Revised Common Lectionary (Semicontinuous)
64 ನೀನು ಆಕಾಶವನ್ನು ಹರಿದು ಕೆಳಗೆ ಭೂಮಿಗಿಳಿದು ಬರುವದಾದರೆ
ಎಲ್ಲವೂ ಬದಲಾಗುವದು.
ಪರ್ವತಗಳು ನಿನ್ನ ಎದುರು ಕರಗಿಹೋಗುವವು.
2 ಒಣಎಲೆಯು ಸುಟ್ಟುಹೋಗುವಂತೆ ಪರ್ವತಗಳು ಸುಟ್ಟು ಭಸ್ಮವಾಗುವವು.
ಬೆಂಕಿಯಲ್ಲಿ ನೀರು ಕುದಿಯುವಂತೆ ಪರ್ವತಗಳು ಕುದಿಯುವವು.
ಆಗ ನಿನ್ನ ಶತ್ರುಗಳು ನಿನ್ನ ವಿಷಯವಾಗಿ ತಿಳಿಯುವರು.
ಆಗ ಜನಾಂಗದವರೆಲ್ಲಾ ನಿನ್ನನ್ನು ನೋಡಿ ಭಯದಿಂದ ನಡುಗುವರು.
3 ಆದರೆ ನೀನು ಹೀಗೆ ಮಾಡುವುದು ನಿಜವಾಗಿಯೂ ನಮಗಿಷ್ಟವಿಲ್ಲ.
ಪರ್ವತಗಳು ನಿನ್ನೆದುರು ಕರಗಿಹೋದರೂ
4 ನಿನ್ನ ಜನರು ನಿನಗೆ ಕಿವಿಗೊಡಲಿಲ್ಲ.
ನೀನು ಹೇಳಿದ್ದನ್ನು ನಿನ್ನ ಜನರು ನಿಜವಾಗಿಯೂ ಕೇಳಲಿಲ್ಲ.
ನಿನ್ನಂಥ ದೇವರನ್ನು ಯಾರೂ ನೋಡಿಲ್ಲ.
ನಿನ್ನ ಹೊರತು ಬೇರೆ ಯಾರೂ ದೇವರಿಲ್ಲ.
ಜನರು ತಾಳ್ಮೆಯಿಂದಿದ್ದು ನಿನ್ನ ಸಹಾಯಕ್ಕಾಗಿ ಕಾದಿದ್ದರೆ
ನೀನು ಅವರಿಗಾಗಿ ಮಹಾಕಾರ್ಯಗಳನ್ನು ಮಾಡುವೆ.
5 ಒಳ್ಳೆಯದನ್ನು ಮಾಡುವದರಲ್ಲಿ ಸಂತೋಷಪಡುವವರೊಂದಿಗೆ ನೀನಿರುವೆ.
ಅವರು ನಿನ್ನ ಮಾರ್ಗಗಳನ್ನು ನೆನಪಿನಲ್ಲಿಡುತ್ತಾರೆ.
ಇಗೋ, ಗತಿಸಿದ ದಿವಸಗಳಲ್ಲಿ ನಾವು ನಿನಗೆ ವಿರುದ್ಧವಾಗಿ ಪಾಪಮಾಡಿದೆವು.
ಆದ್ದರಿಂದ ನೀನು ನಮ್ಮ ಮೇಲೆ ಕೋಪಗೊಂಡೆ.
ಈಗ ನಾವು ಹೇಗೆ ರಕ್ಷಿಸಲ್ಪಡುವೆವು?
6 ನಾವೆಲ್ಲರೂ ಪಾಪದಿಂದ ಮಲಿನರಾಗಿದ್ದೇವೆ.
ನಮ್ಮ ಸುಕಾರ್ಯಗಳೆಲ್ಲಾ ಹಳೇ ಕೊಳಕು ಬಟ್ಟೆಯಂತಿವೆ.
ನಾವೆಲ್ಲಾ ಒಣಗಿಹೋದ ಎಲೆಗಳಂತಿದ್ದೇವೆ.
ನಮ್ಮ ಪಾಪಗಳು ಬಿರುಗಾಳಿಯಂತೆ ನಮ್ಮನ್ನು ಬಡಿದುಕೊಂಡುಹೋಗಿವೆ.
7 ನಿನ್ನ ಹೆಸರನ್ನು ಯಾರೂ ಕರೆಯುವದಿಲ್ಲ.
ನಿನ್ನನ್ನು ಹಿಂಬಾಲಿಸಲು ಯಾರಿಗೂ ಇಷ್ಟವಿಲ್ಲ;
ಯಾಕೆಂದರೆ ನೀನು ನಮಗೆ ವಿಮುಖನಾಗಿರುವೆ
ಮತ್ತು ನಮ್ಮನ್ನು ನಮ್ಮ ಪಾಪಗಳ ದೋಷಕ್ಕೆ ಒಪ್ಪಿಸಿಕೊಟ್ಟಿರುವಿ.
