Revised Common Lectionary (Semicontinuous)
ರಚನೆಗಾರ: ದಾವೀದ.
28 ಯೆಹೋವನೇ, ನೀನೇ ನನ್ನ ಬಂಡೆ.
ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
ಜನರು ನನ್ನನ್ನು ಪರಿಗಣಿಸುವರು.
2 ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
3 ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
4 ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
ಅವರಿಗೆ ತಕ್ಕ ದಂಡನೆಯನ್ನು ಕೊಡು.
5 ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
ನಿತ್ಯನಾಶಮಾಡುವನು.
6 ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
7 ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
8 ಯೆಹೋವನು ತನ್ನ ಜನರಿಗೆ ಬಲವೂ
ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
9 ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.
4 ನನ್ನ ದೇವರಾದ ಯೆಹೋವನು ಹೇಳುವುದೇನೆಂದರೆ, “ಕೊಲ್ಲುವದಕ್ಕೋಸ್ಕರವಾಗಿ ಬೆಳೆಸಿದ ಕುರಿಗಳನ್ನು ಪರಾಮರಿಸು. 5 ಅವರ ನಾಯಕರುಗಳು ವರ್ತಕರಂತೆಯೂ ಧಣಿಗಳಂತೆಯೂ ಇರುವರು. ಧಣಿಗಳು ಕುರಿಗಳನ್ನು ಕೊಂದರೂ ಶಿಕ್ಷಿಸಲ್ಪಡುವುದಿಲ್ಲ. ವರ್ತಕರು ಕುರಿಗಳನ್ನು ಮಾರಿ, ‘ನಾನೀಗ ಧನಿಕನಾಗಿದ್ದೇನೆ. ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಅನ್ನುವರು. ಕುರುಬರು ತಮ್ಮ ಕುರಿಗಳಿಗಾಗಿ ಚಿಂತಿಸುವುದಿಲ್ಲ. 6 ಈ ದೇಶದಲ್ಲಿ ವಾಸಿಸುವ ಜನರ ಬಗ್ಗೆ ನಾನು ದುಃಖಿಸುವುದಿಲ್ಲ.” ಇದು ಯೆಹೋವನ ನುಡಿ. “ನೋಡಿರಿ, ಪ್ರತಿಯೊಬ್ಬನೂ ತನ್ನ ಅರಸನಿಂದಲೂ ನೆರೆಯವರಿಂದಲೂ ಹಾಳುಮಾಡಲ್ಪಡುವಂತೆ ನಾನು ಮಾಡುವೆನು. ಅವರ ದೇಶವನ್ನು ಹಾಳುಮಾಡುವಂತೆ ಅವರನ್ನು ಬಿಡುವೆನು. ಅವರನ್ನು ನಿಲ್ಲಿಸುವುದಿಲ್ಲ.”
7 ಕೊಲ್ಲುವದಕ್ಕಾಗಿ ಬೆಳೆಸುವ ಕುರಿಗಳನ್ನು ನಾನು ಪರಾಮರಿಸಿದೆನು. ನನಗೆ ಎರಡು ಕೋಲುಗಳು ದೊರೆತವು. ಒಂದು ಕೋಲನ್ನು ದಯೆ ಎಂದೂ ಇನ್ನೊಂದನ್ನು ಒಗ್ಗಟ್ಟು ಎಂಬ ಹೆಸರಿನಿಂದಲೂ ಕರೆದೆನು. ಆ ಬಳಿಕ ಕುರಿಗಳನ್ನು ಪರಾಮರಿಸ ತೊಡಗಿದೆನು. 8 ಒಂದೇ ತಿಂಗಳೊಳಗೆ ಮೂರು ಮಂದಿ ಕುರುಬರನ್ನು ನಾನು ಕೆಲಸದಿಂದ ಬಿಡಿಸಿದೆನು. ನಾನು ಕುರಿಗಳ ಮೇಲೆ ಸಿಟ್ಟುಗೊಳ್ಳಲಾರಂಭಿಸಿದೆನು. ಅವು ನನ್ನನ್ನು ಹಗೆ ಮಾಡಲಾರಂಭಿಸಿದವು. 