Revised Common Lectionary (Semicontinuous)
ರಚನೆಗಾರ: ದಾವೀದ.
28 ಯೆಹೋವನೇ, ನೀನೇ ನನ್ನ ಬಂಡೆ.
ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
ಜನರು ನನ್ನನ್ನು ಪರಿಗಣಿಸುವರು.
2 ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
3 ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
4 ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
ಅವರಿಗೆ ತಕ್ಕ ದಂಡನೆಯನ್ನು ಕೊಡು.
5 ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
ನಿತ್ಯನಾಶಮಾಡುವನು.
6 ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
7 ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
8 ಯೆಹೋವನು ತನ್ನ ಜನರಿಗೆ ಬಲವೂ
ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
9 ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.
15 ಆಗ ಮೋಶೆಯು ಯೆಹೋವನಿಗೆ, 16 “ಎಲ್ಲಾ ಮನುಷ್ಯರ ಯೋಚನೆಗಳನ್ನು ತಿಳಿದಿರುವ ದೇವರಾದ ಯೆಹೋವನು ಈ ಸಮೂಹಕ್ಕೆ ಒಬ್ಬ ನಾಯಕನನ್ನು ನೇಮಿಸಲಿ. 17 ಅವನು ಅವರನ್ನು ಯುದ್ಧದಲ್ಲಿ ಮುನ್ನಡೆಸುವವನೂ ಸೈನ್ಯದ ಯೋಜನೆಗಳನ್ನು ರೂಪಿಸುವವನೂ ಆಗಿರಲಿ. ಆಗ ಯೆಹೋವನ ಸಮೂಹವು ಕುರುಬನಿಲ್ಲದ ಕುರಿಯಂತಾಗುವುದಿಲ್ಲ.”
18 ಅದಕ್ಕೆ ಯೆಹೋವನು, “ನೂನನ ಮಗನಾದ ಯೆಹೋಶುವನು ಹೊಸ ನಾಯಕನಾಗಿರುವನು. ಅವನು ಧೈರ್ಯವಂತನು. ಅವನನ್ನು ಹೊಸ ನಾಯಕನನ್ನಾಗಿ ಮಾಡಲು ಅವನ ಮೇಲೆ ನಿನ್ನ ಕೈಯನ್ನು ಇಡು. 19 ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ಅವನನ್ನು ನಿಲ್ಲಿಸು. ಅವರ ಎದುರಿನಲ್ಲಿಯೇ ಅವನಿಗೆ ಆದೇಶಗಳನ್ನು ಕೊಡು.
20 “ಇಸ್ರೇಲರ ಇಡೀ ಸಮುದಾಯವು ವಿಧೇಯರಾಗುವಂತೆ ನಿನ್ನ ಅಧಿಕಾರಗಳಲ್ಲಿ ಸ್ವಲ್ಪವನ್ನು ಅವನಿಗೆ ಕೊಡು. 21 ಯೆಹೋಶುವನು ತೀರ್ಮಾನವೇನಾದರೂ ಮಾಡಬೇಕಾದರೆ ಅವನು ಯಾಜಕನಾದ ಎಲ್ಲಾಜಾರನ ಬಳಿಗೆ ಹೋಗಲಿ, ಎಲ್ಲಾಜಾರನು ಊರೀಮಿನಿಂದ ಯೆಹೋವನ ಉತ್ತರವನ್ನು ಪಡೆಯುವನು. ಆಗ ಯೆಹೋಶುವನೂ ಇಸ್ರೇಲರೆಲ್ಲರೂ ದೇವರು ಹೇಳುವ ಕಾರ್ಯಗಳನ್ನು ಮಾಡುವರು. ಆತನು, ‘ಯುದ್ಧಕ್ಕೆ ಹೋಗಿರಿ’ ಎಂದು ಹೇಳಿದರೆ ಅವರು ಯುದ್ಧಕ್ಕೆ ಹೋಗುವರು. ಆತನು, ‘ಮನೆಗೆ ಹೋಗಿರಿ’ ಎಂದು ಹೇಳಿದರೆ ಅವರು ಮನೆಗೆ ಹೋಗುವರು” ಎಂದು ಹೇಳಿದನು.
