Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 126

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
    ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
    “ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
    ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.

ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
    ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
ಅಳುತ್ತಾ ಬೀಜವನ್ನು ಬಿತ್ತುವವನು
    ಹರ್ಷದಿಂದ ಕೊಯ್ಯುವನು.
ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
    ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!

ಹಬಕ್ಕೂಕ 2:1-5

“ನಾನು ಕಾವಲುಗಾರನಂತೆ ನಿಂತುಕೊಂಡು ಗಮನಿಸುವೆನು.
    ಯೆಹೋವನು ನನಗೆ ಏನನ್ನುವನೋ ಎಂದು ನಾನು ನಿರೀಕ್ಷಿಸುತ್ತಿರುವೆನು.
ಆತನು ನನ್ನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವನೆಂಬುದನ್ನು ತಾಳ್ಮೆಯಿಂದ ಗಮನಿಸುವೆನು.”

ಹಬಕ್ಕೂಕನಿಗೆ ದೇವರ ಉತ್ತರ

ಯೆಹೋವನು ನನಗೆ ಹೇಳಿದ್ದು: “ನಾನು ನಿನಗೆ ತೋರಿಸುವದನ್ನು ಬರೆ. ಜನರು ಸುಲಭವಾಗಿ ಓದುವಂತೆ ಅದನ್ನು ದೊಡ್ಡ ಹಲಗೆಗಳ ಮೇಲೆ ಬರೆ. ಭವಿಷ್ಯದ ಒಂದು ವಿಶೇಷ ಸಮಯದ ಕುರಿತಾಗಿ ಈ ಸಂದೇಶ. ಈ ಸಂದೇಶವು ಅಂತ್ಯದ ವಿಷಯವಾಗಿ ಇದೆ. ಇದು ಖಂಡಿತವಾಗಿಯೂ ನೆರವೇರುತ್ತದೆ. ಆ ಸಮಯವು ಎಂದಿಗೂ ಬರುವುದಿಲ್ಲ ಎಂಬಂತೆ ಕಾಣಬಹುದು. ಆದರೆ ತಾಳ್ಮೆಯಿಂದಿರು; ಅದನ್ನು ನಿರೀಕ್ಷಿಸುತ್ತಾ ಇರು. ಆ ಸಮಯವು ಬರುವದು. ಅದು ತಡವಾಗುವುದಿಲ್ಲ. ಯಾವ ಜನರು ಅದರ ವಿಚಾರವಾಗಿ ಕೇಳಲು ನಿರಾಕರಿಸುವರೋ ಅವರಿಗಾಗಿ ಈ ಸಂದೇಶವಿರುವದಿಲ್ಲ. ಆದರೆ ಒಬ್ಬ ಸತ್ಪುರುಷನು ಈ ಸಂದೇಶವನ್ನು ನಂಬುವನು. ಆ ಸತ್ಪುರುಷನು ತಾನು ನಂಬಿದ ನಿಮಿತ್ತವಾಗಿ ಬದುಕುವನು.”

ಯೆಹೋವನು ಹೇಳಿದ್ದು: “ಒಬ್ಬನನ್ನು ದ್ರಾಕ್ಷಾರಸವು ಮೋಸಪಡಿಸಬಹುದು. ಅದೇ ರೀತಿಯಲ್ಲಿ ಬಲಿಷ್ಠನ ಗರ್ವವು ಅವನನ್ನು ಮೋಸಪಡಿಸಬಹುದು. ಆದರೆ ಅವನಿಗೆ ಸಮಾಧಾನ ಸಿಕ್ಕುವುದಿಲ್ಲ. ಅವನು ಮರಣದಂತಿರುವನು. ಅವನಿಗೆ ಯಾವಾಗಲೂ ಹೆಚ್ಚೆಚ್ಚು ಬೇಕು. ಮರಣದಂತೆ ಅವನಿಗೆ ತೃಪ್ತಿಯೇ ಇರದು. ಅವನು ಜನಾಂಗಗಳನ್ನು ಸೋಲಿಸುತ್ತಲೇ ಇರುವನು. ಆ ಜನರನ್ನು ತನ್ನ ಕೈದಿಗಳನ್ನಾಗಿ ಮಾಡುತ್ತಲೇ ಇರುವನು.

ಫಿಲಿಪ್ಪಿಯವರಿಗೆ 3:7-11

ಒಂದು ಕಾಲದಲ್ಲಿ ಇವುಗಳೆಲ್ಲ ನನಗೆ ಮುಖ್ಯವಾಗಿದ್ದವು. ಆದರೆ ಈಗ ಅವುಗಳೆಲ್ಲ ಕ್ರಿಸ್ತನ ದೆಸೆಯಿಂದ ನಿಷ್ಪ್ರಯೋಜಕವಾಗಿವೆ. ಅಷ್ಟೇ ಅಲ್ಲ, ನನ್ನ ಪ್ರಭುವಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ಎಲ್ಲಾ ಸಂಗತಿಗಳಿಗಿಂತಲೂ ಅತಿಶ್ರೇಷ್ಠವಾದದ್ದೆಂದು ನನಗೆ ಮನದಟ್ಟಾಗಿದೆ. ನಾನು ಯಾವುದನ್ನು ಮುಖ್ಯವಾದವುಗಳೆಂದು ಪರಿಗಣಿಸಿದ್ದೆನೋ ಅವುಗಳನ್ನೆಲ್ಲ ಕ್ರಿಸ್ತನ ನಿಮಿತ್ತ ಕಳೆದುಕೊಂಡೆನು. ಅವುಗಳೆಲ್ಲ ನಿಷ್ಪ್ರಯೋಜಕವಾದವುಗಳೆಂದು ನನಗೆ ತಿಳಿದಿದೆ. ನಾನು ಕ್ರಿಸ್ತನನ್ನು ಹೊಂದಿಕೊಳ್ಳಲು ಮತ್ತು ಕ್ರಿಸ್ತನಲ್ಲಿರಲು ಇದು ನನಗೆ ಅವಕಾಶ ಮಾಡಿಕೊಡುತ್ತದೆ. ನಾನು ಕ್ರಿಸ್ತನ ಮೂಲಕ ನೀತಿವಂತನಾಗಿದ್ದೇನೆ. ಈ ನೀತಿಯು, ಧರ್ಮಶಾಸ್ತ್ರವನ್ನು ಅನುಸರಿಸಿದ ಮಾತ್ರಕ್ಕೆ ದೊರೆಯುವುದಿಲ್ಲ. ಇದು ನಂಬಿಕೆಯ ಮೂಲಕ ದೇವರಿಂದ ಬರುತ್ತದೆ. ಕ್ರಿಸ್ತನಲ್ಲಿ ನನಗಿರುವ ನಂಬಿಕೆಯ ಮೂಲಕ ದೇವರು ನನ್ನನ್ನು ನೀತಿವಂತನನ್ನಾಗಿ ಮಾಡಿದನು. 10 ಕ್ರಿಸ್ತನನ್ನೂ ಪುನರುತ್ಥಾನದ ಶಕ್ತಿಯನ್ನೂ ತಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅಪೇಕ್ಷೆ. 11 ಹೀಗಾದರೆ, ನಾನು ಸತ್ತವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International