Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರರು: ಕೋರಹೀಯರು.
85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
2 ನಿನ್ನ ಜನರ ದ್ರೋಹವನ್ನು ಕ್ಷಮಿಸು!
ಅವರ ಪಾಪಗಳನ್ನು ಅಳಿಸಿಬಿಡು!
8 ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
9 ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.
ಯೆಹೋವನ ಬಳಿಗೆ ಹಿಂತಿರುಗಿ ಬರುವಾಗ ದೊರಕುವ ಬಹುಮಾನ
6 “ಬನ್ನಿರಿ, ನಾವು ಯೆಹೋವನ ಬಳಿಗೆ ಹಿಂತಿರುಗೋಣ.
ಆತನು ನಮಗೆ ಗಾಯ ಮಾಡಿದರೂ ಗುಣಮಾಡುವನು.
ನಮ್ಮ ಗಾಯಗಳಿಗೆ ಬಟ್ಟೆಯನ್ನು ಸುತ್ತುವನು.
2 ಎರಡು ದಿವಸಗಳ ತರುವಾಯ ನಮ್ಮನ್ನು ತಿರುಗಿ ಜೀವಂತ ಮಾಡುವನು.
ಮೂರನೇ ದಿವಸದಲ್ಲಿ ನಮ್ಮನ್ನು ಎಬ್ಬಿಸುವನು.
ಆಗ ನಾವು ಆತನ ಸಮೀಪದಲ್ಲಿ ವಾಸಿಸಬಹುದು.
3 ಯೆಹೋವನ ವಿಷಯವಾಗಿ ನಾವು ಕಲಿಯೋಣ.
ಆತನನ್ನು ಅರಿತುಕೊಳ್ಳಲು ಅತಿಯಾಗಿ ಪ್ರಯತ್ನಿಸೋಣ.
ಸೂರ್ಯೋದಯ ಆಗುತ್ತದೆಯೆಂಬುದು ನಮಗೆ ಗೊತ್ತಿರುವಂತೆಯೇ ಆತನು ಬರುವುದೂ ನಮಗೆ ಗೊತ್ತಿದೆ.
ವಸಂತಕಾಲದ ಮಳೆಯಂತೆ ಯೆಹೋವನು ಬರುವನು.”
ಜನರು ನಿಷ್ಠಾವಂತರಲ್ಲ
4 “ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ?
ಯೆಹೂದವೇ, ನಿನಗೆ ನಾನು ಏನು ಮಾಡಬೇಕು?
ನಿನ್ನ ನಂಬಿಗಸ್ತಿಕೆಯು ಮುಂಜಾನೆಯ ಮಂಜಿನಂತಿದೆ.
ನಿನ್ನ ನಂಬಿಗಸ್ತಿಕೆಯು ಇಬ್ಬನಿಯಂತಿದೆ.
ಅದು ಬೇಗನೆ ಇಲ್ಲದೆಹೋಗುವದು.
5 ನಾನು ಪ್ರವಾದಿಗಳ ಮೂಲಕ ಜನರಿಗೆ ಕಟ್ಟಳೆಗಳನ್ನು ವಿಧಿಸಿದೆನು.
ನನ್ನ ಅಪ್ಪಣೆಯ ಮೇರೆಗೆ ಜನರು ಕೊಲ್ಲಲ್ಪಟ್ಟರು.
6 ಯಾಕೆಂದರೆ ನನಗೆ ವಿಧೇಯತೆಯಿಂದ
ಕೂಡಿದ ಪ್ರೀತಿಯು ಬೇಕೇ ಹೊರತು ಯಜ್ಞವಲ್ಲ.
ಜನರು ತರುವ ಸರ್ವಾಂಗಹೋಮಗಳಿಗಿಂತಲೂ
ಅವರು ನನ್ನನ್ನು (ದೇವರನ್ನು) ತಿಳಿದುಕೊಳ್ಳಬೇಕೆಂಬುದೇ ನನಗೆ ಇಷ್ಟ.
ಥೆಸಲೋನಿಕದವರ ಜೀವನ ಮತ್ತು ನಂಬಿಕೆ
2 ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಂಡು ನಿಮ್ಮೆಲ್ಲರ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. 3 ನಮ್ಮ ತಂದೆಯಾದ ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮ ನಂಬಿಕೆಯ ಮತ್ತು ಪ್ರೀತಿಯ ಫಲವಾಗಿ ಮಾಡಿದ ಕಾರ್ಯಗಳಿಗಾಗಿಯೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಿಮಗಿರುವ ನಿರೀಕ್ಷೆಯಿಂದ ನೀವು ದೃಢವಾಗಿರುವುದಕ್ಕಾಗಿಯೂ ನಾವು ಆತನಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ.