22 ಮೋಶೆಯು ಯೆಹೋವನಿಗೆ ವಿಧೇಯನಾಗಿ ಯೆಹೋಶುವನನ್ನು ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಇಸ್ರೇಲರ ಮುಂದೆಯೂ ನಿಲ್ಲಿಸಿದನು. 23 ಬಳಿಕ ಮೋಶೆಯು ತನ್ನ ಕೈಯನ್ನು ಅವನ ಮೇಲಿಟ್ಟು ಹೊಸ ನಾಯಕನಿಗೆ ಕೊಡತಕ್ಕ ಆದೇಶಗಳನ್ನು ಕೊಟ್ಟನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.
8 ಯೇಸು ಕ್ರಿಸ್ತನನ್ನು ನೆನಪು ಮಾಡಿಕೊ. ಆತನು ದಾವೀದನ ವಂಶದವನು. ಯೇಸು ಸತ್ತನಂತರ ಜೀವಂತವಾಗಿ ಮೇಲೆದ್ದು ಬಂದನು. ಈ ಸುವಾರ್ತೆಯನ್ನೇ ನಾನು ಜನರಿಗೆ ತಿಳಿಸುತ್ತೇನೆ. 9 ಈ ಕಾರಣದಿಂದಲೇ ಸಂಕಟವನ್ನು ಅನುಭವಿಸುತ್ತಿದ್ದೇನೆ. ದುಷ್ಕರ್ಮಿಯಂತೆ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದೇನೆ. ಆದರೆ ದೇವರ ಉಪದೇಶಕ್ಕೆ ಬಂಧನವಿಲ್ಲ. 10 ಆದ್ದರಿಂದ ನಾನು ತಾಳ್ಮೆಯಿಂದಲೇ ಈ ತೊಂದರೆಗಳನ್ನು ಅಂಗೀಕರಿಸಿದ್ದೇನೆ. ಏಕೆಂದರೆ ದೇವರು ಆರಿಸಿರುವ ಜನರೆಲ್ಲರಿಗೂ ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. ಆ ಜನರು ಕ್ರಿಸ್ತ ಯೇಸುವಿನಲ್ಲಿ ರಕ್ಷಣೆ ಪಡೆಯಲೆಂದು ನಾನು ಈ ತೊಂದರೆಗಳನ್ನೆಲ್ಲ ಸ್ವೀಕರಿಸಿಕೊಂಡಿದ್ದೇನೆ. ಈ ರಕ್ಷಣೆಯೊಂದಿಗೆ ನಿತ್ಯಪ್ರಭಾವವು ದೊರೆಯುತ್ತದೆ.
11 ಈ ಉಪದೇಶವು ಸತ್ಯವಾದದ್ದು:
ನಾವು ಆತನೊಂದಿಗೆ (ಯೇಸು) ಸತ್ತಿದ್ದರೆ, ಆತನೊಡನೆ ಜೀವಿಸುವೆವು.
12 ನಾವು ಸಂಕಟವನ್ನು ಸ್ವೀಕರಿಸಿಕೊಂಡರೆ, ಆತನೊಡನೆ ಆಳುವೆವು.
ನಾವು ಆತನನ್ನು ಸ್ವೀಕರಿಸಿಕೊಳ್ಳದಿದ್ದರೆ, ಆತನೂ ನಮ್ಮನ್ನು ಸ್ವೀಕರಿಸಿಕೊಳ್ಳುವುದಿಲ್ಲ.
13 ನಾವು ನಂಬಿಗಸ್ತರಾಗಿಲ್ಲದಿದ್ದರೂ, ಆತನು ಇನ್ನೂ ನಂಬಿಗಸ್ತನಾಗಿರುವನು;
ಏಕೆಂದರೆ ಆತನು ತನ್ನ ಸ್ವಭಾವಕ್ಕೆ ವಿರುದ್ಧನಾಗಲಾರನು.
Kannada Holy Bible: Easy-to-Read Version. All rights reserved. © 1997 Bible League International