Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 40:1-11

ಇಸ್ರೇಲಿನ ಶಿಕ್ಷೆಯು ಅಂತ್ಯವಾಗುವದು

40 ನಿನ್ನ ದೇವರು ಹೇಳುವುದೇನೆಂದರೆ:
“ನನ್ನ ಜನರನ್ನು ಸಂತೈಸು, ಸಂತೈಸು.
ಜೆರುಸಲೇಮಿನೊಂದಿಗೆ ಕರುಣೆಯಿಂದ ಮಾತಾಡು.
    ಜೆರುಸಲೇಮಿಗೆ ಹೀಗೆ ಹೇಳು,
‘ನಿನ್ನ ಸೆರೆವಾಸದ ಸಮಯವು ಅಂತ್ಯವಾಯಿತು.
    ನೀನು ನಿನ್ನ ಪಾಪಗಳ ಶಿಕ್ಷೆಯನ್ನು ಅನುಭವಿಸಿದೆ.’
ಜೆರುಸಲೇಮ್ ಮಾಡಿದ ಪ್ರತಿಯೊಂದು ಪಾಪಕೃತ್ಯಗಳಿಗಾಗಿ ಯೆಹೋವನು ಎರಡು ಬಾರಿ ಶಿಕ್ಷಿಸಿದನು.”

ಒಬ್ಬ ಮನುಷ್ಯನು ಕೂಗಿಹೇಳುವುದನ್ನು ಕೇಳಿರಿ:
“ಯೆಹೋವನಿಗೆ ಅಡವಿಯಲ್ಲಿ ದಾರಿಯನ್ನು ಸಿದ್ಧಮಾಡಿರಿ!
    ನಮ್ಮ ದೇವರಿಗೆ ಅಲ್ಲಿ ಮಾರ್ಗವನ್ನು ನೆಟ್ಟಗೆಮಾಡಿರಿ!
ತಗ್ಗುಗಳನ್ನು ಸಮತಟ್ಟು ಮಾಡಿರಿ.
    ಎಲ್ಲಾ ಬೆಟ್ಟಗುಡ್ಡಗಳನ್ನು ನೆಲಸಮ ಮಾಡಿರಿ.
ಕೊರಕಲು ರಸ್ತೆಗಳನ್ನು ನೆಟ್ಟಗೆ ಮಾಡಿರಿ.
    ಏರುತಗ್ಗು ನೆಲವನ್ನು ಸಮಗೊಳಿಸಿರಿ.
ಆಗ ಯೆಹೋವನ ಮಹಿಮೆಯು ಪ್ರದರ್ಶಿಸಲ್ಪಡುವದು.
    ಆಗ ಎಲ್ಲರೂ ಯೆಹೋವನ ಮಹಿಮೆಯನ್ನು ನೋಡುವರು.
ಯೆಹೋವನೇ ಇವುಗಳನ್ನು ಸ್ವತಃ ನುಡಿದಿದ್ದಾನೆ.”

ಒಂದು ಸ್ವರವು “ಮಾತನಾಡು” ಎಂದಿತು.
    ಅದಕ್ಕೆ ಮನುಷ್ಯನು, “ಏನು ಮಾತಾಡಲಿ” ಅಂದನು.
ಆಗ ಸ್ವರವು, “ಜನರು ಶಾಶ್ವತವಾಗಿ ಜೀವಿಸುವದಿಲ್ಲ, ಅವರೆಲ್ಲರೂ ಹುಲ್ಲಿನಂತಿದ್ದಾರೆ.
    ಅವರ ಒಳ್ಳೆಯತನವು ಕಾಡುಹೂವಿನಂತಿದೆ.
ಯೆಹೋವನ ಕಡೆಯಿಂದ ಒಂದು ಬಲವಾದ ಗಾಳಿಯು ಹುಲ್ಲಿನ ಮೇಲೆ ಬೀಸಿತು.
    ಆ ಹುಲ್ಲು ಒಣಗಿಹೋಯಿತು.
    ಕಾಡಿನ ಪುಷ್ಪವು ಬಾಡಿಹೋಯಿತು.
ಜನರೆಲ್ಲರೂ ಹುಲ್ಲಿನಂತಿದ್ದಾರೆ. ಹುಲ್ಲು ಸಾಯುತ್ತದೆ. ಪುಷ್ಪಗಳು ಉದುರುತ್ತವೆ.
    ಆದರೆ ನಮ್ಮ ದೇವರ ಮಾತುಗಳು ಶಾಶ್ವತವಾಗಿವೆ” ಎಂದು ಹೇಳಿತು.

