Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
79 ದೇವರೇ, ಅನ್ಯ ಜನಾಂಗಗಳು ನಿನ್ನ ಜನರಿಗೆ ಮುತ್ತಿಗೆ ಹಾಕಿದ್ದಾರೆ.
ಅವರು ನಿನ್ನ ಪವಿತ್ರಾಲಯವನ್ನು ಹೊಲಸು ಮಾಡಿದರು;
ಜೆರುಸಲೇಮನ್ನು ನಾಶ ಮಾಡಿದರು.
2 ಅವರು ನಿನ್ನ ಸೇವಕರ ಸತ್ತದೇಹಗಳನ್ನು ಕ್ರೂರ ಪಕ್ಷಿಗಳಿಗೆ ಆಹಾರ ಮಾಡಿದರು.
ಅವರು ನಿನ್ನ ಭಕ್ತರ ದೇಹಗಳನ್ನು ಕ್ರೂರ ಪ್ರಾಣಿಗಳಿಗೆ ಹಾಕಿದರು.
3 ರಕ್ತವು ನೀರಿನಂತೆ ಹರಿಯುವ ತನಕ ಶತ್ರುಗಳು ನಿನ್ನ ಜನರನ್ನು ಕೊಂದುಹಾಕಿದರು.
ಶವಗಳನ್ನು ಹೂಳಲು ಯಾರೂ ಉಳಿದಿಲ್ಲ.
4 ನಮ್ಮ ನೆರೆಹೊರೆಯ ದೇಶಗಳವರು ನಮಗೆ ಅವಮಾನ ಮಾಡಿದರು.
ನಮ್ಮ ಸುತ್ತಮುತ್ತಲಿನ ಜನರೆಲ್ಲರೂ ನಮ್ಮನ್ನು ನೋಡಿ ನಗುತ್ತಾ ಗೇಲಿ ಮಾಡಿದರು.
5 ದೇವರೇ, ಇನ್ನೆಷ್ಟರವರೆಗೆ ನೀನು ನಮ್ಮ ಮೇಲೆ ಕೋಪದಿಂದಿರುವೆ?
ನಿನ್ನ ಕೋಪಾಗ್ನಿಯು ಉರಿಯುತ್ತಲೇ ಇರಬೇಕೇ?
6 ನಿನ್ನನ್ನು ಅರಿಯದ ಜನಾಂಗಗಳ ಮೇಲೆಯೂ
ನಿನ್ನ ಹೆಸರನ್ನು ಆರಾಧಿಸದ ಜನಾಂಗಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
7 ಯಾಕೆಂದರೆ ಆ ಜನಾಂಗಗಳು
ಯಾಕೋಬ್ಯರನ್ನೂ ಅವರ ದೇಶವನ್ನೂ ನಾಶಮಾಡಿದರು.
8 ನಮ್ಮ ಪೂರ್ವಿಕರು ಮಾಡಿದ ಪಾಪಕ್ಕೆ ಬರಬೇಕಾದ ದಂಡನೆಯನ್ನು ನಮ್ಮ ಮೇಲೆ ಬರಗೊಡಿಸಬೇಡ.
ಬೇಗನೆ ನಿನ್ನ ಕರುಣೆಯನ್ನು ನಮಗೆ ತೋರು!
ನೀನು ನಮಗೆ ಎಷ್ಟೋ ಅಗತ್ಯವಾಗಿರುವೆ!
9 ನಮ್ಮ ರಕ್ಷಕನಾದ ದೇವರೇ, ನಮಗೆ ಸಹಾಯಮಾಡು!
ನಿನ್ನ ಹೆಸರಿನ ಘನತೆಗಾಗಿ ನಮಗೆ ಸಹಾಯಮಾಡು!
ನಮ್ಮನ್ನು ರಕ್ಷಿಸಿ ನಿನ್ನ ಹೆಸರಿನ ಘನತೆಗೋಸ್ಕರ
ನಮ್ಮ ಪಾಪಗಳನ್ನು ಅಳಿಸಿಬಿಡು.
10 ಅನ್ಯ ಜನಾಂಗಗಳು, “ನಿಮ್ಮ ದೇವರು ಎಲ್ಲಿ? ಆತನು ನಿಮಗೆ ಸಹಾಯಮಾಡಲಾರನೇ?”
ಎಂದು ಹೇಳಲು ಅವಕಾಶ ಕೊಡಬೇಡ.