9 ಆಗ ನಾನು, “ಸರಿ, ನಾನು ನಿಮ್ಮನ್ನು ಇನ್ನು ನೋಡಿಕೊಳ್ಳುವದಿಲ್ಲ. ಹೋಗಿಬಿಡುತ್ತೇನೆ” ಅಂದೆನು. ಸಾಯಲು ಮನಸ್ಸುಳ್ಳವುಗಳನ್ನು ಸಾಯಲುಬಿಟ್ಟೆನು. ನಾಶವಾಗಲು ಮನಸ್ಸುಳ್ಳವುಗಳನ್ನು ನಾಶವಾಗಲು ಬಿಟ್ಟೆನು. ಅಳಿಯದೆ ಉಳಿದವುಗಳು ಪರಸ್ಪರ ನಾಶಮಾಡಿಕೊಳ್ಳುವವು. 10 ಆಗ ನಾನು ದಯೆ ಹೆಸರಿನ ಕೋಲನ್ನು ತೆಗೆದುಕೊಂಡು ತುಂಡುಮಾಡಿದೆನು. ಯೆಹೋವನು ಎಲ್ಲಾ ಜನರೊಂದಿಗೆ ಮಾಡಿದ ಒಡಂಬಡಿಕೆಯು ಮುರಿಯಿತು ಎಂಬುದಾಗಿ ಅವರಿಗೆ ತೋರಿಸಿದೆನು. 11 ಹೀಗೆ ಆ ದಿವಸ ಒಡಂಬಡಿಕೆಗೆ ಅಂತ್ಯವಾಯಿತು. ನನ್ನನ್ನೇ ನೋಡುತ್ತಿದ್ದ ಆ ಬಡ ಕುರಿಗಳಿಗೆ ಈ ಸಂದೇಶವು ಯೆಹೋವನಿಂದಲೇ ನನಗೆ ಬಂದಿದೆ ಎಂಬುದು ತಿಳಿದಿತ್ತು.
12 ಆಗ ನಾನು ಹೀಗೆಂದೆನು, “ನನಗೆ ಸಂಬಳ ಕೊಡಲು ನಿಮಗೆ ಇಷ್ಟವಿದ್ದರೆ ಕೊಡಿರಿ, ಇಷ್ಟವಿಲ್ಲದಿದ್ದರೆ ಬೇಡ.” ಆಗ ಅವರು ನನಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು. 13 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ನನ್ನ ಬೆಲೆ ಅಷ್ಟೇ ಎಂದು ಅವರು ನೆನಸುತ್ತಾರೆ. ಆ ಹಣವನ್ನು ತೆಗೆದು ಆಲಯದ ಖಜಾನೆಗೆ ಸುರಿ.” ನಾನು ಆ ಮೂವತ್ತು ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಆಲಯದ ಖಜಾನೆಗೆ ಸುರಿದೆನು. 14 ಆಮೇಲೆ ನಾನು “ಒಗ್ಗಟ್ಟು” ಎಂಬ ಹೆಸರಿನ ಕೋಲನ್ನು ಎರಡು ತುಂಡಾಗಿ ಮುರಿದೆನು. ಇಸ್ರೇಲ್ ಮತ್ತು ಯೆಹೂದ ರಾಜ್ಯಗಳ ಒಗ್ಗಟ್ಟು ಮುರಿಯಿತು ಎಂದು ತೋರಿಸುವದಕ್ಕಾಗಿ ನಾನು ಹಾಗೆ ಮಾಡಿದೆನು.
15 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ಒಬ್ಬ ಮೂರ್ಖ ಕುರುಬನು ಉಪಯೋಗಿಸುವ ವಸ್ತುಗಳನ್ನು ತೆಗೆದುಕೊಂಡು ಬಾ. 16 ನಾನು ಈ ದೇಶಕ್ಕೆ ಒಬ್ಬ ಹೊಸ ಕುರುಬನನ್ನು ನೇಮಕ ಮಾಡುವೆನೆಂದು ಆ ರೀತಿಯಾಗಿ ತೋರಿಸುವೆನು. ಆದರೆ ಈ ಮನುಷ್ಯನಿಗೆ ನಾಶಮಾಗುತ್ತಿರುವ ಕುರಿಗಳನ್ನು ಪರಾಮರಿಸಲು ಸಾಧ್ಯವಾಗುವುದಿಲ್ಲ. ಗಾಯಗೊಂಡ ಕುರಿಗಳನ್ನು ಗುಣಮಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಸಾಯದೆ ಉಳಿದ ಕುರಿಗಳಿಗೆ ಆಹಾರ ಕೊಡಲು ಅವನಿಂದ ಸಾಧ್ಯವಾಗುವುದಿಲ್ಲ. ಪುಷ್ಟಿಕರವಾದ ಕುರಿಗಳನ್ನು ಪೂರ್ತಿಯಾಗಿ ತಿಂದುಹಾಕಲಾಗುವದು. ಅದರ ಗೊರಸುಗಳು ಮಾತ್ರವೇ ಉಳಿಯುವದು.”
