Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
125 ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು.
ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
2 ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ.
ಯೆಹೋವನು ತನ್ನ ಜನರ ಸುತ್ತಲೂ ಇರುವನು.
ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
3 ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ.
ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.
4 ಯೆಹೋವನೇ, ನೀತಿವಂತರಿಗೂ
ಯಥಾರ್ಥವಂತರಿಗೂ ಉಪಕಾರಮಾಡು.
5 ದುಷ್ಟರು ಕುತಂತ್ರಗಳನ್ನು ಮಾಡುವರು.
ಯೆಹೋವನು ಅವರನ್ನು ದಂಡಿಸುವನು.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
9 ಅವರು ನದಿಯನ್ನು ದಾಟಿದ ಮೇಲೆ ಎಲೀಯನು ಎಲೀಷನಿಗೆ, “ದೇವರು ನನ್ನನ್ನು ನಿನ್ನಿಂದ ತೆಗೆದುಕೊಳ್ಳುವುದಕ್ಕೆ ಮುಂಚೆ, ನಾನು ನಿನಗೆ ಏನು ಮಾಡಬೇಕೆಂದು ನೀನು ಅಪೇಕ್ಷಿಸುವೆ?” ಎಂದು ಕೇಳಿದನು.
ಎಲೀಷನು, “ನಿನ್ನ ಆತ್ಮವು ನನ್ನ ಮೇಲೆ ಎರಡರಷ್ಟಿರಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ” ಎಂದು ಹೇಳಿದನು.
10 ಎಲೀಯನು, “ನೀನು ಕಷ್ಟಕರವಾದುದನ್ನು ಬೇಡಿಕೊಂಡೆ. ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಂಡರೆ, ಅದು ನಿನಗೆ ದೊರೆಯುವುದು. ಆದರೆ ನಿನ್ನಿಂದ ನನ್ನನ್ನು ತೆಗೆದುಕೊಳ್ಳುವಾಗ ನೀನು ನನ್ನನ್ನು ಕಾಣದಿದ್ದರೆ, ಅದು ನಿನಗೆ ದೊರೆಯುವುದಿಲ್ಲ” ಎಂದು ಹೇಳಿದನು.
11 ಎಲೀಯ ಮತ್ತು ಎಲೀಷ ಒಟ್ಟಿಗೆ ನಡೆಯುತ್ತಾ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಕೆಲವು ಕುದುರೆಗಳು ಮತ್ತು ರಥಗಳು ಬಂದು ಎಲೀಯನನ್ನು ಎಲೀಷನಿಂದ ಬೇರ್ಪಡಿಸಿದವು. ಆ ಕುದುರೆಗಳು ಮತ್ತು ರಥಗಳು ಬೆಂಕಿಯಂತಿದ್ದವು! ನಂತರ ಎಲೀಯನು ಸುಂಟರ ಗಾಳಿಯಲ್ಲಿ ಪರಲೋಕಕ್ಕೆ ಏರಿಹೋದನು.
12 ಎಲೀಷನು ಅದನ್ನು ನೋಡಿ, “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರೇಲಿಗೆ ರಥರಥಾಶ್ವಗಳೂ ಮತ್ತು ಅಶ್ವದಳವೂ ಆಗಿದ್ದವನೇ!” ಎಂದು ಕೂಗಿಕೊಂಡನು.
ಎಲೀಷನು ಎಲೀಯನನ್ನು ಮತ್ತೆ ನೋಡಲಿಲ್ಲ. ಎಲೀಷನು ತನ್ನ ಬಟ್ಟೆಗಳನ್ನು ಹಿಡಿದುಕೊಂಡು, ತನ್ನ ದುಃಖವನ್ನು ತೋರ್ಪಡಿಸಲು ಅವುಗಳನ್ನು ಹರಿದು ತುಂಡುತುಂಡು ಮಾಡಿದನು. 13 ಎಲೀಯನ ಮೇಲಂಗಿಯು ನೆಲದ ಮೇಲೆ ಬಿತ್ತು. ಎಲೀಷನು ಅದನ್ನು ಎತ್ತಿಕೊಂಡು ಜೋರ್ಡನ್ ನದಿ ತೀರಕ್ಕೆ ಬಂದನು. ಆ ಕಂಬಳಿಯಿಂದ ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವನು ಎಲ್ಲಿದ್ದಾನೆ?” ಎಂದು ಕೇಳಿದನು. 14 ಎಲೀಷನು ನೀರನ್ನು ಹೊಡೆದಾಗ, ನೀರು ಎರಡು ಭಾಗವಾಗಿ ಬಲಗಡೆಯಲ್ಲೂ ಎಡಗಡೆಯಲ್ಲೂ ನಿಂತುಕೊಂಡಿತು! ಎಲೀಷನು ನದಿಯನ್ನು ದಾಟಿದನು.