ದೇವರೇ, ಅವರು ನಿನ್ನ ಸೇವಕರನ್ನು ಕೊಂದದ್ದಕ್ಕಾಗಿ
ನಮ್ಮ ಕಣ್ಣೆದುರಿನಲ್ಲಿಯೇ ಅವರನ್ನು ದಂಡಿಸು.
11 ದಯವಿಟ್ಟು, ಸೆರೆಯಾಳುಗಳ ಗೋಳಾಟಕ್ಕೆ ಕಿವಿಗೊಡು!
ಸಾಯಲಿರುವವರನ್ನು ನಿನ್ನ ಮಹಾಶಕ್ತಿಯಿಂದ ಕಾಪಾಡು.
12 ಒಡೆಯನೇ, ನಮ್ಮ ಸುತ್ತಮುತ್ತಲಿನ ಜನರು ಮಾಡಿದ ಕಾರ್ಯಗಳಿಗಾಗಿ
ಅವರನ್ನು ಏಳರಷ್ಟು ದಂಡಿಸು.
ನಿನಗೆ ಅವಮಾನಮಾಡಿದ್ದರಿಂದ ಅವರನ್ನು ದಂಡಿಸು.
13 ನಾವು ನಿನ್ನ ಜನರೂ ನೀನು ಪಾಲಿಸುವ ಮಂದೆಯೂ ಆಗಿದ್ದೇವೆ.
ನಾವು ನಿನ್ನನ್ನು ಎಂದೆಂದಿಗೂ ಕೊಂಡಾಡುವೆವು.
ನಿನ್ನನ್ನು ಸದಾಕಾಲ ಸ್ತುತಿಸುವೆವು.
ಜೆರುಸಲೇಮಿನಿಂದ ಧರ್ಮಶಾಸ್ತ್ರ ಬರುವದು
4 ಅಂತ್ಯದ ದಿವಸಗಳಲ್ಲಿ ಯೆಹೋವನ ಆಲಯದ ಪರ್ವತವು
ಎಲ್ಲಾ ಪರ್ವತಗಳಿಗಿಂತಲೂ ಅತ್ಯುನ್ನತವಾಗಿರುವುದು.
ಅದು ಬೆಟ್ಟಗಳಿಗಿಂತಲೂ ಉನ್ನತವಾಗಿರುವದು.
ಅಲ್ಲಿಗೆ ಜನರು ಗುಂಪುಗುಂಪಾಗಿ ಹೋಗುವರು.
2 ಅನೇಕ ದೇಶಗಳಿಂದ ಜನರು ಅಲ್ಲಿಗೆ ಹೋಗುವರು.
“ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ,
ಯಾಕೋಬನ ದೇವರ ಆಲಯಕ್ಕೆ ನಾವು ಹೋಗೋಣ.
ಆಗ ದೇವರು ನಮಗೆ ಜೀವಿತದ ಮಾರ್ಗವನ್ನು ಕಲಿಸುವನು.
ಮತ್ತು ನಾವು ಆತನನ್ನು ಅನುಸರಿಸುವೆವು” ಎಂದು ಹೇಳುವರು.
ದೇವರ ಉಪದೇಶವು, ಆತನ ಸಂದೇಶವು ಚೀಯೋನ್ ಬೆಟ್ಟದಲ್ಲಿರುವ
ಜೆರುಸಲೇಮಿನಲ್ಲಿ ಪ್ರಾರಂಭವಾಗಿ ಪ್ರಪಂಚದಲ್ಲೆಲ್ಲಾ ಹಬ್ಬುತ್ತದೆ.
3 ಆಗ ಪ್ರಪಂಚದ ಎಲ್ಲಾ ಜನಾಂಗಗಳಿಗೆ ಯೆಹೋವನೇ ನ್ಯಾಯಾಧೀಶನು.
ದೂರದೇಶದಲ್ಲಿರುವ ಅನೇಕ ಜನರ ಜಗಳಗಳನ್ನು ಆತನು ನಿಲ್ಲಿಸುವನು.
ಆ ಜನರು ಯುದ್ಧದ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು.
ತಮ್ಮ ಖಡ್ಗಗಳಿಂದ ನೇಗಿಲ ಗುಳಗಳನ್ನು ತಯಾರಿಸುವರು.
ಭರ್ಜಿಗಳಿಂದ ಕುಡುಗೋಲುಗಳನ್ನು ತಯಾರಿಸುವರು.