4 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ಆತನು ನಿಮ್ಮನ್ನು ತನ್ನವರನ್ನಾಗಿ ಆರಿಸಿಕೊಂಡಿದ್ದಾನೆಂಬುದೂ ನಮಗೆ ತಿಳಿದಿದೆ. 5 ನಿಮಗೆ ಸುವಾರ್ತೆಯನ್ನು ಶಕ್ತಿಯೊಡನೆ ತಂದಿದ್ದೇವೆ. ಕೇವಲ ನುಡಿಗಳನ್ನು ಬಳಸದೆ ಅದನ್ನು ಪವಿತ್ರಾತ್ಮನೊಡನೆಯೂ ಮತ್ತು ಅದು ಸತ್ಯವೆಂಬ ನಿಶ್ಚಿತ ಜ್ಞಾನದೊಡನೆಯೂ ತಂದಿದ್ದೇವೆ. ಇದಲ್ಲದೆ ನಾವು ನಿಮ್ಮೊಡನೆ ಇದ್ದಾಗ ನಿಮಗೋಸ್ಕರ ಹೇಗೆ ಜೀವಿಸಿದ್ದೆವು ಎಂಬುದು ನಿಮಗೆ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ಹಾಗೆ ಜೀವಿಸಿದೆವು. 6 ನೀವು ನಮ್ಮನ್ನೂ ಪ್ರಭುವನ್ನೂ ಅನುಸರಿಸಿದಿರಿ; ಬಹಳ ಹಿಂಸೆಯನ್ನು ಅನುಭವಿಸಿದಿರಿ; ನಮ್ಮ ಉಪದೇಶವನ್ನು ನೀವು ಸಂತಸದಿಂದ ಒಪ್ಪಿಕೊಂಡಿರಿ. ಪವಿತ್ರಾತ್ಮನೇ ನಿಮಗೆ ಆ ಸಂತಸವನ್ನು ನೀಡಿದನು.
7 ಮಕೆದೋನಿಯ ಮತ್ತು ಅಖಾಯದಲ್ಲಿದ್ದ ನಂಬಿಗಸ್ತರಿಗೆಲ್ಲಾ ನೀವು ಮಾದರಿಯಾದಿರಿ. 8 ಪ್ರಭುವಿನ ಉಪದೇಶವು ಮಕೆದೋನಿಯ ಮತ್ತು ಅಖಾಯದಲ್ಲಿ ನಿಮ್ಮಿಂದ ಪ್ರಚಾರವಾಯಿತು. ಇದಲ್ಲದೆ ದೇವರ ಮೇಲಿನ ನಿಮ್ಮ ನಂಬಿಕೆಯು ಎಲ್ಲಾ ಕಡೆಗಳಲ್ಲಿಯೂ ತಿಳಿದುಬಂದಿತು. ಆದುದರಿಂದ ನಿಮ್ಮ ನಂಬಿಕೆಯ ಬಗ್ಗೆ ಏನೂ ಹೇಳಬೇಕಾಗಿಲ್ಲ. 9 ನಾವು ನಿಮ್ಮೊಡನೆ ಇದ್ದಾಗ ನೀವು ನಮ್ಮ ಬೋಧನೆಯನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿಕೊಂಡದ್ದರ ಕುರಿತಾಗಿಯೂ ವಿಗ್ರಹಾರಾಧನೆಯನ್ನು ನಿಲ್ಲಿಸಿ ಜೀವವುಳ್ಳ ಸತ್ಯದೇವರನ್ನು ಆರಾಧಿಸತೊಡಗಿದ್ದರ ಕುರಿತಾಗಿಯೂ ಅಲ್ಲಿನ ಜನರೆಲ್ಲರೂ ತಿಳಿಸುತ್ತಾರೆ. 10 ದೇವಕುಮಾರನು ಪರಲೋಕದಿಂದ ಬರುವುದನ್ನು ಎದುರುನೋಡುವುದಕ್ಕಾಗಿ ನೀವು ಹಾಗೆ ಮಾಡಿದಿರಿ. ದೇವರೇ ಆ ಕುಮಾರನನ್ನು ಸತ್ತವರೊಳಗಿಂದ ಜೀವಂತವಾಗಿ ಮೇಲಕ್ಕೆಬ್ಬಿಸಿದನು. ಆತನೇ ಯೇಸು. ಮುಂದೆ ಬರುವ ದೇವರ ಕೋಪದ ತೀರ್ಪಿನಿಂದ ನಮ್ಮನ್ನು ರಕ್ಷಿಸುವವನು ಆತನೇ.
Kannada Holy Bible: Easy-to-Read Version. All rights reserved. © 1997 Bible League International