Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 85:1-2

ಸ್ತುತಿಗೀತೆ. ರಚನೆಗಾರರು: ಕೋರಹೀಯರು.

85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
    ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
    ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
ನಿನ್ನ ಜನರ ದ್ರೋಹವನ್ನು ಕ್ಷಮಿಸು!
    ಅವರ ಪಾಪಗಳನ್ನು ಅಳಿಸಿಬಿಡು!

ಕೀರ್ತನೆಗಳು 85:8-13

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

ಯೆರೆಮೀಯ 1:4-10

ಯೆಹೋವನು ಯೆರೆಮೀಯನನ್ನು ಕರೆದನು

ಯೆರೆಮೀಯನಿಗೆ ಯೆಹೋವನ ಈ ಸಂದೇಶ ಬಂದಿತು:

“ನಾನು ನಿನ್ನನ್ನು ನಿನ್ನ ತಾಯಿಯ ಗರ್ಭದಲ್ಲಿ ರೂಪಿಸುವ ಮುಂಚೆಯೇ
    ನಿನ್ನನ್ನು ಬಲ್ಲವನಾಗಿದ್ದೆನು.
ನೀನು ಹುಟ್ಟುವದಕ್ಕಿಂತ ಮುಂಚೆಯೇ
    ನಾನು ನಿನ್ನನ್ನು ಒಂದು ವಿಶೇಷವಾದ ಕೆಲಸಕ್ಕೆ
    ಅಂದರೆ ಜನಾಂಗಗಳಿಗೆ ಪ್ರವಾದಿಯನ್ನಾಗಿ ಆರಿಸಿಕೊಂಡಿದ್ದೆನು.”

ಆಗ ಯೆರೆಮೀಯನೆಂಬ ನಾನು, “ಸರ್ವಶಕ್ತನಾದ ಯೆಹೋವನೇ, ಹೇಗೆ ಮಾತನಾಡಬೇಕೆಂಬುದೇ ನನಗೆ ತಿಳಿಯದು. ನಾನು ಕೇವಲ ಹುಡುಗನಷ್ಟೇ” ಎಂದು ಹೇಳಿದೆ.

ಆದರೆ ಯೆಹೋವನು ನನಗೆ,

“ನಾನು ಕೇವಲ ಹುಡುಗನೆಂದು ಹೇಳಬೇಡ,
    ನಾನು ಕಳುಹಿಸುವ ಸ್ಥಳಗಳಿಗೆ ನೀನು ಹೋಗಬೇಕು.
    ನಾನು ಹೇಳು ಅಂದದ್ದನ್ನೆಲ್ಲ ನೀನು ಹೇಳಬೇಕು.
ಯಾರಿಗೂ ನೀನು ಹೆದರಬೇಡ, ನಾನೇ ನಿನ್ನ ಜೊತೆ ಇದ್ದೇನೆ.
    ನಾನು ನಿನ್ನನ್ನು ಕಾಪಾಡುತ್ತೇನೆ.
ಈ ಮಾತನ್ನು ಯೆಹೋವನಾದ ನಾನೇ ಹೇಳುತ್ತಿದ್ದೇನೆ” ಎಂದನು.

ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ,

“ಯೆರೆಮೀಯನೇ, ಇಗೋ, ನಾನು ನನ್ನ ಮಾತುಗಳನ್ನು ನಿನ್ನ ಬಾಯಲ್ಲಿ ಇಡುತ್ತಿದ್ದೇನೆ.
10 ಕಿತ್ತುಹಾಕಲು, ಕೆಡವಲು, ನಾಶಪಡಿಸಲು, ಹಾಳುಮಾಡಲು,
    ಕಟ್ಟಲು, ನೆಡಲು, ಜನಾಂಗಗಳ ಮೇಲೂ ರಾಜ್ಯಗಳ ಮೇಲೂ
    ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.

