Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
79 ದೇವರೇ, ಅನ್ಯ ಜನಾಂಗಗಳು ನಿನ್ನ ಜನರಿಗೆ ಮುತ್ತಿಗೆ ಹಾಕಿದ್ದಾರೆ.
ಅವರು ನಿನ್ನ ಪವಿತ್ರಾಲಯವನ್ನು ಹೊಲಸು ಮಾಡಿದರು;
ಜೆರುಸಲೇಮನ್ನು ನಾಶ ಮಾಡಿದರು.
2 ಅವರು ನಿನ್ನ ಸೇವಕರ ಸತ್ತದೇಹಗಳನ್ನು ಕ್ರೂರ ಪಕ್ಷಿಗಳಿಗೆ ಆಹಾರ ಮಾಡಿದರು.
ಅವರು ನಿನ್ನ ಭಕ್ತರ ದೇಹಗಳನ್ನು ಕ್ರೂರ ಪ್ರಾಣಿಗಳಿಗೆ ಹಾಕಿದರು.
3 ರಕ್ತವು ನೀರಿನಂತೆ ಹರಿಯುವ ತನಕ ಶತ್ರುಗಳು ನಿನ್ನ ಜನರನ್ನು ಕೊಂದುಹಾಕಿದರು.
ಶವಗಳನ್ನು ಹೂಳಲು ಯಾರೂ ಉಳಿದಿಲ್ಲ.
4 ನಮ್ಮ ನೆರೆಹೊರೆಯ ದೇಶಗಳವರು ನಮಗೆ ಅವಮಾನ ಮಾಡಿದರು.
ನಮ್ಮ ಸುತ್ತಮುತ್ತಲಿನ ಜನರೆಲ್ಲರೂ ನಮ್ಮನ್ನು ನೋಡಿ ನಗುತ್ತಾ ಗೇಲಿ ಮಾಡಿದರು.
5 ದೇವರೇ, ಇನ್ನೆಷ್ಟರವರೆಗೆ ನೀನು ನಮ್ಮ ಮೇಲೆ ಕೋಪದಿಂದಿರುವೆ?
ನಿನ್ನ ಕೋಪಾಗ್ನಿಯು ಉರಿಯುತ್ತಲೇ ಇರಬೇಕೇ?
6 ನಿನ್ನನ್ನು ಅರಿಯದ ಜನಾಂಗಗಳ ಮೇಲೆಯೂ
ನಿನ್ನ ಹೆಸರನ್ನು ಆರಾಧಿಸದ ಜನಾಂಗಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
7 ಯಾಕೆಂದರೆ ಆ ಜನಾಂಗಗಳು
ಯಾಕೋಬ್ಯರನ್ನೂ ಅವರ ದೇಶವನ್ನೂ ನಾಶಮಾಡಿದರು.
8 ನಮ್ಮ ಪೂರ್ವಿಕರು ಮಾಡಿದ ಪಾಪಕ್ಕೆ ಬರಬೇಕಾದ ದಂಡನೆಯನ್ನು ನಮ್ಮ ಮೇಲೆ ಬರಗೊಡಿಸಬೇಡ.
ಬೇಗನೆ ನಿನ್ನ ಕರುಣೆಯನ್ನು ನಮಗೆ ತೋರು!
ನೀನು ನಮಗೆ ಎಷ್ಟೋ ಅಗತ್ಯವಾಗಿರುವೆ!
9 ನಮ್ಮ ರಕ್ಷಕನಾದ ದೇವರೇ, ನಮಗೆ ಸಹಾಯಮಾಡು!
ನಿನ್ನ ಹೆಸರಿನ ಘನತೆಗಾಗಿ ನಮಗೆ ಸಹಾಯಮಾಡು!
ನಮ್ಮನ್ನು ರಕ್ಷಿಸಿ ನಿನ್ನ ಹೆಸರಿನ ಘನತೆಗೋಸ್ಕರ
ನಮ್ಮ ಪಾಪಗಳನ್ನು ಅಳಿಸಿಬಿಡು.
