Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 27

ರಚನೆಗಾರ: ದಾವೀದ.

27 ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ.
    ನಾನು ಯಾರಿಗೂ ಭಯಪಡಬೇಕಿಲ್ಲ!
ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ.
    ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!
ದುಷ್ಟರು ನನ್ನನ್ನು ಕೊಲ್ಲಲು ಆಕ್ರಮಣಮಾಡುವಾಗ
    ತಾವೇ ಮುಗ್ಗರಿಸಿ ಬೀಳುವರು.
ಮಹಾಸೈನ್ಯವೇ ನನಗೆ ಮುತ್ತಿಗೆ ಹಾಕಿದರೂ ನಾನು ಭಯಪಡುವುದಿಲ್ಲ.
    ಸೈನಿಕರು ನನ್ನ ಮೇಲೆ ಆಕ್ರಮಣ ಮಾಡಿದರೂ ನಾನು ಹೆದರುವುದಿಲ್ಲ.
    ಯಾಕೆಂದರೆ ನಾನು ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.

ನನ್ನ ಜೀವಮಾನವೆಲ್ಲಾ
    ಯೆಹೋವನ ಆಲಯದಲ್ಲಿ ವಾಸಿಸುತ್ತಾ
ಆತನ ಪ್ರಸನ್ನತೆಯನ್ನು ವೀಕ್ಷಿಸುತ್ತಾ
    ಆತನ ಮಾರ್ಗದರ್ಶನವನ್ನು ಎದುರುನೋಡುತ್ತಾ ಇರಬೇಕೆಂಬ
    ಒಂದೇ ಒಂದು ಕೋರಿಕೆಯನ್ನು ಯೆಹೋವನಲ್ಲಿ ಕೇಳಿಕೊಂಡು ಅದನ್ನೇ ಎದುರುನೋಡುತ್ತಿದ್ದೇನೆ.

ನಾನು ಅಪಾಯದಲ್ಲಿರುವಾಗ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ;
    ತನ್ನ ಗುಡಾರದಲ್ಲಿ ನನ್ನನ್ನು ಅಡಗಿಸುತ್ತಾನೆ.
    ಸುರಕ್ಷಿತವಾದ ಸ್ಥಳಕ್ಕೆ ನನ್ನನ್ನು ಕೊಂಡೊಯ್ಯುವನು.
ವೈರಿಗಳು ನನಗೆ ಮುತ್ತಿಗೆ ಹಾಕಿದ್ದರೂ ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯಮಾಡುವನು!
    ಆಗ ನಾನು ಆತನ ಗುಡಾರದಲ್ಲಿ ಉತ್ಸಾಹ ಧ್ವನಿಯೊಡನೆ ಯಜ್ಞಗಳನ್ನು ಅರ್ಪಿಸುವೆನು.
    ವಾದ್ಯಗಳನ್ನು ನುಡಿಸುತ್ತಾ ಆತನನ್ನು ಕೊಂಡಾಡುವೆನು.

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
    ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
    ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
    ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
    ನಾನು ಸಾಯುವುದಕ್ಕಿಂತ ಮುಂಚೆ[a] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
    ಬಲವಾಗಿಯೂ ಧೈರ್ಯವಾಗಿಯೂ ಇರಿ!
    ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!

ಯೆಶಾಯ 26:7-15

ಪ್ರಾಮಾಣಿಕತೆಯು ಒಳ್ಳೆಯವರ ಜೀವನ ಶೈಲಿ.
    ಅವರು ನೇರವಾದ ಮತ್ತು ಸತ್ಯವಾದ ಮಾರ್ಗವನ್ನು ಅನುಸರಿಸುವರು.
ಯೆಹೋವನೇ, ನೀನು ಆ ಮಾರ್ಗವನ್ನು ಅನುಸರಿಸಲು
    ಸುಲಭವಾಗುವಂತೆ ಮಾಡುವೆ.
ಆದರೆ ಯೆಹೋವನೇ, ನಾವು ನಿನ್ನ ನ್ಯಾಯವಿಚಾರಣೆಯ ರೀತಿಗಾಗಿ ಕಾಯುತ್ತಿದ್ದೇವೆ.
    ನಮ್ಮ ಆತ್ಮಗಳು ನಿನ್ನನ್ನೂ ನಿನ್ನ ನಾಮವನ್ನೂ ನೆನಪು ಮಾಡುತ್ತವೆ.
ನಮ್ಮ ಆತ್ಮವು ನಿನ್ನೊಂದಿಗೆ ರಾತ್ರಿಯಲ್ಲಿರಲು ಆಶಿಸುತ್ತದೆ.
    ನಮ್ಮೊಳಗಿರುವ ಆತ್ಮವು ನಿನ್ನ ಸಹವಾಸವನ್ನು ಬಯಸುತ್ತದೆ.
ಹೊಸ ದಿವಸಗಳ ಮುಂಜಾನೆಯಲ್ಲಿ ನಿನ್ನೊಂದಿಗಿರಲು ಆಶಿಸುತ್ತದೆ.
    ನಿನ್ನ ನ್ಯಾಯವು ಈ ಭೂಮಿಗೆ ಬಂದಾಗ ಜನರು ಜೀವನದ ಸತ್ಯಮಾರ್ಗವನ್ನು ಅರಿಯುವರು.
10 ದುಷ್ಟರಿಗೆ ದಯೆತೋರಿಸಿದರೆ
    ಅವರು ಸುಕಾರ್ಯಗಳನ್ನು ಮಾಡಲು ಕಲಿಯುವುದಿಲ್ಲ.
ದುಷ್ಟರು ಯಥಾರ್ಥರ ಲೋಕದಲ್ಲಿ ಜೀವಿಸಿದರೂ ಅವರು ದುಷ್ಕೃತ್ಯಗಳನ್ನೇ ಮಾಡುವರು.
    ಆ ದುಷ್ಟರು ಯೆಹೋವನ ಮಹತ್ವವನ್ನು ಎಂದೂ ಗಮನಿಸಲಾರರು.
11 ಆದರೆ ದೇವರೇ, ನೀನು ಅವರನ್ನು ಶಿಕ್ಷಿಸಿದರೆ
    ಅವರು ಅದನ್ನು ನೋಡುವರು.
ನಿನ್ನ ಜನರ ಮೇಲೆ ನಿನಗಿರುವ ಗಾಢಪ್ರೀತಿಯನ್ನು ಆ ದುಷ್ಟಜನರು ನೋಡಲಿ.
    ಆಗ ಅವರು ಅವಮಾನ ಹೊಂದುವರು.
    ನಿನ್ನ ಶತ್ರುಗಳು ತಮ್ಮ ದುಷ್ಟತನದ ಬೆಂಕಿಯಲ್ಲಿಯೇ ಸುಟ್ಟುಹೋಗುವರು.
12 ಯೆಹೋವನೇ, ನೀನು ಮಾಡಬಯಸಿದ ಎಲ್ಲವುಗಳಲ್ಲಿ ಯಶಸ್ವಿಯಾಗಿರುವೆ.
    ಆದ್ದರಿಂದ ನಮಗೆ ಶಾಂತಿಯನ್ನು ಅನುಗ್ರಹಿಸು.