8 ಯೆಹೋವನೇ, ನೀನು ನಮ್ಮ ತಂದೆಯಾಗಿರುವೆ.
ನಾವು ಜೇಡಿಮಣ್ಣಿನಂತಿದ್ದೇವೆ.
ನೀನಾದರೋ ಕುಂಬಾರನಾಗಿರುವೆ.
ನಿನ್ನ ಕೈಗಳು ನಮ್ಮನ್ನು ನಿರ್ಮಿಸಿದವು.
9 ಯೆಹೋವನೇ, ನಮ್ಮ ಮೇಲೆ ಸಿಟ್ಟಿನಿಂದಲೇ ಇರಬೇಡ.
ನಮ್ಮ ಪಾಪಗಳನ್ನು ನಿನ್ನ ನೆನಪಿನಲ್ಲಿಟ್ಟುಕೊಂಡೇ ಇರಬೇಡ.
ದಯಮಾಡಿ ನಮ್ಮ ಕಡೆಗೆ ನೋಡು.
ನಾವು ನಿನ್ನ ಜನರೇ.
ಸ್ತುತಿಗೀತೆ. ರಚನೆಗಾರ: ಆಸಾಫ.
80 ಇಸ್ರೇಲನ್ನು ಕಾಯುವ ಕುರುಬನೇ,
ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
2 ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
ಬಂದು ನಮ್ಮನ್ನು ರಕ್ಷಿಸು.
3 ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
4 ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
5 ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
6 ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
ಶತ್ರುಗಳು ನಮ್ಮನ್ನು ನೋಡಿ ನಗುವರು.
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
17 ನೀನು ಆರಿಸಿಕೊಂಡಿರುವಾತನ[a] ಕಡೆಗೆ ಕೈಚಾಚಿ ಸಹಾಯ ಮಾಡು.
ನೀನು ಬೆಳೆಸಿದ ಜನರ[b] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
ನಮ್ಮನ್ನು ಬದುಕಿಸು.
ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
3 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.
ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ
4 ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 5 ಯೇಸುವಿನಲ್ಲಿ ಸಕಲ ಆಶೀರ್ವಾದಗಳನ್ನು ಹೊಂದಿರುವ ನೀವು ವಾಕ್ಚತುರರೂ ಜ್ಞಾನಸಂಪನ್ನರೂ ಆಗಿದ್ದೀರಿ. 6 ಕ್ರಿಸ್ತನ ವಿಷಯವಾದ ಸತ್ಯವು ನಿಮ್ಮಲ್ಲಿ ನಿರೂಪಿಸಲ್ಪಟ್ಟಿದೆ. 7 ಹೀಗಿರಲು, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಪುನರಾಗಮನವನ್ನು ಎದುರುನೋಡುತ್ತಿರುವ ನೀವು ದೇವರಿಂದ ಬರುವ ಪ್ರತಿಯೊಂದು ವರವನ್ನು ಹೊಂದಿದವರಾಗಿದ್ದೀರಿ. 8 ಯೇಸುವು ನಿಮ್ಮನ್ನು ಕೊನೆಯವರೆಗೂ ದೃಢಪಡಿಸಿ ಕಾಪಾಡುವನು. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನೀವು ನಿರ್ದೋಷಿಗಳಾಗಿರುವಿರಿ. 9 ದೇವರು ನಂಬಿಗಸ್ತನಾಗಿದ್ದಾನೆ. ದೇವರ ಮಗನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಜೀವದಲ್ಲಿ ಪಾಲುಹೊಂದಬೇಕೆಂದು ನಮ್ಮನ್ನು ಕರೆದಿರುವಾತನು ದೇವರೇ.
24 “ಈ ಸಂಕಟವು ತೀರಿದ ಮೇಲೆ,
‘ಸೂರ್ಯನು ಕತ್ತಲಾಗುತ್ತಾನೆ.
ಚಂದ್ರನು ಬೆಳಕನ್ನು ಕೊಡುವುದಿಲ್ಲ.
25 ನಕ್ಷತ್ರಗಳು ಆಕಾಶದಿಂದ ಬೀಳುವವು
ಮತ್ತು ಆಕಾಶದಲ್ಲಿರುವ ಶಕ್ತಿಗಳು ನಡುಗುವವು.’[a]
26 “ಆಗ ಮನುಷ್ಯಕುಮಾರನು ಅಧಿಕಾರದಿಂದಲೂ ಮಹಾಮಹಿಮೆಯೊಡನೆಯೂ ಮೇಘಗಳಲ್ಲಿ ಬರುವುದನ್ನು ಜನರು ನೋಡುತ್ತಾರೆ. 27 ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸಿ ತಾನು ಆರಿಸಿಕೊಂಡ ಜನರನ್ನು ಭೂಮಿಯ ಕಟ್ಟಕಡೆಗಳಿಂದ ಒಟ್ಟುಗೂಡಿಸುವರು.