10 ಅನ್ಯ ಜನಾಂಗಗಳು, “ನಿಮ್ಮ ದೇವರು ಎಲ್ಲಿ? ಆತನು ನಿಮಗೆ ಸಹಾಯಮಾಡಲಾರನೇ?”
ಎಂದು ಹೇಳಲು ಅವಕಾಶ ಕೊಡಬೇಡ.
ದೇವರೇ, ಅವರು ನಿನ್ನ ಸೇವಕರನ್ನು ಕೊಂದದ್ದಕ್ಕಾಗಿ
ನಮ್ಮ ಕಣ್ಣೆದುರಿನಲ್ಲಿಯೇ ಅವರನ್ನು ದಂಡಿಸು.
11 ದಯವಿಟ್ಟು, ಸೆರೆಯಾಳುಗಳ ಗೋಳಾಟಕ್ಕೆ ಕಿವಿಗೊಡು!
ಸಾಯಲಿರುವವರನ್ನು ನಿನ್ನ ಮಹಾಶಕ್ತಿಯಿಂದ ಕಾಪಾಡು.
12 ಒಡೆಯನೇ, ನಮ್ಮ ಸುತ್ತಮುತ್ತಲಿನ ಜನರು ಮಾಡಿದ ಕಾರ್ಯಗಳಿಗಾಗಿ
ಅವರನ್ನು ಏಳರಷ್ಟು ದಂಡಿಸು.
ನಿನಗೆ ಅವಮಾನಮಾಡಿದ್ದರಿಂದ ಅವರನ್ನು ದಂಡಿಸು.
13 ನಾವು ನಿನ್ನ ಜನರೂ ನೀನು ಪಾಲಿಸುವ ಮಂದೆಯೂ ಆಗಿದ್ದೇವೆ.
ನಾವು ನಿನ್ನನ್ನು ಎಂದೆಂದಿಗೂ ಕೊಂಡಾಡುವೆವು.
ನಿನ್ನನ್ನು ಸದಾಕಾಲ ಸ್ತುತಿಸುವೆವು.
5 ಬಲಶಾಲಿಯಾದ ನಗರಿಯೇ, ನಿನ್ನ ಸೈನಿಕರನ್ನು ಕೂಡಿಸು.
ಅವರು ನಮ್ಮ ಮೇಲೆ ದಾಳಿಮಾಡಲು ಸುತ್ತುವರಿದಿದ್ದಾರೆ.
ಇಸ್ರೇಲಿನ ನ್ಯಾಯಾಧೀಶನ ಕೆನ್ನೆಯ ಮೇಲೆ
ಕೋಲಿನಿಂದ ಹೊಡೆಯುವರು.
ಬೆತ್ಲೆಹೇಮಿನಲ್ಲಿ ಮೆಸ್ಸೀಯನು ಜನಿಸುವನು
2 ಎಫ್ರಾತದ ಬೆತ್ಲೆಹೇಮೇ,
ನೀನು ಯೆಹೂದದ ಪ್ರಾಂತ್ಯದಲ್ಲಿ ಅತಿ ಚಿಕ್ಕ ಊರು ಆಗಿರುವೆ.
ನಿನ್ನಲ್ಲಿರುವ ಕುಟುಂಬಗಳು ಸ್ವಲ್ಪ ಮಾತ್ರವೇ.
ಆದರೆ ಇಸ್ರೇಲನ್ನು ಆಳುವವನು ನನಗೋಸ್ಕರವಾಗಿ ನಿನ್ನಿಂದ ಹೊರಡುವನು.
ಆತನ ಪ್ರಾರಂಭವು ಅನಾದಿ ಕಾಲದಿಂದಲೇ ಆಗಿದೆ.
3 ಸ್ತ್ರೀಯು ತನ್ನ ಮಗನನ್ನು ಹೆರುವ ತನಕ
ಯೆಹೋವನು ತನ್ನ ಜನರನ್ನು ತೊರೆದುಬಿಡುವನು.
ಅನಂತರ ಉಳಿದ ಅವನ ಸಹೋದರರು
ಇಸ್ರೇಲ್ ಜನರ ಬಳಿಗೆ ತಿರುಗಿ ಬರುವರು.