ದೇವರು ತನ್ನ ಜನರಿಗೆ ಹೊಸ ಜೀವವನ್ನು ಕೊಡುವನು

13 ಯೆಹೋವನೇ, ನೀನೇ ನಮ್ಮ ದೇವರು. ಆದರೆ ಹಿಂದಿನ ಕಾಲದಲ್ಲಿ ನಾವು ಇತರ ಪ್ರಭುಗಳನ್ನು ಅನುಸರಿಸಿದೆವು.
ನಾವು ನಮ್ಮ ಒಡೆಯರುಗಳಿಗೆ ಸೇರಿದ್ದೆವು.
    ಆದರೆ ಈಗ ಜನರು ಒಂದೇ ಹೆಸರನ್ನು, ಅಂದರೆ ನಿನ್ನ ಹೆಸರನ್ನೇ ನೆನಪುಮಾಡಲಿ.
14 ಇತರ ದೇವರುಗಳಿಗೆ ಜೀವವಿಲ್ಲ.
    ಪ್ರೇತಗಳು ಸತ್ತವರೊಳಗಿಂದ ಏಳುವದಿಲ್ಲ.
ನೀನು ಅವುಗಳನ್ನು ನಾಶಮಾಡಲು ತೀರ್ಮಾನಿಸಿದೆ.
    ಅದರ ಬಗ್ಗೆ ನಮಗೆ ನೆನಪು ಹುಟ್ಟಿಸುವ ಎಲ್ಲಾ ವಿಚಾರಗಳನ್ನು ನೀನು ನಾಶಮಾಡಿದೆ.
15 ನೀನು ಪ್ರೀತಿಸುವ ಜನಾಂಗಕ್ಕೆ ನೀನು ಸಹಾಯ ಮಾಡಿದೆ.
    ಬೇರೆ ಜನಾಂಗದವರು ಅವರನ್ನು ಸೋಲಿಸದಂತೆ ಮಾಡಿದೆ.

ಅಪೊಸ್ತಲರ ಕಾರ್ಯಗಳು 2:37-42

37 ಇದನ್ನು ಕೇಳಿದಾಗ, ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪೇತ್ರನನ್ನು ಮತ್ತು ಉಳಿದ ಅಪೊಸ್ತಲರನ್ನು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.

38 ಪೇತ್ರನು ಅವರಿಗೆ, “ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲದೆ ದೇವರು ವಾಗ್ದಾನ ಮಾಡಿರುವ ಪವಿತ್ರಾತ್ಮನನ್ನು ಹೊಂದಿಕೊಳ್ಳುವಿರಿ. 39 ಈ ವಾಗ್ದಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಬಹು ದೂರದಲ್ಲಿರುವ ಜನರಿಗೂ ಕೊಡಲಾಗಿದೆ. ನಮ್ಮ ದೇವರಾದ ಪ್ರಭುವು ತನ್ನ ಬಳಿಗೆ ಕರೆಯುವ ಪ್ರತಿಯೊಬ್ಬರಿಗೂ ಈ ವಾಗ್ದಾನವನ್ನು ಕೊಟ್ಟಿದ್ದಾನೆ” ಎಂದು ಹೇಳಿದನು.

40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, “ಈ ದುಷ್ಟ ಸಂತತಿಯಿಂದ ತಪ್ಪಿಸಿಕೊಳ್ಳಿ” ಎಂದು ಬೇಡಿಕೊಂಡನು. 41 ಪೇತ್ರನು ಹೇಳಿದ್ದನ್ನು ಸ್ವೀಕರಿಸಿಕೊಂಡ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆ ದಿನ ಸುಮಾರು ಮೂರುಸಾವಿರ ಜನರು ವಿಶ್ವಾಸಿಗಳ ಗುಂಪಿಗೆ ಸೇರಿದರು.

ಅನ್ಯೋನ್ಯ ಜೀವನ

42 ಇವರೆಲ್ಲರೂ ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವುದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International