ಎಲೀಯನ ಬಗ್ಗೆ ಪ್ರವಾದಿಗಳ ವಿಚಾರ
15 ಜೆರಿಕೊದಲ್ಲಿ ಪ್ರವಾದಿಗಳ ಗುಂಪೊಂದು ಎಲೀಷನನ್ನು ಕಂಡು, “ಎಲೀಯನ ಆತ್ಮವು ಈಗ ಎಲೀಷನ ಮೇಲಿದೆ!” ಎಂದು ಹೇಳಿ ಎಲೀಷನನ್ನು ಭೇಟಿಮಾಡಲು ಬಂದರು. ಅವರು ಎಲೀಷನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 16 ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು.
ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.
17 ಎಲೀಷನು ಕಿರಿಕಿರಿಗೊಂಡು ಒಪ್ಪಿಕೊಳ್ಳುವವರೆಗೆ ಆ ಪ್ರವಾದಿಗಳ ಗುಂಪು ಅವನನ್ನು ಬೇಡಿಕೊಂಡರು. ನಂತರ ಎಲೀಷನು, “ಸರಿ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಿ” ಎಂದು ಹೇಳಿದನು.
ಪ್ರವಾದಿಗಳ ಗುಂಪು ಎಲೀಯನನ್ನು ಹುಡುಕಲು ಐವತ್ತು ಮಂದಿ ಜನರನ್ನು ಕಳುಹಿಸಿದರು. ಅವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಂಡು ಹಿಡಿಯಲಾಗಲಿಲ್ಲ. 18 ಅವರು ಎಲೀಷನು ನೆಲೆಸಿದ್ದ ಜೆರಿಕೊವಿಗೆ ಹೋದರು. ಅವರು ಎಲೀಯನನ್ನು ಕಂಡುಹಿಡಿಯಲಾಗಲಿಲ್ಲವೆಂದು ಎಲೀಷನಿಗೆ ಹೇಳಿದರು. ಎಲೀಷನು ಅವರಿಗೆ, “ನಾನು ನಿಮಗೆ ಹೋಗಬೇಡವೆಂದು ಹೇಳಿದೆನಲ್ಲ” ಎಂದನು.
ಎಲೀಷನು ನೀರನ್ನು ಶುಚಿಗೊಳಿಸಿದನು
19 ನಗರದ ಜನರು ಎಲೀಷನಿಗೆ, “ಸ್ವಾಮೀ, ಈ ನಗರವು ಒಳ್ಳೆಯ ಸ್ಥಳದಲ್ಲಿದೆಯೆಂಬುದನ್ನು ನೀನು ನೋಡುತ್ತಿರುವೆ. ಆದರೆ ನೀರು ತುಂಬಾ ಕೆಟ್ಟಿದೆ. ಆ ಕಾರಣದಿಂದಲೇ ಈ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ” ಎಂದು ಹೇಳಿದರು.
20 ಎಲೀಷನು, “ಒಂದು ಹೊಸ ಬೋಗುಣಿಯನ್ನು ತಂದು ಅದರಲ್ಲಿ ಉಪ್ಪನ್ನು ಹಾಕಿ” ಎಂದನು.
ಜನರು ಎಲೀಷನ ಬಳಿಗೆ ಒಂದು ಬೋಗುಣಿಯನ್ನು ತಂದರು. 21 ನಂತರ ಎಲೀಷನು ನೆಲದಿಂದ ನೀರು ಹರಿಯುತ್ತಿದ್ದ ಸ್ಥಳಕ್ಕೆ ಹೋದನು. ಎಲೀಷನು ಉಪ್ಪನ್ನು ನೀರಿನಲ್ಲಿ ಎಸೆದು, “‘ನಾನು ಈ ನೀರನ್ನು ಶುಚಿಗೊಳಿಸಿದ್ದೇನೆ! ಇಲ್ಲಿಂದಾಚೆಗೆ ಈ ನೀರು ಯಾರಿಗೂ ಸಾವನ್ನು ಮತ್ತು ಬಂಜೆತನವನ್ನು ಉಂಟುಮಾಡುವುದಿಲ್ಲ ಮತ್ತು ಈ ಭೂಮಿಯಲ್ಲಿ ಬೆಳೆಗಳು ಬೆಳೆಯುತ್ತವೆ’ ಎಂದು ಯೆಹೋವನು ಹೇಳುತ್ತಾನೆ” ಎಂದನು.