4 ಆಗ ಇಸ್ರೇಲರನ್ನು ಆಳುವಾತನು ಯೆಹೋವನ ಶಕ್ತಿಯಲ್ಲಿಯೂ
ತನ್ನ ದೇವರಾದ ಯೆಹೋವನ ಹೆಸರಿನಲ್ಲಿಯೂ ನಿಂತು ತನ್ನ ಮಂದೆಗೆ ಆಹಾರವನ್ನೀಯುವನು.
ಆತನ ಮಹತ್ತು ಭೂಮಿಯ ಕಟ್ಟಕಡೆಗೆ ಪ್ರಸರಿಸುವದರಿಂದ
ಅವರು ಸಮಾಧಾನದಿಂದ ವಾಸಿಸುವರು.
5 ಆಗ ಶಾಂತಿ ನೆಲೆಸುವದು.
ಹೌದು, ಅಶ್ಶೂರದ ಸೈನ್ಯವು ನಮ್ಮ ದೇಶಕ್ಕೆ ಬಂದು
ನಮ್ಮ ಮಹಾ ಕಟ್ಟಡಗಳನ್ನು ತುಳಿದುಹಾಕುವರು.
ಆದರೆ ಇಸ್ರೇಲನ್ನು ಆಳುವಾತನು ಏಳು ಕುರುಬರನ್ನೂ
ಎಂಟು ನಾಯಕರನ್ನೂ ಆರಿಸುವನು.
ಎಲ್ಲಾ ಸಮಯದಲ್ಲೂ ಸಿದ್ಧರಾಗಿರಿ
34 “ಎಚ್ಚರಿಕೆ! ತಿನ್ನುವುದರಲ್ಲಿಯೂ ಕುಡಿದು ಮತ್ತರಾಗುವುದರಲ್ಲಿಯೂ ಪ್ರಾಪಂಚಿಕ ಚಿಂತೆಗಳಲ್ಲಿಯೂ ಮಗ್ನರಾಗಿರಬೇಡಿರಿ. ಇಲ್ಲವಾದರೆ, ನಿಮ್ಮ ಹೃದಯಗಳು ಭಾರವಾಗಿರುವಾಗಲೇ ಅಂತ್ಯವು ಫಕ್ಕನೆ ಬಂದೀತು. 35 ಆ ದಿವಸವು ಭೂನಿವಾಸಿಗಳೆಲ್ಲರಿಗೂ ವಿಸ್ಮಯಕರವಾಗಿರುವುದು. 36 ಆದ್ದರಿಂದ ಎಲ್ಲಾ ಸಮಯದಲ್ಲಿಯೂ ಸಿದ್ಧರಾಗಿರಿ. ನಡೆಯಲಿರುವ ಈ ಎಲ್ಲಾ ಸಂಗತಿಗಳನ್ನು ಎದುರಿಸಿ ಸುರಕ್ಷಿತವಾಗಿ ಮುಂದುವರಿಯಲು ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸಿರಿ.”
37 ಯೇಸು ಹಗಲೆಲ್ಲಾ ದೇವಾಲಯದಲ್ಲಿ ಜನರಿಗೆ ಉಪದೇಶಿಸುತ್ತಿದ್ದನು. ರಾತ್ರಿಯಲ್ಲಾದರೋ ಪಟ್ಟಣದ ಹೊರಗಿದ್ದ ಆಲಿವ್ ಮರಗಳ ಗುಡ್ಡದ ಮೇಲೆ ಇರುತ್ತಿದ್ದನು. 38 ಪ್ರತಿ ಮುಂಜಾನೆ, ಜನರೆಲ್ಲರೂ ಬೇಗನೆ ಎದ್ದು ದೇವಾಲಯದಲ್ಲಿ ಯೇಸುವಿನ ಉಪದೇಶವನ್ನು ಕೇಳುವುದಕ್ಕೆ ಹೋಗುತ್ತಿದ್ದರು.
Kannada Holy Bible: Easy-to-Read Version. All rights reserved. © 1997 Bible League International