28 “ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸಿರಾಗಿ ಮೃದುವಾದಾಗ ಮತ್ತು ಹೊಸ ಎಲೆಗಳು ಬೆಳೆಯಲು ಪ್ರಾರಂಭಿಸಿದಾಗ, ಬೇಸಿಗೆಕಾಲ ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 29 ಅಂತೆಯೇ ನಾನು ನಿಮಗೆ ಹೇಳಿದ ಈ ಸಂಗತಿಗಳು ನೆರವೇರುವುದನ್ನು ನೀವು ನೋಡುವಾಗ, ಸಮಯವು ಹತ್ತಿರವಾಗಿದೆಯೆಂದೂ ಬರಲು ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳಿರಿ. 30 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಬದುಕಿರುವಾಗಲೇ ಈ ಎಲ್ಲಾ ಸಂಗತಿಗಳು ನಡೆಯುತ್ತವೆ. 31 ಭೂಮ್ಯಾಕಾಶಗಳು ನಾಶವಾಗುತ್ತವೆ. ಆದರೆ ನಾನು ಹೇಳಿದ ಮಾತುಗಳು ಎಂದೆಂದಿಗೂ ನಾಶವಾಗುವುದಿಲ್ಲ.
32 “ಆ ದಿನವಾಗಲಿ ಸಮಯವಾಗಲಿ ಯಾವಾಗ ಬರುತ್ತದೆಂಬುದು ಪರಲೋಕದಲ್ಲಿರುವ ಮಗನಿಗಾಗಲಿ ದೇವದೂತರಿಗಾಗಲಿ ತಿಳಿದಿಲ್ಲ. ತಂದೆಗೆ ಮಾತ್ರ ತಿಳಿದಿದೆ. 33 ಎಚ್ಚರಿಕೆಯಿಂದಿರಿ! ಯಾವಾಗಲೂ ಸಿದ್ಧರಾಗಿರಿ! ಆ ಸಮಯ ಯಾವಾಗ ಬರುತ್ತದೆಂದು ನಿಮಗೆ ತಿಳಿದಿಲ್ಲ.
34 “ತನ್ನ ಮನೆಯನ್ನು ಬಿಟ್ಟು ಪ್ರವಾಸಕ್ಕಾಗಿ ಹೋದ ಮನುಷ್ಯನಿಗೆ ಇದು ಹೋಲಿಕೆಯಾಗಿದೆ. ಅವನು ತನ್ನ ಮನೆಯನ್ನು ನೋಡಿಕೊಳ್ಳುವುದಕ್ಕಾಗಿ ಸೇವಕರಿಗೆ ಒಪ್ಪಿಸಿಕೊಟ್ಟನು. ಅವನು ಪ್ರತಿಯೊಬ್ಬ ಸೇವಕನಿಗೂ ಒಂದೊಂದು ವಿಶೇಷ ಕೆಲಸವನ್ನು ಕೊಟ್ಟು ದ್ವಾರಪಾಲಕನಿಗೆ, ‘ನೀನು ಯಾವಾಗಲೂ ಸಿದ್ಧವಾಗಿರು’ ಎಂದು ಹೇಳಿದನು. ಅಂತೆಯೇ ನಾನೂ ನಿಮಗೆ ಹೇಳುವುದೇನೆಂದರೆ, 35 ಯಾವಾಗಲೂ ಸಿದ್ಧವಾಗಿರಿ. ಮನೆಯ ಯಜಮಾನನು ಯಾವಾಗ ಹಿಂತಿರುಗಿ ಬರುವನೋ ನಿಮಗೆ ತಿಳಿದಿಲ್ಲ. ಅವನು ಮಧ್ಯಾಹ್ನದಲ್ಲಾಗಲಿ ಮಧ್ಯರಾತ್ರಿಯಲ್ಲಾಗಲಿ ಮುಂಜಾನೆಯಲ್ಲಾಗಲಿ ಸೂರ್ಯೋದಯದಲ್ಲಾಗಲಿ ಬರಬಹುದು. 36 ಯಜಮಾನನು ಬೇಗನೆ ಹಿಂತಿರುಗಿ ಬರಬಹುದು. ನೀವು ಯಾವಾಗಲೂ ಸಿದ್ಧವಾಗಿದ್ದರೆ, ಅವನು ಬಂದಾಗ ನೀವು ನಿದ್ರಿಸುತ್ತಿರುವುದಿಲ್ಲ. 37 ನಾನು ನಿಮಗೂ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ‘ಸಿದ್ಧರಾಗಿರಿ!’”
Kannada Holy Bible: Easy-to-Read Version. All rights reserved. © 1997 Bible League International