Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 80:1-7

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.
ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
    ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
    ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
    ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
    ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
    ಶತ್ರುಗಳು ನಮ್ಮನ್ನು ನೋಡಿ ನಗುವರು.
ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಕೀರ್ತನೆಗಳು 80:17-19

17 ನೀನು ಆರಿಸಿಕೊಂಡಿರುವಾತನ[a] ಕಡೆಗೆ ಕೈಚಾಚಿ ಸಹಾಯ ಮಾಡು.
    ನೀನು ಬೆಳೆಸಿದ ಜನರ[b] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
    ನಮ್ಮನ್ನು ಬದುಕಿಸು.
    ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಜೆಕರ್ಯ 14:1-9

ನ್ಯಾಯತೀರ್ಪಿನ ದಿನ

14 ಯೆಹೋವನ ನ್ಯಾಯತೀರಿಸುವ ದಿನ ಬಂದಿದೆ. ನೀವು ಸುಲಿದುಕೊಂಡ ಐಶ್ವರ್ಯವು ನಿಮ್ಮ ಪಟ್ಟಣದಲ್ಲಿ ಪಾಲು ಮಾಡಲಾಗುವದು. ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಮಾಡಲು ನಾನು ಎಲ್ಲಾ ಜನಾಂಗಗಳನ್ನು ಒಟ್ಟಿಗೆ ಸೇರಿಸುವೆನು. ಅವರು ಪಟ್ಟಣವನ್ನು ವಶಪಡಿಸಿಕೊಂಡು ಕಟ್ಟಡಗಳನ್ನೆಲ್ಲಾ ಧ್ವಂಸಮಾಡುವರು. ಹೆಂಗಸರನ್ನು ಬಲಾತ್ಕಾರದಿಂದ ಸಂಭೋಗಿಸುವರು. ಜನಸಂಖ್ಯೆಯ ಅರ್ಧದಷ್ಟು ಜನರು ಸೆರೆಹಿಡಿಯಲ್ಪಡುವರು. ಉಳಿದವರನ್ನು ಪಟ್ಟಣದಿಂದ ಕೊಂಡೊಯ್ಯುವುದಿಲ್ಲ. ಆಗ ಯೆಹೋವನು ಆ ಜನಾಂಗಗಳ ವಿರುದ್ಧವಾಗಿ ಯುದ್ಧ ಮಾಡುವನು. ಅದು ಭಯಂಕರವಾದ ಕಾದಾಟವಾಗಿರುವದು. ಅದೇ ಸಮಯದಲ್ಲಿ ಜೆರುಸಲೇಮಿಗೆ ಪೂರ್ವದಲ್ಲಿರುವ ಆಲೀವ್ ಮರಗಳ ಬೆಟ್ಟದ ಮೇಲೆ ನಿಂತುಕೊಳ್ಳುವನು. ಆ ಬೆಟ್ಟವು ಇಬ್ಭಾಗವಾಗುವದು. ಅದರ ಒಂದು ಭಾಗವು ಉತ್ತರಕ್ಕೆ ಹೋಗುವದು, ಇನ್ನೊಂದು ಭಾಗವು ದಕ್ಷಿಣದ ಕಡೆಗೆ ಹೋಗುವದು. ಆ ಬೆಟ್ಟವು ನಿನ್ನ ಹತ್ತಿರಕ್ಕೆ ಬರುತ್ತಿರುವಾಗ ನೀನು ಓಡಿಹೋಗಲು ಪ್ರಯತ್ನಿಸುವೆ. ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಆದ ಭೂಕಂಪದ ಸಮಯದಲ್ಲಿ ನೀನು ಹೇಗೆ ಪಲಾಯನ ಮಾಡಿದ್ದಿಯೋ ಅದೇ ರೀತಿಯಲ್ಲಿ ನೀನು ಓಡುವೆ. ಆಗ ನನ್ನ ದೇವರಾದ ಯೆಹೋವನು ತನ್ನ ಎಲ್ಲಾ ಪರಿಶುದ್ಧ ಜನರೊಂದಿಗೆ ಬರುವನು.