ದೇವರ ಸುವಾರ್ತೆ-ರಕ್ಷಣೆ

ಚೀಯೋನೇ, ಸಾರಿ ತಿಳಿಸಲು ನಿನಗೆ ಒಂದು ಶುಭವಾರ್ತೆಯಿದೆ.
    ಉನ್ನತ ಪರ್ವತಕ್ಕೆ ಏರಿಹೋಗಿ ಶುಭವಾರ್ತೆಯನ್ನು ಗಟ್ಟಿಯಾಗಿ ಸಾರು!
ಜೆರುಸಲೇಮೇ, ನಿನಗೆ ತಿಳಿಸಲು ಒಳ್ಳೆಯ ವಾರ್ತೆ ಇದೆ.
    ಹೆದರಬೇಡ, ಅದನ್ನು ಗಟ್ಟಿಯಾಗಿ ಸಾರು.
ಯೆಹೂದದ ಎಲ್ಲಾ ನಗರಗಳಲ್ಲಿ ತಿಳಿಸು:
    “ಇಗೋ! ನಿನ್ನ ದೇವರು ಇಲ್ಲಿದ್ದಾನೆ.”
10 ಇಗೋ, ನನ್ನ ಒಡೆಯನಾದ ಯೆಹೋವನು ಬಲಸಾಮರ್ಥ್ಯಗಳೊಡನೆ ಬರುತ್ತಿದ್ದಾನೆ.
    ಆತನು ತನ್ನ ಪರಾಕ್ರಮದಿಂದ ಎಲ್ಲಾ ಜನರನ್ನು ಆಳುವನು.
ಆತನು ತನ್ನ ಜನರಿಗೆ ಪ್ರತಿಫಲಗಳನ್ನು ತರುವನು.
    ಅವರ ಸಂಬಳವು ಆತನ ಕೈಯಲ್ಲಿದೆ.
11 ಯೆಹೋವನು ತನ್ನ ಜನರನ್ನು ನಡಿಸುತ್ತಾನೆ.
    ಕುರಿಗಳನ್ನು ನಡಿಸುವ ಕುರುಬನಂತೆ ಯೆಹೋವನು ತನ್ನ ಭುಜಬಲದಿಂದ ತನ್ನ ಕುರಿಗಳನ್ನು ಒಟ್ಟುಗೂಡಿಸುವನು.
ಯೆಹೋವನು ಕುರಿಮರಿಗಳನ್ನು ಎತ್ತಿಕೊಂಡು ಅಪ್ಪಿಕೊಳ್ಳುವನು.
    ಅದರ ತಾಯಿ ಆತನ ಪಕ್ಕದಲ್ಲೇ ನಡೆಯುವವು.

ಕೀರ್ತನೆಗಳು 85:1-2

ಸ್ತುತಿಗೀತೆ. ರಚನೆಗಾರರು: ಕೋರಹೀಯರು.

85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
    ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
    ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
ನಿನ್ನ ಜನರ ದ್ರೋಹವನ್ನು ಕ್ಷಮಿಸು!
    ಅವರ ಪಾಪಗಳನ್ನು ಅಳಿಸಿಬಿಡು!

ಕೀರ್ತನೆಗಳು 85:8-13

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

2 ಪೇತ್ರನು 3:8-15

ಆದರೆ ಪ್ರಿಯ ಸ್ನೇಹಿತರೇ, ಇದೊಂದನ್ನು ಮಾತ್ರ ಮರೆಯದಿರಿ. ಪ್ರಭುವಿಗೆ ಒಂದು ದಿನವು ಸಾವಿರ ವರ್ಷಗಳಂತಿದೆ ಮತ್ತು ಸಾವಿರ ವರ್ಷಗಳು ಒಂದು ದಿನದಂತಿದೆ.(A) ಕೆಲವು ಜನರು ತಿಳಿದುಕೊಂಡಿರುವಂತೆ, ಪ್ರಭುವು ತಾನು ವಾಗ್ದಾನ ಮಾಡಿದ್ದನ್ನು ತಡವಾಗಿ ನೆರವೇರಿಸುವುದಿಲ್ಲ. ದೇವರು ನಿಮ್ಮ ವಿಷಯದಲ್ಲಿ ಇನ್ನೂ ತಾಳ್ಮೆಯಿಂದಿದ್ದಾನಷ್ಟೆ. ಯಾವ ವ್ಯಕ್ತಿಯೂ ಕಳೆದುಹೋಗಬಾರದೆಂಬುದು ದೇವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯಗಳನ್ನು ಪರಿವರ್ತಿಸಿಕೊಂಡು, ಪಾಪ ಮಾಡುವುದನ್ನು ನಿಲ್ಲಿಸಬೇಕೆಂಬುದು ದೇವರ ಅಪೇಕ್ಷೆ.

