡಿಯ ಮೇಲಿದ್ದನು. ಪವಿತ್ರ ಪೆಟ್ಟಿಗೆಯ ಮುಂದೆ ಅಹಿಯೋವನು ನಡೆಯುತ್ತಿದ್ದನು. ದಾವೀದನು ಮತ್ತು ಇಸ್ರೇಲರೆಲ್ಲರು ಕಿನ್ನರಿ, ದಮ್ಮಡಿ, ಝಲ್ಲರಿ, ತಾಳಗಳನ್ನು ಬಾರಿಸುತ್ತಾ ಸನ್ನಿಧಿಯಲ್ಲಿ ನೃತ್ಯಮಾಡುತ್ತಿದ್ದರು. ದಾವೀದನ ಜನರು ನಾಕೋನನ ಕಣಕ್ಕೆ ಬಂದಾಗ ಹಸುಗಳು ಮುಗ್ಗರಿಸಿದವು ಹಾಗೂ ದೇವರ ಪವಿತ್ರ ಪೆಟ್ಟಿಗೆಯು ಬಂಡಿಯಿಂದ ಕೆಳಗೆ ಬೀಳುವುದರಲ್ಲಿತ್ತು. ಪವಿತ್ರ ಪೆಟ್ಟಿಗೆಯು ಬೀಳದಂತೆ ಉಜ್ಜನು ಹಿಡಿದನು. ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು.[a] ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು. ಯೆಹೋವನು ಉಜ್ಜನನ್ನು ಕೊಂದದ್ದರಿಂದ ದಾವೀದನು ತಳಮಳಗೊಂಡನು. ದಾವೀದನು ಆ ಸ್ಥಳವನ್ನು “ಪೆರೆಚುಜ್ಜಾ” ಎಂದು ಕರೆದನು. ಆ ಸ್ಥಳವನ್ನು ಇಂದಿಗೂ “ಪೆರೆಚುಜ್ಜಾ” ಎಂದೇ ಕರೆಯುತ್ತಾರೆ.

ಅಂದು ದಾವೀದನು ಯೆಹೋವನಿಗೆ ಭಯಪಟ್ಟು, “ದೇವರ ಪವಿತ್ರ ಪೆಟ್ಟಿಗೆಯನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದು ಯೋಚಿಸಿಕೊಂಡು 10 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ದಾವೀದ ನಗರದೊಳಕ್ಕೆ ತರಲಿಲ್ಲ. ದಾವೀದನು ಪವಿತ್ರ ಪೆಟ್ಟಿಗೆಯನ್ನು ಗತ್‌ನ ಓಬೇದೆದೋಮನ ಮನೆಯಲ್ಲಿಟ್ಟನು. 11 ಓಬೇದೆದೋಮನ ಮನೆಯಲ್ಲಿ ಪವಿತ್ರ ಪೆಟ್ಟಿಗೆಯು ಮೂರು ತಿಂಗಳ ಕಾಲ ಇತ್ತು. ಓಬೇದೆದೋಮನನ್ನೂ ಅವನ ಕುಟುಂಬವನ್ನೂ ಯೆಹೋವನು ಆಶೀರ್ವದಿಸಿದನು.

ಇಬ್ರಿಯರಿಗೆ 1:1-4

ದೇವರು ತನ್ನ ಮಗನ ಮೂಲಕ ಮಾತನಾಡಿದನು

ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು. ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು. ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International