ಅಪೊಸ್ತಲರ ಕಾರ್ಯಗಳು 11:19-26

ಅಂತಿಯೋಕ್ಯಕ್ಕೆ ಸುವಾರ್ತೆ

19 ಸ್ತೆಫನನು ಕೊಲ್ಲಲ್ಪಟ್ಟ ನಂತರ ಉಂಟಾದ ಹಿಂಸೆಯಿಂದಾಗಿ ವಿಶ್ವಾಸಿಗಳು ಚದರಿಹೋದರು. ವಿಶ್ವಾಸಿಗಳಲ್ಲಿ ಕೆಲವರು ಬಹು ದೂರದ ಸ್ಥಳಗಳಾದ ಫೆನಿಷ್ಯ, ಸೈಪ್ರಸ್ ಮತ್ತು ಅಂತಿಯೋಕ್ಯಗಳಿಗೆ ಹೋದರು. ವಿಶ್ವಾಸಿಗಳು ಈ ಸ್ಥಳಗಳಲ್ಲಿ ಸುವಾರ್ತೆಯನ್ನು ತಿಳಿಸಿದರು. ಆದರೆ ಅವರು ಯೆಹೂದ್ಯರಿಗೆ ಮಾತ್ರ ತಿಳಿಸಿದರು. 20 ಈ ವಿಶ್ವಾಸಿಗಳಲ್ಲಿ ಕೆಲವರು ಸೈಪ್ರಸ್ ಮತ್ತು ಸಿರೇನ್ ಸ್ಥಳಗಳವರಾಗಿದ್ದರು. ಈ ಜನರು ಅಂತಿಯೋಕ್ಯಕ್ಕೆ ಬಂದಾಗ ಅವರು, ಪ್ರಭುವಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅಲ್ಲಿಯ ಗ್ರೀಕ್ ಜನರಿಗೆ ತಿಳಿಸಿದರು. 21 ಪ್ರಭುವು ವಿಶ್ವಾಸಿಗಳಿಗೆ ಸಹಾಯ ಮಾಡುತ್ತಿದ್ದನು. ಜನರು ಬಹು ಸಂಖ್ಯೆಯಲ್ಲಿ ಪ್ರಭುವನ್ನು ನಂಬಿಕೊಂಡು ಅನುಸರಿಸತೊಡಗಿದರು.

22 ಅಂತಿಯೋಕ್ಯದಲ್ಲಿದ್ದ ಈ ಹೊಸ ವಿಶ್ವಾಸಿಗಳ ಬಗ್ಗೆ ಜೆರುಸಲೇಮಿನ ಸಭೆಯವರಿಗೆ ತಿಳಿಯಿತು. ಆದ್ದರಿಂದ ಜೆರುಸಲೇಮಿನ ವಿಶ್ವಾಸಿಗಳು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು. 23-24 ಬಾರ್ನಬನು ಒಳ್ಳೆಯ ಮನುಷ್ಯನಾಗಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು ಮತ್ತು ಪೂರ್ಣನಂಬಿಕೆಯುಳ್ಳವನಾಗಿದ್ದನು. ಬಾರ್ನಬನು ಅಂತಿಯೋಕ್ಯಕ್ಕೆ ಹೋದಾಗ, ದೇವರು ಆ ಜನರನ್ನು ಅಧಿಕವಾಗಿ ಆಶೀರ್ವದಿಸಿರುವುದನ್ನು ಕಂಡನು. ಇದರಿಂದ ಬಾರ್ನಬನಿಗೆ ತುಂಬಾ ಸಂತೋಷವಾಯಿತು. ಅಂತಿಯೋಕ್ಯದಲ್ಲಿದ್ದ ವಿಶ್ವಾಸಿಗಳನ್ನೆಲ್ಲ ಅವನು ಪ್ರೋತ್ಸಾಹಿಸಿದನು. ಅವನು ಅವರಿಗೆ, “ನಿಮ್ಮ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಪ್ರಭುವಿಗೆ ನಿಮ್ಮ ಪೂರ್ಣಹೃದಯಗಳಿಂದ ಯಾವಾಗಲೂ ವಿಧೇಯರಾಗಿರಿ” ಎಂದು ಹೇಳಿದನು. ಅನೇಕ ಜನರು ಪ್ರಭುವಾದ ಯೇಸುವಿನ ಹಿಂಬಾಲಕರಾದರು.

25 ಬಳಿಕ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಸ್ ಪಟ್ಟಣಕ್ಕೆ ಹೋದನು. 26 ಬಾರ್ನಬನು ಅಲ್ಲಿ ಸೌಲನನ್ನು ಕಂಡುಕೊಂಡು ಅವನನ್ನು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಸೌಲನು ಮತ್ತು ಬಾರ್ನಬನು ಅಂತಿಯೋಕ್ಯದಲ್ಲಿ ಒಂದು ವರ್ಷ ಪೂರ್ತಿ ಸಭೆಯ ಅನ್ಯೋನ್ಯತೆಯಲ್ಲಿ ಇದ್ದುಕೊಂಡು ಅನೇಕ ಜನರಿಗೆ ಬೋಧಿಸಿದರು. ಯೇಸುವಿನ ಹಿಂಬಾಲಕರಿಗೆ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International