Revised Common Lectionary (Semicontinuous)
ಯೆಹೋವನ ಸ್ವಾತಂತ್ರ್ಯ ಸಂದೇಶ
61 ಯೆಹೋವನ ಸೇವಕನು ಹೇಳುವುದೇನೆಂದರೆ, “ಒಡೆಯನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ. ಬಡವರಿಗೆ ಸುವಾರ್ತೆಯನ್ನು ತಿಳಿಸಲೂ ದುಃಖಿಸುವವರನ್ನು ಸಂತೈಸಲೂ ಆತನು ನನ್ನನ್ನು ಆರಿಸಿರುತ್ತಾನೆ. ಸೆರೆಹಿಡಿಯಲ್ಪಟ್ಟಿರುವವರನ್ನು ಸ್ವತಂತ್ರರಾದರೆಂದು ಹೇಳಲೂ ಕೈದಿಗಳನ್ನು ಬಿಡುಗಡೆ ಮಾಡಲ್ಪಟ್ಟವರೆಂದು ಹೇಳಲೂ ದೇವರು ನನ್ನನ್ನು ಕಳುಹಿಸಿದನು. 2 ಯೆಹೋವನು ತಾನು ಕರುಣೆ ತೋರುವ ಸಮಯದ ಕುರಿತಾಗಿ ಸಾರುವಂತೆ ನನ್ನನ್ನು ಕಳುಹಿಸಿದನು. ದುಷ್ಟರನ್ನು ಶಿಕ್ಷಿಸುವ ಸಮಯವನ್ನು ಸಾರಲು ದೇವರು ನನ್ನನ್ನು ಕಳುಹಿಸಿದನು. ದುಃಖಪಡುವ ಜನರನ್ನು ಸಂತೈಸಲು ದೇವರು ನನ್ನನ್ನು ಕಳುಹಿಸಿದನು. 3 ಚೀಯೋನಿನಲ್ಲಿ ದುಃಖಿಸುವ ಜನರ ಬಳಿಗೆ ನನ್ನನ್ನು ಕಳುಹಿಸಿದನು. ನಾನು ಅವರನ್ನು ಉತ್ಸವಕ್ಕಾಗಿ ಸಿದ್ಧಪಡಿಸುವೆನು. ಅವರ ತಲೆಯ ಮೇಲಿರುವ ಬೂದಿಯನ್ನು ತೆಗೆದುಹಾಕಿ ಅದರ ಬದಲಾಗಿ ಕಿರೀಟವನ್ನು ತೊಡಿಸುವೆನು. ಅವರ ದುಃಖವನ್ನು ತೆಗೆದುಹಾಕಿ ಅವರಿಗೆ ತೈಲವೆಂಬ ಸಂತೋಷವನ್ನು ಅನುಗ್ರಹಿಸುವೆನು. ಅವರ ದುಃಖವನ್ನೆಲ್ಲಾ ನಿವಾರಿಸಿ ಉತ್ಸವಕ್ಕಾಗಿ ಅವರಿಗೆ ಬಟ್ಟೆಯನ್ನು ತೊಡಿಸುವೆನು. ಅವರನ್ನು ಒಳ್ಳೆಯ ಮರಗಳೆಂತಲೂ ದೇವರ ಆಶ್ಚರ್ಯಕರವಾದ ಸಸಿಯೆಂತಲೂ ಕರೆಯುವದಕ್ಕಾಗಿ ದೇವರೇ ನನ್ನನ್ನು ಕಳುಹಿಸಿದನು.”
4 ಆ ಸಮಯದಲ್ಲಿ ಹಾಳುಬಿದ್ದ ಹಳೇ ಪಟ್ಟಣಗಳು ಮತ್ತೆ ಕಟ್ಟಲ್ಪಡುವವು. ಅವುಗಳು ಮುಂಚೆ ಹೇಗಿದ್ದವೋ ಹಾಗೆಯೇ ಹೊಸದಾಗಿ ಕಾಣಿಸುವವು. ಹಲವು ವರ್ಷಗಳ ಕಾಲ ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳು ಹೊಸದಾಗಿ ಕಾಣಿಸುವವು.