10 ಆದರೆ ಪ್ರಭುವು ಮತ್ತೆ ಪ್ರತ್ಯಕ್ಷನಾಗುವ ದಿನವು ಕಳ್ಳನು ಬರುವಂತೆ ಅನಿರೀಕ್ಷಿತವಾಗಿ ಬರುತ್ತದೆ. ಆಕಾಶವು ಮಹಾ ಘೋಷದೊಂದಿಗೆ ಅದೃಶ್ಯವಾಗುತ್ತದೆ. ಆಕಾಶಮಂಡಲದಲ್ಲಿರುವ ಎಲ್ಲಾ ಸೃಷ್ಟಿಗಳು ಬೆಂಕಿಯಿಂದ ನಾಶವಾಗುತ್ತವೆ. ಈ ಲೋಕವೂ ಅದರಲ್ಲಿರುವ ಸಮಸ್ತವೂ ಸುಟ್ಟುಹೋಗುತ್ತದೆ. 11 ನಾನು ನಿಮಗೆ ಹೇಳಿದಂತಹ ರೀತಿಯಲ್ಲಿಯೇ ಎಲ್ಲವೂ ನಾಶಗೊಳ್ಳುತ್ತವೆ. ಆದ್ದರಿಂದ ನೀವು ಎಂತಹ ಜನರಾಗಿರಬೇಕು? ನೀವು ಪರಿಶುದ್ಧರಾಗಿರಬೇಕು ಮತ್ತು ಭಕ್ತಿವುಳ್ಳವರಾಗಿರಬೇಕು. 12 ನೀವು ದೇವರ ದಿನಕ್ಕಾಗಿ ಅಪೇಕ್ಷಿಸುತ್ತಾ ಎದುರು ನೋಡುತ್ತಿರಬೇಕು. ಆ ದಿನವು ಬಂದಾಗ, ಆಕಾಶವು ಬೆಂಕಿಯಿಂದ ನಾಶವಾಗುತ್ತದೆ ಮತ್ತು ಆಕಾಶದಲ್ಲಿರುವ ಪ್ರತಿಯೊಂದೂ ಬೆಂಕಿಯಿಂದ ಕರಗಿ ಹೋಗುತ್ತದೆ. 13 ನಾವಾದರೋ ದೇವರು ವಾಗ್ದಾನ ಮಾಡಿರುವ ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರುನೋಡುತ್ತಿದ್ದೇವೆ. ನೀತಿಯು ಅವುಗಳಲ್ಲಿ ವಾಸವಾಗಿರುವುದು.

14 ಪ್ರಿಯ ಸ್ನೇಹಿತರೇ, ಇವುಗಳಿಗಾಗಿಯೇ ನಾವು ಎದುರುನೋಡುತ್ತಿದ್ದೇವೆ. ಆದ್ದರಿಂದ ನೀವು ಪಾಪವಿಲ್ಲದವರಾಗಿರಲು ಮತ್ತು ತಪ್ಪಿಲ್ಲದವರಾಗಿರಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿರಿ. ದೇವರೊಂದಿಗೆ ಸಮಾಧಾನದಿಂದಿರಲು ಪ್ರಯತ್ನಿಸಿರಿ. 15 ನಾವು ರಕ್ಷಣೆ ಹೊಂದಿಕೊಂಡದ್ದು ನಮ್ಮ ಪ್ರಭುವಿನ ತಾಳ್ಮೆಯಿಂದಲೇ ಎಂಬುದನ್ನು ನೆನಪು ಮಾಡಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ದೇವರಿಂದ ತನಗೆ ದೊರೆತ ಜ್ಞಾನದಿಂದ ನಿಮಗೆ ಪತ್ರ ಬರೆದಾಗ ಇದನ್ನೇ ತಿಳಿಸಿದನು.

ಮಾರ್ಕ 1:1-8

ಯೇಸುವಿನ ಆಗಮನ

(ಮತ್ತಾಯ 3:1-12; ಲೂಕ 3:1-9,15-17; ಯೋಹಾನ 1:19-28)

ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು. ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ.

“ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
    ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.”(A)

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ,
ಆತನ ದಾರಿಯನ್ನು ಸುಗಮಗೊಳಿಸಿರಿ’
    ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.”(B)

ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.

ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.

ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International