ಜನರೊಳಗೆ ಪರಸ್ಪರ ಯುದ್ಧ ಮಾಡುವದನ್ನು ನಿಲ್ಲಿಸುವರು.
ಯುದ್ಧಕ್ಕೆ ತರಬೇತಿ ಎಂದಿಗೂ ಮಾಡರು.
4 ಪ್ರತಿಯೊಬ್ಬನೂ ತನ್ನ ದ್ರಾಕ್ಷಾಲತೆಯ ನೆರಳಿನಲ್ಲಿ ಕುಳಿತುಕೊಳ್ಳುವನು.
ಅವರು ಅಂಜೂರದ ಮರದಡಿಯಲ್ಲಿ ವಿಶ್ರಾಂತಿಯಲ್ಲಿರುವರು.
ಯಾರೂ ಅವರನ್ನು ಭಯಗೊಳಿಸುವದಿಲ್ಲ.
ಯಾಕೆಂದರೆ ಸರ್ವಶಕ್ತನಾದ ಯೆಹೋವನು ಹೀಗೆ ಆಗುವದೆಂದು ಹೇಳಿದ್ದಾನೆ.
5 ಬೇರೆ ದೇಶಗಳವರು ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತಾರೆ.
ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರನ್ನು ನಿತ್ಯಕಾಲಕ್ಕೂ ಸ್ಮರಿಸುವೆವು.
ದೇವದೂತರಿಂದ ಕೊನೆಯ ಉಪದ್ರವಗಳು
15 ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.
2 ಬೆಂಕಿಯನ್ನು ಬೆರಸಿದ ಗಾಜಿನ ಸಮುದ್ರದಂತೆ ಕಾಣಿಸುವ ಏನೋ ಒಂದು ನನಗೆ ಕಾಣಿಸಿತು. ಮೃಗವನ್ನು, ಅದರ ವಿಗ್ರಹವನ್ನು ಮತ್ತು ಅದರ ಹೆಸರಿನ ಸಂಖ್ಯೆಯನ್ನು ಸೋಲಿಸಿ ಜಯಗಳಿಸಿದವರೆಲ್ಲರೂ ಸಮುದ್ರ ತೀರದಲ್ಲಿ ನಿಂತಿದ್ದರು. ದೇವರು ಅವರಿಗೆ ನೀಡಿದ ತಂತಿವಾದ್ಯಗಳು ಅವರಲ್ಲಿದ್ದವು. 3 ಅವರು ದೇವರ ಸೇವಕನಾದ ಮೋಶೆಯ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ,
ನೀನು ಮಹತ್ತಾದ ಕಾರ್ಯಗಳನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ಮಾಡುವೆ.
ಸರ್ವಜನಾಂಗಗಳ ರಾಜನೇ,
ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
4 ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ;
ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ.
ನೀನು ಮಾತ್ರ ಪರಿಶುದ್ಧನಾದವನು.
ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ
ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”
5 ಇದಾದ ನಂತರ ನಾನು ನೋಡಿದಾಗ ಪರಲೋಕದ ಆಲಯವು (ದೇವದರ್ಶನ ಗುಡಾರವು) ತೆರೆಯಿತು. 6 ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಆಲಯದಿಂದ ಹೊರಗೆ ಬಂದರು. ಅವರು ಶುಭ್ರವಾದ ಮತ್ತು ಪ್ರಕಾಶಮಾನವಾದ ನಾರುಮಡಿಯನ್ನು ಧರಿಸಿದ್ದರು. ಅವರು ಎದೆಯ ಸುತ್ತಲೂ ಚಿನ್ನದ ಪಟ್ಟಿಗಳನ್ನು ಕಟ್ಟಿಕೊಂಡಿದ್ದರು. 7 ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ನೀಡಿತು. ಈ ಪಾತ್ರೆಗಳು ಯುಗಯುಗಾಂತರಗಳಲ್ಲಿಯೂ ಜೀವಿಸುವ ದೇವರ ಕೋಪದಿಂದ ತುಂಬಿದ್ದವು. 8 ದೇವರ ವೈಭವ ಮತ್ತು ಶಕ್ತಿಯ ಹೊಗೆಯಿಂದ ಆಲಯವು ತುಂಬಿಹೋಯಿತು. ಏಳು ದೇವದೂತರ ಏಳು ಉಪದ್ರವಗಳು ಮುಗಿಯುವ ತನಕ ಆಲಯದಲ್ಲಿ ಪ್ರವೇಶಿಸಲು ಯಾರಿಗೂ ಸಾಧ್ಯವಿರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International