8 ಯಾಕೆಂದರೆ ನಾನೇ ಯೆಹೋವನು. ನಾನು ನ್ಯಾಯದಲ್ಲಿ ಸಂತೋಷಿಸುವೆನು. ನಾನು ಕದಿಯುವದನ್ನೂ ಎಲ್ಲಾ ದುಷ್ಟತ್ವಗಳನ್ನೂ ದ್ವೇಷಿಸುತ್ತೇನೆ. ಅದಕ್ಕಾಗಿ ನಾನು ಅಂಥಾ ಜನರಿಗೆ ದೊರಕಬೇಕಾದ ಶಿಕ್ಷೆಯನ್ನು ಕೊಡುವೆನು. ನನ್ನ ಜನರೊಂದಿಗೆ ನಿತ್ಯಕಾಲದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. 9 ಎಲ್ಲಾ ಜನಾಂಗಗಳವರು ನನ್ನ ಜನರನ್ನೂ ನನ್ನ ದೇಶದ ಮಕ್ಕಳನ್ನೂ ತಿಳಿದುಕೊಳ್ಳುವರು. ಅವರನ್ನು ಜನರು ನೋಡಿದಾಗ ಯೆಹೋವನು ಅವರನ್ನು ಆಶೀರ್ವದಿಸುತ್ತಿದ್ದಾನೆ ಎಂದು ತಿಳಿಯುವರು.
ದೇವರ ಸೇವಕನು ರಕ್ಷಣೆಯನ್ನು ತರುತ್ತಾನೆ
10 ಯೆಹೋವನು ನನ್ನನ್ನು ಸಂತೋಷಭರಿತನನ್ನಾಗಿ ಮಾಡುತ್ತಾನೆ.
ನನ್ನ ಸಂಪೂರ್ಣ ವ್ಯಕ್ತಿತ್ವವು ನನ್ನ ದೇವರಲ್ಲಿ ಸಂತೋಷಿಸುತ್ತದೆ.
ಯೆಹೋವನು ರಕ್ಷಣೆಯೆಂಬ ವಸ್ತ್ರವನ್ನು ನನಗೆ ತೊಡಿಸಿದ್ದಾನೆ.
ಮದುವೆಯಲ್ಲಿ ಮದುಮಗನು ಧರಿಸಿಕೊಳ್ಳುವ ಬಟ್ಟೆಯಂತೆ ಅದು ನಯವಾಗಿದೆ.
ಯೆಹೋವನು ನನಗೆ ನೀತಿಯೆಂಬ ನಿಲುವಂಗಿಯನ್ನು ತೊಡಿಸಿರುತ್ತಾನೆ.
ಅದು ಮದುಮಗಳು ಮದುವೆಯಲ್ಲಿ ಧರಿಸಿಕೊಳ್ಳುವ ಬಟ್ಟೆಯಂತಿದೆ.
11 ಭೂಮಿಯು ಸಸಿಗಳನ್ನು ಬೆಳೆಸುತ್ತದೆ.
ಜನರು ತೋಟದಲ್ಲಿ ಬೀಜ ಬಿತ್ತುವರು.
ತೋಟವು ಬೀಜವನ್ನು ಬೆಳೆಸುತ್ತದೆ.
ಅದೇ ರೀತಿಯಲ್ಲಿ ಯೆಹೋವನು ಎಲ್ಲಾ ಜನಾಂಗಗಳಲ್ಲಿ ನೀತಿಯನ್ನೂ ಸ್ತೋತ್ರವನ್ನೂ ಬೆಳೆಸುತ್ತಾನೆ.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
ಮರಿಯಳು ದೇವರನ್ನು ಸ್ತುತಿಸಿದಳು
46 ಆಗ ಮರಿಯಳು,
47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.
16 ಯಾವಾಗಲೂ ಸಂತೋಷದಿಂದಿರಿ. 17 ಎಡೆಬಿಡದೆ ಪ್ರಾರ್ಥಿಸಿರಿ. 18 ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ.