6-7 ಅದು ಒಂದು ಮಹಾ ವಿಶೇಷ ದಿವಸವಾಗಿರುವದು. ಆ ದಿವಸದಲ್ಲಿ ಬೆಳಕಾಗಲಿ ಚಳಿಯಾಗಲಿ ಹಿಮವಾಗಲಿ ಇರುವದಿಲ್ಲ. ಇದು ಹೇಗೆ ಎಂದು ಯೆಹೋವನಿಗೆ ಮಾತ್ರ ಗೊತ್ತು. ರಾತ್ರಿ ಬರಬೇಕಾದ ವೇಳೆಯಲ್ಲಿ ಹಗಲು ಇನ್ನೂ ಇರುವದು. ಆ ಸಮಯದಲ್ಲಿ ಜೆರುಸಲೇಮಿನಿಂದ ನೀರು ಹರಿಯುತ್ತಲೇ ಇರುವದು. ಆ ನದಿಯು ಇಬ್ಭಾಗವಾಗಿ ಒಂದು ಭಾಗ ಪೂರ್ವಕ್ಕೆ ಹರಿಯುವದು. ಇನ್ನೊಂದು ಭಾಗ ಪಶ್ಚಿಮಕ್ಕೆ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುವದು. ಈ ನದಿಯು ಎಲ್ಲಾ ಕಾಲದಲ್ಲಿಯೂ ಬೇಸಿಗೆ, ಹಿಮಕಾಲವೆನ್ನದೆ ಹರಿಯುತ್ತಲೇ ಇರುವದು. ಆ ಸಮಯದಲ್ಲಿ ಯೆಹೋವನು ಇಡೀ ಭೂಲೋಕದ ಅರಸನಾಗುವನು. ಆತನು ಒಬ್ಬನೇ. ಆತನ ಹೆಸರು ಒಂದೇ.

1 ಥೆಸಲೋನಿಕದವರಿಗೆ 4

ದೇವರನ್ನು ಹರ್ಷಗೊಳಿಸುವ ಜೀವನ

ಸಹೋದರ ಸಹೋದರಿಯರೇ, ಈಗ ನಿಮಗೆ ಇತರ ಕೆಲವು ವಿಚಾರಗಳನ್ನು ತಿಳಿಸುತ್ತೇನೆ. ದೇವರನ್ನು ಮೆಚ್ಚಿಸಲು ಹೇಗೆ ಜೀವಿಸಬೇಕೆಂದು ನಿಮಗೆ ಕಲಿಸಿದ್ದೇವೆ. ನೀವು ಅದೇ ರೀತಿಯಲ್ಲಿ ಜೀವಿಸುತ್ತಿರುವಿರಿ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸಮರ್ಪಕವಾಗಿ ಜೀವಿಸಬೇಕೆಂದು ನಾವು ನಿಮ್ಮನ್ನು ಕ್ರಿಸ್ತನಲ್ಲಿ ಕೇಳಿಕೊಳ್ಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. ನೀವು ಯಾವ ಕಾರ್ಯಗಳನ್ನು ಮಾಡಬೇಕೆಂದು ನಾವು ನಿಮಗೆ ಹೇಳಿದೆವೋ ಅವುಗಳೆಲ್ಲಾ ನಿಮಗೆ ತಿಳಿದೇ ಇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ಆ ಸಂಗತಿಗಳನ್ನು ನಿಮಗೆ ಹೇಳಿದೆವು. ನೀವು ಪವಿತ್ರರಾಗಿರಬೇಕೆಂಬುದು ದೇವರ ಚಿತ್ತವಾಗಿದೆ. ಆದುದರಿಂದ ನೀವು ಲೈಂಗಿಕ ಪಾಪಗಳಿಂದ ದೂರವಿರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ದೇವರ ಅಪೇಕ್ಷೆ. ನಿಮ್ಮ ದೇಹವನ್ನು ಪವಿತ್ರವಾದ ಮಾರ್ಗದಲ್ಲಿ ಬಳಸಿದರೆ, ದೇವರಿಗೆ ಗೌರವವನ್ನು ನೀಡಿದಂತಾಗುವುದು.[a] ನಿಮ್ಮ ದೇಹವನ್ನು ಲೈಂಗಿಕ ಪಾಪಗಳಿಗಾಗಿ ಬಳಸಬೇಡಿ. ದೇವರನ್ನು ತಿಳಿಯದ ಜನರು ತಮ್ಮ ದೇಹಗಳನ್ನು ಅದಕ್ಕೆ ಬಳಸುತ್ತಾರೆ. ಈ ವಿಷಯದಲ್ಲಿ ನಿಮ್ಮಲ್ಲಿ ಯಾರೂ ಕ್ರಿಸ್ತನಲ್ಲಿ ಸಹೋದರನಾದವನನ್ನು ವಂಚಿಸಿ ಕೇಡುಮಾಡಬಾರದು. ನಾವು ಈಗಾಗಲೇ ನಿಮಗೆ ಹೇಳಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಇವೆಲ್ಲವುಗಳ ವಿಷಯದಲ್ಲಿ ದೇವರು ದಂಡಿಸುತ್ತಾನೆ. ದೇವರು ನಮ್ಮನ್ನು ಪರಿಶುದ್ಧರಾಗಿ ಜೀವಿಸುವುದಕ್ಕೆ ಕರೆದಿದ್ದಾನೆ. ನಾವು ಪಾಪದಲ್ಲಿ ಜೀವಿಸಲು ಆತನು ಇಷ್ಟಪಡುವುದಿಲ್ಲ. ಆದುದರಿಂದ ಈ ಉಪದೇಶವನ್ನು ಅನುಸರಿಸದವನು ಅವಿಧೇಯನಾಗಿರುವುದು ದೇವರಿಗೇ ಹೊರತು ಮಾನವನಿಗಲ್ಲ. ನಮಗೆ ತನ್ನ ಪವಿತ್ರಾತ್ಮನನ್ನು ನೀಡಿದಾತನು ದೇವರೇ.

