Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 27

ರಚನೆಗಾರ: ದಾವೀದ.

27 ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ.
    ನಾನು ಯಾರಿಗೂ ಭಯಪಡಬೇಕಿಲ್ಲ!
ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ.
    ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!
ದುಷ್ಟರು ನನ್ನನ್ನು ಕೊಲ್ಲಲು ಆಕ್ರಮಣಮಾಡುವಾಗ
    ತಾವೇ ಮುಗ್ಗರಿಸಿ ಬೀಳುವರು.
ಮಹಾಸೈನ್ಯವೇ ನನಗೆ ಮುತ್ತಿಗೆ ಹಾಕಿದರೂ ನಾನು ಭಯಪಡುವುದಿಲ್ಲ.
    ಸೈನಿಕರು ನನ್ನ ಮೇಲೆ ಆಕ್ರಮಣ ಮಾಡಿದರೂ ನಾನು ಹೆದರುವುದಿಲ್ಲ.
    ಯಾಕೆಂದರೆ ನಾನು ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.

ನನ್ನ ಜೀವಮಾನವೆಲ್ಲಾ
    ಯೆಹೋವನ ಆಲಯದಲ್ಲಿ ವಾಸಿಸುತ್ತಾ
ಆತನ ಪ್ರಸನ್ನತೆಯನ್ನು ವೀಕ್ಷಿಸುತ್ತಾ
    ಆತನ ಮಾರ್ಗದರ್ಶನವನ್ನು ಎದುರುನೋಡುತ್ತಾ ಇರಬೇಕೆಂಬ
    ಒಂದೇ ಒಂದು ಕೋರಿಕೆಯನ್ನು ಯೆಹೋವನಲ್ಲಿ ಕೇಳಿಕೊಂಡು ಅದನ್ನೇ ಎದುರುನೋಡುತ್ತಿದ್ದೇನೆ.

ನಾನು ಅಪಾಯದಲ್ಲಿರುವಾಗ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ;
    ತನ್ನ ಗುಡಾರದಲ್ಲಿ ನನ್ನನ್ನು ಅಡಗಿಸುತ್ತಾನೆ.
    ಸುರಕ್ಷಿತವಾದ ಸ್ಥಳಕ್ಕೆ ನನ್ನನ್ನು ಕೊಂಡೊಯ್ಯುವನು.
ವೈರಿಗಳು ನನಗೆ ಮುತ್ತಿಗೆ ಹಾಕಿದ್ದರೂ ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯಮಾಡುವನು!
    ಆಗ ನಾನು ಆತನ ಗುಡಾರದಲ್ಲಿ ಉತ್ಸಾಹ ಧ್ವನಿಯೊಡನೆ ಯಜ್ಞಗಳನ್ನು ಅರ್ಪಿಸುವೆನು.
    ವಾದ್ಯಗಳನ್ನು ನುಡಿಸುತ್ತಾ ಆತನನ್ನು ಕೊಂಡಾಡುವೆನು.

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
    ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
    ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
    ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
    ನಾನು ಸಾಯುವುದಕ್ಕಿಂತ ಮುಂಚೆ[a] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
    ಬಲವಾಗಿಯೂ ಧೈರ್ಯವಾಗಿಯೂ ಇರಿ!
    ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!

ಯೆಶಾಯ 4:2-6

ಆ ಸಮಯದಲ್ಲಿ ಯೆಹೋವನ ಸಸಿ (ಯೆಹೂದವು) ಬಹಳ ಚಂದವಾಗಿಯೂ ದೊಡ್ಡದಾಗಿಯೂ ಇರುವುದು. ಆ ಸಮಯದಲ್ಲಿ, ಚೀಯೋನಿನಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ವಾಸಿಸುತ್ತಿರುವ ಜನರು ತಮ್ಮ ದೇಶದಲ್ಲಿ ಬೆಳೆಯುವ ಫಲಗಳಿಗಾಗಿ ತುಂಬಾ ಹೆಚ್ಚಳಪಡುವರು. ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಚೀಯೋನಿನಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವವರು ಪರಿಶುದ್ಧರೆಂದು ಕರೆಯಲ್ಪಡುವರು. ಅವರೆಲ್ಲರೂ ಅಲ್ಲಿಯೇ ನೆಲೆಸುವರು.