22 ಆ ನೀರು ಶುದ್ಧವಾಯಿತು. ಇಂದು ಆ ನೀರು ಇನ್ನೂ ಶುದ್ಧವಾಗಿದೆ. ಎಲೀಷನು ಹೇಳಿದಂತೆಯೇ ಅದು ಸಂಭವಿಸಿತು.
17 “ಸಹೋದರರೇ, ನೀವು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನನಗೆ ಗೊತ್ತಿದೆ. ನಿಮ್ಮ ನಾಯಕರು ಸಹ ಅರ್ಥಮಾಡಿಕೊಳ್ಳಲಿಲ್ಲ. 18 ಹೀಗಾಗುತ್ತದೆ ಎಂದು ದೇವರು ಮೊದಲೇ ತಿಳಿಸಿದ್ದನು. ಕ್ರಿಸ್ತನು ಶ್ರಮೆ ಅನುಭವಿಸಿ ಸಾಯುವನೆಂದು ದೇವರು ತನ್ನ ಪ್ರವಾದಿಗಳ ಮೂಲಕ ಮೊದಲೇ ತಿಳಿಸಿದ್ದನ್ನು ಹೀಗೆ ನೆರವೇರಿಸಿದ್ದಾನೆ. 19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು. 20 ಪ್ರಭುವು ನಿಮಗೆ ಆತ್ಮಿಕ ವಿಶ್ರಾಂತಿಯನ್ನು ಕೊಡುವನು. ಆತನು ಕ್ರಿಸ್ತನನ್ನಾಗಿ ಆರಿಸಿಕೊಂಡ ಯೇಸುವನ್ನು ನಿಮಗೆ ಕೊಡುವನು.
21 “ಆದರೆ ಎಲ್ಲವನ್ನು ಸರಿಪಡಿಸುವ ಕಾಲ ಬರುವ ತನಕ ಯೇಸು ಪರಲೋಕದಲ್ಲೇ ಇರಬೇಕು. ದೇವರು ಬಹುಕಾಲದ ಹಿಂದೆ ತನ್ನ ಪವಿತ್ರ ಪ್ರವಾದಿಗಳ ಸಂದೇಶದ ಮೂಲಕ ಮಾತಾಡಿದಾಗ, ಈ ಕಾಲದ ಬಗ್ಗೆ ಹೇಳಿದನು. 22 ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು. 23 ಆತನಿಗೆ ವಿಧೇಯನಾಗದವನು ದೇವಜನರಿಂದ ಬೇರ್ಪಟ್ಟು ಮರಣ ಹೊಂದುವನು.’(A)
24 “ಸಮುವೇಲನು ಮತ್ತು ಅವನ ನಂತರದ ಪ್ರವಾದಿಗಳು ಇಂದಿನ ಈ ಕಾಲದ ಬಗ್ಗೆ ಮಾತಾಡಿದರು. 25 ಆ ಪ್ರವಾದಿಗಳು ಹೇಳಿದ ಸಂಗತಿಗಳನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃವಾದ ಅಬ್ರಹಾಮನಿಗೆ, ‘ನಿನ್ನ ಸಂತತಿಯಿಂದ ಭೂಮಿಯ ಮೇಲಿರುವ ಜನರೆಲ್ಲರು ಆಶೀರ್ವಾದ ಹೊಂದುವರು’(B) ಎಂದು ಹೇಳಿದನು. 26 ದೇವರು ತನ್ನ ವಿಶೇಷ ಸೇವಕನನ್ನು (ಯೇಸುವನ್ನು) ಮೊಟ್ಟಮೊದಲು ನಿಮ್ಮ ಬಳಿಗೆ ಕಳುಹಿಸಿದನು. ನಿಮ್ಮನ್ನು ಆಶೀರ್ವದಿಸುವುದಕ್ಕಾಗಿ ದೇವರು ಯೇಸುವನ್ನು ಕಳುಹಿಸಿದನು. ಆತನು ನಿಮ್ಮನ್ನು ನಿಮ್ಮ ಕೆಟ್ಟಕಾರ್ಯಗಳಿಂದ ದೂರಮಾಡಿ ಆಶೀರ್ವದಿಸುತ್ತಾನೆ.”
ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ
4 ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. 2 ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. 3 ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. 4 ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.
Kannada Holy Bible: Easy-to-Read Version. All rights reserved. © 1997 Bible League International