ಕ್ರಿಸ್ತನಲ್ಲಿ ಸಹೋದರ ಸಹೋದರಿಯರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಾವು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ಒಬ್ಬರನ್ನೊಬ್ಬರು ಹೇಗೆ ಪ್ರೀತಿಸಬೇಕೆಂಬುದನ್ನು ಈಗಾಗಲೇ ದೇವರು ನಿಮಗೆ ಕಲಿಸಿದ್ದಾನೆ. 10 ಮಕೆದೋನಿಯದಲ್ಲಿರುವ ಸಹೋದರ ಸಹೋದರಿಯರನ್ನೆಲ್ಲ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದೀರಿ. ಅವರನ್ನು ಇನ್ನೂ ಹೆಚ್ಚೆಚ್ಚಾಗಿ ನೀವು ಪ್ರೀತಿಸಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

11 ಶಾಂತಿಯಿಂದ ಜೀವಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ನಿಮ್ಮ ಸ್ವಂತ ವ್ಯವಹಾರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಿ. ನಿಮ್ಮ ಕೈಯಾರೆ ಕೆಲಸ ಮಾಡಬೇಕೆಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. 12 ನೀವು ಹೀಗೆ ಮಾಡಿದರೆ, ವಿಶ್ವಾಸಿಗಳಲ್ಲದವರು ನಿಮ್ಮ ಜೀವತದ ರೀತಿಯನ್ನು ಕಂಡು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೆ ನಿಮ್ಮ ಅಗತ್ಯತೆಗಳ ಪೂರೈಕೆಗಾಗಿ ನೀವು ಬೇರೆಯವರನ್ನು ಅವಲಂಬಿಸಿಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.

ಪ್ರಭುವಿನ ಬರುವಿಕೆ

13 ಸಹೋದರ ಸಹೋದರಿಯರೇ, ಸತ್ತುಹೋದ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬುದು ನಮ್ಮ ಅಪೇಕ್ಷೆ. ನಿರೀಕ್ಷೆಯಿಲ್ಲದ ಜನರಂತೆ ನೀವು ದುಃಖದಿಂದಿರುವುದು ನಮಗೆ ಇಷ್ಟವಿಲ್ಲ. 14 ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.

15 ಈಗ ನಾವು ನಿಮಗೆ ಹೇಳುತ್ತಿರುವುದು ಪ್ರಭುವಿನ ಸ್ವಂತ ಸಂದೇಶವನ್ನೇ. ಪ್ರಭುವು ಮತ್ತೆ ಬಂದಾಗ ಈಗ ಜೀವಿಸುತ್ತಿರುವ ನಾವು ಇನ್ನೂ ಜೀವದಿಂದ ಇದ್ದರೆ ನಾವು ಪ್ರಭುವಿನ ಜೊತೆಯಲ್ಲಿರುತ್ತೇವೆ. ಆದರೂ ಸತ್ತುಹೋದ ಇತರರಿಗಿಂತಲೂ ನಾವು ಮುಂದಿನವರಾಗುವುದಿಲ್ಲ. 16 ಪ್ರಭುವು ತಾನೇ ಪರಲೋಕದಿಂದ ಇಳಿದುಬರುವನು. ಆಗ ಪ್ರಧಾನ ದೇವದೂತನು ದೇವರ ತುತೂರಿ ಧ್ವನಿಯೊಡನೆ ಆಜ್ಞಾಘೋಷ ಮಾಡುವನು. ಕೂಡಲೇ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. 17 ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International