ಚೀಯೋನಿನ ಸ್ತ್ರೀಯರ ಕಲ್ಮಷವನ್ನು ಯೆಹೋವನು ತೊಳೆದುಬಿಡುವನು. ಆತನು ಜೆರುಸಲೇಮಿನ ಮಧ್ಯದಲ್ಲಿರುವ ರಕ್ತವನ್ನು ತೊಳೆದುಬಿಡುವನು. ಆತನು ನ್ಯಾಯನೀತಿಗಳಿಂದ ತೀರ್ಪುನೀಡುವನು; ದಹಿಸುವ ಆತ್ಮನಿಂದ ಎಲ್ಲವನ್ನು ಶುದ್ಧಗೊಳಿಸುವನು. ಆ ಸಮಯದಲ್ಲಿ ತಾನು ತನ್ನ ಜನರೊಂದಿಗೆ ಇರುವುದಾಗಿ ಹೀಗೆ ಯೆಹೋವನು ರುಜುವಾತುಪಡಿಸುವನು. ಹಗಲಲ್ಲಿ ಆತನು ಧೂಮಮೇಘವನ್ನೂ ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಗುರುತುಗಳು ಚೀಯೋನ್ ಪರ್ವತದ ಮೇಲಿರುವ ಪ್ರತಿಯೊಂದು ಜನರ ಸಭೆಯ ಮೇಲೆ ಆಕಾಶದಲ್ಲಿ ಕಾಣುವುದು. ಪ್ರತಿಯೊಬ್ಬನ ಮೇಲೆಯೂ ಕಾಪಾಡಿಕೊಳ್ಳುವುದಕ್ಕಾಗಿ ಹೊದಿಕೆ ಇರುವುದು. ಈ ಹೊದಿಕೆಯು ಸುರಕ್ಷಿತ ಸ್ಥಳದಂತಿರುವದು. ಅದು ಸೂರ್ಯನ ಶಾಖದಿಂದ ಅವರನ್ನು ರಕ್ಷಿಸುವದು. ಅದೇ ಸಮಯದಲ್ಲಿ ಸಣ್ಣ ದೊಡ್ಡ ಮಳೆಗಳಿಂದಲೂ ಆ ಹೊದಿಕೆಯು ರಕ್ಷಿಸುವದು.

ಅಪೊಸ್ತಲರ ಕಾರ್ಯಗಳು 11:1-18

ಪೇತ್ರನು ಜೆರುಸಲೇಮಿಗೆ ಹಿಂತಿರುಗುವನು

11 ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅಪೊಸ್ತಲರಿಗೂ ಜುದೇಯದ ಸಹೋದರರಿಗೂ ತಿಳಿಯಿತು. ಆದರೆ ಪೇತ್ರನು ಜೆರುಸಲೇಮಿಗೆ ಬಂದಾಗ ಕೆಲವು ಯೆಹೂದ್ಯ ವಿಶ್ವಾಸಿಗಳು[a] ಅವನೊಂದಿಗೆ ವಾದ ಮಾಡಿದರು. ಅವರು, “ಯೆಹೂದ್ಯರಲ್ಲದವರ ಮತ್ತು ಸುನ್ನತಿ ಮಾಡಿಸಿಕೊಂಡಿಲ್ಲದವರ ಮನೆಗಳಿಗೆ ನೀನು ಹೋದೆ! ನೀನು ಅವರೊಂದಿಗೆ ಊಟವನ್ನು ಸಹ ಮಾಡಿದೆ!” ಎಂದು ಹೇಳಿದರು.

ಆದ್ದರಿಂದ ಪೇತ್ರನು ನಡೆದ ಸಂಗತಿಯನ್ನೆಲ್ಲಾ ಅವರಿಗೆ ವಿವರಿಸಿದನು. ಪೇತ್ರನು ಅವರಿಗೆ, “ನಾನು ಜೊಪ್ಪ ಪಟ್ಟಣದಲ್ಲಿದ್ದೆನು. ನಾನು ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. ಆ ದರ್ಶನದಲ್ಲಿ, ಆಕಾಶದಿಂದ ಇಳಿದುಬರುತ್ತಿರುವ ಒಂದು ವಸ್ತುವನ್ನು ಕಂಡೆನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗವನ್ನು ಕಟ್ಟಿ ಭೂಮಿಗೆ ಇಳಿಯಬಿಡಲಾಗಿತ್ತು. ಅದು ಇಳಿದು ಬಂದು ನನ್ನ ಸಮೀಪದಲ್ಲೇ ನಿಂತುಕೊಂಡಿತು. ನಾನು ಅದರೊಳಗೆ ನೋಡಿದೆನು. ಅದರಲ್ಲಿ ಪಶುಗಳೂ ಕ್ರೂರಪ್ರಾಣಿಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಇದ್ದವು. ಆಗ, ‘ಪೇತ್ರನೇ, ಎದ್ದೇಳು! ಇವುಗಳಲ್ಲಿ ಯಾವುದನ್ನು ಬೇಕಾದರೂ ಕೊಯ್ದುತಿನ್ನು!’ ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

“ಆದರೆ ನಾನು, ‘ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದ ಮತ್ತು ಅಶುದ್ಧವಾದ ಏನನ್ನಾಗಲಿ ನಾನೆಂದೂ ತಿಂದಿಲ್ಲ’ ಎಂದು ಹೇಳಿದೆನು.