17 ಕೆಲಸಕ್ಕೆ ಬಾರದ ಕುರುಬನೇ,
ನೀನು ನನ್ನ ಕುರಿಗಳನ್ನು ತೊರೆದುಬಿಟ್ಟೆ.
ಅವನನ್ನು ಶಿಕ್ಷಿಸಿರಿ!
ಖಡ್ಗದಿಂದ ಅವನ ಬಲಗೈಯನ್ನು ಕತ್ತರಿಸಿಹಾಕಿರಿ, ಮತ್ತು ಬಲಗಣ್ಣನ್ನು ಕಿತ್ತುಹಾಕಿರಿ.
ಆಗ ಅವನ ಬಲಗೈ ಅಪ್ರಯೋಜಕವಾಗುವದು,
ಬಲಗಣ್ಣು ದೃಷ್ಟಿಹೀನವಾಗುವದು.
ಪರಲೋಕದಲ್ಲಿ ದೇವರಿಗೆ ಸ್ತೋತ್ರ
19 ಇದಾದ ಬಳಿಕ, ಪರಲೋಕದಲ್ಲಿ ಅನೇಕಾನೇಕ ಜನರ ಮಹಾಶಬ್ದವೋ ಎಂಬಂತೆ ಇದ್ದ ಧ್ವನಿಯನ್ನು ಕೇಳಿದೆನು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ, (ದೇವರಿಗೆ ಸ್ತೋತ್ರ ಮಾಡಿರಿ)
ಜಯವೂ ಪ್ರಭಾವವೂ ಅಧಿಕಾರವೂ ನಮ್ಮ ದೇವರಿಗೆ ಸೇರಿದ್ದಾಗಿವೆ.
2 ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ನಮ್ಮ ದೇವರು ವೇಶ್ಯೆಯನ್ನು ದಂಡಿಸಿದನು.
ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟುಹೋಯಿತು.
ಆತನು ತನ್ನ ಸೇವಕರ ರಕ್ತಕ್ಕೆ ಪ್ರತಿಯಾಗಿ ಆ ವೇಶ್ಯೆಯನ್ನು ದಂಡಿಸಿದನು.”
3 ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ:
“ಹಲ್ಲೆಲೂಯಾ!
ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”
4 ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿದರು. ಅವರು,
“ಆಮೆನ್! ಹಲ್ಲೆಲೂಯಾ!” ಎಂದು ಹೇಳಿದರು.
5 ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,
“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ!
ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.
6 ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ!
ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ.
ಆತನು ಸರ್ವಶಕ್ತನಾಗಿದ್ದಾನೆ.
7 ನಾವೆಲ್ಲರೂ ಆನಂದಿಸೋಣ ಮತ್ತು ಸಂತಸಪಡೋಣ!
ದೇವರನ್ನು ಮಹಿಮೆಪಡಿಸೋಣ! ಕುರಿಮರಿಯಾದಾತನ (ಯೇಸು) ವಿವಾಹಕಾಲ ಬಂದಿರುವುದರಿಂದ ದೇವರನ್ನು ಘನಪಡಿಸೋಣ.
ಕುರಿಮರಿಯಾದಾತನ ವಧು (ಸಭೆ) ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.
8 ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು.
ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.”
(ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)
9 ಆಗ ದೇವದೂತನು ನನಗೆ ಹೀಗೆ ಹೇಳಿದನು: “ಈ ರೀತಿ ಬರೆ: ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟ ಜನರು ಧನ್ಯರು!” ನಂತರ ದೇವದೂತನು, “ಇವು ದೇವರ ಸತ್ಯವಾದ ನುಡಿಗಳು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International