19 ಪವಿತ್ರಾತ್ಮನ ಕಾರ್ಯವನ್ನು ನಂದಿಸಬೇಡಿ. 20 ಪ್ರವಾದನೆಯನ್ನು ಹೀನೈಸಬೇಡಿ. 21 ಎಲ್ಲವನ್ನೂ ಪರಿಶೋಧಿಸಿ, ಒಳ್ಳೆಯದನ್ನು ಭದ್ರವಾಗಿ ಹಿಡಿದುಕೊಳ್ಳಿರಿ. 22 ಎಲ್ಲಾ ವಿಧವಾದ ಕೆಟ್ಟತನದಿಂದ ದೂರವಾಗಿರಿ.
23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಲೆಂದು ಪ್ರಾರ್ಥಿಸುತ್ತೇವೆ. ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮ, ಶರೀರ, ಪ್ರಾಣಗಳು ದೋಷರಹಿತವಾಗಿರಲೆಂದು ಪ್ರಾರ್ಥಿಸುತ್ತೇವೆ. 24 ನಿಮ್ಮನ್ನು ಕರೆಯುವಾತನೇ ಅದನ್ನು ನಿಮಗಾಗಿ ಮಾಡುತ್ತಾನೆ. ಆತನು ನಂಬಿಗಸ್ತನು.
6 ಯೋಹಾನ[a] ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. 7 ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. 8 ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು.
ಯೇಸುವಿನ ಕುರಿತು ಯೋಹಾನನ ಸಂದೇಶ
(ಮತ್ತಾಯ 3:1-12; ಮಾರ್ಕ 1:2-8; ಲೂಕ 3:15-17)
19 “ನೀನು ಯಾರು?” ಎಂದು ಯೋಹಾನನನ್ನು ಕೇಳುವುದಕ್ಕಾಗಿ ಜೆರುಸಲೇಮಿನ ಯೆಹೂದ್ಯರು ಯೋಹಾನನ ಬಳಿಗೆ ಕೆಲವು ಯಾಜಕರನ್ನು ಮತ್ತು ಲೇವಿಯರನ್ನು ಕಳುಹಿಸಿದರು. 20 ಯೋಹಾನನು ಮರೆಮಾಚದೆ, “ನಾನು ಕ್ರಿಸ್ತನಲ್ಲ” ಎಂದು ಹೇಳಿದನು.
21 ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?”[a] ಎಂದು ಕೇಳಿದರು.
ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು.
ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು.
ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.
22 ಆಗ ಯೆಹೂದ್ಯರು, “ನಮಗೆ ಹೇಳು. ನಮ್ಮನ್ನು ಕಳುಹಿಸಿದವರಿಗೆ ನಾವು ತಿಳಿಸಬೇಕಾಗಿದೆ. ನಿನ್ನ ಬಗ್ಗೆ ನೀನು ಏನು ಹೇಳುವೆ?” ಎಂದು ಕೇಳಿದರು.
23 ಅದಕ್ಕೆ ಯೋಹಾನನು,
“‘ಪ್ರಭುವಿಗಾಗಿ ನೇರವಾದ ದಾರಿಯನ್ನು ಸಿದ್ಧಗೊಳಿಸಿರಿ’
ಎಂದು ಅಡವಿಯಲ್ಲಿ ಕೂಗುವವನ ಸ್ವರವೇ ನಾನು”(A)
ಎಂದು ಪ್ರವಾದಿಯಾದ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು.
24 ಕಳುಹಿಸಲ್ಪಟ್ಟಿದ್ದವರಲ್ಲಿ ಕೆಲವು ಮಂದಿ ಫರಿಸಾಯರೂ[b] ಇದ್ದರು. 25 ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.
26 ಯೋಹಾನನು, “ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನಿಮಗೆ ಗೊತ್ತಿಲ್ಲದ ಒಬ್ಬನು ಇಲ್ಲಿದ್ದಾನೆ. 27 ನನ್ನ ನಂತರ ಬರುವವನು ಆತನೇ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಎಂದು ಹೇಳಿದನು.
28 ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿ ಎಂಬ ಊರಲ್ಲಿ ಈ ಸಂಗತಿಗಳೆಲ್ಲಾ ನಡೆದವು. ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದದ್ದು ಇಲ್ಲಿಯೇ.
Kannada Holy Bible: Easy-to-Read Version. All rights reserved. © 1997 Bible League International