“ಆದರೆ, ‘ಇವುಗಳನ್ನು ದೇವರು ಶುದ್ಧೀಕರಿಸಿದ್ದಾನೆ. ಇವುಗಳನ್ನು ಅಶದ್ಧವೆಂದು ಹೇಳಬೇಡ!’ ಎಂದು ಆ ವಾಣಿಯು ನನಗೆ ಉತ್ತರಕೊಟ್ಟಿತು.

10 “ಹೀಗೆ ಮೂರು ಸಲವಾಯಿತು. ಬಳಿಕ ಆ ಇಡೀ ವಸ್ತುವನ್ನು ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 11 ಅದೇ ಸಮಯದಲ್ಲಿ ನಾನಿದ್ದ ಮನೆಗೆ ಮೂರು ಮಂದಿ ಬಂದರು. ಈ ಮೂವರನ್ನು ಸೆಜರೇಯ ಪಟ್ಟಣದಿಂದ ಕಳುಹಿಸಲಾಗಿತ್ತು. 12 ಸಂದೇಹಪಡದೆ ಅವರೊಂದಿಗೆ ಹೋಗಬೇಕೆಂದು ಪವಿತ್ರಾತ್ಮನು ನನಗೆ ಹೇಳಿದನು. ಇಲ್ಲಿರುವ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು. ನಾವು ಕೊರ್ನೇಲಿಯನ ಮನೆಗೆ ಹೋದೆವು. 13 ತನ್ನ ಮನೆಯಲ್ಲಿ ದೇವದೂತನೊಬ್ಬನು ನಿಂತಿರುವುದನ್ನು ತಾನು ಕಂಡದ್ದರ ಬಗ್ಗೆ ಕೊರ್ನೇಲಿಯನು ನನಗೆ ಹೇಳಿದನು. ಆ ದೇವದೂತನು ಕೊರ್ನೇಲಿಯನಿಗೆ, ‘ಕೆಲವು ಜನರನ್ನು ಜೊಪ್ಪಕ್ಕೆ ಕಳುಹಿಸು. ಸೀಮೋನ್ ಪೇತ್ರನನ್ನು ಆಹ್ವಾನಿಸಿ ನಿಮ್ಮ ಬಳಿಗೆ ಬರಮಾಡಿಕೊ. 14 ಅವನು ನಿಮ್ಮೊಂದಿಗೆ ಮಾತಾಡುವನು. ಅವನು ಹೇಳುವ ಸಂಗತಿಗಳು ನಿನ್ನನ್ನೂ ನಿನ್ನ ಕುಟಂಬದವರನ್ನೂ ರಕ್ಷಿಸುತ್ತವೆ’ ಎಂದು ಹೇಳಿದನು.

15 “ನಾನು ನನ್ನ ಉಪದೇಶವನ್ನು ಆರಂಭಿಸಿದ ಮೇಲೆ, ಪ್ರಾರಂಭದಲ್ಲಿ[b] ಪವಿತ್ರಾತ್ಮನು ನಮ್ಮ ಮೇಲೆ ಬಂದಂತೆ ಅವರ ಮೇಲೆಯೂ ಬಂದನು. 16 ಆಗ ನಾನು ಪ್ರಭುವಿನ ಮಾತುಗಳನ್ನು ಜ್ಞಾಪಿಸಿಕೊಂಡೆನು. ‘ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ನೀವು ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಪಡೆಯುವಿರಿ!’ ಎಂದು ಪ್ರಭುವು ಹೇಳಿದ್ದನು. 17 ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರವನ್ನೇ ದೇವರು ಈ ಜನರಿಗೆ ಕೊಟ್ಟನು. ಹೀಗಿರಲು ನಾನು ದೇವರ ಕೆಲಸವನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ” ಎಂದು ಹೇಳಿದನು.

18 ಯೆಹೂದ್ಯವಿಶ್ವಾಸಿಗಳು ಈ ಸಂಗತಿಗಳನ್ನು ಕೇಳಿದಾಗ ವಾದವನ್ನು ನಿಲ್ಲಿಸಿ, ದೇವರನ್ನು ಸ್ತುತಿಸುತ್ತಾ, “ಹಾಗಾದರೆ ನಮ್ಮಂತೆಯೇ ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ಜೀವವನ್ನು ಹೊಂದಿಕೊಳ್ಳಲು ದೇವರು ಯೆಹೂದ್ಯರಲ್ಲದವರಿಗೂ ಅವಕಾಶ ಕೊಟ್ಟಿದ್ದಾನೆ!” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International